ಸೋಮವಾರ, ಜೂನ್ 27, 2016

ಲೈಟ್ಸ್! ಆಕ್ಷನ್!! ಕ್ಯಾಮೆರಾ!!!

ಟಿ. ಜಿ. ಶ್ರೀನಿಧಿ 


ಪ್ರವಾಸ ಹೊರಟಾಗ ಜೊತೆಯಲ್ಲಿ ಕ್ಯಾಮೆರಾ ಕೊಂಡೊಯ್ಯುವ ಅಭ್ಯಾಸ ನಮಗೆಲ್ಲ ಗೊತ್ತಿರುವುದೇ. ಹೋದ ಜಾಗ, ಅಲ್ಲಿ ಕಂಡ ದೃಶ್ಯಗಳನ್ನೆಲ್ಲ ಛಾಯಾಚಿತ್ರ ಅಥವಾ ವೀಡಿಯೋ ರೂಪದಲ್ಲಿ ಸೆರೆಹಿಡಿದಿಟ್ಟುಕೊಳ್ಳಲು - ನೆನಪುಗಳನ್ನು ರೂಪಿಸಿಕೊಳ್ಳಲು ಈ ಅಭ್ಯಾಸ ನೆರವಾಗುತ್ತದೆ.

ಮೈಸೂರು ಅರಮನೆಯ ಮುಂದೆ ನಿಂತು, ತಾಜಮಹಲ್ ಎದುರಿನ ಬೆಂಚಿನ ಮೇಲೆ ಕುಳಿತು ಫೋಟೋ ತೆಗೆಸಿಕೊಳ್ಳುವುದು ಸುಲಭ. ಅಂತಹ ಸಂದರ್ಭಗಳಲ್ಲಿ ಮೊಬೈಲ್ ಕ್ಯಾಮೆರಾ ಅಷ್ಟೇ ಏಕೆ, ಇಷ್ಟುದ್ದ ಲೆನ್ಸಿನ ಭಾರೀ ಡಿಎಸ್‌ಎಲ್‌ಆರ್ ಬೇಕಾದರೂ ಜೊತೆಗಿಟ್ಟುಕೊಂಡಿರಬಹುದು.

ಆದರೆ ಕೆಲ ಸಂದರ್ಭಗಳಲ್ಲಿ ಫೋಟೋ ಕ್ಲಿಕ್ಕಿಸಲು ಅದೆಷ್ಟೇ ಆಸೆಯಾಗುತ್ತಿದ್ದರೂ ಕ್ಯಾಮೆರಾ ಹಿಡಿಯುವುದೇ ಸಾಧ್ಯವಾಗುವುದಿಲ್ಲ. ಬೆಟ್ಟದ ಮೇಲೆ ಕಡಿದಾದ ಹಾದಿಯಲ್ಲಿ ನಡೆಯುವುದೇ ಕಷ್ಟವಾದಾಗ ಕ್ಯಾಮೆರಾ ಹಿಡಿಯುವುದಾದರೂ ಹೇಗೆ? ಅದೂ ಒಂದೊಮ್ಮೆ ಸಾಧ್ಯವಾಗಬಹುದೇನೋ. ಆದರೆ ವಿಶ್ವದ ಅತಿ ಎತ್ತರದ ಹೆದ್ದಾರಿಯಲ್ಲಿ ಬೈಕು ಓಡಿಸುವಾಗ, ಹಾರುವ ವಿಮಾನದಿಂದ ಸ್ಕೈ‌ಡೈವಿಂಗ್ ಮಾಡುವಾಗ, ಸಮುದ್ರದಾಳದಲ್ಲಿ ಹವಳಗಳನ್ನು ನೋಡುವಾಗಲೆಲ್ಲ ಫೋಟೋ ತೆಗೆಯಬೇಕೆಂದರೆ??

ಅದನ್ನೂ ಸಾಧ್ಯವಾಗಿಸುವ ಕ್ಯಾಮೆರಾಗಳು ಇಂದು ಮಾರುಕಟ್ಟೆಯಲ್ಲಿವೆ. ಇಂತಹ ಮಾದರಿಗಳನ್ನು ಸಾಮಾನ್ಯವಾಗಿ 'ಆಕ್ಷನ್ ಕ್ಯಾಮೆರಾ'ಗಳೆಂದು ಗುರುತಿಸಲಾಗುತ್ತದೆ. ಸಣ್ಣ ಗಾತ್ರ ಹಾಗೂ ಸದೃಢ ವಿನ್ಯಾಸ ಈ ಕ್ಯಾಮೆರಾಗಳ ವೈಶಿಷ್ಟ್ಯ. ನಮ್ಮ ಚಟುವಟಿಕೆಗಳಿಗೆ ಅಡ್ಡಿಯಾಗದಿರುವುದು ಸಣ್ಣ ಗಾತ್ರದ ಹಿಂದಿನ ಉದ್ದೇಶವಾದರೆ ಮಳೆ-ಗಾಳಿ-ಧೂಳನ್ನೆಲ್ಲ ಸುಲಭವಾಗಿ ತಡೆದುಕೊಳ್ಳುವುದು ಸದೃಢ ವಿನ್ಯಾಸದ ಗುರಿ.

ವಿಶಿಷ್ಟವಾದ ಅನುಭವದಲ್ಲಿ ಮುಳುಗಿರುವಂತೆಯೇ ಆ ಅನುಭವವನ್ನು ಚಿತ್ರಗಳಲ್ಲಿ ದಾಖಲಿಸಿಕೊಳ್ಳಲು ಇವು ನೆರವಾಗುತ್ತದೆ: ಹಗ್ಗ ಹಿಡಿದು ಬಂಡೆಗಲ್ಲನ್ನು ಹತ್ತುತ್ತಿದ್ದರೆ ಅಲ್ಲಿಂದ ಕಾಣುವ ದೃಶ್ಯ ಕ್ಲಿಕ್ಕಿಸಲು ಹಗ್ಗ ಕೈಬಿಡಬೇಕಿಲ್ಲ, ಬೈಕ್ ಚಲಾಯಿಸುತ್ತ ಫೋಟೋ ತೆಗೆಯಲು ಹೋಗಿ ಆಯತಪ್ಪಿ ಬೀಳುವ ಭಯವೂ ಇಲ್ಲ! ಹಾಗಾಗಿಯೇ ಕ್ರೀಡಾಸಕ್ತರಿಗೆ, ಅಡ್ವೆಂಚರ್ ಪ್ರೇಮಿಗಳಿಗೆ ಆಕ್ಷನ್ ಕ್ಯಾಮೆರಾಗಳೆಂದರೆ ಬಹಳ ಇಷ್ಟ.

ಆಕ್ಷನ್ ಕ್ಯಾಮೆರಾಗಳನ್ನು ಹೆಚ್ಚಾಗಿ ವೀಡಿಯೋ ಸೆರೆಹಿಡಿಯಲು ಬಳಸಲಾಗುತ್ತದೆ. ಇಂತಹ ಬಹುತೇಕ ಮಾದರಿಗಳಲ್ಲಿ ಸಾಮಾನ್ಯ ಕ್ಯಾಮೆರಾಗಳಿಗಿಂತ ವಿಭಿನ್ನವಾದ ಲೆನ್ಸ್ ಇರುವುದರಿಂದ ದೃಶ್ಯಗಳನ್ನು ವೈಡ್ ಆಂಗಲ್‌ನಲ್ಲಿ ಸೆರೆಹಿಡಿಯುವುದು ಸಾಧ್ಯವಾಗುತ್ತದೆ. ಅಂದಹಾಗೆ ಆಕ್ಷನ್ ಕ್ಯಾಮೆರಾಗಳಲ್ಲಿ ವೀಡಿಯೋ ಜೊತೆಗೆ ಛಾಯಾಚಿತ್ರಗಳನ್ನು ಸೆರೆಹಿಡಿಯುವುದೂ ಸಾಧ್ಯ.

ಸಾಮಾನ್ಯ ಕ್ಯಾಮೆರಾಗಳು ನೀರಿನಲ್ಲಿ ಬೀಳಬಾರದು, ಮಳೆಯಲ್ಲಿ ನೆನೆಯಬಾರದು, ಅವುಗಳ ಮೇಲೆ ಹೆಚ್ಚು ಧೂಳು ಬಿದ್ದರೆ ಕಷ್ಟ ಎನ್ನುತ್ತಾರಲ್ಲ, ಅಂತಹ ಅದೆಷ್ಟೋ ನಿರ್ಬಂಧಗಳು ಬಹುತೇಕ ಆಕ್ಷನ್ ಕ್ಯಾಮೆರಾಗಳನ್ನು ಬಾಧಿಸುವುದಿಲ್ಲ. ಮಳೆನೀರು ಬೀಳುವುದಿರಲಿ, ನದಿಯಲ್ಲೋ ಸಮುದ್ರದಲ್ಲೋ ಈಜುವಾಗ ಬಳಸಬಹುದಾದ ಆಕ್ಷನ್ ಕ್ಯಾಮೆರಾಗಳೂ ಇವೆ (ನೆನಪಿಡಿ: 'ವಾಟರ್‌ಪ್ರೂಫ್' ಸೌಲಭ್ಯ ಎಲ್ಲ ಆಕ್ಷನ್ ಕ್ಯಾಮೆರಾಗಳಲ್ಲೂ ಇರುವುದಿಲ್ಲ).

ಬೈಕ್ ಚಲಾಯಿಸುವಾಗ, ಸ್ಕೈಡೈವ್ ಮಾಡುವಾಗಲೆಲ್ಲ ಕ್ಯಾಮೆರಾ ಬಳಸುವುದೆಂದರೆ ಅದನ್ನು ಸಾಮಾನ್ಯ ಕ್ಯಾಮೆರಾದಂತೆ (ವ್ಯೂ ಫೈಂಡರ್ ನೋಡಿಕೊಂಡು) ಬಳಸಲು ಸಾಧ್ಯವಿಲ್ಲ ತಾನೇ? ಹಾಗಾಗಿ ಬಹಳಷ್ಟು ಆಕ್ಷನ್ ಕ್ಯಾಮೆರಾಗಳಲ್ಲಿ ವ್ಯೂ ಫೈಂಡರ್ ಸೌಲಭ್ಯವೇ ಇರುವುದಿಲ್ಲ. ಕ್ಯಾಮೆರಾ ಆನ್ ಮಾಡಿ ನಮಗೆ ಬೇಕಾದ ಕಡೆಗೆ ತಿರುಗಿಸಿಟ್ಟರೆ ಆಯಿತು, ವೀಡಿಯೋ ರೆಕಾರ್ಡಿಂಗ್ ತನ್ನಷ್ಟಕ್ಕೆ ತಾನೇ ಮುಂದುವರೆಯುತ್ತದೆ. ವ್ಯೂ ಫೈಂಡರ್ ಇಲ್ಲದ್ದರಿಂದ ಕ್ಯಾಮೆರಾ ಗಾತ್ರವನ್ನು ಚಿಕ್ಕದಾಗಿಡುವುದೂ ಸುಲಭ.ನಮಗೆ ಬೇಕಾದ ಕಡೆಗೆ ತಿರುಗಿಸಿ ಇಡುವುದು ಹೇಗೆ? ಬೈಕ್ ಚಲಾಯಿಸುವಾಗ ಕ್ಯಾಮೆರಾವನ್ನು ಇಡುವುದಾದರೂ ಎಲ್ಲಿ?

ಇದಕ್ಕೆ ಬೇಕಾದ ಸೌಲಭ್ಯಗಳೂ ಆಕ್ಷನ್ ಕ್ಯಾಮೆರಾಗಳಲ್ಲಿರುತ್ತವೆ. ಸೈಕಲ್ ತುಳಿಯುವಾಗ ಅದರ ಹ್ಯಾಂಡಲ್‌ಗೆ, ಬೈಕ್ ಚಲಾಯಿಸುವಾಗ ಸವಾರನ ಹೆಲ್ಮೆಟ್ಟಿಗೆ, ಸ್ಕೈಡೈವಿಂಗ್ ಮಾಡುವಾತನ ತೋಳಿಗೆಲ್ಲ ಕ್ಯಾಮೆರಾವನ್ನು ಭದ್ರವಾಗಿ ಜೋಡಿಸಿಕೊಳ್ಳಲು ಬೇಕಾದ ಸಾಧನಗಳನ್ನು ಕ್ಯಾಮೆರಾ ಜೊತೆಯಲ್ಲೇ ಕೊಳ್ಳುವುದು ಸಾಧ್ಯ (ನೀರು-ಧೂಳಿನಿಂದೆಲ್ಲ ಕ್ಯಾಮೆರಾ ಕಾಪಾಡಿಕೊಳ್ಳಲು ಪ್ರತ್ಯೇಕ ಕವಚಗಳೂ ಸಿಗುತ್ತವೆ). ಡ್ರೋನ್‌ಗಳಿಗೂ ಈ ಕ್ಯಾಮೆರಾಗಳನ್ನು ಜೋಡಿಸುವುದು ಸಾಧ್ಯ. ಹಾಗೆಂದು ಈ ಕ್ಯಾಮೆರಾಗಳನ್ನು ಬೇರೆಡೆ ಬಳಸುವುದು ಅಸಾಧ್ಯವೇನೂ ಅಲ್ಲ - ಸಾಮಾನ್ಯ ಟ್ರೈಪಾಡ್‌ ಹಾಗೂ ಸೆಲ್ಫಿ ಸ್ಟಿಕ್‌ಗಳಿಗೂ ಇವನ್ನು ಜೋಡಿಸಬಹುದು. ಬೇರೇನೂ ಬೇಡವೆಂದರೆ ಸುಮ್ಮನೆ ಕೈಯಲ್ಲಿ ಹಿಡಿದುಕೊಂಡೂ ಫೋಟೋ - ವೀಡಿಯೋಗಳನ್ನು ಸೆರೆಹಿಡಿಯಬಹುದು.

ಆಕ್ಷನ್ ಕ್ಯಾಮೆರಾಗಳಲ್ಲಿ ಚಿತ್ರಗಳನ್ನು ಉಳಿಸಿಡಲು ಮೈಕ್ರೋ ಎಸ್‌ಡಿ ಕಾರ್ಡುಗಳು ಹಾಗೂ ಚಾರ್ಜಿಂಗ್‌ಗೆಂದು ಮೈಕ್ರೋ ಯುಎಸ್‌ಬಿ ಪೋರ್ಟ್ ಬಳಕೆಯಾಗುವುದು ಸಾಮಾನ್ಯ. ಎಚ್‌ಡಿ ರೆಕಾರ್ಡಿಂಗ್ ಸಾಮರ್ಥ್ಯ ಬಹುತೇಕ ಆಕ್ಷನ್ ಕ್ಯಾಮೆರಾಗಳಲ್ಲಿರುತ್ತದೆ. ಚಿತ್ರಗಳ ಗುಣಮಟ್ಟ ಉತ್ತಮ ಡಿಎಸ್‌ಎಲ್‌ಆರ್‌ಗಳ ಹೋಲಿಕೆಯಲ್ಲಿ ಕೊಂಚ ಕಡಿಮೆ ಎನ್ನಿಸಬಹುದು; ಆದರೆ ಆಕ್ಷನ್ ಕ್ಯಾಮೆರಾಗಳ ವೈಡ್ ಆಂಗಲ್ ಸಾಮರ್ಥ್ಯ ಹಾಗೂ ವಿಭಿನ್ನ ಕೋನಗಳಿಂದ ಚಿತ್ರಗಳನ್ನು ಸೆರೆಹಿಡಿಯುವ ಸಾಧ್ಯತೆ ಚಿತ್ರಗಳಲ್ಲಿ ವಿಶಿಷ್ಟ ಅನುಭವವನ್ನು ಕಟ್ಟಿಕೊಡುತ್ತದೆ.

ಆಕ್ಷನ್ ಕ್ಯಾಮೆರಾ ತಯಾರಿಸುವ ಸಂಸ್ಥೆಗಳ ಪೈಕಿ 'ಗೋಪ್ರೋ' ಒಂದು ಪ್ರಮುಖ ಹೆಸರು. ಈ ಸಂಸ್ಥೆಯ ಉತ್ಪನ್ನಗಳ ಜನಪ್ರಿಯತೆ ಎಷ್ಟರಮಟ್ಟಿನದು ಎಂದರೆ ಅನೇಕರು ಆಕ್ಷನ್ ಕ್ಯಾಮೆರಾಗಳನ್ನೆಲ್ಲ ಗೋಪ್ರೋ ಕ್ಯಾಮೆರಾಗಳೆಂದೇ ಗುರುತಿಸುತ್ತಾರೆ! [ಗೋಪ್ರೋ ಕ್ಯಾಮೆರಾಗಳನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ]

ಇಂದು ಅನೇಕ ಸಣ್ಣ-ದೊಡ್ಡ ಸಂಸ್ಥೆಗಳು ಆಕ್ಷನ್ ಕ್ಯಾಮೆರಾ ನಿರ್ಮಾಣದಲ್ಲಿ ತೊಡಗಿಕೊಂಡಿವೆ. ಸೋನಿ, ಪ್ಯಾನಸೋನಿಕ್, ವಿವಿಟಾರ್ ಮುಂತಾದ ಸಾಂಪ್ರದಾಯಿಕ ಕ್ಯಾಮೆರಾ ನಿರ್ಮಾತೃಗಳ ಜೊತೆಗೆ ಎಚ್‌ಟಿಸಿ, ಶಿಯೋಮಿ ಮುಂತಾದ ಮೊಬೈಲ್ ಸಂಸ್ಥೆಗಳೂ ಆಕ್ಷನ್ ಕ್ಯಾಮೆರಾ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಗೋಪ್ರೋ-ಸೋನಿ ಕ್ಯಾಮೆರಾಗಳ ಬೆಲೆ ನಮ್ಮ ಬಜೆಟ್ಟಿಗೆ ಸರಿಹೊಂದುವುದಿಲ್ಲ ಎನ್ನುವವರಿಗೆ ಕಡಿಮೆ ಬೆಲೆಯಲ್ಲೇ ಆಕ್ಷನ್ ಕ್ಯಾಮೆರಾ ನೀಡುವ ಸಂಸ್ಥೆಗಳೂ ಇವೆ.

ಆಕ್ಷನ್ ಕ್ಯಾಮೆರಾಗಳ ಪೈಕಿ ಪರಿಣತ ಬಳಕೆದಾರರು ಹೆಚ್ಚು ಸೌಲಭ್ಯಗಳಿರುವ, ಹೆಚ್ಚು ಬೆಲೆಯ ಕ್ಯಾಮೆರಾಗಳನ್ನು ಇಷ್ಟಪಡುತ್ತಾರೆ. ಅವರು ಬಳಸುವ ಸಂದರ್ಭಗಳಿಗೆ (ಉದಾ: ಸ್ಕೈಡೈವಿಂಗ್, ಸ್ಕೂಬಾ ಡೈವಿಂಗ್ ಇತ್ಯಾದಿ) ಇಂತಹ ಕ್ಯಾಮೆರಾಗಳು ಅಗತ್ಯವೂ ಹೌದು. ಆದರೆ ಎಲ್ಲ ಬಳಕೆದಾರರಿಗೂ ಇಷ್ಟೆಲ್ಲ ಸೌಲಭ್ಯಗಳು ಬೇಡವಲ್ಲ? ಅಂತಹವರಿಗೆಂದು ಇದ್ದುದರಲ್ಲಿ ಕೊಂಚ ಕಡಿಮೆ ಬೆಲೆಯ, ಆದರೆ ಉತ್ತಮ ಗುಣಮಟ್ಟದ ಆಕ್ಷನ್ ಕ್ಯಾಮೆರಾಗಳೂ ಲಭ್ಯವಿವೆ.

ಇಂತಹ ಕ್ಯಾಮೆರಾಗಳಿಗೊಂದು ಉದಾಹರಣೆ 'ಪೋಲರಾಯ್ಡ್ ಕ್ಯೂಬ್' (ಬೆಲೆ ರೂ. 9,999). ಇನ್ಸ್ ಟಂಟ್ ಛಾಯಾಚಿತ್ರಗಳಿಗೆ ಹೆಸರುವಾಸಿಯಾದ ಪೋಲರಾಯ್ಡ್ ಸಂಸ್ಥೆಯ ಉತ್ಪನ್ನ ಇದು. [ಪೋಲರಾಯ್ಡ್ ಕ್ಯೂಬ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ]

ಹೆಸರೇ ಹೇಳುವಂತೆ ಘನಾಕೃತಿಯಲ್ಲಿರುವ ಈ ಕ್ಯಾಮೆರಾ ಅಂಗೈ ಮೇಲೆ ಕೂರುವಷ್ಟು ಸಣ್ಣದು. ಕ್ಯಾಮೆರಾ ತಳಭಾಗದಲ್ಲಿರುವ ಶಕ್ತಿಶಾಲಿ ಅಯಸ್ಕಾಂತದ ನೆರವಿನಿಂದ ಇದನ್ನು ಯಾವುದೇ ಕಬ್ಬಿಣದ ವಸ್ತುವಿಗೆ (ಉದಾ: ಕಾರಿನ ಬಾನೆಟ್) ಸುಲಭವಾಗಿ ಅಂಟಿಸಬಹುದು ಎನ್ನುವುದು ವಿಶೇಷ.


ಇತರೆಲ್ಲ ಆಕ್ಷನ್ ಕ್ಯಾಮೆರಾಗಳಂತೆ ಇದರಲ್ಲೂ ಛಾಯಾಚಿತ್ರ ಹಾಗೂ ಎಚ್ ಡಿ ವೀಡಿಯೋಗಳನ್ನು ಸೆರೆಹಿಡಿಯಬಹುದು (124 ಡಿಗ್ರಿ ವೈಡ್ ಆಂಗಲ್ ಲೆನ್ಸ್ ಇದೆ). ಇದು ಪೂರ್ಣ ವಾಟರ್ ಪ್ರೂಫ್ ಅಲ್ಲ; ನೀರಿನೊಳಗೆ ಛಾಯಾಗ್ರಹಣ ಮಾಡುವುದಾದರೆ ಪ್ರತ್ಯೇಕ ಕವಚ ಬಳಸಬೇಕು. ಸೈಕಲ್ ಇತ್ಯಾದಿಗಳಲ್ಲಿ ಬಳಸಲು ಹಲವು ಬಗೆಯ ಮೌಂಟ್ ಗಳು ದೊರಕುತ್ತವೆ.

ಈಗಾಗಲೇ ಹೇಳಿದಂತೆ ಬಹಳಷ್ಟು ಆಕ್ಷನ್ ಕ್ಯಾಮೆರಾಗಳಲ್ಲಿ ವ್ಯೂ ಫೈಂಡರ್ ಇರುವುದಿಲ್ಲ. ಹಾಗೊಮ್ಮೆ ಕ್ಯಾಮೆರಾ ಕಣ್ಣಿಗೆ ಏನು ಕಾಣುತ್ತಿದೆ ಎಂದು ನೋಡಬೇಕಾದರೆ ಏನು ಮಾಡಬೇಕು? ಕ್ಯಾಮೆರಾವನ್ನು ಮೊಬೈಲ್ ಫೋನಿಗೆ ಸಂಪರ್ಕಿಸಿ ಅದನ್ನೇ ವ್ಯೂ ಫೈಂಡರಿನಂತೆ ಬಳಸುವ, ಹಾಗೂ ಅದರ ಮೂಲಕವೇ ಕ್ಯಾಮೆರಾವನ್ನೂ ನಿಯಂತ್ರಿಸುವ ಸೌಲಭ್ಯವಿರುವ ಕ್ಯಾಮೆರಾಗಳೂ ಇವೆ.

ವೈ-ಫಿ ಬಳಸುವ 'ಪೋಲರಾಯ್ಡ್ ಕ್ಯೂಬ್ ಪ್ಲಸ್' ಇಂತಹ ಕ್ಯಾಮೆರಾಗಳಿಗೊಂದು ಉದಾಹರಣೆ. ಕಾರಿನ ಬಾನೆಟ್ ಗೆ ಅಂಟಿಸಿದ ಕ್ಯಾಮೆರಾ ಏನನ್ನು ಚಿತ್ರಿಸುತ್ತಿದೆ ಎಂದು ನೋಡುವುದನ್ನು, ಮತ್ತು ಅದನ್ನು ಚಲಿಸುವ ಕಾರಿನೊಳಗಿಂದಲೇ ನಿಯಂತ್ರಿಸುವುದನ್ನು ಇಂತಹ ಕ್ಯಾಮೆರಾಗಳು ಸಾಧ್ಯವಾಗಿಸುತ್ತವೆ.

ಜೂನ್ ೨೦೧೬ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge