ಬುಧವಾರ, ಡಿಸೆಂಬರ್ 21, 2016

ಯುಪಿಐ: ಹಣ ವರ್ಗಾವಣೆ ಇದೀಗ ಇಮೇಲ್ ಕಳಿಸುವಷ್ಟೇ ಸುಲಭ!

ಟಿ. ಜಿ. ಶ್ರೀನಿಧಿ


ಒಂದು ಕಾಲವಿತ್ತು, ಆಗ ಯಾರಿಗಾದರೂ ಸಂದೇಶ ಕಳುಹಿಸಬೇಕಾದರೆ ಅದನ್ನೊಂದು ಪತ್ರದಲ್ಲಿ ಬರೆದು, ವಿಳಾಸ ಬರೆದ ಲಕೋಟೆಯೊಳಗಿಟ್ಟು, ಸ್ಟಾಂಪು ಹಚ್ಚಿ ಅಂಚೆಡಬ್ಬಕ್ಕೆ ಹಾಕಿಬರಬೇಕಿತ್ತು. ವಿಳಾಸದಾರರಿಗೆ ಅದು ತಲುಪುತ್ತಿದ್ದದ್ದು ಅಂಚೆಯವರು ತಲುಪಿಸಿದಾಗಲಷ್ಟೇ. ಇಮೇಲ್ ಬಂದ ತಕ್ಷಣ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು, ಕೇವಲ ಒಂದು ಸಾಲಿನ ವಿಳಾಸವನ್ನಷ್ಟೇ ಬರೆದು ಸಂದೇಶಗಳನ್ನು ಯಾವಾಗ ಬೇಕಾದರೂ ಕಳುಹಿಸುವುದು ಸಾಧ್ಯವಾಯಿತು.

ನಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸುವ ಕೆಲಸ ತೀರಾ ಇತ್ತೀಚಿನವರೆಗೂ ಪತ್ರ ಬರೆದು ಪೋಸ್ಟಿಗೆ ಹಾಕುವ ಕೆಲಸದಷ್ಟೇ ಕ್ಲಿಷ್ಟವಾಗಿತ್ತು. ಎನ್‌ಇಎಫ್‌ಟಿಯಂತಹ "ಹೈಟೆಕ್" ವ್ಯವಸ್ಥೆಗಳಲ್ಲೂ ಐಎಫ್‌ಎಸ್‌ಸಿ ಸಂಖ್ಯೆ, ಅಕೌಂಟ್ ಸಂಖ್ಯೆ ಎಂದು ಬೇರೆಬೇರೆ ಮಾಹಿತಿಯನ್ನೆಲ್ಲ ಸರಿಯಾಗಿ ನಿಭಾಯಿಸಬೇಕಾದ್ದು - ಹಣ ವರ್ಗಾವಣೆಯಾಗಲು ಕಾಯಬೇಕಾದ್ದು ಅನಿವಾರ್ಯವಾಗಿತ್ತು.

ಅಂಚೆ ವ್ಯವಸ್ಥೆಯಲ್ಲಿ ಇಮೇಲ್ ತಂದಂತಹುದೇ ಬದಲಾವಣೆಯನ್ನು ಈ ಕೆಲಸದಲ್ಲಿ ತರಲು ಹೊರಟಿರುವುದು ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಎಂಬ ವ್ಯವಸ್ಥೆ.
ಭಾರತ ಸರಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ರೂಪಿಸಿರುವ ಈ ವ್ಯವಸ್ಥೆಯನ್ನು ಬಳಸಿ ಇಮೇಲ್ ಕಳುಹಿಸಿದಷ್ಟೇ ಸುಲಭವಾಗಿ ಇತರರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು, ನಮ್ಮ ಖಾತೆಗೆ ಇತರರಿಂದ ಹಣ ಪಡೆದುಕೊಳ್ಳಬಹುದು.

ಯುಪಿಐ ಬೆಂಬಲಿಸುವ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಅದಕ್ಕೆ ನಮ್ಮ ಖಾತೆಯನ್ನು ಜೋಡಿಸುವುದು ಇಲ್ಲಿ ಮಾಡಬೇಕಿರುವ ಮೊದಲ ಕೆಲಸ. ಬಹುತೇಕ ಬ್ಯಾಂಕುಗಳು ತಮ್ಮ ಗ್ರಾಹಕರಿಗಾಗಿ ಇಂತಹ ಆಪ್‌ಗಳನ್ನು ರೂಪಿಸಿವೆ, ಇಲ್ಲವೇ ತಮ್ಮ ನೆಟ್‌ಬ್ಯಾಂಕಿಂಗ್ ವ್ಯವಸ್ಥೆಯಲ್ಲೇ ಈ ಸೌಲಭ್ಯವನ್ನೂ ನೀಡಿವೆ; ಯುಪಿಐ ಸೌಲಭ್ಯ ಒದಗಿಸುವ 'ಫೋನ್‌ಪೆ'ಯಂತಹ ಖಾಸಗಿ ಆಪ್‌ಗಳೂ ಇವೆ.

ಆಪ್ ಇನ್‍ಸ್ಟಾಲ್ ಮಾಡಿಕೊಂಡ ನಂತರ ನಮ್ಮ ಖಾತೆಯನ್ನು ಪ್ರತಿನಿಧಿಸುವ ವರ್ಚುಯಲ್ ಪ್ರೈವೇಟ್ ಅಡ್ರೆಸ್ (ವಿಪಿಎ, you@yourbank ಎಂಬ ರೂಪದ್ದು) ರೂಪಿಸಿಕೊಂಡರೆ ಆಯಿತು, ನಮಗೆ ಹಣಕೊಡಬೇಕಿರುವ ಯಾರು ಬೇಕಾದರೂ ಆ ವಿಳಾಸಕ್ಕೆ ಥಟ್ಟನೆ ಹಣ ವರ್ಗಾಯಿಸುವುದು ಸಾಧ್ಯ. ನಾವೂ ಅಷ್ಟೇ, ಇಮೇಲ್ ಕಳಿಸಿದಷ್ಟೇ ಸುಲಭವಾಗಿ ಬೇರೊಬ್ಬರ ವಿಳಾಸಕ್ಕೆ ತಕ್ಷಣವೇ ಹಣ ಕಳುಹಿಸಬಹುದು (ಐಎಫ್‌ಎಸ್‌ಸಿ-ಅಕೌಂಟ್ ಸಂಖ್ಯೆ, ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ-ಎಂಎಂಐಡಿ ಬಳಸಿಯೂ ಹಣ ಪಾವತಿಸುವುದು ಸಾಧ್ಯ).

ಯುಪಿಐ ವ್ಯವಸ್ಥೆ ಹಣ ವರ್ಗಾವಣೆಗೆ ಐಎಂಪಿಎಸ್ ವಿಧಾನ ಬಳಸುವುದರಿಂದ ಇಲ್ಲಿ ತಕ್ಷಣವೇ ಹಣ ವರ್ಗಾವಣೆಯಾಗುತ್ತದೆ. ಹಣ ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆಯಾಗುವುದರಿಂದ ವ್ಯಾಲೆಟ್‌ಗೆ ಹಣ ಹಾಕಿಡುವ ತಲೆಬಿಸಿಯೂ ಇಲ್ಲ. ವ್ಯವಹಾರವೆಲ್ಲ ಮೊಬೈಲಿನಲ್ಲೇ ನಡೆಯುವುದರಿಂದ ಹಣ ಪಡೆದುಕೊಳ್ಳುವವರು ಸ್ವೈಪಿಂಗ್ ಮಶೀನ್ ಇಟ್ಟುಕೊಳ್ಳಬೇಕಾಗಿಯೂ ಇಲ್ಲ. ವಿಪಿಎ ಬಳಸುವುದರಿಂದ ಪ್ರತಿ ಬಾರಿಯೂ ಐಎಫ್‌ಎಸ್‌ಸಿ ಸಂಖ್ಯೆ, ಅಕೌಂಟ್ ಸಂಖ್ಯೆಗಳನ್ನೆಲ್ಲ ನೀಡಬೇಕಾದ ಅಗತ್ಯ ಕೂಡ ನಿವಾರಣೆಯಾಗುತ್ತದೆ.

ಅಂದಹಾಗೆ ಯುಪಿಐ ಬಳಸಲು ಸ್ಮಾರ್ಟ್‌ಫೋನ್ ಹಾಗೂ ಅಂತರಜಾಲ ಸಂಪರ್ಕ ಇರಬೇಕಾದ್ದು, ನಿಮ್ಮ ಬ್ಯಾಂಕು ಯುಪಿಐ ಸೌಲಭ್ಯ ನೀಡಬೇಕಾದ್ದು, ಬ್ಯಾಂಕಿನಲ್ಲಿ ನೋಂದಾಯಿತವಾದ ಮೊಬೈಲ್ ಸಂಖ್ಯೆಯನ್ನೇ ಬಳಸಬೇಕಾದ್ದು ಕಡ್ಡಾಯ. ಈ ವ್ಯವಸ್ಥೆ ಬಳಸಲು ಸದ್ಯದಲ್ಲಿ ಯಾವುದೇ ಶುಲ್ಕ ಇಲ್ಲ; ಐಎಂಪಿಎಸ್ ಸೌಲಭ್ಯಕ್ಕೆ ಪಾವತಿಸುವಷ್ಟೇ ಶುಲ್ಕವನ್ನು ಮುಂದೆ ಇದಕ್ಕೂ ಪಾವತಿಸಬೇಕಾಗಬಹುದು ಎಂಬ ಊಹೆ ಇದೆ.

ಡಿಸೆಂಬರ್ ೧೭, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತರೂಪ  

ಕಾಮೆಂಟ್‌ಗಳಿಲ್ಲ:

badge