ಸೋಮವಾರ, ಜೂನ್ 20, 2016

ವಿಜ್ಞಾನಲೋಕಕ್ಕೆ ಹತ್ತರ ಹರ್ಷ

ಟಿ. ಜಿ. ಶ್ರೀನಿಧಿ

ವಿಜ್ಞಾನ-ತಂತ್ರಜ್ಞಾನಗಳ ವಿಷಯಕ್ಕೆ ಬಂದರೆ ಅವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು. ಆದರೆ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಈ ವಿಷಯಕ್ಕೆ ಎಷ್ಟು ತಾನೇ ಜಾಗ ನೀಡಲು ಸಾಧ್ಯ?

ಹಾಗೆಂದು ಸುಮ್ಮನಿರುವುದೂ ಸಾಧ್ಯವಿಲ್ಲವಲ್ಲ! ಈ ಕೊರತೆಯನ್ನು ತುಂಬಿಕೊಡಲು ವಿಜ್ಞಾನ ಪತ್ರಿಕೆಗಳು ಪ್ರಯತ್ನಿಸುತ್ತವೆ. ಸಾಮಾನ್ಯ ಪತ್ರಿಕೆಗಳಿಗಿಂತ ಹೆಚ್ಚು ಪ್ರಮಾಣದ ಮಾಹಿತಿಯನ್ನು ಆದಷ್ಟೂ ಹೆಚ್ಚು ವಿವರಗಳೊಡನೆ ನೀಡುವ ಸಾಧ್ಯತೆ ಈ ಪತ್ರಿಕೆಗಳ ವೈಶಿಷ್ಟ್ಯ. ವಿಷಯ ಕ್ಲಿಷ್ಟವೆಂದು ಸಾಮಾನ್ಯ ಪತ್ರಿಕೆಗಳಲ್ಲಿ ಜಾಗಪಡೆಯದ ಸಂಗತಿಗಳನ್ನೂ ಇವು ಓದುಗರಿಗೆ ತಲುಪಿಸಬಲ್ಲವು.

ಕನ್ನಡದಲ್ಲಿ ಅನೇಕ ವಿಜ್ಞಾನ ಪತ್ರಿಕೆಗಳು ಬಂದುಹೋಗಿವೆ. ಒಂದು ಶತಮಾನದಷ್ಟು ಹಿಂದೆ ಬೆಳ್ಳಾವೆ ವೆಂಕಟನಾರಣಪ್ಪನವರು ಪ್ರಾರಂಭಿಸಿ ನಡೆಸಿದ 'ವಿಜ್ಞಾನ'ದಿಂದ ಇತ್ತೀಚಿನವರೆಗೂ ಅನೇಕ ಪತ್ರಿಕೆಗಳು ಕನ್ನಡದ ಓದುಗರನ್ನು ತಲುಪಲು ಪ್ರಯತ್ನಿಸಿವೆ.
ಆದರೆ ಕೆಲ ಉದಾಹರಣೆಗಳನ್ನು ಹೊರತುಪಡಿಸಿದಂತೆ ಕನ್ನಡದ ವಿಜ್ಞಾನ ಪತ್ರಿಕೆಗಳು ಅಡೆತಡೆಗಳಿಲ್ಲದೆ ದೀರ್ಘಸಮಯ ಪ್ರಕಟವಾಗಿರುವುದು ಅಪರೂಪವೇ.

ಈ ಮಾತಿಗೆ ಅಪವಾದವೆಂಬಂತೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ದ್ವೈಮಾಸಿಕ ನಿಯತಕಾಲಿಕೆ 'ವಿಜ್ಞಾನ ಲೋಕ' ಇದೀಗ ಒಂಬತ್ತು ವರ್ಷ ಪೂರೈಸಿ ತನ್ನ ಹತ್ತನೆಯ ವರ್ಷಕ್ಕೆ ಕಾಲಿಟ್ಟಿದೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ನಿಜಕ್ಕೂ ಸಂಗ್ರಾಹ್ಯವಾದ ಒಂದು ವಿಶೇಷ ಸಂಚಿಕೆಯನ್ನೂ ಪ್ರಕಟಿಸಿದೆ. ಪ್ರೊ. ಅಡ್ಯನಡ್ಕ ಕೃಷ್ಣಭಟ್, ಡಾ. ಟಿ. ಆರ್. ಅನಂತರಾಮು, ನಾಗೇಶ ಹೆಗಡೆ, ಡಾ. ಬಿ. ಎಸ್. ಶೈಲಜಾ, ಡಾ. ಪಾಲಹಳ್ಳಿ ವಿಶ್ವನಾಥ್, ಸಿ. ಆರ್. ಸತ್ಯ ಮುಂತಾದ ಹಲವು ಖ್ಯಾತನಾಮರ ಇಪ್ಪತ್ತಕ್ಕೂ ಹೆಚ್ಚಿನ ಬರಹಗಳು ಈ ಸಂಚಿಕೆಯಲ್ಲಿವೆ. ಪ್ರೊ. ಎಚ್. ಎಸ್. ಲಕ್ಷ್ಮೀನಾರಾಯಣಭಟ್ಟರು ಬರೆದಿರುವ 'ವಿಜ್ಞಾನ-ತಂತ್ರಜ್ಞಾನ ಗೀತೆ'ಯೂ ಇಲ್ಲಿದೆ.

ಕನ್ನಡದ ವಿಜ್ಞಾನ ಪತ್ರಿಕೆಯೊಂದು ಉತ್ತಮ ಕಾಗದದಲ್ಲಿ, ಬಹುವರ್ಣದಲ್ಲಿ ಮುದ್ರಣವಾಗುವುದೂ ಸಾಧ್ಯವೆಂದು ತೋರಿಸಿಕೊಟ್ಟ ಮೊದಲ ಉದಾಹರಣೆ 'ವಿಜ್ಞಾನ ಲೋಕ'ವೇ ಇರಬೇಕೇನೋ. ಅತ್ಯಂತ ಶ್ರದ್ಧೆಯಿಂದ ಈ ಪತ್ರಿಕೆಯ ಸಂಚಿಕೆಗಳನ್ನು ರೂಪಿಸುತ್ತಿರುವ ಸಂಪಾದಕ ನಾಡೋಜ ಡಾ. ಪಿ. ಎಸ್. ಶಂಕರ್ ನಿಜಕ್ಕೂ ಅಭಿನಂದನಾರ್ಹರು.

ಇಷ್ಟೆಲ್ಲ ಪರಿಶ್ರಮದಿಂದ ರೂಪಗೊಳ್ಳುವ ಈ ಪತ್ರಿಕೆ ಜನಸಾಮಾನ್ಯರಿಗೆ ಸುಲಭವಾಗಿ ಸಿಗುವಂತಿದ್ದರೆ ಇನ್ನೂ ಚೆಂದ. ಅಕಾಡೆಮಿ ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಆಶಿಸೋಣ.

ಹೆಚ್ಚಿನ ವಿವರಗಳಿಗೆ ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿರುವ ವಿಜ್ಞಾನ ಭವನವನ್ನು ಸಂಪರ್ಕಿಸಬಹುದು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಕಚೇರಿಯಿರುವುದು ಅಲ್ಲೇ. ಅವರ ಇಮೇಲ್ ವಿಳಾಸ: ksta.gok@gmail.com ಮತ್ತು ಜಾಲತಾಣ: www.kstacademy.org. ಜಾಲತಾಣದಲ್ಲಿ ವಿಜ್ಞಾನಲೋಕದ ಕೆಲವು ಸಂಚಿಕೆಗಳನ್ನೂ ನೋಡಬಹುದು.

1 ಕಾಮೆಂಟ್‌:

palahali ಹೇಳಿದರು...

ಹೌದು, ಇದು ಹೊರಗೂ - ಮಾರುಕಟ್ಟೆಯಲ್ಲೂ - ಸಿಗಬೇಕು. ಆದರೆ ಇದಕ್ಕೆ ೫೦-೧೦೦ ರೂಪಾಯಿ ತರಹದ ಬೆಲೆ ಇಡಬೆಕಾಗುತ್ತದೆ. ಅದನ್ನು ಕೆಲ್ವರು ಕೊಳ್ಳಬಹುದು. ಆದಲ್ಲದೆ ಸಾಧರಣ ಕಾಗದದಲ್ಲಿ ಬಿಳಿ/ಕಪ್ಪು ಮುದ್ರಣದೊ೦ದಿಗೆ ಕಡಿಮೆ ದರದಲ್ಲಿ ಬ೦ದರೆ ಸಮಾಜದ ಎಲ್ಲರನ್ನೂ ಮುಟ್ಟಲು ಸಾದ್ಯೆ.

badge