ಬುಧವಾರ, ಜೂನ್ 29, 2016

ಮನುಷ್ಯನೇಕೆ ಇಷ್ಟು ಬುದ್ಧಿವಂತ ಪ್ರಾಣಿ?

ಕೊಳ್ಳೇಗಾಲ ಶರ್ಮ

ಈ ವಿಶ್ವದಲ್ಲಿ ಇರುವ ಅತ್ಯಂತ ವಿಚಿತ್ರ ಪ್ರಾಣಿ ಯಾವುದು ಗೊತ್ತೇ? ಅದೇ ನಾವು. ನಾವು ಮನುಷ್ಯರಲ್ಲಿ ಇತರೆ ಪ್ರಾಣಿಗಳಿಗಳಿಗಿಲ್ಲದ ಎಷ್ಟೊಂದು ವಿಶೇಷ ಗುಣಗಳಿವೆ ಎಂದರೆ ಬಹುಶಃ ನಮ್ಮನ್ನು ಬೇರಾವುದೋ ಗ್ರಹದ ಜೀವಿಯಿರಬಹುದು ಎಂದು ವರ್ಗೀಕರಿಸಿದರೂ ತಪ್ಪಿಲ್ಲ. ಬೇರಾವುದೋ ಪ್ರಾಣಿ ಯಾಕೆ, ಮನುಷ್ಯನ ಕುಟುಂಬಕ್ಕೇ ಸೇರಿದ ವಾನರಗಳಿಗೂ ನಮಗೂ ಅಜಗಜಾಂತರ ವ್ಯತ್ಯಾಸವಿದೆ. ಎದ್ದು ಕಾಣುವ ಕೆಲವು ವ್ಯತ್ಯಾಸಗಳೆಂದರೆ ನಿರರ್ಗಳ ಮಾತು, ಸಂವಹನ ಕಲೆ, ಸಹಕಾರಿ ಪ್ರವೃತ್ತಿ, ಶಿಶುಪಾಲನೆಯ ಗುಣ, ನೇರ ನಡೆ ಮತ್ತು ಕುಶಲ ಬುದ್ಧಿವಂತಿಕೆ. ಇಷ್ಟೊಂದು ವಿಶಿಷ್ಟ ಗುಣಗಳು ಮಾನವನಿಗಷ್ಟೆ ಬಂದದ್ದೇಕೆ ಎನ್ನುವುದರ ಬಗ್ಗೆ ವಿಜ್ಞಾನಿಗಳಿಗೆ ಅವಿರತ ಕುತೂಹಲ. ಏಕೆಂದರೆ ಈ ಗುಣಗಳಿಂದಾಗಿಯೇ ಮನುಷ್ಯ ಇರುವುದೊಂದೇ ಪ್ರಪಂಚವನ್ನು ಆಳುವಷ್ಟು ಪ್ರಬಲನಾಗಿದ್ದಾನೆ ಎನ್ನಬಹುದು.

ಮತ್ತೊಂದು ದೃಷ್ಟಿಯಿಂದಲೂ ಮನುಷ್ಯ ಬಲು ವಿಶಿಷ್ಟ. ಇಡೀ ವಿಶ್ವವನ್ನೇ ಆಳುವ ಏಕೈಕ ಪ್ರಾಣಿಯೆನ್ನಿಸಿಕೊಂಡಿದ್ದರೂ ಇವನೇನು ಮಹಾ ಬಲಶಾಲಿಯಲ್ಲ.
ದೈಹಿಕವಾಗಿ ಮನುಷ್ಯ ಇತರೇ ಪ್ರಾಣಿಗಳಿಗಿಂತ ಬಲು ದುರ್ಬಲ. ಕುದುರೆ ಕಚ್ಚಿರುವುದನ್ನು ಗಮನಿಸಿರಬೇಕಲ್ಲ?  ಆ ಹಿಡಿತದಿಂದ ಬಿಡಿಸಿಕೊಳ್ಳುವುದು ಬಲು ಕಷ್ಟ. ಮಾನವನ ಕಡಿತ ಅಷ್ಟು ಬಲವಲ್ಲ. ಚಿರತೆಯ ಮುಂದೆ ಒಲಿಂಪಿಕ್ ದಾಖಲೆ ಓಟಗಾರನ ಓಟ ಆಮೆ ನಡೆಯೇ ಸರಿ. ಇನ್ನು ನಮ್ಮ ಸಂವೇದನಾಂಗಗಳಾದರೂ ಸಶಕ್ತವಾಗಿವೆಯೇ? ನಾಯಿ ಮೈಲು ದೂರದಲ್ಲಿರುವ ಪ್ರಾಣಿಯ ವಾಸನೆ ಹಿಡಿಯಬಲ್ಲುದು. ಆದರೆ ಮನುಷ್ಯನಿಗೆ ತನ್ನ ಪಕ್ಕದಲ್ಲೇ ಕೊಳೆತು ನಾರುವ ಕೊಳೆದಿಬ್ಬ ಇದ್ದರೂ ಗಮನಿಸದಂತಹ ಮೂಗಿದೆ. ವಾಸನೆಯೂ ಅಷ್ಟೆ. ದೃಷ್ಟಿಯೂ ಅಷ್ಟೆ. ಒಟ್ಟಾರೆ ದೈಹಿಕವಾಗಿ ಮಾನವನ ಒಂದೊಂದು ಅಂಗವನ್ನೂ ಮೀರಿಸುವಂತಹ ಅಂಗಗಳಿರುವ ಪ್ರಾಣಿಗಳಿವೆ.

ಇನ್ನೂ ಒಂದು ವಿಷಯದಲ್ಲಿ ಮಾನವ ಬಲು ದುರ್ಬಲ. ಇವನು ಶಿಶುಪಾಲನೆಯಲ್ಲಿ ಕಳೆಯುವಷ್ಟು ಕಾಲವನ್ನು ಬೇರಾವ ಪ್ರಾಣಿಯೂ ತನ್ನ ಮರಿಯನ್ನು ಕಾಪಾಡುವುದಕ್ಕೆ ಬಳಸುವುದಿಲ್ಲ. ಆನೆಯನ್ನೇ ಗಮನಿಸಿ. ಅದರ ಆಯಸ್ಸೂ ಹೆಚ್ಚು ಕಡಿಮೆ ನಮ್ಮದರಷ್ಟೆ ಎನ್ನಬಹುದು. ಆದರೆ ಅದೇನೂ ತನ್ನ ಮರಿಗಳನ್ನು ಮೂರ್ನಾಲ್ಕು ವರ್ಷ ಎತ್ತಿಕೊಂಡು ಓಡಾಡುವುದಿಲ್ಲ. ಮಂಗಗಳೂ ಅಷ್ಟೆ. ಕೆಲವು ತಿಂಗಳುಗಳ ಕಾಲವಷ್ಟೆ ಮರಿಗೆ ತಾಯಿಯ ಆಸರೆ. ಅನಂತರ ಅದರ ಪಾಡು ಅದಕ್ಕೆ. ಇನ್ನು ಗೋವಿನ ಕಥೆ ಕೇಳಲೇ ಬೇಡಿ. ಹುಟ್ಟಿದ ಕೂಡಲೇ ಚಂಗನೆ ಎಗರಿ ಓಡಾಡುವಷ್ಟು ಶಕ್ತ ಗೋವಿನ ಕರು. ಮಾನವನ ಶಿಶುವಂತೋ ಮೂರ್ನಾಲ್ಕು ವರ್ಷ ಅಸಹಾಯಕ ಸ್ಥಿತಿಯಲ್ಲಿಯೇ ಇರುತ್ತದೆ. ತನ್ನ ಆಹಾರವನ್ನು ಹುಡುಕುವುದಿರಲಿ, ಅರಗಿಸಿಕೊಳ್ಳಲೂ ಅದು ಕಷ್ಟ ಪಡಬೇಕು.

ಇಷ್ಟೆಲ್ಲ ಅಶಕ್ತವಾಗಿದ್ದರೂ ಜಗತ್ತನ್ನೇ ಆಳುವಂತಹ ಸಾಮರ್ಥ್ಯ ಹೇಗೆ ಬಂತು? ಇದೊಂದು ಬಗೆಹರಿಯದ ಪ್ರಶ್ನೆ ಎನ್ನಬಹುದು. ತತ್ವಶಾಸ್ತ್ರಜ್ಞರು ಆಸ್ತಿಕರು, ಇವೆಲ್ಲ ಸೃಷ್ಟಿಕರ್ತನ ಮಾಯೆ ಎಂದು ಹೇಳಿ ಸುಮ್ಮನಾಗಿಬಿಡಬಹುದು. ಆದರೆ ಮಾನವನೆಂಬ ಪ್ರಾಣಿ ಇತರೆ ಪ್ರಾಣಿಗಳಂತೆಯೇ ಈ ಭೂಮಿಯ ಮೇಲೆ ವಿಕಾಸವಾಗಿದೆ ಎನ್ನುವ ವಿಜ್ಞಾನಕ್ಕೆ ಮಾನವನಿಗೆ ಈ ಸಾಮರ್ಥ್ಯ ಬಂದದ್ದು ಹೇಗೆ ಎನ್ನುವ ಬಗ್ಗೆ ತಣಿಯದ ಕುತೂಹಲವಿದೆ. ಇವನ ಸಾಮರ್ಥ್ಯಕ್ಕೆ ಬೇರಾವ ಪ್ರಾಣಿಗೂ ಇಲ್ಲದಷ್ಟು ಬುದ್ಧಿವಂತಿಕೆ, ಕಲಿಕೆಯ ಸಾಮರ್ಥ್ಯ ಹಾಗೂ ದೊಡ್ಡ ಮಿದುಳು ಕಾರಣವೆಂದು ವಿಜ್ಞಾನ ನಂಬುತ್ತದೆ.

ತನಗಿರುವ ಬುದ್ಧಿಯಿಂದಲೇ ಜಗವನ್ನು ಆಳಲು ಮಾನವ ಕಲಿತಿದ್ದಾನೆ ಎನ್ನುವುದನ್ನು ಒಪ್ಪೋಣ. ಆದರೆ ಅಶಕ್ತ ದೇಹದಲ್ಲಿ ಈ ಕುಶಲ ಬುದ್ಧಿ ಬೆಳೆದದ್ದೇಕೆ ಎನ್ನುವ ಮತ್ತೊಂದು ಪ್ರಶ್ನೆ ಕಾಡದೇ ಇರುವುದಿಲ್ಲ.  ಮನುಷ್ಯನ ಉಳಿವಿಗೆ ಬುದ್ಧಿವಂತಿಕೆ ಜರೂರಾಗಿತ್ತಾದ್ದರಿಂದ ಹೆಚ್ಚು ಬುದ್ಧಿಯಿರುವಂತಹ ಪೀಳಿಗೆಗಳನ್ನು ನಿಸರ್ಗ ಆಯ್ದು ಉಳಿಸಿಕೊಂಡಿರಬೇಕು. ಹೀಗೆ ಬೇರೆಲ್ಲ ಪ್ರಾಣಿಗಳಿಗಿಂತ ಗ್ರಹಣ ಶಕ್ತಿ ಹಾಗೂ ಕಲಿಕೆಯ ಶಕ್ತಿ ಹೆಚ್ಚಿರುವ ಮಾನವನ ವಿಕಾಸವಾಗಿರಬೇಕು ಎನ್ನುವುದು ವಿಜ್ಞಾನಿಗಳ ತರ್ಕ. ಈ ಸಮಸ್ಯೆಗೆ ಹಲವು ಸಮಾಧಾನಗಳನ್ನೂ ವಿಜ್ಞಾನಿಗಳು ಸೂಚಿಸಿದ್ದಾರೆ. ಉದಾಹರಣೆಗೆ, ಅಶಕ್ತನಾದ್ದರಿಂದ ಆಹಾರ ಸಂಪಾದನೆಗೆ ಇತರರ ಜೊತೆಗೆ ಸಂವಹಿಸಿ, ಸಹಕರಿಸುವ ಅವಶ್ಯಕತೆ ಇದ್ದಿತು. ಇದರಿಂದಾಗಿ ಬುದ್ಧಿ ಬೆಳೆಯಿತು ಎನ್ನುವುದು ಒಂದು ವಾದ. ಬೇರೆ ಕಾರಣಗಳೂ ಇದ್ದಿರಬಹುದು. ಬೇರೆ ಪ್ರಾಣಿಗಳಿಂದ ಭಿನ್ನವಾದ ಆಹಾರ ಪದ್ಧತಿಯನ್ನು ಅನುಸರಿಸಿದ್ದರಿಂದ ಮಾನವನ ಮಿದುಳು ಚುರುಕಾಗಿಯೂ, ದೊಡ್ಡದಾಗಿಯೂ ವಿಕಾಸವಾಗಿರಬೇಕು ಎನ್ನುವುದು ಇನ್ನೊಂದು ತರ್ಕ. ಮಾನವನಿಗೆ ಅತಿ ನಿಕಟ ಸಂಬಂಧಿಗಳೆಂದು ಪ್ರತೀತವಾದ ವಾನರಗಳಲ್ಲಿ ಅಲ್ಪ ಮಟ್ಟಿಗೆ ಬುದ್ಧಿವಂತಿಕೆ, ಕುಶಲಕೈಗಾರಿಕೆಗಳು ಕಾಣುತ್ತವೆ. ಈ ಗುಣಗಳು ಅಧಿಕವಾಗಿದ್ದರಿಂದ ಮೆದುಳು ದೊಡ್ಡದಾಯಿತು. ಬುದ್ಧಿ ಬೆಳೆಯಿತು. ವಾನರ ನರನಾದ ಎನ್ನುವುದು ಮತ್ತೊಂದು ಊಹೆ.

ಇಷ್ಟೆಲ್ಲಾ ಊಹಾಪೋಹಗಳಿದ್ದರೂ ಇದಮಿತ್ಥಂ ಎಂದು ಹೇಳುವುದು ಸಾಧ್ಯವಾಗಿಲ್ಲ. ಪುರಾವೆಗಳೂ ಇಲ್ಲ. ಮಾನವನಂತೆಯೇ ಆಹಾರ ಪದ್ಧತಿಗಳಿರುವ ವಾನರಗಳಿವೆ. ಮಾತು ಬುದ್ಧಿ ಹೆಚ್ಚಾದ್ದರಿಂದ ಕಲಿತೆವೋ? ಮಾತು ಹೆಚ್ಚಾದ್ದರಿಂದ ಬುದ್ಧಿ ಬೆಳೆಯಿತೋ ಎನ್ನುವುದು ಮೊಟ್ಟೆ-ಕೋಳಿಗಳ ನಡುವೆ ಯಾವುದು ಮೊದಲು ಬಂತು ಎನ್ನುವ ಪ್ರಶ್ನೆಯಂತೆಯೇ ಸರಿ. ಇವೆಲ್ಲದರ ಜೊತೆಗೆ ಈಗ ಮತ್ತೊಂದು ಕೌತುಕಮಯ ತರ್ಕವೂ ಮುಂದಾಗಿದೆ. ಅಮೆರಿಕೆಯ ರೋಶೆಸ್ಟರ್ ವಿವಿಯ ಮಿದುಳು ಮತ್ತು ಗ್ರಹಣಶಾಸ್ತ್ರ ತಜ್ಞ ಸ್ಟೀವನ್ ಪಿಯಂತುದೋಸಿ ಮತ್ತು  ಸೆಲಿಸ್ತೆ ಕಿಡ್ ಮಾನವನಲ್ಲಿ ಅತೀವ ಬುದ್ಧಿವಂತಿಕೆ ಬರಲು ಕಾರಣ ಶಿಶುಗಳು ಪೂರ್ಣ ಬೆಳವಣಿಗೆಗೂ ಮೊದಲೇ ಹೆರಿಗೆಯಾವುದರಿಂದ ಇರಬೇಕು ಎಂದು ಹೊಸ ತರ್ಕವನ್ನು ಮುಂದಿಟ್ಟಿದ್ದಾರೆ.  ಇವರ ತರ್ಕವನ್ನು ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಮೊನ್ನೆ ಪ್ರಕಟಿಸಿದೆ.

ಹೌದು. ಮನುಷ್ಯನ ಶಿಶು ಬಲು ಸೂಕ್ಷ್ಮ. ಒಂಭತ್ತು ತಿಂಗಳುಗಳಷ್ಟು ದೀರ್ಘಕಾಲ ತಾಯ ಗರ್ಭದಲ್ಲೇ ಬೆಳೆದರೂ, ಅತಿ ಅಶಕ್ತ ಜೀವಿಯಾಗಿ ಈ ಜಗತ್ತಿಗೆ ಕಣ್ತೆರೆಯುತ್ತದೆ. ಇನ್ನೂ ಕೆಲವು ತಿಂಗಳು ತಾಯ ಗರ್ಭದಲ್ಲೇ ಬೆಳೆದಿದ್ದರೆ ಬಹುಶಃ ಆಕಳ ಕರುವಿನಂತೆ ಹೆರಿಗೆಯಾಗಿ ಹೊರಬಂದ ಕೂಡಲೇ ಕುಣಿದಾಡುತ್ತಿತ್ತೋ ಏನೋ? ಇದೇಕೆ ಹೀಗೆ? ಅಶಕ್ತ ಮಗುವನ್ನು ಹೆರುವ ಗತಿ ಮನುಷ್ಯನಿಗೆ ಬಂತೇಕೆ ಎನ್ನುವ ಪ್ರಶ್ನೆಗೆ ಪಿಯಂತುದೋಸಿ ಮತ್ತು ಕಿಡ್ ಹೇಳುವುದು ಹೀಗೆ. “ಬಹುಶಃ ಮಿದುಳು ದೊಡ್ಡದಾಗಿ ಬೆಳೆದರೆ ಹೆರಿಗೆಯಾಗುವುದು ಕಷ್ಟವೆನ್ನುವ ಕಾರಣಕ್ಕೆ ಬೆಳೆವಣಿಗೆ ಪೂರ್ಣವಾಗುವುದಕ್ಕೂ ಮೊದಲೇ ಹೆರಿಗೆಯಾಗುತ್ತಿರಬೇಕು. ಇಂತಹ ಅಶಕ್ತ ಸಂತಾನವನ್ನು ವಂಶೋದ್ದಾರಕರಾಗುವ ತನಕ ಜತನದಿಂದ ಕಾಪಾಡಿಕೊಳ್ಳಲು ಸಾಕಷ್ಟು ಬುದ್ಧಿವಂತಿಕೆಯೂ ಇರಬೇಕು. ಹೀಗೆ ಬುದ್ಧಿವಂತಿಕೆಯಿಂದಾಗಿ ಅಶಕ್ತ ಶಿಶುವಿನ ಹೆರಿಗೆಯೂ, ಅಶಕ್ತ ಶಿಶುವಿನ ಪಾಲನೆಗಾಗಿ ಬುದ್ಧಿವಂತ ಪೋಷಕರಾಗಬೇಕಾದ ಅವಶ್ಯಕತೆಯೂ ಮನುಷ್ಯನಿಗೆ ಬಂದಿದೆ. ಈ ವಿಚಿತ್ರ ಚಕ್ರದ ಫಲವಾಗಿ ಮನುಷ್ಯ ಅತೀವ ಬುದ್ಧಿಯುಳ್ಳ ಪ್ರಾಣಿಯಾಗಿ ವಿಕಾಸವಾಗಿದ್ದಾನೆ.”

ಇದುವೂ ಊಹೆಯಷ್ಟೆ ಎನ್ನಬೇಡಿ. ಊಹೆಯೇನೋ ನಿಜ. ಆದರೆ ಇವರ ತರ್ಕವೇನೂ ಬೇಕಾಬಿಟ್ಟಿ ಎಸೆದ ಬಾಣವಲ್ಲ. ಮನುಷ್ಯನಿಂದ ಮಂಗನವರೆಗೆ ವಾನರಗಳ ಜೀವನಚಕ್ರ, ಬಸಿರಿನ ಅವಧಿ, ಹುಟ್ಟಿನ ನಂತರ ತಾಯಿಯ ಆಸರೆಯಲ್ಲಿ ಬೆಳೆಯುವ ಕಾಲ, ಮಿದುಳಿನ ಗಾತ್ರ, ಬುದ್ಧಿವಂತಿಕೆ ಇವೆಲ್ಲವನ್ನೂ ಗಣಿಸಿ, ಒಂದಿನ್ನೊಂದರ ಜೊತೆಗೆ ಹೊಂದಿಸಿ ತಾಳೆ ನೋಡಿದ್ದಾರೆ. ಹುಟ್ಟುವಾಗ ತಲೆಯ ಗಾತ್ರ, ವಯಸ್ಕ ಮನುಷ್ಯನ ತಲೆಯ ಗಾತ್ರ, ಬಸುರಿನ ಕಾಲ ಇವೆಲ್ಲವೂ ಶಿಶುವಿನ ಉಳಿವನ್ನು ನಿರ್ಧರಿಸುವ ಅಂಶಗಳೆಂದು ಪರಿಗಣಿಸಿರುವ ಪಿಯಂತುದೋಸಿ ಇವುಗಳಿಗೂ ಉಳಿವಿಗೂ ಇರುವ ಸಂಬಂಧವನ್ನು ಗಣಿತ ಸೂತ್ರವೊಂದರ ಮೂಲಕ ವಿವರಿಸಿದ್ದಾರೆ.

ಇದು ಕಂಡ ಗಾತ್ರ, ಕಾಲದ ಅಳತೆ. ಇದೇ ಸೂತ್ರವನ್ನು ಬಳಸಿ ಬಸುರಿನ ಕಾಲ ಹೆಚ್ಚಾದರೇನಾಗಬಹುದು?  ಬಸುರಿನಲ್ಲಿಯೇ ತಲೆಯ ಗಾತ್ರ ಹೆಚ್ಚಾದರೆ ಏನಾಗಬಹುದು ಎಂದೆಲ್ಲ ಗಣಿಸಿದ್ದಾರೆ. ಹೀಗೆ ಗಣಿಸಿದಾಗ ಕಂಡದ್ದು: ಬಸುರಿನ ಅವಧಿ ಹೆಚ್ಚಿದಷ್ಟೂ ಉಳಿವಿನ ಸಾಧ್ಯತೆ ಕಡಿಮೆಯಾಗುತ್ತದೆ. ಹಾಗೆಯೇ ತಲೆಯ ಗಾತ್ರ ಹೆಚ್ಚಿದಷ್ಟೂ ಉಳಿಯುವ ಸಾಧ್ಯತೆ ಕಡಿಮೆಯಾಗುತ್ತದೆ. ಅರ್ಥಾತ್, ತಲೆಯ ಗಾತ್ರ ಹಾಗೂ ಬಸುರಿನ ಕಾಲವೆರಡೂ ಎಲ್ಲೋ ತಾಳೆಯಾದಾಗ ಮಾತ್ರ ಶಿಶು ಬದುಕಿ ಉಳಿಯುವ ಸಾಧ್ಯತೆ ಅತಿ ಹೆಚ್ಚು.

ಇಷ್ಟಕ್ಕೆ ನಿಲ್ಲದೆ, ಪಿಯಂತುದೋಸಿ ಇದೇ ಸೂತ್ರವನ್ನು ಇತರೆ ಪ್ರಾಣಿಗಳ, ಅದರಲ್ಲೂ ಮಾನವನಿಗೆ ನಿಕಟ ಸ್ವರೂಪವೆನ್ನಿಸಿದ ವಾನರಗಳು ಹಾಗೂ ಮಂಗಗಳ, ಗಾತ್ರ ಮತ್ತು ಬಸಿರಿನ ಅವಧಿಗೆ ಹೊಂದಿಸಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ ವಾನರಗಳಲ್ಲಿ ಅತಿ ಬುದ್ಧಿವಂತವೆನ್ನಿಸಿದ ಚಿಂಪಾಂಜಿ, ಗೊರಿಲ್ಲಗಳಂತಹ ಪ್ರಾಣಿಗಳಲ್ಲಿ ಶಿಶುವಿನ ಆರೈಕೆಯ ಅವಧಿ ಉಳಿದವುಗಳಿಗಿಂತಲೂ ಹೆಚ್ಚು. ಅರ್ಥಾತ್, ಹೆಚ್ಚು ಬುದ್ಧಿವಂತ ಪ್ರಾಣಿಗಳಲ್ಲಿ ಶಿಶುಗಳು ಉಳಿದವುಗಳಿಗಿಂತ ಅಶಕ್ತರೆನ್ನಬಹುದು. ಮಾನವನಲ್ಲಿ ಇದು ತುಟ್ಟತುದಿಯನ್ನೇರಿದೆ. ಬುದ್ಧಿಯೂ ಹೆಚ್ಚು, ಮಕ್ಕಳ ಪಾಲನೆಯ ಅವಧಿಯೂ ಹೆಚ್ಚು.

ಅಂದರಿಷ್ಟೆ. ಬುದ್ಧಿವಂತಿಕೆ ಹೆಚ್ಚಾದಷ್ಟೂ ಶಿಶುಪಾಲನೆಯ ಅವಧಿ ಹೆಚ್ಚಾಗುತ್ತದೆ. ಶಿಶುಪಾಲನೆಯ ಅವಧಿ ಹೆಚ್ಚು ಎಂದರೆ ಬಸುರಿನ ಅವಧಿ ಕಡಿಮೆ ಎಂದರ್ಥವಷ್ಟೆ! ಹೀಗೆ ಅಶಕ್ತ ಶಿಶುವಿಗೆ ಜನ್ಮ ನೀಡುವ ಪ್ರಾಣಿಗಳು ಬುದ್ಧಿವಂತಿಕೆಯಲ್ಲಿ ಮಿಗಿಲಾಗಿರಬೇಕು ಎಂದಾಯ್ತು. ಶಿಶುಪಾಲನೆ, ಅಶಕ್ತ ಶಿಶುವಿನ ಜನ್ಮ ಹಾಗೂ ಬುದ್ಧಿವಂತಿಕೆಯ ನಡುವಣ ಈ ತಾಳಮೇಳದಿಂದಾಗಿಯೇ ಮನುಷ್ಯ ಅತ್ಯಂತ ಬುದ್ಧಿವಂತನಾಗಿ ಬೆಳೆದಿದ್ದಾನೆ ಎನ್ನುತ್ತಾರೆ ಪಿಯಂತುದೋಸಿ. ಮಕ್ಕಳ ಪಾಲನೆ ಪೋಷಣೆಯಿಂದಾಗಿಯೇ ಮನುಷ್ಯ ಅತ್ಯಂತ ಬುದ್ಧಿವಂತನಾಗಿದ್ದಾನೆ ಎನ್ನುವುದು ಇವರ ತರ್ಕ.

ಆಕರ: Steven T. Piantadosi, and Celeste Kidd, Extraordinary intelligence and the care of infants 

ಕಾಮೆಂಟ್‌ಗಳಿಲ್ಲ:

badge