ಶುಕ್ರವಾರ, ಡಿಸೆಂಬರ್ 9, 2016

ನೆಟ್ ಇಲ್ಲದೆ ಮೊಬೈಲ್ ಬ್ಯಾಂಕಿಂಗ್ - ಇಲ್ಲಿದೆ *99# ಸೇವೆಯ ವಿವರ!

ಟಿ. ಜಿ. ಶ್ರೀನಿಧಿ

ಹಣಕಾಸಿನ ವ್ಯವಹಾರಗಳಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಬಗೆಗೆ, ಅದನ್ನು ಸಾಧ್ಯವಾಗಿಸುವ ವಿವಿಧ ಸೌಲಭ್ಯಗಳ ಬಗೆಗೆ ಈಚೆಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಇಂತಹ ಸೌಲಭ್ಯಗಳ ಪೈಕಿ ಅಂತರಜಾಲ ಸಂಪರ್ಕದ ಅಗತ್ಯವಿಲ್ಲದೆ ಸಾಮಾನ್ಯ ಮೊಬೈಲುಗಳಲ್ಲೂ ಬಳಸಬಹುದಾದ ಒಂದು ವ್ಯವಸ್ಥೆಯೂ ಇದೆ ಎನ್ನುವುದು ವಿಶೇಷ. ಭಾರತ ಸರಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ರೂಪಿಸಿರುವ 'ನ್ಯಾಶನಲ್ ಯೂನಿಫೈಡ್ ಯುಎಸ್‍ಎಸ್‌ಡಿ ಪ್ಲಾಟ್‌ಫಾರ್ಮ್ (ಎನ್‌ಯುಯುಪಿ)' ಎಂಬ ಈ ವ್ಯವಸ್ಥೆಯನ್ನು ಹಲವಾರು ಪ್ರಮುಖ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಒದಗಿಸುತ್ತಿವೆ.

ಪ್ರೀಪೇಯ್ಡ್ ಮೊಬೈಲಿನ ಬ್ಯಾಲೆನ್ಸ್ ತಿಳಿದುಕೊಳ್ಳಲು ನಾವು *123# ನಂತಹ ವಿಶೇಷ ಸಂಖ್ಯೆಗಳನ್ನು ಬಳಸುತ್ತೇವಲ್ಲ, ಅಲ್ಲಿ ಬಳಕೆಯಾಗುವ ವ್ಯವಸ್ಥೆಯೇ ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾ, ಅರ್ಥಾತ್ ಯುಎಸ್‌ಎಸ್‌ಡಿ. ಮೊಬೈಲ್ ಸೇವೆ ಒದಗಿಸುವ ಸಂಸ್ಥೆ ಹಾಗೂ ಗ್ರಾಹಕರ ನಡುವೆ ಮಾಹಿತಿ ಸಂವಹನಕ್ಕೆಂದು ಬಳಕೆಯಾಗುವ ಶಿಷ್ಟಾಚಾರಕ್ಕೆ (ಪ್ರೋಟೋಕಾಲ್) ಇದೊಂದು ಉದಾಹರಣೆ.

ಎನ್‌ಯುಯುಪಿ ಮೂಲಕ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸಲೂ ಇದೇ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.
ಮೊಬೈಲ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಮಾಡುವಂತೆ ನಿರ್ದಿಷ್ಟ ಕ್ರಮದಲ್ಲಿ ಚಿಹ್ನೆ ಹಾಗೂ ಅಂಕಿಗಳನ್ನು ಒತ್ತುವ ಮೂಲಕ ನಾವು ಈ ಸೇವೆಯ ಪ್ರಯೋಜನ ಪಡೆದುಕೊಳ್ಳಬಹುದು; ನಿರ್ದಿಷ್ಟ ಅಂಕಿಗಳನ್ನು ಒತ್ತುವ ಮೂಲಕ ಪರದೆಯ ಮೇಲೆ ಕಾಣುವ ಆಯ್ಕೆಗಳನ್ನು ಬಳಸಬಹುದು.

ಯುಎಸ್‌ಎಸ್‌ಡಿ ಮೂಲಕ ಲಭ್ಯವಿರುವ ಈ ಬ್ಯಾಂಕಿಂಗ್ ಸೌಲಭ್ಯ ಬಳಸಲು ಮೊದಲಿಗೆ *99# ಎಂದು ಡಯಲ್ ಮಾಡಬೇಕು. ಆಗ ತೆರೆದುಕೊಳ್ಳುವ ಪರದೆಯಲ್ಲಿ ಮೊದಲು ನಮ್ಮ ಬ್ಯಾಂಕನ್ನು ಆರಿಸಿಕೊಳ್ಳಬೇಕು (ಬ್ಯಾಂಕಿನ ಹೆಸರಿನ ಅಥವಾ ಐಎಫ್‌ಎಸ್‌ಸಿ ಕೋಡ್‌ನ ಮೊದಲ ಅಕ್ಷರಗಳನ್ನು ದಾಖಲಿಸುವ ಮೂಲಕ). ಇದಾದ ನಂತರ ನಂತರ ಖಾತೆಯಲ್ಲಿರುವ ಮೊತ್ತ ಎಷ್ಟೆಂದು ತಿಳಿದುಕೊಳ್ಳುವುದು, ಹಿಂದಿನ ವಹಿವಾಟಿನ ಮಾಹಿತಿ (ಮಿನಿ ಸ್ಟೇಟ್‌ಮೆಂಟ್) ಪಡೆದುಕೊಳ್ಳುವುದು, ಬೇರೊಬ್ಬರ ಖಾತೆಗೆ ಹಣ ವರ್ಗಾಯಿಸುವುದೆಲ್ಲ ಸಾಧ್ಯವಾಗುತ್ತದೆ. ಆದರೆ ನೆನಪಿರಲಿ, ಇದೆಲ್ಲವುದಕ್ಕೂ ಮುನ್ನ ನಿಮ್ಮ ಮೊಬೈಲ್ ಸಂಖ್ಯೆ ಬ್ಯಾಂಕಿನಲ್ಲಿ ನೋಂದಾಯಿತವಾಗಿರಬೇಕಾದ್ದು ಕಡ್ಡಾಯ.

ಅಂದಹಾಗೆ *99# ಬದಲಿಗೆ *99*26# ಎಂದು ಡಯಲ್ ಮಾಡುವ ಮೂಲಕ ಕನ್ನಡದಲ್ಲೂ ಈ ಸೇವೆ ಪಡೆದುಕೊಳ್ಳಬಹುದು. ಇದೇರೀತಿ *99*99# ಎನ್ನುವುದು ನಮ್ಮ ಖಾತೆಗೆ ಆಧಾರ್ ಜೋಡಣೆಯ ಕುರಿತು ತಿಳಿದುಕೊಳ್ಳಲು ಇರುವ ಆಯ್ಕೆ.

ಮೊಬೈಲ್ ಸಂಖ್ಯೆ ಮತ್ತು ಮೊಬೈಲ್ ಮನಿ ಐಡಿ (ಎಂಎಂಐಡಿ), ಐಎಫ್‌ಎಸ್‌ಸಿ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಸಂಖ್ಯೆ, ಆಧಾರ್ ಸಂಖ್ಯೆ - ಈ ವ್ಯವಸ್ಥೆಯ ಮೂಲಕ ಹಣ ವರ್ಗಾವಣೆ ಮಾಡಲು ಯಾವುದೇ ಒಂದು ಬಗೆಯ ವಿವರ ನೀಡಿದರೆ ಸಾಕು (ಮೊಬೈಲ್ ಮನಿ ಐಡಿಯನ್ನು ಬ್ಯಾಂಕಿನಿಂದ ಪಡೆಯಬೇಕು). ಈ ವಹಿವಾಟಿನ ಸುರಕ್ಷತೆಗಾಗಿ ಮೊಬೈಲ್ ಪಿನ್ ಅಥವಾ ಎಂ‌ಪಿನ್ ಅನ್ನು ಪಾಸ್‌ವರ್ಡ್‌ನಂತೆ ಬಳಸಲಾಗುತ್ತದೆ. ಅಲ್ಲದೆ ರಿಸರ್ವ್ ಬ್ಯಾಂಕ್ ನಿಯಮಗಳ ಅನ್ವಯ ಹೀಗೆ ಒಂದು ಬಾರಿ ಐದು ಸಾವಿರ ರೂಪಾಯಿಗಳವರೆಗಿನ ಮೊತ್ತವನ್ನು ಮಾತ್ರ ವರ್ಗಾಯಿಸುವುದು ಸಾಧ್ಯ.

ಈ ಸೇವೆಯ ಲಭ್ಯತೆ ಬೇರೆಬೇರೆ ಬ್ಯಾಂಕು ಹಾಗೂ ಮೊಬೈಲ್ ನೆಟ್‌ವರ್ಕುಗಳಲ್ಲಿ ಬೇರೆಬೇರೆ ಮಟ್ಟದಲ್ಲಿರುವುದು ಸಾಧ್ಯ. ಸದ್ಯ (ಬಹುಶಃ ಡಿಸೆಂಬರ್ ೨೦೧೬ರ ಅಂತ್ಯದವರೆಗೂ) ಎನ್‌ಯುಯುಪಿ ಸೇವೆ ಉಚಿತ; ನಂತರದಲ್ಲಿ ಇದನ್ನು ಬಳಸಲು ಪ್ರತಿ ಸಲವೂ ಐವತ್ತು ಪೈಸೆ ಮೀರದಂತೆ ಶುಲ್ಕ ವಿಧಿಸುವ ಸ್ವಾತಂತ್ರ್ಯವನ್ನು ಮೊಬೈಲ್ ಸಂಸ್ಥೆಗಳಿಗೆ ನೀಡಲಾಗಿದೆ. ಹಣ ವರ್ಗಾವಣೆಗೆ ಬ್ಯಾಂಕ್ ನಿಯಮಗಳ ಪ್ರಕಾರ ನಿರ್ದಿಷ್ಟ ಶುಲ್ಕ (ಐಎಂಪಿಎಸ್ ಹಾಗೂ ಎನ್‌ಇಎಫ್‌ಟಿಗಳಿಗೆ ಇರುವಷ್ಟೇ) ಇರುವುದು ಸಾಧ್ಯ.

ಎನ್‌ಯುಯುಪಿ ಸೌಲಭ್ಯದ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ನಿಮ್ಮ ಬ್ಯಾಂಕಿನ ಗ್ರಾಹಕ ಸೇವೆ ಅಥವಾ ಎನ್‌ಪಿಸಿಐ ಜಾಲತಾಣವನ್ನು ಸಂಪರ್ಕಿಸಬಹುದು.

ಡಿಸೆಂಬರ್ ೫, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ
badge