ಸೋಮವಾರ, ಜನವರಿ 23, 2017

ಎಕ್ಸಿಫ್ ಎಂದರೇನು?

ಟಿ. ಜಿ. ಶ್ರೀನಿಧಿ

ಫೇಸ್‌ಬುಕ್‌ನಲ್ಲಿ ಚೆಂದದ ಛಾಯಾಚಿತ್ರವೊಂದನ್ನು ಸೇರಿಸಿದಾಗ ಅದನ್ನು ಹಂಚಿಕೊಂಡವರು ಅಥವಾ ಚಿತ್ರವನ್ನು ಮೆಚ್ಚಿದವರು ಚಿತ್ರದ ಎಕ್ಸಿಫ್ (EXIF) ಡೇಟಾದ ಬಗ್ಗೆ ಮಾತನಾಡುವುದನ್ನು ನೀವು ಗಮನಿಸಿರಬಹುದು.

ಎಕ್ಸಿಫ್ ಎನ್ನುವುದು 'ಎಕ್ಸ್‌ಚೇಂಜಬಲ್ ಇಮೇಜ್ ಫೈಲ್ ಫಾರ್ಮ್ಯಾಟ್' ಎಂಬ ಹೆಸರಿನ ಹ್ರಸ್ವರೂಪ. ಡಿಜಿಟಲ್ ಕ್ಯಾಮೆರಾ ಬಳಸಿ ಕ್ಲಿಕ್ಕಿಸಿದಾಗ ಅದರ ಮೆಮೊರಿಯಲ್ಲಿ ಚಿತ್ರ ಉಳಿದುಕೊಳ್ಳುತ್ತದಲ್ಲ, ಆ ಚಿತ್ರದ ಜೊತೆಗೆ ಉಳಿಸಲಾಗುವ ಹೆಚ್ಚುವರಿ ಮಾಹಿತಿಯೇ ಎಕ್ಸಿಫ್.

ಚಿತ್ರ ಕ್ಲಿಕ್ಕಿಸಿದ್ದು ಯಾವಾಗ, ಉಪಯೋಗಿಸಿದ ಕ್ಯಾಮೆರಾ ಯಾವುದು, ಬಳಸಿದ ಸೆಟಿಂಗ್ (ಐಎಸ್‌ಒ, ಶಟರ್ ಸ್ಪೀಡ್, ಅಪರ್ಚರ್ ಇತ್ಯಾದಿ) ಏನು ಎನ್ನುವ ವಿವರವೆಲ್ಲ ಎಕ್ಸಿಫ್ ಡೇಟಾದಲ್ಲಿರುತ್ತದೆ. ಅಷ್ಟೇ ಅಲ್ಲ, ನಿಮ್ಮ ಕ್ಯಾಮೆರಾದಲ್ಲಿ (ಮೊಬೈಲ್ ಕ್ಯಾಮೆರಾ ಸೇರಿದಂತೆ) ಜಿಪಿಎಸ್ ಸೌಲಭ್ಯ ಬಳಸುತ್ತಿದ್ದರೆ ಚಿತ್ರ ಕ್ಲಿಕ್ಕಿಸಿದ್ದು ಎಲ್ಲಿ ಎನ್ನುವ ಮಾಹಿತಿಯೂ ಇದರಲ್ಲಿ ಸೇರಿಕೊಳ್ಳುತ್ತದೆ.

ಚಿತ್ರಗಳನ್ನು ವೀಕ್ಷಿಸುವ ಅಥವಾ ಸಂಪಾದಿಸುವ ಹಲವು ತಂತ್ರಾಂಶಗಳಲ್ಲಿ ನೀವು ಚಿತ್ರದ ಎಕ್ಸಿಫ್ ವಿವರಗಳನ್ನು ನೋಡಬಹುದು. ಕೆಲವೊಮ್ಮೆ ಚಿತ್ರದ ಬಗ್ಗೆ ಇಷ್ಟೆಲ್ಲ ವಿವರ ಹಂಚಿಕೊಳ್ಳುವುದು ಅನಗತ್ಯ ಎನಿಸುತ್ತದಲ್ಲ, ಅಂತಹ ಸಂದರ್ಭಗಳಲ್ಲಿ ಚಿತ್ರದಿಂದ ಎಕ್ಸಿಫ್ ವಿವರಗಳನ್ನು ತೆಗೆದುಹಾಕಲು ಅನುವುಮಾಡಿಕೊಡುವ ತಂತ್ರಾಂಶಗಳೂ ಇವೆ (ವಿವರಗಳಿಗೆ 'ರಿಮೂವ್ ಎಕ್ಸಿಫ್' ಎಂದು ಗೂಗಲ್ ಮಾಡಿ).

ಜೂನ್ ೨, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
badge