ಬುಧವಾರ, ನವೆಂಬರ್ 23, 2016

ಮನರಂಜನೆ, ಈಗ ನಮ್ಮ ಅಂಗೈಯಲ್ಲಿ!

ಟಿ. ಜಿ. ಶ್ರೀನಿಧಿ


ನಮ್ಮ ಮನೆಗಳಿಗೆ ಟಿವಿ ಬಂದು ಒಂದೆರಡು ದಶಕಗಳಾಗಿವೆ. ಟಿವಿ ಪರಿಚಯವಾದ ಹೊಸತರಲ್ಲಿ ನಮಗೆ ದೊರಕುತ್ತಿದ್ದದ್ದು ಸೀಮಿತ ಆಯ್ಕೆಗಳಷ್ಟೇ. ಚಿತ್ರಗೀತೆ ಕೇಳಲು ಶುಕ್ರವಾರ ರಾತ್ರಿ, ಸಿನಿಮಾ ನೋಡಲು ಭಾನುವಾರ ಸಂಜೆಗಳಿಗೆ ಕಾಯಬೇಕಿದ್ದ ಸಮಯ ಅದು.

ಆನಂತರ ದೊಡ್ಡ ಊರುಗಳಿಗೆ ಕೇಬಲ್ ಬಂತು, ಕೊಂಚ ಸಮಯದ ನಂತರ ಹಳ್ಳಿಗಳಲ್ಲೂ ಡಿಶ್ ಆಂಟೆನಾಗಳು ಕಾಣಿಸಿಕೊಂಡವು. ಒಂದೇ ಚಾನೆಲ್ ನೋಡಬೇಕಿದ್ದ ಅನಿವಾರ್ಯತೆ ಹೋಗಿ ಹತ್ತಾರು ಚಾನಲ್ಲುಗಳ ಪೈಕಿ ಇಷ್ಟವಾದುದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ನಮಗೆ ಸಿಕ್ಕಿತು. ಈಗಂತೂ ಟಿವಿಯ ಸೆಟ್‌ಟಾಪ್ ಬಾಕ್ಸು ನೂರಾರು ಚಾನಲ್ಲುಗಳ ಲೋಕಕ್ಕೆ ನಮ್ಮನ್ನು ನೇರವಾಗಿ ಕರೆದೊಯ್ಯುತ್ತದೆ.

ಇಷ್ಟೆಲ್ಲ ಬದಲಾವಣೆಯಾದರೂ ನಾವು ಟೀವಿ ಕಾರ್ಯಕ್ರಮಗಳನ್ನು ನೋಡುವ ರೀತಿ ಮಾತ್ರ ತೀರಾ ಈಚಿನವರೆಗೂ ಹೆಚ್ಚೇನೂ ಬದಲಾಗಿರಲಿಲ್ಲ. ನೋಡಲು ಇಷ್ಟವಾಗುವಂತಹ ಕಾರ್ಯಕ್ರಮ ಸಿಗುವವರೆಗೂ ಚಾನಲ್ಲುಗಳನ್ನು ಬದಲಿಸುತ್ತಾ ಹೋಗುವುದು ಈಗಲೂ ನಮ್ಮಲ್ಲಿ ಅನೇಕರ ಅಭ್ಯಾಸ.

ಈ ಪರಿಸ್ಥಿತಿ ಬದಲಿಸಿ, ನಮ್ಮ ಆಯ್ಕೆಯ ಕಾರ್ಯಕ್ರಮವನ್ನು ನಮಗೆ ಬೇಕಾದಾಗ ನೋಡಲು ಅನುವುಮಾಡಿಕೊಟ್ಟಿರುವುದು ವೀಡಿಯೋ ಆನ್ ಡಿಮ್ಯಾಂಡ್ ಎಂಬ ಪರಿಕಲ್ಪನೆ.
ಲಭ್ಯವಿರುವ ಧಾರಾವಾಹಿಗಳು, ಚಲನಚಿತ್ರ ಹಾಗೂ ಇತರ ಕಾರ್ಯಕ್ರಮಗಳ ಪೈಕಿ ಇಷ್ಟವಾದುದನ್ನು ಆರಿಸಿಕೊಂಡು ಅದನ್ನು ನಮ್ಮ ಇಷ್ಟದ ಸಾಧನದಲ್ಲಿ, ನಮಗೆ ಅನುಕೂಲವಾದ ಸಮಯದಲ್ಲಿ ನೋಡುವುದನ್ನು ಈ ಪರಿಕಲ್ಪನೆ ಸಾಧ್ಯವಾಗಿಸುತ್ತದೆ.

ನಮ್ಮಲ್ಲಿ ಅನೇಕರು ಡಿಟಿಎಚ್ ಬಳಸುತ್ತೇವಲ್ಲ, ನಿರ್ದಿಷ್ಟ ಶುಲ್ಕ ಪಾವತಿಸಿ ಚಲನಚಿತ್ರ ವೀಕ್ಷಿಸುವ ಆಯ್ಕೆ ಆ ಪೈಕಿ ಅನೇಕ ಸೇವೆಗಳಲ್ಲಿ ಇರುತ್ತದೆ. ಹಣ ಪಾವತಿಸಿದ ನಂತರ ಮುಂದಿನ ಇಪ್ಪತ್ತನಾಲ್ಕು ಗಂಟೆಗಳಲ್ಲಿ ನಮಗೆ ಅನುಕೂಲವಾದಾಗ ಆ ಚಲನಚಿತ್ರವನ್ನು ನೋಡುವುದು ಈ ಆಯ್ಕೆಯ ವೈಶಿಷ್ಟ್ಯ. ಇದು 'ವೀಡಿಯೋ ಆನ್ ಡಿಮ್ಯಾಂಡ್' ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವ ಅತ್ಯಂತ ಸರಳ ರೂಪಗಳಲ್ಲೊಂದು.

ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿಟ್ಟುಕೊಂಡು ನಮಗೆ ಅನುಕೂಲವಾದಾಗ ವೀಕ್ಷಿಸುವ ಸೌಲಭ್ಯವೂ ಹಲವು ಡಿಟಿಎಚ್ ಸೇವೆಗಳಲ್ಲಿರುತ್ತದೆ. ಇದು ಕೂಡ 'ವೀಡಿಯೋ ಆನ್ ಡಿಮ್ಯಾಂಡ್'ನ ಒಂದು ರೂಪವೇ.

ಅಂದಹಾಗೆ ವೀಡಿಯೋ ಆನ್ ಡಿಮ್ಯಾಂಡ್ ಆಯ್ಕೆ ಲಭ್ಯವಿರುವುದು ಟಿವಿಗಳಲ್ಲಿ ಮಾತ್ರವೇ ಏನಲ್ಲ. ಕಂಪ್ಯೂಟರ್, ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್ ಮೂಲಕವೂ ವೀಡಿಯೋ ಆನ್ ಡಿಮ್ಯಾಂಡ್ ಸೌಲಭ್ಯವನ್ನು ಪಡೆದುಕೊಳ್ಳುವುದು ಸಾಧ್ಯ. ಜಾಲತಾಣ (ವೆಬ್‌ಸೈಟ್) ಹಾಗೂ ಕಿರುತಂತ್ರಾಂಶಗಳ (ಆಪ್) ಮೂಲಕ ಹಲವು ಸಂಸ್ಥೆಗಳು ಇಂತಹ ಸೇವೆಯನ್ನು ಒದಗಿಸುತ್ತಿವೆ. ಯೂಟ್ಯೂಬ್ ಮೂಲಕ ತಮ್ಮ ಕಾರ್ಯಕ್ರಮಗಳನ್ನು ಬಿಡುಗಡೆಗೊಳಿಸುವ ಚಾನಲ್ಲುಗಳೂ ಆ ಮೂಲಕ ವೀಡಿಯೋ ಆನ್ ಡಿಮ್ಯಾಂಡ್‌ನ ಇನ್ನೊಂದು ರೂಪವನ್ನು ತಮ್ಮ ವೀಕ್ಷಕರಿಗೆ ತಲುಪಿಸುತ್ತವೆ ಎನ್ನಬಹುದು.

ಟಿವಿಯಿಂದ ದೂರವಿದ್ದರೂ ಕಾರ್ಯಕ್ರಮಗಳನ್ನು ನೋಡುವುದು, ಚಲನಚಿತ್ರ ವೀಕ್ಷಿಸುವುದು ಇಂತಹ ಸೇವೆಗಳನ್ನು ಬಳಸುವ ಮೂಲಕ ಸಾಧ್ಯವಾಗುತ್ತದೆ. ಮೊಬೈಲ್ ಆಪ್ ಮೂಲಕ ವೀಡಿಯೋ ಆನ್ ಡಿಮ್ಯಾಂಡ್ ಸೌಲಭ್ಯ ಪಡೆದರಂತೂ ಪ್ರಯಾಣಿಸುವಾಗ, ಯಾರಿಗೋ ಕಾಯುವಾಗ, ಕೆಲಸವಿಲ್ಲದೆ ಸುಮ್ಮನೆ ಕುಳಿತಿದ್ದಾಗಲೆಲ್ಲ ಅಂಗೈಯಲ್ಲೇ ಟಿವಿ ಇಟ್ಟುಕೊಂಡಿರುವುದು ಸಾಧ್ಯವಾಗಿಬಿಡುತ್ತದೆ; ದತ್ತಾಂಶದ ಮಿತಿಯೇನೂ ಇಲ್ಲದ ಅತಿವೇಗದ ಅಂತರಜಾಲ ಸಂಪರ್ಕವೊಂದಿದ್ದರೆ ಸಾಕು!

ಅಷ್ಟೇ ಅಲ್ಲ, ನಮಗೆ ಸಾಮಾನ್ಯವಾಗಿ ದೊರಕದ ಚಾನಲ್ಲುಗಳನ್ನು - ಕಾರ್ಯಕ್ರಮಗಳನ್ನು ಸುಲಭವಾಗಿ ವೀಕ್ಷಿಸುವ ಅನುಕೂಲವೂ ವೀಡಿಯೋ ಆನ್ ಡಿಮ್ಯಾಂಡ್ ಸೇವೆಗಳ ಮೂಲಕ ದೊರಕುತ್ತದೆ. ವಿದೇಶಗಳಲ್ಲಷ್ಟೆ ಪ್ರಸಾರವಾಗಿ ನಮ್ಮ ದೇಶದ ಟಿವಿ ಚಾನಲ್ಲುಗಳ ಮೂಲಕ ಇನ್ನೂ ಲಭ್ಯವಿಲ್ಲದ ಕಾರ್ಯಕ್ರಮಗಳೂ ಕೆಲವೊಮ್ಮೆ ಈ ಮೂಲಕ ಲಭ್ಯವಾಗುವುದುಂಟು (ನೆಟ್‌ಫ್ಲಿಕ್ಸ್‌ನಂತಹ ಕೆಲ ಸೇವೆಗಳು ನಿರ್ದಿಷ್ಟ ಕಾರ್ಯಕ್ರಮಗಳನ್ನು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಒದಗಿಸುತ್ತವೆ ಎನ್ನುವುದು ಬೇರೆಯದೇ ಸಂಗತಿ).

ವೀಡಿಯೋ ಆನ್ ಡಿಮ್ಯಾಂಡ್ ಸೌಲಭ್ಯ ಬಳಸಲು ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುವುದು ಸಾಮಾನ್ಯ ಸಂಗತಿ. ಮೇಲೆ ಹೇಳಿದ ಡಿಟಿಎಚ್ ಉದಾಹರಣೆಯಂತೆ ಒಮ್ಮೆ ಚಂದಾಹಣ ಪಾವತಿಸಿದ ನಂತರ ನಿರ್ದಿಷ್ಟ ಅವಧಿಯೊಳಗೆ ವೀಕ್ಷಿಸಲೇಬೇಕೆಂಬ ನಿರ್ಬಂಧ ವಿಧಿಸುವುದೂ ಅಷ್ಟೇ ಸಾಮಾನ್ಯ. ಇನ್ನು ಕೇಬಲ್ ಟಿವಿ - ಡಿಟಿಎಚ್‌ಗಳಂತೆ ತಿಂಗಳು - ವರ್ಷದ ಲೆಕ್ಕದಲ್ಲಿ ಚಂದಾಹಣ ಪಾವತಿಸಿ ವೀಡಿಯೋ ಆನ್ ಡಿಮ್ಯಾಂಡ್ ಸೇವೆಯ ಸದಸ್ಯತ್ವ  ಪಡೆದುಕೊಳ್ಳುವುದೂ ಸಾಧ್ಯವಿದೆ. ಪೂರ್ತಿ ಸೇವೆಯನ್ನು (ಕನಿಷ್ಟಪಕ್ಷ ಕೆಲ ಕಾರ್ಯಕ್ರಮಗಳನ್ನಾದರೂ) ಉಚಿತವಾಗಿ ನೀಡುವ ಹಲವು ವ್ಯವಸ್ಥೆಗಳೂ ಇವೆ.

ಬರಿಯ ಟಿವಿ-ಮೊಬೈಲುಗಳಲ್ಲಷ್ಟೇ ಅಲ್ಲ, ವಿಮಾನದೊಳಗಿನ ಮನರಂಜನಾ ವ್ಯವಸ್ಥೆಗಳಲ್ಲೂ ವೀಡಿಯೋ ಆನ್ ಡಿಮ್ಯಾಂಡ್ ಪರಿಕಲ್ಪನೆ ಬಳಕೆಯಾಗುತ್ತದೆ. ನಮ್ಮ ಇಷ್ಟದ ಟಿವಿ ಕಾರ್ಯಕ್ರಮ - ಚಲನಚಿತ್ರಗಳನ್ನು ವೀಕ್ಷಿಸುವ, ಹಾಡು ಕೇಳುವ, ಆಟಗಳನ್ನು ಆಡುವ ವ್ಯವಸ್ಥೆ ದೂರಪ್ರಯಾಣದ ವಿಮಾನಗಳಲ್ಲಿರುತ್ತದಲ್ಲ, ಅದು ವೀಡಿಯೋ ಆನ್ ಡಿಮ್ಯಾಂಡ್ ಪರಿಕಲ್ಪನೆಯ ಮೊದಲ ಉದಾಹರಣೆಗಳಲ್ಲೊಂದು ಎನ್ನಬಹುದು. ನಂತರದ ದಿನಗಳಲ್ಲಿ ಇಂತಹ ವ್ಯವಸ್ಥೆಗಳು ರೈಲು-ಬಸ್ಸಿನಲ್ಲೂ (ಪ್ರಾಯೋಗಿಕವಾಗಿ ನಮ್ಮ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲೂ) ಬಳಕೆಯಾದದ್ದು ಈಗ ಇತಿಹಾಸ.

ಪ್ರತಿಯೊಬ್ಬ ಪ್ರಯಾಣಿಕನಿಗೂ ಒಂದೊಂದು ಪ್ರತ್ಯೇಕ ಪರದೆ ಒದಗಿಸಿಕೊಡುವುದು ಇಂತಹ ವ್ಯವಸ್ಥೆಗಳ ವೈಶಿಷ್ಟ್ಯ, ಜೊತೆಗೆ ಪ್ರಮುಖ ಸಮಸ್ಯೆ ಕೂಡ. ಇಷ್ಟೆಲ್ಲ ಪರದೆಗಳಿಗೆ ವೆಚ್ಚಮಾಡುವುದು ಒಂದು ವಿಷಯವಾದರೆ ಅವುಗಳ ನಿರ್ವಹಣೆ ಇನ್ನೊಂದು ಸಮಸ್ಯೆ. ಈ ಸಮಸ್ಯೆಯನ್ನು ನಿವಾರಿಸಲು ಹೊರಟರೆ ವಿಮಾನಯಾನ ಸಂಸ್ಥೆಯ ತಲೆನೋವೇನೋ ಕಡಿಮೆಯಾಗುತ್ತದೆ, ಆದರೆ ಹಾಗೆಂದು ಪ್ರಯಾಣಿಕರ ಸೌಲಭ್ಯವನ್ನು ತೆಗೆದುಹಾಕುವಂತೆಯೂ ಇಲ್ಲ. ಸಮಸ್ಯೆಗಳನ್ನೂ ನಿವಾರಿಸಿ ವೀಡಿಯೋ ಆನ್ ಡಿಮ್ಯಾಂಡ್ ವ್ಯವಸ್ಥೆಯನ್ನೂ ಒದಗಿಸುವ ನಿಟ್ಟಿನಲ್ಲಿ ಕೂಡ ಪ್ರಯತ್ನಗಳು ಸಾಗಿವೆ. ಇಂತಹುದೊಂದು ವ್ಯವಸ್ಥೆಯನ್ನು ನಮ್ಮ ದೇಶದ ಜೆಟ್ ಏರ್‌ವೇಸ್ ಸಂಸ್ಥೆ ದೇಶದೊಳಗಷ್ಟೇ ಓಡಾಡುವ ವಿಮಾನಗಳಲ್ಲೂ ಪರಿಚಯಿಸಿರುವುದು ವಿಶೇಷ.

ಮೊಬೈಲು - ಟ್ಯಾಬ್ಲೆಟ್ಟುಗಳಿಗೆ ಸದಾಕಾಲ ಅಂಟಿಕೊಂಡೇ ಇರುವ ನಾವುಗಳು ವಿಮಾನ ಪ್ರಯಾಣದ ಸಂದರ್ಭದಲ್ಲೂ ಅವನ್ನು ಜೊತೆಯಲ್ಲಿ ಕೊಂಡೊಯ್ಯುವುದು ಸಾಮಾನ್ಯ. ಪ್ರಯಾಣದ ಸಂದರ್ಭದಲ್ಲಿ ಮೊಬೈಲ್ ಸಂಕೇತಗಳು ವಿಮಾನದ ಸಂಪರ್ಕ ವ್ಯವಸ್ಥೆಗೆ ಅಡ್ಡಿಪಡಿಸುವ ಸಾಧ್ಯತೆಯಿರುವುದರಿಂದ ಅವನ್ನು ಫ್ಲೈಟ್ ಮೋಡ್‌ನಲ್ಲಿಡಬೇಕಾದ್ದೂ ಅನಿವಾರ್ಯ. ವೀಡಿಯೋ ಆನ್ ಡಿಮ್ಯಾಂಡ್ ಸೌಲಭ್ಯ ಒದಗಿಸಲು ಈ ಸಾಧನಗಳನ್ನೇ ಬಳಸಿಕೊಳ್ಳುವುದು ಜೆಟ್ ಏರ್‌ವೇಸ್ ರೂಪಿಸಿರುವ ವ್ಯವಸ್ಥೆಯ ಉದ್ದೇಶ. ಫ್ಲೈಟ್ ಮೋಡ್‌ನಲ್ಲಿರುವ ಮೊಬೈಲ್, ಟ್ಯಾಬ್ಲೆಟ್ ಇತ್ಯಾದಿಗಳಿಗೆ ಸ್ಥಳೀಯವಾಗಿ ವೈ-ಫೈ ಸಂಪರ್ಕ ಕಲ್ಪಿಸಿ (ಅಂತರಜಾಲ ಸಂಪರ್ಕ ಅಲ್ಲ) ಅದರ ಮೂಲಕ ಚಲನಚಿತ್ರ - ಟಿವಿ ಕಾರ್ಯಕ್ರಮ ಇತ್ಯಾದಿಗಳನ್ನು ನೋಡುವ ಅವಕಾಶವನ್ನು ಈ ವ್ಯವಸ್ಥೆ  ಕಲ್ಪಿಸಿಕೊಡುತ್ತದೆ. ಇದೇ ವ್ಯವಸ್ಥೆಯ ಮೂಲಕ ಆಟಗಳನ್ನು ಆಡುವುದು, ನಮ್ಮ ವಿಮಾನದ - ಅದರ ಪ್ರಯಾಣದ ಕುರಿತು ವಿವರಗಳನ್ನು (ಹಾರಾಟದ ಪ್ರದೇಶ, ಎತ್ತರ, ತಲುಪಲು ಕ್ರಮಿಸಬೇಕಾದ ದೂರ, ತಗುಲಬಹುದಾದ ಸಮಯ ಇತ್ಯಾದಿ) ಪಡೆದುಕೊಳ್ಳುವುದು ಕೂಡ ಸಾಧ್ಯ.

ನವೆಂಬರ್ ೨೦೧೬ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge