ಗುರುವಾರ, ಜೂನ್ 2, 2016

ಗತಿಸಿಹೋದವು ಆ ದಿನಗಳು!

ರೋಹಿತ್ ಚಕ್ರತೀರ್ಥ

"ನಮ್ ಕಾಲದಲ್ಲಿ ನೋಡಬೇಕಿತ್ತು!" ಎಂದೇ ಹಲವು ಹಿರಿಯರ ಕತೆಗಳು ಶುರುವಾಗುವುದು. ಹಿಂದಿನ ಕಾಲದಲ್ಲಿ ಏನಿತ್ತು? ಫಾಸ್ಟ್ ಟ್ರೇನು, ಏರೋಪ್ಲೇನುಗಳು ಇರಲಿಲ್ಲ. ಕಾಗದ, ತಂತಿ ಬಿಟ್ಟರೆ ಬೇರಾವ ಸಂವಹನ ಮಾಧ್ಯಮವೂ ಇರಲಿಲ್ಲ. ಕಪ್ಪುಬಿಳುಪು ಟಿವಿಯಲ್ಲಿ ದೂರದರ್ಶನ ಹಾಕಿದ್ದನ್ನೇ ಮೂರು ಹೊತ್ತು ನೋಡುತ್ತ ಕೂರಬೇಕಿತ್ತು. ಫೇಸ್‌ಬುಕ್ ಬಿಡಿ, ಈಗಿನವರಿಗೆ ಪರಿಚಯವಿಲ್ಲದ ಮೈಸ್ಪೇಸ್, ಆರ್ಕುಟ್ ಮುಂತಾದ ಪಳೆಯುಳಿಕೆಗಳು ಕೂಡ ಇರದ ಕಾಲ ಅದು. ಅಂಥಾದ್ದರಲ್ಲಿ ಯಾವ ಸುಖ-ಸೌಕರ್ಯ ಇಲ್ಲದ ಆ ಶಿಲಾಯುಗವನ್ನು ಗೋಲ್ಡನ್ ಏಜ್ ಅಂತೀರಲ್ಲ, ತಲೆ ಕೆಟ್ಟಿದೆಯೇ ಎಂದು ಈಗಿನವರು ಕೇಳಿಯಾರು. ತಡೆಯಿರಿ, ಇನ್ನೈವತ್ತು ವರ್ಷಗಳು ಹೋದರೆ ಇದೇ ಮಂದಿ "ನಮ್ಮ ಕಾಲದಲ್ಲಿ ಎಷ್ಟೊಂದು ಚೆನ್ನಿತ್ತು! ಸಂವಹನಕ್ಕೆ ಸ್ಮಾರ್ಟ್ ಫೋನ್ ಬಿಟ್ಟರೆ ಬೇರೇನಿರಲಿಲ್ಲ!" ಎನ್ನುವ ಕಾಲ ಬರುತ್ತದೆ.


ಮನುಷ್ಯ ಹೀಗೆ ಗತವನ್ನು ನೆನೆಯಲು ಎರಡು ಕಾರಣಗಳು. ಒಂದು - ಮಿದುಳಿನ ಮಿತಿ. ಅದು ಕಾಲವನ್ನು ಬ್ರೆಡ್ ಕತ್ತರಿಸಿದಂತೆ ಸಮಾನವಾಗಿ ಕತ್ತರಿಸಿನೋಡುವುದಿಲ್ಲ. ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆ ಆತನ "ವರ್ಷ"ದ ಪರಿಕಲ್ಪನೆ ಬದಲಾಗುತ್ತಾ, "ವರ್ಷ"ದ ಮಿತಿ ಸಂಕೋಚಿಸುತ್ತಾ ಹೋಗುತ್ತದೆ. ಉದಾಹರಣೆಗೆ ಎರಡು ವರ್ಷ ತುಂಬಿದ ಮಗುವಿಗೆ ತಾನು ಕಳೆದ ಎರಡನೇ ವರ್ಷ, ತನ್ನ ಪೂರ್ಣ ಬದುಕಿನ ಅರ್ಧ ಭಾಗ. ಆದರೆ ಹತ್ತು ವರ್ಷ ತುಂಬಿದ ಹುಡುಗನಿಗೆ ತನ್ನ ಹತ್ತನೇ ವರ್ಷ, ಪೂರ್ಣ ಬದುಕಿನ ಹತ್ತನೇ ಒಂದು ಭಾಗ ಮಾತ್ರ. ಮುಂದುವರಿಯುತ್ತ ಹೋದರೆ, ಐವತ್ತು ವರ್ಷ ತುಂಬಿದ ನಡುಪ್ರಾಯದ ವ್ಯಕ್ತಿಗೆ ತಾನು ಕಳೆಯುವ ಒಂದು ವರ್ಷ, ಇದುವರೆಗೆ ಪೂರೈಸಿರುವ ಜೀವನದ ಐವತ್ತನೇ ಒಂದು ಭಾಗ. ಈ ಭಿನ್ನರಾಶಿಗೆ ತಕ್ಕಂತೆ ಮಿದುಳು ಆಯಾ ವರ್ಷಗಳಿಗೆ ಕೊಡುವ ಮಹತ್ವದಲ್ಲೂ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಸರಳವಾಗಿ ಹೇಳುವುದಾದರೆ, ಪ್ರಾಯ ಹೆಚ್ಚಾದಂತೆ ಮನುಷ್ಯ ತಾನು ಕಳೆಯುವ ದಿನಗಳಿಗೆ ಕಡಿಮೆ ಮಹತ್ವ ಕೊಡುತ್ತಾ ಹೋಗುತ್ತಾನೆ. ಹಾಗಾಗಿ ಅವನ ಮಿದುಳಿನ ಬಹುತೇಕ ಸ್ಮರಣೆಯನ್ನು ಆವರಿಸುವುದು ಬಾಲ್ಯಕಾಲವೇ.

ಇನ್ನು ಎರಡನೇ ಕಾರಣ ಕೂಡ ಮಿದುಳಿಗೆ ಸಂಬಂಧ ಪಟ್ಟಿದ್ದೇ. ಅದೇನೆಂದರೆ, ನಮ್ಮೆಲ್ಲರ ಮಿದುಳುಗಳು ಮೊತ್ತಮೊದಲ ಬಾರಿಗೆ ಕಾಣುವ, ನೋಡುವ, ಆಘ್ರಾಣಿಸುವ, ಸ್ಪರ್ಶಿಸುವ ಸಂಗತಿಗಳನ್ನು ತುಸು ಹೆಚ್ಚೇ ಪ್ರಾಮುಖ್ಯ ಕೊಟ್ಟು ಸ್ಮರಣೆಯಲ್ಲಿಟ್ಟುಕೊಳ್ಳುತ್ತವೆ. ಮೊದಲ ಬಾರಿ ಕೆಂಡ ಮುಟ್ಟಿ ಕೈ ಸುಟ್ಟುಕೊಂಡ ಮಗು, ಕೆಂಡ ಮುಟ್ಟಬಾರದೆಂಬ ಜ್ಞಾನವನ್ನು ಜೀವನಪೂರ್ತಿ ಮರೆಯುವುದಿಲ್ಲ ತಾನೇ? ಹಾಗಾಗಿ ಮೊದಲ ಪಾಠಕ್ಕೆ ಆದ್ಯತೆ ಜಾಸ್ತಿ. ಈ ಅಂಶ ಸರಿಯಾಗಿ ಅರ್ಥವಾಗಬೇಕಾದರೆ ಸ್ವಲ್ಪ ವೈಜ್ಞಾನಿಕ ವಿವರಣೆ ಬೇಕಾಗಬಹುದು. ಮನುಷ್ಯನ ಮಿದುಳಿನಲ್ಲಿ ನ್ಯೂರಾನ್‌ಗಳೆಂಬ ನರಕೋಶಗಳು ಇವೆಯಷ್ಟೇ. ಇಂಥ ಲಕ್ಷಾಂತರ, ಕೋಟ್ಯಂತರ ನ್ಯೂರಾನ್‌ಗಳ ಒಟ್ಟು ಮೊತ್ತವೇ ಮಿದುಳು. ನಾವು ಯಾವುದೇ ಒಂದು ಮಾಹಿತಿಯನ್ನು ಸ್ವೀಕರಿಸಿದಾಗ, ಮಿದುಳಿನ ನ್ಯೂರಾನ್‌ಗಳಲ್ಲಿ ಒಂದು ಸಣ್ಣ ವಿದ್ಯುದಂಶದ ಕಿಡಿ ಹೊತ್ತಿಕೊಳ್ಳುತ್ತದೆ. ಮತ್ತು ಇದು ಎರಡು ನ್ಯೂರಾನ್‌ಗಳನ್ನು ಒಂದು ವಿಶಿಷ್ಟ ರೀತಿಯಲ್ಲಿ ಬೆಸೆಯುತ್ತದೆ. ಪ್ರತಿ ಸಂಗತಿಯನ್ನು ನಾವು ದಾಖಲಿಸಿಕೊಂಡಾಗಲೂ ಇಂಥದೊಂದು ಬೆಸುಗೆ ಎರಡು ನ್ಯೂರಾನ್‌ಗಳ ನಡುವೆ ನಡೆಯುತ್ತದೆ. ಬೇಕಾದರೆ ಇದನ್ನು ಎರಡು ನಗರಗಳ ನಡುವೆ ನಿರ್ಮಿಸಲಾದ ರಸ್ತೆಗೆ ಹೋಲಿಸಬಹುದು. ನ್ಯೂರಾನ್‌ಗಳ ನಡುವೆ ಸೈನಾಪ್ಸ್ ಎಂಬ ಸಂಧಿ ಇರುವುದರಿಂದ, ಮಾಹಿತಿಯೊಂದು ಮಿದುಳಿಗೆ ಬಂದು ತಲುಪಿದಾಗ, ನ್ಯೂರಾನ್‌ಗಳ ನಡುವಿನ ಈ ಸೈನಾಪ್ಸ್‌ಗಳು ಜಾಗೃತವಾಗುತ್ತವೆ. ಉದಾಹರಣೆಗೆ ನೀವು ಜೀವನದಲ್ಲಿ ಮೊತ್ತಮೊದಲ ಬಾರಿಗೆ ಮಲ್ಲಿಗೆಯ ಪರಿಮಳ ಆಘ್ರಾಣಿಸಿದಿರೆನ್ನಿ. ಆ ಮಾಹಿತಿಯನ್ನು ಶೇಖರಿಸಲೋಸುಗ ಎರಡು ನ್ಯೂರಾನ್‌ಗಳು ನಿಮ್ಮ ಮಿದುಳಿನಲ್ಲಿ ಒಂದು ವಿಶಿಷ್ಟ ರೀತಿಯಲ್ಲಿ ಬೆಸೆದುಕೊಳ್ಳುತ್ತವೆ. ಅಂದರೆ ಅವುಗಳ ನಡುವಿನ ಸೈನಾಪ್ಸ್ ಎಂಬ ಸೇತುವೆಯ ಮೇಲಿಂದ ಒಂದು ವಿದ್ಯುದಂಶವುಳ್ಳ ಕಣ ಓಡಾಡಿ ಅತ್ತಿತ್ತಲಿನ ನ್ಯೂರಾನುಗಳಿಗೆ ಹಸ್ತಲಾಘವ ಮಾಡಿಸುತ್ತದೆ. ಅದಾಗಿ ಎಷ್ಟೋ ದಿನಗಳ ಬಳಿಕ ನೀವು ಮತ್ತೊಮ್ಮೆ ಮಲ್ಲಿಗೆಯ ಪರಿಮಳ ಆಸ್ವಾದಿಸಿರೆನ್ನಿ. ಆಗ, ಈ ಮೊದಲು ಆ ಸುವಾಸನೆಯ ಮಾಹಿತಿಯನ್ನು ಶೇಖರಿಸಿದ್ದ ಅದೇ ಎರಡು ನ್ಯೂರಾನುಗಳ ನಡುವೆ ಮತ್ತೊಮ್ಮೆ ವಿದ್ಯುದಂಶವೊಂದು ಓಡಾಡಬಹುದು. ಇದು ಹಳ್ಳಿಯ ಮಣ್ಣುರಸ್ತೆಯ ಮೇಲೆ ಜಲ್ಲಿ ಸಿಂಪಡಿಸಿ ಮುಂದಿನ ಕೆಲಸಕ್ಕೆ ಸಿದ್ಧಗೊಳಿಸಿದ ಹಾಗೆ. ಒಂದೇ ಮಾಹಿತಿಯನ್ನು ಮತ್ತೆಮತ್ತೆ ನಿಮ್ಮ ಮಿದುಳು ಸ್ವೀಕರಿಸುವ ಸಂದರ್ಭ ಬಂದರೆ ಆ ನ್ಯೂರಾನ್‌ಗಳ ನಡುವೆ ಕಚ್ಛಾರಸ್ತೆಯ ಬದಲು ಸುವಿಶಾಲ ಕಾಂಕ್ರೀಟ್ ರಸ್ತೆಯೇ ನಿರ್ಮಾಣವಾಗುತ್ತದೆ. ಅರ್ಥಾತ್, ಅವುಗಳ ಸಂಬಂಧ, ಬೆಸುಗೆ ಗಟ್ಟಿಯಾಗುತ್ತದೆ. ಇದು ಮಿದುಳು ಯಾವುದೇ ವಿಷಯವನ್ನು ತನ್ನೊಳಗೆ ಇಳಿಸಿಕೊಳ್ಳುವ ರೀತಿ.

ಮಿದುಳು, ಆಗಲೇ ಹೇಳಿದಂತೆ, ಮೊತ್ತಮೊದಲ ಬಾರಿಗೆ ಸ್ವೀಕರಿಸುವ ಹೊಸ ಮಾಹಿತಿಯನ್ನು ಶೇಖರಿಸುವಾಗ ವಿಶೇಷ ಕಾಳಜಿ ವಹಿಸುತ್ತದೆ. ಹೊಚ್ಚಹೊಸ ಮಾಹಿತಿಯನ್ನು ಮೇಷ್ಟ್ರು ಹೇಳುವಾಗ ಕ್ಲಾಸಿನ ಹುಡುಗರೆಲ್ಲ ಬಹಳ ಆಸ್ಥೆಯಿಂದ ನೋಟ್ಸ್ ಮಾಡಿಕೊಳ್ಳುತ್ತಾರಲ್ಲ, ಹಾಗೆ! ಆದರೆ ಮಾಹಿತಿ ಸಂಗ್ರಹಕ್ಕೆ ಕೈಜೋಡಿಸುವ ನ್ಯೂರಾನ್‌ಗಳು ತಮ್ಮ ಚಟುವಟಿಕೆ ತೋರಿಸುವುದು ಮನುಷ್ಯನಿಗೆ ನಾಲ್ಕು ವರ್ಷಗಳಾದ ನಂತರವೇ. ಅದಕ್ಕೇ ನೋಡಿ, ನಿಮಗೆ ನಿಮ್ಮ ಬಾಲ್ಯದ ದಿನಗಳು ಎಂದಾಗ ನೆನಪಾಗುವುದು ಮೂರ್ನಾಲ್ಕು ವರ್ಷ ತುಂಬಿದ ನಂತರದ ಘಟನೆಗಳು ಮಾತ್ರ. ಅಂಬೆಗಾಲಿಡುವ ಮಗುವಿದ್ದಾಗ ಹೇಗಿದ್ದಿರಿ? ತಾಯ ಎದೆ ಮೇಲೆ ಪವಡಿಸಿದ ಶಿಶುವಾಗಿದ್ದಾಗ ಹೇಗಿದ್ದಿರಿ? ತೊಟ್ಟಿಲ ಕಂದನಾಗಿದ್ದಾಗ ಹೇಗಿದ್ದಿರಿ? ಬಾಲಲೀಲೆಯನ್ನು ರೆಕಾರ್ಡಿಸಿದ ವಿಡಿಯೋಗಳನ್ನು ನೋಡುವ ಭಾಗ್ಯವಿಲ್ಲದ ಕಾಲದಲ್ಲಿ ಹುಟ್ಟಿದ ನಮ್ಮನಿಮ್ಮಂಥವರಿಗೆ ಅಂಥ ಶೈಶವಾವಸ್ಥೆ ಸಂಬಂಧಿಕರ ಮಾತು-ಕತೆಯ ಮೂಲಕವಷ್ಟೇ ಅನಾವರಣವಾಗುವ ಕಾಲ್ಪನಿಕ ಜಗತ್ತು. ನಮ್ಮ ನೆನಪುಗಳೇನಿದ್ದರೂ ನಾಲ್ಕು ವರ್ಷಗಳ ಈಚೆಗಿನದ್ದು. ಅಲ್ಲಿಂದ ಶುರುವಾಗುವ ಮಿದುಳಿನ ಪಟುತ್ವ ಯೌವನಾವಸ್ಥೆಯಲ್ಲಿ ತೀವ್ರತೆ ಪಡೆಯುತ್ತದೆ. ಆದರೆ ವಯಸ್ಸು ಕುಂದುತ್ತ ಹೋದಂತೆ ನರಕೋಶದ ಸಾಮರ್ಥ್ಯವೂ ಇಳಿಮುಖವಾಗುತ್ತ ಬಂದು ಅರುವತ್ತು ದಾಟಿದ ಮೇಲೆ ಸೈನಾಪ್ಸ್‌ಗಳು ಕೃಶವಾಗತೊಡಗುತ್ತವೆ. ಹಾಗಾಗಿ, ಅರುವತ್ತು ದಾಟಿದ ಮೇಲೆ ಓದಿದ್ದನ್ನು, ನೋಡಿದ್ದನ್ನು ನೆನಪಿಟ್ಟುಕೊಳ್ಳುವುದು; ಹಳೆಯ ಘಟನೆ ಹೆಸರು ವಿವರಗಳನ್ನು ನೆನಪಿಸಿಕೊಳ್ಳುವುದು - ಇವೆಲ್ಲ ಕಷ್ಟ. ನಾವೇಕೆ ನಮ್ಮ ಬಾಲ್ಯ-ಯೌವನಾವಸ್ಥೆಗಳ ಸುಮಧುರ ನೆನಪುಗಳ ಚಾದರವನ್ನು ಹೊದ್ದುಕೊಳ್ಳಬಯಸುತ್ತೇವೆನ್ನುವುದಕ್ಕೆ ಇದೊಂದು ("ಇದೂ ಒಂದು" ಹೌದು. "ಇದೊಂದೇ" ಅಲ್ಲ) ವೈಜ್ಞಾನಿಕ ಕಾರಣ.

ಕೆಲವು ಮನೋಶಾಸ್ತ್ರಜ್ಞರು, "ಮನುಷ್ಯ ತಾನು ಅನುಭವಿಸಿದ್ದನ್ನು ಮಾತ್ರವಲ್ಲ; ಕೇಳಿದ ಅಥವಾ ಓದಿದ ಸಂಗತಿಗಳನ್ನು ಕೂಡ ಸ್ವತಃ ಅನುಭವಿಸಿದ್ದೇನೆಂಬ ಭ್ರಮೆ ಬೆಳೆಸಿಕೊಳ್ಳುವ ಸಾಧ್ಯತೆ ಇದೆ" ಎಂಬ ವಿಚಿತ್ರ ಸಿದ್ಧಾಂತವನ್ನು ಮುಂದಿಡುತ್ತಾರೆ. ಅಂದರೆ, "ನೀನು ಪುಟಾಣಿಯಾಗಿದ್ದಾಗ ನಾನು ನಿನ್ನನ್ನು ಹೊತ್ತುಕೊಂಡು ಬೆಟ್ಟ ಹತ್ತಿದ್ದೆ ಕಣೋ" ಎಂದಾಗ ಅದನ್ನು ಕೇಳಿಸಿಕೊಂಡವನು ಘಟನೆ ವಿವರಿಸಿದವರ ವಿವರಗಳನ್ನು ತಾನೂ ನೋಡಿದಂತೆ ಒಂದು ಚಿತ್ರವನ್ನು ಕಲ್ಪಿಸಿಕೊಳ್ಳಬಹುದು. ಕಾಲಕ್ರಮೇಣ ಆತ ಅದನ್ನು ನಿಜವೆಂದು ನಂಬಬಹುದು. ತನಗೆ ಆ ಘಟನೆ ನೆನಪಿದೆ ಎಂದು ಸ್ವಯಂ ಒಪ್ಪಿಸಿಕೊಳ್ಳುವ ಕೆಲಸ ಮಾಡಬಹುದು. ಘಟನೆಯನ್ನು ಹೇಳಿದವರು ತೀರಾ ಆತ್ಮೀಯರೂ ನಂಬಿಕಸ್ಥರೂ ಆದರೆ ಅದನ್ನು ಒಪ್ಪಿಕೊಳ್ಳಲು ವ್ಯಕ್ತಿ ಹಿಂದೇಟು ಹಾಕುವುದಿಲ್ಲ. ಕಾಲಕ್ರಮೇಣ ಆತ ಅದನ್ನು ನಿಜವೆಂದು ಭ್ರಮಿಸಲು ತೊಡಗುತ್ತಾನೆ. ತನ್ನ ಜೀವನದಲ್ಲಿ ನಡೆದ ಘಟನೆಗಳೆಂದು ಹೇಳಲಾದವನ್ನೆಲ್ಲ ವ್ಯಕ್ತಿ ನಿಜವಾಗಿಯೂ ನಡೆದಂತೆ ಚಿತ್ರಕ (ವಿಷುಯಲ್) ರೂಪದಲ್ಲಿ ಜ್ಞಾಪಿಸಿಕೊಳ್ಳುವುದು ಸಾಧ್ಯ. ಏನು ಹಾಗೆಂದರೆ? ನಾವು ನೂರಕ್ಕೆ ನೂರು ನೆನಪು ಎಂದು ಭಾವಿಸಿದ್ದು ಕೂಡ ನೆನಪಲ್ಲದೆ ಅದರ ಸುಳ್ಳು ನೆರಳಾಗಿರುವ ಸಾಧ್ಯತೆ ಇದೆಯೆಂದು ಅರ್ಥವೇ? ಹೌದು! ನೀವು ನಿಮ್ಮ ಬಾಲ್ಯದಲ್ಲಿ ನಡೆದದ್ದು, ನೀವು ಸ್ವತಃ ಅನುಭವಿಸಿರುವುದು ಎಂದು ಭಾವಿಸಿದ ಘಟನೆಗಳು ಕೂಡ ಕೇವಲ ಹೇಳಿಕೆಯ ಕತೆಗಳಾಗಿರುವ ಸಾಧ್ಯತೆ ಇದೆ! ಶತ್ರುದೇಶದ ಸೈನಿಕರನ್ನು ಹಿಡಿದುತಂದು ಬ್ರೇನ್‌ವಾಷ್ (ಮಸ್ತಿಷ್ಕ ಮಜ್ಜನ?) ಮಾಡುವಾಗ ಈ ತಂತ್ರವನ್ನು ಬಳಸುತ್ತಿದ್ದರಂತೆ!

ಹಾಗೆಂದ ಮಾತ್ರಕ್ಕೆ ನಮ್ಮ ನೆನಪುಗಳೆಲ್ಲ ಖೊಟ್ಟಿ ಎಂದೇನೂ ಅರ್ಥವಲ್ಲ. ನೂರಕ್ಕೆ ತೊಂಬತ್ತು ಪಾಲು ಸ್ಮರಣೆ ನಾವು ನಮ್ಮ ಪಂಚೇಂದ್ರಿಯಗಳ ಮೂಲಕ ಅನುಭವಿಸಿದ್ದೇ. ಉದಾಹರಣೆಗೆ, ನಾನು ಚಿಕ್ಕವನಿದ್ದಾಗ ಒಂದು ಮಳೆಗಾಲದಲ್ಲಿ ನನಗೆ ಮಿಂಚು ಬಡಿಯಿತು. ನಾನೂ ನನ್ನ ಚಿಕ್ಕಮ್ಮನೂ ಜತೆ ಕೂತಿದ್ದಾಗ ಛಳ್ಳನೆ ಹೊಳೆದು ಮರೆಯಾದ ಮಿಂಚುಕೋಲಿನ ಅಗಾಧ ಶಕ್ತಿ ಹೊಲಿಗೆ ಮೆಷಿನಿಗೆ ಹರಿದು ಅಲ್ಲಿಂದ ನಮ್ಮಿಬ್ಬರ ದೇಹಗಳನ್ನೂ ಹಾದು ನೆಲಮುಟ್ಟಿತು. ಆಗ ನಾನಿನ್ನೂ ಐದೋ ಆರೋ ವರ್ಷದ ಕೂಸು. ಆದರೆ, ಮಿಂಚು ದೇಹವನ್ನು ಸೀಳಿಕೊಂಡುಹೋದಾಗ ನಾವಿಬ್ಬರೂ ಚಿತ್ರಾರ್ಪಿತರಾದಂತೆ ಥಂಡಿಗಟ್ಟಿ ಕೂತ ಕ್ಷಣ ಮಾತ್ರ ನನ್ನ ಸ್ಮರಣೆಯಲ್ಲಿ ಅಚ್ಚಳಿಯದೆ ಉಳಿದಿದೆ. ಹಳ್ಳಿಯ ಮನೆಯಲ್ಲಿ ನಾಗರ ಕಲ್ಲಿಗೆ ಪೂಜೆ ಮಾಡಲು ಹೋದಾಗ ಅಲ್ಲಿ ನಿಜವಾದ ನಾಗರನೇ ಸುರುಳಿಸುತ್ತಿ ಮಲಗಿದ್ದನ್ನು ಕಂಡು ಬೆಚ್ಚಿದ್ದು, ಬಾವಿಯಿಂದ ನೀರು ಸೇದಲು ತಂದ ಕೊಡ ತಳ ಸೇರುವಂತೆ ಮಾಡಿದ್ದು, ಬೆಕ್ಕಿಗೆ ಸ್ನಾನ ಮಾಡಿಸಲು ಹೋಗಿ ಬಕೆಟ್ ನೀರಲ್ಲಿ ಅದ್ದಿ ತೆಗೆದದ್ದು, ತಂಗಿಯ ಪೆನ್ಸಿಲ್ಲನ್ನು ಅಕಾರಣ ಮುರಿದು ಅಮ್ಮನಿಂದ ಬೆನ್ನಿಗೆ ಸನ್ಮಾನ ಮಾಡಿಸಿಕೊಂಡದ್ದು - ಇವೆಲ್ಲ ಸದ್ಯಕ್ಕಂತೂ ನಿನ್ನೆಮೊನ್ನೆ ಆಗಿಹೋದ ಘಟನೆಗಳೆಂಬಂತೆ ಹಸಿಹಸಿಯಾಗಿ ನೆನಪಲ್ಲಿವೆ. ಆದರೆ ಇನ್ನು ಮೂವತ್ತು ವರ್ಷ ಕಳೆದ ಬಳಿಕ ಅವು ಹೀಗೆಯೇ ಸ್ಮರಣಕೋಶದಲ್ಲಿ ತಾಜಾ ಹೂವಿನಂತೆ ಇರುತ್ತವೋ ಅಥವಾ ಕಲ್ಪನೆ-ವಾಸ್ತವಗಳ ಕಲಸುಮೇಲೋಗರವಾಗಿ ಎಲ್ಲವನ್ನೂ ನೆನಪೆಂಬ ಒಂದೇ ಬುಟ್ಟಿಯಲ್ಲಿ ಹಾಕಿಬಿಡುತ್ತೇನೋ ಗೊತ್ತಿಲ್ಲ. ಬಹುಶಃ ವಯಸ್ಸಾದಂತೆ ಮನುಷ್ಯ ಈ ನೆನಪಿನ ಬುಟ್ಟಿಯಲ್ಲಿ ತಾನು ಕಂಡ ಕೇಳಿದ ಘಟನೆಗಳನ್ನೂ, ವರ್ಗೀಕರಿಸಿ ಇಡುವ ಅಗತ್ಯ ಕಾಣದೆ, ತನ್ನವೇ ಎಂಬಂತೆ ಹಾಕಿಬಿಡುತ್ತಾನೆಂದು ಕಾಣುತ್ತದೆ. ಹಾಗಾಗಿಯೇ, ವಯಸ್ಸಾದವರಲ್ಲಿ ನೆನಪಿನ ಬುತ್ತಿಯಿಂದ ಮೊಗೆದಷ್ಟೂ ಕತೆಗಳು ಹುಟ್ಟುತ್ತಿರುತ್ತವೆ. ಅವೆಲ್ಲವನ್ನೂ ನಿಜವೆಂದು ನಂಬುವುದರಲ್ಲಿ ಅವರಿಗೊಂದು ಸಮಾಧಾನವಿದೆ.

ಮನುಷ್ಯ ನೆನಪುಗಳಲ್ಲಿ ಬದುಕುತ್ತಾನೆ ಎನ್ನುವುದೇನೋ ಓಕೆ. ಆದರೆ ಆತ ಬಾಲ್ಯಕಾಲದ ನೆನಪುಗಳತ್ತಲೇ ಓಡುವುದು ಯಾಕೆ? ಇದಕ್ಕೂ ಎರಡು ಕಾರಣಗಳುಂಟು. ಒಂದು - ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆ ಆತನ ನರಕೋಶಗಳ ಧಾರಣ ಸಾಮರ್ಥ್ಯ ಕುಸಿಯುವುದು. ಉದಾಹರಣೆಗೆ, ಮನುಷ್ಯನ ಮಿದುಳಿನಲ್ಲಿ ಅಲ್ಪಕಾಲೀನ ಸ್ಮರಣೆಯಿಂದ ದೀರ್ಘಕಾಲೀನ ಸ್ಮರಣೆಗೆ ಹೋಗಲು ಸಹಾಯ ಮಾಡುವ ಹಿಪ್ಪೋಕ್ಯಾಂಪಸ್ ಎಂಬ ಭಾಗ, ದೇಹಕ್ಕೆ ವಯಸ್ಸಾಗುತ್ತಾ ಹೋದಂತೆ ತನ್ನ ಗಾತ್ರವನ್ನು ಕಳೆದುಕೊಳ್ಳುತ್ತದೆ. ವಯಸ್ಸು ನಲವತ್ತು ದಾಟಿದ ಮೇಲೆ ಮಿದುಳಿನ ಈ ಭಾಗ, ಪ್ರತಿ ಹತ್ತುವರ್ಷಗಳಲ್ಲಿ ತನ್ನ ಒಟ್ಟು ಗಾತ್ರದ ೫%ನ್ನು ಕಳೆದುಕೊಳ್ಳುತ್ತದೆ. ಅಂದರೆ, ೮೦ ವರ್ಷ ವಯಸ್ಸಿನ ವೃದ್ಧರ ಮಿದುಳಿನಲ್ಲಿ ಹಿಪ್ಪೋಕ್ಯಾಂಪಸ್, ಅದರ ಮೂಲ ಗಾತ್ರದ ೮೦%ರಷ್ಟು ಮಾತ್ರ ದೊಡ್ಡದಿರುತ್ತದೆ. ವೃದ್ಧರಿಗೆ ಯಾಕೆ ವಿಷಯಗಳು ಮರೆತುಹೋಗುತ್ತವೆ? ಯಾಕೆ ಒಂದೇ ವಿಷಯವನ್ನು ಮತ್ತೆಮತ್ತೆ ಹೇಳಿಕೊಂಡು ನೆನಪಿನಲ್ಲಿಟ್ಟುಕೊಳ್ಳುವ ಕಸರತ್ತು ಮಾಡಬೇಕಾಗುತ್ತದೆ? ಯಾಕೆ ಯಾವುದೇ ವಿಷಯ ಬಯಸಿದ ತಕ್ಷಣ ತುಟಿಗೆ ಬರುವುದಿಲ್ಲ? ಎಂಬುದಕ್ಕೆ ಈ ಹಿಪ್ಪೊಕ್ಯಾಂಪಸ್‌ನ ಗಾತ್ರಕ್ಷೀಣತೆಯೂ ಒಂದು ಕಾರಣ. ಹಾಗಾಗಿ ಅವರು ತಮ್ಮ ಬದುಕಿನ ಉತ್ತರಾರ್ಧದ ಸಂಗತಿಗಳನ್ನು ನೆನಪಿಸಿಕೊಳ್ಳುವುದರಲ್ಲಿ ಎಡವುತ್ತಾರೆ. ಬಾಲ್ಯಕಾಲದ ನೆನಪಿನ ಬೆಸುಗೆಗಳು ಇನ್ನೂ ಸುಸ್ಥಿತಿಯಲ್ಲಿರುವುದರಿಂದ, ಅವನ್ನು ತಕ್ಷಣ ನೆನಪಿಸಿಕೊಳ್ಳುವುದು ಕಷ್ಟವಾಗುವುದಿಲ್ಲ.

ಬಾಲ್ಯದತ್ತ ಯಾಕೆ ಓಟ ಎಂಬುದಕ್ಕೆ ಎರಡನೇ ಕಾರಣ - ವ್ಯಕ್ತಿ ತನ್ನ ಪ್ರಸ್ತುತ ಸ್ಥಿತಿಯಿಂದ ತಾತ್ಕಾಲಿಕವಾಗಿ ಮುಕ್ತಿ ಪಡೆಯಲು ಬಯಸುವುದು. ವೃದ್ಧಾಪ್ಯವೇನೂ ಹೂವಿನ ಹಾಸಿಗೆಯಲ್ಲ. ಹೆಚ್ಚಿನ ಮಂದಿಗೆ ವೃದ್ಧಾಪ್ಯವೆಂಬುದು ತಮ್ಮ ದೀರ್ಘ ಬದುಕಿನಲ್ಲಿ ಸಾಕಷ್ಟು ನೊಂದು ಬೆಂದು, ಗೆಳೆಯರನ್ನೆಲ್ಲ ಕಳೆದುಕೊಂಡು, ಒಂಟಿಯಾಗಿ, ಏಕಾಕಿಗಳಾಗಿ ಬದುಕು ಸವೆಸುವ ಹೊತ್ತು. ಹಾಗಾಗಿ ವರ್ತಮಾನದ ಸ್ಥಿತಿಯನ್ನು ನೆನೆದು ಕೊರಗುತ್ತ ಕೂರುವ ಬದಲಾಗಿ ಬಾಲ್ಯದ ಸುಖ-ಸಂತೋಷಗಳನ್ನು ನೆನೆದಾದರೂ ಕ್ಷಣಿಕ ಸುಖ ಅನುಭವಿಸೋಣವೆಂದು ಮನಸ್ಸು ಯೋಚಿಸುವುದು ಸಹಜ ನೋಡಿ! ಮನುಷ್ಯ ತನ್ನ ನಡುವಯಸ್ಸಿನಲ್ಲಿ ತೀವ್ರ ಮನೋಕ್ಷೆಭೆ, ಅತಿಯಾದ ಒತ್ತಡ, ಆರ್ಥಿಕ ಸಂಕಷ್ಟ, ಕೌಟುಂಬಿಕ ಅಸಮಾಧಾನ, ವಿಪರೀತ ದುಡಿತ - ಮುಂತಾದವಕ್ಕೆ ಒಳಗಾಗಿದ್ದರೆ ಆತನ ಸ್ಮರಣಶಕ್ತಿಯೂ ಬಹುಮಟ್ಟಿಗೆ ಘಾಸಿಯಾಗಿರುವ ಸಂಭವವಿದೆ. ಯಾಕೆಂದರೆ ಅವೆಲ್ಲ ಮಾನಸಿಕ ಒತ್ತಡಗಳನ್ನು ತಾಳಿಕೊಳ್ಳಲು ಮಿದುಳು ಮಿತಿಮೀರಿ ಕೆಲವು ರಾಸಾಯನಿಕಗಳನ್ನು ಪ್ರಚೋದಿಸಿ, ಆ ರಾಸಾಯನಿಕಗಳು ನ್ಯೂರಾನ್‌ಗಳ ಸ್ಮರಣಧಾರಣ ಸಾಮರ್ಥ್ಯವನ್ನು ಹಾಳುಮಾಡಿರಬಹುದು. ಅಥವಾ ಚಿತ್ತಕ್ಷೆಭೆಯಿಂದಾಗಿ ಸೆರಟೋನಿನ್‌ನಂಥ (ಸ್ಮರಣೆಗೆ ಅಗತ್ಯವಾದ) ರಾಸಾಯನಿಕಗಳನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದನೆಯಾಗಿ ಸ್ಮರಣೆ ಕೈಕೊಡುವಂತೆ ಮಾಡಿರಬಹುದು. ಇಂಥ ಯಾವುದೇ ಒತ್ತಡ, ಜವಾಬ್ದಾರಿ, ಹೊಣೆಗಾರಿಕೆಗಳು ಇಲ್ಲದ ಕಾಲವೆಂದರೆ ಬಾಲ್ಯ ಮಾತ್ರ ತಾನೆ? ಹಾಗಾಗಿ ಮಿದುಳಿನಲ್ಲಿ ಬಾಲ್ಯಕ್ಕೆ ಸಂಬಂಧಿಸಿದ ಸ್ಮರಣಕೋಶಗಳು ಇನ್ನೂ ಸುಸ್ಥಿತಿಯಲ್ಲಿರಬಹುದು. ವ್ಯಕ್ತಿ ಅವನ್ನು ತನ್ನ ಮಿದುಳಿನ ಮೇಲ್ಪದರಕ್ಕೆ ಎಳೆದುತಂದು ಅವುಗಳ ನೆನಪಲ್ಲಿ ತನ್ನ ಸದ್ಯದ ಶೋಕವನ್ನು ಮರೆಯಲು ಯತ್ನಿಸಬಹುದು.

ಇವೆಲ್ಲ ಕಾರಣದಿಂದಾಗಿ ನಮಗೆ ಬಾಲ್ಯಕಾಲವೇ ಆಪ್ಯಾಯಮಾನ. ಬೇಕಾದರೆ ಪರೀಕ್ಷಿಸಿ ನೋಡಿ. ಕಣ್ಮುಚ್ಚಿ ಧ್ಯಾನಸ್ಥರಾದಿರೆಂದರೆ ನಿಮಗೆ ಶಾಲೆಯ ಮೊದಲ ತರಗತಿಯಲ್ಲಿ ಪಾಠ ಮಾಡಿದ ಶಿಕ್ಷಕರ (ಹೆಚ್ಚಾಗಿ ಶಿಕ್ಷಕಿಯೇ) ಪಾಠ, ಆಟ, ಹಾಡು, ಕುಣಿತಗಳೆಲ್ಲ ನೆನಪಿಗೆ ಬರುವುದು ಕಷ್ಟವೇನಲ್ಲ. ಸ್ವಲ್ಪ ಪ್ರಯತ್ನಿಸಿದರೆ ಶಿಕ್ಷಕರು ಅಆಇಈ ಹೇಳಿಕೊಟ್ಟ, ಒಂದು ಎರಡು ಬಾಳೆಲೆ ಹರಡು ಪದ್ಯದ, ಅ-ಅರಸ ಆ-ಆನೆ ಎಂದು ಓನಾಮ ಕಲಿಸಿದ ಧಾಟಿ, ಸ್ವರಗಳು ಕೂಡ ನೆನಪಾದಾವು. ಮೊದಲ ಸಲ ಮರ ಹತ್ತಿದ್ದು, ಹಾಗೆಯೇ ಮೊದಲ ಸಲ ಬಿದ್ದು ಹಾಲುಹಲ್ಲು ಮುರಿಸಿಕೊಂಡದ್ದು, ಮೊದಲ ಸಲ ಹೆಣ್ಣಿನ ನೋಟಕ್ಕೆ ಫಿದಾ ಆದದ್ದು, ಮೊದಲ ಸಲ ಕದ್ದೂಮುಚ್ಚಿ ಸಿಗರೇಟು ಸೇದಿದ್ದು, ಮೊದಲ ಸಲ ಪರೀಕ್ಷೆಯಲ್ಲಿ ಕಾಪಿ ಹೊಡೆದದ್ದು, ಮೊದಲ ಸಲ ಬ್ಯಾಟನ್ನು ಬೀಸಿ ಒಗೆದು ಸಿಕ್ಸರ್ ಎತ್ತಿದ್ದು, ಮೊದಲ ಸಲ ಈಜಲು ಹೋಗಿ ನೀರು ಕುಡಿದು ತೇಲುಗಣ್ಣಾದದ್ದು, ಮೊದಲ ಸಲ ಸೈಕಲ್ ಕಲಿಯುತ್ತ ಅಪ್ಪ ಹಿಂದಿನಿಂದ ಕ್ಯಾರಿಯರ್ ಹಿಡಿದಿದ್ದಾರೆಂದೇ ಭಾವಿಸಿ ಪೆಡಲ್ ತುಳಿದು ವೇಗ ಹೆಚ್ಚಿಸಿ ಬ್ಯಾಲೆನ್ಸ್ ತಪ್ಪಿ ಕೆಳಕ್ಕೆ ಬಿದ್ದದ್ದು, ಮೊದಲ ಸಲ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದದ್ದು ಇವೆಲ್ಲ ಪೂರ್ತಿ ಮರೆತುಹೋಗದಷ್ಟು ಮಸುಕಾಗಿಯಾದರೂ ನೆನಪಿರುತ್ತವೆ. ಮೊದಲ ತರಗತಿಯ ಟೀಚರ್ ಹೇಳಿಕೊಟ್ಟ ಪಾಠದಷ್ಟು ಹೈಸ್ಕೂಲಲ್ಲಿ ಕಲಿಸಿದ ಮೇಷ್ಟ್ರ ಮುಖ ನೆನಪಿರುವುದಿಲ್ಲ. ಕಾಲ ಸರಿಯುತ್ತ ಹೋದಹಾಗೆ ಆಮೇಲಾಮೇಲಿನ ನೆನಪುಗಳೆಲ್ಲ, ಸಂಖ್ಯಾರೇಖೆಯ ತುದಿಯಲ್ಲಿ ಬರೆಯದೇ ಬಿಟ್ಟ ಸಂಖ್ಯೆಗಳಂತೆ, ಇತ್ಯಾದಿ ಎಂಬಲ್ಲಿ ಇಟ್ಟ ಮೂರು ಚುಕ್ಕಿಗಳಂತೆ, ಆಕಾಶದಲ್ಲಿ ಹಾರುತ್ತ ಮರೆಯಾದ ಹಕ್ಕಿಗಳ ಸಾಲುಗೆರೆಯಂತೆ ಅಸ್ಪಷ್ಟವಾಗುತ್ತ ಹೋಗುತ್ತವೆ. ಬಹುತೇಕ ಎಲ್ಲರ ಆತ್ಮಕತೆಯ ಕತೆಯೂ ಇದೇ. ಬಾಲ್ಯವನ್ನು ವಿವರಿಸಿಕೊಂಡಷ್ಟು ನಾವು ಇಳಿವಯಸ್ಸಿನ ವಿವರಗಳನ್ನು ಹೇಳಲಾರೆವು. ಕತೆಗಾರರನ್ನು ನೋಡಿ ಬೇಕಾದರೆ. ಅವರೆಲ್ಲ ತಮ್ಮ ಬಾಲ್ಯದಲ್ಲಿ ಕಂಡ ಹಳ್ಳಿಯ ಜಗತ್ತನ್ನೇ ಕತೆ, ಕಾದಂಬರಿಗಳಲ್ಲಿ ಮತ್ತೆಮತ್ತೆ ಕೆದಕಿ ತೆಗೆಯುತ್ತ ಬರಹದಲ್ಲಿ ಬಾಲ್ಯವನ್ನು ಬದುಕುತ್ತಿದ್ದಾರೆ. ಬದುಕಿನ ಇಳಿಸಂಜೆ ಅಮೃತ ನೆನಪುಗಳಿಂದ ತೊನೆಯಬೇಕಾದರೆ ಮನುಷ್ಯನ ಬಾಲ್ಯ ಸುಮಧುರವಾಗಿರಬೇಕೆಂದು ಇವೆಲ್ಲ ಹೇಳುತ್ತಿರುವಂತಿಲ್ಲವೆ?

ಇವನ್ನೆಲ್ಲ ಬರೆಯುತ್ತ ನನ್ನ ಬಾಲ್ಯದ ದಿನಗಳು, ಮುಖ್ಯವಾಗಿ ಅಜ್ಜಿಮನೆಯಲ್ಲಿ ಕಳೆಯುತ್ತಿದ್ದ ಬೇಸಗೆಯ ದಿನಗಳು ನೆನಪಾಗುತ್ತವೆ. ಆಗ ಈಗಿನಂತೆ ಸಮ್ಮರ್ ಕ್ಯಾಂಪುಗಳ ಹಾವಳಿ ಶುರುವಾಗಿರಲಿಲ್ಲ. ಮಾರ್ಚ್ ತಿಂಗಳ ಕೊನೆಯ ದಿನ ಪರೀಕ್ಷೆ ಮುಗಿದದ್ದೇ ತಡ, ನಾವೆಲ್ಲ ಅದುವರೆಗೆ ಚಪ್ಪಡಿಯಂತೆ ತಲೆಮೇಲೆ ಹೊತ್ತಿರುತ್ತಿದ್ದ ಪುಸ್ತಕಗಳ ಭಾರವನ್ನು ಮುಲಾಜಿಲ್ಲದೆ ಒಗೆದು ಅಜ್ಜಿಮನೆಗಳಿಗೆ ಓಡುತ್ತಿದ್ದೆವು. ಅವಿಭಕ್ತ ಸಂಸಾರಗಳಲ್ಲಿ ಮಕ್ಕಳ ಸೈನ್ಯವೂ ದೊಡ್ಡದೇ ಆಗಿರುವುದರಿಂದ, ನಮ್ಮನಮ್ಮೊಳಗೇ ರಾಮ, ಲಕ್ಷ್ಮಣ, ಸೀತೆ, ಹನುಮಂತರ ಪಾತ್ರ ವಿಭಾಗಿಸಿಕೊಂಡು ರಾಮಾಯಣ ಆಡುತ್ತಿದ್ದೆವು. ಕ್ಲಾಸಿನಲ್ಲಿ ಬುದ್ಧಿವಂತರೆನಿಸಿಕೊಂಡವರು ಹೇಗುಹೇಗೋ ಸೀನಿಯರ್ ವಿದ್ಯಾರ್ಥಿಗಳ ಪಠ್ಯಪುಸ್ತಕ, ನೋಟ್ಸ್ ಪುಸ್ತಕಗಳನ್ನು ಸಂಪಾದಿಸಿ ಆದಷ್ಟು ಜ್ಞಾನಸಂಚಯಕ್ಕೆ ಕೂರುತ್ತಿದ್ದದ್ದೂ ಉಂಟು. ಮನೆಗಳಲ್ಲಿ ಬೆಳಗ್ಗೆ ಹಲ್ಲುಜ್ಜಿ ಸ್ನಾನಶೌಚಾದಿ ಮುಗಿಸಿ ಹೊಟ್ಟೆಗೊಂದಿಷ್ಟು ಉಪ್ಪಿಟ್ಟು-ಅವಲಕ್ಕಿ ಸುರುವಿ ಹೊಸಿಲು ದಾಟಿದೆವೆಂದರೆ ನಾವು ಮನೆ ಸೇರುತ್ತಿದ್ದದ್ದು ಮತ್ತೆ ರಾತ್ರಿಯೇ. ಮಧ್ಯಾಹ್ನದ ಊಟ ಯಾರದ್ದೋ ಮನೆಯಲ್ಲಿ ಕಾಟಾಚಾರಕ್ಕೆ ನಡೆದುಹೋಗುತ್ತಿತ್ತು. ಊಟವಿಲ್ಲದೆ ಹೋದರೂ ಸಿಕ್ಕಸಿಕ್ಕ ಮಾವಿನ ಮರಗಳಿಗೆ ಕಲ್ಲೆಸೆಯುತ್ತಿದ್ದ ನಮಗೆ ಹಸಿವಿಂದ ನರಳುತ್ತೇವೆಂಬ ಚಿಂತೆಯೇನೂ ಇರಲಿಲ್ಲ! ಹಾಗೆಯೇ ಈ ಮಕ್ಕಳು ಹಸಿವಿಂದ ಕಂಗಾಲಾಗಿ ಪ್ರಜ್ಞೆ ತಪ್ಪಿ ಬೀಳಬಹುದೆಂಬ ಕಳವಳ ಮನೆಯವರಿಗೂ ಇರಲಿಲ್ಲ! ಅಂಥ ಗೊತ್ತುಗುರಿಯಿಲ್ಲದ, ಜವಾಬ್ದಾರಿಯ ಚಿಂತೆಯಿಲ್ಲದ ಬಾಲ್ಯ ಕಳೆದ ನನಗೆ ಈಗಿನ ಹುಡುಗರ ಸಮ್ಮರ್ ಕ್ಯಾಂಪ್ ಬಾಲ್ಯಕಾಲವನ್ನು ಕಂಡಾಗ ಗಾಬರಿಯೂ ವೇದನೆಯೂ ಆಗುತ್ತದೆ; ಇನ್ನೈವತ್ತು ವರ್ಷ ದಾಟಿದ ಮೇಲೆ ಈಸಿಚೇರಿನಲ್ಲಿ ಕೂತು ಧೇನಿಸುವ ಇವರ ನೆನಪಿನ ಸರಣಿ ಹೇಗಿರಬಹುದೆಂಬ ಕಾರಣಕ್ಕೆ! ಇಪ್ಪತ್ತು ದಿನಗಳ ಬೇಸಗೆ ಶಿಬಿರದಲ್ಲಿ ಇಂತಿಷ್ಟು ವಿಷಯಗಳನ್ನು ಕಲಿಯಲೇಬೇಕೆಂಬ ಒತ್ತಡ ಸೃಷ್ಟಿಸಿ ಉಸಿರೆತ್ತಲೂ ಸಮಯವಿಲ್ಲದಂತೆ ಮಕ್ಕಳ ಕೊರಳಿಗೆ ಕಡುಬು ತುರುಕುವುದನ್ನು ಕಂಡಾಗ ಮೂವತ್ತು ವರ್ಷ ಮೊದಲೇ ಹುಟ್ಟಿ ಬದುಕಿಕೊಂಡೆನಪ್ಪಾ ಅಂದುಕೊಂಡಿದ್ದೇನೆ. ಈಗ ಬೇಸಗೆ ರಜೆಯೆಂದರೆ ಮಗುವನ್ನು ಮುಂದಿನ ಸ್ಪರ್ಧಾತ್ಮಕ ಓಟಕ್ಕೆ ತಯಾರುಗೊಳಿಸಲು ಸಿಗುವ ಸುವರ್ಣಾವಕಾಶ ಎಂದು ಹೆತ್ತವರು ಭಾವಿಸಿದ್ದಾರೆ. ನಾಲ್ಕು ವರ್ಷಗಳ ಇಂಜಿನಿಯರಿಂಗ್ ಓದುವುದು ಬಿಡಿ, ಅದರ ಪ್ರವೇಶ ಪರೀಕ್ಷೆ ಗೆಲ್ಲಲಿಕ್ಕಾಗಿಯೇ ನಾಲ್ಕು ವರ್ಷ ಓದುವ ಅನಿವಾರ್ಯಕ್ಕೆ ಬಿದ್ದಿದ್ದಾರೆ ಹುಡುಗರು. ಯಾವ ಮರಕ್ಕೆ ಎಷ್ಟು ದೂರದಿಂದ ಯಾವ ಬಲ ಹಾಕಿ ಕವಣೆ ಎಸೆದರೆ ಹಣ್ಣು ಬೀಳುವುದೆಂಬ ಜ್ಞಾನವನ್ನು ಪ್ರಾಕ್ಟಿಕಲ್ಲಾಗಿ ಕಲಿಯುತ್ತಿದ್ದ ಕಾಲ ಮುಗಿದು, ಮಣಭಾರದ ರೆಸ್ನಿಕ್ ಹ್ಯಾಲಿಡೇ ಪುಸ್ತಕಗಳಲ್ಲಿ ಅಂಥ ಕವಣೆಯ ವೇಗ ವೇಗೋತ್ಕರ್ಷಗಳನ್ನು ಲೆಕ್ಕ ಹಾಕುವ ಕಾಲದಲ್ಲಿದ್ದೇವೆ.

ಏನೇ ಹೇಳಿ ಮಾರಾಯರೆ, ಗತಿಸಿಹೋದವು ಆ ದಿನಗಳು!

ಮೇ ೨೮, ೨೦೧೬ರ 'ಮಲೆನಾಡು ಮಿತ್ರ'ದಲ್ಲಿ ಪ್ರಕಟವಾದ ಲೇಖನದ ಪೂರ್ಣರೂಪ

6 ಕಾಮೆಂಟ್‌ಗಳು:

Chinnamma Baradhi ಹೇಳಿದರು...

ಮೊಣಕಾಲು ಮುಳುಗುವಷ್ಟು ಕೆರೆಯ ನೀರಿನಲ್ಲಿ ಇಳಿದು ನಮ್ಮತ್ತೆಯ ಸೀರೆ ಸೆರಗನ್ನೆ ಬಲೆಯ೦ತೆ ಬಳಸಿ ನಾವಿಬ್ಬರು ರಾಶಿ ಮೀನು ಹಿಡಿಯುತ್ತಿದ್ದೆವು ಬೇಸಗೆಯ ದಿನಗಳಲ್ಲಿ.
ಹಸಿ ಕಡ್ಲೆಕಾಯಿ, ರಾಗಿ ತೆನೆ ಗಿಡದಿಂದ ಬಿಡಿಸಿ ಕೆ೦ಡದಲ್ಲಿ ಸುಟ್ಟೂ ಅಥವ ಹಾಗೇ ಮೆಲ್ಲುತಿದ್ದ ರುಚಿ ಮರೆಯಲಿಕ್ಕೆ ಸಾಧ್ಯವೆ.
ನಿಮ್ಮ "ಗತಿಸಿಹೋದವು ಆ ದಿನಗಳು!" ಬರಹ ನನ್ನ ನ್ಯೂರಾನುಗಳ ನಡುವೆ ಮತ್ತೊಮ್ಮೆ ವಿದ್ಯುದಂಶ ಓಡಾಡಿಸಿ ಸ್ಮರಣೆಯನ್ನ ಎಳೆದು ತ೦ದ೦ತಾಯ್ತು.

v s sunder ಹೇಳಿದರು...

tumba sogasagide.

Geetha Hegde ಹೇಳಿದರು...

ಬರಹದ ಮೊದಲು ಓದುವಾಗ ಅತ್ಯಂತ ಗಂಭೀರತೆ ಅರಿತುಕೊಳ್ಳುವ ವಿಷಯದಲ್ಲಿ ತಲ್ಲೀನ ಮನಸ್ಸು. ಕೊನೆ ಕೊನೆಗಿನ ಓದು ನಿಮ್ಮ ಬರಹದ ಶೈಲಿ ಖುಷಿಯಿಂದ ನಗು ತರಿಸಿತು. 👌

shri ಹೇಳಿದರು...

ಬಹುಶಃ ನನ್ನ ೩ ವರ್ಷದ ಒಳಗಿನ ಘಟನೆಗಳು ನನಗೆ ನೆನಪಿಲ್ಲವಾದರೂ, ಕೆಲವು ದೃಶ್ಯಗಳು ನೆನಪಿನಲ್ಲಿವೆ.
ಆಗ ಕುಂದಾಪುರದ ಮೂಡ್ಲಕಟ್ಟೆಯ ಸಮೀಪ ನಮ್ಮ ಮನೆ. ದುರ್ಗಾಂಬಾ ಬಸ್ಸಿಗೆ ಕಲ್ಲು ಬಿಸಾಡಿದ್ದು ನನಗೆ ನೆನಪಿದೆ.
ನನ್ನನ್ನು ನೋಡಿಕೊಳ್ಳುತ್ತಿದ್ದ ನಮ್ಮ ಪಕ್ಕದ ಮನೆಯ ವಿಶಾಲಾಕ್ಷಿ ಅಜ್ಜಿಯವರ ಮುಖ ನೆನಪಿಲ್ಲವಾದರೂ, ಅವರ ಮನೆಯ ನೆಲದಲ್ಲಿ ಓಡಾಡಿದ ದೃಶ್ಯ ನೆನಪಿದೆ. ಕೆಲಸದವಳು ಗಾಡಿಯಲ್ಲಿ ಬಂದ ಕೆಂಪು ಬಣ್ಣದ ಐಸ್ ಕ್ಯಾಂಡಿ ಖರೀದಿಸಿ ತಿನ್ನುವಾಗ ನನಗೆ ಆಸೆಯಾದದ್ದು ನೆನಪಿದೆ. ಹೀಗೆಯೇ ಕೆಲವು ದೃಶ್ಯಗಳು ನನಗೆ ನೆನಪಿದ್ದರೂ, ಆಶ್ಚರ್ಯವೆಂದರೆ, ನನಗೆ ೧ ಹಾಗೂ ೨ ನೇ ತರಗತಿಯ ಶಿಕ್ಷಕರ ಮುಖ ನೆನಪಿಲ್ಲ! ಬಹುಶಃ, ೨ ನೇ ತರಗತಿಯ ನಂತರ ಆ ಶಾಲೆ ಬಿಟ್ಟು, ಬೇರೆ ಶಾಲೆಗೆ ಹೋದದ್ದು ಕಾರಣವಿರಬಹುದು. ಇರಲಿ, ನಿಮ್ಮ ಲೇಖನ ಬಾಲ್ಯದ ನೆನಪುಗಳ ಕಡೆಗೆ ವಾಲುವುದಕ್ಕೆ ಇಂದು ಒಂದು ಕಾರಣವಾಯಿತು.

shri ಹೇಳಿದರು...

ಬಹುಶಃ ನನ್ನ ೩ ವರ್ಷದ ಒಳಗಿನ ಘಟನೆಗಳು ನನಗೆ ನೆನಪಿಲ್ಲವಾದರೂ, ಕೆಲವು ದೃಶ್ಯಗಳು ನೆನಪಿನಲ್ಲಿವೆ.
ಆಗ ಕುಂದಾಪುರದ ಮೂಡ್ಲಕಟ್ಟೆಯ ಸಮೀಪ ನಮ್ಮ ಮನೆ. ದುರ್ಗಾಂಬಾ ಬಸ್ಸಿಗೆ ಕಲ್ಲು ಬಿಸಾಡಿದ್ದು ನನಗೆ ನೆನಪಿದೆ.
ನನ್ನನ್ನು ನೋಡಿಕೊಳ್ಳುತ್ತಿದ್ದ ನಮ್ಮ ಪಕ್ಕದ ಮನೆಯ ವಿಶಾಲಾಕ್ಷಿ ಅಜ್ಜಿಯವರ ಮುಖ ನೆನಪಿಲ್ಲವಾದರೂ, ಅವರ ಮನೆಯ ನೆಲದಲ್ಲಿ ಓಡಾಡಿದ ದೃಶ್ಯ ನೆನಪಿದೆ. ಕೆಲಸದವಳು ಗಾಡಿಯಲ್ಲಿ ಬಂದ ಕೆಂಪು ಬಣ್ಣದ ಐಸ್ ಕ್ಯಾಂಡಿ ಖರೀದಿಸಿ ತಿನ್ನುವಾಗ ನನಗೆ ಆಸೆಯಾದದ್ದು ನೆನಪಿದೆ. ಹೀಗೆಯೇ ಕೆಲವು ದೃಶ್ಯಗಳು ನನಗೆ ನೆನಪಿದ್ದರೂ, ಆಶ್ಚರ್ಯವೆಂದರೆ, ನನಗೆ ೧ ಹಾಗೂ ೨ ನೇ ತರಗತಿಯ ಶಿಕ್ಷಕರ ಮುಖ ನೆನಪಿಲ್ಲ! ಬಹುಶಃ, ೨ ನೇ ತರಗತಿಯ ನಂತರ ಆ ಶಾಲೆ ಬಿಟ್ಟು, ಬೇರೆ ಶಾಲೆಗೆ ಹೋದದ್ದು ಕಾರಣವಿರಬಹುದು. ಇರಲಿ, ನಿಮ್ಮ ಲೇಖನ ಬಾಲ್ಯದ ನೆನಪುಗಳ ಕಡೆಗೆ ವಾಲುವುದಕ್ಕೆ ಇಂದು ಒಂದು ಕಾರಣವಾಯಿತು.

shri ಹೇಳಿದರು...

ಬಹುಶಃ ನನ್ನ ೩ ವರ್ಷದ ಒಳಗಿನ ಘಟನೆಗಳು ನನಗೆ ನೆನಪಿಲ್ಲವಾದರೂ, ಕೆಲವು ದೃಶ್ಯಗಳು ನೆನಪಿನಲ್ಲಿವೆ.
ಆಗ ಕುಂದಾಪುರದ ಮೂಡ್ಲಕಟ್ಟೆಯ ಸಮೀಪ ನಮ್ಮ ಮನೆ. ದುರ್ಗಾಂಬಾ ಬಸ್ಸಿಗೆ ಕಲ್ಲು ಬಿಸಾಡಿದ್ದು ನನಗೆ ನೆನಪಿದೆ.
ನನ್ನನ್ನು ನೋಡಿಕೊಳ್ಳುತ್ತಿದ್ದ ನಮ್ಮ ಪಕ್ಕದ ಮನೆಯ ವಿಶಾಲಾಕ್ಷಿ ಅಜ್ಜಿಯವರ ಮುಖ ನೆನಪಿಲ್ಲವಾದರೂ, ಅವರ ಮನೆಯ ನೆಲದಲ್ಲಿ ಓಡಾಡಿದ ದೃಶ್ಯ ನೆನಪಿದೆ. ಕೆಲಸದವಳು ಗಾಡಿಯಲ್ಲಿ ಬಂದ ಕೆಂಪು ಬಣ್ಣದ ಐಸ್ ಕ್ಯಾಂಡಿ ಖರೀದಿಸಿ ತಿನ್ನುವಾಗ ನನಗೆ ಆಸೆಯಾದದ್ದು ನೆನಪಿದೆ. ಹೀಗೆಯೇ ಕೆಲವು ದೃಶ್ಯಗಳು ನನಗೆ ನೆನಪಿದ್ದರೂ, ಆಶ್ಚರ್ಯವೆಂದರೆ, ನನಗೆ ೧ ಹಾಗೂ ೨ ನೇ ತರಗತಿಯ ಶಿಕ್ಷಕರ ಮುಖ ನೆನಪಿಲ್ಲ! ಬಹುಶಃ, ೨ ನೇ ತರಗತಿಯ ನಂತರ ಆ ಶಾಲೆ ಬಿಟ್ಟು, ಬೇರೆ ಶಾಲೆಗೆ ಹೋದದ್ದು ಕಾರಣವಿರಬಹುದು. ಇರಲಿ, ನಿಮ್ಮ ಲೇಖನ ಬಾಲ್ಯದ ನೆನಪುಗಳ ಕಡೆಗೆ ವಾಲುವುದಕ್ಕೆ ಇಂದು ಒಂದು ಕಾರಣವಾಯಿತು.

badge