ಗುರುವಾರ, ಡಿಸೆಂಬರ್ 8, 2016

'ಮೋಟೋ ಇ೩ ಪವರ್' ಹೇಗಿದೆ ಗೊತ್ತೇ?

ಕಡಿಮೆ ಬೆಲೆಯ ಹೊಸ ಮೋಟರೋಲಾ ಫೋನು 'ಮೋಟೋ ಇ೩ ಪವರ್' ಹೇಗಿದೆ? ಪರಿಣತ ಟೆಕ್ ಬ್ಲಾಗರ್, ಇಜ್ಞಾನದ ಅತಿಥಿ ಅಂಕಣಕಾರ ಅನಿರುದ್ಧ ಕಾರ್ತಿಕ್ ಅಭಿಪ್ರಾಯ ಇಲ್ಲಿದೆ!
ಅನಿರುದ್ಧ ಕಾರ್ತಿಕ್ 

ಎರಡು ವರ್ಷಗಳ ಹಿಂದೆ ಮೋಟರೋಲಾ ಸಂಸ್ಥೆ ಮೊದಲ ಮೋಟೋ ಇ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದಾಗ ಅದು ಅಗ್ಗದ ಮೊಬೈಲುಗಳ ಮಾನದಂಡವನ್ನೇ ಬದಲಿಸಿತ್ತು. ಅಂದಿನ ಕಾಲಕ್ಕೆ ಸಾಕಷ್ಟು ಉತ್ತಮ ಗುಣಮಟ್ಟದ ಫೋನ್ ಎಂದು ಕರೆಸಿಕೊಂಡಿದ್ದ ಮೋಟೋ ಇ ಮೂಲಕ ಅನೇಕ ಬಳಕೆದಾರರು ಸ್ಮಾರ್ಟ್‌ಫೋನ್ ಜಗತ್ತನ್ನು ಪ್ರವೇಶಿಸಿದರು. ನಂತರದ ದಿನಗಳಲ್ಲಿ ಶಿಯೋಮಿ, ಲೆನೊವೊ, ಏಸಸ್ ಮುಂತಾದ ಹಲವಾರು ಸಂಸ್ಥೆಗಳು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಫೋನುಗಳನ್ನು ಪರಿಚಯಿಸಲು, ದರಸಮರ ಪ್ರಾರಂಭಿಸಲು ಮೋಟೋ ಇ ಕೂಡ ಕಾರಣವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. 

ಹೀಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಸ್ವರೂಪವನ್ನೇ ಬದಲಿಸಿದ ಮೋಟೋ ಇ ಸ್ಮಾರ್ಟ್ ಫೋನಿನ ಇತ್ತೀಚಿನ ಆವೃತ್ತಿಯೇ ರೂ. ೭೯೯೯ ಮುಖಬೆಲೆಯ 'ಮೋಟೋ ಇ೩ ಪವರ್'.
ಬನ್ನಿ, ಇದರ ಗುಣವಿಶೇಷತೆಗಳೇನು ಮತ್ತು ಇಂದು ನಮಗಿರುವ ಆಯ್ಕೆಗಳ ನಡುವೆ ಇದರ ಕಾರ್ಯಕ್ಷಮತೆ ಹೇಗಿದೆ ಎಂದು ತಿಳಿದುಕೊಳ್ಳೋಣ.

ವಿನ್ಯಾಸ ಮತ್ತು ರಚನೆ:
ಮೋಟೋ ಇ೩ ಪವರ್‌ನ ವಿನ್ಯಾಸ ಮತ್ತು ರಚನೆಯಲ್ಲಿ ಹೇಳಿಕೊಳ್ಳುವಂತಹ ವಿಶೇಷತೆಗಳೇನೂ ಇಲ್ಲದಿದ್ದರೂ ಗುಣಮಟ್ಟ ಉತ್ತಮವಾಗಿಯೇ ಇದೆ. ಇದರ  ಹಿಂದಿನ ಕವಚ ತೆಗೆಯುವಂತಿದ್ದು, ಬ್ಯಾಟರಿಯನ್ನು ಸಹ ತೆಗೆಯಲು ಅವಕಾಶವಿದೆ. ಇದರಲ್ಲಿ ೨ ಸಿಮ್ ಕಾರ್ಡ್  ಮತ್ತು ಒಂದು ಮೈಕ್ರೋ ಎಸ್ ಡಿ ಕಾರ್ಡ್  ಏಕಕಾಲದಲ್ಲಿ ಬಳಸಬಹುದು.  

ಪ್ರದರ್ಶನ ಪರದೆ: 
ಮೋಟೋ ಇ೩ ಪವರ್‌ನಲ್ಲಿ ಐದು ಇಂಚಿನ ೧೨೮೦*೭೨೦ ಐಪಿಎಸ್  ಪರದೆ ಇದೆ. ಪರದೆಯ ಪ್ರಖರತೆ (ಬ್ರೈಟ್‌ನೆಸ್) ತೃಪ್ತಿದಾಯಕವಾಗಿದ್ದು, ಸುತ್ತಲಿನ ಬೆಳಕಿಗೆ ಸರಿಯಾಗಿ ಪರದೆಯ ಪ್ರಖರತೆಯನ್ನು ಹೊಂದಿಸಿಕೊಳ್ಳುವ ತಂತ್ರಜ್ಞಾನದ  ಕಾರ್ಯಕ್ಷಮತೆಯೂ ಸಮಾಧಾನಕಾರವಾಗಿದೆ. ಬಣ್ಣಗಳ ಮೂಡುವಿಕೆಯೂ ಉತ್ತಮವಾಗಿದೆ.

ತಾಂತ್ರಿಕ ಸಾಮರ್ಥ್ಯ:
ಈ ಸ್ಮಾರ್ಟ್‌ಫೋನಿನಲ್ಲಿ ೧ ಗಿಗಾ ಹರ್ಟ್ಸ್ ಸಾಮರ್ಥ್ಯದ, ನಾಲ್ಕು ತಿರುಳುಗಳ (ಕ್ವಾಡ್  ಕೋರ್) ಮೀಡಿಯಾ ಟೆಕ್ ಎಂ ಟಿ ೬೭೩೫ ಪ್ರಾಸೆಸರ್ ಹಾಗೂ ಗ್ರಾಫಿಕ್ಸ್ ಸಂಸ್ಕರಣೆಗಾಗಿ ಮಾಲಿ ಟಿ ೭೨೦ ಇದೆ. ೨ಜಿಬಿ ರ್‍ಯಾಮ್ ಹಾಗೂ ೧೬ ಜಿಬಿ ಆಂತರಿಕ ಸಂಗ್ರಹಣ ಸಾಮರ್ಥ್ಯ ಇದರಲ್ಲಿದೆ. ಇದಲ್ಲದೆ ೩೨ಜಿಬಿವರೆಗಿನ ಮೈಕ್ರೋ ಎಸ್ ಡಿ ಕಾರ್ಡ್ ಅನ್ನೂ ಬಳಸಬಹುದು. 

೪ಜಿ ಹಾಗೂ ವಿಒಎಲ್‌ಟಿಇ ಸೌಲಭ್ಯಗಳೆರಡೂ ಇರುವ ಈ ಫೋನು ಮೂಲ ಸ್ವರೂಪಕ್ಕೆ  ತುಂಬಾ ಬದಲಾವಣೆ  ಇಲ್ಲದ  ಆಂಡ್ರಾಯ್ಡ್  ೬.೦ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುತ್ತದೆ. ಹೀಗಾಗಿ ಇತರ ಮೋಟರೋಲಾ ಫೋನುಗಳಂತೆಯೇ ಈ ಫೋನ್ ಕೂಡ ಅನಗತ್ಯ ಆಪ್‌ಗಳಿಂದ ಮುಕ್ತವಾಗಿದೆ. 


ಕಾರ್ಯಕ್ಷಮತೆ:
ಮೋಟೋ ಇ೩ ಪವರ್ ಕಾರ್ಯಕ್ಷಮತೆ  ಸಾಮಾನ್ಯವಾಗಿದ್ದು, ದಿನ ನಿತ್ಯದ  ಕೆಲಸಗಳಿಗೆ ತೊಂದರೆ ಇಲ್ಲ. ಆದರೆ ಆಟವಾಡಲು ಈ ಸ್ಮಾರ್ಟ್‌ಫೋನ್ ಉತ್ತಮ ಅಲ್ಲ. ಆಪ್‌ಗಳು ತೆರೆದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ಈಗ ಈ ಬೆಲೆಯಲ್ಲಿ ಲಭ್ಯವಿರುವ  ಬೇರೆ ಫೋನುಗಳ ಹೋಲಿಕೆಯಲ್ಲಿ ಇದರ ಕಾರ್ಯಕ್ಷಮತೆ ಅಷ್ಟೇನೂ ತೃಪ್ತಿದಾಯಕವಾಗಿಲ್ಲ ಎಂದೇ ಹೇಳಬಹುದು. 

ಕ್ಯಾಮೆರಾ:
ಮೋಟೋ ಇ೩ ಪವರ್‌ನಲ್ಲಿರುವುದು f/೨.೨ ಅಪರ್ಚರ್‌ನ ೮ ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ. ಇದರಲ್ಲಿ ಆಟೋಫೋಕಸ್  ಮತ್ತು ಎಲ್ ಇ ಡಿ  ಫ್ಲಾಶ್ ಸೌಲಭ್ಯಗಳಿವೆ. ಮುಂಭಾಗದಲ್ಲಿರುವುದು ೫ ಮೆಗಾಪಿಕ್ಸೆಲ್ ಕ್ಯಾಮೆರಾ. ಆಟೋಫೋಕಸ್ ಮತ್ತು ಶಟರ್ ಸ್ಪೀಡ್ ಸಮಾಧಾನಕಾರವಾಗಿದೆ. ಒಳ್ಳೆಯ ಬೆಳಕಿನಲ್ಲಿ ತೆಗೆದ ಚಿತ್ರಗಳು, ತಕ್ಕಮಟ್ಟಿಗೆ ಚೆನ್ನಾಗಿ ಮೂಡಿಬರುತ್ತದೆ. ಆದರೆ ಕಡಿಮೆ  ಬೆಳಕಿನಲ್ಲಿ ತೆಗೆದ ಚಿತ್ರಗಳು ಸಾಮಾನ್ಯವಾಗಿದೆ. ಮುಂಭಾಗದಲ್ಲಿರುವ  ಕ್ಯಾಮೆರಾ ಗುಣಮಟ್ಟ  ಸಮಾಧಾನಕಾರವಾಗಿಲ್ಲ. 

ಬ್ಯಾಟರಿ: 
ಈ ಫೋನಿನಲ್ಲಿ ೩೫೦೦ ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇದೆ. ಇದನ್ನು ಹೊರತೆಗೆಯುವುದು ಸಾಧ್ಯ. ಮೋಟರೋಲಾ ಸಂಸ್ಥೆಯವರ ಪ್ರಕಾರ ಇದು ಒಂದು ದಿನ ಪೂರ್ತಿಯಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಹೊಂದಿದೆ. ನಮ್ಮ ಪರೀಕ್ಷೆಗಳಲ್ಲೂ  ಬ್ಯಾಟರಿ ಲೈಫ್ ತೃಪ್ತಿದಾಯಕವಾಗಿತ್ತು. ವೇಗವಾಗಿ ಚಾರ್ಜ್ ಮಾಡುವ (ಫಾಸ್ಟ್ ಚಾರ್ಜಿಂಗ್) ಸೌಲಭ್ಯವಿಲ್ಲದಿರುವುದು ಕೊರತೆ ಎನ್ನಿಸುತ್ತದೆ. 

ಸಾರಾಂಶ:
ಮೋಟೋ ಇ೩ ಪವರ್ ಖಂಡಿತವಾಗಿಯೂ ಮೊದಲನೇ ಮತ್ತು ಎರಡನೇ ಆವೃತ್ತಿಯ ಮೋಟೋ ಇ ಹೋಲಿಕೆಯಲ್ಲಿ ಎಲ್ಲಾ ವಿಭಾಗಗಳಲ್ಲೂ ಸುಧಾರಿಸಿದೆ. ಆದರೆ ಇದರ ಬೆಲೆಯ ಆಸುಪಾಸಿನಲ್ಲೇ ದೊರೆಯುವ ಇತರ ಕೆಲ ಮಾದರಿಗಳೊಡನೆ  ತುಲನಾತ್ಮಕವಾಗಿ ನೋಡಿದಾಗ, ಇದರ ಕಾರ್ಯಕ್ಷಮತೆ  ಕೊಂಚ ಕಡಿಮೆಯೇ ಎನಿಸುತ್ತದೆ. 

ಮೋಟೋ ಇ೩ ಪವರ್ ಅನ್ನು ಈ ಕೊಂಡಿ ಬಳಸಿ ನೀವು ಫ್ಲಿಪ್‌ಕಾರ್ಟ್‌ನಲ್ಲಿ ಕೊಳ್ಳಬಹುದು

ಪ್ರಶ್ನೆಗಳಿವೆಯೇ? ಲೇಖಕರನ್ನು ಸಂಪರ್ಕಿಸಲು ಅವರ ಫೇಸ್‌ಬುಕ್ ಪುಟಕ್ಕೆ ಹೋಗಿ; ಅವರ ಜಾಲತಾಣ ಇಲ್ಲಿದೆ.

ಅತಿಥಿ ಅಂಕಣಗಳಲ್ಲಿ ವ್ಯಕ್ತವಾಗುವ ಎಲ್ಲ ಅಭಿಪ್ರಾಯಗಳೂ ಲೇಖಕರ ವೈಯಕ್ತಿಕ ಅನಿಸಿಕೆಗಳು, ಮತ್ತು ಅವಕ್ಕೆ ಇಜ್ಞಾನ ಡಾಟ್ ಕಾಮ್ ಹೊಣೆಯಾಗಿರುವುದಿಲ್ಲ. 

1 ಕಾಮೆಂಟ್‌:

MUDRAJE RAJESH ಹೇಳಿದರು...

Good article.
Blogger has studied the subject in depth which reflects in this article

badge