ಗುರುವಾರ, ಜುಲೈ 7, 2016

ಶ್ವಾನ ಸ್ವರ್ಗಾರೋಹಣ

ರೋಹಿತ್ ಚಕ್ರತೀರ್ಥ

೧೯೫೭ರ ಚಳಿಗಾಲ. ಅಮೆರಿಕ ಮತ್ತು ಸೋವಿಯೆಟ್ ರಷ್ಯದ ನಡುವೆ ಜಗತ್ತಿನ ದೊಡ್ಡಣ್ಣನಾಗಲು ಶೀತಲ ಸಮರ ಅರ್ಥಾತ್ ಕೋಲ್ಡ್ ವಾರ್ ನಡೆಯುತ್ತಿದ್ದ ಸಮಯ. ಸೋವಿಯಟ್ ರಷ್ಯದ ಅಧ್ಯಕ್ಷ ನಿಕಿಟ ಕ್ರುಶ್ಚೇವ್ ದೇಶದ ಎಲ್ಲ ರಾಕೆಟ್ ತಂತ್ರಜ್ಞರನ್ನು ಒಂದು ಔತಣ ಕೂಟಕ್ಕೆ ಕರೆದಿದ್ದರು. ಸ್ಪುಟ್ನಿಕ್ ೧ರ ಅಭೂತಪೂರ್ವ ಯಶಸ್ಸಿನ ವಿಜಯ ದುಂಧುಬಿಯಾಗಿತ್ತು ಈ ಔತಣ ಕೂಟ. ಸೋವಿಯೆಟ್ ಕೂಟದ ಅಂತರಿಕ್ಷ ಯೋಜನೆಗಳ ಪಿತಾಮಹ ಎಂದೇ ಕರೆಯಲ್ಪಟ್ಟ ಸೆರ್ಗಿ ಕೊರೊಲೆವ್ ಕೂಡ ಅಲ್ಲಿದ್ದರು. ನಿಕಿಟ ಕ್ರುಶ್ಚೇವ್, ನೆರೆದಿದ್ದ ಗಣ್ಯರನ್ನು ಅವರ ಸಾಧನೆಗಳಿಗಾಗಿ ಅಭಿನಂದಿಸಿ, ಸೋವಿಯೆಟ್ ಕೂಟದ ಅಂತರಿಕ್ಷ ಸಾಧನೆಗಳನ್ನು ಕೊಂಡಾಡಿ, ವೋಡ್ಕದ ಗ್ಲಾಸೆತ್ತಿ ಘೋಷಿಸಿದರು: ಇದೇ ವರ್ಷದ ನವೆಂಬರ್ ೭ರಂದು ನಾವು ಬೊಲ್ಶೆವಿಕ್ ಕ್ರಾಂತಿಯ ನಲವತ್ತನೆ ವರ್ಷದ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಅದರ ನೆನಪಿಗಾಗಿ ನಮ್ಮ ರಾಷ್ಟ್ರ ಇನ್ನೊಂದು ಸ್ಪುಟ್ನಿಕ್‌ನ್ನು ಅಂತರಿಕ್ಷಕ್ಕೆ ಹಾರಿಬಿಡಬೇಕು!

ನೆರೆದ ತಂತ್ರಜ್ಞರು ಮತ್ತು ವಿಜ್ಞಾನಿಗಳ ಬೆನ್ನುಹುರಿ ಆ ಚಳಿಯ ಕೊರೆತದಲ್ಲೂ 'ಚುಳ್' ಎಂದಿತು!
ಕಾರಣ, ಅವರೆಲ್ಲ ಸ್ಪುಟ್ನಿಕ್ ೧ರ ದಣಿವಿನಿಂದ ಹೊರಬಂದಿದ್ದರಷ್ಟೆ. ಆ ಉಪಗ್ರಹವನ್ನು ಅಂತರಿಕ್ಷದ ಕಕ್ಷೆಯಲ್ಲಿ ಕೂರಿಸುವ ಸಾಹಸಕ್ಕೆ ಹಗಲಿರುಳು ಒಂದು ಮಾಡಿ ದುಡಿದಿದ್ದರು. ಹಲವಾರು ತಿಂಗಳುಗಳ ಸಾವಿರಾರು ಗಂಟೆಗಳು ಸ್ಪುಟ್ನಿಕ್ ಎಂಬ ಫುಟ್‌ಬಾಲ್ ಗಾತ್ರದ ಉಪಗ್ರಹದ ಅಂತರಿಕ್ಷ ಯಾನಕ್ಕಾಗಿ ಕಳೆದುಹೋಗಿದ್ದವು. ಮತ್ತೆ ಅಂತಹುದೇ ಸಾಹಸಕ್ಕೆ ಕೈಹಾಕಲು ವಿಜ್ಞಾನಿಗಳಿಗೆ ತುಸುವಾದರೂ ಸಮಯ ಬೇಕಿತ್ತು. ಆದರೆ, ಈಗ ದೇಶದ ಅಧ್ಯಕ್ಷರು ತನ್ನ ಅಮೃತ ಹಸ್ತಗಳಿಂದ ಉದಾರವಾಗಿ ದಯಪಾಲಿಸಿದ್ದ ಸಮಯ ಕೇವಲ ಇಪ್ಪತ್ತೆಂಟು ದಿನಗಳು!

ಸೋವಿಯೆಟ್ಟಿನ ಕಮ್ಯುನಿಸ್ಟ್ ಸರಕಾರವು ಕಾಲಲ್ಲಿ ಹೇಳಿದ ಕೆಲಸವನ್ನು ತಲೆಯಲ್ಲಿ ಹೊತ್ತು ಮಾಡಬೇಕಾದ ಅನಿವಾರ್ಯತೆ ವಿಜ್ಞಾನಿಗಳಿಗೆ ಎದುರಾಗಿತ್ತು. ಅದರಲ್ಲೂ ದೇಶದ ಅಧ್ಯಕ್ಷನೇ ತೆರೆದ ಸಭೆಯಲ್ಲಿ ಆಜ್ಞೆ ಕೊಟ್ಟನೆಂದ ಮೇಲೆ ಕೇಳಬೇಕೆ? ತುಟಿ ಪಿಟಕ್ಕೆನ್ನದೆ, ವಿಜ್ಞಾನಿಗಳು ಮತ್ತು ತಂತ್ರಜ್ಞರ ತಂಡ ಹೊಸ ಕಾರ್ಯಯೋಜನೆಯಲ್ಲಿ ನಿರತವಾಯಿತು. ಗಂಟೆಗಳು, ನಿಮಿಷಗಳು ಹೇಗೆ ವಿನಿಯೋಗವಾಗಬೇಕು ಎಂಬ ಪ್ಲ್ಯಾನ್ ಸಿದ್ಧವಾಯಿತು. ರಾಕೆಟ್ ಮತ್ತು ಉಪಗ್ರಹವನ್ನು ಮತ್ತೆ ಮೊದಲಿಂದ ಕಟ್ಟುವ, ಗಗನಕ್ಕೆ ಹಾರಿಬಿಡುವ ಕೆಲಸಕ್ಕೆ ಚಾಲನೆ ಸಿಕ್ಕಿತು. ಆದರೆ, ಈ ಎರಡನೇ ಯೋಜನೆ ಭಿನ್ನವಾಗಿತ್ತು. ಯಾಕೆಂದರೆ, ಇದು ಮೊದಲ ಸ್ಪುಟ್ನಿಕ್ಕಿನಂತೆ ಕೇವಲ ಒಂದು ಯಂತ್ರವನ್ನು ಗಾಳಿಗೆ ತೂರುವ ಕೆಲಸವಾಗಿರಲಿಲ್ಲ. ರಾಕೆಟ್ಟಿನೊಳಗೆ ಒಂದು ನಾಯಿಯನ್ನು ಕೂರಿಸಿ ಪ್ರಪಂಚ ಪ್ರದಕ್ಷಿಣೆ ಮಾಡಿಸುವ ಅದ್ಭುತ ಸಾಹಸಕ್ಕೆ ವಿಜ್ಞಾನಿಗಳು ಕೈ ಹಾಕಿದ್ದರು!

ಆ ಕಾಲದಲ್ಲಿ ಅಮೆರಿಕ ಮತ್ತು ರಷ್ಯಗಳ ನಡುವೆ ಎಂತಹ ಘನಘೋರ ಮುಷ್ಟಿಯುದ್ಧ ನಡೆಯುತ್ತಿತ್ತೆಂದರೆ, ಎರಡೂ ದೇಶಗಳ ಒಂದೊಂದು ಹೆಜ್ಜೆಯನ್ನೂ ಮಾಧ್ಯಮಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಗಮನಿಸುತ್ತಿದ್ದವು. ರಷ್ಯ ಎಡವಿದರೆ ಅಮೆರಿಕದ ಟಿವಿಗಳು ವಾರ್ತೆಯನ್ನೇ ಹಾಸ್ಯ ಕಾರ್ಯಕ್ರಮದಂತೆ ಬಿತ್ತರಿಸಿ, ಶತ್ರುರಾಷ್ಟ್ರದ ದುರಂತಗಳನ್ನು ಅತಿಶಯವಾಗಿ ವರ್ಣಿಸಿ ಮಾನ ಕಳೆಯುತ್ತಿದ್ದವು. ಅಮೆರಿಕ ಎಲ್ಲಾದರೂ ಜಾರಿಬಿದ್ದರೆ, ಆ ಸಂದರ್ಭವನ್ನು ಮಿಸ್ ಮಾಡಿಕೊಳ್ಳದೆ ರಷ್ಯದ ಟಿವಿ ಮತ್ತು ಪತ್ರಿಕೆಗಳು ಗೇಲಿ ಮಾಡಿ ನಗುತ್ತಿದ್ದವು. ಹಾಗಿರುವಾಗ, ತಮ್ಮ ದೇಶದ ಅಧ್ಯಕ್ಷ ಒದಗಿಸಿಕೊಟ್ಟಿರುವ ಸುವರ್ಣಾವಕಾಶವನ್ನು ಕಳೆದುಕೊಳ್ಳುವುದಾದರೂ ಹೇಗೆ ಎಂಬ ಉನ್ಮಾದ ಸೋವಿಯೆಟ್ ರಷ್ಯದ ವಿಜ್ಞಾನಿಗಳಲ್ಲಿ ತುಂಬಿದ್ದು ಸಹಜವೇ. ಉಪಗ್ರಹವನ್ನಷ್ಟೇ ಭೂಮಿಯ ಸುತ್ತ ತಿರುಗಿಸುವುದಲ್ಲ; ಅದರಲ್ಲಿ ಪ್ರಾಣಿಯನ್ನೂ ಕಳಿಸಿ ಭೂಮಿಗೆ ಪ್ರದಕ್ಷಿಣೆ ಹಾಕಿಸಿ, ಜೀವಂತವಾಗಿ ಮರಳಿ ಭೂಮಿಗೆ ತರುತ್ತೇವೆ ಎಂದು ಅವರು ಹೇಳಿದ್ದು ಅಮೆರಿಕದ ನಿದ್ದೆಯನ್ನು ಪೂರ್ತಿಯಾಗಿ ಕಿತ್ತುಕೊಂಡುಬಿಟ್ಟಿತು. ರಷ್ಯಕ್ಕೆ ಬೇಕಾಗಿದ್ದದ್ದು ಇದೇ ತಾನೆ! ಮೊದಲ ಸ್ಪುಟ್ನಿಕ್ ಉಡ್ಡಯನಕ್ಕಿಂತ ಭಿನ್ನವಾದ ಪ್ರಯೋಗ ಮಾಡಿ ಜಗತ್ತಿನ ಹುಬ್ಬೇರಿಸಬೇಕು ಎಂಬ ತುಡಿತ ಒಂದೆಡೆಯಾದರೆ, ನಾವು ಮನುಷ್ಯರನ್ನು ಅಂತರಿಕ್ಷಕ್ಕೆ ಕಳಿಸುವ ದಿನ ದೂರವಿಲ್ಲ ಎಂಬ ಸಂದೇಶವನ್ನು ಅಮೆರಿಕಕ್ಕೆ ಕೊಟ್ಟು ಅದರ ನಿದ್ದೆಕೆಡಿಸುವ ಕೆಟ್ಟ ಹಂಬಲ ಸೋವಿಯೆಟ್ ರಷ್ಯದ್ದು. ಅದಕ್ಕಾಗಿ ರೂಪಿತವಾದ ಯೋಜನೆಯೇ ಶ್ವಾನ ಸ್ವರ್ಗಾರೋಹಣ! ರಷ್ಯನ್ ವಿಜ್ಞಾನಿಗಳು ತಮ್ಮ ಯೋಜನೆಗಾಗಿ ಮಾಸ್ಕೋ ನಗರದ ಗಲ್ಲಿಗಳಲ್ಲಿ ಅಲೆಯುತ್ತಿದ್ದ ಅಲ್ಬೀನ, ಮುಷ್ಕ ಮತ್ತು ಲೈಕಾ ಎಂಬ ಮೂರು ಬೀದಿನಾಯಿಗಳನ್ನು ಹಿಡಿದು ತಂದರು. ಬೀದಿಯ ಅಡ್ನಾಡಿ ನಾಯಿಗಳಾದರೆ ಈಗಾಗಲೇ ಪರಿಸರದ ವೈಪರೀತ್ಯಗಳಿಗೆ ಹೊಂದಿಕೊಂಡಿರುತ್ತವೆ, ಒಳ್ಳೆಯ ರೋಗನಿರೋಧಕ ಶಕ್ತಿ ಬೆಳೆಸಿಕೊಂಡಿರುತ್ತವೆ ಮತ್ತು ಹಸಿವು ನೀರಡಿಕೆ ಚಳಿ ಬಿಸಿಲಿನಂತಹ ಎಂತಹ ಪರಿಸ್ಥಿತಿಗೂ ತಲೆಯೊಡ್ಡುವ ಅನಿವಾರ್ಯತೆ ಗೊತ್ತಿರುತ್ತದೆ - ಎಂಬ ಕಾರಣಕ್ಕೆ ಆಯ್ಕೆಯಾದ ವಿಐಪಿಗಳು ಅವು!

ಸರಿ, ಆರಿಸಿದ ಮೇಲೆ ಟ್ರೈನಿಂಗ್ ನಡೆಯುವುದು ಬೇಡವೇ? ಈ ಮೂರೂ ನಾಯಿಗಳನ್ನು ವಿವಿಧ ಪರೀಕ್ಷೆಗಳಿಗೊಡ್ಡಿ ಅವುಗಳ ದೇಹದ ಸ್ಥಿತಿ, ಮಾನಸಿಕ ಸ್ತಿಮಿತವನ್ನು ಗಮನಿಸಲಾಯಿತು. ನಾಯಿಗಳ ಸುತ್ತ ಅತ್ಯಧಿಕ ಶಬ್ದವನ್ನು ಹರಡಿ ನೋಡಲಾಯಿತು. ಒಂದೇ ಸಮನೆ ತಿರುಗುವ ಚೇಂಬರಿನಲ್ಲಿಡಲಾಯಿತು. ಅತಿ ಉಷ್ಣ, ಅತಿ ಶೀತದ ಕೋಣೆಗಳಲ್ಲಿಟ್ಟು ವೀಕ್ಷಿಸಲಾಯಿತು. ಶೂನ್ಯ ಗುರುತ್ವದಲ್ಲಿ ತೇಲಿಸಲಾಯಿತು. ಪೃಷ್ಠಕ್ಕೆ ಬ್ಯಾಗುಗಳನ್ನು ಕಟ್ಟಿ ಅವು ಅಲ್ಲೇ ವಿಸರ್ಜನೆ ಮಾಡುವ ಹಾಗೆ ಮಾಡಲಾಯಿತು. ನಿಂತರೆ ಕೂರಲಾಗದ, ಕೂತರೆ ಮಲಗಲಾಗದ ಕೋಳಿಗೂಡಿನಂತಹ ಚೇಂಬರಿನಲ್ಲಿ ದಿನಗಟ್ಟಲೆ ಇಟ್ಟು ಅವುಗಳಿಗೆ ಅಭ್ಯಾಸ ಮಾಡಿಸಲಾಯಿತು. ಒಟ್ಟಾರೆ, ಅಂತರಿಕ್ಷದ ಅವಕಾಶದಲ್ಲಿ ರಾಕೆಟ್ಟನ್ನು ಬೆನ್ನಿಗೆ ಕಟ್ಟಿಕೊಂಡ ವ್ಯೋಮನೌಕೆಯೊಳಗೆ ಕೂತು ಪಯಣಿಸಬೇಕಾದ ಮನುಷ್ಯ ಎಷ್ಟೆಲ್ಲ ತರಬೇತಿಯನ್ನು ಪಡೆಯಬೇಕೋ ಅವೆಲ್ಲಕ್ಕಿಂತ ತುಸು ಹೆಚ್ಚೇ ಎನ್ನಿಸಬಹುದಾದ ಅಭ್ಯಾಸ ಮಾಡಿಸಿ ಈ ನಾಯಿಗಳನ್ನು ಅಣಿಗೊಳಿಸಿದರು.

ನಾಯಿಗಳು ತರಬೇತಿಯ ಎಲ್ಲ ಹಂತಗಳನ್ನು ದಾಟಿ ಬಂದರೂ ಪುಷ್ಪಕ ವಿಮಾನವೇರುವ 'ಭಾಗ್ಯ' ಲಭಿಸಿದ್ದು ಮಾತ್ರ ಲೈಕಾ ಎಂಬ ಹೆಣ್ಣು ನಾಯಿಗೆ. ಉಳಿದವರನ್ನು ಮೀರಿಸಿ ಗೆಲ್ಲಲು ಆಕೆಗಿದ್ದ ಎಕ್ಸ್‌ಟ್ರಾ ಅರ್ಹತೆಗಳೆಂದರೆ: ಆಕೆ ಎಲ್ಲೆಂದರಲ್ಲಿ ಹೋಗದೆ ನಿಗದಿತ ಸ್ಥಳದಲ್ಲಿ ಕೂತು ಮೂತ್ರ ವಿಸರ್ಜನೆ ಮಾಡುವುದನ್ನು ರೂಡಿಸಿಕೊಂಡಿದ್ದಳು ಮತ್ತು ಇತರ ನಾಯಿಗಳ ಜೊತೆ ಜಗಳವಾಡದೆ ಸೌಮ್ಯ ಸ್ವಭಾವ ತೋರಿಸಿದ್ದಳು, ಎನ್ನುವುದು! ಲೈಕಾ ಎಂದರೆ ಬೊಗಳುವ ನಾಯಿ ಎಂದರ್ಥ! ನಾಮಕ್ಕೂ ಗುಣಕ್ಕೂ ಎಂಥಾ ವೈರುಧ್ಯ!

ಲೈಕಾ ಒಂದು ಮುದ್ದಾದ ಬೀದಿನಾಯಿ. ಅವಳಿಗೆ ಆಗ ಕೇವಲ ಮೂರು ವರ್ಷ! ಹೆಚ್ಚೆಂದರೆ ಐದೂವರೆ ಕೆಜಿ ತೂಗುತ್ತಿದ್ದಳು. ಉಡ್ಡಯನಕ್ಕೆ ಆರಿಸಿದ ಮೇಲೆ, ಆಕೆಯನ್ನು ಉಳಿದ ನಾಯಿಗಳಿಂದ ಬೇರ್ಪಡಿಸಿ ವಿಶೇಷ ತರಬೇತಿಯನ್ನು ಮುಂದುವರಿಸಿದರು. ಆಕೆ ಇರಬೇಕಿದ್ದ ರಾಕೆಟ್ಟಿನೊಳಗಿನ ಸಣ್ಣ ಕೋಣೆಯಲ್ಲಿ ಆಕೆಯನ್ನು ಕೂಡಿಹಾಕಿ, ಅವಳಿಗೆ ಅದರ ಪರಿಚಯ ಮಾಡಿಸಿದರು. ರಾಕೆಟ್ಟು ಮೇಲೆ ಹಾರಿದ್ದು ನವೆಂಬರ್ ಮೂರನೇ ತಾರೀಖಿನಂದಾದರೂ, ಲೈಕಾ ತನ್ನ ಕೋಣೆಯಲ್ಲಿ ಅಕ್ಟೋಬರ್ ೩೧ರಿಂದಲೇ ಬಂಧಿಯಾಗಿದ್ದಳು. ಅವಳ ಕೋಣೆ ಎಷ್ಟು ಚಿಕ್ಕದಾಗಿತ್ತೆಂದರೆ, ಅಲ್ಲಿ ಆಕೆ ಪೂರ್ತಿಯಾಗಿ ಹಿಂತಿರುಗಿ ನೋಡುವುದೂ ಸಾಧ್ಯವಿರಲಿಲ್ಲ. ಆಕೆಯ ದೇಹದ ಜೊಂಪು ಕೂದಲಿಗೆಲ್ಲ ಜೆಲ್ಲಿ ಬಳಿದರು. ದೇಹದ ಅಲ್ಲಲ್ಲಿ ಕೂದಲು ಕತ್ತರಿಸಿ, ಚರ್ಮದ ಮೇಲೆ ಅಯೊಡಿನ್ ಹಚ್ಚಿ ಸೆನ್ಸಾರುಗಳನ್ನು ಅಳವಡಿಸಿದರು. ಆಕೆಯ ದೇಹದಲ್ಲಿ ನಡೆಯುತ್ತಿದ್ದ ಪುಟ್ಟಪುಟ್ಟ ಬದಲಾವಣೆಗಳನ್ನೂ ಈ ಸೆನ್ಸಾರುಗಳು ಕಂಪ್ಯೂಟರಿಗೆ ಊಡುತ್ತಿದ್ದವು. ಕಾಲಕಾಲಕ್ಕೆ ಆಕೆಯೆದುರು ವಿಶೇಷವಾಗಿ ತಯಾರಿಸಲ್ಪಟ್ಟ ಆಹಾರ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ಯಾವ ಜನ್ಮದ ಪಾಪವೋ, ಪುಣ್ಯವೋ - ಅಂತೂ ಲೈಕಾ, ಈ ಎಲ್ಲ ವ್ಯವಸ್ಥೆಗಳ ಹೊಸ ಅವತಾರದೊಂದಿಗೆ, ಅಂದುಕೊಂಡಿದ್ದಂತೆ ನವೆಂಬರ್ ೩ರಂದು, ಬೊಲ್ಶೊವಿಕ್ ಕ್ರಾಂತಿಯ 'ಸವಿ'ನೆನಪಿಗಾಗಿ, ರಷ್ಯದ ವೈಜ್ಞಾನಿಕ ಸಾಧನೆಗಳ ಮೇರುಕುರುಹಾಗಿ, ಅಮೆರಿಕದ ಗರ್ವಭಂಗ ಮಾಡಲು ಬೀಸಿದ ಚಾಟಿಯಂತೆ ಜಮ್ಮನೆ ಗಗನಕ್ಕೆ ಜಿಗಿದಳು! ಸ್ಪುಟ್ನಿಕ್ ೨ರ ಉಡ್ಡಯನದೊಂದಿಗೆ ಸೋವಿಯೆಟ್ ರಷ್ಯ - ಬಾಹ್ಯಾಕಾಶ ಚರಿತ್ರೆಯಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿತು.

ರಷ್ಯ, ತಾನು ಎರಡನೆ ಉಪಗ್ರಹ ಕಳಿಸುವ ಘೋಷಣೆ ಕೂಗಿ ತಿಂಗಳಾಗುವ ಮೊದಲೆ ಅದನ್ನು ಕಾರ್ಯಗತ ಮಾಡಿತೋರಿಸಿದ್ದನ್ನು ಜಗತ್ತಿನ ಅತ್ಯಂತ ದೊಡ್ಡ ಅದ್ಭುತ ಎಂಬಂತೆ ಬಿಂಬಿಸಿಕೊಂಡಿತು. ಸಹಜವಾಗಿಯೇ ಇದರಿಂದ ಅಮೆರಿಕಕ್ಕೆ ಮುಖಭಂಗವಾಯಿತು. ಆಗಿನ ಎನ್‌ಬಿಸಿ ಚಾನೆಲ್ ಬಿತ್ತರಿಸಿದ ಸುದ್ದಿ ನೋಡಿ - "ಕೊನೆಗೂ ಸೋಯಿಯೆಟ್ ಒಕ್ಕೂಟ ಅಮೆರಿಕದ ಗತ್ತಿನ ಕೋಡು ಮುರಿದು ಹಾಕಿದೆ. ಸ್ಪುಟ್ನಿಕ್ ೨ ಉಪಗ್ರಹ ಲೈಕಾ ಎಂಬ ನಾಯಿಯ ಸಮೇತ ಆಕಾಶಕ್ಕೆ ಚಿಮ್ಮಿದೆ. ಇಲ್ಲಿ ಗಮನಿಸಲೇಬೇಕಾದ ಇನ್ನೊಂದು ಸಂಗತಿಯೂ ಇದೆ. ಸ್ಪುಟ್ನಿಕ್‌ಅನ್ನು ಹೊತ್ತು ಸಾಗಿಸಿರುವ ರಾಕೆಟ್ಟು ೫೦೦೦ ಮೈಲಿ ದೂರ ಹಾರಿ ಹೈಡ್ರೋಜನ್ ಬಾಂಬಿನ ಮಳೆಗರೆಯುವ ಸಾಮರ್ಥ್ಯವನ್ನೂ ಹೊಂದಿದೆ ಎಂಬ ವಿಷಯವನ್ನು ಅಮೆರಿಕ ಉಪೇಕ್ಷಿಸಬಾರದು!" ಬಹುಶಃ ಈ ಒಂದು ಸುದ್ದಿಯಿಂದಲೇ ನಾವು ಆ ಕಾಲದಲ್ಲಿ ಈ ಎರಡು ದೇಶಗಳ ನಡುವೆ ಬೆಳೆದುನಿಂತಿದ್ದ ಶೀತಲ ಯುದ್ಧದ ತೀವ್ರತೆಯನ್ನು ಲೆಕ್ಕ ಹಾಕಬಹುದು. ಅದೇನೇ ಇರಲಿ, ಲೈಕಾ ಮಾತ್ರ ಈ ಎಲ್ಲ ಲೌಕಿಕ ಗೊಂದಲಗಳಿಂದ ದೂರವಾಗಿ ಆಕಾಶಕ್ಕೆ ಚಿಮ್ಮಿದ್ದಳು. ಒಂದಾನೊಂದು ಕಾಲದಲ್ಲಿ ಬೀದಿನಾಯಿಯಾಗಿದ್ದ ಲೈಕಾ ಮರುದಿನದ ಎಲ್ಲ ಪತ್ರಿಕೆಗಳಲ್ಲೂ ಮುಖಪುಟದಲ್ಲಿ ಕಂಗೊಳಿಸಿದಳು. ಲೈಕಾಳನ್ನು ಭೂಮಿಗೆ ಪ್ರದಕ್ಷಿಣೆ ಹಾಕಿಸಿ ಜೀವಂತವಾಗಿ ವಾಪಸ್ ಕರೆದುಕೊಂಡು ಬರುತ್ತೇವೆ ಎಂದು ರಷ್ಯದ ವಿಜ್ಞಾನಿಗಳು ಪ್ರಶ್ನಿಸಿದ ಪತ್ರಕರ್ತರಿಗೆಲ್ಲ ಹೇಳುತ್ತಿದ್ದರು. ಅದು ಅಸಾಧ್ಯ ಎಂದು ಹೇಳುವ ಧೈರ್ಯ ಅಮೆರಿಕಕ್ಕೂ ಇರಲಿಲ್ಲ. ಲೈಕಾ ಹೇಗೆ ವಾಪಸ್ ಬರುತ್ತಾಳೆ? ಅವಳನ್ನಿಟ್ಟ ವ್ಯೋಮಬಂಡಿಯೇ ಮತ್ತೆ ಭೂಮಿಗಿಳಿಯುತ್ತದಾ? ಅಥವಾ ಇನ್ನೊಂದು ವಾಹನ ಕಳಿಸಿ ಅವಳನ್ನು ಅದರಲ್ಲಿ ಇಟ್ಟುಕೊಂಡು ಬರುತ್ತಾರಾ? ಅಥವಾ ಅವಳನ್ನು ಪ್ಯಾರಾಚೂಟ್ ಮೂಲಕ ಭೂಮಿಗೆ ತಂದಿಳಿಸುತ್ತಾರಾ? ಎಂದು ಜನ ತಮ್ಮ ಅರಿವಿಗೆ ನಿಲುಕಿದಷ್ಟು ವಿಷಯಗಳನ್ನು ಇಟ್ಟುಕೊಂಡು ಚರ್ಚಿಸುತ್ತಿದ್ದರು. ರಷ್ಯದ ಸರಕಾರ, ಜನರಿಗೆ, "ಲೈಕಾಳ ಯಶಸ್ವೀ ಮರುಪ್ರಯಾಣಕ್ಕಾಗಿ ಪ್ರತಿದಿನ ಒಂದು ನಿಮಿಷ ಪ್ರಾರ್ಥಿಸಿ" ಎಂದು ಕೇಳಿಕೊಂಡಿತು. ಜನ ಇದು ಕೂಡ ತಮ್ಮ ಸಾಂವಿಧಾನಿಕ ಕರ್ತವ್ಯ ಎಂಬಂತೆ ಪ್ರತಿದಿನ ತಮ್ಮತಮ್ಮ ನಾಯಿ ಬೆಕ್ಕುಗಳ ಜೊತೆ ಲೈಕಾಳಿಗಾಗಿ ಪ್ರಾರ್ಥಿಸುತ್ತಿದ್ದರು. ಅತ್ತ ಅಮೆರಿಕದಲ್ಲೂ ಅವಳದ್ದೇ ಚರ್ಚೆ ಗಾಸಿಪ್ಪಿನಂತೆ ನಡೆಯುತ್ತಿತ್ತು. ಹೋಟೇಲುಗಳಲ್ಲಿ, ಬಾರುಗಳಲ್ಲಿ ಹಾಡುವ ಆರ್ಕೆಸ್ಟ್ರದ ಹುಡುಗರು ಕೂಡ ಲೈಕಾ ಗುಣಗಾನವನ್ನೇ ಮಾಡುತ್ತ ಕಾಸು ಸಂಪಾದಿಸುತ್ತಿದ್ದರು! ಒಂದು ಹಾಡು ಹೀಗಿತ್ತು -

When that shaggy dog gets back from outer space,
Can we all go out and have another race?
Will she tree a coon or just howl at the moon
When that shaggy dog gets back from outer space?

They'll pin a red, red ribbon in her hair
For being the only dog that's been up there!
She will be talk in every town,
When that Sputnik comes back down,
For she has been the highest in the air!

ಇದು ನಾವು-ನೀವು ನಿಂತಿರುವ ಈ ನೆಲದ ಮೇಲೆ ನಡೆಯುತ್ತಿದ್ದ ಕತೆ. ಆದರೆ, ಅತ್ತ ಆಕಾಶದಲ್ಲಿ ಸ್ಪುಟ್ನಿಕ್‌ನೊಳಗೆ ನಡೆದುಹೋದ ಘಟನೆಗಳು ಮಾತ್ರ ಈ ಕತೆಗೆ ಬೇರೆಯೇ ತಿರುವು ಕೊಟ್ಟಿದ್ದವು. ನಭಕ್ಕೆ ಚಿಮ್ಮಿದ ಏಳು ಗಂಟೆಗಳವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಸ್ಪುಟ್ನಿಕ್ ವ್ಯೋಮದಿಂದ ಕಳಿಸಿದ ಸಿಗ್ನಲ್‌ಗಳು ರಷ್ಯದ ಅಂತರಿಕ್ಷ ಕೇಂದ್ರಗಳ ಕಂಪ್ಯೂಟರುಗಳಲ್ಲಿ ದಾಖಲಾಗುತ್ತಿದ್ದವು. ಆದರೆ, ಏಳು ಗಂಟೆಗಳ ಬಳಿಕ, ಆ ಸಿಗ್ನಲ್‌ಗಳು ಥಟ್ಟನೇ ನಿಂತುಹೋದವು! ಉಡ್ಡಯನವಾದ ಕೆಲ ಗಂಟೆಗಳಲ್ಲಿ ಲೈಕಾಳ ಹೃದಯಬಡಿತ ನಿಮಿಷಕ್ಕೆ ೧೦೩ ಇದ್ದದ್ದು ೨೪೦ಕ್ಕೆ ಹಾರಿತ್ತು! ಆಕೆಯ ಉಸಿರಾಟದ ವೇಗ ಮಿತಿಮೀರಿತ್ತು. ಆಕೆಯನ್ನು ಕೂರಿಸಿದ ಅಥವಾ ಬಂಧಿಸಿದ ಕೊಠಡಿಯ ಉಷ್ಣಾಂಶ ೪೦ ಡಿಗ್ರಿ ಸೆಲ್ಸಿಯಸ್ಸಿಗೆ ಏರಿಹೋಗಿತ್ತು. ಹದಿನೈದು ಡಿಗ್ರಿ ಮೀರಿದೊಡನೆ ಚಾಲೂ ಆಗಬೇಕಿದ್ದ ಫ್ಯಾನು ಕೈಕೊಟ್ಟು, ಕೊಠಡಿಯ ಉಷ್ಣವೇರಿ ಲೈಕಾ ಬೆವರಿಳಿಸುತ್ತ ಕಂಗಾಲಾಗಿ ಹೋಗಿದ್ದಳು. ಕೇವಲ ಕೆಲ ನಿಮಿಷಗಳಲ್ಲಿ ನಡೆದ ಈ ಎಲ್ಲ ಬದಲಾವಣೆಗಳಿಂದ, ಆಕೆ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾಳೆ ಎಂದು ಯಾರು ಬೇಕಾದರೂ ಊಹಿಸಬಹುದಾಗಿತ್ತು.

ಲೈಕಾ ಇನ್ನಿಲ್ಲವಾದಳು. ಗಗನಕ್ಕೆ ಹಾರಿದ ಕೆಲವೇ ಗಂಟೆಗಳಲ್ಲಿ ಕೆಟ್ಟುಹೋಗಿದ್ದ ಸ್ಫುಟ್ನಿಕ್, ನಾಯಿಯ ಹೆಣ ಹೊತ್ತು ಅಂತರಿಕ್ಷದಲ್ಲಿ ಸುತ್ತುವ ಸಮಾಧಿಯಾಗಿ ಬದಲಾಗಿತ್ತು. ಆದರೆ, ಇಲ್ಲಿ - ಪ್ರಪಂಚದಲ್ಲಿ ನಿಂತು ಅವಳ ಯಾನಕ್ಕೆ ಟಾಟಾ ಮಾಡಿದ್ದ ಜನ ಮಾತ್ರ, ಲೈಕಾ ಇನ್ನೂ ಬದುಕಿದ್ದಾಳೆ, ಅಲ್ಲಿ ಕೂತೇ ಈ ಜಗತ್ತನ್ನು ನೋಡುತ್ತಿದ್ದಾಳೆ; ಕಾಲಕಾಲಕ್ಕೆ ಬ್ರೆಡ್ಡು-ಬನ್ನು ತಿಂದುಂಡು ಸುಖವಾಗಿ ಕಾಲ ಕಳೆಯುತ್ತಿದ್ದಾಳೆ ಎಂದೇ ನಂಬಿಬಿಟ್ಟಿತ್ತು. ಇಂದಲ್ಲಾ ನಾಳೆ ಆಕೆಯನ್ನು ಮರಳಿ ಭೂಮಿಗೆ ಕರೆತರಲಾಗುತ್ತದೆ ಎಂದು ಅಮೆರಿಕವೂ ನಂಬಿಬಿಟ್ಟಿತ್ತು. ಆದರೆ, ಸ್ಪುಟ್ನಿಕ್ ಹಾರಿ ಒಂದು ವಾರದ ನಂತರ, ಅಮೆರಿಕದ ಕೆಲವು ವಿಜ್ಞಾನಿಗಳು "ಲೈಕಾ ಬದುಕಿರುವುದು ಸಂಶಯ" ಎನ್ನತೊಡಗಿದರು. ಯಾಕೆಂದರೆ, ನಾಯಿಯೇ ಆಗಲಿ ಮನುಷ್ಯನೇ ಆಗಲಿ, ಭೂಮಿಯ ಸಂಪರ್ಕದಿಂದ ಸಾವಿರಾರು ಮೈಲಿ ದೂರದಲ್ಲಿ ಆರೇಳು ದಿನ ಕಳೆಯುವ ತಂತ್ರಜ್ಞಾನ ಆಗ ಅಮೆರಿಕದಲ್ಲೂ ಇರಲಿಲ್ಲ, ಅದರ ಶತ್ರು ರಷ್ಯದ ಬಳಿಯೂ ಇರಲಿಲ್ಲ ಎನ್ನುವುದು ಅನೇಕ ವಿಜ್ಞಾನಿಗಳಿಗೆ ಖಚಿತವಾಗಿ ಗೊತ್ತಿತ್ತು. ಹಾಗಾಗಿ, ಲೈಕಾ ವಾಪಸು ಬರುವುದು ಸಂಶಯ; ರಷ್ಯ ಸರಕಾರ ಬೊಗಳೆ ಬಿಡುತ್ತಿದೆ ಎಂದು ಕೆಲವರು ಸಾರ್ವಜನಿಕವಾಗಿಯೇ ತಮ್ಮ ಅಸಮಾಧಾನ ಹೇಳಿಕೊಂಡರು. ಜನಸಾಮಾನ್ಯರಿಗೂ ಆ ಮಾತು ನಿಜ ಇರಬಹುದು ಎಂಬ ಅನುಮಾನ ಬಲವಾಗತೊಡಗಿತು. ಪ್ರಾಣಿ ದಯಾ ಸಂಘಟನೆಗಳಂತೂ "ಒಂದು ಮೂಕಪ್ರಾಣಿಯನ್ನು ವ್ಯೋಮಾಕಾಶಕ್ಕೆ ಕಳಿಸಿ ಈ ನೆಲದ ಕಾನೂನಿಗೆ ಅವಮಾನ ಮಾಡಿರುವ ಸೋವಿಯೆಟ್ ಸರಕಾರ ಸತ್ಯ ಹೇಳಿ ಮಾನವೀಯತೆ ಮೆರೆಯಬೇಕು" ಎಂದು ಚಳುವಳಿಯನ್ನು ಶುರುಮಾಡಿಬಿಟ್ಟವು.

ಲೈಕಾ ತೀರಿಕೊಂಡಿದ್ದಾಳೆ ಎಂಬ ಗಾಳಿಸುದ್ದಿ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡಲಾರಂಭಿಸಿತು. ಕೆಲವು ರಷ್ಯನ್ ವಿಜ್ಞಾನಿಗಳು ಮುಂದೆ ಬಂದು ಸ್ಫುಟ್ನಿಕ್‌ನಲ್ಲಿ ತಾಂತ್ರಿಕ ದೋಷ ಇದ್ದದ್ದನ್ನು ಒಪ್ಪಿಕೊಂಡರು. ಉಡ್ಡಯಿಸಿದ ಕೆಲವು ದಿನಗಳಲ್ಲೇ ಅದರೊಳಗಿನ ವ್ಯವಸ್ಥೆ ಕೆಟ್ಟುಹೋಗಿತ್ತು. ಹಾಗಾಗಿ ಲೈಕಾ ಸಾವನ್ನಪ್ಪಿದಳು - ಎಂದು ಹೇಳಿ ಉರಿಯುವ ಬೆಂಕಿಗೆ ಪೆಟ್ರೋಲ್ ಸಿಂಚನ ಮಾಡಿದರು. ತಾಂತ್ರಿಕ ದೋಷದಿಂದ ಆ ಬಂಡಿಯೊಳಗಿನ ಫ್ಯಾನು ಕೈಕೊಟ್ಟು, ಕೊಠಡಿಯ ಉಷ್ಣಾಂಶ ವಿಪರೀತ ಏರಿ ಅದು ಸಿಡಿದದ್ದೇ ಲೈಕಾ ಸಾವಿಗೆ ಕಾರಣ ಎಂದು ಕೆಲವರು ಹೇಳಿದರು. "ಇಲ್ಲ, ಆಕೆ ಮೂರು ದಿನ ಜೀವಂತವಿದ್ದಳು. ಮೂರನೇ ದಿನ ಆಕ್ಸಿಜನ್ ಪೂರೈಕೆ ನಿಂತುಹೋಗಿ ಅಸುನೀಗಿದಳು" ಎನ್ನುವ ವಾದ ಕೆಲವರದ್ದು. ರಾಕೆಟ್ಟಿಗೆ ಅಳವಡಿಸಿದ್ದ ಬ್ಯಾಟರಿಗಳು ಕೆಟ್ಟುಹೋಗಿ, ಅದರ ಇಡೀ ವ್ಯವಸ್ಥೆಯೇ ನಿಂತುಹೋಯಿತು. ಸ್ಪುಟ್ನಿಕ್ ಭೂಮಿಗೆ ಕಳಿಸುತ್ತಿದ್ದ ಸಿಗ್ನಲ್‌ಗಳೂ ನಿಂತುಹೋದವು. ಲೈಕಾ ಸತ್ತಿದ್ದು ಹೀಗೆ - ಎಂದು ಕೆಲ ವಿಜ್ಞಾನಿಗಳ ಅನಿಸಿಕೆ. ಆದರೆ, ಇವ್ಯಾವ ಮಾಹಿತಿಗಳನ್ನೂ ಸರಕಾರ ಹೊರಜಗತ್ತಿಗೆ ಕೊಟ್ಟಿರಲೇ ಇಲ್ಲ.  ಈ ಗಲಾಟೆ - ಗೊಂದಲಗಳು ಮುಖಪುಟದ ಸುದ್ದಿಯಾಗುತ್ತಿದ್ದಾಗಲೇ, ಸೋವಿಯೆಟ್ ಸರಕಾರ - ಇಲ್ಲ, ಆಕೆ ಆರು ದಿನ ಜೀವಂತವಿದ್ದಳು. ಆಕೆಯ ಕೊನೆಯ ಆಹಾರದ ಪ್ಯಾಕೆಟ್ಟಿನಲ್ಲಿ ವಿಷ ಬೆರೆಸಲಾಗಿತ್ತು. ಆಕೆ ಸತ್ತಿದ್ದು ವಿಷಾಹಾರದಿಂದ ಎಂದು ಹೇಳಿ ರಾಡಿಗೆ ಇನ್ನೊಂದು ಕಲ್ಲೆಸೆಯಿತು! ನವೆಂಬರ್ ಮೂರರಂದು ಗಗನಕ್ಕೆ ಹೋದ ಲೈಕಾ, ಬೊಲ್ಶೊವಿಕ್ ಕ್ರಾಂತಿಯ ನಲವತ್ತನೆ ವರ್ಷಾಚರಣೆಯ ದಿನದವರೆಗೂ ಜೀವಂತವಿದ್ದಳು ಎನ್ನುವುದನ್ನು ಸಾಬೀತುಪಡಿಸುವುದು ಸರಕಾರದ ಮುಖ್ಯ ಅಜೆಂಡ ಆಗಿತ್ತು! ಯಾಕೆ ಸಾಯಿಸಿದಿರಿ, ಯಾಕೆ ಅವಳನ್ನು ವಾಪಸು ತರಲಿಲ್ಲ? ಎಂದು ಇಡೀ ಜಗತ್ತು ಕೇಳತೊಡಗಿದಾಗ ವಿಜ್ಞಾನಿಗಳು ಇನ್ನೊಂದು ಬಾಂಬು ಸಿಡಿಸಿದರು: ಸ್ಫುಟ್ನಿಕ್ ಬಂಡಿಯ ವಿನ್ಯಾಸ ಹೇಗಿತ್ತೆಂದರೆ, ಅದನ್ನು ವಾಪಸು ಕರೆತರುವ ಯಾವುದೇ ತಂತ್ರಜ್ಞಾನವನ್ನು ಅಳವಡಿಸಿರಲಿಲ್ಲ. ತನ್ನ ಕೆಲಸ ಮುಗಿದ ಮೇಲೆ, ಆ ಬಂಡಿ ಅಂತರಿಕ್ಷದಲ್ಲೇ ಸುತ್ತು ಹೊಡೆಯುತ್ತ, ಇಲ್ಲವೇ, ಭೂಕಕ್ಷೆಯನ್ನು ಸ್ಪರ್ಷಿಸಿ ಸುಟ್ಟುಹೋಗುವ ಹಾಗೆ ಅದನ್ನು ರಚಿಸಲಾಗಿತ್ತು. ಲೈಕಾಳನ್ನು ರಾಕೆಟ್ಟಿನಲ್ಲಿ ಕಳಿಸುವಾಗಲೇ ಆಕೆಯ ಮರಣಮೃದಂಗ ಬಾರಿಸಿಯಾಗಿತ್ತು! ಆಕೆ ಎಂದಿಗೂ ಭೂಮಿಗೆ ಮರಳಿ ಬರುವ ಪ್ರಶ್ನೆಯೇ ಇರಲಿಲ್ಲ!

ಮುಖ್ಯ ವಿಷಯವೇನೆಂದರೆ, ಕ್ರುಶ್ಚೇವ್ ವಿಧಿಸಿದ ಸಮಯದ ಮಿತಿಯಲ್ಲಿ ವಿಜ್ಞಾನಿಗಳಿಗೆ ಒಂದು ಪರಿಪೂರ್ಣ ರಾಕೆಟ್ಟನ್ನು ನಿರ್ಮಿಸುವುದು ಸಾಧ್ಯವಿರಲಿಲ್ಲ. ರಾಕೆಟ್ಟಿನ ಕೊನೆಯ ಹಂತ ಸ್ಫುಟ್ನಿಕ್‌ನಿಂದ ಬೇರ್ಪಡುವ ತಂತ್ರಜ್ಞಾನವನ್ನೂ ಇದರಲ್ಲಿ ಅಳವಡಿಸಿರಲಿಲ್ಲ. ರಷ್ಯದ ಅಧ್ಯಕ್ಷ ಹೇಳಿದ ಮಾತಿಗೆ ಮರುಮಾತಾಡದೆ ತಲೆಕೊಡುವುದು ಮತ್ತು ಅಮೆರಿಕವನ್ನು ಹಿಮ್ಮೆಟ್ಟಿ ಮುಂದೋಡುವುದು - ಇವೆರಡೇ ಮುಖ್ಯ, ಉಳಿದದ್ದೆಲ್ಲ ನಗಣ್ಯವಾಗಿದ್ದ ಕಾಲವದು. ಕೆಟ್ಟುಹೋದ ಆ ಪುಟ್ಟ ಗಗನ ನೌಕೆ ಗಂಟೆಗೆ ಹದಿನೆಂಟು ಸಾವಿರ ಮೈಲಿಗಳನ್ನು ಕ್ರಮಿಸುತ್ತ ಭೂಮಿಗೆ ೨೫೭೦ ಬಾರಿ ಗಿರಕಿ ಹೊಡೆದು ೧೯೫೮ರ ಎಪ್ರೀಲ್ ೧೪ರಂದು ಭೂಕಕ್ಷೆಯನ್ನು ಸ್ಪರ್ಷಿಸಿ ಸುಟ್ಟು ಭಸ್ಮವಾಯಿತು. ಲೈಕಾ ನೆನಪಾಗಿ ಉಳಿದಳು.

ತಂತ್ರಜ್ಞಾನದ ಔನ್ನತ್ಯದ ಅರ್ಥಹೀನತೆಗೆ ಸಂಕೇತವೆನ್ನುವ ಹಾU, ಬೀದಿಯಲ್ಲಿ ತಿರುಗಾಡಿಕೊಂಡಿದ್ದ ನಾಯಿಯೊಂದು ಭೂಮಿಯಿಂದ ಸಾವಿರಾರು ಮೈಲಿ ಮೇಲೆ ಹೋಗಿ ಪಡಬಾರದ ಪಾಡು ಪಟ್ಟು ಕೊನೆಯುಸಿರೆಳೆಯಿತು. ಲೈಕಾಳ ಯೋಗಕ್ಷೇಮ ನೋಡಿಕೊಂಡ ಮತ್ತು ಆಕೆಯನ್ನು ಉಡ್ಡಯನಕ್ಕೆ ಮುನ್ನ ಒಂದು ದಿನದ ಮಟ್ಟಿಗೆ ತನ್ನ ಮನೆಗೆ ಕರೆದೊಯ್ದು ತನ್ನ ಮಕ್ಕಳೊಂದಿಗೆ ಆಟವಾಡಲು ಬಿಟ್ಟ ಆಕೆಯ ಡಾಕ್ಟರ್ - ವ್ಲಾದಿಮೀರ್ ಯಾಜ್‌ದೋವಿಸ್ಕಿ, ಮನುಷ್ಯನಾಗಿ ನಾನು ಆಕೆಗೆ ಕೊಡಬಹುದಾಗಿದ್ದ ಕಾಣಿಕೆ ಅಷ್ಟು ಮಾತ್ರ. ಯಾಕೆಂದರೆ, ಇನ್ನು ಕೆಲವೇ ದಿನಗಳಲ್ಲಿ ರಾಕೆಟ್ಟಿನಲ್ಲಿ ವ್ಯೋಮಾಕಾಶಕ್ಕೆ ಹೋಗಿ ಅಸುನೀಗುವವಳಿದ್ದಳು ಅವಳು ಎಂದಿದ್ದಾರೆ. ಸ್ಪುಟ್ನಿಕ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವಿಜ್ಞಾನಿ ಓಲೆಗ್ ಗಜೆಂಕೋ ೧೯೯೮ರಲ್ಲಿ ಹೇಳಿದ ಮಾತುಗಳು ಇವು: ಅವತ್ತಿಂದ ಇಂದಿನವರೆಗೂ ಆ ಪಾಪಕಾರ್ಯಕ್ಕಾಗಿ ಪಶ್ಚಾತ್ತಾಪ ಪಡುತ್ತಲೇ ಇದ್ದೇನೆ. ಒಂದು ನಿಷ್ಪಾಪಿ ನಾಯಿಯ ಕೊಲೆಗೆ ನ್ಯಾಯ ಒದಗಿಸುವಂತಹ ಯಾವೊಂದು ದೊಡ್ಡ ಸಾಧನೆಯನ್ನೂ ನಾವು ಆ ಕಾರ್ಯಾಚರಣೆಯಲ್ಲಿ ಮಾಡಲಿಲ್ಲ!.

೨೦೧೨ರ ನವೆಂಬರ್‌ನಲ್ಲಿ ವಿಜಯವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಮತ್ತು ಲೇಖಕರ ಮೊದಲ ವಿಜ್ಞಾನ ಲೇಖನ

ಕಾಮೆಂಟ್‌ಗಳಿಲ್ಲ:

badge