ಸೋಮವಾರ, ಜುಲೈ 18, 2016

ನಾವು ಆಕಳಿಸುವುದೇಕೆ?

ಕೊಳ್ಳೇಗಾಲ ಶರ್ಮ

ಬಹುಶಃ ಶೀರ್ಷಿಕೆಯನ್ನು ಓದಿಯೇ ನೀವು ಆಕಳಿಸುವುದಕ್ಕೆ ಆರಂಭಿಸಿದ್ದೀರೆಂದರೆ ಅದು ಲೇಖನದ ತಪ್ಪಲ್ಲ. ಹಾಂ. ನೀವು ಮಹಿಳೆಯರಾಗಿದ್ದರೆ ಖಂಡಿತ ಆಕಳಿಸಿರುತ್ತೀರಿ. ಪುರುಷರಾದರೆ ಆ ಸಾಧ್ಯತೆ ಸ್ವಲ್ಪ ಕಡಿಮೆ. ಇದೇನಿದು? ಆಕಳಿಕೆಗೂ, ಗಂಡು-ಹೆಣ್ಣಿಗೂ ಸಂಬಂಧ ಯಾಕೆ ಕಲ್ಪಿಸುತ್ತಿದ್ದೀರಿ ಎಂದಿರಾ? ಇದು ಹೇಳಿದ್ದು ನಾನಲ್ಲ. ಇಟಲಿಯ ಪೀಸಾ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞೆ ಎಲಿಸಬೆಟ್ಟಾ ಪಲಾಜಿ ಮತ್ತು ಸಂಗಡಿಗರು ಹೀಗೊಂದು ಹೊಸ ತರ್ಕವನ್ನು ಮುಂದಿಟ್ಟಿದ್ದಾರೆ.

ಆಕಳಿಕೆ ಒಂದು ವಿಚಿತ್ರವಾದ ನಿಗೂಢ ವಿದ್ಯಮಾನ. ಬೇಸರವಾದಾಗ ಅಥವಾ ನಿದ್ರೆ ಬಂದಾಗಷ್ಟೆ ಆಕಳಿಕೆ ಬರುತ್ತದೆನ್ನುವುದು ಸಾಮಾನ್ಯ ನಂಬಿಕೆ. ಬಹುಮಟ್ಟಿಗೆ ಇದು ನಿಜವೂ ಹೌದು. ಇದಕ್ಕಾಗಿಯೇ ಆಕಳಿಕೆ ಎಂದರೆ ಬಹುಶಃ ಮಿದುಳಿಗೆ ಹೆಚ್ಚಿನ ಆಕ್ಸಿಜನ್ ಒದಗಿಸುವ ವಿದ್ಯಮಾನವಿರಬಹುದು ಎನ್ನುವ ನಂಬಿಕೆಯೂ ಇತ್ತು. ಏಕೆಂದರೆ ಆಕ್ಸಿಜನ್ ಕೊರತೆಯಾದಾಗ ಮಿದುಳು ತನ್ನಂತಾನೇ ನಿದ್ರೆಗೆ ಜಾರುತ್ತದೆ. ಅದನ್ನು ತಪ್ಪಿಸಲೆಂದು ಗಾಳಿಯನ್ನು ಹೆಚ್ಚಾಗಿ ಹೀರಿ, ಹೆಚ್ಚು ಆಕ್ಸಿಜನ್ನು ಒದಗುವಂತೆ ಮಿದುಳಿಗೆ ರಕ್ತದ ಸರಬರಾಜನ್ನು ಹೆಚ್ಚಿಸಲು ನಿಸರ್ಗ ಹೂಡಿರುವ ತಂತ್ರವೇ ಆಕಳಿಕೆ ಎನ್ನುವುದು ಬಲು ಹಿಂದಿನಿಂದ ಬಂದ ನಂಬಿಕೆ.


ಒಂದು ರೀತಿಯಲ್ಲಿ ಇದು ನಿಜವೇ! ಬೋರು ಹೊಡೆಯುವ ಭಾಷಣ ಕೇಳುವಾಗ ಮಿದುಳು ತನ್ನಂತಾನೇ ನಿದ್ರೆಗೆ ಹೋಗುತ್ತದೆ. ಮುನ್ಸೂಚನೆಯಾಗಿ ಆಕಳಿಕೆ ಬರುತ್ತದೆ. ಆದರೆ ಆಕಳಿಕೆ ಎನ್ನುವುದು ಕೇವಲ ಮನುಷ್ಯರಲ್ಲಷ್ಟೆ ಕಾಣುವುದಿಲ್ಲ. ಭಾಷಣ ಮಾಡದ, ಚರ್ಚೆಗೆ ಕೂಡಿಕೊಳ್ಳದ ಪ್ರಾಣಿಗಳಲ್ಲೂ ಆಕಳಿಕೆಯನ್ನು ಕಾಣಬಹುದು. ನಾಯಿ, ಬೆಕ್ಕು ಆಕಳಿಸುವುದನ್ನು ನಾವು ಕಂಡಿದ್ದೇವೆ. ಸಿಂಹವೂ ಆಕಳಿಸುತ್ತದೆಂದು ಚಿತ್ರಗಳಲ್ಲಿ ನೋಡಿದ್ದೇವೆ. ವಿಜ್ಞಾನಿಗಳ ಪ್ರಕಾರ ನಮ್ಮ ಸಮೀಪ ಸಂಬಂಧಿಗಳಾದ ಮಂಗಗಳೂ, ವಾನರಗಳೂ ಆಕಳಿಸುತ್ತವೆ. ಅಷ್ಟೇ ಏಕೆ. ನೀರೊಳಗಿದ್ದು, ಬೆವರದ ಮೀನುಗಳೂ, ತಿಮಿಂಗಲಗಳೂ ಒಮ್ಮೊಮ್ಮೆ ಆಕಳಿಸುತ್ತವೆ ಎನ್ನುವುದೂ ದಾಖಲಾಗಿದೆ.

ಆಕಳಿಕೆಯ ವೇಳೆಯಲ್ಲಿ ಇಲಿ ಹಾಗೂ ಮನುಷ್ಯರಲ್ಲಿ ಉಂಟಾಗುವ ದೈಹಿಕ ವ್ಯತ್ಯಾಸಗಳಲ್ಲೂ ಸಾಮ್ಯತೆಯಿದೆ. ಉದಾಹರಣೆಗೆ, ಆಕಳಿಸುವಾಗ ಮೊದಲಿಗೆ ಬಾಯಿಯನ್ನು ಜೋರಾಗಿ ತೆರೆಯುತ್ತೇವೆ. ತದನಂತರ ಜೋರಾಗಿ ಉಸಿರನ್ನು ಎಳೆದುಕೊಳ್ಳುತ್ತೇವೆ. ಅನಂತರ ಕೆಲವೊಮ್ಮೆ ಮೈ ಮುರಿಯುವುದೂ ಉಂಟು. ಹಲವು ಪ್ರಾಣಿಗಳಲ್ಲಿ ಈ ತೆರನ ಚಟುವಟಿಕೆಗಳೇ ಆಕಳಿಸುವ ಸಮಯದಲ್ಲಿ ಕಾಣಿಸುತ್ತದೆ. ಆದ್ದರಿಂದ ಆಕಳಿಕೆ ಒಂದು  ದೈಹಿಕ ವಿದ್ಯಮಾನ ಎನ್ನಲು ಅಡ್ಡಿಯಿಲ್ಲ. ಇದರೊಟ್ಟಿಗೆ ಆಕಳಿಸುವಾಗ ಮಿದುಳಿನಲ್ಲಿ, ನರಮಂಡಲದಲ್ಲಿ ಹಾಗೂ ರಕ್ತದ ಹರಿದಾಟದಲ್ಲಿ ಆಗುವ ಬದಲಾವಣೆಗಳನ್ನೂ ಗಮನಿಸಲಾಗಿದೆ. ನಮ್ಮ ದೇಹದ ಉಷ್ಣತೆಯನ್ನು ಕಾಯುವ ಮಿದುಳಿನ ಭಾಗಗಳೇ ಆಕಳಿಕೆಯ ವೇಳೆಯೂ ಚುರುಕಾಗುತ್ತವಂತೆ. ಜೊತೆಗೆ ಆಕಳಿಸಿದ ಕೂಡಲೇ ರಕ್ತದೊತ್ತಡ ಶೇಕಡ 10 ರಿಂದ 15 ಪಾಲು ಅಧಿಕವಾಗುತ್ತದೆ.  ಇದರಿಂದ ಹೆಚ್ಚು ರಕ್ತ ಮಿದುಳಿಗೆ ಹರಿಯುತ್ತದೆಯೇನೋ ನಿಜ. ಆದರೆ ಇದು ಆಕ್ಸಿಜನ್ ಒದಗಿಸುವುದಕ್ಕಾಗಿಯೋ ಅಥವಾ ಬೇರಾವುದೋ ಕಾರಣಕ್ಕಾಗಿಯೋ ಸ್ಪಷ್ಟವಾಗಿಲ್ಲ. 1987ರಲ್ಲಿ ನಡೆದ ಒಂದು ಪ್ರಯೋಗದಲ್ಲಿ ಅಪ್ಪಟ ಆಕ್ಸಿಜನ್ನನ್ನೂ, ಸಾಮಾನ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕಾರ್ಬನ್ ಡಯಾಕ್ಸೈಡ್ ಇರುವ ಗಾಳಿಯನ್ನು ಉಸಿರಾಡಿದ ವ್ಯಕ್ತಿಗಳಲ್ಲಿ ಆಕಳಿಕೆಯ ಪ್ರಮಾಣದಲ್ಲಿ ವ್ಯತ್ಯಾಸವಿಲ್ಲವೆಂದು ತಿಳಿಯಿತು. ಹಾಗಿದ್ದರೆ ಆಕಳಿಸುವುದು ಏಕೆ?

ಆಕಳಿಕೆ ಏಕಾಗುತ್ತದೆನ್ನುವ ಬಗ್ಗೆ ಇರುವ ಇನ್ನೊಂದು ಊಹೆ: ಮಿದುಳನ್ನು ತಣಿಸುವುದು. ಸಾಮಾನ್ಯವಾಗಿ ನಮ್ಮ ಹಾಗೂ ಬಹುತೇಕ ಬಿಸಿರಕ್ತದ ಪ್ರಾಣಿಗಳ ಮಿದುಳು ದೇಹದ ಉಷ್ಣತೆಗಿಂತಲೂ ತುಸು ಹೆಚ್ಚೇ ಉಷ್ಣತೆಯನ್ನು ತೋರುತ್ತದೆ. ಯಾವುದೇ ಕಾರಣದಿಂದ ಮಿದುಳಿನ ಉಷ್ಣತೆ ಅತಿ ಹೆಚ್ಚಾದಲ್ಲಿ ಆಕಳಿಕೆ ತೋರುತ್ತದೆ. ಆಕಳಿಕೆಯ ವೇಳೆ ನಾವು ಬಾಯಿಯನ್ನು ತೆರೆದಂತೆ ಕತ್ತು ಮತ್ತು ಮುಖದಲ್ಲಿರುವ ಸ್ನಾಯುಗಳು ಅತಿಯಾಗಿ ಹಿಗ್ಗುತ್ತವಷ್ಟೆ. ಇದು ಅಲ್ಲಿಗೆ ಹೆಚ್ಚಿನ ರಕ್ತವನ್ನು ಹರಿಸುತ್ತದೆ. ಈ ಸ್ನಾಯುಗಳು ಮಿದುಳಿನಿಂದ ಹರಿದ ರಕ್ತದಿಂದ ಉಷ್ಣತೆಯನ್ನು ಹೀರಿಕೊಂಡು ಹೊರಸೂಸುತ್ತವೆ. ಮಿದುಳನ್ನು ತಣಿಸುತ್ತವೆ ಎನ್ನುತ್ತದೆ ಈ ವಾದ.

ಆಕಳಿಕೆಯನ್ನು ತಡೆಯುವ ವಿಧಾನವೇ ಇದಕ್ಕೆ ಪುರಾವೆಯಂತೆ. ನಾವು ಉಸಿರಾಡುವ ಗತಿಯನ್ನು ಹೆಚ್ಚೂ ಕಡಿಮೆ ಮಾಡಿ ಆಕಳಿಕೆಯನ್ನು ನಿಯಂತ್ರಿಸಬಹುದು. ಕೆಲವರಂತೂ ಬಾಯಿ ಮುಚ್ಚಿಕೊಂಡೇ ಆಕಳಿಸುವುದನ್ನು ಕರಗತ ಮಾಡಿಕೊಂಡಿರುತ್ತಾರೆ. ಹಣೆಯನ್ನು ತುಸು ತಣಿಸಿದರೆ (ಗಾಳಿ ಬೀಸಿಯೋ, ಒದ್ದೆ ಬಟ್ಟೆ ಹಾಕಿಯೋ) ಆಕಳಿಕೆ ಬರದಂತೆ ತಡೆಯಬಹುದು. ಮಿದುಳು ತಣ್ಣಗಾಗಿದ್ದರಿಂದ ಆಕಳಿಕೆ ನಿಂತಿರಬೇಕು ಎನ್ನುವುದು ಊಹೆ.  ಇಲಿಗಳ ಮಿದುಳಿನೊಳಗೆ ಉಷ್ಣಮಾಪಕಗಳನ್ನಿಟ್ಟು ಅವು ಆಕಳಿಸುವ ಮೊದಲು ಹಾಗೂ ಅನಂತರವೇನಾಗುತ್ತದೆಂದು ಗಮನಿಸಿದರೆ, ಆಕಳಿಸಿದ ಅನಂತರ ತುಸು ಉಷ್ಣತೆ ಕಡಿಮೆಯಾಗುವುದನ್ನು ಗಮನಿಸಬಹುದು. ಮಿದುಳಿನ ಉಷ್ಣತೆ ಅತಿ ಹೆಚ್ಚಾಗಿರುವ ಸಂಜೆಯ ಹೊತ್ತಿನಲ್ಲೇ ಆಕಳಿಕೆಯೂ ಹೆಚ್ಚು.  ಇದಲ್ಲದೆ ತಲೆನೋವು, ಮಲ್ಟಿಪಲ್ ಸ್ಕ್ಲೀರೋಸೀಸ್, ಆತಂಕ ಹಾಗೂ ಮಾನಸಿಕ ಒತ್ತಡವಿರುವ ಸಂದರ್ಭಗಳಲ್ಲೂ ದೇಹದ ಉಷ್ಣನಿಯಂತ್ರಣ ಏರುಪೇರಾಗುತ್ತದೆ. ಈ ಎಲ್ಲ ಖಾಯಿಲೆಗಳ ಸಂದರ್ಭದಲ್ಲಿಯೂ ಆಕಳಿಕೆ ಹೆಚ್ಚಾಗಿರುತ್ತದೆ ಎನ್ನುವುದು ಕಾಕತಾಳೀಯವಿರಲಿಕ್ಕಿಲ್ಲ.

ಆಕಳಿಕೆಗೆ ಮೂಲವೇನೆನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆಕಳಿಕೆ ಎನ್ನುವುದು ಮಿದುಳಿನ ಉಷ್ಣತೆಯನ್ನು ನಿಯಂತ್ರಿಸಲು ಇರುವ ಉಪಾಯ ಎನ್ನುವ ವಾದದಷ್ಟೆ ಪ್ರಬಲವಾದ ಇನ್ನೊಂದು ತರ್ಕವೂ ಇದೆ. ಆಕಳಿಕೆ ಒಬ್ಬರಿನ್ನೊಬ್ಬರಿಗೆ ಎಚ್ಚರವಾಗಿರಿ ಎಂದು ತಿಳಿಸಿಕೊಡುವ ಸಂವಹನ ಕ್ರಿಯೆ ಎನ್ನುವ ವಾದವೂ ಇದೆ. ಒಂದಂತೂ ಸ್ಪಷ್ಟ. ಆಕಳಿಕೆ ಎನ್ನುವುದು ಶ್ವಾಸಕೋಶದಂತಹ ಕೇಂದ್ರ ವ್ಯವಸ್ಥೆಯ ಮೂಲಕ ದೇಹದ ವಿವಿಧ ಭಾಗಗಳಿಗೆ ಆಕ್ಸಿಜನ್ ಒದಗಿಸುವ ಅಂಗಗಳಿರುವ ಜೀವಿಗಳಲ್ಲಿಯಷ್ಟೆ ಕಾಣುತ್ತದೆ. ಕೀಟಗಳಲ್ಲಿ, ಕಪ್ಪೆಗಳಲ್ಲಿ ಇದು ಕಾಣುವುದಿಲ್ಲ. ಏಕೆಂದರೆ ಇವು ಚರ್ಮದ ಮೂಲಕವೂ ಉಸಿರಾಡಬಲ್ಲವು.

ಆಕಳಿಕೆ ಸಾಂಕ್ರಾಮಿಕವೂ ಹೌದು. ಎಂದರೆ ಇದೊಂದು ಅನುಭೂತಿ ಕ್ರಿಯೆ. ಒಬ್ಬರು ಆಕಳಿಸಿದರೆ ಮತ್ತೊಬ್ಬರಿಗೆ ಬೋರು ಹೊಡೆದಿದೆಯೋ ಇಲ್ಲವೋ, ಅವರೂ ಬಾಯಿ ತೆರೆದು ಆಕಳಿಸುವುದು ಸಾಮಾನ್ಯ. ಅನುಭೂತಿ ಕ್ರಿಯೆ ಎಂದರೆ ಇನ್ನೇನಲ್ಲ. ಬೇರೊಬ್ಬರ ಚಟುವಟಿಕೆಯನ್ನು ಗಮನಿಸಿದಾಗ, ಆ ಚಟುವಟಿಕೆಯನ್ನು ನಿಯಂತ್ರಿಸುವಂತಹ, ಅಥವಾ ಅದನ್ನು ಚಾಲಿಸುವ ಮಿದುಳಿನ ಭಾಗಗಳು ನಮ್ಮಲ್ಲೂ ಚುರುಕಾಗುತ್ತವೆ. ಮಿದುಳಿನಲ್ಲಿ ಕೆಲವು ನರತಂತುಗಳ ವ್ಯೂಹಗಳು ಹೀಗೆ ಬೇರೆಯವರ ಚಟುವಟಿಕೆಯನ್ನು ಅಣಕಿಸುವುದಕ್ಕೆಂದೇ ಇರುತ್ತವೆ. ಬೇರೆಯವರ ಚಟುವಟಿಕೆಯನ್ನು ಕಂಡಷ್ಟಕ್ಕೇ ಇವು ಚುರುಕಾಗಿ ನಮ್ಮಲ್ಲೂ ಅದೇ ಕ್ರಿಯೆ ಪ್ರತಿಫಲಿಸುವಂತೆ ಮಾಡುತ್ತವೆ.

ಗುಂಪುಗಳಲ್ಲಿ, ಸಮಾಜವನ್ನು ಕಟ್ಟಿಕೊಂಡು ಬಾಳುವ ಜೀವಿಗಳಲ್ಲಿ ಇಂತಹ ಅನುಭೂತಿ ಕ್ರಿಯೆ ಬಲು ಉಪಕಾರಿ. ಅಪಾಯ ಒದಗಿದಾಗ ಕೂಗಿ ಹೇಳಬೇಕಿಲ್ಲ. ಕಂಡೇ ಅದನ್ನು ಅನುಭವಿಸಬಹುದು. ಹಾಗೆಯೇ ಸಂಕಟದಲ್ಲಿರುವವರಿಗೆ ನೆರವಾಗಲೂ ಇದು ಉಪಯುಕ್ತ ಎನ್ನುವುದು ವಿಜ್ಞಾನಿಗಳ ಅಂಬೋಣ.

ಮನುಷ್ಯನೂ ಸಮಾಜ ಜೀವಿಯಷ್ಟೆ? ಆದ್ದರಿಂದ  ಈ ಅನುಭೂತಿ ಕ್ರಿಯೆ ಅಥವಾ ಸಹಾನುಭೂತಿ ನಮ್ಮಲ್ಲಿಯೂ ಜಾಗೃತವಾಗಿದ್ದರೆ ಅಚ್ಚರಿಯೇನಿಲ್ಲ. ಕೆಲವು ಅಧ್ಯಯನಗಳ ಪ್ರಕಾರ ಹೆಂಗರುಳಿಗೆ ಸಹಾನುಭೂತಿ ಹೆಚ್ಚು. ಗಂಡಿಗೆ ಇದು ಕಡಿಮೆಯಂತೆ. ಅರ್ಥವತ್ತಾದ ಮಾತೇ ಸರಿ. ಏಕೆಂದರೆ ಒಂಭತ್ತು ತಿಂಗಳು ಹೊತ್ತು, ಹೆತ್ತ ನಂತರ ಆ ಕೂಸಿನ ಸಂಕಟಗಳನ್ನು ಅದು ಅಳುವ ಮುನ್ನವೇ ಅರ್ಥ ಮಾಡಿಕೊಳ್ಳಲು ತಾಯಿಗೆ ಇಂತಹ ಅನುಭೂತಿ ಇರಬೇಕಾದದ್ದು ಸಹಜವೇ. ಅಧ್ಯಯನಗಳ ಪ್ರಕಾರ ಬಾಲ್ಯದಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳಲ್ಲಿರುವ ಅನುಭೂತಿ ಸಮಾನವಾಗಿರುತ್ತದಂತೆ. ಬೆಳೆಯುತ್ತಿದ್ದಂತೆ ಕ್ರಮೇಣ ಗಂಡು-ಹೆಣ್ಣುಗಳ ಅನುಭೂತಿಯಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಈ ಕಂದರ ಯೌವನದಲ್ಲಿ, ಬೆದೆ ಬರುವ ಸಮಯದಲ್ಲಿ, ಅತಿ ದೊಡ್ಡದಾಗಿ ಅನಂತರವೂ ಹಾಗೆಯೇ ಉಳಿಯುತ್ತದೆ. ಈಗ ಗೊತ್ತಾಯಿತಲ್ಲ? ಸ್ಯಾಂಡಲ್ ವುಡ್ ನ ಸಿನಿಮಾಗಳು ಅಥವಾ ಟೀವಿ ವರ್ಷಾವಾಹಿಗಳು ಹಿಟ್ ಆಗಬೇಕಾದರೆ ಅವು ಕಣ್ಣೀರ ಕಥೆಯೇ ಆಗಿರಬೇಕು. ಹೆಂಗರುಳನ್ನು ಕಿವುಚುವುದು ಸುಲಭ. ಏಕೆಂದರೆ ಅವು ಕನಸೇ ಆಗಿದ್ದರೂ ಹೆಚ್ಚೆಚ್ಚು ಸಹಾನುಭೂತಿ ತೋರುವ ಗುಣ ಹೆಂಗಸರಿಗಿದೆ. ಗಂಡಸರದ್ದು ಗಂಡು-ಗುಂಡಿಗೆ. ಬಡಪೆಟ್ಟಿಗೆ ಅದಕ್ಕೆ ಕರುಣೆ ಬರುವುದಿಲ್ಲ.

ಅನುಭೂತಿಗೂ ಆಕಳಿಕೆಗೂ ಮನುಷ್ಯರಲ್ಲಿ ಅವಿನಾಭಾವ ಸಂಬಂಧವಿದೆಯೇ? ಒಬ್ಬರು ಆಕಳಿಸಿದ ಕೂಡಲೇ ಮತ್ತೊಬ್ಬರಿಗೂ ಹಾಗೆ ಮಾಡಬೇಕೆನ್ನಿಸುವುದು ಸಹಜ. ಹೀಗಾಗಿ ಆಕಳಿಕೆಗೆ ಅನುಭೂತಿಯೇ ಕಾರಣವಿರಬಹುದೇ ಎನ್ನುವ ವಿಚಾರವೂ ಇದೆ. ಮಾನವನಲ್ಲಿಯಷ್ಟೆ ಅಲ್ಲ. ಬೇರೆ ಪ್ರಾಣಿಗಳಲ್ಲೂ ಇದು ಅನುಭೂತಿಯ ವಿದ್ಯಮಾನವಿರಬಹುದು ಎನ್ನುವ ಚಿಂತನೆ ನಡೆದಿದೆ. ಉದಾಹರಣೆಗೆ, ಚಿಂಪಾಂಜಿಗಳ ಮುಂದೆ ಮನುಷ್ಯರು ನಿಂತು ಆಕಳಿಸಿದಾಗ ಅವುಗಳೂ ಆಕಳಿಸುತ್ತವೆಯಂತೆ. ಆದರೆ ಅದೇ ಚಿಂಪಾಂಜಿಗಳ ಮುಂದೆ ಗೊರಿಲ್ಲಾವೋ, ಬಬೂನೋ ಆಕಳಿಸಿದಾಗ ಚಿಂಪಾಂಜಿ ಅಷ್ಟೊಂದು ಆಕಳಿಸುವುದಿಲ್ಲವಂತೆ. ಅರ್ಥಾತ್, ಅನುಭೂತಿ ಕ್ರಿಯೆಯಾದರೂ ಇದರಲ್ಲಿ ಏನೋ ವ್ಯತ್ಯಾಸವಿದೆ. ನಮ್ಮೂರ ಮಂಗಗಳೂ ಆಕಳಿಸುತ್ತವೆ. ಆದರೆ ಇವುಗಳ ಆಕಳಿಕೆಗೂ, ಟೆಸ್ಟೊಸ್ಟೆರಾನ್ ಎನ್ನುವ ಪುರುಷ ಹಾರ್ಮೋನಿನ ಪ್ರಮಾಣಕ್ಕೂ ಸಂಬಂಧವಿದೆ.

ಈ ವ್ಯತ್ಯಾಸ ಮನುಷ್ಯರಲ್ಲೂ ಇರಬಹುದೇ? ಹೆಂಗರುಳು ಹೆಚ್ಚು ಆಕಳಿಸುತ್ತಿರಬಹುದೇ? ಗಂಡಸರು ಬೇರೊಬ್ಬರು ಆಕಳಿಸಿದಾಗ ಏನೂ ಆಗದಂತೆ ಸುಮ್ಮನಿರುವರೇ? ಇದು ಪ್ರಶ್ನೆ. ಎಲಿಜಬೆತ್ತಾ ಪಲಾಜಿ ಮತ್ತು ಸಂಗಡಿಗರು ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವುದಕ್ಕಾಗಿ ಪ್ರಯೋಗಗಳನ್ನು ನಡೆಸಿದ್ದಾರೆ. ಅದರ ಫಲಿತಾಂಶಗಳನ್ನು  ರಾಯಲ್ ಸೊಸೈಟಿ ಓಪನ್ ಸೈನ್ಸ್ ಪತ್ರಿಕೆಯಲ್ಲಿ ಮೊನ್ನೆ ಪ್ರಕಟಿಸಿದ್ದಾರೆ. ಈ ಅಧ್ಯಯನ ಸುಲಭವೇನಲ್ಲ ಅನ್ನಿ. ಏಕೆಂದರೆ ಆಕಳಿಕೆಯ ಸಹಾನುಭೂತಿ ಎಲ್ಲರಲ್ಲೂ ಒಂದೇ ರೀತಿ ಇರುವುದಿಲ್ಲ. ಅರ್ಥಾತ್, ಎಲ್ಲರೂ ಬೇರೆಯವರು ಆಕಳಿಸಿದ ತಕ್ಷಣ ಆಕಳಿಸುವುದಿಲ್ಲ. ಹೀಗಾಗಿ ಯಾರೇ ಆಕಳಿಸಿದರೂ, ಅದು ಸ್ವಂತವಾಗಿ ಆಕಳಿಸಿದ್ದೇ, ಅನುಕರಣೆಯೇ ಎನ್ನುವುದನ್ನು ಸ್ಪಷ್ಟವಾಗಿ ತಿಳಿಯುವುದು ಕಷ್ಟ.

ಪಲಾಜಿ ಮತ್ತು ಸಂಗಡಿಗರು ಈ ಸಮಸ್ಯೆಯನ್ನು ಸ್ವಾರಸ್ಯಕರವಾಗಿ ಪರಿಹರಿಸಿಕೊಂಡಿದ್ದಾರೆ. ಇವರು ಕದ್ದು ಮುಚ್ಚಿ ಬೇರೆಯವರ ಆಕಳಿಕೆಯ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಆಕಳಿಸುವ ಮೊದಲು ಇನ್ಯಾರಾದರೂ ಸಮೀಪದಲ್ಲಿ ಆಕಳಿಸಿದ್ದರೇ? ಹಾಗಿದ್ದಲ್ಲಿ ಅದಾದ ನಂತರ ಎಷ್ಟು ಸಮಯದ ಅನಂತರ  ಈ ಅನುಕರಣೆಯಾಯಿತು? ಮೊದಲು ಆಕಳಿಸಿದವರು ಗೆಳೆಯರೇ, ಸಹೋದ್ಯೋಗಿಗಳೇ ಅಥವಾ ಇನ್ನೂ ನಿಕಟ ಸಂಬಂಧಿಗಳೇ? ಇವೆಲ್ಲ ಮಾಹಿತಿಯನ್ನೂ ಇವರು ಸಂಗ್ರಹಿಸಿ ಆಕಳಿಕೆಯೊಂದಿಗೆ ತಾಳೆ ಹಾಕಿದ್ದಾರೆ. ಆಕಳಿಕೆ ಎನ್ನುವುದು ಅನುಭೂತಿ ಕ್ರಿಯೆಯಾದರೆ ನಿಕಟ ಸಂಬಂಧಿಗಳು ಆಕಳಿಸಿದಾಗ ಅನುಕರಣೆ ಹೆಚ್ಚಿರಬೇಕು. ಹಾಗೆಯೇ ಅನುಕರಣೆಯ ಆಕಳಿಕೆ ಐದು ನಿಮಿಷಗಳಾದ ಮೇಲೆ ಆಗಿದ್ದಾದರೆ ಅದು ಸಹಾನುಭೂತಿಯಿಂದಲ್ಲ. ಸ್ವಯಂ ಬೋರಾಗಿ ಆಕಳಿಸಿರಬೇಕು. ಏಕೆಂದರೆ ಯಾವುದೇ ಸಂದರ್ಭದಲ್ಲಿ ಸಹಾನುಭೂತಿಯಿಂದ ಆಕಳಿಸುವವರು ಮೂರು ನಿಮಿಷಗಳೊಳಗೆ ಆ ಪ್ರತಿಕ್ರಿಯೆಯನ್ನು ತೋರಿಬಿಟ್ಟಿರುತ್ತಾರೆ.

ಹೀಗೆ ಆಕಳಿಕೆ ಸ್ವಂತದ್ದೋ, ಅನುಕರಣೆಯೋ? ಅನುಭೂತಿ ಹೆಚ್ಚಿರುವವರು ಆಕಳಿಸಿದಾಗ ಅನುಕರಣೆ ಹೆಚ್ಚೋ, ಅಪರಿಚಿತರ ಅನುಕರಣೆ ಹೆಚ್ಚೋ? ಗಂಡು, ಹೆಣ್ಣುಗಳಲ್ಲಿ ಯಾರು ಹೆಚ್ಚು ಅನುಕರಿಸುತ್ತಾರೆ? ಎನ್ನುವ ಪ್ರಶ್ನೆಗಳಿಗೆ ಮಾಹಿತಿ ದೊರಕಿದೆ. ಈ ಫಲಿತಾಂಶಗಳ ಪ್ರಕಾರ ಸ್ವಂತ ಆಕಳಿಕೆಗಳ ಸಂಖ್ಯೆಯನ್ನು ಗಮನಿಸಿದಾಗ ಗಂಡು, ಹೆಣ್ಣಿನ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲ. ಆದರೆ ಸಂಬಂಧಗಳು ಹಾಗೂ ಅನುಕರಿಸುವವರು ಗಂಡೋ, ಹೆಣ್ಣೊ ಎನ್ನುವುದನ್ನು ಅನುಸರಿಸಿ ಆಕಳಿಕೆಯ ಸಂಖ್ಯೆಯಲ್ಲಿಯೂ ವ್ಯತ್ಯಾಸಗಳು ಕಂಡಿವೆ. ಉದಾಹರಣೆಗೆ, ಆಕಳಿಸಿದವರು ಅನುಕರಿಸುವವರ ನಿಕಟ ಸಂಬಂಧಿಯಾಗಿದ್ದಾಗ ಅನುಕರಣೆಯ ಸಾಧ್ಯತೆಗಳು ಹೆಚ್ಚು. ಹಾಗೆಯೇ ಗಂಡಸರಿಗಿಂತಲೂ ಹೆಂಗಸರು ಹೆಚ್ಚು ಅನುಕರಿಸುತ್ತಾರೆ. ಯಾರಾದರೂ ಆಕಳಿಸಿದಾಗ ಅವರ ಹೆಂಡತಿ, ತಾಯಿ, ಸೋದರಿಯರು ಆಕಳಿಸುವ ಸಾಧ್ಯತೆ, ಅವರ ತಂದೆ, ಸೋದರರು ಆಕಳಿಸುವುದಕ್ಕಿಂತಲೂ ಹೆಚ್ಚು. ಹಾಗೆಯೇ ಆಕಳಿಸುವ ಗೆಳೆಯರನ್ನು ನೋಡಿ ಆಕಳಿಸುವವರಿಗಿಂತಲೂ, ಅಪರಿಚಿತರ ಆಕಳಿಕೆಯಿಂದ ಪ್ರಭಾವಿತರಾಗುವವರು ಕಡಿಮೆ.

ಒಟ್ಟಾರೆ ಹೆಂಗರುಳಿರುವವರು ಹೀಗೆ ಸಾಂಕ್ರಾಮಿಕ ಆಕಳಿಕೆ ತೋರುತ್ತಾರೆ ಎಂದಾಯಿತು. ಈಗ ಹೇಳಿ? ನೀವು ಈ ಲೇಖನ ಓದುವಾಗ ಎಷ್ಟು ಬಾರಿ ಆಕಳಿಸಿದಿರಿ?

ಆಕರ:

  1. Norscia I, Demuru E, Palagi E. 2016 She more than he: gender bias supports the empathic nature of yawn contagion in Homo sapiens
  2. Andrew C.Gallup and Omar T.Eldakar,  The thermoregulatory theory of yawning: what we know from over 5 years of research
  3. 3. Adrian G. Guggisberg , Johannes Mathis, Uli S. Herrmann, Christian W. Hess, The functional relationship between yawning and vigilance

5 ಕಾಮೆಂಟ್‌ಗಳು:

Chinnamma Baradhi ಹೇಳಿದರು...

ನಾವು ಆಕಳಿಸುವುದೇಕೆ?
ಕೊಳ್ಳೇಗಾಲ ಶರ್ಮರವರ ಲೇಖನ ತು೦ಬಾ ಮಾಹಿತಿಪೂರ್ಣವಾಗಿತ್ತು.
ಆಸಕ್ತಿಯುತವಾಗಿ ಓದಿಸಿಕೊ೦ಡು ಹೋದರೂ, ನಾಲ್ಕು ಬಾರಿ ಆಕಳಿಸಿದ್ದಾಯ್ತು.
ಯಾಕೋ ಗೊತ್ತಾಗಲಿಲ್ಲ?

Alemari ಹೇಳಿದರು...

ಖಂಡಿತವಾಗಿಯೂ ಲೇಖನದ ತಪ್ಪಲ್ಲ. ಬರೆಯುವಾಗಲೂ ನಾನು ಆಕಳಿಸುತ್ತಿದ್ದೆ! ಈ ಕಮೆಂಟ್ ಬರೆಯುವಾಗಲೂ ಆಕಳಿಕೆ ಬರುತ್ತಿದೆ. ಆದರೆ ಈ ರೀತಿ ಎಲ್ಲರಿಗೂ ಆಗುವುದಿಲ್ಲ. ಎಷ್ಟು ಜನರಿಗೆ ಆಗುತ್ತದೆ ಎಂದು ತಿಳಿದರೆ ಚೆನ್ನ. ಇಜ್ಞಾನ ಓದುಗರು ಲೇಖನ ಓದುವಾಗ ಪದಶಃ ತಮಗೆ ಆಕಳಿಕೆ ಬಂತೋ ಇಲ್ಲವೋ ಎಂದು ತಿಳಿಸಿದರೆ ಅದುವೇ ಒಂದು ಆಸಕ್ತಿಕರ ಮಾಹಿತಿಯಾದೀತು.

Geetha Hegde ಹೇಳಿದರು...

ನನಗಂತೂ ಲೇಖನ ಓದುವಾಗ ಆಕಳಿಕೆ ಬಂದಿಲ್ಲ.
ಆದರೆ ಈ ಆಕಳಿಕೆ ಬರಲು ಇನ್ನೂ ಒಂದು ಕಾರಣ ನಮ್ಮ ಪೂವಿ೯ಕರು ಹೇಳುತ್ತಿದ್ದರು. "ಯಾರು ನಮ್ಮನ್ನು ಅತಿಯಾಗಿ ಜ್ಞಾಪಿಸಿಕೊಳ್ತಾರೊ ಆಗ ಹೊತ್ತಲ್ಲದ ಹೊತ್ತಲ್ಲಿ ಆಕಳಿಕೆ ಬರುತ್ತದೆ." ಇದು ಎಷ್ಟು ಸರಿ?

Geetha Hegde ಹೇಳಿದರು...

ನನಗಂತೂ ಲೇಖನ ಓದುವಾಗ ಆಕಳಿಕೆ ಬಂದಿಲ್ಲ.
ಆದರೆ ಈ ಆಕಳಿಕೆ ಬರಲು ಇನ್ನೂ ಒಂದು ಕಾರಣ ನಮ್ಮ ಪೂವಿ೯ಕರು ಹೇಳುತ್ತಿದ್ದರು. "ಯಾರು ನಮ್ಮನ್ನು ಅತಿಯಾಗಿ ಜ್ಞಾಪಿಸಿಕೊಳ್ತಾರೊ ಆಗ ಹೊತ್ತಲ್ಲದ ಹೊತ್ತಲ್ಲಿ ಆಕಳಿಕೆ ಬರುತ್ತದೆ." ಇದು ಎಷ್ಟು ಸರಿ?

Geetha Hegde ಹೇಳಿದರು...

ನನಗಂತೂ ಲೇಖನ ಓದುವಾಗ ಆಕಳಿಕೆ ಬಂದಿಲ್ಲ.
ಆದರೆ ಈ ಆಕಳಿಕೆ ಬರಲು ಇನ್ನೂ ಒಂದು ಕಾರಣ ನಮ್ಮ ಪೂವಿ೯ಕರು ಹೇಳುತ್ತಿದ್ದರು. "ಯಾರು ನಮ್ಮನ್ನು ಅತಿಯಾಗಿ ಜ್ಞಾಪಿಸಿಕೊಳ್ತಾರೊ ಆಗ ಹೊತ್ತಲ್ಲದ ಹೊತ್ತಲ್ಲಿ ಆಕಳಿಕೆ ಬರುತ್ತದೆ." ಇದು ಎಷ್ಟು ಸರಿ?

badge