ಶನಿವಾರ, ಜೂನ್ 25, 2016

ಯಾವ ಸ್ವರ್ಗದ ಹೂವೋ ಈ ಟೆರೆನ್ಸ್ ಟಾವೋ!

ರೋಹಿತ್ ಚಕ್ರತೀರ್ಥ


ಅಡಿಲೇಡ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸ್ನಾತಕೋತ್ತರ ಗಣಿತ ತರಗತಿ. ಕ್ಯಾಲ್ಕುಲಸ್ಸಿನ ಮೇಲೆ ಯಾವುದೋ ಗಹನ ಪ್ರಶ್ನೆಯನ್ನು ಪ್ರೊಫೆಸರ್ ಬೋರ್ಡಿನ ಮೇಲೆ ಬಿಡಿಸುತ್ತಿದ್ದಾರೆ. ಗಣಿತದ ಸಿಕ್ಕುಸಿಕ್ಕಾದ ಸಾಲುಗಳನ್ನು ಒಡೆಯುತ್ತ ಒಂದೊಂದು ಹೆಜ್ಜೆ ಮುಂದುವರಿಯುತ್ತಲೇ ಅವರಿಗೆ ಹಾದಿ ತಪ್ಪಿದ ಅರಿವಾಗಿದೆ. ಜಿಂಕೆಯ ಹಿಂದೆ ಹೋಗಿ ದಾರಿ ತಪ್ಪಿದ ದುಷ್ಯಂತನಂತೆ ಬೆಪ್ಪಾಗಿ ನಿಂತಿದ್ದಾರೆ. ಅವರ ಲೆಕ್ಕದ ತಲೆಬುಡ ಅರ್ಥವಾಗದಿದ್ದರೂ ವಿದ್ಯಾರ್ಥಿಗಳು ಈ ಶೋಕದಲ್ಲಿ ನಾವೂ ಭಾಗವಹಿಸಬೇಕು ಎನ್ನುವಂತೆ ಜೋಲುಮುಖ ಮಾಡಿ ಕೂತಿದ್ದಾರೆ. ಅಷ್ಟರಲ್ಲಿ ಆ ನೀರವ ಮೌನವನ್ನು ಸೀಳಿಕೊಂಡು ಒಂದು ಪುಟಾಣಿ ಕೀರಲು ದನಿ ಬಂದಿದೆ. ಆ ಚೋಟುದ್ದದ ಹುಡುಗ ಎದ್ದುನಿಂತು ಗುರುಗಳು ಎಲ್ಲಿ ತಪ್ಪಿದ್ದಾರೆ ಎನ್ನುವುದನ್ನು ಕರಾರುವಾಕ್ಕಾಗಿ ತೋರಿಸಿ, ಮುಂದಿನ ಸಾಲುಗಳನ್ನು ಹೇಗೆ ಬರೆದರೆ ಈ ತೊಂದರೆಯಿಂದ ಪಾರಾಗಬಹುದು ಎನ್ನುವ ದಾರಿ ತೋರುತ್ತಾನೆ. ಕ್ಷಣಕಾಲ ಎಲ್ಲವನ್ನೂ ಮರೆತು ಅವನ ಮುಖವನ್ನೇ ನೆಟ್ಟದೃಷ್ಟಿಯಿಂದ ನೋಡುವ ಗುರುಗಳು "ವಾಹ್! ಎಂತಹ ಸುಂದರ ಪರಿಹಾರ! ಮತ್ತದಕ್ಕೆ ಎಷ್ಟೊಂದು ಅರ್ಥಪೂರ್ಣವಾದ ನಿರೂಪಣೆ!" ಎಂದು ಮನದುಂಬಿ ಹೇಳಿ ಚಪ್ಪಾಳೆ ತಟ್ಟಿಯೇಬಿಡುತ್ತಾರೆ. ಹುಡುಗನಿಗೆ ಕ್ಲಾಸಿನ ಮುಂದೆ ದೊಡ್ಡವನಾದೆನೆಂಬ ಮುಜುಗರ, ಹಿತವಾದ ರೋಮಾಂಚನ, ಎದೆಯಲ್ಲಿ ಖುಷಿಯ ತಬಲ.

ಯಾಕೆಂದರೆ ಅವನಿಗಿನ್ನೂ ಆಗ, ನಂಬಿದರೆ ನಂಬಿ, ಕೇವಲ ಒಂಬತ್ತು ವರ್ಷ!
ಅವನು ಎಷ್ಟೊಂದು ಸಣ್ಣ ಗುಬ್ಬಚ್ಚಿಯೆಂದರೆ, ಇಪ್ಪತ್ತರ ಹರೆಯದ ಹುಡುಗರಿಗಾಗಿ ಮಾಡಿದ ಡೆಸ್ಕು ಕೂಡ ಅವನಿಗೆ ಎಟುಕುತ್ತಿರಲಿಲ್ಲ! ಅದಕ್ಕೆಂದೇ, ಇನ್ನೇನು ಒನ್-ಟೂ-ತ್ರೀ ಎಂದೊಡನೆ ಚಿಗರೆಯಂತೆ ಓಡಬೇಕೆಂದು ಓಟಗಾರರು ಕೂತಿರುತ್ತಾರಲ್ಲ, ಹಾಗೆ ಕೂತು ಪಾಠ ಕೇಳಿಸಿಕೊಳ್ಳುತ್ತಿದ್ದ ಜಿಂಕೆಮರಿ ಅದು! ಅವನ ಹೆಸರು ಟೆರೆನ್ಸ್ ಟಾವೋ. ಜಗತ್ತಿನೆಲ್ಲ ಬಾಲಪ್ರತಿಭೆಗಳನ್ನು ಒಟ್ಟುಸೇರಿಸಿ ಪಂದ್ಯ ಏರ್ಪಡಿಸಿದರೂ ಅದರಲ್ಲೂ ಮೊದಲಿಗನಾಗಿ ಬರಲು ಹವಣಿಸುತ್ತಿದ್ದ ಈ ಹುಡುಗ, ಅದಾಗಲೇ ಶಾಲೆ ಬಿಡಿ, ಕಾಲೇಜಿನ ಗಣಿತವನ್ನೂ ಅರೆದು ಕುಡಿದಾಗಿತ್ತು. ಪದವಿಯ ಕೊನೆಯ ವರ್ಷದಲ್ಲಿ ಹುಡುಗರು ಅಭ್ಯಸಿಸುವ ಗಣಿತ ಪಾಠಗಳು ಅವನಿಗೆ ಬೋರು ಹೊಡೆಸಿ ನಿದ್ದೆ ಬರಿಸುತ್ತಿದ್ದವು. ಯಾಕೆಂದರೆ ಟಾವೋ ಎರಡನೇ ವಯಸ್ಸಿಗೇ ಟಿವಿ ನೋಡುತ್ತ ಓದಲು ಕಲಿತವನು. ಅಲ್ಲಿ ಬರುತ್ತಿದ್ದ ಧಾರಾವಾಹಿಗಳನ್ನು ನೋಡುತ್ತ ಅದು ಯಾಕೆ ಹಾಗೆ, ಇದು ಯಾಕೆ ಹೀಗೆ ಎಂದು ತರ್ಕದ ಪ್ರಶ್ನೆ ಹಾಕಿ ಅಪ್ಪಮ್ಮನನ್ನೇ ಗಾಬರಿಗೊಳಿಸುತ್ತಿದ್ದವನು. ಎರಡೂವರೆ ವರ್ಷದ ಈ ಮಗು ಒಮ್ಮೆ ಆರು ವರ್ಷದ ಹುಡುಗನನ್ನು ಹತ್ತಿರ ಕೂರಿಸಿಕೊಂಡು ಕೂಡು-ಕಳೆ ಲೆಕ್ಕ ಹೇಳಿಕೊಡುತ್ತಿದ್ದುದನ್ನು ನೋಡಿದ ತಂದೆಗೆ ನಿಜಕ್ಕೂ ಆಘಾತವಾಯಿತು. ಟೆರೆನ್ಸ್ ಮೂರನೇ ಕ್ಲಾಸಿನಲ್ಲಿದ್ದಾಗ, ಹನ್ನೆರಡನೇ ಕ್ಲಾಸಿನ ಹುಡುಗರ ಜೊತೆ ಚೆಸ್ ಆಡಿ ಚೆಕ್‌ಮೇಟ್ ಕೊಟ್ಟುಬಿಡುತ್ತಿದ್ದ! ಐದನೇ ಕ್ಲಾಸಿಗೆ ಬರುವಷ್ಟರಲ್ಲಿ ಜ್ಯಾಮೆಟ್ರಿಯನ್ನು ಓದಿಮುಗಿಸಿ ಬೀಜಗಣಿತ, ಅಂಕಗಣಿತಗಳ ಪುಸ್ತಕದಲ್ಲಿ ಎಲ್ಲಾ ಅಭ್ಯಾಸ ಲೆಕ್ಕಗಳನ್ನು ಮಾಡಿಬಿಟ್ಟಿದ್ದ. ಒಂಬತ್ತನೇ ವಯಸ್ಸಿಗೆ ಅವನು ಹೋಗಿ ಕೂರುತ್ತಿದ್ದದ್ದು ಮನೆ ಪಕ್ಕದಲ್ಲಿದ್ದ ಅಡಿಲೇಡ್ ಯೂನಿವರ್ಸಿಟಿಯ ಎಮ್ಮೆಸ್ಸಿ ಕ್ಲಾಸುಗಳಲ್ಲಿ!

ಟೆರೆನ್ಸ್ ಹುಟ್ಟಿದ್ದು ೧೯೭೫ರ ಜುಲೈ ೧೭ರಂದು. ಅವನದ್ದು ಆಸ್ಟ್ರೇಲಿಯದಲ್ಲಿ ತಳ ಊರಿದ ಚೈನೀಸ್ ಕುಟುಂಬ. ಅಪ್ಪ ಬಿಲ್ಲಿ ಟಾವೋ ಮಕ್ಕಳ ವೈದ್ಯ. ತಾಯಿ ಗ್ರೇಸ್, ಹಾಂಗ್‌ಕಾಂಗ್ ವಿಶ್ವವಿದ್ಯಾಲಯದಲ್ಲಿ ಗಣಿತ ಮತ್ತು ಭೌತವಿಜ್ಞಾನಗಳನ್ನು ಅಧ್ಯಯನ ಮಾಡಿದ್ದಳು. ಇವರಿಬ್ಬರೂ ಮದುವೆಯಾಗಿ ೧೯೭೦ರ ದಶಕದಲ್ಲಿ ಹಾಂಗ್‌ಕಾಂಗಿನಿಂದ ಆಸ್ಟ್ರೇಲಿಯಕ್ಕೆ ಬಂದು ನೆಲೆಸಿದರು. ಅಲ್ಲೇ ಹುಟ್ಟಿದ ಟೆರೆನ್ಸ್, ಒಂದು ರೀತಿಯಲ್ಲಿ ಎರಡು ಸಂಸ್ಕೃತಿಗಳ ಮಿಶ್ರಫಲ ಎಂದೇ ಹೇಳಬಹುದು. ಮನೆಯಲ್ಲಿ ಸಾಂಪ್ರದಾಯಿಕ ಚೈನೀಸ್ ಜೀವನಕ್ರಮ ಇದ್ದರೂ ಹೊರಗೆ ಆಧುನಿಕ ಆಸ್ಟ್ರೇಲಿಯನ್ ಆಗಿ ಬೆಳೆಯುತ್ತಿದ್ದವನು ಟೆರೆನ್ಸ್. ಐದು ವರ್ಷದ ಎಳೆಗರುವಾಗಿದ್ದಾಗಲೇ ಅವನ ಸಾಮರ್ಥ್ಯವೇನು ಎನ್ನುವುದು ಹೆತ್ತವರಿಗೆ ಸಂಪೂರ್ಣವಾಗಿ ಅರ್ಥವಾಗಿಬಿಟ್ಟಿತ್ತು. ಹಾಗಾಗಿಯೇ ಅವನಿಗೆ ಯಾವುದರಲ್ಲೂ ಒತ್ತಡ ಹೇರದೆ, ತನ್ನಿಷ್ಟದಂತೆ ಮುಂದುವರಿಯಲು ಬಿಟ್ಟರು. ಕಾಲೇಜಿನ ಪಾಠಗಳನ್ನು ಕೇಳಿಸಿಕೊಳ್ಳಬೇಕೆಂದು ಈ ನರ್ಸರಿ ಮಗು ಬಯಸಿದಾಗ, ಕಾಲೇಜಿನ ಆಡಳಿತ ಮಂಡಳಿ ಜೊತೆ ಮಾತಾಡಿ ಅದನ್ನೂ ವ್ಯವಸ್ಥೆ ಮಾಡಿದರು. ಗಣಿತ ಪ್ರಪಂಚದಲ್ಲಿ ಒಲಿಂಪಿಯಾಡ್ ಸ್ಪರ್ಧೆಗೆ ಒಂದು ವಿಶೇಷ ಸ್ಥಾನವಿದೆ. ಅದರಲ್ಲಿ ಗೆಲ್ಲುವುದು ಬಿಡಿ, ಭಾಗವಹಿಸಿ ಬರುವುದೇ ಒಲಿಂಪಿಕ್ ಚಿನ್ನದ ಪದಕಕ್ಕೆ ಸಮ ಎಂದು ಗಣಿಸುತ್ತಾರೆ. ಅಂತಹ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಭಾಗವಹಿಸುವ ಮೂಲಕವೇ ಟೆರೆನ್ಸ್ ದಾಖಲೆ ಬರೆದ. ಯಾಕೆಂದರೆ, ೧೯೮೬ರಲ್ಲಿ ಒಲಿಂಪಿಯಾಡ್ ಬರೆಯಲು ಕೂತಾಗ ಅವನಿಗೆ ಇನ್ನೂ ಹನ್ನೊಂದು ವರ್ಷವೂ ಪೂರ್ತಿ ತುಂಬಿರಲಿಲ್ಲ! ೧೯೮೬ರಿಂದ ಸತತ ಮೂರು ವರ್ಷ ಟೆರೆನ್ಸ್ ಅಂತಾರಾಷ್ಟ್ರೀಯ ಒಲಿಂಪಿಯಾಡ್‌ಗೆ ಆಯ್ಕೆಯಾದದ್ದೂ ಒಂದು ದಾಖಲೆ. ಅದರಲ್ಲಿ ಕ್ರಮವಾಗಿ ಕಂಚು, ಬೆಳ್ಳಿ, ಚಿನ್ನದ ಪದಕಗಳನ್ನು ಗಳಿಸಿದ್ದೂ ಒಂದು ದಾಖಲೆ. ಈ ಮೂರು ಪದಕಗಳಲ್ಲಿ ಒಂದನ್ನೂ ಅವನಷ್ಟು ಕಿರಿಯ ವಯಸ್ಸಿನಲ್ಲಿ ಪಡೆದ ಬೇರೆ ಹುಡುಗರಿಲ್ಲ; ಇಂದಿಗೂ!


ಟೆರೆನ್ಸ್ ಹದಿನಾಲ್ಕನೇ ವಯಸ್ಸಿಗೆ ರೀಸರ್ಚ್ ಸೈನ್ಸ್ ಇನ್ಸ್ಟಿಟ್ಯೂಟ್‌ಗೆ ಸೇರಿದ. ಹದಿನೈದನೇ ವಯಸ್ಸಲ್ಲಿ ತನ್ನ ಮೊದಲ ಸಂಶೋಧನಾ ಲೇಖನ ಪ್ರಕಟಿಸಿದ! ಹದಿನಾರನೇ ವರ್ಷಕ್ಕೆ ತನ್ನ ಊರಲ್ಲೇ ಇದ್ದ ಫ್ಲಿಂಡರ್ಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಮಾಸ್ಟರ್ ಡಿಗ್ರಿ ಪಡೆದ. "ಅಲ್ಲಯ್ಯ ಟೆರೆನ್ಸ್, ನೀನು ಜಗತ್ತಿನ ಅತ್ಯಂತ ಪ್ರತಿಭಾಂತ ಶಿಶು. ಯಾವುದಾದರೂ ಪ್ರತಿಷ್ಠಿತ ವಿಶ್ವವಿದ್ಯಾಲಯ ಸೇರಿ ಪ್ರಸಿದ್ಧನಾಗುವುದು ಬಿಟ್ಟು ನಾವು ಹೆಸರು ಕೇಳದ ಸಂಸ್ಥೆಯಲ್ಲಿ ಪದವಿಗೆ ಸೇರಿದೆಯಲ್ಲ?" ಎಂದು ಬೇರೆಯವರು ಕೇಳಿದಾಗ "ಫ್ಲಿಂಡರ್ಸ್‌ನಲ್ಲಿ ಒಳ್ಳೊಳ್ಳೆಯ ಗುರುಗಳಿದ್ದರು, ಈಗಲೂ ಇದ್ದಾರೆ. ಇಷ್ಟಕ್ಕೂ ನಾನು ಯಾರನ್ನೂ-ಯಾವುದನ್ನೂ ಕನಿಷ್ಠ-ಗರಿಷ್ಠ ಎಂಬ ಮಾನದಂಡ ಇಟ್ಟುಕೊಂಡು ಅಳೆಯುವವನಲ್ಲ. ಫ್ಲಿಂಡರ್ಸ್ ನನ್ನ ಪ್ರೀತಿಯ ಮಾತೃಸಂಸ್ಥೆ. ಅದು ನನಗೆ ಬೇಕಾದ್ದೆಲ್ಲವನ್ನೂ ತುಸು ಹೆಚ್ಚೇ ಕೊಟ್ಟಿದೆ" ಎಂದು ಅಭಿಮಾನದಿಂದ ಟೆರೆನ್ಸ್ ಹೇಳಿಕೊಳ್ಳುತ್ತಿದ್ದ. ಅಲ್ಲಿ ೧೯೯೨ರಲ್ಲಿ ಪದವಿಪತ್ರ ಹಿಡಿದು ಹೊರಬರುವ ಹೊತ್ತಿಗಾಗಲೇ ಅವನ ಕೀರ್ತಿ ಜಗದಗಲ ವ್ಯಾಪಿಸಿಯಾಗಿತ್ತು. ದೊಡ್ಡ ದೊಡ್ಡ ಸಂಸ್ಥೆಗಳು ಈ ಬ್ರಹ್ಮರ್ಷಿಯನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದವು. ಕೊನೆಗೆ ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ರೀಸರ್ಚ್ ಮಾಡಲು ಸೇರುವುದೆಂದು ನಿಕ್ಕಿಯಾಯಿತು. ಅಲ್ಲಿನ ಸಂದರ್ಶಕರು, "ನೀನು ಜಗದ್ವಿಖ್ಯಾತ ಎಂದು ನಮಗೆ ಗೊತ್ತು. ಆದರೂ ನಮ್ಮ ಸಂಸ್ಥೆಯನ್ನು ಸೇರುವವರು ಶಿಫಾರಸು ಪತ್ರ ತರಬೇಕು ಎನ್ನುವುದು ನಿಯಮ. ಹಾಗಾಗಿ ನಿನ್ನಲ್ಲಿ ಅಂಥಾದ್ದೇನಾದರೂ ಪತ್ರ ಇದ್ದರೆ ಕೊಡು" ಎಂದಾಗ ಟೆರೆನ್ಸ್ ಕೊಟ್ಟದ್ದೇನು ಗೊತ್ತೆ? "ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಎಡತಾಕುವುದು ಸಾಮಾನ್ಯ. ಆದರೆ, ಸಂಸ್ಥೆಗಳೇ ಮೇಲೆಬಿದ್ದು ಆರಿಸಿಕೊಳ್ಳಬೇಕಾದ ಮಾಣಿಕ್ಯವಿದ್ದರೆ ಅದು ಇವನೇ" ಎಂದು ಬರೆದಿದ್ದ ಪತ್ರ. ಅದನ್ನು ಕೊಟ್ಟಿದ್ದವರು ಗಣಿತಭೀಷ್ಮ ಪಾಲ್ ಏರ್ಡಿಶ್!


೧೯೯೬ರಲ್ಲಿ ಡಾಕ್ಟರೇಟ್ ಮುಗಿಸಿದಾಗ ಟೆರೆನ್ಸ್‌ಗೆ ೨೨. ಅಲ್ಲಿಂದ ಮುಂದೆ ಅಧ್ಯಾಪಕನಾಗಿ ಅವನು ಸೇರಿದ್ದು ಲಾಸ್ ಏಂಜಲೀಸ್‌ನಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯವನ್ನು. ಮುಂದಿನ ಮೂರೇ ವರ್ಷದಲ್ಲಿ ಆ ಸಂಸ್ಥೆ ಅವನನ್ನು ಪೂರ್ಣಾವಧಿ ಪ್ರೊಫೆಸರ್ ಆಗಿ ನೇಮಿಸಿಬಿಟ್ಟಿತು. ಅದು ಮಾತ್ರವಲ್ಲ; ಅಮೆರಿಕದ ಯಾವ ಸಂಸ್ಥೆಯಲ್ಲೂ ಯಾವ ವ್ಯಕ್ತಿಯೂ ೨೪ ವರ್ಷಕ್ಕೆ ಪ್ರೊಫೆಸರ್ ಹುದ್ದೆಗೆ ಏರಿದ ಉದಾಹರಣೆ ಇರಲಿಲ್ಲ. ಬಿಡಿ, ಇದುವರೆಗೂ ಆ ದಾಖಲೆಯನ್ನು ಮುರಿಯಲು ಜಗತ್ತಿನ ಯಾವ ಮೇಧಾವಿಗೂ ಸಾಧ್ಯವಾಗಿಲ್ಲ! ಪಂಡಿತ ವಲಯದಲ್ಲಿ ಅತ್ಯಂತ ಪ್ರತಿಷ್ಠಿತ ಬಹುಮಾನವಾದ ಕ್ಲೇ ಸಂಸ್ಥೆಯ ಸಂಶೋಧನಾ ಪ್ರಶಸ್ತಿಯನ್ನು ಅವನಿಗೆ ೨೦೦೩ರಲ್ಲಿ ಪ್ರದಾನ ಮಾಡಲಾಯಿತು. ಗಣಿತಲೋಕದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಫೀಲ್ಡ್ಸ್ ಪದಕ ಕೊಡುತ್ತಾರೆ. ನಲವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ, ಅತ್ಯಂತ ದೊಡ್ಡ ಸಾಧನೆ ಮಾಡಿದ ಗಣಿತಜ್ಞರಿಗಷ್ಟೇ ಕೊಡುವ ಈ ಪ್ರಶಸ್ತಿಯನ್ನು ಗಣಿತದ ನೊಬೆಲ್ ಎಂದೂ ಹೇಳುವುದುಂಟು. ೨೫ನೇ ಅಂತಾರಾಷ್ಟ್ರೀಯ ಗಣಿತ ಕಾಂಗ್ರೆಸ್ ೨೦೦೬ರಲ್ಲಿ ಮ್ಯಾಡ್ರಿಡ್‌ನಲ್ಲಿ ನಡೆದಾಗ, ಆ ವರ್ಷದ ಫೀಲ್ಡ್ಸ್ ಪದಕವನ್ನು ೩೦ ವರ್ಷದ ಟೆರೆನ್ಸ್‌ಗೆ ಕೊಡಬೇಕು ಎಂದು ಜಗತ್ತಿನ ಎಲ್ಲ ಮಹಾನ್ ಗಣಿತಜ್ಞರೂ ಸೇರಿ ನಿರ್ಣಯ ಪಾಸು ಮಾಡಿದರು. "ಅವನಿಗಿನ್ನೂ ೩೦ ವರ್ಷ, ನಲವತ್ತರ ಹತ್ತಿರ ಸರಿಯುತ್ತಿರುವ ಬೇರೆ ಗಣಿತಜ್ಞರಿಗೆ ಕೊಡಬಹುದಲ್ಲ" ಎಂದು ರಾಜಕೀಯ ಮಾತಾಡುವ ಒಬ್ಬನೂ ಅಲ್ಲಿರಲಿಲ್ಲ ಎನ್ನುವುದೇ ವಿಶೇಷ. ಒನ್ಸ್ ಅಗೈನ್, ಅತ್ಯಂತ ಕಿರಿಯ ವಯಸ್ಸಿಗೆ ಈ ಪ್ರಶಸ್ತಿಯ ಗರಿ ಸಿಕ್ಕಿಸಿಕೊಂಡ ದಾಖಲೆ ಟೆರೆನ್ಸ್ ಹೆಸರಲ್ಲಿ ಬರೆಯಲ್ಪಟ್ಟಿತು! ಅದೇ ವರ್ಷ ಅವನಿಗೆ ಚೆನ್ನೈನ ಒಂದು ಸಂಸ್ಥೆ ಕೊಡುವ ಸಾಸ್ತ್ರ ರಾಮಾನುಜನ್ ಬಹುಮಾನವೂ ಬಂತು. ಮರು ವರ್ಷ ರಾಯಲ್ ಸೊಸೈಟಿ ಅವನನ್ನು ತನ್ನ ಸದಸ್ಯನಾಗಿ ಆರಿಸಿತು. ಅದೇ ಸಮಯದಲ್ಲಿ "ವರ್ಷದ ಆಸ್ಟ್ರೇಲಿಯನ್" ಪಟ್ಟಿಯಲ್ಲೂ ಟೆರೆನ್ಸ್ ಹೆಸರು ಕಾಣಿಸಿಕೊಂಡಿತ್ತು.


ಬಹುಶಃ ಈ ಹುಡುಗ ಪ್ರಶಸ್ತಿಗಳನ್ನು ಸ್ವೀಕರಿಸುವುದಕ್ಕೆ ಜಗತ್ತು ಸುತ್ತುವುದರಲ್ಲೇ ಕಳೆದುಹೋಗಿದ್ದಾನೆಂದು ಭಾವಿಸಿದ್ದರೆ, ಸ್ಸಾರಿ ಕಣ್ರೀ, ಈತ ಬರೆದಷ್ಟು ಸಂಶೋಧನಾ ಲೇಖನಗಳನ್ನು ಮತ್ತು ಕಂಡುಹಿಡಿದಷ್ಟು ಹೊಸ ಫಲಿತಾಂಶಗಳನ್ನು ಬೇರಾರೂ ಮಾಡಿಲ್ಲ ಎಂದು ಯಾವ ಸಂಶಯವಿಲ್ಲದೆ ಹೇಳಬಹುದು. ಇದುವರೆಗೆ ಆತ ಬರೆದಿರುವ ಅತ್ಯಂತ ಗಹನವಾದ ರೀಸರ್ಚ್ ಪೇಪರುಗಳೇ ೩೦೦ ದಾಟುತ್ತವೆ. ೨೦೧೩ರ ಹೊತ್ತಿಗಾಗಲೇ ಟೆರೆನ್ಸ್ ತನ್ನ ಬಿಡುವಿಲ್ಲದ ಕೆಲಸಕಾರ್ಯಗಳು ಮತ್ತು ಅಧ್ಯಾಪನದ ನಡುವೆಯೂ ಉನ್ನತ ಗಣಿತಕ್ಕೆ ಸಂಬಂಧಿಸಿದ ೧೭ ಪುಸ್ತಕಗಳನ್ನು ಬರೆದಿದ್ದ! ಗಣಿತ ಪ್ರಪಂಚದಲ್ಲಿ ವಿದ್ವಾಂಸರ ಬೌದ್ಧಿಕ ಮಟ್ಟವನ್ನು ಅಳೆಯಲು ಏರ್ಡಿಶ್ ಸಂಖ್ಯೆ ಎಂಬ ತಮಾಷೆಯ ಕಾನ್ಸೆಪ್ಟ್ ಒಂದಿದೆ. ಮಹಾನ್ ಗಣಿತಜ್ಞರಾಗಿದ್ದ ಏರ್ಡಿಶ್ ಅವರ ಜೊತೆ ಸ್ವತಃ ಕೂತು ಸಂಶೋಧನಾ ಪ್ರಬಂಧ ಬರೆದವರ ಏರ್ಡಿಶ್ ಸಂಖ್ಯೆ ೧. ಇನ್ನು ಅಂಥವರ ಜೊತೆ (ಅಂದರೆ ಏರ್ಡಿಶ್ ಸಂಖ್ಯೆ ೧ ಆಗಿರುವವರ ಜೊತೆ) ಸಹಲೇಖಕರಾದವರ ಏರ್ಡಿಶ್ ಸಂಖ್ಯೆ ೨. ಈ ಪಟ್ಟಿ ಹೀಗೇ ಮುಂದುವರಿದು, ಇಂದು ಏರ್ಡಿಶ್ ಸಂಖ್ಯೆ ೧೫ ಆಗಿರುವವರೂ ಇದ್ದಾರೆ. ಸಂಖ್ಯೆ ಚಿಕ್ಕದಾದಷ್ಟೂ ಆತ ಏರ್ಡಿಶ್ ಎಂಬ ಗಣಿತ ಶಿಖರಕ್ಕೆ ಹತ್ತಿರದಲ್ಲಿದ್ದಾನೆಂಬುದೊಂದು ಅಲಿಖಿತ ಸಿದ್ಧಾಂತ. ಟೆರೆನ್ಸ್‌ಗೆ ಏರ್ಡಿಶ್ ಅಂತರಂಗದ ಗೆಳೆಯರೇ ಆಗಿದ್ದರು. ೭೨ ವರ್ಷದ ಆ ಮನುಷ್ಯ ಹತ್ತು ವರ್ಷದ ಈ ಪುಟಾಣಿ ಮೊಲದ ಜೊತೆ ಕೂತು ಗಹನವಾದ ಗಣಿತ ಸಮಸ್ಯೆಗಳನ್ನು ಗಂಭೀರವಾಗಿ ಕೂತು ಚರ್ಚಿಸುವುದಿತ್ತು. ಅಂದ ಹಾಗೆ, ಟೆರೆನ್ಸ್‌ನ ಏರ್ಡಿಶ್ ಸಂಖ್ಯೆ ೨.

ಇದೆಲ್ಲ ಸರಿ ಮಾರಾಯ್ರೇ, ಆದರೆ ಈತ ಮಾಡಿದ ಸಂಶೋಧನೆಯಾದರೂ ಏನು ಎನ್ನುತ್ತೀರೋ? ಮೇಲುಮೇಲಿಂದ ಹೇಳಬೇಕಾದರೆ, ಟೆರೆನ್ಸ್ ಮುಖ್ಯವಾಗಿ ಸಂಖ್ಯಾ ಸಿದ್ಧಾಂತ, ಹಾರ್ಮೋನಿಕ್ ಅನಾಲಿಸಿಸ್, ಸಂಭವನೀಯತಾ ಸಿದ್ಧಾಂತ, ಡೈನಮಿಕಲ್ ಸಿಸ್ಟಮ್ಸ್ ಎಂಬ ಕೆಲವು ವಿಷಯಗಳಲ್ಲಿ ಕೆಲಸ ಮಾಡಿದ್ದಾನೆ. ಇವಿಷ್ಟರಲ್ಲಿ ನಮ್ಮಂತಹ "ಕೆಳ ಹುಬ್ಬಿನ" ಸಾಮಾನ್ಯರಿಗೆ ಅರ್ಥವಾಗಬಹುದಾದ್ದು ಸಂಖ್ಯಾ ಸಿದ್ಧಾಂತ ಒಂದೇ. ಈ ಗಣಿತ ಶಾಖೆಯ ವಿಶೇಷವೇನೆಂದರೆ, ಅದರಲ್ಲಿ ಬರುವ ಸಮಸ್ಯೆಗಳನ್ನು ನಿರೂಪಿಸುವುದು ತುಂಬಾ ಸುಲಭ; ಅಷ್ಟೇ ಕಷ್ಟ ಅವುಗಳ ಸಾಧನೆ! ಉದಾಹರಣೆಗೆ, ೧ಕ್ಕಿಂತ ದೊಡ್ಡದಾದ ಯಾವುದೇ ಬೆಸ ಸಂಖ್ಯೆಯನ್ನು ಗರಿಷ್ಠ ಐದು ಪರಿಮೇಯ (Prime number)ಗಳ ಮೊತ್ತವಾಗಿ ಬರೆಯಬಹುದು - ಎನ್ನುವುದು ಒಂದು ಫಲಿತಾಂಶ. ಹಾಗೆಯೇ, ಪರಿಮೇಯಗಳ ಅನಂತ ಸಾಮ್ರಾಜ್ಯದಲ್ಲಿ ಯಾವುದೇ ಅಳತೆಯ, ಯಾವುದೇ ಸಾಮಾನ್ಯಾಂತರ (Common difference) ವಿರುವ ಅಗಣಿತ ಸಮಾಂತರ ಶ್ರೇಢಿಗಳನ್ನು ಹೆಕ್ಕಿ ತೆಗೆಯಬಹುದು - ಎನ್ನುವುದು ಇನ್ನೊಂದು. ಟೆರೆನ್ಸ್ ಇಲ್ಲದೇ ಹೋಗಿದ್ದರೆ ಈ ಎರಡಕ್ಕೂ ಸಾಧನೆ ಬರೆಯುವವರು ಮುಂದಿನ ಐನೂರು ವರ್ಷಗಳಲ್ಲಿ ಹುಟ್ಟುತ್ತಿದ್ದರೋ ಇಲ್ಲವೋ ಅನುಮಾನ. "ಅವನ ಪ್ರಬಂಧಗಳು ದೇವರೇ ಬರೆದ ಕಾವ್ಯದಂತಿರುತ್ತವೆ" ಎಂದು ಸಹೋದ್ಯೋಗಿ ಬೆನ್ ಗ್ರೀನ್ ಹೇಳಿದ್ದುಂಟು. ಉನ್ನತ ಗಣಿತಕ್ಕೂ ಕಾವ್ಯಸೌಂದರ್ಯಕ್ಕೂ ಹತ್ತಿರದ ನಂಟು ಎನ್ನುವುದನ್ನು ಟೆರೆನ್ಸ್ ಕೂಡ ಅಲ್ಲಗಳೆಯುವುದಿಲ್ಲ.

ಇಷ್ಟೆಲ್ಲ ಬಿರುದುಬಾವಲಿಗಳನ್ನು ಕತ್ತಿಗೆ ಸುತ್ತಿಕೊಂಡಿರುವ ಈ ಮನುಷ್ಯ, ಮನುಷ್ಯನಾಗಿ ಹೇಗಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಇದ್ದದ್ದೇ. ಆದರೆ, ಟೆರೆನ್ಸ್‌ನನ್ನು ಹತ್ತಿರದಿಂದ ನೋಡಿದವರಿಗೆ ಒಮ್ಮೆ, "ನಿಜವಾಗಿಯೂ ನಾವು ಅಷ್ಟೆಲ್ಲ ಸಾಧನೆಗಳ ಗುಡುಗು-ಸಿಡಿಲುಗಳನ್ನು ಕೇಳಿದ್ದು ಈತನ ಮೇಲೆಯಾ?" ಎಂದು ಅನುಮಾನ ಮುತ್ತಿಕೊಳ್ಳುತ್ತದೆ. ಕ್ಯಾಲಿಫೋರ್ನಿಯ ವಿವಿಯ ಕ್ಯಾಂಪಸ್ಸಿನಲ್ಲಿ ಗುಂಪಿನಲ್ಲಿ ಗೋವಿಂದನಂತೆ ಕಳೆದುಹೋಗುವ, ಹೆಚ್ಚೆಂದರೆ ಪೌರಸ್ತ್ಯದೇಶದಿಂದ ಬಂದ ಒಬ್ಬ ಪದವಿ ವಿದ್ಯಾರ್ಥಿಯಂತೆ ಕಾಣುವ ಟೆರೆನ್ಸ್ ಸರಳ-ಸಜ್ಜನಿಕೆಯ ನಿರ್ಲಿಪ್ತಮೂರ್ತಿ. ಹೂದೋಟದ ಮಾಲಿಯಿರಲಿ ಯೂನಿವರ್ಸಿಟಿ ಛಾನ್ಸಲರ್ ಇರಲಿ, ಅವನ ದನಿ, ಗೌರವ ಒಂದೇ. ಅನ್ಯಗ್ರಹದಿಂದ ಬಂದಿಳಿದ ಜೀವಿಯನ್ನು ಕಾಣಬಂದವರಂತೆ ಕೆಲ ಹುಡುಗರು ಕುತೂಹಲಕ್ಕಾಗಿ ಅವನ ಕೊಠಡಿ ಬಡಿದು ಒಳಬರುವುದುಂಟು. ಯಾವುದೋ ಗಹನ ಲೆಕ್ಕಾಚಾರದಲ್ಲಿ ಕಳೆದುಹೋಗಿರುವ ಟೆರೆನ್ಸ್ ತಲೆಯೆತ್ತಿ "ಏನು ಬಂದಿರಿ?" ಎಂದು ಕೇಳುತ್ತಾನೆ. "ಯಾ..ಕೂ ಇಲ್ಲ, ಸುಮ್ಮನೆ ಟೆರೆನ್ಸ್ ಎಂಬ ಅತಿಮಾನುಷ ವ್ಯಕ್ತಿಯನ್ನು ನೋಡಿಹೋಗೋಣ ಅಂತ ಬಂದೆವು" ಎಂದು ಹುಡುಗರು ನಡುಗುತ್ತ ಹೇಳಿದಾಗ, ಪಿತ್ಥ ನೆತ್ತಿಗೇರಿ ಕೂಗಾಡಬೇಕಿದ್ದ ಟೆರೆನ್ಸ್ ಎಲ್ಲ ಮರೆತು ಮಗುವಿನಂತೆ ಬಾಯಿಕಳೆದು ನಗುತ್ತಾನೆ. ಪಂಡಿತರು, ಅದರಲ್ಲೂ ಗಣಿತಜ್ಞರು ಇಷ್ಟೊಂದು ಸ್ವಚ್ಛಂದವಾಗಿ ನಗುತ್ತಾರಾ ಎಂದು ನಮ್ಮನಿಮ್ಮಂತೆ ಆ ಹುಡುಗರೂ ಚಕಿತರಾಗಿ ನಿಲ್ಲುತ್ತಾರೆ.

೧೫ ಫೆಬ್ರವರಿ ೨೦೧೫ರ ವಿಜಯವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ. ಈ ವ್ಯಕ್ತಿಚಿತ್ರದ ಜೊತೆಗೆ ದೇಶ-ವಿದೇಶದ ಹಲವು ಗಣಿತಜ್ಞರ ಕತೆಗಳಿರುವ "ದೇವರ ತೋಟದ ಸೇಬು ತಿಂದವನು" ಕೃತಿ ತಾರೀಖು ೨೬ ಜೂನ್ ೨೦೧೬ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿಡುಗಡೆಯಾಗಲಿದೆ.

1 ಕಾಮೆಂಟ್‌:

Chinnamma Baradhi ಹೇಳಿದರು...

ನಿಮ್ಮ ಯಾವ ಸ್ವರ್ಗದ ಹೂವೋ ಈ ಟೆರೆನ್ಸ್ ಟಾವೋ! ಲೇಖನ, ಗಣಿತದ ಅಲರ್ಜಿ
ಇದ್ದರೂ ಆಸಕ್ತಿಪೂರ್ಣವಾಗಿ ಓದಿಸಿಕೂ೦ಡು ಹೋಯ್ತು."ದೇವರ ತೋಟದ ಸೇಬು ತಿಂದವನು" ಆಡಮ್ಸ್
ಈವ್ಸ್ ನ ಸುಳಿವೇ ಇಲ್ಲ!.

badge