ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ: 'ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!'

ಮೊಬೈಲ್ ಫೋನ್‍ಗೂ 'ಸೆಲ್'ಗೂ ಏನು ಸಂಬಂಧ?

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನನ್ನು ಹಲವಾರು ಮಂದಿ ಸೆಲ್ ಫೋನ್ ಎಂದು ಕರೆಯುತ್ತಾರೆ. ಇನ್ನು ಕೆಲವರು ಈ ಹೆಸರನ್ನು ಇನ್ನೂ ಹ್ರಸ್ವಗೊಳಿಸಿ 'ಸೆಲ್' ಎಂದಷ್ಟೇ ಕರೆಯುವುದೂ ಉಂಟು.

ಈ ಅಭ್ಯಾಸಕ್ಕೆ ಕಾರಣ ಮೊಬೈಲ್ ನೆಟ್‌ವರ್ಕುಗಳ ವಿನ್ಯಾಸ. ಊರಿನ ತುಂಬ ಹರಡಿರುವ ಮೊಬೈಲ್ ಟವರ್‌ಗಳು ತಮ್ಮ ಸುತ್ತಲಿನ ಒಂದು ಸೀಮಿತ ಪ್ರದೇಶಕ್ಕೆ ಮೊಬೈಲ್ ಸೇವೆ ಒದಗಿಸುತ್ತವೆ. ಈ ಪ್ರದೇಶ ಬಹುತೇಕ ಆರು ಮೂಲೆಯ (ಹೆಕ್ಸಾಗನ್) ಆಕೃತಿಯಲ್ಲಿರುತ್ತದೆ; ಅಂದರೆ, ಮೊಬೈಲ್ ಜಾಲದ ಚಿತ್ರವನ್ನೇನಾದರೂ ಬರೆದರೆ ಅದು ಜೇನುಗೂಡಿನ ಒಂದು ಹಲ್ಲೆಯಂತೆ ಕಾಣುತ್ತದೆ!

ಬಾರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?

ಟಿ. ಜಿ. ಶ್ರೀನಿಧಿ


ಸೂಪರ್ ಮಾರ್ಕೆಟ್ ಎಂದತಕ್ಷಣ ನಮಗೆ ನೆನಪಾಗುವ ಸಂಗತಿಗಳಲ್ಲಿ ಬಿಲ್ಲುಕಟ್ಟೆಯ ಸಿಬ್ಬಂದಿ ಬಳಸುವ ಸ್ಕ್ಯಾನರ್ ಕೂಡ ಒಂದು. ನಾವು ಕೊಂಡ ವಸ್ತುವಿನ ಮೇಲಿರುವ ಕಪ್ಪು ಗೆರೆಗಳ ಸಂಕೇತವೊಂದನ್ನು ಸ್ಕ್ಯಾನ್ ಮಾಡಿದ ಕೂಡಲೆ ಅದರ ಹೆಸರು ಮತ್ತು ಬೆಲೆ ಕಂಪ್ಯೂಟರಿನಲ್ಲಿ ಪ್ರತ್ಯಕ್ಷವಾಗುವುದನ್ನು ನಾವೆಲ್ಲ ನೋಡಿದ್ದೇವೆ.

ಕಪ್ಪು ಗೆರೆಗಳ ಆ ಸಂಕೇತದ ಹೆಸರೇ ಬಾರ್‌ಕೋಡ್. ಈ ಸಂಕೇತಗಳನ್ನು ಸೂಪರ್‌ಮಾರ್ಕೆಟ್‌ಗಳಲ್ಲಷ್ಟೇ ಅಲ್ಲದೆ ಗ್ರಂಥಾಲಯ, ಅಂಚೆ ವ್ಯವಸ್ಥೆ, ಕಾರ್ಖಾನೆ ಮುಂತಾದ ಹಲವೆಡೆ ವ್ಯಾಪಕವಾಗಿ ಬಳಸಲಾಗುತ್ತದೆ.

ಮೆಮೊರಿ ಕಾರ್ಡ್ ಸಮಾಚಾರ

ಟಿ. ಜಿ. ಶ್ರೀನಿಧಿ


ಡಿಜಿಟಲ್ ಕ್ಯಾಮೆರಾ ಹಾಗೂ ಮೊಬೈಲ್ ಫೋನ್ ಬಳಸುವವರಿಗೆಲ್ಲ ಮೆಮೊರಿ ಕಾರ್ಡುಗಳ ಪರಿಚಯ ಚೆನ್ನಾಗಿಯೇ ಇರುತ್ತದೆ. ಕ್ಯಾಮೆರಾದಲ್ಲಿ ಸೆರೆಹಿಡಿದ ಚಿತ್ರಗಳನ್ನು ಉಳಿಸಿಡಲು, ಮೊಬೈಲಿನ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನಾವು ಇವನ್ನು ಬಳಸುತ್ತೇವೆ. ಟ್ಯಾಬ್ಲೆಟ್ ಕಂಪ್ಯೂಟರುಗಳಲ್ಲಿ, ಎಂಪಿತ್ರೀ ಪ್ಲೇಯರಿನಲ್ಲಿ, ಕಾರ್ ಸ್ಟೀರಿಯೋ - ನ್ಯಾವಿಗೇಶನ್ ವ್ಯವಸ್ಥೆಗಳಲ್ಲೂ ಮೆಮೊರಿ ಕಾರ್ಡುಗಳು ಬಳಕೆಯಾಗುತ್ತವೆ.

ಮೆಮೊರಿ ಕಾರ್ಡುಗಳಲ್ಲಿ ಹಲವು ಬಗೆ. ಬೇರೆಬೇರೆ ರೀತಿಯ ಕಾರ್ಡುಗಳ ಗಾತ್ರ-ಆಕಾರಗಳೂ ವಿಭಿನ್ನವಾಗಿರುತ್ತವೆ. ಮೆಮೊರಿ ಸ್ಟಿಕ್, ಕಾಂಪ್ಯಾಕ್ಟ್‌ಫ್ಲಾಶ್, ಸೆಕ್ಯೂರ್ ಡಿಜಿಟಲ್ (ಎಸ್‌ಡಿ) ಇತ್ಯಾದಿಗಳೆಲ್ಲ ಮೆಮೊರಿ ಕಾರ್ಡ್‌ನ ವಿವಿಧ ಅವತಾರಗಳ ಹೆಸರುಗಳು.

ಎಕ್ಸಿಫ್ ಎಂದರೇನು?

ಟಿ. ಜಿ. ಶ್ರೀನಿಧಿ

ಫೇಸ್‌ಬುಕ್‌ನಲ್ಲಿ ಚೆಂದದ ಛಾಯಾಚಿತ್ರವೊಂದನ್ನು ಸೇರಿಸಿದಾಗ ಅದನ್ನು ಹಂಚಿಕೊಂಡವರು ಅಥವಾ ಚಿತ್ರವನ್ನು ಮೆಚ್ಚಿದವರು ಚಿತ್ರದ ಎಕ್ಸಿಫ್ (EXIF) ಡೇಟಾದ ಬಗ್ಗೆ ಮಾತನಾಡುವುದನ್ನು ನೀವು ಗಮನಿಸಿರಬಹುದು.

ಎಕ್ಸಿಫ್ ಎನ್ನುವುದು 'ಎಕ್ಸ್‌ಚೇಂಜಬಲ್ ಇಮೇಜ್ ಫೈಲ್ ಫಾರ್ಮ್ಯಾಟ್' ಎಂಬ ಹೆಸರಿನ ಹ್ರಸ್ವರೂಪ. ಡಿಜಿಟಲ್ ಕ್ಯಾಮೆರಾ ಬಳಸಿ ಕ್ಲಿಕ್ಕಿಸಿದಾಗ ಅದರ ಮೆಮೊರಿಯಲ್ಲಿ ಚಿತ್ರ ಉಳಿದುಕೊಳ್ಳುತ್ತದಲ್ಲ, ಆ ಚಿತ್ರದ ಜೊತೆಗೆ ಉಳಿಸಲಾಗುವ ಹೆಚ್ಚುವರಿ ಮಾಹಿತಿಯೇ ಎಕ್ಸಿಫ್.

ಹ್ಯಾಶ್‌ಟ್ಯಾಗ್ ಬಳಸುವ ಮುನ್ನ

ಟಿ. ಜಿ. ಶ್ರೀನಿಧಿ

ಸಮಾಜಜಾಲಗಳಲ್ಲಿ ಕಾಣಸಿಗುವ ಹಲವು ಸಂದೇಶಗಳಲ್ಲಿ ಹ್ಯಾಶ್ (#) ಚಿಹ್ನೆಯಿಂದ ಪ್ರಾರಂಭವಾಗುವ ಪದಗಳನ್ನು ನಾವು ನೋಡುತ್ತೇವೆ. ಇಂತಹ ಪದಗಳಿಗೆ 'ಹ್ಯಾಶ್‌ಟ್ಯಾಗ್'ಗಳೆಂದು ಹೆಸರು.

ಸಂದೇಶ ಬರೆಯುವವರ ಭಾವನೆಯನ್ನು ಪ್ರತಿನಿಧಿಸುವುದರಿಂದ ಪ್ರಾರಂಭಿಸಿ ಸಂಸ್ಥೆಗಳ ಹೆಸರನ್ನೋ ಭಾಷೆಯ ವಿಷಯವನ್ನೋ ನಿರ್ದಿಷ್ಟ ಘಟನೆಯನ್ನೋ ನಿರ್ದೇಶಿಸುವವರೆಗೆ ಹ್ಯಾಶ್‌ಟ್ಯಾಗ್‌ಗಳು ಅನೇಕ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಬೆಂಗಳೂರಿಗೆ ಸಂಬಂಧಪಟ್ಟ ವಿಷಯವೆಂದು ಹೇಳಲು #Bengaluru, ಕನ್ನಡದ ಮಾಹಿತಿ ಎನ್ನುವುದಕ್ಕೆ #Kannada - ಹೀಗೆ ಯಾವುದೇ ಬಗೆಯ ಹ್ಯಾಶ್‌ಟ್ಯಾಗ್‌ಗಳನ್ನು ನಾವೇ ಸ್ವತಃ ರೂಪಿಸಿಕೊಳ್ಳಬಹುದು, ಅಥವಾ ಈಗಾಗಲೇ ಇರುವ ಟ್ಯಾಗ್‌ಗಳನ್ನು ನಮ್ಮ ಸಂದೇಶಗಳಲ್ಲಿ ಬಳಸಲೂಬಹುದು.

ಹಾರ್ಡ್ ಡಿಸ್ಕ್ ಡ್ರೈವ್ ಮತ್ತು ಸಾಲಿಡ್ ಸ್ಟೇಟ್ ಡ್ರೈವ್

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನ ಭಾಗಗಳ ಬಗ್ಗೆ ಕೇಳಿದಾಗ ನಮಗೆ ಥಟ್ಟನೆ ನೆನಪಾಗುವ ಹೆಸರುಗಳ ಪೈಕಿ ಹಾರ್ಡ್ ಡಿಸ್ಕ್ ಕೂಡ ಒಂದು. ಮತ್ತೊಮ್ಮೆ ಬಳಸಲು ಬೇಕಾದ ಮಾಹಿತಿಯನ್ನು ಉಳಿಸಿಡಲು ನಾವು ಈ ಸಾಧನವನ್ನು ಬಳಸುತ್ತೇವೆ.

ಹಾರ್ಡ್ ಡಿಸ್ಕ್ ಎನ್ನುವ ಹೆಸರಿಗೆ ಕಾರಣ ಅದರಲ್ಲಿ ಬಳಕೆಯಾಗುವ ಲೋಹದ ತಟ್ಟೆಗಳು. ಅಯಸ್ಕಾಂತೀಯ ಲೇಪನವಿರುವ ಈ ತಟ್ಟೆಗಳ ಮೇಲೆ ಓಡಾಡುವ ಒಂದು ಪುಟ್ಟ ಕಡ್ಡಿಯಂತಹ ಸಾಧನ ನಮ್ಮ ಮಾಹಿತಿಯನ್ನು ಅಲ್ಲಿ ಬರೆದಿಡುತ್ತದೆ, ಬರೆದಿಟ್ಟ ಮಾಹಿತಿಯನ್ನು ಮತ್ತೆ ಓದಲೂ ನೆರವಾಗುತ್ತದೆ. ಈ ತಟ್ಟೆಗಳು, ಓದು-ಬರಹದ ಕಡ್ಡಿ, ಅದು ಓಡಾಡಲು ಬೇಕಾದ ವ್ಯವಸ್ಥೆಯೆಲ್ಲ ಸೇರಿದ್ದೇ ಹಾರ್ಡ್ ಡಿಸ್ಕ್ ಡ್ರೈವ್ (ಎಚ್‌ಡಿಡಿ). ಇದನ್ನು ನಾವು ಸರಳವಾಗಿ ಹಾರ್ಡ್ ಡಿಸ್ಕ್ ಎಂದು ಕರೆಯುತ್ತೇವೆ ಅಷ್ಟೆ: ಕಂಪ್ಯೂಟರಿನ ಒಳಗೆ ಅಡಕವಾಗಿರುವುದು ಇಂಟರ್ನಲ್ ಹಾರ್ಡ್ ಡಿಸ್ಕ್, ಪ್ರತ್ಯೇಕವಾಗಿ ಹೊರಗಿನಿಂದ ಜೋಡಿಸಬಹುದಾದದ್ದು ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್.

ಡಿಜಿಟಲ್ ಕ್ಯಾಮೆರಾ: ಮೆಗಾಪಿಕ್ಸೆಲ್ ಎಷ್ಟು ಮುಖ್ಯ?

ಟಿ. ಜಿ. ಶ್ರೀನಿಧಿ

ಡಿಜಿಟಲ್ ಕ್ಯಾಮೆರಾ ಕೊಳ್ಳಬೇಕು ಎಂದತಕ್ಷಣ ಕೇಳಸಿಗುವ ಪ್ರಮುಖ ಪ್ರಶ್ನೆ - ಎಷ್ಟು ಮೆಗಾಪಿಕ್ಸೆಲ್ ಇದ್ದರೆ ಒಳ್ಳೆಯದು?

ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಡುವ ಮೊದಲು ಪಿಕ್ಸೆಲ್ ಎಂದರೇನು ಎಂದು ತಿಳಿದುಕೊಳ್ಳುವುದು ಅಗತ್ಯ. ಡಿಜಿಟಲ್ ಕ್ಯಾಮೆರಾ ಬಳಸಿ ಕ್ಲಿಕ್ಕಿಸುತ್ತೇವಲ್ಲ, ಅಂತಹ ಪ್ರತಿಯೊಂದು ಚಿತ್ರದಲ್ಲೂ ಅಪಾರ ಸಂಖ್ಯೆಯ ಪುಟ್ಟಪುಟ್ಟ ಚೌಕಗಳಿರುತ್ತವೆ. ಮನೆಯ ನೆಲದಲ್ಲಿ ಟೈಲ್ಸ್ ಇರುತ್ತವಲ್ಲ, ಹಾಗೆ. ಬೇರೆಬೇರೆ ಬಣ್ಣಗಳ ಇಷ್ಟೆಲ್ಲ ಚೌಕಗಳು ಒಟ್ಟಾಗಿ ನಮ್ಮ ಕಣ್ಣಮುಂದೆ ಚಿತ್ರವನ್ನು ಕಟ್ಟಿಕೊಡುತ್ತವೆ.

ಇಂತಹ ಚೌಕಗಳನ್ನು ಪಿಕ್ಸೆಲ್‌ಗಳೆಂದು ಕರೆಯುತ್ತಾರೆ. ಪಿಕ್ಸೆಲ್ ಎಂಬ ಹೆಸರು 'ಪಿಕ್ಚರ್ ಎಲಿಮೆಂಟ್' ಎನ್ನುವುದರ ಹ್ರಸ್ವರೂಪ. ಚಿತ್ರದಲ್ಲಿ ಇರುವ ಪಿಕ್ಸೆಲ್‌ಗಳ ಸಂಖ್ಯೆ ಜಾಸ್ತಿಯಾದಷ್ಟೂ ಅದರ ಸ್ಪಷ್ಟತೆ ಹೆಚ್ಚು. ಅಂದರೆ, ಚಿತ್ರದಲ್ಲಿ ಹೆಚ್ಚು ಸಂಖ್ಯೆಯ ಪಿಕ್ಸೆಲ್‌ಗಳಿದ್ದಷ್ಟೂ ಅದನ್ನು ಹೆಚ್ಚುಹೆಚ್ಚು ದೊಡ್ಡದಾಗಿ ಮುದ್ರಿಸಿಕೊಳ್ಳಬಹುದು.

ಹೆಚ್ಚು ಎಂದರೆ ಎಷ್ಟು ಎಂದು ಹೇಳಬೇಕಲ್ಲ, ಅದಕ್ಕೆ ಬಳಕೆಯಾಗುವುದೇ ಮೆಗಾಪಿಕ್ಸೆಲ್.
ಒಂದು ಮೆಗಾಪಿಕ್ಸೆಲ್ ಎನ್ನುವುದು ಹತ್ತು ಲಕ್ಷ ಪಿಕ್ಸೆಲ್‌ಗಳಿಗೆ ಸಮಾನ.

ಜೆನ್‍ಫೋನ್ ಮ್ಯಾಕ್ಸ್‌ನ ಮೂರನೇ ಆವೃತ್ತಿ [ವೀಡಿಯೋ ಕೂಡ ಇದೆ!]

ಇಜ್ಞಾನ ವಿಶೇಷ


ತೈವಾನ್ ಮೂಲದ ತಂತ್ರಜ್ಞಾನ ಸಂಸ್ಥೆ ಏಸಸ್ ರೂಪಿಸುತ್ತಿರುವ ಜೆನ್‌ಫೋನ್ ಸರಣಿಯ ಸ್ಮಾರ್ಟ್‌ಫೋನುಗಳು ಕಳೆದ ಕೆಲವರ್ಷಗಳಿಂದ ನಮ್ಮ ದೇಶದಲ್ಲಿ ಅಪಾರ ಜನಪ್ರಿಯತೆ ಗಳಿಸಿಕೊಂಡಿವೆ. ವಿವಿಧ ಬೆಲೆಗಳಲ್ಲಿ ವಿವಿಧ ವೈಶಿಷ್ಟ್ಯಗಳೊಡನೆ ದೊರಕುವ ಈ ಸರಣಿಯ ಫೋನುಗಳ ಪೈಕಿ ಜೆನ್‌ಫೋನ್ ಮ್ಯಾಕ್ಸ್‌ನದು ವಿಶೇಷ ಸ್ಥಾನ. ಹೆಚ್ಚಿನ ಬ್ಯಾಟರಿ ಸಾಮರ್ಥ್ಯದಿಂದಲೇ ಗುರುತಿಸಿಕೊಂಡಿರುವ ಈ ಸ್ಮಾರ್ಟ್‌ಫೋನ್ ಬೇರೆ ಮೊಬೈಲುಗಳನ್ನು ಚಾರ್ಜ್ ಮಾಡುವ ತನ್ನ ವೈಶಿಷ್ಟ್ಯದಿಂದಲೂ ಸಾಕಷ್ಟು ಹೆಸರುಮಾಡಿದೆ.

ಸುಮಾರು ಹತ್ತುಸಾವಿರ ರೂಪಾಯಿಗಳ ಆಸುಪಾಸಿನ ದರದಲ್ಲಿ ಮಾರುಕಟ್ಟೆಗೆ ಬಂದಿದ್ದ ಜೆನ್‌ಫೋನ್ ಮ್ಯಾಕ್ಸ್‌ನ ಮೊದಲೆರಡು ಆವೃತ್ತಿಗಳನ್ನು ಈ ಹಿಂದೆ ಇಜ್ಞಾನದಲ್ಲಿ ಪರಿಚಯಿಸಲಾಗಿತ್ತು [ಓದಿ: ಜೆನ್‌ಫೋನ್ ಮ್ಯಾಕ್ಸ್ ಇದೀಗ ಇನ್ನಷ್ಟು ಶಕ್ತಿಶಾಲಿ!]. ಪ್ರಸ್ತುತ ಲೇಖನದ ವಸ್ತು ಇದೇ ಸರಣಿಯ ಹೊಸ ಪರಿಚಯವಾದ ಜೆನ್‍ಫೋನ್ ೩ ಮ್ಯಾಕ್ಸ್.

ವೈರಸ್ ತಡೆಗೆ ಆಂಟಿವೈರಸ್

ಟಿ. ಜಿ. ಶ್ರೀನಿಧಿ 

ಕಂಪ್ಯೂಟರಿನ, ಸ್ಮಾರ್ಟ್‌ಫೋನಿನ ಸಾಫ್ಟ್‌ವೇರ್‌ನಿಂದ (ತಂತ್ರಾಂಶ) ಎಷ್ಟು ಉಪಯೋಗವಿದೆಯೋ ಅಷ್ಟೇ ಪ್ರಮಾಣದ ತೊಂದರೆಯೂ ಆಗಬಲ್ಲದು. ಒಳ್ಳೆಯ ಉದ್ದೇಶಕ್ಕೆ ತಂತ್ರಾಂಶಗಳಿರುವಂತೆ ಕೆಟ್ಟ ಕೆಲಸಗಳಿಗಾಗಿಯೂ ತಂತ್ರಾಂಶಗಳು (ಮಾಲ್‌ವೇರ್ - ಕುತಂತ್ರಾಂಶ) ರೂಪುಗೊಂಡಿರುವುದು ಇದಕ್ಕೆ ಕಾರಣ.

ಕಂಪ್ಯೂಟರ್ ಕಾರ್ಯಾಚರಣೆಗೆ ತೊಂದರೆಮಾಡುವುದು, ಶೇಖರಿಸಿಟ್ಟ ಮಾಹಿತಿಯನ್ನು ಹಾಳುಮಾಡುವುದು, ಖಾಸಗಿ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವುದು - ಹೀಗೆ ಕುತಂತ್ರಾಂಶಗಳು ಬೇಕಾದಷ್ಟು ಬಗೆಯಲ್ಲಿ ತೊಂದರೆಕೊಡುತ್ತವೆ. ವೈರಸ್, ಟ್ರೋಜನ್, ಸ್ಪೈವೇರ್, ಆಡ್‌ವೇರ್ ಇವೆಲ್ಲ ಕುತಂತ್ರಾಂಶಗಳಿಗೆ ಉದಾಹರಣೆಗಳು.

ರೋಗ ಬಾರದಂತಿರಲು, ಹಾಗೂ ಬಂದಾಗ ಅದನ್ನು ವಾಸಿಮಾಡಿಕೊಳ್ಳಲು ನಾವು ಔಷಧಿ ತೆಗೆದುಕೊಳ್ಳುತ್ತೇವಲ್ಲ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳ ಪಾಲಿಗೆ ಅಂತಹ ಔಷಧಿಯೆಂದರೆ ಆಂಟಿವೈರಸ್ ತಂತ್ರಾಂಶ. ಕುತಂತ್ರಾಂಶಗಳನ್ನು ಗುರುತಿಸಿ ಅವು ತೊಂದರೆಮಾಡದಂತೆ ತಡೆಯುವುದು ಈ ತಂತ್ರಾಂಶದ ಕೆಲಸ.

ಫಾಸ್ಟ್ ಚಾರ್ಜಿಂಗ್ ಎಂದರೇನು?

ಟಿ. ಜಿ. ಶ್ರೀನಿಧಿ

ಈಚಿನ ದಿನಗಳಲ್ಲಿ ಮೊಬೈಲ್ ಫೋನುಗಳೇನೋ ಸ್ಮಾರ್ಟ್ ಆಗುತ್ತಿವೆ, ಸರಿ. ಆದರೆ ಅವುಗಳ ಬ್ಯಾಟರಿಯಲ್ಲಿ ಮಾತ್ರ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ; ಪದೇಪದೇ ಚಾರ್ಜ್ ಮಾಡಬೇಕಾದ ಪರಿಸ್ಥಿತಿಯಿಂದ - ಪ್ರತಿಬಾರಿ ಚಾರ್ಜ್ ಮಾಡಲು ಗಂಟೆಗಟ್ಟಲೆ ಕಾಯಬೇಕಾದ ಫಜೀತಿಯಿಂದ ಇನ್ನೂ ಬಿಡುಗಡೆ ಸಿಕ್ಕಿಲ್ಲ.

ಫೋನ್ ಚಾರ್ಜ್ ಆಗಲು ಹೀಗೆ ಗಂಟೆಗಟ್ಟಲೆ ಕಾಯುವ ಬದಲಿಗೆ ಕೆಲವೇ ಸೆಕೆಂಡುಗಳಲ್ಲಿ ಪೂರ್ತಿ ಚಾರ್ಜ್ ಆಗುವ ಬ್ಯಾಟರಿ ಸಿಕ್ಕರೆ ಹೇಗೆ? ಈ ಪ್ರಶ್ನೆಗೆ ಉತ್ತರ ಹುಡುಕಲು ಹಲವು ಪ್ರಯತ್ನಗಳು ನಡೆದಿವೆ.

ಈಚೆಗೆ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ 'ಫಾಸ್ಟ್ ಚಾರ್ಜಿಂಗ್' ತಂತ್ರಜ್ಞಾನ ಇಂತಹ ಪ್ರಯತ್ನಗಳಲ್ಲೊಂದು.

ಫೈಲ್ ರಿಕವರಿ ಮಾಡುವುದು ಹೀಗೆ...

ಟಿ. ಜಿ. ಶ್ರೀನಿಧಿ

ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಇತ್ಯಾದಿಗಳನ್ನೆಲ್ಲ ಮತ್ತೆ ಮತ್ತೆ ಬಳಸುತ್ತಿರುವುದು ಸುಲಭ, ನಿಜ. ಆದರೆ ಮಾಹಿತಿ ತುಂಬುವ - ಅಳಿಸುವ - ಮತ್ತೆ ತುಂಬುವ ಈ ಪ್ರಕ್ರಿಯೆ ಒಂದಷ್ಟು ಸಾರಿ ಪುನರಾವರ್ತನೆ ಆಗುತ್ತಿದ್ದಂತೆ ಆ ಸಾಧನದ ವಿಶ್ವಾಸಾರ್ಹತೆ ಕಡಿಮೆಯಾಗುತ್ತ ಬರುತ್ತದೆ. ಇದ್ದಕ್ಕಿದ್ದಂತೆ ಒಂದು ದಿನ ಅದರಲ್ಲಿರುವ ಮಾಹಿತಿಯನ್ನು ಓದುವುದೇ ಸಾಧ್ಯವಾಗುವುದಿಲ್ಲ!

ಹೀಗಾಗಲು ಹಲವು ಕಾರಣಗಳಿರಬಹುದು. ಬಹಳಷ್ಟು ಸಾರಿ ಬಳಸಿ ಹಳೆಯದಾಗಿರುವುದರಿಂದ ಅದು ಹಾಳಾಗಿರಬಹುದು, ಅಥವಾ ಬ್ಯಾಡ್ ಸೆಕ್ಟರ್ ಸಮಸ್ಯೆ ಸೃಷ್ಟಿಯಾಗಿರಬಹುದು. ಅಷ್ಟೇ ಏಕೆ, ವೈರಸ್ ಬಂದಿರುವ ಅಥವಾ ಕಂಪ್ಯೂಟರಿನಲ್ಲೇ ಸಮಸ್ಯೆಯಿರುವ ಸಾಧ್ಯತೆಯೂ ಇರುತ್ತದೆ.

ಇದು 'ವೈರಲ್' ವಿಷಯ

ಟಿ. ಜಿ. ಶ್ರೀನಿಧಿ

ವೈರಸ್ಸುಗಳಿವೆಯಲ್ಲ, ಜೀವಜಗತ್ತಿನವು, ಒಂದೆಡೆಯಿಂದ ಇನ್ನೊಂದೆಡೆಗೆ ಕ್ಷಿಪ್ರವಾಗಿ ಸಾಗುವಲ್ಲಿ ಅವನ್ನು ಬಿಟ್ಟರಿಲ್ಲ. ಸೊಳ್ಳೆಗಳ ಮೂಲಕವೋ ನೀರು-ಗಾಳಿಯ ಮೂಲಕವೋ ಅವು ಹರಡುತ್ತಲೇ ಹೋಗುತ್ತವೆ, ಅದೆಷ್ಟೋ ಜನರಿಗೆ ರೋಗಗಳನ್ನು ಅಂಟಿಸುತ್ತವೆ.

ಡಿಜಿಟಲ್ ಜಗತ್ತಿನ ವೈರಸ್ಸುಗಳೂ ಜೀವಜಗತ್ತಿನ ವೈರಸ್ಸುಗಳಂತೆಯೇ. ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುತ್ತ ಸಿಕ್ಕ ಕಂಪ್ಯೂಟರು - ಸ್ಮಾರ್ಟ್‌ಫೋನುಗಳಿಗೆಲ್ಲ ತೊಂದರೆಕೊಡುವುದೇ ಅವುಗಳ ಕೆಲಸ.

ಈ ವೈರಸ್ಸುಗಳು ಹರಡುವ ರೀತಿಯಿದೆಯಲ್ಲ, ಅದನ್ನೇ ಅನುಕರಿಸುವ ಇನ್ನೊಂದು ವಿದ್ಯಮಾನವೂ ಈಚೆಗೆ ಹೆಸರುಮಾಡುತ್ತಿದೆ. ಅಂತರಜಾಲದ ಮಾಧ್ಯಮ ಬಳಸಿ - ಜಾಹೀರಾತಿನ ದುಬಾರಿ ವೆಚ್ಚವಿಲ್ಲದೆಯೇ - ಅಪಾರ ಪ್ರಚಾರ ಗಿಟ್ಟಿಸಿಕೊಳ್ಳುವ ಸಂಗತಿಗಳು ಬಳಸುವ ತಂತ್ರದ ಹೆಸರೂ 'ವೈರಲ್' ಎಂದೇ.

ಪ್ರಾಸೆಸರ್ ಪರಿಚಯ ಇಲ್ಲಿದೆ ನೋಡಿ!

ಟಿ. ಜಿ. ಶ್ರೀನಿಧಿ


ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳನ್ನು ಓದಿದವರೆಲ್ಲರಿಗೂ ಕೇಂದ್ರೀಯ ಸಂಸ್ಕರಣ ಘಟಕ ಅಥವಾ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು) ಎಂಬ ಹೆಸರಿನ ಪರಿಚಯ ಇರುತ್ತದೆ. ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್ ಮುಂತಾದ ಸಾಧನಗಳಲ್ಲಿ ಸಿಪಿಯುನಂತೆ ಕೆಲಸಮಾಡುವುದು ಅವುಗಳ ಪ್ರಾಸೆಸರ್. ಈ ಸಾಧನಗಳ ಚಟುವಟಿಕೆಯ ಪ್ರತಿ ಹೆಜ್ಜೆಯಲ್ಲೂ ನಡೆಯುವ ಅಸಂಖ್ಯ ಲೆಕ್ಕಾಚಾರಗಳನ್ನೆಲ್ಲ ನಿಭಾಯಿಸುವುದು ಪ್ರಾಸೆಸರ್‌ನ ಜವಾಬ್ದಾರಿ.

ಪ್ರಾಸೆಸರ್ ಸಾಮರ್ಥ್ಯವನ್ನು ಅದರ ವೇಗದ (ಕ್ಲಾಕ್ ಸ್ಪೀಡ್) ಮೂಲಕ ಪ್ರತಿನಿಧಿಸುವುದು ಸಂಪ್ರದಾಯ. ಈ ಪ್ರಾಸೆಸರ್ ೧.೫ ಗಿಗಾಹರ್ಟ್ಸ್‌ನದು ಎಂದೋ ೩ ಗಿಗಾ‌ಹರ್ಟ್ಸ್‌ನದು ಎಂದು ಹೇಳುತ್ತಾರಲ್ಲ, ಆ ಸಂಖ್ಯೆ ಸೂಚಿಸುವುದು ಇದೇ ಕ್ಲಾಕ್ ಸ್ಪೀಡ್ ಅನ್ನು. ಹರ್ಟ್ಸ್ ಎನ್ನುವುದು ಇದರ ಏಕಮಾನ.

ಇಮೇಲ್‍ ಇಜ್ಞಾನ: 'ಸಿಸಿ'ಗೂ 'ಬಿಸಿಸಿ'ಗೂ ಏನು ವ್ಯತ್ಯಾಸ?

ಟಿ. ಜಿ. ಶ್ರೀನಿಧಿ

ಇಮೇಲ್ ಕಳುಹಿಸುವಾಗ ಸಂದೇಶ ತಲುಪಬೇಕಾದವರ ವಿಳಾಸ ದಾಖಲಿಸಲು ಮೂರು ಆಯ್ಕೆಗಳಿರುವುದನ್ನು ನೋಡಿರಬಹುದು: ಟು, ಸಿಸಿ ಹಾಗೂ ಬಿಸಿಸಿ. ನಮ್ಮ ಸಂದೇಶ ಯಾರಿಗೆ ತಲುಪಬೇಕೋ ಅವರ ಇಮೇಲ್ ವಿಳಾಸವನ್ನು 'ಟು' ವಿಭಾಗದಲ್ಲಿ ದಾಖಲಿಸುತ್ತೇವೆ.

ಕಳುಹಿಸುತ್ತಿರುವ ಸಂದೇಶದ ಬಗೆಗೆ ಬೇರೆ ಯಾರಿಗಾದರೂ ಮಾಹಿತಿ ನೀಡಬೇಕು ಎನ್ನುವುದಾದಲ್ಲಿ ಅವರ ವಿಳಾಸವನ್ನು 'ಸಿಸಿ' (ಕಾರ್ಬನ್ ಕಾಪಿ) ವಿಭಾಗದಲ್ಲಿ ಬರೆಯಬಹುದು. 'ಸಿಸಿ' ವಿಭಾಗದಲ್ಲಿ ನೀವು ಯಾರ ಇಮೇಲ್ ವಿಳಾಸವನ್ನು ದಾಖಲಿಸುತ್ತೀರೋ ಅವರಿಗೆ ಆ ಸಂದೇಶದ ಒಂದು ಪ್ರತಿ ತಲುಪುತ್ತದೆ. ಇಮೇಲ್ ಸಂದೇಶ ಯಾರಿಗೆಲ್ಲ ಹೋಗಿದೆ ಎನ್ನುವ ವಿಷಯ 'ಟು' ಹಾಗೂ 'ಸಿಸಿ' ವಿಭಾಗದಲ್ಲಿರುವ ಎಲ್ಲರಿಗೂ ತಿಳಿಯುತ್ತದೆ.
badge