ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ: 'ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!'

ಬ್ಲೂಟೂತ್: ಒಂದು ಪರಿಚಯ

ಟಿ. ಜಿ. ಶ್ರೀನಿಧಿ

ವಿಚಿತ್ರ ಹೆಸರಿನಿಂದ ಗಮನಸೆಳೆಯುವ ತಂತ್ರಜ್ಞಾನಗಳ ಪೈಕಿ 'ಬ್ಲೂಟೂತ್'ಗೆ ವಿಶೇಷ ಸ್ಥಾನವಿದೆ. ಪರಸ್ಪರ ಸಮೀಪದಲ್ಲಿರುವ ವಿದ್ಯುನ್ಮಾನ ಸಾಧನಗಳ ನಡುವೆ ನಿಸ್ತಂತು (ವೈರ್‌ಲೆಸ್) ಸಂವಹನ ಹಾಗೂ ಕಡತಗಳ ವಿನಿಮಯವನ್ನು ಸಾಧ್ಯವಾಗಿಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯ.

ಮೊದಲಿಗೆ ಮೊಬೈಲ್ ಫೋನುಗಳ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಬ್ಲೂಟೂತ್ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ಈಚೆಗೆ ವೈ-ಫೈ ತಂತ್ರಜ್ಞಾನ ಆಧರಿತ 'ಶೇರ್‌ಇಟ್'ನಂತಹ ಸೌಲಭ್ಯಗಳು ಬಂದಮೇಲೆ ಆ ಬಗೆಯ ಬಳಕೆ ಕೊಂಚ ಕಡಿಮೆಯಾಗಿದೆ.

ಗೂಗಲ್ ಗುರುವಿನ ಒಂದಷ್ಟು ಗುಟ್ಟುಗಳು

ಟಿ. ಜಿ. ಶ್ರೀನಿಧಿ


ವಿಶ್ವವ್ಯಾಪಿ ಜಾಲದಲ್ಲಿ ಏನು ಮಾಹಿತಿ ಬೇಕಿದ್ದರೂ ಅದನ್ನು ಗೂಗಲ್‌ನಲ್ಲಿ ಹುಡುಕಿಕೊಳ್ಳುವುದು ನಮ್ಮೆಲ್ಲರ ಅಭ್ಯಾಸ. ಹೀಗೆ ಹುಡುಕಲು ಹೊರಟಾಗ ನಾವು ಟೈಪ್ ಮಾಡುತ್ತೇವಲ್ಲ ಪದಗಳು, ಅವನ್ನು ಕೀವರ್ಡ್‌ಗಳೆಂದು (ಕನ್ನಡದಲ್ಲಿ 'ಹುಡುಕುಪದ') ಕರೆಯುತ್ತಾರೆ. ನಾವು ಹುಡುಕುತ್ತಿರುವ ವಿಷಯವನ್ನು ಆದಷ್ಟೂ ನಿಖರವಾಗಿ ಪ್ರತಿನಿಧಿಸುವ ಕೀವರ್ಡ್‌ಗಳನ್ನು ಆರಿಸಿಕೊಂಡರೆ ನಮಗೆ ಸರಿಯಾದ ಮಾಹಿತಿ ಸಿಗುವ ಸಾಧ್ಯತೆ ಜಾಸ್ತಿ. ಅಷ್ಟೇ ಅಲ್ಲ, ಪಠ್ಯ-ಚಿತ್ರ-ವೀಡಿಯೋ ಮುಂತಾದ ಹಲವು ರೂಪಗಳ ಪೈಕಿ ನಾವು ಯಾವ ಬಗೆಯ ಮಾಹಿತಿಯನ್ನು ಹುಡುಕುತ್ತಿದ್ದೇವೆ ಎನ್ನುವುದನ್ನೂ ನಾವು ಗೂಗಲ್‌ಗೆ ಹೇಳಬಹುದು.

ಮೊಬೈಲ್ ಫೋನಿನ ವಿಧವಿಧ ರೂಪ

ಟಿ. ಜಿ. ಶ್ರೀನಿಧಿ


ಮಾರುಕಟ್ಟೆಯಲ್ಲಿ ದೊರಕುವ ಮೊಬೈಲ್ ಫೋನುಗಳಲ್ಲಿ ನೂರೆಂಟು ವಿಧ - ಬೇರೆಬೇರೆ ನಿರ್ಮಾತೃಗಳು, ಬೇರೆಬೇರೆ ಗಾತ್ರ, ಬೇರೆಬೇರೆ ಸವಲತ್ತುಗಳನ್ನು ಇಲ್ಲಿ ನಾವು ಕಾಣಬಹುದು. ವೈವಿಧ್ಯ ಕಡಿಮೆಯಿರುವುದು ಬಹುಶಃ ಮೊಬೈಲುಗಳ ಆಕಾರ ಹಾಗೂ ಸ್ವರೂಪದಲ್ಲಿ ಮಾತ್ರವೇ ಇರಬೇಕು.

ಜಿಯೋಫೆನ್ಸಿಂಗ್ ಎಂಬ ಡಿಜಿಟಲ್ ಬೇಲಿ

ಟಿ. ಜಿ. ಶ್ರೀನಿಧಿ


ಹೋಟಲಿನಿಂದ ಊಟ-ತಿಂಡಿ ತರಿಸಲು, ಎಲ್ಲಿಗೋ ಹೋಗಬೇಕಾದಾಗ ಆಟೋ-ಟ್ಯಾಕ್ಸಿ ಕರೆಸಲು ಮೊಬೈಲ್ ಆಪ್ ಬಳಸುವ ಅಭ್ಯಾಸ ನಗರಗಳಲ್ಲಿ ವ್ಯಾಪಕವಾಗಿದೆ. ಇಂತಹ ಆಪ್‌ಗಳನ್ನು ಬಳಸುವಾಗ ನಾವೊಂದು ಕುತೂಹಲದ ಸಂಗತಿಯನ್ನು ಗಮನಿಸಬಹುದು - ಒಂದೇ ಆಪ್‌ನಲ್ಲಿ ನಮ್ಮ ಮನೆ ವಿಳಾಸ ಹಾಕಿದಾಗ ದೊರಕುವ ಹೋಟಲುಗಳ ಪಟ್ಟಿಗೂ ಪಕ್ಕದ ಬೀದಿಗೆ ಊಟ ತಂದುಕೊಡಬಲ್ಲ ಹೋಟಲುಗಳ ಪಟ್ಟಿಗೂ ನಡುವೆ ಕೆಲವೊಮ್ಮೆ ವ್ಯತ್ಯಾಸಗಳಿರುತ್ತವೆ;

ಹೂ ಇಸ್ WHOIS?

ಟಿ. ಜಿ. ಶ್ರೀನಿಧಿ


ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್‌ವೈಡ್ ವೆಬ್) ಅಪಾರ ಸಂಖ್ಯೆಯ ಜಾಲತಾಣಗಳಿವೆ. ಹೊರಪ್ರಪಂಚದ ಸೈಟುಗಳಂತೆಯೇ ವೆಬ್‌ಲೋಕದ ಈ ಸೈಟುಗಳಿಗೂ ಮಾಲೀಕರಿರುತ್ತಾರೆ. ಮನೆಕಟ್ಟಲು ಸೈಟು ಕೊಳ್ಳುವಾಗ ಮಾಡುವಂತೆ ಜಾಲತಾಣವನ್ನು ನೋಂದಾಯಿಸುವಾಗಲೂ ಅದನ್ನು ಕೊಳ್ಳುತ್ತಿರುವವರು ಯಾರು ಎನ್ನುವುದರ ಬಗ್ಗೆ ಮಾಹಿತಿ ನೀಡಬೇಕಾದ್ದು ಕಡ್ಡಾಯ.
ಜಾಲತಾಣಗಳನ್ನು ನಮ್ಮ ಹೆಸರಿಗೆ ನೋಂದಾಯಿಸಿಕೊಡುವ 'ರಿಜಿಸ್ಟ್ರಾರ್'ಗಳೆಂಬ ಸಂಸ್ಥೆಗಳು 'ದಿ ಇಂಟರ್‌ನೆಟ್ ಕಾರ್ಪೊರೇಶನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್' (ಐಕ್ಯಾನ್) ಎಂಬ ಜಾಗತಿಕ ಸಂಘಟನೆಯ ಪರವಾಗಿ ಈ ಮಾಹಿತಿಯನ್ನು ಸಂಗ್ರಹಿಸಿ ಶೇಖರಿಸಿಡುತ್ತವೆ.

ಇದು ಜೂಮ್ ಸಮಾಚಾರ!

ಟಿ. ಜಿ. ಶ್ರೀನಿಧಿ


ಕ್ಯಾಮೆರಾಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಪ್ರಸ್ತಾಪವಾಗುವ ವಿಷಯ 'ಜೂಮ್'. ಕ್ಯಾಮೆರಾ ಮುಂದಿನ ದೃಶ್ಯದ ನಿರ್ದಿಷ್ಟ ಭಾಗವನ್ನು ಹಿಗ್ಗಿಸಿ ತೋರಿಸುವ ಸೌಲಭ್ಯ ಇದು.

ಜೂಮ್‌ನಲ್ಲಿ ಎರಡು ವಿಧ - ಆಪ್ಟಿಕಲ್ ಜೂಮ್ ಹಾಗೂ ಡಿಜಿಟಲ್ ಜೂಮ್.

ಹೆದರಿಸುವ ವ್ಯವಹಾರ

ಟಿ. ಜಿ. ಶ್ರೀನಿಧಿ

"ನಿಮ್ಮ ಕಂಪ್ಯೂಟರಿಗೆ ವೈರಸ್ ಬಂದಿದೆ", "ನಿಮ್ಮ ಫೋನಿನ ಮಾಹಿತಿ ಸುರಕ್ಷಿತವಾಗಿಲ್ಲ" ಎಂದೆಲ್ಲ ಹೆದರಿಸುವ ಜಾಹೀರಾತುಗಳು ಹಲವು ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ನಾವು ಬಳಸುತ್ತಿರುವ ಆಂಟಿವೈರಸ್ ತಂತ್ರಾಂಶ ಇಂತಹುದೊಂದು ಸಂದೇಶ ಪ್ರದರ್ಶಿಸಿದರೆ ಓಕೆ, ಆದರೆ ಯಾವುದೋ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಜಾಹೀರಾತಿಗೆ ನಮ್ಮ ಕಂಪ್ಯೂಟರಿನ ಆರೋಗ್ಯ ಕೆಟ್ಟಿದ್ದು ಗೊತ್ತಾಗುವುದು ಹೇಗೆ?

ಕೀಬೋರ್ಡ್ ಕೆಲಸಮಾಡುವುದು ಹೇಗೆ?

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಬಳಕೆದಾರರಿಗೆಲ್ಲ ಚಿರಪರಿಚಿತ ಯಂತ್ರಾಂಶ ಕೀಬೋರ್ಡ್. ಕೀಲಿಗಳನ್ನು ಒತ್ತುವ ಮೂಲಕ ಬಳಕೆದಾರರು ಹೇಳಹೊರಟಿರುವುದನ್ನು ಕಂಪ್ಯೂಟರಿಗೆ ತಲುಪಿಸುವುದು ಈ ಸಾಧನದ ಜವಾಬ್ದಾರಿ. ನೋಡಲು ಅದೆಷ್ಟು ಸರಳವೆಂದು ತೋರಿದರೂ ಕೀಬೋರ್ಡ್ ಮಾಡುವ ಕೆಲಸ ಸಾಕಷ್ಟು ಸಂಕೀರ್ಣವಾದ್ದು.

ಡಿಜಿಟಲ್ ಸಿಗ್ನೇಚರ್: ಇದು ಇ-ಲೋಕದ ಆಟೋಗ್ರಾಫ್!

ಟಿ. ಜಿ. ಶ್ರೀನಿಧಿ

ಪತ್ರಗಳು, ಕಡತಗಳು ಭೌತಿಕ ರೂಪದಲ್ಲಿದ್ದಾಗ ಅವುಗಳ ಅಧಿಕೃತತೆಯನ್ನು ಪರಿಶೀಲಿಸುವುದು ಸುಲಭವಿತ್ತು. ಪತ್ರದ ಕೊನೆಯಲ್ಲಿ ಯಾರ ಸಹಿಯಿದೆ, ಜೊತೆಗಿರುವ ಮೊಹರಿನಲ್ಲಿ ಅವರ ಹುದ್ದೆಯ ಯಾವ ವಿವರಗಳಿವೆ ಎನ್ನುವುದನ್ನು ನೋಡಿದರೆ ಪತ್ರ ಅಧಿಕೃತವೋ ಅಲ್ಲವೋ ಎನ್ನುವುದನ್ನು ನಾವು ಅಂದಾಜಿಸಬಹುದಿತ್ತು.

ಆದರೆ ಈಗ ಪತ್ರಗಳು - ದಾಖಲೆಗಳು ಭೌತಿಕ ರೂಪದಲ್ಲಿರುವುದೇ ಅಪರೂಪ. ಇಂತಹ ಕಡತಗಳು ಅಧಿಕೃತವೋ ಅಲ್ಲವೋ ಎಂದು ತಿಳಿಯುವುದು ಹೇಗೆ?

ಇನ್ನೊಂದು ವರ್ಷ, ಇನ್ನಷ್ಟು ಕನಸು


ಇಜ್ಞಾನ ಜಾಲತಾಣ ಶುರುವಾದದ್ದು ೨೦೦೭ರ ಏಪ್ರಿಲ್ ೨೬ರಂದು. ಹತ್ತು ವರ್ಷ ಪೂರೈಸಿ ಹನ್ನೊಂದಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ನಿಮ್ಮೆಲ್ಲರ ಪ್ರೋತ್ಸಾಹಕ್ಕಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಮುಂಬರುವ ವರ್ಷಕ್ಕೆ ಇಜ್ಞಾನ ಅನೇಕ ಹೊಸ ಕಾರ್ಯಕ್ರಮಗಳನ್ನು ಯೋಜಿಸಿದೆ, ನಮಗೆ ನಿಮ್ಮ ಬೆಂಬಲ ಹೀಗೆಯೇ ಇರಲಿ!

ಪ್ಲಗ್-ಇನ್ ಎಂದರೇನು?

ಟಿ. ಜಿ. ಶ್ರೀನಿಧಿ

ತಂತ್ರಾಂಶಗಳು ಎಷ್ಟೆಲ್ಲ ಕೆಲಸ ಮಾಡಿದರೂ ನಮಗೆ ಅದರಲ್ಲಿ ಒಂದಲ್ಲ ಒಂದು ಕೊರತೆ ಕಾಣಸಿಗುವುದು ಸಾಮಾನ್ಯ. ಬ್ರೌಸರ್ ವಿಷಯವನ್ನೇ ತೆಗೆದುಕೊಳ್ಳಿ - ಬೇರೆಬೇರೆ ಜಾಲತಾಣಗಳ ಸೇವೆಯನ್ನು, ನಮ್ಮ ಕಂಪ್ಯೂಟರಿನಲ್ಲಿರುವ ಇತರ ತಂತ್ರಾಂಶಗಳನ್ನು ಬ್ರೌಸರ್ ಕಿಟಕಿಯಿಂದಲೇ ಬಳಸುವಂತಿದ್ದರೆ ಎಷ್ಟು ಚೆಂದ ಅಲ್ಲವೇ?

ಕಂಪ್ರೆಶನ್ ಕರಾಮತ್ತು

ಟಿ. ಜಿ. ಶ್ರೀನಿಧಿ

ಡಿಜಿಟಲ್ ರೂಪದ ಪ್ರತಿ ಕಡತಕ್ಕೂ ಅದರಲ್ಲಿರುವ ಮಾಹಿತಿಯ ಪ್ರಮಾಣಕ್ಕೆ ಅನುಗುಣವಾಗಿ ಒಂದು ನಿರ್ದಿಷ್ಟ ಗಾತ್ರ ಇರುತ್ತದೆ. ಬಿಟ್-ಬೈಟ್‌ಗಳಲ್ಲಿ ಅಳೆಯುವುದು ಈ ಗಾತ್ರವನ್ನೇ. ಕಡತದ ಗಾತ್ರ ದೊಡ್ಡದಾದರೆ ಅದನ್ನು ಉಳಿಸಿಡಲು ಹೆಚ್ಚಿನ ಸ್ಥಳಾವಕಾಶ ಬೇಕು. ನಾವೇ ಉಳಿಸಿಟ್ಟುಕೊಳ್ಳುವುದಾದರೆ ಸರಿ; ಆದರೆ ಬೇರೆಯವರಿಗೆ ಕಳುಹಿಸಬೇಕೆಂದರೆ ತೀರಾ ದೊಡ್ಡ ಕಡತಗಳನ್ನು ಕಳುಹಿಸುವುದು ಕಷ್ಟ. ಇದಕ್ಕಾಗಿ ಬಳಕೆಯಾಗುವುದೇ ಕಡತದ ಗಾತ್ರವನ್ನು ಕಡಿಮೆಮಾಡುವ 'ಕಂಪ್ರೆಶನ್' ತಂತ್ರ. ಸಾಮಾನ್ಯ ಬಳಕೆಯಲ್ಲಿ "ಜಿಪ್ ಮಾಡುವುದು" ಎಂದು ಗುರುತಿಸುವುದು ಇದನ್ನೇ.

ಬಾಟ್‍ಗಳ ಲೋಕದಲ್ಲಿ...

ಟಿ. ಜಿ. ಶ್ರೀನಿಧಿ


ಹಲವು ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡಬಲ್ಲ ಯಂತ್ರಗಳನ್ನು ರೋಬಾಟ್‌ಗಳೆಂದು ಕರೆಯುವುದು ನಮಗೆ ಗೊತ್ತಲ್ಲ, ಅಂತರಜಾಲದ ಲೋಕದಲ್ಲೂ ರೋಬಾಟ್‌ಗಳಿವೆ. ಕಣ್ಣಿಗೆ ಕಾಣುವ ರೋಬಾಟ್‌ಗಳು ಹಲವು ಯಂತ್ರಾಂಶಗಳ ಜೋಡಣೆಯಿಂದ ರೂಪುಗೊಂಡಿದ್ದರೆ ಜಾಲಜಗತ್ತಿನ ರೋಬಾಟ್‌ಗಳು ಬರಿಯ ತಂತ್ರಾಂಶಗಳಷ್ಟೇ!

ಇವುಗಳನ್ನು 'ಬಾಟ್'ಗಳೆಂದು ಗುರುತಿಸುವುದು ಸಾಮಾನ್ಯ ಅಭ್ಯಾಸ. ಬಾಟ್ ಎನ್ನುವುದು 'ರೋಬಾಟ್' ಎಂಬ ಹೆಸರಿನ ಹ್ರಸ್ವರೂಪ.

ಅನಗತ್ಯ ಸಂದೇಶಗಳನ್ನು ತಪ್ಪಿಸೋಣ!

ಟಿ. ಜಿ. ಶ್ರೀನಿಧಿ


ಇಮೇಲ್, ಫೇಸ್‌ಬುಕ್, ವಾಟ್ಸ್‌ಆಪ್‌ಗಳೆಲ್ಲವುದರ ಮೂಲಕ ಸಂದೇಶಗಳನ್ನು ಕಳುಹಿಸುವುದು ಬಹಳ ಸುಲಭ. ಒಂದು ಸಂದೇಶವನ್ನು ಒಬ್ಬರಿಗಷ್ಟೇ ಏಕೆ, ನಮ್ಮ ಅಡ್ರೆಸ್ ಬುಕ್‌ನಲ್ಲಿರುವ ಅಷ್ಟೂ ವಿಳಾಸಗಳಿಗೆ - ಮೊಬೈಲ್ ಸಂಖ್ಯೆಗಳಿಗೆ ಥಟ್ಟನೆ ಕಳುಹಿಸಿಬಿಡಬಹುದು.

ಈ ಸೌಕರ್ಯ ಬಹು ಉಪಯುಕ್ತ, ಸರಿ. ಆದರೆ ಹಲವು ಸಂದರ್ಭಗಳಲ್ಲಿ ಅನಪೇಕ್ಷಿತ ಹಾಗೂ ನಿರುಪಯುಕ್ತ (ಕೆಲವೊಮ್ಮೆ ಅಸಂಬದ್ಧ) ಸಂದೇಶಗಳನ್ನು ಹಂಚಲು ಈ ಮಾಧ್ಯಮಗಳು ಬಳಕೆಯಾಗುತ್ತಿರುವುದನ್ನು ನಾವು ನೋಡಬಹುದು. ಇದನ್ನು ತಪ್ಪಿಸಲು ಹಲವು ಮಾರ್ಗಗಳಿವೆ.

ಕಳೆದ ಮೊಬೈಲು ಹುಡುಕೋದು ಹೇಗೆ?

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನುಗಳು ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿಬಿಟ್ಟಿವೆಯಲ್ಲ, ಹಾಗಾಗಿ ಅವನ್ನು ನಾವು ಹೋದಲ್ಲೆಲ್ಲ ಕೊಂಡೊಯ್ಯುವ ಅಭ್ಯಾಸವೂ ಸಾಮಾನ್ಯವಾಗಿದೆ. ಕೆಲಸದ ಗಡಿಬಿಡಿಯಲ್ಲಿ ಫೋನನ್ನು ಎಲ್ಲೋ ಮರೆತು ಪರದಾಡುವುದೂ ಅಪರೂಪವೇನಲ್ಲ. ಹೀಗೆ ಕಾಣೆಯಾದ ಫೋನನ್ನು ಹುಡುಕುವುದು ಹೇಗೆ?

ಇದಕ್ಕೆ ಹಲವು ಮಾರ್ಗಗಳಿವೆ.

ಎಲ್ಲರ ಫೇವರಿಟ್ ಈ 'ಫೇವ್‌ಐಕನ್'!

ಟಿ. ಜಿ. ಶ್ರೀನಿಧಿ


ಅಂತರಜಾಲ ಸಂಪರ್ಕ ಬಳಸುವಾಗ ನಾವು ಒಂದಾದ ಮೇಲೆ ಒಂದರಂತೆ ಜಾಲತಾಣಗಳನ್ನು ತೆರೆಯುತ್ತಾ ಹೋಗುತ್ತೇವೆ. ಹಾಗೆ ತೆರೆದ ಜಾಲತಾಣಗಳು ಬೇರೆಬೇರೆ ಬ್ರೌಸರ್ ಕಿಟಕಿಗಳಲ್ಲೋ, ಒಂದೇ ಕಿಟಕಿಯ ವಿಭಿನ್ನ ಟ್ಯಾಬ್‌ಗಳಲ್ಲೋ ಕಾಣಿಸಿಕೊಳ್ಳುತ್ತವೆ ಎನ್ನುವುದೂ ನಮಗೆ ಗೊತ್ತು.

ಇಂತಹ ಪ್ರತಿಯೊಂದು ಕಿಟಕಿಯ ಮೇಲ್ಭಾಗದಲ್ಲೂ (ಬ್ರೌಸರಿನ ಟೈಟಲ್ ಬಾರ್‌ನಲ್ಲಿ) ನಾವು ತೆರೆದಿರುವ ತಾಣದ ಬಗ್ಗೆ ಕೆಲವು ಪದಗಳು ಮೂಡಿಬರುತ್ತವೆ. ಈ ಹೆಸರಿನ ಪಕ್ಕದಲ್ಲೇ ಪುಟ್ಟದೊಂದು ಚಿತ್ರವೂ ಇರುತ್ತದೆ.

ವೈ-ಫೈ ವಿಷಯ

ಟಿ. ಜಿ. ಶ್ರೀನಿಧಿ

ವೈರು - ಕೇಬಲ್ಲುಗಳನ್ನು ಜೋಡಿಸುವ ಗೊಡವೆಯಿಲ್ಲದೆ ಸರಾಗವಾಗಿ ಅಂತರಜಾಲ ಸಂಪರ್ಕ ನೀಡಿಬಿಡುವ ವೈ-ಫೈ ತಂತ್ರಜ್ಞಾನದ ಪರಿಚಯ ನಮಗೆ ಚೆನ್ನಾಗಿಯೇ ಇದೆ. ರೇಡಿಯೋ ಅಲೆಗಳ ಮೂಲಕ ತನ್ನ ಸಂಪರ್ಕದಲ್ಲಿರುವ ಸಾಧನಗಳಿಗೆ ಅಂತರಜಾಲ ಸಂಪರ್ಕ ಒದಗಿಸಿಕೊಡುವುದು ಈ ತಂತ್ರಜ್ಞಾನದ ಹೆಗ್ಗಳಿಕೆ.

ಅಂತರಜಾಲ ಸಂಪರ್ಕ ನಮ್ಮ ಮನೆಯವರೆಗೆ ಹಲವು ವಿಧಗಳಲ್ಲಿ ತಲುಪಬಹುದು. ಅದು ನಮ್ಮ ಸಾಧನಗಳಿಗೆ ಅರ್ಥವಾಗುವ ರೂಪಕ್ಕೆ ಬದಲಾಗುವುದು ಮೋಡೆಮ್ ಮೂಲಕ. ಈ ಸಂಕೇತಗಳನ್ನು ವೈ-ಫೈ ರೂಪಕ್ಕೆ ತರುವುದು ರೌಟರ್ ಎನ್ನುವ ಸಾಧನದ ಕೆಲಸ (ಬಹಳಷ್ಟು ಸನ್ನಿವೇಶಗಳಲ್ಲಿ ಮೋಡೆಮ್, ರೌಟರ್ ಎರಡೂ ಸಾಧನಗಳ ಕೆಲಸವನ್ನು ಒಂದೇ ಯಂತ್ರ ಮಾಡುತ್ತದೆ). ಈ ಸಾಧನದಿಂದ ಹೊರಹೊಮ್ಮುವ ಸಂಕೇತಗಳನ್ನು ಬಳಸಲು ಶಕ್ತವಾದ ಯಾವುದೇ ಸಾಧನ ಅಂತರಜಾಲ ಸಂಪರ್ಕವನ್ನು ಪಡೆದುಕೊಳ್ಳಬಹುದು. ಕಂಪ್ಯೂಟರ್ - ಟ್ಯಾಬ್ಲೆಟ್ - ಮೊಬೈಲ್ ಮಾತ್ರವೇ ಅಲ್ಲ, ಸ್ಮಾರ್ಟ್‌ ಟೀವಿ - ಸ್ಮಾರ್ಟ್ ವಾಚ್ - ಸ್ಟ್ರೀಮಿಂಗ್ ಡಿವೈಸ್‌ಗಳಂತಹ ಇನ್ನೂ ಅನೇಕ ಸಾಧನಗಳೂ ವೈ-ಫೈ ಬಳಸುತ್ತವೆ.

ಇದೇನಿದು ಹೆಚ್‌ಟಿಟಿಪಿ?

ಟಿ. ಜಿ. ಶ್ರೀನಿಧಿ

ಬ್ರೌಸರ್ ತಂತ್ರಾಂಶ ಬಳಸಿ ಜಾಲತಾಣಗಳನ್ನು ವೀಕ್ಷಿಸುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಹಾಗೆ ಬ್ರೌಸರಿನಲ್ಲಿ ತೆರೆದುಕೊಳ್ಳುವ ಬಹುತೇಕ ಜಾಲತಾಣಗಳ ವಿಳಾಸ 'http://' ಎನ್ನುವ ಅಕ್ಷರಗಳಿಂದ ಪ್ರಾರಂಭವಾಗುತ್ತದೆ. ಇಲ್ಲಿ 'ಹೆಚ್‌ಟಿಟಿಪಿ' ಎನ್ನುವುದು 'ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್' ಎಂಬ ಹೆಸರಿನ ಹ್ರಸ್ವರೂಪ.

ಬ್ಲ್ಯಾಕ್‌ಲಿಸ್ಟ್ ಮತ್ತು ವೈಟ್‌ಲಿಸ್ಟ್

ಟಿ. ಜಿ. ಶ್ರೀನಿಧಿ

ಕಾಮಗಾರಿಯೊಂದರ ಗುಣಮಟ್ಟದ ಬಗ್ಗೆ ಗಲಾಟೆಯಾದಾಗ ಸಂಬಂಧಪಟ್ಟ ಗುತ್ತಿಗೆದಾರರನ್ನೋ ಕಚ್ಚಾಸಾಮಗ್ರಿ ಪೂರೈಸಿದವರನ್ನೋ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎನ್ನುವ ಹೇಳಿಕೆ ಸಾಮಾನ್ಯವಾಗಿ ಕೇಳಸಿಗುತ್ತದೆ.

ಕಪ್ಪುಪಟ್ಟಿ ಎಂಬ ಈ ಹೆಸರಿನ ಮೂಲ ಇಂಗ್ಲಿಷಿನ 'ಬ್ಲ್ಯಾಕ್‌ಲಿಸ್ಟ್'. ಯಾವುದೇ ಉದ್ದೇಶಕ್ಕೆ ಏನನ್ನು ಬಳಸಬಾರದು ಎಂದು ಸೂಚಿಸುವುದು ಈ ಪಟ್ಟಿಯ ಕೆಲಸ. ಗುತ್ತಿಗೆದಾರರ ಉದಾಹರಣೆಯನ್ನೇ ತೆಗೆದುಕೊಂಡರೆ ಮುಂದಿನ ಕಾಮಗಾರಿಯ ಗುತ್ತಿಗೆಯನ್ನು ಕಪ್ಪುಪಟ್ಟಿಯಲ್ಲಿಲ್ಲದವರಿಗೆ ಮಾತ್ರವೇ ಕೊಡುವುದು ಸಾಧ್ಯ.

ಟಚ್ ಗೊತ್ತು, ಇದೇನಿದು 'ಮಲ್ಟಿಟಚ್'?

ಟಿ. ಜಿ. ಶ್ರೀನಿಧಿ

ಸ್ಪರ್ಶಸಂವೇದಿ ಪರದೆ, ಅರ್ಥಾತ್ ಟಚ್‌ಸ್ಕ್ರೀನ್‌‌ನ ಪರಿಚಯ ನಮ್ಮೆಲ್ಲರಿಗೂ ಇದೆ. ಸ್ಮಾರ್ಟ್‌ಫೋನುಗಳಲ್ಲಿ, ಟ್ಯಾಬ್ಲೆಟ್ಟಿನಲ್ಲಿ, ಎಟಿಎಂಗಳಲ್ಲಿ ನಾವು ಇವನ್ನು ಬಳಸುತ್ತಲೇ ಇರುತ್ತೇವೆ.

ಯಾವುದೇ ಟಚ್‌ಸ್ಕ್ರೀನನ್ನು ನಿರ್ದಿಷ್ಟ ಸ್ಥಳದಲ್ಲಿ ಮುಟ್ಟಿದರೆ ಅದು ಪೂರ್ವನಿರ್ಧಾರಿತ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದು (ಉದಾ: ಐಕನ್ ಸ್ಪರ್ಶಿಸಿದರೆ ಆಪ್ ತೆರೆದುಕೊಳ್ಳುವುದು) ನಮಗೆ ಗೊತ್ತು.

ಟಚ್ ಸ್ಕ್ರೀನ್ ಕೆಲಸಮಾಡುವುದು ಹೇಗೆ?

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನಿನಿಂದ ಕಾರಿನ ಮ್ಯೂಸಿಕ್ ಸಿಸ್ಟಂವರೆಗೆ, ಎಟಿಎಂನಿಂದ ಏರ್‌ಪೋರ್ಟಿನ ಚೆಕಿನ್ ಯಂತ್ರದವರೆಗೆ ಈಗ ಎಲ್ಲಿ ನೋಡಿದರೂ ಟಚ್ ಸ್ಕ್ರೀನ್‌ನದೇ ಕಾರುಬಾರು. ಕೀಬೋರ್ಡ್ ಕೀಲಿಗಳನ್ನು ಕುಟ್ಟುವ ಬದಲು ಪರದೆಯ ಮೇಲಿನ ಅಕ್ಷರಗಳನ್ನು ಮುಟ್ಟಿದರೆ ಸಾಕು, ನಮ್ಮ ಕೆಲಸ ಸಲೀಸಾಗಿ ಮುಗಿಯುತ್ತದೆ.

ಬಹುತೇಕ ಮೊಬೈಲ್ ಫೋನ್ ಹಾಗೂ ಟ್ಯಾಬ್ಲೆಟ್ಟುಗಳಲ್ಲಿ ಬಳಕೆಯಾಗುವ ಸ್ಪರ್ಶಸಂವೇದಿ ಪರದೆಗಳನ್ನು 'ಕೆಪಾಸಿಟಿವ್' ಟಚ್‌ಸ್ಕ್ರೀನುಗಳೆಂದು ಕರೆಯುತ್ತಾರೆ.

ನೆಟಿಕೆಟ್: ಇದು ಜಾಲಲೋಕದ ಶಿಷ್ಟಾಚಾರ

ಟಿ. ಜಿ. ಶ್ರೀನಿಧಿ

ಶಾಲೆ, ಕಚೇರಿ, ಸಮಾರಂಭ, ಸಾರ್ವಜನಿಕ ಸ್ಥಳ ಮುಂತಾದ ಬೇರೆಬೇರೆ ಸಂದರ್ಭ-ಸ್ಥಳಗಳಲ್ಲಿ ನಮ್ಮ ವರ್ತನೆ ಹೀಗೆಯೇ ಇರಬೇಕು ಎಂದು ಸಮಾಜ ಅಪೇಕ್ಷಿಸುತ್ತದೆ. ಈ ಅಪೇಕ್ಷೆಗಳನ್ನು ನಿರ್ದೇಶಿಸುವುದು ಶಿಷ್ಟಾಚಾರ, ಅಂದರೆ ಎಟಿಕೆಟ್‌ನ ಕೆಲಸ.

ಜಾಲಲೋಕದಲ್ಲೂ ನಾವು ಪಾಲಿಸಬೇಕಾದ ಇಂತಹುದೇ ಶಿಷ್ಟಾಚಾರ ಇದೆ. ಇಮೇಲ್ ಹಾಗೂ ಮೊಬೈಲ್ ಸಂದೇಶಗಳನ್ನು ಕಳಿಸುವಾಗ, ಸಮಾಜಜಾಲಗಳಲ್ಲಿ ಇತರರೊಡನೆ ಸಂವಹನ ನಡೆಸುವಾಗ ನಮ್ಮ ವರ್ತನೆ ಹೇಗಿರಬೇಕು ಎಂದು ತಿಳಿಸುವ ಈ ಶಿಷ್ಟಾಚಾರವನ್ನು 'ನೆಟಿಕೆಟ್' ಎಂದು ಕರೆಯುತ್ತಾರೆ. ನೆಟ್ ಹಾಗೂ ಎಟಿಕೆಟ್ ಎಂಬ ಪದಗಳ ಜೋಡಣೆಯಿಂದ ಸೃಷ್ಟಿಯಾಗಿರುವ ಹೆಸರು ಇದು.

ಏನಿದು 'ಫ್ಲೈಟ್ ಮೋಡ್'?

ಟಿ. ಜಿ. ಶ್ರೀನಿಧಿ

ಇಂದಿನ ಬಹುತೇಕ ಮೊಬೈಲ್ ಫೋನುಗಳಲ್ಲಿ 'ಫ್ಲೈಟ್ ಮೋಡ್' ಎನ್ನುವುದೊಂದು ಸೌಲಭ್ಯವಿರುತ್ತದೆ. ವಿಮಾನದಲ್ಲಿ ಪ್ರಯಾಣಿಸುವಾಗ ನಿಮ್ಮ ಮೊಬೈಲನ್ನು ಫ್ಲೈಟ್ ಮೋಡ್‌ಗೆ ಬದಲಾಯಿಸಿ ಎಂದು ಹೇಳುವುದನ್ನೂ ನೀವು ಕೇಳಿರಬಹುದು.

ಮೊಬೈಲಿನಿಂದ ಹೊರಡುವ ಅಥವಾ ಅದನ್ನು ತಲುಪುವ ರೇಡಿಯೋ ತರಂಗಾಂತರದ (radio-frequency) ಸಂಕೇತಗಳನ್ನು ನಿರ್ಬಂಧಿಸುವುದು ಫ್ಲೈಟ್ ಮೋಡ್‌ನ ಉದ್ದೇಶ.

ಅಪ್‌ಲೋಡ್ ಮತ್ತು ಡೌನ್‌ಲೋಡ್

ಟಿ. ಜಿ. ಶ್ರೀನಿಧಿ 

ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ನಾವು ಪ್ರತಿ ಕ್ಷಣವೂ ಒಂದಲ್ಲ ಒಂದು ರೀತಿಯಲ್ಲಿ ಮಾಹಿತಿಯನ್ನು ಬಳಸುತ್ತೇವೆ. ಬಹಳಷ್ಟು ಸಾರಿ ಇತರೆಡೆಗಳಿಂದ ಮಾಹಿತಿ ಪಡೆದುಕೊಂಡರೆ ಇನ್ನು ಕೆಲವೊಮ್ಮೆ ನಾವೇ ಮಾಹಿತಿಯನ್ನು ಇನ್ನೊಂದೆಡೆಗೆ ರವಾನಿಸುತ್ತೇವೆ. ಈ ಪೈಕಿ ಇತರೆಡೆಗಳಿಂದ ಮಾಹಿತಿ ಪಡೆದುಕೊಳ್ಳುವ ಪ್ರಕ್ರಿಯೆ 'ಡೌನ್‌ಲೋಡ್' ಎಂದು ಕರೆಸಿಕೊಂಡರೆ ನಾವು ಮಾಹಿತಿ ಪಡೆದುಕೊಳ್ಳುವ ಕೆಲಸವನ್ನು 'ಅಪ್‌ಲೋಡ್' ಎಂದು ಗುರುತಿಸಲಾಗುತ್ತದೆ.

ಡೌನ್‌ಲೋಡ್ ಪ್ರಕ್ರಿಯೆಯಲ್ಲಿ ಬೇರೊಂದು ಕಡೆಯಲ್ಲಿರುವ ಮಾಹಿತಿಯ ಒಂದು ಪ್ರತಿ ನಮ್ಮ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ಟಿಗೆ ಬರುತ್ತದೆ. ಇದೇರೀತಿ ನಮ್ಮ ಮಾಹಿತಿಯ ಒಂದು ಪ್ರತಿಯನ್ನು ಬೇರೊಂದು ಕಂಪ್ಯೂಟರಿಗೆ ವರ್ಗಾಯಿಸುವುದು ಅಪ್‌ಲೋಡ್ ಪ್ರಕ್ರಿಯೆಯ ಕೆಲಸ.

ಸಾಫ್ಟ್‌ವೇರ್‌ನಲ್ಲಿ ಎಷ್ಟು ವಿಧ?

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನಲ್ಲಿ - ಸ್ಮಾರ್ಟ್‌ಫೋನಿನಲ್ಲಿ ವಿವಿಧ ಕೆಲಸಗಳಿಗಾಗಿ ನಾವು ಹಲವು ಬಗೆಯ ತಂತ್ರಾಂಶಗಳನ್ನು ಬಳಸುತ್ತೇವೆ. ಇಂತಹ ತಂತ್ರಾಂಶಗಳನ್ನು ಹೇಗೆ ಪಡೆದುಕೊಳ್ಳಬಹುದು ಎನ್ನುವ ಆಧಾರದ ಮೇಲೆ ಅನೇಕ ವಿಧಗಳಾಗಿ ವಿಂಗಡಿಸಬಹುದು.

ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಂಡ ಕೆಲವು ದಿನಗಳವರೆಗೆ ಉಚಿತವಾಗಿ ಬಳಸಬಹುದು, ಆನಂತರವೂ ಬಳಸುವುದಾದರೆ ಹಣ ಪಾವತಿಸಬೇಕು ಎನ್ನುವ ನಿರ್ಬಂಧವನ್ನು ಕೆಲವೆಡೆ ಕಾಣಬಹುದು. ಇಂತಹ ತಂತ್ರಾಂಶಗಳನ್ನು ಟ್ರಯಲ್ ಸಾಫ್ಟ್‌ವೇರ್ ಅಥವಾ ಶೇರ್‌ವೇರ್‌ಗಳೆಂದು ಕರೆಯುತ್ತಾರೆ. ಇಂತಹ ಕೆಲ ತಂತ್ರಾಂಶಗಳಲ್ಲಿ ಸೀಮಿತ ಸೌಲಭ್ಯಗಳಷ್ಟೇ ಇರುವುದೂ ಉಂಟು.

ಬಸ್ ಡ್ರೈವರ್ ಅಲ್ಲ, ಇದು ಡಿವೈಸ್ ಡ್ರೈವರ್

ಟಿ. ಜಿ. ಶ್ರೀನಿಧಿ

ಕೆಲ ವರ್ಷಗಳ ಹಿಂದೆ ಕಂಪ್ಯೂಟರಿಗೆ ಸಂಬಂಧಪಟ್ಟ ಯಾವುದೇ ಸಾಧನ ಕೊಂಡುಕೊಂಡರೂ ಅದರ ಜೊತೆಗೊಂದು ಸಿ.ಡಿ. ಇರುತ್ತಿತ್ತು. ಮೊದಲು ಆ ಸಿ.ಡಿ.ಯನ್ನು ಹಾಕಿ ಅದರಲ್ಲಿನ ತಂತ್ರಾಂಶಗಳನ್ನೆಲ್ಲ ನಮ್ಮ ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಮಾಡಿದ ನಂತರವಷ್ಟೇ ಹೊಸ ಸಾಧನ ಕೆಲಸಮಾಡಲು ಶುರುಮಾಡುತ್ತಿತ್ತು.

ಆ ಸಿ.ಡಿ.ಯಲ್ಲಿರುತ್ತಿತ್ತಲ್ಲ, ಆ ತಂತ್ರಾಂಶದ ಹೆಸರೇ ಡಿವೈಸ್ ಡ್ರೈವರ್.

ಹೀಗೊಂದು ಪುಟ್ಟ ಪುಸ್ತಕ: 'ಕನ್ನಡ ತಂತ್ರಜ್ಞಾನ: ನೆನ್ನೆ - ಇಂದು - ನಾಳೆ'

ಇಜ್ಞಾನ ವಾರ್ತೆ


'ಕಣಜ' ಅಂತರಜಾಲ ಕನ್ನಡ ಜ್ಞಾನಕೋಶ ಹಾಗೂ ಇಜ್ಞಾನ ಡಾಟ್ ಕಾಮ್ ವತಿಯಿಂದ ಮಾರ್ಚ್ ೫ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ 'ಇ-ಕನ್ನಡ' ಸಂವಾದ ಹಾಗೂ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು (ವಿವರ).

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಸಾಧ್ಯತೆಗಳನ್ನು ಪರಿಚಯಿಸುವ 'ಕನ್ನಡ ತಂತ್ರಜ್ಞಾನ: ನೆನ್ನೆ - ಇಂದು - ನಾಳೆ' ಎಂಬ ಕಿರುಪುಸ್ತಕವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ತಂತ್ರಜ್ಞಾನ ಬರಹಗಾರ ಟಿ. ಜಿ. ಶ್ರೀನಿಧಿ ರಚಿಸಿರುವ, ಕಣಜ ಅಂತರಜಾಲ ಜ್ಞಾನಕೋಶ ಪ್ರಕಟಿಸಿರುವ ಈ ಕಿರುಪುಸ್ತಿಕೆಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಉಚಿತವಾಗಿ ವಿತರಿಸಲಾಯಿತು.

ಕಂಪ್ಯೂಟರ್ ಒಳಗಿನ 'ಕ್ಯಾಶ್'

ಟಿ. ಜಿ. ಶ್ರೀನಿಧಿ

ಪದೇಪದೇ ಬೇಕಾಗುವ ವಸ್ತುಗಳನ್ನು ಸುಲಭಕ್ಕೆ ಕೈಗೆ ಸಿಗುವಂತೆ ಇಟ್ಟುಕೊಳ್ಳುವುದು ನಮ್ಮೆಲ್ಲರ ಸಾಮಾನ್ಯ ಅಭ್ಯಾಸ ತಾನೇ? ಕಂಪ್ಯೂಟರು - ಮೊಬೈಲ್ ಫೋನುಗಳಿಗೂ ಈ ಅಭ್ಯಾಸ ಇದೆ. ತಮ್ಮ ಕಾರ್ಯನಿರ್ವಹಣೆಯಲ್ಲಿ ಆಗಾಗ್ಗೆ ಬಳಸುವ ನಿರ್ದೇಶನಗಳನ್ನು, ದತ್ತಾಂಶವನ್ನು ಸುಲಭಕ್ಕೆ ಸಿಗುವಂತೆ ಉಳಿಸಿಟ್ಟುಕೊಳ್ಳಲು ಅವು 'ಕ್ಯಾಶ್' ಎನ್ನುವ ಪರಿಕಲ್ಪನೆಯನ್ನು ಬಳಸುತ್ತವೆ. ಇಲ್ಲಿ ಕ್ಯಾಶ್ ಎಂದರೆ ಹಣ (cash) ಅಲ್ಲ. Cache ಎನ್ನುವುದು ಈ ಕ್ಯಾಶ್‌ನ ಸ್ಪೆಲ್ಲಿಂಗು.

ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಪದೇಪದೇ ಬಳಸುವ ನಿರ್ದೇಶನಗಳನ್ನು, ದತ್ತಾಂಶವನ್ನು ಮೆಮೊರಿಯಲ್ಲಿ ಪ್ರತ್ಯೇಕವಾಗಿ ಉಳಿಸಿಟ್ಟುಕೊಳ್ಳುವ ಮೂಲಕ ಅವನ್ನು ಥಟ್ಟನೆ ಪಡೆದುಕೊಳ್ಳುವುದನ್ನು ಸಾಧ್ಯವಾಗಿಸುವುದು ಕ್ಯಾಶ್‌‌ನ ಉದ್ದೇಶ. ಈ ಮೂಲಕ ಒಂದೇ ವಿಷಯವನ್ನು ಪದೇಪದೇ ಮೂಲದಿಂದ ಹೆಕ್ಕಿತರುವ ಅಗತ್ಯ ಇರುವುದಿಲ್ಲ; ಅಲ್ಲದೆ ಇದರಿಂದ ಸಂಪನ್ಮೂಲದ ಉಳಿತಾಯವೂ ಸಾಧ್ಯವಾಗುತ್ತದೆ.

ವಿಪಿಎನ್: ಒಂದು ಪರಿಚಯ

ಟಿ. ಜಿ. ಶ್ರೀನಿಧಿ


ಅಂತರಜಾಲದ ಲೋಕ ದೊಡ್ಡದೊಂದು ಜಾತ್ರೆಯಂತೆ. ಜಾತ್ರೆ ನೋಡಲು ಬಂದ ಸಾಮಾನ್ಯ ಜನರ ಜೊತೆಗೆ ಜೇಬುಗಳ್ಳರೂ ಬರುವಂತೆ ಕಳ್ಳರು-ಸುಳ್ಳರು ಇಲ್ಲೂ ಇರುತ್ತಾರೆ. ಜಾತ್ರೆಯಲ್ಲಿ ನಮ್ಮ ಜೇಬನ್ನು-ಬ್ಯಾಗನ್ನು ಕಾಪಾಡಿಕೊಳ್ಳುವಂತೆ ಇಲ್ಲಿ ನಮ್ಮ ಮಾಹಿತಿಯನ್ನು ಜೋಪಾನಮಾಡುವುದು ಅನಿವಾರ್ಯ. ನಮ್ಮ ನಿಮ್ಮ ವೈಯಕ್ತಿಕ ಮಾಹಿತಿಯಷ್ಟೇ ಅಲ್ಲ, ಸಂಸ್ಥೆಗಳು ತಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು.

ಯಾವುದೋ ಸಂಸ್ಥೆ ಒಂದೇ ಕಟ್ಟಡದಲ್ಲಿ ಕೆಲಸಮಾಡುತ್ತಿದ್ದರೆ ಅದರದೇ ಒಂದು ಜಾಲವನ್ನು (ನೆಟ್‌ವರ್ಕ್) ರೂಪಿಸಿಕೊಳ್ಳಬಹುದು, ಸರಿ. ಆದರೆ ಆ ಸಂಸ್ಥೆಯ ಶಾಖೆಗಳು ದೇಶದ ಬೇರೆಬೇರೆ ರಾಜ್ಯಗಳಲ್ಲಿ - ಪ್ರಪಂಚದ ವಿವಿಧ ದೇಶಗಳಲ್ಲಿ ಇದ್ದರೆ?

ಸಿವಿವಿ ಎಂದರೇನು ಗೊತ್ತೇ?

ಟಿ. ಜಿ. ಶ್ರೀನಿಧಿ


ಆನ್‌ಲೈನ್ ಜಗತ್ತಿನಲ್ಲಿ ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡುಗಳನ್ನು ಬಳಸುವಾಗ ಒಂದಷ್ಟು ಮಾಹಿತಿಯನ್ನು ತಪ್ಪದೇ ದಾಖಲಿಸಬೇಕು: ಕಾರ್ಡ್ ಸಂಖ್ಯೆ, ಕೊನೆಗೊಳ್ಳುವ ದಿನಾಂಕ, ಕೆಲವೊಮ್ಮೆ ಕಾರ್ಡುದಾರರ ಹೆಸರು.

ಇಷ್ಟು ಮಾಹಿತಿಯ ಜೊತೆಗೆ ನಾವು ದಾಖಲಿಸಬೇಕಾದ ಇನ್ನೊಂದು ಸಂಖ್ಯೆಯ ಹೆಸರೇ ಸಿವಿವಿ, ಅರ್ಥಾತ್ 'ಕಾರ್ಡ್ ವೆರಿಫಿಕೇಶನ್ ವ್ಯಾಲ್ಯೂ'.

ಆರ್‌ಜಿಬಿ ಮತ್ತು ಸಿಎಂವೈಕೆ

ಟಿ. ಜಿ. ಶ್ರೀನಿಧಿ


ಪ್ರಾಥಮಿಕ ಬಣ್ಣಗಳನ್ನು (ಪ್ರೈಮರಿ ಕಲರ್ಸ್) ಸೇರಿಸಿ ಹೊಸ ಬಣ್ಣಗಳನ್ನು ರೂಪಿಸಿಕೊಳ್ಳುವುದು ಹೊಸ ಸಂಗತಿಯೇನಲ್ಲ. ಯಾವ ಬಣ್ಣಕ್ಕೆ ಯಾವ ಬಣ್ಣ ಸೇರಿಸಿದರೆ ಯಾವ ಬಣ್ಣ ಸೃಷ್ಟಿಯಾಗುತ್ತದೆ ಎನ್ನುವುದನ್ನು ಮಕ್ಕಳು ಶಾಲೆಯ ದಿನಗಳಲ್ಲೇ ಆಸಕ್ತಿಯಿಂದ ಕಲಿಯುತ್ತಾರೆ.

ಭೌತಿಕ ಜಗತ್ತಿನಲ್ಲಿರುವಂತೆ ಡಿಜಿಟಲ್ ಜಗತ್ತಿನಲ್ಲೂ ಅಸಂಖ್ಯ ಬಣ್ಣಗಳು ನಮ್ಮ ಮುಂದೆ ಕಾಣಸಿಗುತ್ತವಲ್ಲ, ಅಲ್ಲಿಯೂ ಇಂತಹುದೇ ತಂತ್ರ ಬಳಕೆಯಾಗುತ್ತದೆ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಇತ್ಯಾದಿಗಳಲ್ಲಿ ನಮಗೆ ಕಾಣಿಸುವ ಎಲ್ಲ ಬಣ್ಣಗಳೂ ಕೆಂಪು, ಹಸಿರು ಹಾಗೂ ನೀಲಿ ಬಣ್ಣದ ಬೆಳಕಿನ ಸಂಯೋಜನೆಯಿಂದ ರೂಪುಗೊಂಡಿರುತ್ತವೆ.

ಎಚ್ಚರ, ಇದು ರಾನ್ಸಮ್‌ವೇರ್!

ಟಿ. ಜಿ. ಶ್ರೀನಿಧಿ

ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಹಣಕ್ಕಾಗಿ ಪೀಡಿಸುವ ದುರುಳರ ಬಗ್ಗೆ ನಾವು ಕೇಳಿದ್ದೇವಲ್ಲ, ಅಂತಹ ದುಷ್ಕರ್ಮಿಗಳು ಸೈಬರ್ ಲೋಕದಲ್ಲೂ ಇದ್ದಾರೆ. ಅವರು ಒತ್ತೆಯಾಳುಗಳಾಗಿ ಇರಿಸಿಕೊಳ್ಳುವುದು ಜನರನ್ನಲ್ಲ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳನ್ನು!

ಈ ಕೆಟ್ಟ ಉದ್ದೇಶಕ್ಕಾಗಿ ಬಳಕೆಯಾಗುವ ತಂತ್ರಾಂಶಗಳನ್ನು 'ರಾನ್ಸಮ್‌ವೇರ್' (Ransomware) ಎಂದು ಗುರುತಿಸಲಾಗುತ್ತದೆ ('ರಾನ್ಸಮ್‌' ಎಂದರೆ ಸುಲಿಗೆಯ ಹಣ). ಸೈಬರ್ ಲೋಕವನ್ನು ಕಾಡುವ ಹಲವು ಬಗೆಯ ಕುತಂತ್ರಾಂಶಗಳಲ್ಲಿ ಇದೂ ಒಂದು.

ಮೂರ್ ನಿಯಮ ಕುರಿತು ನಾಲ್ಕು ಮಾತು...

ಟಿ. ಜಿ. ಶ್ರೀನಿಧಿ


ಕಂಪ್ಯೂಟರ್ ಅಷ್ಟೇ ಅಲ್ಲ, ಯಾವ ವಿದ್ಯುನ್ಮಾನ ಉಪಕರಣವನ್ನೇ ತೆಗೆದುಕೊಂಡರೂ ಅದರ ಮೆದುಳು-ಹೃದಯದ ಕೆಲಸವನ್ನೆಲ್ಲ ಮಾಡಲು ಕನಿಷ್ಠ ಒಂದಾದರೂ ಇಂಟಿಗ್ರೇಟೆಡ್ ಸರ್ಕ್ಯೂಟ್ (ಐಸಿ) ಇರುತ್ತದೆ; ಕಂಪ್ಯೂಟರಿನಲ್ಲಿ ಪ್ರಾಸೆಸರ್ ಇರುತ್ತದಲ್ಲ, ಹಾಗೆ. ಈ ಐಸಿಗಳಲ್ಲಿ ಬೇಕಾದಷ್ಟು ಟ್ರಾನ್ಸಿಸ್ಟರುಗಳಿರುತ್ತವೆ. ಸಾವಿರಗಳಷ್ಟೆ ಏಕೆ, ಲಕ್ಷಗಟ್ಟಲೆ ಟ್ರಾನ್ಸಿಸ್ಟರುಗಳು ಇಂತಹ ಐಸಿಗಳೊಳಗೆ ಅಡಕವಾಗಿರುತ್ತವೆ.

ಕಂಪ್ಯೂಟರ್ ಬಳಕೆ: ಒಂದಷ್ಟು ಶಿಸ್ತಿರಲಿ!

ಟಿ. ಜಿ. ಶ್ರೀನಿಧಿ

ನಮ್ಮಲ್ಲಿ ಹಲವರು ಒಂದಲ್ಲ ಒಂದು ಉದ್ದೇಶಕ್ಕಾಗಿ ಕಂಪ್ಯೂಟರುಗಳನ್ನು ಬಳಸುತ್ತೇವೆ. ಹೀಗೆ ಬಳಸುವಾಗ ಅಪಾರ ಪ್ರಮಾಣದ ಮಾಹಿತಿ ನಮ್ಮ ಸಂಪರ್ಕಕ್ಕೆ ಬರುತ್ತದೆ, ಕಂಪ್ಯೂಟರಿನಲ್ಲಿ ಸಂಗ್ರಹವೂ ಆಗುತ್ತದೆ. ಈ ಮಾಹಿತಿಯನ್ನೆಲ್ಲ ಸೂಕ್ತವಾಗಿ ವಿಂಗಡಿಸಿಕೊಳ್ಳುವುದು, ಸರಿಯಾಗಿ ಶೇಖರಿಸಿಟ್ಟುಕೊಳ್ಳುವುದು ನಿಜಕ್ಕೂ ಉಪಯುಕ್ತ.

ಈಗಾಗಲೇ ಇರುವ ಮಾಹಿತಿಯಲ್ಲಿ ಅನಗತ್ಯವಾದುದನ್ನು ನಿವಾರಿಸುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ.

ಮೊಬೈಲ್ ಒಳಗಿನ ಮಾಯಾಲೋಕ

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನುಗಳ ಜನಪ್ರಿಯತೆ ಎಷ್ಟರಮಟ್ಟಿನದು ಎಂದರೆ ಬಹುಶಃ ಅವುಗಳ ಪರಿಚಯವಿಲ್ಲದವರು, ಅವನ್ನು ಬಳಸದವರು ಸಿಗುವುದೇ ಇಲ್ಲವೇನೋ. ಬಳಸುವುದು ಹಾಗಿರಲಿ, ಸದಾಕಾಲವೂ ಮೊಬೈಲಿಗೆ ಅಂಟಿಕೊಂಡೇ ಇರುವವರರೂ ಅನೇಕರಿದ್ದಾರೆ. ಸ್ಮಾರ್ಟ್‌ಫೋನ್ ಬಳಸಿ ಏನೆಲ್ಲ ಮಾಡಬಹುದು ಎನ್ನುವುದೂ ನಮಗೆಲ್ಲ ಚೆನ್ನಾಗಿ ಗೊತ್ತು.

ಸ್ಮಾರ್ಟ್‌ಫೋನ್ ಸೌಲಭ್ಯಗಳ ಬಗ್ಗೆ, ಅವುಗಳನ್ನು ಬಳಸುವ ಬಗ್ಗೆ ನಮಗೆ ತಿಳಿದಿದ್ದರೂ ಅದನ್ನೆಲ್ಲ ನಿಜಕ್ಕೂ ಸಾಧ್ಯವಾಗಿಸುವ ಭೌತಿಕ ಭಾಗಗಳ ಪರಿಚಯ ಇರುವುದಿಲ್ಲ.

ಮ್ಯಾಕ್ಸ್ ಸರಣಿಗೆ ಹೊಸ ಸೇರ್ಪಡೆ: ಏಸಸ್ ಜೆನ್‍ಫೋನ್ ೩ಎಸ್ ಮ್ಯಾಕ್ಸ್

ಟಿ. ಜಿ. ಶ್ರೀನಿಧಿ


ಹತ್ತಾರು ಮಾದರಿಯ ಫೋನುಗಳೊಡನೆ ಗ್ರಾಹಕರ ಗಮನಸೆಳೆದಿರುವ ಏಸಸ್ ಜೆನ್‍ಫೋನ್ ಸ್ಮಾರ್ಟ್‍‍ಫೋನುಗಳ ಪೈಕಿ ಮ್ಯಾಕ್ಸ್ ಸರಣಿ ಕಳೆದ ವರ್ಷ ಭಾರೀ ಜನಪ್ರಿಯತೆ ಗಳಿಸಿಕೊಂಡಿತ್ತು. ಹತ್ತು ಸಾವಿರ ರೂಪಾಯಿಯೊಳಗಿನ ಬೆಲೆಯಲ್ಲಿ (ರೂ. ೮೯೯೯ ಹಾಗೂ ರೂ. ೯೯೯೯) ಬಂದ ಮೊದಲೆರಡು ಮಾದರಿಗಳ ನಂತರ ಜೆನ್‍ಫೋನ್ ೩ ಸರಣಿಯಲ್ಲೂ ಮ್ಯಾಕ್ಸ್ ಪರಿಚಯವಾದದ್ದು ನಮಗೆ ಈಗಾಗಲೇ ಗೊತ್ತಿದೆ [ಓದಿ: ಜೆನ್‍ಫೋನ್ ಮ್ಯಾಕ್ಸ್‌ನ ಮೂರನೇ ಆವೃತ್ತಿ].

ಇದೀಗ ಈ ಸರಣಿಗೆ ಹೊಸದಾಗಿ ಸೇರ್ಪಡೆಯಾಗಿರುವುದೇ ಜೆನ್‍ಫೋನ್ ೩ಎಸ್ ಮ್ಯಾಕ್ಸ್.

ಡಿಪಿಐ ಮತ್ತು ಪಿಪಿಐ

ಟಿ. ಜಿ. ಶ್ರೀನಿಧಿ

ಡಿಜಿಟಲ್ ಚಿತ್ರಗಳ ಗುಣಮಟ್ಟದ ಬಗ್ಗೆ ಮಾತನಾಡುವಾಗ 'ಡಿಪಿಐ' ಪ್ರಸ್ತಾಪ ಬರುತ್ತದಲ್ಲ, ಅದು 'ಡಾಟ್ಸ್ ಪರ್ ಇಂಚ್' ಎನ್ನುವುದರ ಹ್ರಸ್ವರೂಪ.

ಇಂಕ್‌ಜೆಟ್ ಪ್ರಿಂಟರಿನಲ್ಲಿ ಮುದ್ರಿತವಾದ ಚಿತ್ರವನ್ನು ನೋಡಿದರೆ ಅದು ಬೇರೆಬೇರೆ ಬಣ್ಣದ ಅಸಂಖ್ಯ ಚುಕ್ಕೆಗಳ ಜೋಡಣೆಯಿಂದ ರೂಪುಗೊಂಡಿರುವುದನ್ನು ಗಮನಿಸಬಹುದು. ಒಂದು ಇಂಚು ಜಾಗದಲ್ಲಿ ಅಂತಹ ಎಷ್ಟು ಚುಕ್ಕೆಗಳನ್ನು ಮುದ್ರಿಸಲಾಗಿದೆ ಎಂಬುದನ್ನು ಸೂಚಿಸುವ ಮಾನಕವೇ ಈ ಡಿಪಿಐ. ಬೇರೆಬೇರೆ ಬಗೆಯ ಪ್ರಿಂಟರುಗಳಲ್ಲಿ ಬೇರೆಬೇರೆ ಡಿಪಿಐ ಸಾಮರ್ಥ್ಯ ಇರುತ್ತದೆ. ಡಿಪಿಐ ಜಾಸ್ತಿಯಿದ್ದಷ್ಟೂ ಮುದ್ರಣ ಉತ್ತಮವಾಗಿರುತ್ತದೆ ಎನ್ನುವುದು ಒಂದು ಹಂತದವರೆಗೆ ಮಾತ್ರ ಸರಿ. ಏಕೆಂದರೆ ಡಿಪಿಐ ಲೆಕ್ಕದ ಜೊತೆಗೆ ಮೂಲ ಚಿತ್ರದ ಸ್ಪಷ್ಟತೆ, ಮುದ್ರಿಸುತ್ತಿರುವ ಗಾತ್ರ ಮುಂತಾದ ಹಲವು ಅಂಶಗಳು ಚಿತ್ರದ ಒಟ್ಟು ಗುಣಮಟ್ಟವನ್ನು ತೀರ್ಮಾನಿಸುತ್ತವೆ.

ನಿಮಗೆ '೪೦೪ ಎರರ್' ಗೊತ್ತೇ?

ಟಿ. ಜಿ. ಶ್ರೀನಿಧಿ


ಕಂಪ್ಯೂಟರನ್ನು, ಮೊಬೈಲ್ ಫೋನನ್ನು ಬಳಸುವಾಗ ನಾವು ಆಗಿಂದಾಗ್ಗೆ ಹಲವು ದೋಷಗಳನ್ನು (ಎರರ್) ಎದುರಿಸಬೇಕಾಗಿ ಬರುವುದುಂಟು. ತಂತ್ರಾಂಶ - ಯಂತ್ರಾಂಶಗಳಲ್ಲಿನ ಯಾವುದೇ ವೈಫಲ್ಯ ಅಥವಾ ಅವನ್ನು ಬಳಸುವಲ್ಲಿ ನಮ್ಮದೇ ತಪ್ಪು ಇಂತಹ ದೋಷಗಳಿಗೆ ಕಾರಣವಾಗಬಹುದು.

ಕೆಲ ಬಾರಿ ದೋಷಗಳ ಪರಿಣಾಮವಷ್ಟೇ (ಕಂಪ್ಯೂಟರ್ ಕೆಲಸಮಾಡದಿರುವುದು, ಆಪ್ ತೆರೆದುಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು, ಹೀಗೆ) ನಮ್ಮ ಗಮನಕ್ಕೆ ಬರುತ್ತದೆ, ನಿಜ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಅವು ಸಂದೇಶದ ರೂಪದಲ್ಲಿ ನಮ್ಮೆದುರು ಕಾಣಿಸಿಕೊಳ್ಳುತ್ತವೆ. ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ಕಾಣಸಿಗುವ '೪೦೪', ಇಂತಹ ದೋಷಗಳಲ್ಲೊಂದು.

ಬೀಟಾ ವರ್ಶನ್ ಎಂದರೇನು?

ಟಿ. ಜಿ. ಶ್ರೀನಿಧಿ

ತಂತ್ರಾಂಶಗಳ ಬಗ್ಗೆ ಮಾತನಾಡುವಾಗ ಹಲವಾರು ಬಾರಿ 'ಬೀಟಾ ವರ್ಶನ್' ಎಂಬ ಹೆಸರಿನ ಪ್ರಸ್ತಾಪ ಬರುವುದನ್ನು ನೀವು ಗಮನಿಸಿರಬಹುದು. ಮೊಬೈಲ್ ಆಪ್‌ಗಳ 'ಬೀಟಾ ರಿಲೀಸ್' ಅನ್ನು ನೀವು ಬಳಸಿರಲೂಬಹುದು.

ಯಾವುದೇ ತಂತ್ರಾಂಶವನ್ನು ಅಭಿವೃದ್ಧಿಪಡಿಸುವಾಗ ಅದರ ಪ್ರಗತಿಯನ್ನು ನಿರ್ದಿಷ್ಟ ಹಂತಗಳಲ್ಲಿ ಸೂಚಿಸುವುದು ವಾಡಿಕೆ. ತಂತ್ರಾಂಶ ಅಭಿವೃದ್ಧಿ ಮುಗಿದು ಅದು ಬಿಡುಗಡೆಗೆ ಸಿದ್ಧವಾಗುತ್ತದಲ್ಲ, ಅದಕ್ಕೆ ಹಿಂದಿನ ಹಂತವೇ 'ಬೀಟಾ'.

ತಂತ್ರಾಂಶವೊಂದು ಬೀಟಾ ಹಂತದಲ್ಲಿದೆ ಎಂದರೆ ಅದರ ಅಭಿವೃದ್ಧಿ ಬಹುಪಾಲು ಪೂರ್ಣಗೊಂಡಿದೆ ಹಾಗೂ ಪ್ರಾಥಮಿಕ ಹಂತದ ಪರೀಕ್ಷೆಗಳಲ್ಲಿ (ಟೆಸ್ಟಿಂಗ್) ಅದು ಯಶಸ್ವಿಯಾಗಿದೆ ಎಂದರ್ಥ.

ಮೊಬೈಲ್ ಸಿಗ್ನಲ್ ಸಿಗ್ತಿಲ್ವಾ?

ಟಿ. ಜಿ. ಶ್ರೀನಿಧಿ

"ಮೊಬೈಲಿನಲ್ಲಿ ಸಿಗ್ನಲ್ ಇಲ್ಲ" - ಇದು ಈಚಿನ ದಿನಗಳಲ್ಲಿ ನಮಗೆ ವ್ಯಾಪಕವಾಗಿ ಕೇಳಿಬರುತ್ತಿರುವ ದೂರು. ಮೊಬೈಲ್ ಪರದೆಯ ಬಲಭಾಗದ ಮೇಲ್ತುದಿಯಲ್ಲಿ ಕಾಣಿಸುವ ಸಣ್ಣ ಗೆರೆಗಳು ಮೊಬೈಲ್ ಸಂಕೇತದ ಶಕ್ತಿ ಎಷ್ಟಿದೆಯೆಂದು ತಿಳಿಸುತ್ತವೆ ಎನ್ನುವುದು ನಮಗೆ ಗೊತ್ತು. ಅಲ್ಲಿ ಹೆಚ್ಚು ಗೆರೆಗಳಿದ್ದರೆ ನಮ್ಮ ಮೊಬೈಲಿಗೆ ಸಿಗುತ್ತಿರುವ ಸಂಕೇತದ ಶಕ್ತಿ (ಸಿಗ್ನಲ್ ಸ್ಟ್ರೆಂಥ್) ತೃಪ್ತಿಕರವಾಗಿದೆ ಎಂದು ಅರ್ಥ. ಹಾಗಿದ್ದಾಗ ಮೊಬೈಲ್ ಕರೆ ಮಾಡುವುದು, ಇಂಟರ್‌ನೆಟ್ ಬಳಸುವುದೆಲ್ಲ ಸರಾಗ. ಕಾಣಿಸುವ ಗೆರೆಗಳ ಸಂಖ್ಯೆ ಕಡಿಮೆಯಾದಷ್ಟೂ ಸಂಕೇತದ ಶಕ್ತಿ ಕಡಿಮೆಯಾಗಿದೆ ಎಂದು ತಿಳಿದುಕೊಳ್ಳಬಹುದು.

ಮೊಬೈಲ್ ಸಂಕೇತದ ಶಕ್ತಿಯನ್ನು ಡಿಬಿಎಂ (dBm) ಎಂಬ ಏಕಮಾನದಲ್ಲಿ ಅಳೆಯಲಾಗುತ್ತದೆ. ಡಿಬಿಎಂ ಎನ್ನುವುದು ಡೆಸಿಬಲ್-ಮಿಲಿವ್ಯಾಟ್ಸ್ ಎಂಬ ಹೆಸರಿನ ಹ್ರಸ್ವರೂಪ. ಮೊಬೈಲಿನ ಸೆಟಿಂಗ್ಸ್‌ಗೆ ಹೋದರೆ ಸದ್ಯ ನಮಗೆ ದೊರಕುತ್ತಿರುವ ಸಿಗ್ನಲ್ ಸ್ಟ್ರೆಂಥ್ ಎಷ್ಟು ಎಂದು ತಿಳಿದುಕೊಳ್ಳಬಹುದು (ಆಂಡ್ರಾಯ್ಡ್‌ನಲ್ಲಿ ಅಬೌಟ್ > ಸ್ಟೇಟಸ್ > ಸಿಮ್ ಸ್ಟೇಟಸ್).

ಮೊಬೈಲ್ ಫೋನ್‍ಗೂ 'ಸೆಲ್'ಗೂ ಏನು ಸಂಬಂಧ?

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನನ್ನು ಹಲವಾರು ಮಂದಿ ಸೆಲ್ ಫೋನ್ ಎಂದು ಕರೆಯುತ್ತಾರೆ. ಇನ್ನು ಕೆಲವರು ಈ ಹೆಸರನ್ನು ಇನ್ನೂ ಹ್ರಸ್ವಗೊಳಿಸಿ 'ಸೆಲ್' ಎಂದಷ್ಟೇ ಕರೆಯುವುದೂ ಉಂಟು.

ಈ ಅಭ್ಯಾಸಕ್ಕೆ ಕಾರಣ ಮೊಬೈಲ್ ನೆಟ್‌ವರ್ಕುಗಳ ವಿನ್ಯಾಸ. ಊರಿನ ತುಂಬ ಹರಡಿರುವ ಮೊಬೈಲ್ ಟವರ್‌ಗಳು ತಮ್ಮ ಸುತ್ತಲಿನ ಒಂದು ಸೀಮಿತ ಪ್ರದೇಶಕ್ಕೆ ಮೊಬೈಲ್ ಸೇವೆ ಒದಗಿಸುತ್ತವೆ. ಈ ಪ್ರದೇಶ ಬಹುತೇಕ ಆರು ಮೂಲೆಯ (ಹೆಕ್ಸಾಗನ್) ಆಕೃತಿಯಲ್ಲಿರುತ್ತದೆ; ಅಂದರೆ, ಮೊಬೈಲ್ ಜಾಲದ ಚಿತ್ರವನ್ನೇನಾದರೂ ಬರೆದರೆ ಅದು ಜೇನುಗೂಡಿನ ಒಂದು ಹಲ್ಲೆಯಂತೆ ಕಾಣುತ್ತದೆ!

ಬಾರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?

ಟಿ. ಜಿ. ಶ್ರೀನಿಧಿ


ಸೂಪರ್ ಮಾರ್ಕೆಟ್ ಎಂದತಕ್ಷಣ ನಮಗೆ ನೆನಪಾಗುವ ಸಂಗತಿಗಳಲ್ಲಿ ಬಿಲ್ಲುಕಟ್ಟೆಯ ಸಿಬ್ಬಂದಿ ಬಳಸುವ ಸ್ಕ್ಯಾನರ್ ಕೂಡ ಒಂದು. ನಾವು ಕೊಂಡ ವಸ್ತುವಿನ ಮೇಲಿರುವ ಕಪ್ಪು ಗೆರೆಗಳ ಸಂಕೇತವೊಂದನ್ನು ಸ್ಕ್ಯಾನ್ ಮಾಡಿದ ಕೂಡಲೆ ಅದರ ಹೆಸರು ಮತ್ತು ಬೆಲೆ ಕಂಪ್ಯೂಟರಿನಲ್ಲಿ ಪ್ರತ್ಯಕ್ಷವಾಗುವುದನ್ನು ನಾವೆಲ್ಲ ನೋಡಿದ್ದೇವೆ.

ಕಪ್ಪು ಗೆರೆಗಳ ಆ ಸಂಕೇತದ ಹೆಸರೇ ಬಾರ್‌ಕೋಡ್. ಈ ಸಂಕೇತಗಳನ್ನು ಸೂಪರ್‌ಮಾರ್ಕೆಟ್‌ಗಳಲ್ಲಷ್ಟೇ ಅಲ್ಲದೆ ಗ್ರಂಥಾಲಯ, ಅಂಚೆ ವ್ಯವಸ್ಥೆ, ಕಾರ್ಖಾನೆ ಮುಂತಾದ ಹಲವೆಡೆ ವ್ಯಾಪಕವಾಗಿ ಬಳಸಲಾಗುತ್ತದೆ.

ಮೆಮೊರಿ ಕಾರ್ಡ್ ಸಮಾಚಾರ

ಟಿ. ಜಿ. ಶ್ರೀನಿಧಿ


ಡಿಜಿಟಲ್ ಕ್ಯಾಮೆರಾ ಹಾಗೂ ಮೊಬೈಲ್ ಫೋನ್ ಬಳಸುವವರಿಗೆಲ್ಲ ಮೆಮೊರಿ ಕಾರ್ಡುಗಳ ಪರಿಚಯ ಚೆನ್ನಾಗಿಯೇ ಇರುತ್ತದೆ. ಕ್ಯಾಮೆರಾದಲ್ಲಿ ಸೆರೆಹಿಡಿದ ಚಿತ್ರಗಳನ್ನು ಉಳಿಸಿಡಲು, ಮೊಬೈಲಿನ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನಾವು ಇವನ್ನು ಬಳಸುತ್ತೇವೆ. ಟ್ಯಾಬ್ಲೆಟ್ ಕಂಪ್ಯೂಟರುಗಳಲ್ಲಿ, ಎಂಪಿತ್ರೀ ಪ್ಲೇಯರಿನಲ್ಲಿ, ಕಾರ್ ಸ್ಟೀರಿಯೋ - ನ್ಯಾವಿಗೇಶನ್ ವ್ಯವಸ್ಥೆಗಳಲ್ಲೂ ಮೆಮೊರಿ ಕಾರ್ಡುಗಳು ಬಳಕೆಯಾಗುತ್ತವೆ.

ಮೆಮೊರಿ ಕಾರ್ಡುಗಳಲ್ಲಿ ಹಲವು ಬಗೆ. ಬೇರೆಬೇರೆ ರೀತಿಯ ಕಾರ್ಡುಗಳ ಗಾತ್ರ-ಆಕಾರಗಳೂ ವಿಭಿನ್ನವಾಗಿರುತ್ತವೆ. ಮೆಮೊರಿ ಸ್ಟಿಕ್, ಕಾಂಪ್ಯಾಕ್ಟ್‌ಫ್ಲಾಶ್, ಸೆಕ್ಯೂರ್ ಡಿಜಿಟಲ್ (ಎಸ್‌ಡಿ) ಇತ್ಯಾದಿಗಳೆಲ್ಲ ಮೆಮೊರಿ ಕಾರ್ಡ್‌ನ ವಿವಿಧ ಅವತಾರಗಳ ಹೆಸರುಗಳು.

ಎಕ್ಸಿಫ್ ಎಂದರೇನು?

ಟಿ. ಜಿ. ಶ್ರೀನಿಧಿ

ಫೇಸ್‌ಬುಕ್‌ನಲ್ಲಿ ಚೆಂದದ ಛಾಯಾಚಿತ್ರವೊಂದನ್ನು ಸೇರಿಸಿದಾಗ ಅದನ್ನು ಹಂಚಿಕೊಂಡವರು ಅಥವಾ ಚಿತ್ರವನ್ನು ಮೆಚ್ಚಿದವರು ಚಿತ್ರದ ಎಕ್ಸಿಫ್ (EXIF) ಡೇಟಾದ ಬಗ್ಗೆ ಮಾತನಾಡುವುದನ್ನು ನೀವು ಗಮನಿಸಿರಬಹುದು.

ಎಕ್ಸಿಫ್ ಎನ್ನುವುದು 'ಎಕ್ಸ್‌ಚೇಂಜಬಲ್ ಇಮೇಜ್ ಫೈಲ್ ಫಾರ್ಮ್ಯಾಟ್' ಎಂಬ ಹೆಸರಿನ ಹ್ರಸ್ವರೂಪ. ಡಿಜಿಟಲ್ ಕ್ಯಾಮೆರಾ ಬಳಸಿ ಕ್ಲಿಕ್ಕಿಸಿದಾಗ ಅದರ ಮೆಮೊರಿಯಲ್ಲಿ ಚಿತ್ರ ಉಳಿದುಕೊಳ್ಳುತ್ತದಲ್ಲ, ಆ ಚಿತ್ರದ ಜೊತೆಗೆ ಉಳಿಸಲಾಗುವ ಹೆಚ್ಚುವರಿ ಮಾಹಿತಿಯೇ ಎಕ್ಸಿಫ್.

ಹ್ಯಾಶ್‌ಟ್ಯಾಗ್ ಬಳಸುವ ಮುನ್ನ

ಟಿ. ಜಿ. ಶ್ರೀನಿಧಿ

ಸಮಾಜಜಾಲಗಳಲ್ಲಿ ಕಾಣಸಿಗುವ ಹಲವು ಸಂದೇಶಗಳಲ್ಲಿ ಹ್ಯಾಶ್ (#) ಚಿಹ್ನೆಯಿಂದ ಪ್ರಾರಂಭವಾಗುವ ಪದಗಳನ್ನು ನಾವು ನೋಡುತ್ತೇವೆ. ಇಂತಹ ಪದಗಳಿಗೆ 'ಹ್ಯಾಶ್‌ಟ್ಯಾಗ್'ಗಳೆಂದು ಹೆಸರು.

ಸಂದೇಶ ಬರೆಯುವವರ ಭಾವನೆಯನ್ನು ಪ್ರತಿನಿಧಿಸುವುದರಿಂದ ಪ್ರಾರಂಭಿಸಿ ಸಂಸ್ಥೆಗಳ ಹೆಸರನ್ನೋ ಭಾಷೆಯ ವಿಷಯವನ್ನೋ ನಿರ್ದಿಷ್ಟ ಘಟನೆಯನ್ನೋ ನಿರ್ದೇಶಿಸುವವರೆಗೆ ಹ್ಯಾಶ್‌ಟ್ಯಾಗ್‌ಗಳು ಅನೇಕ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಬೆಂಗಳೂರಿಗೆ ಸಂಬಂಧಪಟ್ಟ ವಿಷಯವೆಂದು ಹೇಳಲು #Bengaluru, ಕನ್ನಡದ ಮಾಹಿತಿ ಎನ್ನುವುದಕ್ಕೆ #Kannada - ಹೀಗೆ ಯಾವುದೇ ಬಗೆಯ ಹ್ಯಾಶ್‌ಟ್ಯಾಗ್‌ಗಳನ್ನು ನಾವೇ ಸ್ವತಃ ರೂಪಿಸಿಕೊಳ್ಳಬಹುದು, ಅಥವಾ ಈಗಾಗಲೇ ಇರುವ ಟ್ಯಾಗ್‌ಗಳನ್ನು ನಮ್ಮ ಸಂದೇಶಗಳಲ್ಲಿ ಬಳಸಲೂಬಹುದು.

ಹಾರ್ಡ್ ಡಿಸ್ಕ್ ಡ್ರೈವ್ ಮತ್ತು ಸಾಲಿಡ್ ಸ್ಟೇಟ್ ಡ್ರೈವ್

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನ ಭಾಗಗಳ ಬಗ್ಗೆ ಕೇಳಿದಾಗ ನಮಗೆ ಥಟ್ಟನೆ ನೆನಪಾಗುವ ಹೆಸರುಗಳ ಪೈಕಿ ಹಾರ್ಡ್ ಡಿಸ್ಕ್ ಕೂಡ ಒಂದು. ಮತ್ತೊಮ್ಮೆ ಬಳಸಲು ಬೇಕಾದ ಮಾಹಿತಿಯನ್ನು ಉಳಿಸಿಡಲು ನಾವು ಈ ಸಾಧನವನ್ನು ಬಳಸುತ್ತೇವೆ.

ಹಾರ್ಡ್ ಡಿಸ್ಕ್ ಎನ್ನುವ ಹೆಸರಿಗೆ ಕಾರಣ ಅದರಲ್ಲಿ ಬಳಕೆಯಾಗುವ ಲೋಹದ ತಟ್ಟೆಗಳು. ಅಯಸ್ಕಾಂತೀಯ ಲೇಪನವಿರುವ ಈ ತಟ್ಟೆಗಳ ಮೇಲೆ ಓಡಾಡುವ ಒಂದು ಪುಟ್ಟ ಕಡ್ಡಿಯಂತಹ ಸಾಧನ ನಮ್ಮ ಮಾಹಿತಿಯನ್ನು ಅಲ್ಲಿ ಬರೆದಿಡುತ್ತದೆ, ಬರೆದಿಟ್ಟ ಮಾಹಿತಿಯನ್ನು ಮತ್ತೆ ಓದಲೂ ನೆರವಾಗುತ್ತದೆ. ಈ ತಟ್ಟೆಗಳು, ಓದು-ಬರಹದ ಕಡ್ಡಿ, ಅದು ಓಡಾಡಲು ಬೇಕಾದ ವ್ಯವಸ್ಥೆಯೆಲ್ಲ ಸೇರಿದ್ದೇ ಹಾರ್ಡ್ ಡಿಸ್ಕ್ ಡ್ರೈವ್ (ಎಚ್‌ಡಿಡಿ). ಇದನ್ನು ನಾವು ಸರಳವಾಗಿ ಹಾರ್ಡ್ ಡಿಸ್ಕ್ ಎಂದು ಕರೆಯುತ್ತೇವೆ ಅಷ್ಟೆ: ಕಂಪ್ಯೂಟರಿನ ಒಳಗೆ ಅಡಕವಾಗಿರುವುದು ಇಂಟರ್ನಲ್ ಹಾರ್ಡ್ ಡಿಸ್ಕ್, ಪ್ರತ್ಯೇಕವಾಗಿ ಹೊರಗಿನಿಂದ ಜೋಡಿಸಬಹುದಾದದ್ದು ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್.

ಡಿಜಿಟಲ್ ಕ್ಯಾಮೆರಾ: ಮೆಗಾಪಿಕ್ಸೆಲ್ ಎಷ್ಟು ಮುಖ್ಯ?

ಟಿ. ಜಿ. ಶ್ರೀನಿಧಿ

ಡಿಜಿಟಲ್ ಕ್ಯಾಮೆರಾ ಕೊಳ್ಳಬೇಕು ಎಂದತಕ್ಷಣ ಕೇಳಸಿಗುವ ಪ್ರಮುಖ ಪ್ರಶ್ನೆ - ಎಷ್ಟು ಮೆಗಾಪಿಕ್ಸೆಲ್ ಇದ್ದರೆ ಒಳ್ಳೆಯದು?

ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಡುವ ಮೊದಲು ಪಿಕ್ಸೆಲ್ ಎಂದರೇನು ಎಂದು ತಿಳಿದುಕೊಳ್ಳುವುದು ಅಗತ್ಯ. ಡಿಜಿಟಲ್ ಕ್ಯಾಮೆರಾ ಬಳಸಿ ಕ್ಲಿಕ್ಕಿಸುತ್ತೇವಲ್ಲ, ಅಂತಹ ಪ್ರತಿಯೊಂದು ಚಿತ್ರದಲ್ಲೂ ಅಪಾರ ಸಂಖ್ಯೆಯ ಪುಟ್ಟಪುಟ್ಟ ಚೌಕಗಳಿರುತ್ತವೆ. ಮನೆಯ ನೆಲದಲ್ಲಿ ಟೈಲ್ಸ್ ಇರುತ್ತವಲ್ಲ, ಹಾಗೆ. ಬೇರೆಬೇರೆ ಬಣ್ಣಗಳ ಇಷ್ಟೆಲ್ಲ ಚೌಕಗಳು ಒಟ್ಟಾಗಿ ನಮ್ಮ ಕಣ್ಣಮುಂದೆ ಚಿತ್ರವನ್ನು ಕಟ್ಟಿಕೊಡುತ್ತವೆ.

ಇಂತಹ ಚೌಕಗಳನ್ನು ಪಿಕ್ಸೆಲ್‌ಗಳೆಂದು ಕರೆಯುತ್ತಾರೆ. ಪಿಕ್ಸೆಲ್ ಎಂಬ ಹೆಸರು 'ಪಿಕ್ಚರ್ ಎಲಿಮೆಂಟ್' ಎನ್ನುವುದರ ಹ್ರಸ್ವರೂಪ. ಚಿತ್ರದಲ್ಲಿ ಇರುವ ಪಿಕ್ಸೆಲ್‌ಗಳ ಸಂಖ್ಯೆ ಜಾಸ್ತಿಯಾದಷ್ಟೂ ಅದರ ಸ್ಪಷ್ಟತೆ ಹೆಚ್ಚು. ಅಂದರೆ, ಚಿತ್ರದಲ್ಲಿ ಹೆಚ್ಚು ಸಂಖ್ಯೆಯ ಪಿಕ್ಸೆಲ್‌ಗಳಿದ್ದಷ್ಟೂ ಅದನ್ನು ಹೆಚ್ಚುಹೆಚ್ಚು ದೊಡ್ಡದಾಗಿ ಮುದ್ರಿಸಿಕೊಳ್ಳಬಹುದು.

ಹೆಚ್ಚು ಎಂದರೆ ಎಷ್ಟು ಎಂದು ಹೇಳಬೇಕಲ್ಲ, ಅದಕ್ಕೆ ಬಳಕೆಯಾಗುವುದೇ ಮೆಗಾಪಿಕ್ಸೆಲ್.
ಒಂದು ಮೆಗಾಪಿಕ್ಸೆಲ್ ಎನ್ನುವುದು ಹತ್ತು ಲಕ್ಷ ಪಿಕ್ಸೆಲ್‌ಗಳಿಗೆ ಸಮಾನ.

ಜೆನ್‍ಫೋನ್ ಮ್ಯಾಕ್ಸ್‌ನ ಮೂರನೇ ಆವೃತ್ತಿ [ವೀಡಿಯೋ ಕೂಡ ಇದೆ!]

ಇಜ್ಞಾನ ವಿಶೇಷ


ತೈವಾನ್ ಮೂಲದ ತಂತ್ರಜ್ಞಾನ ಸಂಸ್ಥೆ ಏಸಸ್ ರೂಪಿಸುತ್ತಿರುವ ಜೆನ್‌ಫೋನ್ ಸರಣಿಯ ಸ್ಮಾರ್ಟ್‌ಫೋನುಗಳು ಕಳೆದ ಕೆಲವರ್ಷಗಳಿಂದ ನಮ್ಮ ದೇಶದಲ್ಲಿ ಅಪಾರ ಜನಪ್ರಿಯತೆ ಗಳಿಸಿಕೊಂಡಿವೆ. ವಿವಿಧ ಬೆಲೆಗಳಲ್ಲಿ ವಿವಿಧ ವೈಶಿಷ್ಟ್ಯಗಳೊಡನೆ ದೊರಕುವ ಈ ಸರಣಿಯ ಫೋನುಗಳ ಪೈಕಿ ಜೆನ್‌ಫೋನ್ ಮ್ಯಾಕ್ಸ್‌ನದು ವಿಶೇಷ ಸ್ಥಾನ. ಹೆಚ್ಚಿನ ಬ್ಯಾಟರಿ ಸಾಮರ್ಥ್ಯದಿಂದಲೇ ಗುರುತಿಸಿಕೊಂಡಿರುವ ಈ ಸ್ಮಾರ್ಟ್‌ಫೋನ್ ಬೇರೆ ಮೊಬೈಲುಗಳನ್ನು ಚಾರ್ಜ್ ಮಾಡುವ ತನ್ನ ವೈಶಿಷ್ಟ್ಯದಿಂದಲೂ ಸಾಕಷ್ಟು ಹೆಸರುಮಾಡಿದೆ.

ಸುಮಾರು ಹತ್ತುಸಾವಿರ ರೂಪಾಯಿಗಳ ಆಸುಪಾಸಿನ ದರದಲ್ಲಿ ಮಾರುಕಟ್ಟೆಗೆ ಬಂದಿದ್ದ ಜೆನ್‌ಫೋನ್ ಮ್ಯಾಕ್ಸ್‌ನ ಮೊದಲೆರಡು ಆವೃತ್ತಿಗಳನ್ನು ಈ ಹಿಂದೆ ಇಜ್ಞಾನದಲ್ಲಿ ಪರಿಚಯಿಸಲಾಗಿತ್ತು [ಓದಿ: ಜೆನ್‌ಫೋನ್ ಮ್ಯಾಕ್ಸ್ ಇದೀಗ ಇನ್ನಷ್ಟು ಶಕ್ತಿಶಾಲಿ!]. ಪ್ರಸ್ತುತ ಲೇಖನದ ವಸ್ತು ಇದೇ ಸರಣಿಯ ಹೊಸ ಪರಿಚಯವಾದ ಜೆನ್‍ಫೋನ್ ೩ ಮ್ಯಾಕ್ಸ್.

ವೈರಸ್ ತಡೆಗೆ ಆಂಟಿವೈರಸ್

ಟಿ. ಜಿ. ಶ್ರೀನಿಧಿ 

ಕಂಪ್ಯೂಟರಿನ, ಸ್ಮಾರ್ಟ್‌ಫೋನಿನ ಸಾಫ್ಟ್‌ವೇರ್‌ನಿಂದ (ತಂತ್ರಾಂಶ) ಎಷ್ಟು ಉಪಯೋಗವಿದೆಯೋ ಅಷ್ಟೇ ಪ್ರಮಾಣದ ತೊಂದರೆಯೂ ಆಗಬಲ್ಲದು. ಒಳ್ಳೆಯ ಉದ್ದೇಶಕ್ಕೆ ತಂತ್ರಾಂಶಗಳಿರುವಂತೆ ಕೆಟ್ಟ ಕೆಲಸಗಳಿಗಾಗಿಯೂ ತಂತ್ರಾಂಶಗಳು (ಮಾಲ್‌ವೇರ್ - ಕುತಂತ್ರಾಂಶ) ರೂಪುಗೊಂಡಿರುವುದು ಇದಕ್ಕೆ ಕಾರಣ.

ಕಂಪ್ಯೂಟರ್ ಕಾರ್ಯಾಚರಣೆಗೆ ತೊಂದರೆಮಾಡುವುದು, ಶೇಖರಿಸಿಟ್ಟ ಮಾಹಿತಿಯನ್ನು ಹಾಳುಮಾಡುವುದು, ಖಾಸಗಿ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವುದು - ಹೀಗೆ ಕುತಂತ್ರಾಂಶಗಳು ಬೇಕಾದಷ್ಟು ಬಗೆಯಲ್ಲಿ ತೊಂದರೆಕೊಡುತ್ತವೆ. ವೈರಸ್, ಟ್ರೋಜನ್, ಸ್ಪೈವೇರ್, ಆಡ್‌ವೇರ್ ಇವೆಲ್ಲ ಕುತಂತ್ರಾಂಶಗಳಿಗೆ ಉದಾಹರಣೆಗಳು.

ರೋಗ ಬಾರದಂತಿರಲು, ಹಾಗೂ ಬಂದಾಗ ಅದನ್ನು ವಾಸಿಮಾಡಿಕೊಳ್ಳಲು ನಾವು ಔಷಧಿ ತೆಗೆದುಕೊಳ್ಳುತ್ತೇವಲ್ಲ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳ ಪಾಲಿಗೆ ಅಂತಹ ಔಷಧಿಯೆಂದರೆ ಆಂಟಿವೈರಸ್ ತಂತ್ರಾಂಶ. ಕುತಂತ್ರಾಂಶಗಳನ್ನು ಗುರುತಿಸಿ ಅವು ತೊಂದರೆಮಾಡದಂತೆ ತಡೆಯುವುದು ಈ ತಂತ್ರಾಂಶದ ಕೆಲಸ.

ಫಾಸ್ಟ್ ಚಾರ್ಜಿಂಗ್ ಎಂದರೇನು?

ಟಿ. ಜಿ. ಶ್ರೀನಿಧಿ

ಈಚಿನ ದಿನಗಳಲ್ಲಿ ಮೊಬೈಲ್ ಫೋನುಗಳೇನೋ ಸ್ಮಾರ್ಟ್ ಆಗುತ್ತಿವೆ, ಸರಿ. ಆದರೆ ಅವುಗಳ ಬ್ಯಾಟರಿಯಲ್ಲಿ ಮಾತ್ರ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ; ಪದೇಪದೇ ಚಾರ್ಜ್ ಮಾಡಬೇಕಾದ ಪರಿಸ್ಥಿತಿಯಿಂದ - ಪ್ರತಿಬಾರಿ ಚಾರ್ಜ್ ಮಾಡಲು ಗಂಟೆಗಟ್ಟಲೆ ಕಾಯಬೇಕಾದ ಫಜೀತಿಯಿಂದ ಇನ್ನೂ ಬಿಡುಗಡೆ ಸಿಕ್ಕಿಲ್ಲ.

ಫೋನ್ ಚಾರ್ಜ್ ಆಗಲು ಹೀಗೆ ಗಂಟೆಗಟ್ಟಲೆ ಕಾಯುವ ಬದಲಿಗೆ ಕೆಲವೇ ಸೆಕೆಂಡುಗಳಲ್ಲಿ ಪೂರ್ತಿ ಚಾರ್ಜ್ ಆಗುವ ಬ್ಯಾಟರಿ ಸಿಕ್ಕರೆ ಹೇಗೆ? ಈ ಪ್ರಶ್ನೆಗೆ ಉತ್ತರ ಹುಡುಕಲು ಹಲವು ಪ್ರಯತ್ನಗಳು ನಡೆದಿವೆ.

ಈಚೆಗೆ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ 'ಫಾಸ್ಟ್ ಚಾರ್ಜಿಂಗ್' ತಂತ್ರಜ್ಞಾನ ಇಂತಹ ಪ್ರಯತ್ನಗಳಲ್ಲೊಂದು.
badge