ಸೋಮವಾರ, ನವೆಂಬರ್ 28, 2016

ಪವರ್‌ಸ್ಟೋರಿ: ಇದು ಬ್ಯಾಟರಿ ಸಮಾಚಾರ!

ಟಿ. ಜಿ. ಶ್ರೀನಿಧಿ

ಬಾಲ್ಯದ ದಿನಗಳ ವಿಷಯ. ಪಶ್ಚಿಮಘಟ್ಟದ ತಪ್ಪಲಿನ ನಮ್ಮ ಊರಿನಲ್ಲಿ ಹಗಲಿನಲ್ಲೇ ಕರೆಂಟು ಇರುತ್ತಿರಲಿಲ್ಲ, ಇನ್ನು ರಾತ್ರಿ ಸ್ಟ್ರೀಟ್ ಲೈಟಿರುತ್ತದೆಯೇ? ಮನೆಯೊಳಗೆ ಬೆಳಕಿಗಾಗಿ ಸೀಮೆಎಣ್ಣೆ ದೀಪ ಉರಿಸಿದಂತೆ ಹೊರಗಡೆಯ ಸಂಚಾರಕ್ಕೆ ಟಾರ್ಚು ನಮ್ಮ ಅಚ್ಚುಮೆಚ್ಚಿನ ಸಂಗಾತಿಯಾಗಿತ್ತು.

ಟಾರ್ಚನ್ನೇ ಬ್ಯಾಟರಿಯೆಂದು ಕರೆಯುವ ಅಭ್ಯಾಸ ಹಲವರಿಗಿದೆ; ಆದರೆ ನಮಗೆ ಪರಿಚಯವಿದ್ದ ಬ್ಯಾಟರಿ ಟಾರ್ಚಿನೊಳಗಿರುತ್ತದಲ್ಲ, ಅದು (ಕೆಲವರು ಅದನ್ನು ಸೆಲ್ಲು ಅಂತಲೂ ಕರೆಯುತ್ತಾರೆ). ಯಾವತ್ತೋ ಒಂದು ದಿನ ಸಂಜೆಯ ವಾಕಿಂಗ್ ಮುಗಿಸುವ ವೇಳೆಗೆ ಟಾರ್ಚಿನ ಬೆಳಕು ಮಂಕಾಯಿತು ಅನ್ನಿಸಿದರೆ ಹೊಸ ಬ್ಯಾಟರಿ ಕೊಂಡುತರುವ ಕೆಲಸ ನಾಳೆಯ ಕೆಲಸಗಳ ಪಟ್ಟಿಗೆ ಸೇರಿಬಿಡುವುದು.

ನಿಶ್ಶಕ್ತವಾಗಿ ನಿವೃತ್ತಿ ಪಡೆಯುವ ಬ್ಯಾಟರಿಗೆ ವಿದಾಯ ಹೇಳುವ ಕ್ರಮವೂ ನಮ್ಮೂರಿನಲ್ಲಿತ್ತು. ನೆಲಕ್ಕೆ ಸಗಣಿ ನೀರು ಹಾಕಿ ಸಾರಿಸುವವರು ಬಣ್ಣ ಗಾಢವಾಗಿ ಬರಲಿ ಎಂದು ಬ್ಯಾಟರಿಯೊಳಗಿನ ಕಪ್ಪು ಪುಡಿಯನ್ನು ಸಗಣಿ ನೀರಿಗೆ ಬೆರೆಸುತ್ತಿದ್ದರು.

ನಿಶ್ಶಕ್ತ ಬ್ಯಾಟರಿ ಹಾಗಿರಲಿ, ಅಂಗಡಿಗೆ ಹೋಗಿ ಬ್ಯಾಟರಿ ಕೊಳ್ಳುವ ಅಭ್ಯಾಸಕ್ಕೇ ವಿದಾಯ ಹೇಳಬೇಕಾದ ಪರಿಸ್ಥಿತಿ ಮುಂದಿನ ವರ್ಷಗಳಲ್ಲಿ ಬಂತು.

ಟಾರ್ಚಿಗೆ ಬ್ಯಾಟರಿ ಹಾಕಬೇಕಾದ ಅನಿವಾರ್ಯತೆಯನ್ನು ಮೊದಲಿಗೆ ಹೋಗಲಾಡಿಸಿದ್ದು ರೀಚಾರ್ಜ್ ಮಾಡಬಹುದಾದ ಟಾರ್ಚುಗಳು. ಆ ಹೊತ್ತಿಗೆ ವಿದ್ಯುತ್ತಿನ ಪರಿಸ್ಥಿತಿ ಕೊಂಚ ಉತ್ತಮವಾಗಿತ್ತಲ್ಲ, ಕರೆಂಟಿದ್ದ ಕೆಲಹೊತ್ತಿನಲ್ಲೇ ಟಾರ್ಚನ್ನು ಚಾರ್ಜ್ ಮಾಡಿಟ್ಟುಕೊಂಡು ಬಳಸುವ ಅಭ್ಯಾಸ ಶುರುವಾಯಿತು.

ಇನ್ನು ಕೆಲವರ್ಷಗಳ ನಂತರ ಮೊಬೈಲ್ ಬಂತು ನೋಡಿ, ಪರಿಸ್ಥಿತಿ ಇನ್ನಷ್ಟು ಬದಲಾಯಿತು. ಕಿವಿಗಿಟ್ಟರೆ ಫೋನ್ ಆದೆ, ಜೇಬಿನಲ್ಲಿಟ್ಟರೆ ರೇಡಿಯೋ ಆದೆ ಎಂದ ಮೊಬೈಲು ಕೈಲಿ ಹಿಡಿದಾಗ ಟಾರ್ಚೂ ಆಗಿಬಿಟ್ಟಿತು (ನೋಕಿಯಾ ೧೧೦೦ ಮೊಬೈಲನ್ನೆಲ್ಲಾದರೂ ಮರೆಯಲು ಸಾಧ್ಯವೇ?).

ಟಾರ್ಚಿನ ವಿಷಯಕ್ಕಷ್ಟೇ ಸೀಮಿತವಾಗಿ ನೋಡುವುದಾದರೆ ಬ್ಯಾಟರಿಯೊಡನೆ ನಮ್ಮ ಒಂದು ಬಗೆಯ ಒಡನಾಟ ಮೊಬೈಲಿನಿಂದಾಗಿ ಕೊನೆಯಾಯಿತು ನಿಜ. ಆದರೆ ಅದೇ ಸಮಯದಲ್ಲಿ ಇನ್ನೊಂದು ಬಗೆಯ ಬ್ಯಾಟರಿಯೊಡನೆ ಗಾಢವಾದ ಸಂಪರ್ಕ ಬೆಳೆಯಲಿಕ್ಕೂ ಇದೇ ಮೊಬೈಲು ಕಾರಣವಾಯಿತು.

ಹೌದು, ಒಂದಾದ ಮೇಲೆ ಒಂದರಂತೆ ನಮ್ಮ ಬದುಕನ್ನು ಪ್ರವೇಶಿಸಿದ ವಿದ್ಯುನ್ಮಾನ ಉಪಕರಣಗಳು ನಮ್ಮ ಬದುಕನ್ನು ಹೇಗೆ ಸುಲಭಗೊಳಿಸಿದವೋ ಹಾಗೆಯೇ ಗ್ಯಾಜೆಟ್‌ಗಳ ಮೇಲಿನ ನಮ್ಮ ಅವಲಂಬನೆಯನ್ನೂ ಹೆಚ್ಚಿಸಿದವು. ಇವೆಲ್ಲವುದಕ್ಕೂ ಅಗತ್ಯವಾದ ವಿದ್ಯುತ್ ಪೂರೈಸುವ ಬ್ಯಾಟರಿಗಳ ಮೇಲೆಯೂ ನಮ್ಮ ಅವಲಂಬನೆ ಗಮನಾರ್ಹವಾಗಿ ಬೆಳೆಯಿತು.

ರಾಜಕಾರಣಿಗಳನ್ನು ಪವರ್ ಹಂಗ್ರಿ ಎಂದು ಹಂಗಿಸುತ್ತಾರಲ್ಲ, ಸ್ಮಾರ್ಟ್‌ಫೋನ್ ಮತ್ತಿತರ ಗ್ಯಾಜೆಟ್‌ಗಳೂ ಸದಾಕಾಲ ಪವರ್ ಹಂಗ್ರಿ ಆಗಿರುತ್ತವೆ. ಇದಕ್ಕೆ ಕಾರಣ ಮತ್ತೆ ಅದೇ ಬ್ಯಾಟರಿ!

ರಾಕ್ಷಸನ ಜೀವ ಏಳು ಸಮುದ್ರದಾಚೆ ಬಂಗಾರದ ಪಂಜರದಲ್ಲಿರುವ ಗಿಣಿಯಲ್ಲಿರುತ್ತಿತ್ತು ಎನ್ನುವ ಕತೆ ಕೇಳಿದ್ದೇವಲ್ಲ, ಸ್ಮಾರ್ಟ್‌ಫೋನುಗಳ ಜೀವವೂ ಈ ಬ್ಯಾಟರಿಯೆನ್ನುವ ಪಂಜರದೊಳಗೇ ಇರುತ್ತದೆ. ಬ್ಯಾಟರಿ ಫೋನಿನೊಳಗೇ ಇರುವುದರಿಂದ ಏಳು ಸಮುದ್ರದಾಚೆ ಹೋಗುವ ಗೊಡವೆಯೆಲ್ಲ ಇರುವುದಿಲ್ಲ ಎನ್ನುವುದಷ್ಟೆ ವ್ಯತ್ಯಾಸ.

ಈಚಿನ ವರ್ಷಗಳಲ್ಲಿ ಮೊಬೈಲುಗಳು ಎಷ್ಟೆಲ್ಲ ಸ್ಮಾರ್ಟ್ ಆದರೂ, ಬಳಕೆಯಾಗುವ ತಂತ್ರಜ್ಞಾನದಲ್ಲಿ ಏನೆಲ್ಲ ಬದಲಾವಣೆಗಳಾದರೂ ಅವುಗಳ ಬ್ಯಾಟರಿಗಳಲ್ಲಿ ಹಾಗೂ ಒಮ್ಮೆ ಚಾರ್ಜ್ ಮಾಡಿದಾಗ ಅವನ್ನು ಬಳಸಬಹುದಾದ ಕಾಲಾವಧಿಯಲ್ಲಿ ಮಾತ್ರ ಹೆಚ್ಚು ಬದಲಾವಣೆಯೇನೂ ಆಗಿಲ್ಲ. ಹಾಗಾಗಿ ಅದೆಷ್ಟೇ ಸ್ಮಾರ್ಟ್ ಆದ ಮೊಬೈಲ್ ಆದರೂ ಪದೇಪದೇ ಚಾರ್ಜ್ ಮಾಡಬೇಕಾದ, ಚಾರ್ಜರನ್ನು ಜೊತೆಗೇ ಇಟ್ಟುಕೊಂಡಿರಬೇಕಾದ ಅನಿವಾರ್ಯತೆ ಇದ್ದೇ ಇದೆ.

ಬ್ಯಾಟರಿಗಳ ಸಾಮರ್ಥ್ಯವನ್ನು ಎಂಎಎಚ್‌ಗಳಲ್ಲಿ (mಂh) ಅಳೆಯಲಾಗುತ್ತದೆ ಎನ್ನುವುದು ನಮಗೆ ಗೊತ್ತೇ ಇದೆ. ಮೊಬೈಲ್ ಕೊಳ್ಳುವಾಗ ಅದರಲ್ಲಿರುವ ರ್‍ಯಾಮ್ ಎಷ್ಟು, ಕ್ಯಾಮೆರಾ ಎಷ್ಟು ಮೆಗಾಪಿಕ್ಸೆಲಿನದು ಎನ್ನುವುದನ್ನೆಲ್ಲ ನೋಡುವ ಜೊತೆಗೆ ಎಷ್ಟು ಎಂಎಎಚ್‌ನ ಬ್ಯಾಟರಿ ಇದೆ ಎಂದೂ ನೋಡುವುದು ನಮಗೆ ಅಭ್ಯಾಸವಾಗಿದೆ.

ಎಂಎಎಚ್ ಅಂದರೆ ಮಿಲಿ ಆಂಪಿಯರ್ ಅವರ್. ಯಾವುದೇ ಬ್ಯಾಟರಿ - ಪೂರ್ತಿ ಚಾರ್ಜ್ ಆಗಿದ್ದಾಗ - ಎಷ್ಟು ಪ್ರಮಾಣದ ವಿದ್ಯುತ್ತನ್ನು ಎಷ್ಟು ಹೊತ್ತಿನವರೆಗೆ ಪೂರೈಸಬಲ್ಲದು ಎನ್ನುವುದನ್ನು ಇದು ಸೂಚಿಸುತ್ತದೆ.

ವಾಹನಗಳಲ್ಲಿ ಇಂಧನ ಟ್ಯಾಂಕಿನ ಸಾಮರ್ಥ್ಯ ಇರುತ್ತದಲ್ಲ, ಇದೂ ಹಾಗೆಯೇ. ಎರಡು ಲೀಟರ್ ಸಾಮರ್ಥ್ಯದ ಟ್ಯಾಂಕು ಬೈಕಿನಲ್ಲಿದ್ದರೆ ಅಷ್ಟು ಪೆಟ್ರೋಲ್ ತುಂಬಿಸಿ ನಾವು ನೂರು ಕಿಲೋಮೀಟರ್ ಕ್ರಮಿಸಬಹುದು; ಕಾರ್ ಆದರೆ ಇಪ್ಪತ್ತೋ ಮೂವತ್ತೋ ಕಿಲೋಮೀಟರ್ ಹೋಗುವಷ್ಟರಲ್ಲಿ ಇನ್ನೊಂದು ಪೆಟ್ರೋಲ್ ಬಂಕ್ ಹುಡುಕಬೇಕಾಗುತ್ತದೆ.

ಬ್ಯಾಟರಿ ಸಾಮರ್ಥ್ಯವೂ ಅಷ್ಟೆ. ಉದಾಹರಣೆಗೆ ೩೦೦೦ ಎಂಎಎಚ್ ಸಾಮರ್ಥ್ಯದ ಒಂದು ಬ್ಯಾಟರಿಯನ್ನು ತೆಗೆದುಕೊಂಡರೆ ಅದರ ವರ್ತನೆ ಬೇರೆಬೇರೆ ಗ್ಯಾಜೆಟ್‌ಗಳಲ್ಲಿ ಬೇರೆಬೇರೆ ರೀತಿಯಲ್ಲಿರುತ್ತದೆ. ಗಂಟೆಗೆ ೧೦೦ ಮಿಲಿಆಂಪಿಯರ್ ವಿದ್ಯುತ್ ಬೇಡುವ ಗ್ಯಾಜೆಟ್‌ಗೆ ಈ ಬ್ಯಾಟರಿ ೩೦ ಗಂಟೆಗಳ ಕಾಲ ಜೀವತುಂಬಬಲ್ಲದು; ಅದೇರೀತಿ ಗಂಟೆಗೆ ೨೦೦ ಮಿಲಿಆಂಪಿಯರ್ ಬೇಕಾದಾಗ ೧೫ ಗಂಟೆಗಳಲ್ಲೇ ಬ್ಯಾಟರಿ ಖಾಲಿಯಾಗಿಬಿಡುತ್ತದೆ.

ಅಂದರೆ, ಒಮ್ಮೆ ಚಾರ್ಜ್ ಮಾಡಿದ ಮೊಬೈಲಿನ ಬ್ಯಾಟರಿ ಎಷ್ಟು ಹೊತ್ತು ಬಾಳುತ್ತದೆ ಎನ್ನುವುದು ಅದರ ಸಾಮರ್ಥ್ಯದ ಜೊತೆಗೆ ಮೊಬೈಲ್ ಫೋನು ಎಷ್ಟು ಪ್ರಮಾಣದ ವಿದ್ಯುತ್ ಬಳಸುತ್ತದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ.

ಹಾಗಾದರೆ ಮೊಬೈಲ್ ಫೋನು ಕಡಿಮೆ ಪ್ರಮಾಣದ ವಿದ್ಯುತ್ ಬಳಸುವಂತೆ ಮಾಡಿಬಿಟ್ಟರೆ ಸಾಕಲ್ಲ, ರೀಚಾರ್ಜ್ ಸಮಸ್ಯೆ ಪರಿಹಾರವಾಗಿಬಿಡುತ್ತದೆ!

ಆದರೆ ಇದು ಹೇಳಿದಷ್ಟು ಸುಲಭವಲ್ಲ. ಹಿಂದಿನ ಕಾಲದ ಮೊಬೈಲ್ ಫೋನುಗಳ ಕೆಲಸ ಸೀಮಿತವಾಗಿತ್ತು, ವಿದ್ಯುತ್ ಬಳಕೆ ಮಿತಿಯಲ್ಲಿತ್ತು; ಹಾಗಾಗಿ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ ದಿನಗಟ್ಟಲೆ ಆ ಬಗ್ಗೆ ಯೋಚಿಸುವ ಅಗತ್ಯವಿರಲಿಲ್ಲ. ಆದರೆ ಮೊಬೈಲುಗಳು ಸ್ಮಾರ್ಟ್ ಆಗುತ್ತ ಹೋದಂತೆ ಅವುಗಳು ಮಾಡುವ ಕೆಲಸದ ವೈವಿಧ್ಯ ಹಾಗೂ ಪ್ರಮಾಣಗಳೆರಡೂ ಬಹಳ ಜಾಸ್ತಿಯಾಗಿದೆ. ಮೊಬೈಲಿನಲ್ಲೇ ಇರುವ ಹತ್ತಾರು ಸೌಲಭ್ಯಗಳ ಜೊತೆಗೆ ವಿವಿಧ ಆಪ್‌ಗಳೂ ಸೇರಿಕೊಂಡಿವೆ; ಬಳಕೆದಾರರನ್ನು ಮೆಚ್ಚಿಸಲು ಅವುಗಳ ನಡುವೆ ನಡೆದಿರುವ ಪೈಪೋಟಿಯಲ್ಲಿ ವಿದ್ಯುತ್ ಬಳಕೆ ಹೆಚ್ಚುತ್ತಲೇ ಇದೆ.

ಹಾಗೆಂದಮಾತ್ರಕ್ಕೆ ಈ ನಿಟ್ಟಿನಲ್ಲಿ ಯಾರೂ ತಲೆಕೆಡಿಸಿಕೊಂಡಿಲ್ಲ ಎಂದೇನೂ ಅಲ್ಲ. ವಿದ್ಯುತ್ ಬಳಕೆಯಲ್ಲಿ ಮಿತವ್ಯಯ ಸಾಧಿಸಿ ಇದ್ದುದರಲ್ಲೇ ಪರಿಸ್ಥಿತಿ ನಿಭಾಯಿಸಲು ಮೊಬೈಲ್ ಫೋನ್ ತಯಾರಕರು, ಆಪ್ ನಿರ್ಮಾತೃಗಳು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಯಂತ್ರಾಂಶದ (ಹಾರ್ಡ್‌ವೇರ್) ಬದಲಾವಣೆಗಳ ಜೊತೆಗೆ ಬ್ಯಾಟರಿ ಬಳಕೆಯ ಮೇಲೆ ಕಣ್ಣಿಡುವ ತಂತ್ರಾಂಶಗಳೂ (ಸಾಫ್ಟ್‌ವೇರ್) ಬಂದಿವೆ. ಅತಿಯಾಗಿ ಬ್ಯಾಟರಿ ಬಳಸುತ್ತಿರುವ ಸೌಲಭ್ಯಗಳ, ಇನ್ನಿತರ ಮೊಬೈಲ್ ಆಪ್‌ಗಳ ಬಗ್ಗೆ ಬಳಕೆದಾರರನ್ನು ಎಚ್ಚರಿಸುವ ಮೊಬೈಲ್ ಆಪ್‌ಗಳೂ ಇವೆ. ಒಂದು ಬಾರಿ ಚಾರ್ಜ್ ಮಾಡಿದ ಬ್ಯಾಟರಿ ಒಂದೆರಡು ದಿನವಾದರೂ ಬಾಳುತ್ತಿರುವುದು ಇಂತಹ ಪ್ರಯತ್ನಗಳ ಫಲವೇ ಎನ್ನಬೇಕು!

ವಿದ್ಯುತ್ ಬಳಕೆಯ ಪ್ರಮಾಣ ಕಡಿಮೆಯಾಗದಿದ್ದರೆ ಹೋಗಲಿ, ಬ್ಯಾಟರಿ ಸಾಮರ್ಥ್ಯ ಜಾಸ್ತಿಮಾಡಬಹುದಲ್ಲ?

ಇಲ್ಲೂ ಒಂದು ಸಮಸ್ಯೆಯಿದೆ. ಮೊಬೈಲುಗಳೂ ಸೇರಿದಂತೆ ಇಂದಿನ ಬಹುತೇಕ ವಿದ್ಯುನ್ಮಾನ ಉಪಕರಣಗಳಲ್ಲಿ ಬಳಕೆಯಾಗುವುದು ಲಿಥಿಯಂ-ಅಯಾನ್ ಬ್ಯಾಟರಿಗಳು. ಇನ್ನಿತರ ಹಲವು ಬಗೆಯ ಬ್ಯಾಟರಿಗಳಂತೆ ಇಲ್ಲೂ ಬ್ಯಾಟರಿಯ ಗಾತ್ರಕ್ಕೂ ಅದರ ಸಾಮರ್ಥ್ಯಕ್ಕೂ ನಡುವೆ ನೇರ ಸಂಬಂಧ ಇರುತ್ತದೆ. ಅಂದರೆ, ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಬೇಕೆಂದರೆ ಅದರ ಗಾತ್ರವೂ ಹೆಚ್ಚಾಗಬೇಕಾದ್ದು ಅನಿವಾರ್ಯ. ಬ್ಯಾಟರಿ ದೊಡ್ಡದಾದರೆ ಮೊಬೈಲಿನ ಗಾತ್ರ ದೊಡ್ಡದಾಗುತ್ತದೆ, ತೂಕವೂ ಹೆಚ್ಚುತ್ತದೆ. ಆದರೆ ಮೊಬೈಲುಗಳು ಆದಷ್ಟೂ ತೆಳ್ಳಗಿರಬೇಕು, ತೂಕವೂ ಕಡಿಮೆಯಿರಬೇಕು ಎನ್ನುವುದು ಇಂದಿನ ಟ್ರೆಂಡ್. ಹಾಗಾಗಿ ಬ್ಯಾಟರಿ ಸಾಮರ್ಥ್ಯವನ್ನು ನಮಗೆ ಬೇಕಾದಂತೆ ಹೆಚ್ಚಿಸಿಕೊಳ್ಳುವುದು ಕಷ್ಟ.

ಇದೊಳ್ಳೆ ಕತೆಯಾಯಿತಲ್ಲ! ವಿದ್ಯುತ್ ಬಳಕೆಯ ಪ್ರಮಾಣ ಕಡಿಮೆಮಾಡುವುದು ಕಷ್ಟ, ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಇನ್ನೂ ಕಷ್ಟ!!

ಹೋಗಲಿ, ಲಭ್ಯವಿರುವ ಸಾಮರ್ಥ್ಯದ ಬ್ಯಾಟರಿಯನ್ನೇ ಬಳಸೋಣವೆಂದರೆ ಅದನ್ನು ಪದೇಪದೇ ಚಾರ್ಜ್ ಮಾಡುವುದೊಂದು ತಲೆನೋವಿನ ಸಂಗತಿ. ಚಾರ್ಜ್ ಮಾಡಲು ಹೆಚ್ಚಿನ ಸಮಯ ಬೇಕು ಎನ್ನುವುದು ಒಂದು ಸಮಸ್ಯೆಯಾದರೆ ನಿರ್ದಿಷ್ಟ ಫೋನಿಗೆ ನಿರ್ದಿಷ್ಟ ಚಾರ್ಜರ್ ಮತ್ತು ಕೇಬಲ್ಲುಗಳನ್ನೇ ಬಳಸಬೇಕು ಎನ್ನುವುದು ಇನ್ನೊಂದು ಕಿರಿಕಿರಿ.

ಮೊಬೈಲ್ ಫೋನುಗಳೆಲ್ಲ ಸ್ಮಾರ್ಟ್ ಆದಂತೆ ಅವುಗಳ ಬ್ಯಾಟರಿಯನ್ನೂ ಸ್ಮಾರ್ಟ್ ಆಗಿಸುವ ಪ್ರಯತ್ನಗಳಿಗೆ ಪ್ರೇರಣೆಯಾಗಿರುವುದು ಇವೇ ಸಮಸ್ಯೆಗಳು. ಒಮ್ಮೆ ಚಾರ್ಜ್ ಮಾಡಿದ ನಂತರ ದಿನಗಟ್ಟಲೆ ಬಳಸಬಹುದಾದ ಬ್ಯಾಟರಿಗಳು, ಕೇಬಲ್ ಗೊಡವೆಯಿಲ್ಲದೆಯೇ ಚಾರ್ಜ್ ಮಾಡಬಹುದಾದ ಬ್ಯಾಟರಿಗಳನ್ನೆಲ್ಲ ಸೃಷ್ಟಿಸುವುದು ಈ ಪ್ರಯತ್ನಗಳ ಉದ್ದೇಶ. ಫೋನ್ ಚಾರ್ಜ್ ಆಗಲು ಗಂಟೆಗಟ್ಟಲೆ ಕಾಯುವ ಬದಲಿಗೆ ಕೆಲವೇ ಸೆಕೆಂಡುಗಳಲ್ಲಿ ಪೂರ್ತಿ ಚಾರ್ಜ್ ಆಗುವ ಬ್ಯಾಟರಿ ಸಿಕ್ಕರೆ ಹೇಗೆ?

ಈ ಪ್ರಶ್ನೆಗೆ ಉತ್ತರ ಹುಡುಕಲು ಹಲವು ಪ್ರಯತ್ನಗಳು ನಡೆದಿವೆ.

ಈಚೆಗೆ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ 'ಫಾಸ್ಟ್ ಚಾರ್ಜಿಂಗ್' ತಂತ್ರಜ್ಞಾನ ಇಂತಹ ಪ್ರಯತ್ನಗಳಲ್ಲೊಂದು. ಸಾಮಾನ್ಯ ಚಾರ್ಜರುಗಳಿಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಪೂರೈಸುವ ಮೂಲಕ ಬ್ಯಾಟರಿ ಬೇಗ ಚಾರ್ಜ್ ಆಗುವಂತೆ ಮಾಡುವುದು ಈ ತಂತ್ರಜ್ಞಾನದ ಉದ್ದೇಶ. ಸಾಮಾನ್ಯ ಚಾರ್ಜರುಗಳಿಗೆ ಹೋಲಿಸಿದಾಗ ಈ ತಂತ್ರಜ್ಞಾನ ಬಳಸುವ ಚಾರ್ಜರುಗಳು ಬ್ಯಾಟರಿ ಚಾರ್ಜ್ ಮಾಡಲು ಸರಿಸುಮಾರು ಅರ್ಧದಷ್ಟು ಸಮಯವನ್ನಷ್ಟೆ ತೆಗೆದುಕೊಳ್ಳುತ್ತವೆ.

ಈಚೆಗೆ ಕೆಲ ಮೊಬೈಲ್ ತಯಾರಕರು ತಮ್ಮ ಸಂಸ್ಥೆಯ ಮೊಬೈಲುಗಳ ಜೊತೆಗೇ ಫಾಸ್ಟ್ ಚಾರ್ಜರುಗಳನ್ನು ನೀಡುತ್ತಿದ್ದಾರೆ. ತಮ್ಮ ಮೊಬೈಲಿನ ಬ್ಯಾಟರಿ ಎಷ್ಟು ಕಡಿಮೆ ಸಮಯದಲ್ಲಿ ಚಾರ್ಜ್ ಆಗುತ್ತದೆ ಎಂದು ಹೇಳಿಕೊಳ್ಳುವುದು ಮೊಬೈಲ್ ಜಾಹೀರಾತುಗಳಲ್ಲಿ ಪ್ರಮುಖವಾಗಿ ಕಾಣಸಿಗುತ್ತಿರುವ ಅಂಶಗಳಲ್ಲೊಂದು. ಹೆಚ್ಚಿನ ವಿದ್ಯುತ್ ಪೂರೈಸುವ ಭರಾಟೆಯಲ್ಲಿ ಬ್ಯಾಟರಿ ಹಾಳಾಗದಂತೆ, ಶಾರ್ಟ್ ಸರ್ಕ್ಯೂಟಿನಂತಹ ಅವಘಡಗಳೆಲ್ಲ ಸಂಭವಿಸಿದಂತೆ ನೋಡಿಕೊಳ್ಳುವ ಪೂರಕ ಯಂತ್ರಾಂಶಗಳನ್ನೂ ಇಂದಿನ ಫೋನುಗಳಲ್ಲಿ ನೋಡಬಹುದು.

ಕೆಲ ಮೊಬೈಲುಗಳ ಜೊತೆಗೆ ತಯಾರಕರು ಫಾಸ್ಟ್ ಚಾರ್ಜರ್ ನೀಡದಿದ್ದರೂ ಮಾರುಕಟ್ಟೆಯಲ್ಲಿ ದೊರಕುವ ಬೇರೆ ಚಾರ್ಜರ್ ಬಳಸಿ ಅವನ್ನೂ ಬೇಗನೆ ಚಾರ್ಜ್ ಮಾಡಿಕೊಳ್ಳಬಹುದು.

ಮೊಬೈಲನ್ನು ಚಾರ್ಜ್ ಮಾಡುವುದೆಂದರೆ ಅದಕ್ಕೆ ಬೇಕಾದ ಚಾರ್ಜರ್ ಮತ್ತು ಕೇಬಲ್ಲುಗಳನ್ನು ಸದಾಕಾಲ ನಮ್ಮ ಜೊತೆಗೇ ಇಟ್ಟುಕೊಂಡಿರಬೇಕಾದ ಅನಿವಾರ್ಯತೆಯೊಡನೆ ಬದುಕುವುದು. ಚಾರ್ಜರುಗಳೇನೋ ಬಹುಪಾಲು ಎಲ್ಲ ಕೇಬಲ್‌ಗಳಿಗೂ ಹೊಂದುವಂತಿರುತ್ತವೆ ಸರಿ, ಆದರೆ ಕೇಬಲ್ಲುಗಳು ಹಾಗಲ್ಲವಲ್ಲ! ನಮ್ಮ ಬಳಿಯಿರುವುದು ಐಫೋನ್ ಅಥವಾ ಯುಎಸ್‌ಬಿ ಟೈಪ್-ಸಿ ಕೇಬಲ್ ಬಳಸುವ ಫೋನ್ ಆದರಂತೂ ಬೇರೊಬ್ಬರಿಂದ ಕೇಬಲ್ ಸಾಲಕೇಳುವಂತೆಯೂ ಇಲ್ಲ.

ಈ ಪರಿಸ್ಥಿತಿ ತಪ್ಪಿಸುವುದು ಹೇಗೆ ಎಂದು ಯೋಚಿಸಿದ ವಿಜ್ಞಾನಿಗಳು ರೂಪಿಸಿದ್ದು ಕೇಬಲ್ ಚುಚ್ಚದೆಯೇ ಚಾರ್ಜ್ ಮಾಡಬಲ್ಲ ಚಾರ್ಜರುಗಳನ್ನು. ಕೇಬಲ್‌ನ ಒಂದು ತುದಿಯನ್ನು ಚಾರ್ಜರಿಗೂ ಇನ್ನೊಂದನ್ನು ಮೊಬೈಲಿಗೂ ಚುಚ್ಚಿಡುವ ಬದಲು ಇಲ್ಲಿ ಪುಟ್ಟದೊಂದು ಫಲಕದ (ಚಾರ್ಜಿಂಗ್ ಪ್ಯಾಡ್) ಮೇಲೆ ಮೊಬೈಲನ್ನು ಇಟ್ಟರೆ ಸಾಕು, ಅದು ಚಾರ್ಜ್ ಆಗಲು ಶುರುವಾಗುತ್ತದೆ!

ಅಡುಗೆಮನೆಯ ಆಧುನಿಕ ಒಲೆಯಂತೆ ಇಲ್ಲೂ ಬಳಕೆಯಾಗುವುದು ಇಂಡಕ್ಷನ್ (ಪ್ರೇರಣೆ) ಎಂಬ ವಿದ್ಯಮಾನ. ಇಂಡಕ್ಷನ್ ಒಲೆಯಲ್ಲಿ ಈ ವಿದ್ಯಮಾನ ಆಹಾರ ಪದಾರ್ಥಗಳನ್ನು ಬಿಸಿಮಾಡಿದರೆ ಮೊಬೈಲ್ ಚಾರ್ಜರಿನಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಕೇಬಲ್ ಚುಚ್ಚುವ ಅಗತ್ಯವಿಲ್ಲದ್ದರಿಂದ ಈ ಪ್ರಕ್ರಿಯೆಯನ್ನು ನಿಸ್ತಂತು (ವೈರ್‌ಲೆಸ್) ಚಾರ್ಜಿಂಗ್ ಎಂದು ಕರೆಯುವ ಅಭ್ಯಾಸವೂ ಇದೆ (ಗಮನಿಸಿ: ಎಲ್ಲ ಗ್ಯಾಜೆಟ್‌ಗಳನ್ನೂ ಈ ವಿಧಾನದ ಮೂಲಕ ಚಾರ್ಜ್ ಮಾಡುವಂತಿಲ್ಲ್ಲ; ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುವ ಮಾದರಿಗಳು ಮಾತ್ರವೇ ಹೀಗೆ ಚಾರ್ಜ್ ಆಗಬಲ್ಲವು. ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಬಳಸಿ ಇತರ ಸಾಧನಗಳನ್ನೂ ಚಾರ್ಜ್ ಮಾಡಲು ಕೆಲ ಹೆಚ್ಚುವರಿ ಸಲಕರಣೆಗಳು 'ಇ-ಬೇ'ಯಂತಹ ತಾಣಗಳಲ್ಲಿ ಸಿಗುತ್ತವಾದರೂ ಅದನ್ನು ನಮ್ಮ ಜವಾಬ್ದಾರಿ ಹಾಗೂ ಎಚ್ಚರಿಕೆಯಲ್ಲೇ ಬಳಸಬೇಕು).

ಫಾಸ್ಟ್ ಚಾರ್ಜಿಂಗ್ ಆಗಲಿ ವೈರ್‌ಲೆಸ್ ಚಾರ್ಜಿಂಗ್ ಆಗಲಿ ಯಾವುದೋ ಒಂದು ಬಗೆಯ ಚಾರ್ಜರನ್ನು ಬಳಸಬೇಕಾದ್ದು ಅನಿವಾರ್ಯ. ಸಹಜವಾಗಿಯೇ ಆ ಚಾರ್ಜರ್ ಕೆಲಸಮಾಡಲು ವಿದ್ಯುತ್ತಿನ ಮೂಲವೂ ಇರಲೇಬೇಕು. ಕರೆಂಟಿಲ್ಲದ ದಿನಗಳಲ್ಲಿ, ಇಲ್ಲವೇ ಹೊರಸಂಚಾರದಲ್ಲಿದ್ದಾಗ ವಿದ್ಯುತ್ ಪೂರೈಸುವುದು ಹೇಗೆ?

ಇದಕ್ಕೂ ಕೆಲ ಮಾರ್ಗಗಳು ರೂಪುಗೊಂಡಿವೆ. ವಾಹನಗಳಲ್ಲಿ ಮೊಬೈಲ್ ಚಾರ್ಜಿಂಗ್ ಸೌಲಭ್ಯ ಇದಕ್ಕೊಂದು ಉದಾಹರಣೆ. ಕಾರು, ಬಸ್ಸು, ರೈಲು ಎಲ್ಲಕಡೆಯೂ ಈ ಸೌಲಭ್ಯವನ್ನು ನಾವು ನೋಡಬಹುದು. ಅಷ್ಟೇ ಏಕೆ, ಬಸ್ಸು-ರೈಲು-ವಿಮಾನ ನಿಲ್ದಾಣಗಳಲ್ಲೂ ಚಾರ್ಜಿಂಗ್ ಕೇಂದ್ರಗಳನ್ನು ಇಟ್ಟಿರುತ್ತಾರೆ. ಕಾರಿನಲ್ಲಿ ಚಾರ್ಜ್ ಮಾಡುತ್ತೇವೆ ಎನ್ನುವವರಿಗೆ ಫಾಸ್ಟ್ ಚಾರ್ಜರುಗಳು ಲಭ್ಯವಿವೆ. ಕೆಲವು ಮಾದರಿಯ ಸ್ಕೂಟರುಗಳಲ್ಲೂ ಇದೀಗ ಮೊಬೈಲ್ ಚಾರ್ಜಿಂಗ್ ಸೌಲಭ್ಯ ಇದೆ!

ಇದಕ್ಕಿಂತ ಹೆಚ್ಚು ಜನಪ್ರಿಯವಾಗಿರುವ ಇನ್ನೊಂದು ವ್ಯವಸ್ಥೆಯೆಂದರೆ ಪವರ್ ಬ್ಯಾಂಕ್. ಪ್ರಯಾಣ ಕಾರಿನಲ್ಲೇ ಆಗಲಿ, ಕಾಲುನಡಿಗೆಯದ್ದೇ ಆಗಲಿ ಬೇಕೆಂದಾಗ ಬೇಕಾದ ಕಡೆ ಮೊಬೈಲ್ ಚಾರ್ಜ್ ಮಾಡಿಕೊಳ್ಳುವುದು ಈ ಸಾಧನಗಳಿಂದಾಗಿ ಸಾಧ್ಯವಾಗಿದೆ.

ಪವರ್ ಬ್ಯಾಂಕ್ ಎನ್ನುವುದು ಮೂಲತಃ ಮೊಬೈಲಿನಿಂದ ಹೊರಗಿರುವ ಇನ್ನೊಂದು ಬ್ಯಾಟರಿ, ಅಷ್ಟೆ. ಆದರೆ ಈ ಬ್ಯಾಟರಿಯ ಸಾಮರ್ಥ್ಯ ಮೊಬೈಲಿನ ಬ್ಯಾಟರಿಗಿಂತ ನಾಲ್ಕಾರು ಪಟ್ಟು ಹೆಚ್ಚಿರುತ್ತದೆ. ಇದರಿಂದಾಗಿಯೇ ಪವರ್ ಬ್ಯಾಂಕನ್ನು ಒಮ್ಮೆ ಚಾರ್ಜ್ ಮಾಡಿಟ್ಟುಕೊಂಡು ಅದರಿಂದ ನಮ್ಮ ಮೊಬೈಲನ್ನು ಹಲವಾರು ಬಾರಿ ಚಾರ್ಜ್ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

ಪವರ್‌ಬ್ಯಾಂಕಿನಲ್ಲಿರುವುದು ಹೆಚ್ಚು ಸಾಮರ್ಥ್ಯದ ಬ್ಯಾಟರಿ, ಹಾಗಾಗಿ ಅದು ಚಾರ್ಜ್ ಆಗಲು ಬೇಕಾದ ಸಮಯವೂ ಹೆಚ್ಚು. ಆದರೆ ಪವರ್ ಬ್ಯಾಂಕ್ ಬಳಸಿ ಮೊಬೈಲನ್ನು ಚಾರ್ಜ್ ಮಾಡುವುದು ನಿಧಾನ ಆಗುವಂತಿಲ್ಲವಲ್ಲ, ಹಾಗಾಗಿ ಹಲವಾರು ಪವರ್ ಬ್ಯಾಂಕುಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇರುತ್ತದೆ. ತನ್ನಲ್ಲಿ ಶೇಖರವಾಗಿರುವ ಶಕ್ತಿಯನ್ನು ಹೆಚ್ಚು ವೇಗವಾಗಿ ವರ್ಗಾಯಿಸುವ ಮೂಲಕ ಇಂತಹ ಪವರ್‌ಬ್ಯಾಂಕು ಮೊಬೈಲನ್ನು ಬೇಗನೆ ಚಾರ್ಜ್ ಮಾಡಬಲ್ಲದು.

ಮೊಬೈಲನ್ನಂತೂ ಎಲ್ಲ ಕಡೆ ಕೊಂಡೊಯ್ಯಬೇಕು ಸರಿ, ಅದರ ಜೊತೆಗೆ ಚಾರ್ಜರ್ ಹಾಗೂ ಕೇಬಲ್ಲುಗಳನ್ನೂ ಕೊಂಡೊಯ್ಯುತ್ತೇವೆ; ಆದರೆ ಅವೆಲ್ಲದರ ಜೊತೆಗೆ ಈ ಪವರ್‌ಬ್ಯಾಂಕನ್ನೂ ಹೊತ್ತೊಯ್ಯುವುದು ಕಿರಿಕಿರಿ ಎನ್ನುವುದು ಹಲವರ ಸಮಸ್ಯೆ. ಈ ಸಮಸ್ಯೆಗೂ ಕೆಲ ಪರಿಹಾರಗಳಿವೆ: ಮೊಬೈಲ್ ಕವರ್ ಇರುತ್ತದಲ್ಲ, ಅದರಲ್ಲೇ ಒಂದಷ್ಟು ಹೆಚ್ಚುವರಿ ಸಾಮರ್ಥ್ಯದ ಬ್ಯಾಟರಿ ಅಳವಡಿಸುವುದು ಇದಕ್ಕೊಂದು ಉದಾಹರಣೆ. ಐಫೋನ್ ಸೇರಿದಂತೆ ಹಲವು ಮಾದರಿಯ ಮೊಬೈಲುಗಳಿಗೆ ಇಂತಹ 'ಬ್ಯಾಟರಿ ಕೇಸ್'ಗಳು ದೊರಕುತ್ತವೆ. ಕೆಲ ಮಾಡ್ಯುಲರ್ ಫೋನ್ ಮಾದರಿಗಳಲ್ಲಿ ಹೆಚ್ಚುವರಿ ಬ್ಯಾಟರಿ ಅಳವಡಿಸಿಕೊಳ್ಳುವ ಆಯ್ಕೆಯೂ ಇದೆ.

ಮೊಬೈಲಿನ ಗಾತ್ರವನ್ನು ಕೊಂಚ ಹೆಚ್ಚಿಸಿ ಅದರಲ್ಲಿ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಅಳವಡಿಸುವ ಪ್ರಯತ್ನಗಳನ್ನೂ ಹಲವಾರು ಮೊಬೈಲ್ ತಯಾರಕರು ಮಾಡಿದ್ದಾರೆ. ಸಾಮಾನ್ಯಕ್ಕಿಂತ ಒಂದೂವರೆ - ಎರಡು ಪಟ್ಟು ಸಾಮರ್ಥ್ಯದ ಬ್ಯಾಟರಿಗಳನ್ನು ನಾವು ಈಗ ಅನೇಕ ಮೊಬೈಲುಗಳಲ್ಲಿ ನೋಡಬಹುದು. ಇಂತಹ ಕೆಲವು ಮೊಬೈಲುಗಳು ಸ್ವತಃ ಪವರ್ ಬ್ಯಾಂಕಿನಂತೆಯೂ ಕೆಲಸ ಮಾಡಬಲ್ಲವು; ಅಂದರೆ, ಒಂದು ಮೊಬೈಲಿನಿಂದ ಇನ್ನೊಂದು ಮೊಬೈಲನ್ನು ಚಾರ್ಜ್ ಮಾಡಿಕೊಳ್ಳುವುದು ಸಾಧ್ಯ (ಕಡಿಮೆ ಸಾಮರ್ಥ್ಯದ ಬ್ಯಾಟರಿಯಿರುವ ಮೊಬೈಲಿನಿಂದಲೂ ಇನ್ನೊಂದು ಮೊಬೈಲ್ ಚಾರ್ಜ್ ಮಾಡಲು ಅನುವುಮಾಡಿಕೊಡುವ ಸಾಧನಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇಂತಹ ಸಾಧನಗಳನ್ನು, ಈಗಾಗಲೇ ಹೇಳಿದಂತೆ, ನಮ್ಮ ಜವಾಬ್ದಾರಿ ಹಾಗೂ ಎಚ್ಚರಿಕೆಯಲ್ಲೇ ಬಳಸಬೇಕು ಅಷ್ಟೆ!).

ಮೇಲೆ ಹೇಳಿದ ಎಲ್ಲ ವಿಧಾನಗಳಲ್ಲೂ ಮೊಬೈಲನ್ನು (ಅಥವಾ ಇನ್ನಾವುದೇ ಗ್ಯಾಜೆಟ್ ಅನ್ನು) ಚಾರ್ಜ್ ಮಾಡಲು ಒಂದಲ್ಲ ಒಂದು ರೀತಿಯ ಚಾರ್ಜರ್ ಬಳಸುವುದು ಅನಿವಾರ್ಯ. ಹಾಗಾದರೆ ಚಾರ್ಜರ್ ಬಳಸದೆ ಫೋನನ್ನು ಚಾರ್ಜ್ ಮಾಡುವುದು ಸಾಧ್ಯವೇ ಇಲ್ಲವೆ?

ಯಾಕಿಲ್ಲ ಎನ್ನುತ್ತಾರೆ ತಂತ್ರಜ್ಞರು. ಹಳೆಯಕಾಲದ ರೇಡಿಯೋ, ಹೊಸಕಾಲದ ವೈ-ಫಿಗಳೆಲ್ಲ ಗಾಳಿಯಿಂದಲೇ ಸಂಕೇತಗಳನ್ನು ಹಿಡಿದುಕೊಳ್ಳುತ್ತವಲ್ಲ; ಅಂತಹ ಸಂಕೇತಗಳನ್ನೇ ಬಳಸಿ ಬ್ಯಾಟರಿ ಚಾರ್ಜ್ ಮಾಡುವ ನಿಟ್ಟಿನಲ್ಲೂ ಹಲವು ಪ್ರಯತ್ನಗಳು ಸಾಗಿವೆ. ದೇಹದ ಶಾಖ, ಸುತ್ತಮುತ್ತಲಿನ ಶಬ್ದ ಇತ್ಯಾದಿಗಳನ್ನೆಲ್ಲ ಬಳಸಿಕೊಂಡು ಚಾರ್ಜ್ ಆಗುವ ಬ್ಯಾಟರಿ ತಂತ್ರಜ್ಞಾನಗಳೂ ಪ್ರಾಯೋಗಿಕ ಹಂತದಲ್ಲಿವೆ. ಮಾನವ ಮೂತ್ರದಿಂದ ಚಾರ್ಜ್ ಆಗುವ ಬ್ಯಾಟರಿಯೂ ಇದೆಯಂತೆ!

ಲಭ್ಯವಿರುವಷ್ಟೇ ಬ್ಯಾಟರಿ ಸಾಮರ್ಥ್ಯವನ್ನು ಆದಷ್ಟೂ ಮಿತವಾಗಿ ಬಳಸುವ, ಆ ಮೂಲಕ ಬ್ಯಾಟರಿ ಹೆಚ್ಚುಕಾಲ ಬಾಳಿಕೆಬರುವಂತೆ ಮಾಡುವ ತಂತ್ರಜ್ಞಾನಗಳೂ ತಯಾರಾಗುತ್ತಿವೆ. ಇಂದಿನ ಗಾತ್ರದ ಲಿಥಿಯಂ-ಅಯಾನ್ ಬ್ಯಾಟರಿಗಳಲ್ಲೇ ಹೆಚ್ಚಿನ ಸಾಮರ್ಥ್ಯವನ್ನು ಒದಗಿಸುವುದಷ್ಟೇ ಅಲ್ಲ, ಬ್ಯಾಟರಿಗಳಲ್ಲಿ ಹೊಸ ವಸ್ತುಗಳನ್ನು ಬಳಸುವ ಮೂಲಕ ಹೆಚ್ಚಿನ ಸಾಮರ್ಥ್ಯವನ್ನು ಸಾಧ್ಯವಾಗಿಸುವ ಪ್ರಯತ್ನಗಳು ಕೂಡ ನಡೆಯುತ್ತಿದೆ. ಸೋಡಿಯಂ-ಅಯಾನ್ ಬ್ಯಾಟರಿ, ಸಾಲಿಡ್ ಸ್ಟೇಟ್ ಬ್ಯಾಟರಿ, ಅಲ್ಯೂಮಿನಿಯಂ ಗ್ರಾಫೈಟ್ ಬ್ಯಾಟರಿಗಳೆಲ್ಲವುದರ ಹುಟ್ಟಿಗೆ ಕಾರಣವಾಗಿರುವುದು ಇಂತಹವೇ ಪ್ರಯತ್ನಗಳು. ಹೊಸ ವಸ್ತುಗಳನ್ನು ಬಳಸುವಾಗ ಉಪದ್ರವಕಾರಿ ರಾಸಾಯನಿಕಗಳ ಬದಲಿಗೆ ಪರಿಸರಸ್ನೇಹಿ ವಸ್ತುಗಳಿಗೆ ಪ್ರಾಶಸ್ತ್ಯನೀಡುವ, ನ್ಯಾನೋತಂತ್ರಜ್ಞಾನದಂತಹ ಹೊಸ ಆವಿಷ್ಕಾರಗಳನ್ನು ಬಳಸಿಕೊಳ್ಳುವ ಯತ್ನಗಳೂ ಸಾಗಿವೆ.

ಸುತ್ತಲಿನ ಪರಿಸರದ ನೀರು - ಗಾಳಿಯನ್ನೆಲ್ಲ ಬಳಸಿ ಚಾರ್ಜ್ ಆಗುವ ಬ್ಯಾಟರಿಗಳೂ ತಯಾರಾಗುತ್ತಿವೆ. ಲಿಥಿಯಂ-ಅಯಾನ್ ಬ್ಯಾಟರಿಗಿಂತ ಹತ್ತಾರು ಪಟ್ಟು ಹೆಚ್ಚು ಸಾಮರ್ಥ್ಯವಿರುವ, ಹತ್ತಾರು ಪಟ್ಟು ಬೇಗನೆ ಚಾರ್ಜ್ ಆಗುವ ಅಲ್ಯೂಮಿನಿಯಂ-ಏರ್ ಬ್ಯಾಟರಿಗಳು ಇದಕ್ಕೊಂದು ಉದಾಹರಣೆ. ಈ ಬ್ಯಾಟರಿಗಳು ಬರಿಯ ನೀರಿನಿಂದಲೇ ಚಾರ್ಜ್ ಆಗುತ್ತವಂತೆ!

ಫೋನಿನೊಳಗೇ ಸೋಲಾರ್ ಚಾರ್ಜಿಂಗ್ ಸೆಲ್‌ಗಳನ್ನು ಅಳವಡಿಸಿ ಆ ಫೋನನ್ನು ಬೆಳಕಿನಲ್ಲಿ ಇಡುವುದರಿಂದಲೇ ಬ್ಯಾಟರಿ ಒಂದಷ್ಟು ಚಾರ್ಚ್ ಆಗುವಂತೆ ಮಾಡುವ ಆಲೋಚನೆ ಕೂಡ ಇದೆ. ಸೋಲಾರ್ ಪವರ್‌ಬ್ಯಾಂಕುಗಳಂತೂ ಈಗಾಗಲೇ ಮಾರುಕಟ್ಟೆಗೆ ಬಂದುಬಿಟ್ಟಿವೆ. ಫೋನಿನ ಪರದೆಗೆ ಸ್ಕ್ರೀನ್ ಗಾರ್ಡ್ ಹಾಕಿಸುತ್ತೇವಲ್ಲ, ಅದರಲ್ಲೇ ಸೋಲಾರ್ ಸೆಲ್‌ಗಳನ್ನು ಸೇರಿಸಿಡುವುದು ಮತ್ತು ಆ ಮೂಲಕ ಮೊಬೈಲನ್ನು ಚಾರ್ಜ್ ಮಾಡಿಕೊಳ್ಳುವುದು ಸಾಧ್ಯ ಎಂದು ವಿಜ್ಞಾನಿಗಳು ಪ್ರಾಯೋಗಿಕವಾಗಿ ತೋರಿಸಿದ್ದಾರೆ.

ಬ್ಯಾಟರಿಗಳ ಗಾತ್ರವನ್ನು ಕಡಿಮೆಮಾಡುವುದು ಇದೀಗ ನಡೆಯುತ್ತಿರುವ ಇನ್ನು ಕೆಲ ಪ್ರಯತ್ನಗಳ ಉದ್ದೇಶ. ಬ್ಯಾಟರಿ ದಪ್ಪಗೆ ಗಟ್ಟಿಯಾಗಿರದೆ ತೆಳ್ಳಗೆ ಬಳುಕುವಂತಿದ್ದರೆ ಅದನ್ನು ಎಲ್ಲಿ ಬೇಕಿದ್ದರೂ ಸೇರಿಸಬಹುದಲ್ಲ! ಇದೇ ಯೋಚನೆಯನ್ನಿಟ್ಟುಕೊಂಡು ನಾವು ಧರಿಸುವ ಉಡುಪಿನಲ್ಲಿ, ಕೈಗೆ ಕಟ್ಟುವ ವಾಚಿನ ಪಟ್ಟಿಯಲ್ಲೆಲ್ಲ ಬ್ಯಾಟರಿಗಳನ್ನು ಅಳವಡಿಸುವ ಪ್ರಯತ್ನ ಸಾಗಿದೆ. ಫೋನನ್ನು ಬಹಳಷ್ಟು ಸಮಯ ನಮ್ಮ ಜೇಬಿನಲ್ಲೇ ಇಟ್ಟುಕೊಂಡಿರುತ್ತೇವಲ್ಲ, ಆ ಜೇಬಿನೊಳಕ್ಕೇ ಒಂದು ಚಾರ್ಜರ್ ಅಳವಡಿಸಿಬಿಟ್ಟರೆ ಹೇಗೆ ಎಂದು ಯೋಚಿಸಿದವರೂ ಇದ್ದಾರೆ.

ಕಂಪ್ಯೂಟರುಗಳು ಅಂಗೈಗೆ ಬಂದು ಫೋನುಗಳಾದಂತೆ ಫೋನುಗಳು ಇದೀಗ ಸ್ಮಾರ್ಟ್‌ವಾಚುಗಳಾಗಿ ಮುಂಗೈಗೆ ಬರುತ್ತಿವೆಯಲ್ಲ, ಈ ಬದಲಾವಣೆಯಿಂದಾಗಿ ಬ್ಯಾಟರಿಗಳು ಹೆಚ್ಚುಹೆಚ್ಚು ಬಾಳಿಕೆ ಬರುವಂತೆ ಮಾಡುವ ಅನಿವಾರ್ಯತೆ ತಂತ್ರಜ್ಞರಿಗೆ ಎದುರಾಗಿದೆ. ಈ ನಿಟ್ಟಿನಲ್ಲಿ ಅವರು ನಡೆಸಲಿರುವ ಪ್ರಯತ್ನಗಳು ಮೊಬೈಲಿನಲ್ಲಷ್ಟೇ ಅಲ್ಲದೆ ಇತರ ಕ್ಷೇತ್ರಗಳಿಗೂ (ಉದಾ: ಬ್ಯಾಟರಿ ಚಾಲಿತ ವಾಹನಗಳು) ಉಪಯುಕ್ತವಾಗಬಲ್ಲವು; ಹಾಗಾಗಿ ಅವು ಒಂದಲ್ಲ ಒಂದು ರೀತಿಯಲ್ಲಿ ನಮಗೆ ನೆರವಾಗುವುದಂತೂ ಖಂಡಿತ. ಅದೇನೂ ಇಲ್ಲದಿದ್ದರೂ ಪರವಾಗಿಲ್ಲ: ಐದು ನಿಮಿಷದಲ್ಲಿ ಚಾರ್ಜ್ ಆಗಿ ವಾರವಿಡೀ ಬಾಳಿಕೆ ಬರುವ ಬ್ಯಾಟರಿಯಿರುವ ಫೋನು ಯಾರಿಗೆ ತಾನೆ ಬೇಡ, ಹೇಳಿ?

೨೦೧೬ರ ತರಂಗ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನದ ಸುಧಾರಿತ ರೂಪ

1 ಕಾಮೆಂಟ್‌:

Chinnamma Baradhi ಹೇಳಿದರು...

ಟಿ. ಜಿ. ಶ್ರೀನಿಧಿ ಯವರ "ಪವರ್‌ಸ್ಟೋರಿ" ತು೦ಬಾ ಪವರ್ ಫುಲ್ಲಾಗಿ ಸುಶ್ರಾವ್ಯ ಕಥೆಯ೦ತೆ ಇತ್ತು.
ಅನೇಕ ಮಾಹಿತಿಗಳನ್ನುಳ್ಳ ಉತ್ತಮ ಬರಹ.
ಧನ್ಯವಾದಗಳು.

badge