ಮಂಗಳವಾರ, ಜೂನ್ 21, 2016

ಮೀನಿನ ಬ್ಯಾಟರಿ!

ಕೊಳ್ಳೇಗಾಲ ಶರ್ಮ


ಈ ವಾರ ಮೀನಿನದ್ದೇ ಸುದ್ದಿ. ಮೊನ್ನೆ ನಮ್ಮೂರ ಐಯಂಗಾರ್ ಬೇಕರಿಯಲ್ಲಿಯೂ ಮಂಗಳೂರಿನಿಂದ ಮೀನಿನ ಸರಬರಾಜು ಕಡಿಮೆಯಾಗಿರುವ ಬಗ್ಗೆ ಭಯಂಕರ ಚರ್ಚೆ ನಡೆದಿತ್ತು. ಈ ವರ್ಷ ಮಳೆರಾಯ ಕಾಲಿಡಲು ಹಿಂಜರಿಯುತ್ತಿರುವ ಕಾರಣ ಕಡಲಮೀನಿನ ಸಂತತಿಯೂ ಕಡಿಮೆಯಾಗಿದೆ ಎನ್ನುವುದು ಚರ್ಚೆ. ಇದರ ಬೆನ್ನಲ್ಲೇ ಇನ್ನೊಂದು ಸುದ್ದಿ. ಮೀನುಗಳು ಮನುಷ್ಯರ ಮುಖಚರ್ಯೆಯನ್ನು ಗುರುತಿಸಬಲ್ಲುವಂತೆ. ಅಂದರೆ ಅವು ನಮ್ಮನ್ನೂ, ನಿಮ್ಮನ್ನೂ ಬೇರೆ ಬೇರೆ ವ್ಯಕ್ತಿಗಳೆಂದು ಗುರುತಿಸಬಲ್ಲವು ಎನ್ನುವ ಸುದ್ದಿ. ಇದಷ್ಟೇ ಸಾಲದು ಎನ್ನುವಂತೆ ಇನ್ನೊಂದು ಸುದ್ದಿಯೂ ಬಂದಿದೆ. ಅದೆಂದರೆ ನಮ್ಮ, ನಿಮ್ಮ ಮೊಬೈಲು ಫೋನುಗಳನ್ನು ಚಾಲಿಸುವಂತಹ ಬ್ಯಾಟರಿ ತಯಾರಿಸುವುದು.

ಷಾಕ್ ಆಯಿತೇ! ಇದೇನು ‘ನಾನ್-ವೆಜ್’ ಬ್ಯಾಟರಿ ಎಂದಿರಾ?
ಹೌದು. ಇದು ಮೀನಿನ ಮಾಂಸವಿರುವ ಬ್ಯಾಟರಿ. ಆದರೆ ಅಪ್ಪಟ ಪರಿಸರಸ್ನೇಹಿ. ಗಾಳಿ ಸೇರಿದರೆ ನಮ್ಮ ಉಸಿರುಗಟ್ಟಿಸುವ ಸೀಸ, ಇದ್ದಕ್ಕಿದ್ದ ಹಾಗೆ ಸ್ಫೋಟಿಸುವ ನಿಕ್ಕಲ್-ಕ್ಯಾಡ್ಮಿಯಂ, ಅಥವಾ ಅಪಾಯಕಾರಿ ಆಮ್ಲಗಳಾವುವು ಇಲ್ಲದ ಅಪ್ಪಟ ನೈಸರ್ಗಿಕ ಬ್ಯಾಟರಿ. ಸಮುದ್ರಜೀವಿ, ವಿದ್ಯುತ್-ರೇ ಮೀನಿನ ಅಂಗದಿಂದ ಮಾಡಿದ ಬ್ಯಾಟರಿ. ಈಗ ನೀವು ಊಹಿಸಿದ್ದು ನಿಜ. ಸಮುದ್ರದಿಂದಲೇ ಎಲ್ಲವನ್ನೂ ಪಡೆಯಬೇಕಾದ ಅನಿವಾರ್ಯತೆ ಇರುವ ಪುಟ್ಟ ದ್ವೀಪಗಳ ದೇಶ, ತಂತ್ರಜ್ಞಾನದ ಮುಂದಾಳು ಜಪಾನಿನಲ್ಲದೆ ಬೇರಾರು ಈ ರೀತಿಯ ಸಾಧನೆ ಮಾಡುತ್ತಾರೆ ಹೇಳಿ. ಜಪಾನಿನ ಒಸಾಕಾದಲ್ಲಿರುವ ಕ್ವಾಂಟಿಟೇಟಿವ್ ಬಯಾಲಜಿ ಸೆಂಟರ್ ನ ವಿಜ್ಞಾನಿ ಯೊ ತನಾಕ ಟೋಕಿಯೊ ದಂಕಿ ಹಾಗೂ ಟೋಕಿಯೋ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಜೊತೆಗೂಡಿ ಇಲೆಕ್ಟ್ರಿಕ್ ರೇ ಕುಟುಂಬಕ್ಕೆ ಸೇರಿದ ನಾರ್ಕೆ ಜಪಾನಿಕ (Narke japonica) ವಿದ್ಯುತ್ ಮೀನುಗಳ ವಿಶೇಷ ಅಂಗಗಳನ್ನು ಬಳಸಿ ಬ್ಯಾಟರಿಗಳನ್ನು ರೂಪಿಸಿದ್ದಾರೆ. ಈ ರೀತಿಯಲ್ಲಿಯೂ ವಿದ್ಯುತ್ತನ್ನು ತಯಾರಿಸುವ ಸಾಧ್ಯತೆಗಳತ್ತ ಬೆರಳು ತೋರಿದ್ದಾರೆ. ಇವರ ಸಂಶೋಧನೆಯ ವಿವರಗಳು ನೇಚರ್ ಸೈಂಟಿಫಿಕ್ ರಿಪೋರ್ಟರ್ ಪತ್ರಿಕೆಯ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿವೆ.

ವಿದ್ಯುತ್ ಉತ್ಪಾದಿಸುವ ಜೀವಿಗಳೇ ಎಂದು ಅಚ್ಚರಿಯಾಗಬೇಕಿಲ್ಲ. ನಮ್ಮ, ನಿಮ್ಮಲ್ಲೂ ವಿದ್ಯುತ್ ಉತ್ಪಾದನೆಯಾಗುತ್ತಲೇ ಇರುತ್ತದೆ. ಈ ಲೇಖನವನ್ನು ನೀವು ನೋಡುವಾಗಲೂ ನಿಮ್ಮ ಕಣ್ಣಿನಿಂದ ಮಿದುಳಿಗೆ ಒಂದು ವಿದ್ಯುತ್ ಹರಿವು ಇದ್ದೇ ಇರುತ್ತದೆ. ಪುಟ ತಿರುವುವಾಗಲೂ ನಿಮ್ಮ ಮಿದುಳಿನಿಂದ ಪುಟ ತಿರುವುವ ಬೆರಳಿನವರೆಗೆ ವಿದ್ಯುತ್ ಹರಿದು ಕೈಯನ್ನು ಚಾಲಿಸುತ್ತದೆ. ನರಕೋಶಗಳೆಂದರೆ ಒಂದು ರೀತಿ ವಿದ್ಯುತ್ ಬ್ಯಾಟರಿಗಳೇ. ಅವುಗಳೊಳಗಿನ ಲವಣಗಳು ಹೊರ ಹರಿದೋ, ಒಳ ಹರಿದೋ ವಿದ್ಯುತ್ ಆವೇಶವುಂಟಾಗುತ್ತದೆ. ಇದು ಒಂದು ಕೋಶದಿಂದ ಇನ್ನೊಂದು ಕೋಶಕ್ಕೆ ಹರಿದು ವಿದ್ಯುತ್ ಪ್ರವಾಹವಾಗುತ್ತದ. ಆದರೆ ಈ ವಿದ್ಯುತ್ತಿನ ಪ್ರಮಾಣ ಅತ್ಯಲ್ಪ. ನರಕೋಶಗಳ  ಈ ಶಕ್ತಿಯನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡಿರುವ ಹಲವು ಜೀವಿಗಳಿವೆ.

ಇವುಗಳೆಲ್ಲವೂ ಜಲಜೀವಿಗಳೆನ್ನುವುದು ಒಂದು ವಿಚಿತ್ರವಾದರೂ ಸತ್ಯ. ಅದರಲ್ಲೂ ಟಾರ್ಪೆಡೋ ಕುಟುಂಬದ ಮೀನುಗಳು ವಿದ್ಯುತ್ ಉತ್ಪಾದನೆಯಲ್ಲಿ ವಿಶೇಷಜ್ಞರು. ಇವುಗಳಲ್ಲಿ ವಿದ್ಯುತ್ ಉತ್ಪಾದಿಸಲೆಂದೇ ವಿಶೇಷ ಅಂಗವೊಂದಿದೆ. ಈ ಅಂಗದಲ್ಲಿ ಜೀವಕೋಶಗಳು ತೆಳು ಹಾಳೆಗಳಂತೆ (ಇಲೆಕ್ಟ್ರೊಸೈಟ್) ಜೋಡಣೆಯಾಗಿವೆ. ಸಾವಿರಾರು ಇಂತಹ ಇಲೆಕ್ಟ್ರೊಸೈಟ್ ಗಳು ಒಂದಿನ್ನೊಂದರ ಮೇಲೆ ಜೋಡಿಸಲ್ಪಟ್ಟಿವೆ. ಇವೆಲ್ಲವೂ ಒಟ್ಟಾಗಿ ವಿದ್ಯುತ್ ಅಂಗವಾಗುತ್ತದೆ. ಇಲೆಕ್ಟ್ರೊಸೈಟ್ ಗಳ ನಡುವಿರುವ ರಸವೇ ಈ ಜೈವಿಕ ಬ್ಯಾಟರಿಯಲ್ಲಿನ ಆಮ್ಲ. ಮೀನಿಗೆ ಚುರುಕು ತಾಗಿದಾಗ  ಈ ಇಲೆಕ್ಟ್ರೊಸೈಟ್ ಗಳೊಳಗಿಂದ ಲವಣಗಳು ಹೊರ ಹರಿದು ಒಂದು ಬದಿ ಧನ ಧ್ರುವವಾಗಿಯೂ, ಮತ್ತೊಂದು ಬದಿ ಋಣವಾಗಿಯೂ ರೂಪುಗೊಳ್ಳುತ್ತವೆ. ಆ ಕ್ಷಣದಲ್ಲಿ ಇದನ್ನು ಮುಟ್ಟಿದಿರೆನ್ನಿ ಭಯಂಕರ ಷಾಕ್ ಹೊಡೆಯುವುದು ಗ್ಯಾರಂಟಿ. ಇಲೆಕ್ಟ್ರಿಕ್ ರೇಗಳು ಸುಮಾರು ಎಂಟು ವೋಲ್ಟ್ ನಿಂದ 200 ವೋಲ್ಟ್ ವರೆಗಿನ (ನಮ್ಮ ಮನೆಯೊಳಗೆ ಹರಿಯುವ ವಿದ್ಯುತ್)ಷ್ಟು ವಿದ್ಯುತ್ತನ್ನು ಬೇಕೆಂದ ಹಾಗೆ ಸೂಸಬಲ್ಲವು.

ಮೀನುಗಳ ಈ ಷಾಕ್ ಮನುಷ್ಯರನ್ನು ಕೊಂದ ಬಗ್ಗೆ ಇದುವರೆಗೂ ಯಾವ ವರದಿಯೂ ಇಲ್ಲ. ಆದರೆ ಮೀನುಗಳು ಷಾಕ್ ನೀಡಿ ತಮ್ಮ ಬೇಟೆಗಳನ್ನು ದಂಗುಬಡೆಸುತ್ತವೆ. ಆಹಾರ ಸಂಪಾದಿಸಿಕೊಳ್ಳುತ್ತವೆ. ಅಥವಾ ವೈರಿಗಳನ್ನು ಬಡಿದೋಡಿಸುತ್ತವೆ. ಇಂತಹ ವಿದ್ಯುತ್ ಅಂಗಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದು ಸಾಧ್ಯ ಎನ್ನುತ್ತಾರೆ ತನಾಕ. ಇದಕ್ಕಾಗಿ ಇವರು ಮಾಡಿರುವುದು ಇಷ್ಟೆ. ಇಲೆಕ್ಟ್ರೊಸೈಟ್ ಗಳನ್ನು ಸಣ್ಣ ತುಣುಕುಗಳನ್ನಾಗಿ ಮಾಡಿ, ಬ್ಯಾಟರಿಗಳಂತೆ ಜೋಡಿಸಿದ್ದಾರೆ. ತದನಂತರ ಅವುಗಳನ್ನು ಪ್ರಚೋದಿಸಿದ್ದಾರೆ. ಈ ಪ್ರಚೋದನೆಗೆ ಪ್ರತಿಯಾಗಿ ಇಲೆಕ್ಟ್ರೊಸೈಟುಗಳು ವಿದ್ಯುತ್ ಉತ್ಪಾದಿಸಿವೆ. ಈ ವಿದ್ಯುತ್ ಪ್ರಮಾಣ ಕಡಿಮೆ ಇರುವುದರಿಂದ ಅದನ್ನು ಸಂಗ್ರಹಿಸಲು ಕೆಪ್ಯಾಸಿಟರ್ ಗಳನ್ನು ಜೋಡಿಸಿದ್ದಾರೆ. ಹೀಗೆ ಮಾಡಿದ ವಿದ್ಯುತ್ ಸರ್ಕೀಟಿನಲ್ಲಿ ಟಾರ್ಚಿನಲ್ಲಿರುವ ಒಂದು ಎಲ್ ಇ ಡಿ ದೀಪವನ್ನು ಬೆಳಗಿಸುವಷ್ಟು ವಿದ್ಯುತ್ ಉತ್ಪಾದಿಸಿದ್ದಾರೆ.
ನಾನು ಹೇಳಿದ್ದು ಬಲು ಸರಳ ವಿಧಾನ. ವಾಸ್ತವವಾಗಿ ಇಲೆಕ್ಟ್ರೊಲೈಟುಗಳನ್ನು ಅಡ್ಡಾದಿಡ್ಡಿ ಪ್ರಚೋದಿಸಿದರೆ ವಿದ್ಯುತ್ ಪ್ರವಾಹವೂ ಹಾಗೆಯೇ ಇರುತ್ತದೆ. ಅವಶ್ಯಕವಾದಷ್ಟು ವಿದ್ಯುತ್ ಉತ್ಪಾದನೆಯಾಗಬೇಕಾದರೆ ಎಲ್ಲ ಇಲೆಕ್ಟ್ರೊಲೈಟುಗಳೂ ಏಕತಾನದಂತೆ ಒಮ್ಮೆಲೇ ತುಡಿಯಬೇಕು. ಇದಕ್ಕಾಗಿ ತನಾಕ ಇಲೆಕ್ಟ್ರೊಲೈಟುಗಳ ನಡುವೆ ಇರುವ ದ್ರವದ ಒತ್ತಡವನ್ನು ಏರಿಳಿಸಿದ್ದಾರೆ. ದ್ರವದ ಒತ್ತಡ ಏರಿದಾಗ ಇಲೆಕ್ಟ್ರೊಲೈಟುಗಳು ವಿದ್ಯುತ್ ಸೂಸುತ್ತವೆ.

ಈ ಇಲೆಕ್ಟ್ರೊಲೈಟುಗಳ ನಡುವಣ ದ್ರವವಾದರೂ ಎಷ್ಟಿರುತ್ತದೆ? ಅದುವೂ ಜೀವಕೋಶಗಳಂತೆಯೇ ಅತಿ ಅಲ್ಪ ಪ್ರಮಾಣದಲ್ಲಿರುವಂಥದ್ದು. ಅದನ್ನು ಅತಿಯಾಗಿ ಒತ್ತಿದರೂ, ಕಡಿಮೆ ಒತ್ತಿದರೂ ಬೇಕಿದ್ದ ಕೆಲಸ ಆಗುವಂತಿಲ್ಲ.  ಈ ಕಾರಣದಿಂದ ತನಾಕ ಇಲೆಕ್ಟ್ರೊಲೈಟುಗಳ ಮೇಲೆ ಅತಿ ಸೂಕ್ಷ್ಮವಾದ ಸೂಜಿಗಳ ಮೊನೆಯ ಚಾಪೆಯನ್ನು ಹಾಸಿದ್ದಾರೆ. ಈ ಸೂಜಿಗಳೊಳಗೆ ಅಸಿಟೈಲ್ ಕೋಲಿನ್ ಎನ್ನುವ ರಾಸಾಯನಿಕವಿರುವ ದ್ರವವನ್ನು ತುಂಬಿದ್ದಾರೆ. ಅಸಿಟೈಲ್ ಕೋಲಿನ್ ನರಕೋಶಗಳು ಸೂಸುವ ಒಂದು ವಿಶೇಷ ವಸ್ತು. ಇದು ಇತರೆ ಜೀವಕೋಶಗಳನ್ನು, ಅದರಲ್ಲೂ ವಿಶೇಷವಾಗಿ ನರಕೋಶಗಳನ್ನು, ಪ್ರಚೋದಿಸುತ್ತದೆ. ಇಲೆಕ್ಟ್ರೊಲೈಟುಗಳಲ್ಲಿ ಇದುವೇ ವಿದ್ಯುತ್ ಉತ್ಪಾದನೆಗೆ ಪ್ರೇರಕ.

ಮುಳ್ಳಿನ ಚಾಪೆಯನ್ನು ಪ್ಲಾಸ್ಟಿಕ್ ಡಬ್ಬಿಯೊಂದರ ಮುಚ್ಚಳದ ತಳದಲ್ಲಿ ಹುದುಗಿಸಿ, ಡಬ್ಬಿಯೊಳಗೆ ಇಲೆಕ್ಟ್ರೊಸೈಟುಗಳ ತುಣುಕನ್ನು ಇರಿಸಿದ್ದಾರೆ. ಡಬ್ಬಿಯೊಳಗೆ ಇಲೆಕ್ಟ್ರೊಸೈಟುಗಳಿಗೆ ಶಕ್ತಿಯೊದಗಿಸುವ ಸಕ್ಕರೆಭರಿತ ದ್ರವವಿರುತ್ತದೆ. ಡಬ್ಬಿಯ ತಳ ಹಾಗೂ ಮುಚ್ಚಳವನ್ನು ವಿದ್ಯುತ್ ಹರಿಯುವ ತಂತಿಗಳಿಂದ ಕೂಡಿಸಿದರೆ ಸರ್ಕೀಟು ಪೂರ್ಣವಾಗುವಂತೆ ಈ ಡಬ್ಬಿಯನ್ನು ರಚಿಸಲಾಗಿದೆ.  ಟಾರ್ಚಿನಲ್ಲಿ ಹಲವು ಬ್ಯಾಟರಿಗಳನ್ನು ಜೋಡಿಸಿ ಹೆಚ್ಚು ವಿದ್ಯುತ್ ಪಡೆಯುವಂತೆ, ಇವರೂ ಹಲವು ಇಂತಹ ಡಬ್ಬಿಗಳನ್ನು ಸರಣಿಯಲ್ಲಿ ಜೋಡಿಸಿದ್ದಾರೆ. ಈ ವಿಧಾನವನ್ನು ಬಳಸಿದಾಗ ಡಬ್ಬಿಯೊಳಗೆ ತುಸು ಹೆಚ್ಚು ದ್ರವವನ್ನು ಒತ್ತಿದರೆ ಸಾಕು ಇಲೆಕ್ಟ್ರೊಲೈಟುಗಳನ್ನು ಪ್ರಚೋದಿಸಬಹುದು. ವಿದ್ಯುತ್ ಉತ್ಪಾದಿಸಬಹುದು.

ತನಾಕ ಮತ್ತು ತಂಡದವರು ನಾರ್ಕೆ ಜಪಾನಿಕಾದ ಇಲೆಕ್ಟ್ರೊಸೈಟುಗಳನ್ನು ಈ ರೀತಿಯ ಬ್ಯಾಟರಿಯಲ್ಲಿ ಬಳಸಿ ಎಲ್ ಇ ಡಿ ದೀಪವನ್ನು ಬೆಳಗಿಸುವುದಷ್ಟೆ ಅಲ್ಲ ಪುಟ್ಟ ಆಟಿಕೆ ಕಾರು ಓಡಿಸಿಯೂ ತೋರಿಸಿದ್ದಾರೆ. ಒಟ್ಟಾರೆ ಸಂಪೂರ್ಣ ಜೈವಿಕ, ನೈಸರ್ಗಿಕ, ಪರಿಸರಸ್ನೇಹಿ ವಿದ್ಯುತ್ ಒದಗಿಸುವುದು ಸಾಧ್ಯ. ವಿದ್ಯುತ್ ಉತ್ಪಾದನೆಯಾದ ನಂತರ ಈ ಜೀವಕೋಶಗಳನ್ನು ಬಿಸಾಡಿ ಹೊಸ ಇಲೆಕ್ಟ್ರೊಸೈಟುಗಳನ್ನು ಹಾಕಿದರೆ ರೀಛಾರ್ಜ್ ಮಾಡಿದಂತೆಯೇ ಸರಿ.

ಎಲ್ಲಾ ಓಕೆ? ಯಾವಾಗಲೂ ಸಿಗುವುದೇ ಈ ನಾರ್ಕೆ? ಇದು ತಾನೇ ಪ್ರಶ್ನೆ. ತನಾಕ ಅವರು ಈ ಪ್ರಶ್ನೆಯನ್ನೂ ಪರೀಕ್ಷಿಸಿದ್ದಾರೆ. ಜಪಾನಿನಲ್ಲಿ ಬೇಸಿಗೆಯ ಕೆಲವು ತಿಂಗಳುಗಳ ಹೊರತಾಗಿ ಉಳಿದೆಲ್ಲ ತಿಂಗಳುಗಳಲ್ಲೂ ಮೀನುಗಾರರ ಬಲೆಯಲ್ಲಿ ಈ ಮೀನು ಸಿಲುಕಿಕೊಳ್ಳುವುದನ್ನು ಇವರು ಕಂಡಿದ್ದಾರೆ. ಅರ್ಥಾತ್, ಈ ಮೀನು ವರ್ಷದ ಎಲ್ಲ ದಿನಗಳಲ್ಲೂ ದೊರೆಯುತ್ತದೆ. ಇಲ್ಲದಿದ್ದರೆ ಇದನ್ನು ಸಾಕಲೂ ಪ್ರಯತ್ನಿಸಬಹುದು ಎನ್ನುವುದು ಇವರ ತರ್ಕ.

ಆದರೆ ಎಲ್ಲ ಜೀವಿಗಳಂತೆ ಈ ಇಲೆಕ್ಟ್ರೋಸೈಟುಗಳೂ ನಶ್ವರವಾದ್ದರಿಂದ ಇದೇ ವಿದ್ಯಮಾನವನ್ನು ಬಳಸುವಂತಹ ಕೃತಕ ಇಲೆಕ್ಟ್ರೊಸೈಟುಗಳು, ದ್ರವಗಳನ್ನು ಬಳಸಿ ನೂತನ ರೀತಿಯ ಬ್ಯಾಟರಿಗಳನ್ನು ನಿರ್ಮಿಸಬಹುದು ಎನ್ನುತ್ತಾರೆ ತನಾಕ. “ಲಕ್ಷಾಂತರ ವರ್ಷಗಳ ವಿಕಾಸದಿಂದ ಪುಟಗೊಂಡ ಇದರಷ್ಟು ಪರಿಪೂರ್ಣವಾದ ಬ್ಯಾಟರಿ ಮತ್ತೊಂದು ಇಲ್ಲ,” ಎನ್ನುವುದು ಇವರ ವಿಶ್ವಾಸ. ಅಂದ ಹಾಗೆ ಮೀನುಗಾರರಿಗೆ ಇದು ಅನಗತ್ಯ ಮೀನು. ಹಾಗಾಗಿ ಮೀನುಗಾರಿಕೆಯ ತ್ಯಾಜ್ಯ. ಬ್ಯಾಟರಿಯನ್ನಾಗಿ ಬಳಸಿದರೆ ಈ ತ್ಯಾಜ್ಯದ ಸದ್ಬಳಕೆಯಾಗಬಹುದು ಎನ್ನೋಣವೇ? ಹಾಂ. ಇಲೆಕ್ಟ್ರೊಲೈಟುಗಳು ರುಚಿಕರವಾಗಿದ್ದರೆ, ಬಳಸಿದ ಬ್ಯಾಟರಿಗಳು ಸ್ವಾದಿಷ್ಟ ಭೋಜನವೂ ಆಗಬಹುದು.

ಹೆಚ್ಚಿನ ಓದಿಗೆ: Tanaka, Y. et al. An electric generator using living Torpedo electric organs controlled by fluid pressure-based alternative nervous systems

ಜೂನ್ ೧೩, ೨೦೧೬ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge