ಶುಕ್ರವಾರ, ಡಿಸೆಂಬರ್ 30, 2016

ಎಂಬಿಪಿಎಸ್ ಎಂದರೇನು?

ಟಿ. ಜಿ. ಶ್ರೀನಿಧಿ

ಒಂದಲ್ಲ ಒಂದು ಸಾಧನದ ಮೂಲಕ ನಾವು ಸದಾಕಾಲ ಅಂತರಜಾಲ ಸಂಪರ್ಕವನ್ನು ಬಳಸುತ್ತಲೇ ಇರುತ್ತೇವಲ್ಲ, ಹಾಗೆ ಬಳಸುವಾಗ ಸಂಪರ್ಕದ ವೇಗದ ಬಗೆಗೂ ಕೇಳಿರುತ್ತೇವೆ: ೮ ಎಂಬಿಪಿಎಸ್, ೧೬ ಎಂಬಿಪಿಎಸ್, ೫೦ ಎಂಬಿಪಿಎಸ್... ಹೀಗೆ.

ಎಂಬಿ ಅಂದರೆ ಮೆಗಾಬೈಟ್ ಸರಿ, ಆದರೆ ಇದೇನಿದು ಎಂಬಿಪಿಎಸ್ (Mbps)?

ಯಾವುದೇ ದೂರಸಂಪರ್ಕ ವ್ಯವಸ್ಥೆಯ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ಹಾದುಹೋಗುವ ದತ್ತಾಂಶದ (ಡೇಟಾ) ಸರಾಸರಿ ಪ್ರಮಾಣವನ್ನು ಡೇಟಾ ರೇಟ್ ಎಂದು ಕರೆಯುತ್ತಾರೆ. ಒಂದಷ್ಟು ದತ್ತಾಂಶವನ್ನು ತೆಗೆದುಕೊಂಡರೆ ಅದು ಒಂದು ಸ್ಥಳದಿಂದ ಮತ್ತೊಂದಕ್ಕೆ ಎಷ್ಟು ವೇಗವಾಗಿ ತಲುಪಬಲ್ಲದು ಎನ್ನುವುದನ್ನು ಈ ಡೇಟಾ ರೇಟ್ ಸೂಚಿಸುತ್ತದೆ.

ದತ್ತಾಂಶದ ರವಾನೆಗೆ ನಾವು ಯಾವುದೇ ಮಾರ್ಗ ಆಯ್ದುಕೊಂಡಾಗ ಅದರ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ನಿಗದಿತ ಪ್ರಮಾಣದ ದತ್ತಾಂಶವಷ್ಟೆ ಹಾದುಹೋಗುವುದು ಸಾಧ್ಯ. ಇದನ್ನು ಆ ಮಾರ್ಗದ ಬ್ಯಾಂಡ್‌ವಿಡ್ತ್ ಎಂದು ಕರೆಯುತ್ತಾರೆ. ಯಾವುದೇ ಸಂಪರ್ಕ ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಪ್ರಮಾಣದ ದತ್ತಾಂಶದ ಹರಿವನ್ನು ನಿಭಾಯಿಸಬಲ್ಲದು ಎನ್ನುವುದನ್ನು ಇದು ಸೂಚಿಸುತ್ತದೆ.

ಯಾವುದೋ ಅಂತರಜಾಲ ತಾಣದಿಂದ ಕಡತವೊಂದನ್ನು ಡೌನ್‍ಲೋಡ್ ಮಾಡುತ್ತಿದ್ದೇವೆ ಎನ್ನುವುದಾದರೆ ಅದನ್ನು ಹೆಚ್ಚು ಬ್ಯಾಂಡ್‍ವಿಡ್ತ್ ಇರುವ ಸಂಪರ್ಕದಲ್ಲಿ ಹೆಚ್ಚು ವೇಗವಾಗಿ ಇಳಿಸಿಕೊಳ್ಳುವುದು ಸಾಧ್ಯ. ಕೊಳವೆಯ ವ್ಯಾಸ ದೊಡ್ಡದಾದಷ್ಟೂ ಅದರಲ್ಲಿ ಹೆಚ್ಚು ಪ್ರಮಾಣದ ನೀರು ಹರಿಸುವುದು ಸಾಧ್ಯವಾಗುತ್ತದಲ್ಲ, ಇದೂ ಹಾಗೆಯೇ.

ಬ್ಯಾಂಡ್‌ವಿಡ್ತ್ ಹೆಚ್ಚಿದ್ದಷ್ಟೂ ಡೇಟಾ ರೇಟ್ ಕೂಡ ಹೆಚ್ಚಾಗಿರುವುದು ಸಾಧ್ಯ. ಈ ಡೇಟಾ ರೇಟ್ ಅನ್ನು ಅಳೆಯುವ ಏಕಮಾನವೇ ಡೇಟಾ ರೇಟ್ ಯುನಿಟ್. ಎಂಬಿಪಿಎಸ್ ಎನ್ನುವುದು ಇಂತಹುದೇ ಒಂದು ಡೇಟಾ ರೇಟ್ ಯುನಿಟ್. ಯಾವುದೋ ಅಂತರಜಾಲ ಸಂಪರ್ಕದಲ್ಲಿ ಪ್ರತಿ ಸೆಕೆಂಡಿಗೆ ಹತ್ತು ಲಕ್ಷ ಬಿಟ್‌ನಷ್ಟು ದತ್ತಾಂಶದ ಹರಿವು ಸಾಧ್ಯವಾದರೆ ಅದನ್ನು ೧ ಮೆಗಾಬಿಟ್ ಪರ್ ಸೆಕೆಂಡ್ (ಎಂಬಿಪಿಎಸ್) ಸಂಪರ್ಕವೆಂದು ಗುರುತಿಸಲಾಗುತ್ತದೆ.

ಇದೇ ರೀತಿ ೮ ಎಂಬಿಪಿಎಸ್ ಸಂಪರ್ಕದ ಮೂಲಕ ಸೆಕೆಂಡಿಗೆ ೮೦ ಲಕ್ಷ ಬಿಟ್ (೮೦ ಮೆಗಾಬಿಟ್) ದತ್ತಾಂಶದ ವರ್ಗಾವಣೆ ಸಾಧ್ಯ. ಇದರಲ್ಲಿ ನಾವು ಕಳುಹಿಸುವ ಹಾಗೂ ಪಡೆದುಕೊಳ್ಳುವ ಅಷ್ಟೂ ದತ್ತಾಂಶ (ಜಾಲತಾಣಗಳನ್ನು ನೋಡುವುದೂ ಸೇರಿದಂತೆ) ಸೇರಿರುತ್ತದೆ.

ಅಂತರಜಾಲ ಸಂಪರ್ಕದ ಬಳಕೆದಾರರಿಗೆ ಬ್ಯಾಂಡ್‍ವಿಡ್ತ್ ಒಂದು ನಿರ್ಬಂಧವಾದರೆ ಡೇಟಾ ಟ್ರಾನ್ಸ್‍ಫರ್ ಮಿತಿ ಇನ್ನೊಂದು ನಿರ್ಬಂಧ. ಎಂಬತ್ತು ಜಿಬಿವರೆಗೆ ೮ ಎಂಬಿಪಿಎಸ್ ಸಂಪರ್ಕ ಎಂದರೆ ಸೆಕೆಂಡಿಗೆ ಗರಿಷ್ಠ ೮೦ ಲಕ್ಷ ಬಿಟ್ ವೇಗದಲ್ಲಿ ಒಟ್ಟು ೮೦ ಗಿಗಾಬೈಟ್‌ನಷ್ಟು ಮಾಹಿತಿಯ ವರ್ಗಾವಣೆ ಸಾಧ್ಯ ಎಂದು ಅರ್ಥ. ಅಂತರಜಾಲ ಸಂಪರ್ಕಗಳಿಗಿರುವಂತೆ ಕೆಲವೊಮ್ಮೆ ಜಾಲತಾಣಗಳಿಗೂ ಇಂತಹ ಮಿತಿ ಇರುತ್ತದೆ. ಇಂತಿಷ್ಟು ಹೋಸ್ಟಿಂಗ್ ಶುಲ್ಕಕ್ಕೆ ಪ್ರತಿಯಾಗಿ ಆ ಜಾಲತಾಣ ತನ್ನ ಗ್ರಾಹಕರೊಡನೆ ಗರಿಷ್ಠ ಇಂತಿಷ್ಟೇ ಪ್ರಮಾಣದ ದತ್ತಾಂಶವನ್ನು ವರ್ಗಾಯಿಸಿಕೊಳ್ಳಬಹುದು ಎಂದು ಕೆಲ ಹೋಸ್ಟಿಂಗ್ ಸಂಸ್ಥೆಗಳು ನಿರ್ಬಂಧ ವಿಧಿಸಿರುತ್ತವೆ.

ಮೇ ೨೩ ಹಾಗೂ ಡಿಸೆಂಬರ್ ೨೬, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಗಳ ಸಂಯುಕ್ತರೂಪ

2 ಕಾಮೆಂಟ್‌ಗಳು:

Sikandar Kalaburgi ಹೇಳಿದರು...

ಸರ್ ಉಪಯುಕ್ತ ಲೇಖನ.ಧನ್ಯವಾದಗಳು.
ಸರ್, ಯು ಟ್ಯೂಬನಲ್ಲಿ ಅಥವಾ ಅಂತರ್ಜಾಲದಲ್ಲಿ ವಿಡಿಯೋ ಅಪಲೋಡ ಮಾಡಿದರೆ ಜನ ಅದನ್ನು ನೋಡಿದರೆ ನಮಗೆ ದುಡ್ಡು ಸಿಗುತ್ತೆ ಅಂತಾರಲ್ಲ
ಅದು ಹೇಗೆ ತಿಳಿಸಿ?.

Sikandar Kalaburgi ಹೇಳಿದರು...

ಉಪಯುಕ್ತ ಲೇಖನ.ಧನ್ಯವಾದಗಳು.

badge