ಸೋಮವಾರ, ಮೇ 23, 2016

ಎಂಬಿಪಿಎಸ್ ಎಂದರೇನು?

ಒಂದಲ್ಲ ಒಂದು ಸಾಧನದ ಮೂಲಕ ನಾವು ಸದಾಕಾಲ ಅಂತರಜಾಲ ಸಂಪರ್ಕವನ್ನು ಬಳಸುತ್ತಲೇ ಇರುತ್ತೇವಲ್ಲ, ಹಾಗೆ ಬಳಸುವಾಗ ಸಂಪರ್ಕದ ವೇಗದ ಬಗೆಗೂ ಕೇಳಿರುತ್ತೇವೆ: ೮ ಎಂಬಿಪಿಎಸ್, ೧೬ ಎಂಬಿಪಿಎಸ್, ೫೦ ಎಂಬಿಪಿಎಸ್... ಹೀಗೆ.

ಎಂಬಿ ಅಂದರೆ ಮೆಗಾಬೈಟ್ ಸರಿ, ಆದರೆ ಇದೇನಿದು ಎಂಬಿಪಿಎಸ್?

ಯಾವುದೇ ದೂರಸಂಪರ್ಕ ವ್ಯವಸ್ಥೆಯ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ಹಾದುಹೋಗುವ ದತ್ತಾಂಶದ (ಡೇಟಾ) ಸರಾಸರಿ ಪ್ರಮಾಣವನ್ನು ಡೇಟಾ ರೇಟ್ ಎಂದು ಕರೆಯುತ್ತಾರೆ. ಒಂದಷ್ಟು ದತ್ತಾಂಶವನ್ನು ತೆಗೆದುಕೊಂಡರೆ ಅದು ಒಂದು ಸ್ಥಳದಿಂದ ಮತ್ತೊಂದಕ್ಕೆ ಎಷ್ಟು ವೇಗವಾಗಿ ತಲುಪಬಲ್ಲದು ಎನ್ನುವುದನ್ನು ಈ ಡೇಟಾ ರೇಟ್ ಸೂಚಿಸುತ್ತದೆ.

ದತ್ತಾಂಶದ ರವಾನೆಗೆ ನಾವು ಯಾವುದೇ ಮಾರ್ಗ ಆಯ್ದುಕೊಂಡಾಗ ಅದರ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ನಿಗದಿತ ಪ್ರಮಾಣದ ದತ್ತಾಂಶವಷ್ಟೆ ಹಾದುಹೋಗುವುದು ಸಾಧ್ಯ. ಇದನ್ನು ಆ ಮಾರ್ಗದ ಬ್ಯಾಂಡ್‌ವಿಡ್ತ್ ಎಂದು ಕರೆಯುತ್ತಾರೆ. ಬ್ಯಾಂಡ್‌ವಿಡ್ತ್ ಹೆಚ್ಚಿದ್ದಷ್ಟೂ ಡೇಟಾ ರೇಟ್ ಕೂಡ ಹೆಚ್ಚಾಗಿರುವುದು ಸಾಧ್ಯ.

ಡೇಟಾ ರೇಟ್ ಅನ್ನು ಅಳೆಯುವ ಏಕಮಾನವೇ ಡೇಟಾ ರೇಟ್ ಯುನಿಟ್. ಎಂಬಿಪಿಎಸ್ ಎನ್ನುವುದು ಇಂತಹುದೇ ಒಂದು ಡೇಟಾ ರೇಟ್ ಯುನಿಟ್. ಯಾವುದೋ ಅಂತರಜಾಲ ಸಂಪರ್ಕದಲ್ಲಿ ಪ್ರತಿ ಸೆಕೆಂಡಿಗೆ ಹತ್ತು ಲಕ್ಷ ಬಿಟ್‌ನಷ್ಟು ದತ್ತಾಂಶದ ಹರಿವು ಸಾಧ್ಯವಾದರೆ ಅದನ್ನು ೧ ಮೆಗಾಬಿಟ್ ಪರ್ ಸೆಕೆಂಡ್ (ಎಂಬಿಪಿಎಸ್) ಸಂಪರ್ಕವೆಂದು ಗುರುತಿಸಲಾಗುತ್ತದೆ.

ಮೇ ೨೩, ೨೦೧೬ರ 'eಜ್ಞಾನ' ಅಂಕಣದಲ್ಲಿ (ವಿಜಯವಾಣಿ) ಪ್ರಕಟವಾದ ಬರಹ

ಕಾಮೆಂಟ್‌ಗಳಿಲ್ಲ:

badge