ಗುರುವಾರ, ಮೇ 26, 2016

ಇಜ್ಞಾನ ವಿಶೇಷ ಲೇಖನ: ಮಿದುಳು ಎಂಬ ಹೆಡ್ಡಾಫೀಸು

ರೋಹಿತ್ ಚಕ್ರತೀರ್ಥ

ಗಿರೀಶ ಕಾರ್ನಾಡರ "ಹಯವದನ" ನಾಟಕದಲ್ಲಿ ಒಂದು ಪ್ರಸಂಗ ಬರುತ್ತದೆ. ಕಪಿಲ ಮತ್ತು ದೇವದತ್ತ ಎಂಬ ಇಬ್ಬರು ಗೆಳೆಯರು ಕಾಳಿಯ ದೇಗುಲದಲ್ಲಿ ಕತ್ತಿ ಹಿರಿದು ಹೋರಾಡಿ ಪರಸ್ಪರರ ರುಂಡಗಳನ್ನು ಕಡಿದುಹಾಕುತ್ತಾರೆ. ದೇವದತ್ತನ ಪತ್ನಿ ಪದ್ಮಿನಿ ಅಲ್ಲಿಗೆ ಬಂದು, ಕಡಿದು ಚೆಲ್ಲಿದ ದೇಹಗಳನ್ನು ನೋಡಿ ಭಯಭೀತಳಾದಾಗ ಕಾಳಿ ಪ್ರತ್ಯಕ್ಷಳಾಗಿ, ಅವರಿಬ್ಬರ ರುಂಡಗಳನ್ನೂ ಮರಳಿ ದೇಹಗಳಿಗೆ ಜೋಡಿಸಿಟ್ಟರೆ ತಾನವರಿಗೆ ಜೀವ ಕೊಡುತ್ತೇನೆಂದು ಹೇಳುತ್ತಾಳೆ. ಗಡಿಬಿಡಿಯಲ್ಲಿ ಪದ್ಮಿನಿ ಕಪಿಲನ ತಲೆಯನ್ನು ದೇವದತ್ತನಿಗೂ ದೇವದತ್ತನದನ್ನು ಕಪಿಲನಿಗೂ ಜೋಡಿಸಿಡುತ್ತಾಳೆ. ಈ ಆಟವನ್ನು ನೋಡಿಯೂ ವಿಧಿಲಿಖಿತ ಎಂದು ಸುಮ್ಮನಿರುವ ಕಾಳಿ ಅವರಿಗೆ ಜೀವ ಕೊಟ್ಟುಬಿಡುತ್ತಾಳೆ. ಈಗ ಪದ್ಮಿನಿಯ ಗಂಡ ಯಾರು? ಕಪಿಲನೋ ದೇವದತ್ತನೋ? ಅಸಲಿಗೆ ಯಾರು ಕಪಿಲ ಯಾರು ದೇವದತ್ತ, ಎಂಬ ತಾತ್ತ್ವಿಕಸಮಸ್ಯೆ ಹುಟ್ಟುತ್ತದೆ. ಒಬ್ಬ ಋಷಿಯ ಬಳಿ ಹೋದಾಗ ಅವನು ಅಂಗಗಳಲ್ಲಿ ತಲೆಯೇ ಉತ್ತಮಾಂಗ. ಹಾಗಾಗಿ ದೇವದತ್ತನ ತಲೆಯಿರುವವನೇ ದೇವದತ್ತ ಎಂದು ತೀರ್ಪು ಕೊಡುತ್ತಾನೆ.

ಮನುಷ್ಯನಿಗೆ ತಲೆ ಎಷ್ಟು ಮುಖ್ಯ? ಅವನ ಅಸ್ತಿತ್ವಕ್ಕೆ ಅರ್ಥವಂತಿಕೆ ತರುವ ಭಾಗ ಯಾವುದು ಎಂಬ ಚರ್ಚೆ ಶತಶತಮಾನಗಳಿಂದ ನಡೆದುಬಂದಿದೆ.

ಮನುಷ್ಯನಿಗೆ ಒಂದು ಕೈಬೆರಳೋ ಕಾಲ್ಬೆರಳೋ ಕತ್ತರಿಸಿಹೋದರೆ ಅಷ್ಟು ದೊಡ್ಡ ಫರಕೇನೂ ಆಗುವುದಿಲ್ಲ. ಅಷ್ಟೇಕೆ ಒಂದಿಡೀ ಕೈಯೇ ಮುರಿದುಹೋದ, ಕಾಲು ಕತ್ತರಿಸಿತೆಗೆದ ವ್ಯಕ್ತಿಗಳು ಕೂಡ ಆರಾಮಾಗಿ ಬದುಕಿಕೊಂಡಿದ್ದಾರೆ. ಮೂತ್ರಪಿಂಡಗಳು ವಿಫಲವಾದರೆ ಇನ್ನೊಂದನ್ನು ಜೋಡಿಸಿ ದಿನ ತಳ್ಳಬಹುದು. ಇನ್ನೊಬ್ಬರ ಕಣ್ಣುಗಳ ಮೂಲಕ ನೋಡಬಹುದು. ಇನ್ನೊಬ್ಬರ ಹೃದಯವನ್ನು ಕೂಡ ಕಸಿ ಮಾಡಿಸಿಕೊಳ್ಳಬಹುದು. ಆದರೆ ಮಿದುಳು? ಮನುಷ್ಯನ ಮಿದುಳನ್ನು ಹೊರಗಿಟ್ಟು ಇನ್ನೊಬ್ಬರದನ್ನು ಜೋಡಿಸುವ ತಂತ್ರಜ್ಞಾನ ಇದುವರೆಗೂ ನಮಗೆ ಸಿದ್ಧಿಸಿಲ್ಲ. ಯಾಕೆಂದರೆ, ಸುತ್ತ ಅರ್ಧ ಫರ್ಲಾಂಗಿನವರೆಗೆ ನಾಲ್ಕು ದಿಕ್ಕುಗಳಲ್ಲೂ ಬೇರು ಹರಡಿನಿಂತ ವಿಶಾಲ ವಟವೃಕ್ಷದಂತೆ ನಮ್ಮ ಮಿದುಳು ತನ್ನ ನರಮಂಡಲವನ್ನು ದೇಹದ ಕೊಟ್ಟಕೊನೆಯ ತಾಣದವರೆಗೆ ಹಬ್ಬಿ ಕೂತಿದೆ. ಕಾಲಿನ ಕಿರುಬೆರಳಿಗೆ ಸೂಜಿ ಚುಚ್ಚಿದರೂ ಅದರ ಅನುಭವ ನಮಗಾಗುತ್ತದೆ. ಹಾಗಿರುವಾಗ, ಮಿದುಳನ್ನು ಕಿತ್ತುತೆಗೆದು ಇನ್ನೊಂದನ್ನು ಅದೇ ಜಾಗದಲ್ಲಿ ನೆಟ್ಟು ಈ ಕೋಟ್ಯಂತರ ನರಗಳನ್ನು ಆ ಹೊಸಬನಿಗೆ ಬೆಸೆಯುವುದು ಆಗುವ ಮಾತೆ? ಪುರುಷನಿಂದ ಧಾತುವೊಂದು ಹೆಣ್ಣಿನ ಗರ್ಭಕ್ಕೆ ಬಿದ್ದ ಕ್ಷಣದಲ್ಲಿ ಅವೆರಡೂ ಕಡೆಯ ಜೀವಕಣಗಳು ಜೊತೆಯಾಗಿ ಭ್ರೂಣವೆಂಬ ವಿಸ್ಮಯವನ್ನು ಕಟ್ಟಲು ಹೊರಡುತ್ತವಲ್ಲ? ಆಗ ಅಲ್ಲಿರುವ ಅರ್ಧದಷ್ಟು ಕಣಗಳು ಕೇವಲ ಮಿದುಳನ್ನು ಕಟ್ಟುವುದಕ್ಕೇ ಮೀಸಲಾಗಿರುತ್ತವೆ. ಉಳಿದರ್ಧ, ದೇಹದ ಇತರ ಭಾಗಗಳನ್ನು ನಿರ್ಮಿಸಲು ಬಳಕೆಯಾಗುತ್ತವೆ! ರಕ್ತವನ್ನು ಪಂಪು ಮಾಡುವ ಒಂದೇ ಕೆಲಸವನ್ನು ಜೀವನಪೂರ್ತಿ ಮಾಡುವ ಹೃದಯದಂತೆ ಅಥವಾ ಉಚ್ಛ್ವಾಸ-ನಿಶ್ವಾಸದಂಥ ಏಕತಾನತೆಯ ಕೆಲಸವನ್ನು ಕೊನೆಯುಸಿರಿನ ತನಕ ಮಾಡುವ ಪಪ್ಪುಸಗಳ ಹಾಗೆ ಸುಲಭದ ಕೆಲಸವಲ್ಲ ನೋಡಿ ಈ ಮಿದುಳಿನದ್ದು. ಕ್ಷಣಕ್ಷಣಕ್ಕೂ ಮಾಹಿತಿಗಳನ್ನು ಕ್ರೋಡೀಕರಿಸಬೇಕು. ಹೊಸ ವಿಷಯಗಳಿಗೆ ಜಾಗ ಮಾಡಿಕೊಡಬೇಕು. ಮಾಹಿತಿಗಳನ್ನು ಶ್ರವಣ, ನೋಟ, ಘ್ರಾಣದಂಥ ಹಲವು ಬಗೆಯಲ್ಲಿ ಶೇಖರಿಸಿಡಬೇಕು. ಅವನ್ನು ಬೇಕೆಂದಾಗೆಲ್ಲ ಮಾಹಿತಿ ಕಣಜದಿಂದ ಹುಡುಕಿ ತೆಗೆಯಬೇಕು. ತನ್ನತ್ತ ಓಡಿಬಂದ ಮಾಹಿತಿಯನ್ನು ಪುರುಸೊತ್ತಿಲ್ಲದೆ ವಿಶ್ಲೇಷಿಸಿ ಮಾರೋಲೆ ಬರೆಯುತ್ತಲೇ ಇರಬೇಕು. ರಸ್ತೆ ದಾಟುವುದೆಂಬ ಒಂದು ಸಣ್ಣ ಸಂಗತಿಯಲ್ಲಿ ಕೂಡ ಮಿದುಳು ಅದೆಷ್ಟು ಪಟುವಾಗಿರಬೇಕೆಂದರೆ, ಅತ್ತಿತ್ತ ಓಡಾಡುವ ವಾಹನಗಳ ವೇಗವನ್ನು ಅಂದಾಜಿನಲ್ಲೇ ಊಹಿಸಿ ಅದಕ್ಕೆ ತಕ್ಕಂತೆ ಕಾಲುಗಳಿಗೆ ನಿರ್ದೇಶನ ಕೊಡಬೇಕು. ಒಂದು ಚಿಟಿಕೆ ಹೊಡೆವಷ್ಟರಲ್ಲಿ ನಡೆದುಹೋಗುವ ರಸ್ತೆ ದಾಟುವ ಪ್ರಕ್ರಿಯೆಗೆ ಸಹ ಮಿದುಳಿನ ಕೋಟ್ಯಾನುಕೋಟಿ ನ್ಯೂರಾನ್ ಅಥವಾ ನರತಂತುಗಳು ಚಕಚಕನೆ ಕೆಲಸ ಮಾಡಿ ಉತ್ತರ ತೆಗೆಯಬೇಕಾಗುತ್ತದೆ. ೨೦೧೫ರಲ್ಲಿ ಮನುಷ್ಯನ ಮಿದುಳಿಗೆ ಸವಾಲೊಡ್ಡುವ ಸೂಪರ್ ಕಂಪ್ಯೂಟರ್ ಒಂದನ್ನು ನಿರ್ಮಿಸಿದರು. ಮನುಷ್ಯನ ಮಿದುಳಿನಲ್ಲಿ ಒಂದು ಸೆಕೆಂಡಿನಲ್ಲಿ ನಡೆದುಹೋಗುವ ಎಲ್ಲ ಕೆಲಸಗಳನ್ನು ತಾನು ಮಾಡಿ ತೋರಿಸಲು ಆ ಕಂಪ್ಯೂಟರಿಗೆ ನಲವತ್ತು ನಿಮಿಷಗಳು ಬೇಕಾದವು!

ಮನುಷ್ಯನನ್ನು ಮೃಗಪಕ್ಷಿಗಳ ವರ್ಗದಿಂದ ಭಿನ್ನವಾಗಿಟ್ಟಿರುವುದೇ ಮಿದುಳು ಎಂಬುದು ಒಂದು ಅನ್ನಿಸಿಕೆ. ಜಗತ್ತಿನ ಉಳಿದೆಲ್ಲಾ ಜೀವಿಗಳಿಗಿಂತ ಮನುಷ್ಯನ ಮಿದುಳು ದೊಡ್ಡದು ಎಂಬ ಮಾತನ್ನು ಕೆಲ ಪಠ್ಯಪುಸ್ತಕಗಳಲ್ಲಿ ನೋಡುತ್ತೇವೆ. ಆನೆಯಂಥಾ ಆನೆಯ ಮಿದುಳು ಕೂಡ ಮನುಷ್ಯನದಕ್ಕಿಂತ ಚಿಕ್ಕದು ಎಂದು ಕೆಲವು ಶಿಕ್ಷಕರು ಹೇಳಿದ್ದನ್ನು ನೀವು ಕೇಳಿರಬಹುದು. ಕೇಳುವುದಕ್ಕೆ ವಿಸ್ಮಯಕರವಾಗಿದ್ದರೂ ಈ ಮಾತೇನೂ ನಿಜವಲ್ಲ. ಆರೋಗ್ಯವಂತ ಪ್ರೌಢ ಮನುಷ್ಯನ ಮಿದುಳು ೧.೩೫ ಕೆಜಿ ತೂಗಿದರೆ ಪ್ರಾಯಕ್ಕೆ ಬಂದ ಡಾಲ್ಫಿನ್‌ನ ಮಸ್ತಿಷ್ಕ ಒಂದೂವರೆ ಕೆಜಿಯಷ್ಟು ಭಾರವಿರುತ್ತದೆ. ಅದೇ ಒಂದು ಆನೆಯ ಮಿದುಳು ಬರೋಬ್ಬರಿ ೬ ಕೆಜಿಯಷ್ಟು ತೂಗುತ್ತದೆ! ಆದರೆ, ಕಾಡಿನ ರಾಜನಾದ ಸಿಂಹದ ಮಿದುಳು ಕೇವಲ ೨೩೦ ಗ್ರಾಂಗಳಷ್ಟೇ ತೂಕ. ಚಿಂಪಾಂಜಿಯದು ೪೨೦ ಗ್ರಾಂ, ಗೊರಿಲ್ಲದ್ದು ೫೦೦ ಗ್ರಾಂಗಳು. ಮನುಷ್ಯನ ಅತ್ಯಂತ ವಿಶ್ವಾಸಾರ್ಹ ಗೆಳೆಯನಾದ ನಾಯಿಯ ಮಿದುಳು ೭೦ ಗ್ರಾಂ ತೂಗುತ್ತದೆ! ಮನುಷ್ಯನ ಮಿದುಳಿನಲ್ಲಿ ೮೬ ಶತಕೋಟಿ ನ್ಯೂರಾನ್‌ಗಳಿದ್ದರೆ ಆನೆಯ ಮಿದುಳಲ್ಲಿರುವ ನ್ಯೂರಾನ್‌ಗಳ ಸಂಖ್ಯೆ ೨೫೧ ಶತಕೋಟಿ! ಹಾಗಿದ್ದರೂ ಮನುಷ್ಯನೇ ಪ್ರಾಣಿವರ್ಗದ ಅತ್ಯಂತ ಬುದ್ಧಿವಂತ ಸದಸ್ಯನಾಗಲು ಏನು ಕಾರಣ? ಅದಕ್ಕೆ ಕಾರಣವಾದದ್ದು ಮಿದುಳಿನ ಮುಂಭಾಗದಲ್ಲಿ (ಅಂದರೆ ಹಣೆಯ ಹಿಂಭಾಗದಲ್ಲಿ) ಕೂತಿರುವ ಮುಮ್ಮಿದುಳು (ಸೆರೆಬ್ರಲ್ ಕಾರ್ಟೆಕ್ಸ್) ಎಂಬ ಭಾಗ. ಇಲ್ಲಿರುವ ನರತಂತುಗಳ ಸಂಖ್ಯೆಯ ಮೇಲೆ ಜೀವಿಯ ಬುದ್ಧಿವಂತಿಕೆ ನಿರ್ಧಾರಿತ. ಆನೆಯ ಮುಮ್ಮಿದುಳಿನಲ್ಲಿ ೫೬೦ ಕೋಟಿ ನ್ಯೂರಾನ್‌ಗಳಿದ್ದರೆ ಮನುಷ್ಯನ ಮುಮ್ಮಿದುಳಿನಲ್ಲಿ ಒಟ್ಟು ೧೬೩೦ ಕೋಟಿ ನ್ಯೂರಾನ್‌ಗಳಿವೆ. ಹಾಗಾಗಿ ಆನೆ ತಿಮಿಂಗಲಗಳನ್ನೂ ತನ್ನ ಆಣತಿಗೆ ತಕ್ಕಂತೆ ಕುಣಿಸುವ, ಮಣಿಸುವ ಜಾಣ್ಮೆ ಆತನಿಗೆ ಒದಗಿಬಂದಿದೆ.

ಎಲ್ಲ ಪ್ರಾಣಿಗಳಿಗೂ ರುಂಡದಲ್ಲೇ ಮಿದುಳಿರಬೇಕೆಂಬ ನಿಯಮವೇನೂ ಇಲ್ಲ. ಜಿರಳೆಗೆ ಮೈಯೆಲ್ಲ ಮಿದುಳು! ಅದರ ನರವ್ಯವಸ್ಥೆ ಕಣ್ಣಿನಿಂದ ಬಾಲದ ತುದಿಯವರೆಗೆ ಹರಡಿದೆ. ದಾರದಲ್ಲಿ ಬಿಡಿಬಿಡಿಯಾಗಿ ಕಟ್ಟಿದ ಗೊಂಡೆ ಹೂವುಗಳಂತೆ, ಜಿರಳೆಯ ದೇಹದಲ್ಲಿ ಚಾಚಿಕೊಂಡಿರುವ ಒಂದು ಉದ್ದನೆ ನರಕ್ಕೆ ಅಲ್ಲಲ್ಲಿ ನರಗುಚ್ಛಗಳಿವೆ. ಇವನ್ನು ಗ್ಯಾಂಗ್ಲಿಯಾ ಎಂದು ಕರೆಯುತ್ತಾರೆ. ಹಾಗಾಗಿ ತಲೆ ಕತ್ತರಿಸಿಹಾಕಿದ ಜಿರಳೆ ಆರಾಮಾಗಿ ಓಡಾಡುತ್ತ, ಸ್ಪರ್ಶಜ್ಞಾನಕ್ಕೇನೂ ಕುಂದಾಗದೆ ಹಲವು ವಾರಗಳ ಕಾಲ ಬದುಕಿರಬಲ್ಲದು. ಅದು ಸಾಯುವುದು ಮಿದುಳಿಲ್ಲ ಎಂಬ ಕಾರಣಕ್ಕಲ್ಲ, ಬಾಯಿಯಿಲ್ಲದೆ ತಿನ್ನುವುದಕ್ಕಾಗದೆಂಬ ಕಾರಣಕ್ಕೆ. ಜೆಲ್ಲಿಫಿಶ್ ಅಥವಾ ಅಂಬಲಿ ಮೀನು ಎಂದು ಕರೆಯಲ್ಪಡುವ ಒಂದು ಜಲಪ್ರವರ್ಗವೂ ಅಷ್ಟೆ, ತನ್ನ ಮೈತುಂಬ ಹಲವು ನರವ್ಯವಸ್ಥೆಗಳನ್ನು ಪಡೆದ ಭಾಗ್ಯಶಾಲಿ. ಅಂಬಲಿ ಮೀನಿಗೆ ಮಿದುಳಿಲ್ಲ; ಆದರೆ ಮೈಮೇಲೆ ಬಿಡುಗಡೆಯಾಗುವ ರಾಸಾಯನಿಕಗಳೇ ಅದಕ್ಕೆ ನೀರಲ್ಲಿ ಈಜಾಡಲು, ವೈರಿಗಳ ಮೇಲೆ ದಾಳಿ ಮಾಡಲು ನಿರ್ದೇಶನ ಕೊಡುತ್ತವೆ ಎನ್ನುವುದು ಅಚ್ಚರಿಗೊಳಿಸುವ ಸತ್ಯ. ೧೯೪೫ರಲ್ಲಿ ಮೈಕ್ ಎಂಬ ಕೋಳಿ ಅಮೆರಿಕಾದಾದ್ಯಂತ ಹೆಸರು ಮಾಡಿತು. ಸಾರು ಮಾಡಲೆಂದು ತಲೆ ಕಡಿದರೂ ಆ ಕೋಳಿ ಸಾಯಲಿಲ್ಲ. ಬರೋಬ್ಬರಿ ೧೮ ತಿಂಗಳ ಕಾಲ ಆರಾಮಾಗಿ ಓಡಾಡಿಕೊಂಡಿದ್ದು ರಾಷ್ಟ್ರೀಯ ಸುದ್ದಿಯಾಯಿತು! ಆ ಕೋಳಿಗೆ ನೀರು-ಕಾಳುಗಳನ್ನು ಕತ್ತಿನ ಬಳಿ ತೆರೆದ ಗಂಟಲ ನಾಳಕ್ಕೆ ಮಾಲೀಕ ಸುರಿಯುತ್ತಿದ್ದ. ಮಿದುಳಿಲ್ಲದೆ ಒಂದೂವರೆ ವರ್ಷ ಕೋಳಿ ಬದುಕಿದ್ದಾದರೂ ಹೇಗೆ ಎಂದು ಜೀವವಿಜ್ಞಾನಿಗಳು ಅದೆಷ್ಟು ಮಿದುಳು ಓಡಿಸಿದರೂ ಸರ್ವಸಮ್ಮತ ನಿರ್ಣಯಕ್ಕೆ ಬರಲಾಗಲಿಲ್ಲ.

ಎಲ್ಲರ ಮಿದುಳುಗಳೂ ಹೆಚ್ಚುಕಡಿಮೆ ಒಂದೇ ತೂಕದವಾದರೂ ಮನುಷ್ಯರ ಬುದ್ಧಿವಂತಿಕೆಯಲ್ಲಿ ಏಕೆ ವ್ಯತ್ಯಾಸವಾಗುತ್ತದೆ ಎಂಬುದು ವಿಜ್ಞಾನಿಗಳ ಸದ್ಯದ ಸಂಶೋಧನಾ ವಿಷಯಗಳಲ್ಲೊಂದು. ಇನ್ನು ಕೇವಲ ಎರಡು ದಶಕಗಳಲ್ಲಿ ಮನುಷ್ಯನ ಮಿದುಳಿಗೇ ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳನ್ನು ಕೂರಿಸಿ ಅವನನ್ನು ಸೂಪರ್ ಮನುಷ್ಯನನ್ನಾಗಿಸುವ ಕೆಲಸ ನಡೆದುಹೋಗಲಿದೆ. ಮನುಷ್ಯ ತನ್ನ ಜೀವಿತದ ಬಹುಪಾಲು ಭಾಗವನ್ನು ಶಾಲೆ ಕಾಲೇಜು ಪುಸ್ತಕ ಪರೀಕ್ಷೆ ಎನ್ನುತ್ತ ಕಳೆದುಬಿಡುತ್ತಾನೆ. ಇದಿಷ್ಟೂ ಕಾಲಾವಧಿಯನ್ನು ಒಮ್ಮೆಲೇ ಒರೆಸಿಹಾಕಿ, ಅವನ ಮಿದುಳಲ್ಲಿ ಒಂದೆರಡು ಗೋಧಿ ಕಾಳುಗಳಷ್ಟು ದೊಡ್ಡ ಚಿಪ್‌ಗಳನ್ನು ಅಳವಡಿಸಿ ಎಲ್ಲ ಜ್ಞಾನವನ್ನೂ ಅವುಗಳ ಮೂಲಕ ಮಿದುಳಿಗೆ ತಿನ್ನಿಸುವ ಬಗ್ಗೆ ವಿಜ್ಞಾನಿಗಳು ಚಿಂತನೆ ನಡೆಸಿದ್ದಾರೆ. ಇದು ಅತ್ಯಂತ ಗಂಭೀರವಾದ ಎಥಿಕಲ್ ಪ್ರಶ್ನೆಗಳನ್ನು ತರುತ್ತದೆ ಎಂದು ಭಯಗೊಂಡವರೂ ಇದ್ದಾರೆ. ಏನು ಮಾಡೋಣ, ತಂತ್ರಜ್ಞಾನದ ಓಟಕ್ಕೆ ತಕ್ಕಂತೆ ಹೆಜ್ಜೆಹಾಕಲು ನೀತಿಶಾಸ್ತ್ರಕ್ಕೆ ಸಾಧ್ಯವಾಗುತ್ತಿಲ್ಲ. ಮನುಷ್ಯ ಕ್ಲೋನಿಂಗ್ ಎಂಬ ತಂತ್ರಜ್ಞಾನದ ಮೂಲಕ ತದ್ರೂಪಿಗಳನ್ನು ಸೃಷ್ಟಿಸಿದ. ಬಾಡಿಗೆ ತಾಯಿಯರ ಗರ್ಭದಲ್ಲಿ ವೀರ್ಯಾಣುವಿಟ್ಟು ಬೆಳೆಸಿದ. ಅನ್ಯಗ್ರಹ ಜೀವಿಗಳನ್ನು ಹುಡುಕಾಡುತ್ತ ಅವುಗಳಿಗೆ ಸಂದೇಶ ಕಳಿಸಿದ. ಆಕಾಶದಲ್ಲಿ ತಮ್ಮ ಪಾಡಿಗೆ ತಿರುಗಾಡುವ ಉಲ್ಕೆಗಳಿಗೆ ನ್ಯೂಕ್ಲಿಯಾರ್ ಬಾಂಬುಗಳನ್ನೆಸೆದು ಸಿಡಿಸುತ್ತೇನೆ ಎಂದೂ ಹೇಳುತ್ತಿದ್ದಾನೆ. ಇವೆಲ್ಲ ನೈತಿಕವಲ್ಲ ಎಂದು ಹೇಳುವವರ ಧ್ವನಿ ದಿನಕಳೆದಂತೆ ಕ್ಷೀಣವಾಗುತ್ತಿದೆ. ಹಾಗೆಯೇ, ಪ್ರಕೃತಿಯ ಸೃಷ್ಟಿಯಲ್ಲಿ ಹಸ್ತಕ್ಷೇಪ ಮಾಡಬಾರದು; ಮನುಷ್ಯನನ್ನು ಸೂಪರ್ ಮ್ಯಾನ್ ಆಗಿಸುವ ಕೆಲಸಕ್ಕೆ ಕೈ ಹಾಕಬಾರದು ಎಂದು ಹೇಳುವವರ ಸದ್ದು ತಂತ್ರಜ್ಞಾನದ ಸದ್ದಿನ ಗದ್ದಲದಲ್ಲಿ ಉಡುಗಿಯೇಹೋಗಿದೆ.

ಮಾಹಿತಿ ಕಲೆ ಹಾಕುವುದು, ಸಂಸ್ಕರಣ ಮತ್ತು ನಿರ್ಧಾರ - ಇವು ಮಿದುಳಿನ ಮುಖ್ಯ ಕಾರ್ಯಗಳು. ಬೆರಳ ತುದಿಗೆ ಸೂಜಿ ಚುಚ್ಚಿದರೂ ಅದರ ಅನುಭವ ನಮಗಾಗಬೇಕಾದರೆ ಹಾಗೆ ಚುಚ್ಚಿಸಿಕೊಂಡ ನರ ಆ ಸಂಜ್ಞೆಯನ್ನು ಮಿದುಳಿಗೆ ರವಾನಿಸಿ, ಅಲ್ಲಿ ಅದು ಸಂಸ್ಕರಣೆ ಮತ್ತು ವಿಶ್ಲೇಷಣೆಗೊಂಡು ನೋವಿನ ಅನುಭವ ಆಗಬೇಕು. ಮುಖ್ಯ ನರವ್ಯವಸ್ಥೆ ಕೆಲಸ ಮಾಡದೇಹೋದರೆ ಸೂಜಿಯಿಂದ ಚುಚ್ಚುವುದಲ್ಲ, ಕತ್ತಿಯಿಂದ ಕಡಿದು ಹಾಕಿದರೂ ನೋವಿನ ಅನುಭವ ದೇಹಕ್ಕೆ ಆಗುವುದಿಲ್ಲ. ಮಿದುಳು ಎಂಬ ಕೇಂದ್ರ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಬೇಕಾದರೆ ಅದಕ್ಕೆ ನೀರು, ಆಕ್ಸಿಜನ್‌ಗಳ ಪೂರೈಕೆಯೂ ಸಮರ್ಪಕವಾಗಿರಬೇಕು. ಮನುಷ್ಯ ಉಸಿರಾಡುವ ಗಾಳಿಯಲ್ಲಿ ಶೇಕಡಾ ೨೦ನ್ನು ಮಿದುಳು ಒಂದೇ ಕಬಳಿಸಿ ಹಾಕುತ್ತದೆ! ಹಾಗಾಗಿ ಜೀವವಾಯುವಿನ ಕೊರತೆ ಎದುರಾದಾಗ ಮನುಷ್ಯ ಹೈಪಾಕ್ಷಿಯ ಎಂಬ ಸಮಸ್ಯೆಗೆ ಒಳಗಾಗುತ್ತಾನೆ. ಈ ಸ್ಥಿತಿಯಲ್ಲಿ ಮಿದುಳು ಶೈತ್ಯಪೆಟ್ಟಿಗೆಯಲ್ಲಿಟ್ಟ ಹೂಕೋಸಿನಂತೆ ಹಿಮಕಟ್ಟಿ ಹೋಗುತ್ತದೆ. ಅದರ ಯಾವ ನರತಂತುಗಳೂ ಕೆಲಸ ಮಾಡವು. ಮನುಷ್ಯನ ಕಣ್ಣು, ಕಿವಿ, ಕೈಕಾಲುಗಳೆಲ್ಲ ಎಚ್ಚರದ ಸ್ಥಿತಿಯಲ್ಲಿದ್ದರೂ ಅವುಗಳಿಂದ ಹೋದ ಯಾವ ಸಂಜ್ಞೆಯನ್ನೂ ಮಿದುಳು ಸ್ವೀಕರಿಸುವುದಿಲ್ಲ! ಸತತವಾಗಿ ಐದು ನಿಮಿಷ ಆಕ್ಸಿಜನ್ ಸಿಗದೇಹೋದರೆ ಸಾಕು, ಮಿದುಳು ಶಾಶ್ವತವಾದ ತೊಂದರೆಗೆ ಒಳಗಾಗಬಹುದು. ಮಿದುಳು ಸತ್ತವರು ದೈಹಿಕವಾಗಿ ಸಾಯಬೇಕೆಂದಿಲ್ಲ; ಅವರು ಕೋಮಾ ಸ್ಥಿತಿಗೆ ಹೋಗಬಹುದು. ಸಿಯಾಚಿನ್ ಪರ್ವತಾಗ್ರದಲ್ಲಿ ಹದಿನೈದು ಅಡಿ ಹಿಮದಡಿ ವಾರದಷ್ಟು ಕಾಲ ಮಲಗಿದ್ದ ಹನುಮಂತಪ್ಪ ಕೊಪ್ಪದರನ್ನು ನೆನೆಸಿಕೊಳ್ಳಿ. ಕೋಮಾ ಸ್ಥಿತಿಗೆ ಹೋದವರು ಒಂದೆರಡು ದಿನಗಳಲ್ಲಿ ಯಾವುದೋ ದೀರ್ಘನಿದ್ರೆಗೆ ಜಾರಿದ್ದವರಂತೆ ಮೈಮುರಿಯುತ್ತ ಏಳಲೂ ಬಹುದು, ಹಾಗೆಯೇ ಅದೇ ಸ್ಥಿತಿಯಲ್ಲಿ ನಾಲ್ಕೈದು ದಶಕಗಳ ಕಾಲ ಮಲಗಿರಲೂ ಬಹುದು! ಮಿದುಳನ್ನು ಬಡಿದೆಬ್ಬಿಸುವ ತಂತ್ರಜ್ಞಾನವಿನ್ನೂ ವಿಜ್ಞಾನಿಗಳ ಕೈವಶವಾಗಿಲ್ಲ.

ಮತ್ತೆ ಪ್ರಾರಂಭದ ಪ್ರಶ್ನೆಗೆ ಬರೋಣ. ಮಿದುಳೇ ನರನ ಉತ್ತಮಾಂಗವೇ? ಮಿದುಳು ಎಲ್ಲವನ್ನೂ ನಿಯಂತ್ರಿಸುತ್ತದೆ ಎಂಬುದು ಆಂಶಿಕವಾಗಿ ನಿಜವಾದರೂ ಅದರ ಆದೇಶಕ್ಕೆ ಕಾಯದೆ ಕೆಲಸ ಮಾಡುವ ಹಲವು ಸಂಗತಿಗಳು ನಮ್ಮ ದೇಹದಲ್ಲಿರುವುದು ಸುಳ್ಳಲ್ಲ. ಉದಾಹರಣೆಗೆ, ನಮ್ಮ ಚರ್ಮದ ಜೀವಕೋಶಗಳು ದೇಹ ತಣ್ಣಗಾದರೂ ಒಂದೆರಡು ದಿನಗಳ ಮಟ್ಟಿಗೆ ಜೀವಂತವಿರುತ್ತವೆ. ಹೊರಗಿಂದ ನೀರಿನ ತೇವಾಂಶ, ಜೀವವಾಯುಗಳನ್ನು ಒದಗಿಸಿಕೊಂಡು ಅವು ಕೆಲಸ ಮಾಡುತ್ತವೆ. ಹಾಗೆಯೇ, ಹೊರಜಗತ್ತಿಗೆ ಮನುಷ್ಯ ತೀರಿಕೊಂಡ ಅನ್ನಿಸಿದರೂ ಹೊಟ್ಟೆಯಲ್ಲಿ ಜೀರ್ಣಕ್ರಿಯೆ ಮುಂದುವರಿಯುತ್ತದೆ! ಕರುಳಿನಲ್ಲಿರುವ ಬಹುತೇಕ ಬ್ಯಾಕ್ಟೀರಿಯಾಗಳು ಉಸಿರು ನಿಲ್ಲಿಸಿದ ಮನುಷ್ಯನಿಗೂ ತಮಗೂ ಸಂಬಂಧವೇ ಇಲ್ಲವೇನೋ ಎಂಬ ರೀತಿಯಲ್ಲಿ ತಮ್ಮ ಕೆಲಸವನ್ನು ಯಥಾಪ್ರಕಾರ ಮುಂದುವರಿಸುತ್ತವೆ. ಕೆಲವೊಮ್ಮೆ ಅನ್ಯಮನಸ್ಕರಾಗಿದ್ದರೂ ನಾವು ಆಫೀಸಿಂದ ಹೊರಟು ನೇರವಾಗಿ ಮನೆ ತಲುಪುತ್ತೇವೆ. ಹೇಗೆ ಸಾಧ್ಯ ಎಂದು ಕೇಳಿದರೆ ನರವಿಜ್ಞಾನಿಗಳು, ಮನುಷ್ಯನ ದೇಹದ ಕೆಲವೊಂದು ಭಾಗಗಳು ಮಿದುಳಿನ ಉಪ ಘಟಕಗಳಂತೆ ಕೆಲಸ ನಿರ್ವಹಿಸುತ್ತವೆ ಎಂದು ಹೇಳುತ್ತಾರೆ. ದೇಹದ ಯಾವುದೇ ಭಾಗದಿಂದ ಮಿದುಳಿಗೆ ಹೋಗುವ ಸಂದೇಶದ ವೇಗ ಗಂಟೆಗೆ ೪೦೦ ಕಿಲೋಮೀಟರ್‌ಗಳು. ಆದರೆ ಎಷ್ಟೋ ಸಂದರ್ಭಗಳಲ್ಲಿ ಈ ಯಮವೇಗ ಕೂಡ ಸಾಕಾಗುವುದಿಲ್ಲ. ಬಿಸಿ ಪಾತ್ರೆ ಮುಟ್ಟಿದೆನೆಂಬ ಸಂದೇಶ ಬೆರಳಿಂದ ಮಿದುಳಿಗೆ ಹೋಗಿ, ಕೈ ಹಿಂದಕ್ಕೆಳೆದುಕೋ ಎಂಬ ಆಜ್ಞೆ ಅಲ್ಲಿಂದ ಇಲ್ಲಿಗೆ ರವಾನೆಯಾಗುವಷ್ಟರಲ್ಲಿ ಚರ್ಮದ ಹಲವು ಲಕ್ಷ ಜೀವಕೋಶಗಳು ಸುಟ್ಟುಹೋಗಿರಬಹುದು. ಹಾಗಾಗಿ, ಅಪಾಯದ ಎಷ್ಟೋ ಸಂದರ್ಭಗಳಲ್ಲಿ ನರಗಳ ಮೂಲಕ ಸಂದೇಶ ಬೆನ್ನುಹುರಿಗೆ ಬರುವಷ್ಟರಲ್ಲಿ, ಅಲ್ಲೇ ಆಜ್ಞೆಯೊಂದು ತಯಾರಾಗಿಬಿಡುತ್ತದೆ. ಅಂದರೆ, ಮಿದುಳಿನ ಬದಲು ಬೆನ್ನುಹುರಿಯೇ ಸಂದೇಶ ಸ್ವೀಕಾರ, ಸಂಸ್ಕರಣಗಳ ಕೆಲಸ ನಡೆಸಿ ಆಜ್ಞೆ ಕೊಡುವ ಅಧಿಕಾರವನ್ನು ಚಲಾಯಿಸುತ್ತದೆ. ಹಾಗಾಗಿಯೇ ಬೆನ್ನಹುರಿಯಲ್ಲಿ ಛಳುಕು ಹುಟ್ಟಿದ ಅನುಭವ ನಮಗಾಗುವುದು! ಮನುಷ್ಯನ ಮೂಳೆಯ ಜೀವಕೋಶಗಳಿಗೆ ಸ್ವಂತಿಕೆ ಇಲ್ಲ. ಅವೇನಿದ್ದರೂ ಮಿದುಳು ಅಥವಾ ಬೆನ್ನುಹುರಿಯಿಂದ ಬರುವ ಸಂದೇಶವನ್ನು ಪಾಲಿಸುವ ಕೆಲಸವನ್ನಷ್ಟೇ ಮಾಡಿಯಾವು. ಆದರೆ ಹೃದಯದ ಸುತ್ತಲಿನ ಸ್ನಾಯುಗಳಿಗೆ ಕ್ರಿಯೆಗೆ ತಕ್ಷಣ ಪ್ರತಿಕ್ರಿಯೆ ತೋರುವ ಸ್ವಂತ ಬುದ್ಧಿಯೂ ಉಂಟು. ಹಾಗಾಗಿ, ಮಿದುಳಿನ ಉಪ ವಿಭಾಗವಾಗುವ ಕೆಲಸವನ್ನು ಕೆಲವು ಸಲ ಹೃದಯ ಕೂಡ ವಹಿಸಿಕೊಳ್ಳುವುದುಂಟು. ಹೃದಯದ ಭಾವನೆ, ಹೃದಯದಲ್ಲಿ ಹುಟ್ಟಿದ ಪ್ರೀತಿ ಎಂದೆಲ್ಲ ಸಾವಿರಾರು ವರ್ಷಗಳಿಂದ ಹೇಳುತ್ತ ಬಂದಿರುವುದು ಪೂರ್ತಿ ಸುಳ್ಳೇನಲ್ಲ ನೋಡಿ!

ಮನುಷ್ಯ ತನ್ನ ಹಲವು ಸಹಸ್ರ ವರ್ಷಗಳ ನಾಗರೀಕತೆಯ ಇತಿಹಾಸದಲ್ಲಿ ದಾಪುಗಾಲಿಡುತ್ತ ಹೋಗಲು ಕಾರಣವಾದ ಏಕೈಕ ಅಸ್ತ್ರ ಮಿದುಳು. ನಮ್ಮ ಸಂಸ್ಕೃತಿ, ಭಾಷೆ, ಸಾಹಿತ್ಯ, ಕಲೆ, ವಿಜ್ಞಾನ, ತಂತ್ರಜ್ಞಾನ ಎಲ್ಲವೂ ಮಿದುಳಿನ ಚಿಂತನಾಶಕ್ತಿಯ ಫಲ. ಇದನ್ನೇ ಬಹುಶಃ ಫ್ರೆಂಚ್ ತತ್ತ್ವಜ್ಞಾನಿ ಮತ್ತು ಗಣಿತಜ್ಞನಾಗಿದ್ದ ರೀನೆ ದೆಕಾರ್ತೆ, "ನಾನು ಯೋಚಿಸುತ್ತೇನೆ. ಹಾಗಾಗಿ ನನ್ನ ಅಸ್ತಿತ್ವಕ್ಕೆ ಅರ್ಥವಿದೆ" (ಐ ಥಿಂಕ್. ದೇರ್‌ಫೋರ್ ಐ ಯಾಮ್) ಎಂಬ ಮಾತಿನಲ್ಲಿ ಹೇಳಿದನಿರಬೇಕು. ಸರಿಯಾಗಿ ಬಳಸಿದರೆ ಮನುಷ್ಯಕುಲದ ಉದ್ಧಾರಕ್ಕಾಗಿ ಮೀಸಲಿಡಬಹುದಾದ ಈ ಹತ್ಯಾರವನ್ನು, ಬ್ರೇನ್‌ವಾಷ್ ಎಂಬ ತಂತ್ರ ಬಳಸಿ ವಿಧ್ವಂಸಕೃತ್ಯಗಳಿಗೂ ಉಪಯೋಗಿಸಬಹುದು. ಜಗತ್ತಿನಲ್ಲಿ ನಡೆದಿರುವ ಸಾವಿರಾರು ಯುದ್ಧಗಳು, ಹತ್ಯಾಕಾಂಡಗಳು ಮಿದುಳೆಂಬ ಪುಟ್ಟಗೂಡಲ್ಲಿ ಹುಟ್ಟಿದ ಸಿದ್ಧಾಂತಗಳೆಂಬ ಬಾಂಬುಗಳ ಫಲ ಎಂದು ಯೋಚಿಸಿದರೆ ಮಿದುಳಿನ ಅಗಾಧ ಶಕ್ತಿಯ ಬಗ್ಗೆ ನಡುಕ ಹುಟ್ಟುತ್ತದೆ. ಒಬ್ಬ ಸಾಧಾರಣ ಮನುಷ್ಯನ ತಲೆಯೊಳಗೆ ದಿನವೊಂದಕ್ಕೆ ಸರಾಸರಿ ೭೦,೦೦೦ ವಿವಿಧ ಯೋಚನೆಗಳು ಮೂಡಿ ಕಂತುತ್ತವೆ. ತನ್ನ ಬುಟ್ಟಿಯಲ್ಲಿ ಅನವಶ್ಯಕ ಹಾಗೂ ಹಳೆಯ ಸ್ಮರಣೆಗಳನ್ನು ನಿರಂತರವಾಗಿ ಅಳಿಸಿಹಾಕುತ್ತ, ಹೊಸ ವಿಚಾರಗಳಿಗೆ ಜಾಗ ಮಾಡಿಕೊಡುತ್ತ ಮಿದುಳು ತನ್ನನ್ನು ತಾನು ಸದಾ ಸ್ವಚ್ಛವಾಗಿಟ್ಟುಕೊಳ್ಳಬಯಸುತ್ತದೆ. ಮನುಷ್ಯನ ಅತ್ಯದ್ಭುತ ಆವಿಷ್ಕಾರವಾದ ಕಂಪ್ಯೂಟರ್‌ಗೂ ಮಿದುಳಿನ ಕಾರ್ಯಚಟುವಟಿಕೆಗಳೇ ಪ್ರೇರಣೆ. ಅಲ್ಲಿ ಬಳಸುವ ರ್‍ಯಾಮ್, ರಾಮ್ ಮುಂತಾದ ಸ್ಮರಣ ಮಟ್ಟಗಳ ಪರಿಕಲ್ಪನೆ ನಮಗೆ ಸಿಕ್ಕಿದ್ದೇ ಮಿದುಳಿನ ಕಾರ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳತೊಡಗಿದ ಮೇಲೆ. ಜಗತ್ತಿಗೆ ಬಂದ ಪ್ರತಿಯೊಬ್ಬ ಜೀವಿಯೂ ಯೋಚಿಸುತ್ತದೆ, ತರ್ಕಿಸುತ್ತದೆ, ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮಿದುಳನ್ನು ವಿಷಯ ಸಂಗ್ರಹಕ್ಕೂ ಸಂಸ್ಕರಣೆಗೂ ಬಳಸುತ್ತದೆ. ಸಂಗ್ರಹವಾದ ಮಾಹಿತಿಯನ್ನು ಅಗತ್ಯ ಕೆಲಸಗಳಿಗೆ ತಕ್ಕಂತೆ ಮಾರ್ಪಡಿಸಿಕೊಳ್ಳುತ್ತದೆ. ಇದನ್ನೇ ನಾವು ಜ್ಞಾನ ಎನ್ನುತ್ತೇವೆ. ಜೀವಿ ಸತ್ತಾಗ ಅದರ ಮಿದುಳಿನಲ್ಲಿ ಸಂಚಯವಾಗಿದ್ದ ಅಷ್ಟೂ ಜ್ಞಾನವೂ ಕಾಲಗರ್ಭದಲ್ಲಿ ಹೂತುಹೋದಂತೆಯೇ. ಅದನ್ನು ನಶಿಸಿ ಹೋಗದಂತೆ ಕಾಪಿಡುವುದು ಹೇಗೆ? ಒಬ್ಬ ಮನುಷ್ಯ ತನ್ನ ಜೀವಿತದಲ್ಲಿ ಕಷ್ಟಪಟ್ಟು ಗಳಿಸಿದ ಜ್ಞಾನವೆಂಬ ಭಂಡಾರವನ್ನು ಆತನ ಕಾಲಾನಂತರವೂ ಜಗತ್ತಿಗೆ ಉಪಯೋಗಕ್ಕೆ ಬರುವಂತೆ ಮಾಡಲು ಸಾಧ್ಯವೆ? ತನ್ನ ಯಾವೊಂದು ಜ್ಞಾನವೂ ಅನವಶ್ಯವಾಗಿ ನಷ್ಟವಾಗಿ ಹೋಗುವುದನ್ನು ಬಯಸದ ಪ್ರಕೃತಿ ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿ ಗಳಿಸುವ ಜ್ಞಾನವನ್ನು ಶೇಖರಿಸಿಡುವ ವ್ಯವಸ್ಥೆಯನ್ನೇನಾದರೂ, ಗುಟ್ಟಾಗಿಯಾದರೂ, ರೂಪಿಸಿದೆಯೇ? ಇದು ವಿಜ್ಞಾನದ ವಿದ್ಯಾರ್ಥಿಯಾದ ನನ್ನನ್ನು ಸದಾ ಕಾಡುತ್ತಿರುವ ಪ್ರಶ್ನೆ.

ಮೇ ೧೪, ೨೦೧೬ರ 'ಮಲೆನಾಡು ಮಿತ್ರ'ದಲ್ಲಿ ಪ್ರಕಟವಾದ ಲೇಖನದ ಪೂರ್ಣರೂಪ

2 ಕಾಮೆಂಟ್‌ಗಳು:

Ravindra Bhat ಹೇಳಿದರು...

ತುಂಬ ಮಾಹಿತಿಪೂರ್ಣ ಲೇಖನ.

sb raju ಹೇಳಿದರು...

nice ariticle

badge