ಸೋಮವಾರ, ಡಿಸೆಂಬರ್ 19, 2016

E, H, H+ ಇದೆಲ್ಲ ಏನು?

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನ್ ಪರದೆಯ ಮೇಲ್ತುದಿಯಲ್ಲಿ ಹಲವು ಸಂಕೇತಗಳು ಕಾಣಸಿಗುವುದು ನಮಗೆಲ್ಲ ಗೊತ್ತು. ಈಗ ಸಮಯ ಎಷ್ಟು, ಬ್ಯಾಟರಿಯಲ್ಲಿ ಎಷ್ಟು ಶಕ್ತಿಯಿದೆ, ಮೊಬೈಲ್ ಸಿಗ್ನಲ್ ಹೇಗಿದೆ, ಬ್ಲೂಟೂತ್ ಚಾಲೂ ಆಗಿದೆಯೇ ಎನ್ನುವುದನ್ನೆಲ್ಲ ಈ ಸಂಕೇತಗಳು ನಮಗೆ ತಿಳಿಸುತ್ತವೆ.

ಈ ಪೈಕಿ ಇಂಟರ್‌ನೆಟ್ ಸಂಪರ್ಕವನ್ನು ಸೂಚಿಸುವ ಇನ್ನೊಂದು ಸಂಕೇತವೂ ಇರುತ್ತದೆ. ವೈ-ಫೈ ಸಂಪರ್ಕ ಬಳಸುವಾಗ ಇಲ್ಲಿ ಒಂದೇ ರೀತಿಯ ಚಿಹ್ನೆ ಇದ್ದರೆ ಮೊಬೈಲ್ ಇಂಟರ್‌ನೆಟ್ ಬಳಸುವಾಗ ಮಾತ್ರ E, H, H+ ಮುಂತಾದ ಬೇರೆಬೇರೆ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ.

ವಾಸ್ತವವಾಗಿ ಈ ಚಿಹ್ನೆಗಳು ನಾವು ಬಳಸುತ್ತಿರುವ ಅಂತರಜಾಲ ಸಂಪರ್ಕಕ್ಕೆ ಅನುಗುಣವಾಗಿ ಬದಲಾಗುತ್ತವೆ. ೩ಜಿ ಸಂಪರ್ಕವಿಲ್ಲದ ಕಡೆಗಳಲ್ಲಿ 'E' ಎಂಬ ಚಿಹ್ನೆ ಮೂಡುತ್ತದಲ್ಲ, ಅದು EDGE (Enhanced Data Rates for GSM Evolution) ಸಂಪರ್ಕವನ್ನು ಸೂಚಿಸುತ್ತದೆ. ಇದು ಈ ಹಿಂದೆ ಬಳಸಲಾಗುತ್ತಿದ್ದ ಜಿಪಿಆರ್‌ಎಸ್ (ಜನರಲ್ ಪ್ಯಾಕೆಟ್ ರೇಡಿಯೋ ಸರ್ವಿಸ್) ತಂತ್ರಜ್ಞಾನದ ಸುಧಾರಿತ ರೂಪ. ಮೂಲತಃ ೨ಜಿ ಮೊಬೈಲ್ ಜಾಲಗಳಲ್ಲಿ ದೊರಕುತ್ತಿದ್ದ ಈ ಬಗೆಯ ಸಂಪರ್ಕವನ್ನು 'G' ಚಿಹ್ನೆ ಸೂಚಿಸುತ್ತಿತ್ತು (ಎಜ್ ತಂತ್ರಜ್ಞಾನ ಬಳಸುವ ಜಾಲಗಳನ್ನು ೨.೫ಜಿ ಜಾಲಗಳೆಂದೂ ಗುರುತಿಸಲಾಗುತ್ತದೆ).

ಇನ್ನು H, H+ ಮತ್ತು 3G ಎನ್ನುವ ಚಿಹ್ನೆಗಳು ೩ಜಿ ಸಂಪರ್ಕವನ್ನು ಸೂಚಿಸುತ್ತವೆ. HSPA (High Speed Packet Access), ಅರ್ಥಾತ್ 'H' ತಂತ್ರಜ್ಞಾನದಲ್ಲಿ ಮೂಲ ೩ಜಿಗಿಂತ ಹೆಚ್ಚಿನ ವೇಗದ ಸಂಪರ್ಕಗಳು ದೊರೆತರೆ Enhanced HSPA ('H+') ತಂತ್ರಜ್ಞಾನ ಅದಕ್ಕೂ ಹೆಚ್ಚಿನ ವೇಗವನ್ನು ಸಾಧ್ಯವಾಗಿಸುತ್ತದೆ. ೪ಜಿ ಜಾಲದಲ್ಲಿ ಇವೆಲ್ಲದಕ್ಕಿಂತ ಹೆಚ್ಚಿನ ವೇಗದ ಸಂಪರ್ಕವನ್ನು ಬಳಸುವಾಗ ನಮಗೆ '4G' ಅಥವಾ 'LTE' ಎನ್ನುವ ಚಿಹ್ನೆ ಕಾಣಸಿಗುತ್ತದೆ. ಈ ಪೈಕಿ 'LTE' ಎನ್ನುವುದು 'Long Term Evolution' ಎಂಬ ಹೆಸರಿನ ಹ್ರಸ್ವರೂಪ.

೩ಜಿ ಹೋಲಿಕೆಯಲ್ಲಿ ನಾಲ್ಕಾರು ಪಟ್ಟು ವೇಗದ ಅಂತರಜಾಲ ಸಂಪರ್ಕವನ್ನು ಸಾಧ್ಯವಾಗಿಸುವುದು ಇದರ ಹೆಚ್ಚುಗಾರಿಕೆ. ಇನ್ನೂ ಹೆಚ್ಚು ವೇಗದ, ಹೆಚ್ಚು ಸಮರ್ಥವಾದ ಮುಂದಿನ ತಲೆಮಾರು ೫ಜಿಯ ತಯಾರಿಯಲ್ಲಿ ತಜ್ಞರು ಈಗಾಗಲೇ ತೊಡಗಿಕೊಂಡಿದ್ದಾರೆ.

ಡಿಸೆಂಬರ್ ೧೬, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ಪೂರ್ಣರೂಪ

2 ಕಾಮೆಂಟ್‌ಗಳು:

Unknown ಹೇಳಿದರು...

ಮಾಹಿತಿಪೂರ್ಣ ಉಪಯುಕ್ತ ಲೇಖನ ಧನ್ಯವಾದಗಳು.

Sikandar Kalaburgi ಹೇಳಿದರು...

ಮಾಹಿತಿಯುಕ್ತ ಪ್ರಯೋಜನಕಾರಿ ಲೇಖನ ಧನ್ಯವಾದಗಳು.

badge