ಶುಕ್ರವಾರ, ಸೆಪ್ಟೆಂಬರ್ 2, 2016

VoLTE: ಹಾಗೆಂದರೇನು?

ಟಿ. ಜಿ. ಶ್ರೀನಿಧಿ

ಮೊಬೈಲ್ ಜಾಲಗಳ ಬಗ್ಗೆ ಮಾತನಾಡುವಾಗ ೩ಜಿ - ೪ಜಿಗಳ ಪ್ರಸ್ತಾಪ ಬರುವುದು ಸಾಮಾನ್ಯ. ಈ ಪೈಕಿ ೪ಜಿ ತಂತ್ರಜ್ಞಾನವನ್ನು 'ಎಲ್‌ಟಿಇ' ಎಂದೂ ಗುರುತಿಸಲಾಗುತ್ತದೆ. ಇದು 'ಲಾಂಗ್ ಟರ್ಮ್ ಎವಲ್ಯೂಶನ್' ಎಂಬ ಹೆಸರಿನ ಹ್ರಸ್ವರೂಪ.

ಮೊಬೈಲ್ ಜಗತ್ತಿನಲ್ಲಿ ತೀರಾ ಇತ್ತೀಚಿನವರೆಗೂ ಧ್ವನಿರೂಪದ ಕರೆಗಳು (ವಾಯ್ಸ್) ಹಾಗೂ ಅಂತರಜಾಲ ಸಂಪರ್ಕ (ಡೇಟಾ) ಬಳಸುವ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸಲಾಗುತ್ತಿತ್ತು. ನಮ್ಮ ದೇಶದ ಮಟ್ಟಿಗೆ ಈಗಲೂ ಬಹುಪಾಲು ಸಂಪರ್ಕಗಳು ಹೀಗೆಯೇ ಕೆಲಸಮಾಡುತ್ತವೆ.

ಇದರ ಬದಲು ವಾಯ್ಸ್ - ಡೇಟಾ ಎರಡನ್ನೂ ಒಟ್ಟಿಗೆ ನಿರ್ವಹಿಸಿದರೆ? ಪ್ರತ್ಯೇಕ ಮೂಲಸೌಕರ್ಯವನ್ನು ನಿಭಾಯಿಸಬೇಕಾದ ಖರ್ಚೂ ಉಳಿಯುತ್ತದೆ, ಸ್ಪರ್ಧಾತ್ಮಕ ಬೆಲೆಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೂ ಸಾಧ್ಯವಾಗುತ್ತದೆ. ಈ ಉದ್ದೇಶದಿಂದ ರೂಪುಗೊಂಡಿರುವ ತಂತ್ರಜ್ಞಾನವೇ 'ವಿಒ‌ಎಲ್‌ಟಿಇ', ಅಂದರೆ 'ವಾಯ್ಸ್ ಓವರ್ ಎಲ್‌ಟಿಇ'.

ಡೇಟಾ ಸಂಪರ್ಕವನ್ನು ನಾವು ನೂರೆಂಟು ಕೆಲಸಗಳಿಗೆ ಬಳಸಿಕೊಳ್ಳುತ್ತೇವಲ್ಲ, ವಾಯ್ಸ್ ಓವರ್ ಎಲ್‌ಟಿಇ ತಂತ್ರಜ್ಞಾನ ಬಳಸುವ ಮೊಬೈಲ್ ಜಾಲಗಳಲ್ಲಿ ಧ್ವನಿರೂಪದ ಕರೆಗಳೂ ಡೇಟಾ ಬಳಸಿ ಮಾಡುವ ಇನ್ನೊಂದು ಕೆಲಸದಂತೆಯೇ ಪರಿಗಣಿಸಲ್ಪಡುತ್ತವೆ. ಹಾಗಾಗಿ ಮೊಬೈಲ್ ಸೇವಾ ಸಂಸ್ಥೆಗಳಿಗೆ ಅಂತರಜಾಲ ಬಳಕೆಗೆ ಬೇರೆ, ಮೊಬೈಲ್ ಕರೆಗಳಿಗೆ ಬೇರೆ ಎಂದು ಬೆಲೆ ನಿಗದಿಪಡಿಸುವ ಅನಿವಾರ್ಯತೆಯೂ ಇರುವುದಿಲ್ಲ.

ರಿಲಯನ್ಸ್ ಜಿಯೋ ಮೂಲಕ ಈಗಷ್ಟೇ ಭಾರತೀಯ ಮಾರುಕಟ್ಟೆಗೆ ಪರಿಚಯವಾಗುತ್ತಿರುವ ಈ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ವ್ಯಾಪಕ ಬಳಕೆಗೆ ಬರುವ ನಿರೀಕ್ಷೆಯಿದೆ. ಆಗ ಮೊಬೈಲ್ ಜಗತ್ತಿನಲ್ಲಿ ಇನ್ನಷ್ಟು ಕುತೂಹಲಕರ ಬೆಳವಣಿಗೆಗಳು ಕಾಣಸಿಗಲಿವೆ ಎನ್ನುವುದು ಸದ್ಯದ ಅಂದಾಜು.

ಸೆಪ್ಟೆಂಬರ್ ೨, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

7 ಕಾಮೆಂಟ್‌ಗಳು:

karunakar patgar ಹೇಳಿದರು...

ನನ್ನ ಮೊಬೈಲ್ ನಲ್ಲಿ 4G LTE ಇದೆ. ಆದರೆ LTE ಮತ್ತು voLTE ಎರಡೂ ಒಂದೇನಾ ಅಥವಾ ಬೇರೆ ಬೇರೆನಾ?

H.K. Vadiraj ಹೇಳಿದರು...

VoLTE ಬಳಸಿ ಕೇವಲ Jio ಗ್ರಾಹಕರಿಗೆ ಮಾತ್ರ ಕರೆ ಮಾಡಬಹುದು ಅಲ್ಲವೇ??

H.K. Vadiraj ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
H.K. Vadiraj ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಟಿ ಜಿ ಶ್ರೀನಿಧಿ ಹೇಳಿದರು...

@karunakar patgar - ಎಲ್‌ಟಿಇ ಇರುವ ಫೋನುಗಳಲ್ಲಿ VoLTE ಇರಬೇಕು ಎಂದೇನೂ ಇಲ್ಲ. ನಿಮ್ಮ ಫೋನಿನಲ್ಲಿ ಈ ಸೌಲಭ್ಯವಿದೆಯೋ ಇಲ್ಲವೋ ಎಂದು ತಿಳಿಯಲು ಫೋನ್ ತಯಾರಕರು ನೀಡಿರುವ ಮ್ಯಾನ್ಯುಯಲ್ ಅಥವಾ ಅವರ ಜಾಲತಾಣ ನೋಡಿ.
@H.K. Vadiraj - ಹಾಗೇನಿಲ್ಲ, ಜಿಯೋ ಗ್ರಾಹಕರು ಮಾಡುವ ಎಲ್ಲ ಕರೆಗಳೂ (ಇತರ ನೆಟ್‌ವರ್ಕ್‌ಗೂ ಸೇರಿ) ಇದೇ ತಂತ್ರಜ್ಞಾನ ಬಳಸುತ್ತವೆ.

H.K. Vadiraj ಹೇಳಿದರು...

ಧನ್ಯವಾದಗಳು. ನಾನು ಇದು ಒಂದು ರೀತಿಯಲ್ಲಿ WhatsApp to WhatsApp call ಮಾಡಿದಂತೆ ಎಂದು ಕೊಂಡಿದ್ದೆ.

Shripad Annigeri ಹೇಳಿದರು...

ನಿಮ್ಮ ಮೊಬೈಲ್ ಉಪಕರಣದಲ್ಲಿ LTE ಸೌಕರ್ಯ ಇರಬಹುದು. ಆದರೆ VoLTE ಸೌಕರ್ಯವನ್ನು ಸೇವಾ ಸಂಸ್ಥೆಗಳು ಒದಗಿಸ ಬೇಕು.

badge