ಮಂಗಳವಾರ, ಅಕ್ಟೋಬರ್ 18, 2016

ಮೋಟರೋಲಾದಿಂದ ಹೊಸ ಮಾಡ್ಯುಲರ್ ಫೋನು!

ಟಿ. ಜಿ. ಶ್ರೀನಿಧಿ


ಇಂದಿನ ಸ್ಮಾರ್ಟ್‌ಫೋನುಗಳು ಎಷ್ಟೆಲ್ಲ ಕೆಲಸಮಾಡುತ್ತವೆ: ಸಿನಿಮಾ ನೋಡುವ ಪರದೆಯಾಗಿ, ಛಾಯಾಚಿತ್ರ ಸೆರೆಹಿಡಿವ ಕ್ಯಾಮೆರಾ ಆಗಿ, ಆಟವಾಡುವ ಸಾಧನವಾಗಿ - ಅವು ಬಳಕೆಯಾಗುವ ಉದ್ದೇಶಗಳ ದೊಡ್ಡದೊಂದು ಪಟ್ಟಿಯೇ ಇದೆ.

ಇಷ್ಟೆಲ್ಲ ಕೆಲಸಗಳಿಗೆ ಬಳಸುವುದರಿಂದಲೋ ಏನೋ, ನಮಗೆ ನಮ್ಮ ಫೋನ್ ಕುರಿತು ಬಹುಬೇಗ ಅಸಮಾಧಾನವೂ ಆಗುತ್ತದೆ. ಕೊಂಡು ಮೂರು ತಿಂಗಳಾಗುವಷ್ಟರಲ್ಲಿ ಅತ್ಯುತ್ತಮ ಕ್ಯಾಮೆರಾ ಇದೆಯೆಂದು ಕೊಂಡಿದ್ದ ಫೋನ್ ಅಷ್ಟೇನೂ ಚೆಂದದ ಫೋಟೋ ತೆಗೆಯುತ್ತಿಲ್ಲ ಎನಿಸುತ್ತದೆ, ಇನ್ನು ಕೆಲದಿನಗಳಲ್ಲಿ ರ್‍ಯಾಮ್ ಸಾಲದು ಎನಿಸುತ್ತದೆ, ಆರು ತಿಂಗಳಲ್ಲಿ ಅದರ ಬ್ಯಾಟರಿ ಸಾಮರ್ಥ್ಯ ಏನೇನೂ ಇಲ್ಲವಲ್ಲ ಎಂಬ ಭಾವನೆ ಮೂಡುತ್ತದೆ.

ಇಂತಹ ಸಂದರ್ಭಗಳಲ್ಲೆಲ್ಲ ಅನ್ನಿಸುವುದಿಷ್ಟು: ಈ ಹಿಂದೆ ಕಂಪ್ಯೂಟರುಗಳಲ್ಲಿ ಮಾಡುತ್ತಿದ್ದಂತೆ ಮೊಬೈಲುಗಳನ್ನೂ ಅಪ್‌ಗ್ರೇಡ್ ಮಾಡುವಂತಿದ್ದರೆ ಎಷ್ಟು ಚೆನ್ನಾಗಿತ್ತು! ರ್‍ಯಾಮ್ ಸಾಲದೆಬಂದಾಗ ಒಂದೆರಡು ಜಿಬಿ ಹೆಚ್ಚುವರಿ ರ್‍ಯಾಮ್ ಸೇರಿಸುವಂತಿದ್ದರೆ, ಕ್ಯಾಮೆರಾ ಚೆನ್ನಾಗಿಲ್ಲ ಎನ್ನಿಸಿದಾಗ ಹೊಸ ಕ್ಯಾಮೆರಾ ಅಳವಡಿಸಿಕೊಳ್ಳುವಂತಿದ್ದರೆ, ಇಲ್ಲದ ಸೌಲಭ್ಯ ಬೇಕೆನಿಸಿದಾಗ ಹೊಸ ಫೋನ್ ಕೊಳ್ಳುವ ಬದಲು ಆ ಸೌಲಭ್ಯಕ್ಕಷ್ಟೇ ದುಡ್ಡು ಕೊಟ್ಟು ಕೊಳ್ಳುವಂತಿದ್ದರೆ?

ನಿಮಗೆ ಅಸೆಂಬಲ್ಡ್ ಕಂಪ್ಯೂಟರುಗಳ ಪರಿಚಯ ಇರಬೇಕಲ್ಲ - ಒಂದು ಕಂಪನಿಯ ಕ್ಯಾಬಿನೆಟ್, ಇನ್ನೊಂದರ ಮದರ್‌ಬೋರ್ಡ್, ಮತ್ತೊಂದರ ಹಾರ್ಡ್‌ಡಿಸ್ಕುಗಳನ್ನೆಲ್ಲ ಕೊಂಡು ಜೋಡಿಸಿ ರೂಪಿಸಲಾಗುವ ಈ ಕಂಪ್ಯೂಟರುಗಳು ಇಂದಿಗೂ ಜನಪ್ರಿಯ. ಇವುಗಳಲ್ಲಿ ಬಿಡಿಭಾಗಗಳನ್ನು ಜೋಡಿಸುವುದು - ಬದಲಿಸುವುದು ಬಲು ಸುಲಭವಾದ್ದರಿಂದಲೇ ಯಾವಾಗ ಬೇಕಾದರೂ ಅಪ್‌ಗ್ರೇಡ್ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಇದೇ ರೀತಿಯಲ್ಲಿ ಸುಲಭವಾಗಿ ಬದಲಿಸಬಹುದಾದ ಭಾಗಗಳನ್ನೊಳಗೊಂಡ 'ಮಾಡ್ಯುಲರ್ ಫೋನು'ಗಳ ತಯಾರಿಕೆಯ ಪ್ರಯತ್ನಗಳು ಈಗ ಭರದಿಂದ ಸಾಗಿವೆ.

ಇಂತಹುದೊಂದು ಪ್ರಯತ್ನದ ಫಲವಾಗಿ ಮೋಟರೋಲಾ ಸಂಸ್ಥೆ ತನ್ನ ಇತ್ತೀಚಿನ ಉತ್ಪನ್ನಗಳಾದ 'ಮೋಟೋ ಜ಼ೀ (Moto Z)' ಹಾಗೂ 'ಮೋಟೋ ಜ಼ೀ ಪ್ಲೇ (Moto Z Play)' ಮೊಬೈಲುಗಳ ಜೊತೆಗೆ 'ಮೋಟೋ ಮಾಡ್ಸ್ (Moto Mods)' ಎಂಬ ಹೆಸರಿನಲ್ಲಿ ಹೆಚ್ಚುವರಿಯಾಗಿ ಜೋಡಿಸಿಕೊಳ್ಳಬಹುದಾದ ಭಾಗಗಳನ್ನು ಪರಿಚಯಿಸಿದೆ.

ಈ ಹೊಸ ಫೋನುಗಳ ಪೈಕಿ ಮೋಟೋ ಜ಼ೀ ಬಹಳ ತೆಳುವಾದ (೫.೨ ಎಂಎಂ), ಆದರೆ ಲೋಹದಿಂದ ಮಾಡಿದ ಸದೃಢ ರಚನೆಯುಳ್ಳ ಪ್ರೀಮಿಯಂ ಸ್ಮಾರ್ಟ್‌ಫೋನ್. ಸ್ನಾಪ್‌ಡ್ರಾಗನ್ ೮೨೦ ಪ್ರಾಸೆಸರ್, ೫.೫ ಇಂಚಿನ ಕ್ವಾಡ್ ಎಚ್‍ಡಿ ಅಮೊಲೆಡ್ ಪರದೆ, ೪ ಜಿಬಿ ರ್‍ಯಾಮ್, ೬೪ ಜಿಬಿ ಶೇಖರಣಾ ಸಾಮರ್ಥ್ಯ (ಎಸ್‌ಡಿ ಕಾರ್ಡ್ ಮೂಲಕ ಪ್ರತ್ಯೇಕ ೨ ಟಿಬಿ), ೨೬೦೦ ಎಂಎಎಚ್ ಸಾಮರ್ಥ್ಯದ ಕ್ಷಿಪ್ರವಾಗಿ ಚಾರ್ಜ್ ಆಗುವ ಬ್ಯಾಟರಿ, ೧೩ ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, ೫ ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, ಆಂಡ್ರಾಯ್ಡ್ ೬ ಕಾರ್ಯಾಚರಣ ವ್ಯವಸ್ಥೆ - ಇವಿಷ್ಟು ಮೋಟೋ ಜ಼ೀ ಫೋನಿನ ವಿಶೇಷತೆಗಳು. ಮೋಟೋ ಜ಼ೀ ಪ್ಲೇ ಮಾದರಿಯಲ್ಲಿ ಸ್ನಾಪ್‌ಡ್ರಾಗನ್ ೬೨೫ ಪ್ರಾಸೆಸರ್, ೩ ಜಿಬಿ ರ್‍ಯಾಮ್, ೩೨ ಜಿಬಿ ಶೇಖರಣಾ ಸಾಮರ್ಥ್ಯದ ಜೊತೆಗೆ ೩೫೧೦ ಎಂಎಎಚ್ ಬ್ಯಾಟರಿ - ೧೬ ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ.


ಇವೆರಡೂ ಮಾದರಿಯ ಫೋನುಗಳಲ್ಲಿ ನಮ್ಮ ಇಷ್ಟದ ಹೆಚ್ಚುವರಿ ಸೌಲಭ್ಯ ಕಲ್ಪಿಸಿಕೊಳ್ಳಲು 'ಮೋಟೋ ಮಾಡ್ಸ್' ಭಾಗಗಳನ್ನು ಬಳಸಬಹುದೆನ್ನುವುದು ವಿಶೇಷ. ಹೊಸ ಕ್ಯಾಮೆರಾ, ಹೆಚ್ಚುವರಿ ಬ್ಯಾಟರಿ, ಉನ್ನತ ಸಾಮರ್ಥ್ಯದ ಸ್ಪೀಕರ್, ಪ್ರೊಜೆಕ್ಟರ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ಮೊಬೈಲಿನ ಹಿಂಬದಿಗೆ ಜೋಡಿಸಿ ಬಳಸುವುದು ಮೋಟೋ ಮಾಡ್ಸ್ ಮೂಲಕ ಸಾಧ್ಯವಾಗುತ್ತದೆ. ಈ ಉತ್ಪನ್ನಗಳಲ್ಲಿ ಜೆಬಿಎಲ್, ಹ್ಯಾಸೆಲ್‌ಬ್ಲಾಡ್ ಮುಂತಾದ ಹೆಸರಾಂತ ಸಂಸ್ಥೆಗಳ ತಂತ್ರಜ್ಞಾನ ಬಳಕೆಯಾಗಿರುವುದು ವಿಶೇಷ. ಸ್ಪೀಕರ್ ಬಳಸಿ ಮೊಬೈಲನ್ನು ಮ್ಯೂಸಿಕ್ ಸಿಸ್ಟಂ ಮಾಡಿಕೊಂಡರೆ ಪ್ರೊಜೆಕ್ಟರ್ ಬಳಸಿ ಮನೆಯಲ್ಲೇ ಥಿಯೇಟರ್ ರೂಪಿಸಿಕೊಳ್ಳಬಹುದು. ಹೆಚ್ಚುವರಿಯಾಗಿ ಕ್ಯಾಮೆರಾ ಭಾಗವನ್ನು ಜೋಡಿಸಿಕೊಂಡರಂತೂ ೧೦x ಆಪ್ಟಿಕಲ್ ಜೂಮ್ ಸೌಲಭ್ಯ ನಮ್ಮ ಮೊಬೈಲಿಗೇ ಬಂದಿಳಿಯುತ್ತದೆ!


ಈ ಪೈಕಿ ಮೋಟೋ ಜ಼ೀ ಮಾದರಿಯ ಬೆಲೆ ರೂ. ೩೯,೯೯೯ ಹಾಗೂ ಮೋಟೋ ಜ಼ೀ ಪ್ಲೇ ರೂ. ೨೪,೯೯೯ಗೆ ಲಭ್ಯವಿದೆ. ಮೋಟೋ ಮಾಡ್ಸ್ ಭಾಗಗಳ ಬೆಲೆ ರೂ. ೫೯೯೯ನಿಂದ (ಬ್ಯಾಟರಿ ಪವರ್‌ಪ್ಯಾಕ್‌ಗೆ) ಪ್ರಾರಂಭವಾಗುತ್ತದೆ.

ಮೋಟೋ ಜ಼ೀ, ಮೋಟೋ ಜ಼ೀ ಪ್ಲೇ ಹಾಗೂ ಮೋಟೋ ಮಾಡ್ಸ್ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ನಲ್ಲಿ ಇಂದಿನಿಂದ (ಅ.೧೮) ಲಭ್ಯವಿವೆ.


ಚಿತ್ರಗಳು: ಟೆಕ್2ಟಚ್ ಸೌಜನ್ಯ

ಕಾಮೆಂಟ್‌ಗಳಿಲ್ಲ:

badge