ಸೋಮವಾರ, ಮೇ 16, 2016

ಆಪ್‌ಬರ್ಗರ್!

ಸ್ಮಾರ್ಟ್‌ಫೋನುಗಳು ಸರ್ವಾಂತರ್ಯಾಮಿಯಾಗಿರುವ ಈ ಕಾಲದಲ್ಲಿ ಆಪ್‌ಗಳ (ಮೊಬೈಲ್ ತಂತ್ರಾಂಶ) ವಿಷಯ ನಮಗೆಲ್ಲ ಗೊತ್ತು. ಬನ್‌ನ ಎರಡು ತುಣುಕುಗಳ ನಡುವೆ ಕರಿದ / ಬೇಯಿಸಿದ ತಿಂಡಿಯನ್ನೂ ತರಕಾರಿ-ಬೆಣ್ಣೆ-ಚೀಸ್ ಇತ್ಯಾದಿಗಳನ್ನೂ ಇಟ್ಟು ತಯಾರಿಸುವ ಬರ್ಗರ್ ಪರಿಚಯವೂ ಇದೆ. ಆದರೆ ಆಪ್‍ಗೂ ಬರ್ಗರ್‌ಗೂ ಎತ್ತಣಿಂದೆತ್ತ ಸಂಬಂಧ?

ಮೊಬೈಲ್ ಆಪ್ ಹಾಗೂ ಕೆಲವು ವೆಬ್‌ಸೈಟುಗಳಲ್ಲಿ ಪರದೆಯ ಒಂದು ಮೂಲೆಯಲ್ಲಿ ಮೂರು ಅಡ್ಡಗೆರೆಗಳ ಒಂದು ಚಿತ್ರ (ಐಕನ್) ಇರುವುದನ್ನು ನೀವು ನೋಡಿರಬಹುದು. ಸಾಫ್ಟ್‌ವೇರ್‌ಗೂ ಬರ್ಗರ್‌ಗೂ ಸಂಬಂಧ ಕಲ್ಪಿಸುವುದು ಈ ಚಿತ್ರ; ಇದರ ಹೆಸರೇ 'ಹ್ಯಾಮ್‌ಬರ್ಗರ್ ಐಕನ್.'

ಮೊಬೈಲಿನ ಪರದೆಯ ಮೇಲೆ ಲಭ್ಯವಿರುವ ಜಾಗ ಕಡಿಮೆಯಲ್ಲ, ಕಂಪ್ಯೂಟರ್ ಪರದೆಯಲ್ಲಿ ಮಾಡಿದಂತೆ ತಂತ್ರಾಂಶದ ನೂರೆಂಟು ಆಯ್ಕೆಗಳನ್ನೆಲ್ಲ (ಮೆನು) ಅಲ್ಲಿ ವಿವರವಾಗಿ ಪ್ರದರ್ಶಿಸುವುದು ಕಷ್ಟ. ಅಂತಹ ಆಯ್ಕೆಗಳನ್ನು ಹಿನ್ನೆಲೆಯಲ್ಲಿಟ್ಟು ಬಳಕೆದಾರ ಬೇಕೆಂದಾಗ ಮಾತ್ರ ಕಾಣಿಸುವಂತೆ ಮಾಡಲು ಈ ಐಕನ್ ಬಳಕೆಯಾಗುತ್ತದೆ. ಇದರಲ್ಲಿರುವ ಮೂರು ಅಡ್ಡಗೆರೆಗಳು ಬರ್ಗರ್ ರಚನೆಯನ್ನು ನೆನಪಿಸುವುದರಿಂದ ಅದಕ್ಕೆ ಹಾಗೆ ಹೆಸರು ಬಂದಿದೆ.

ಮೊಬೈಲುಗಳ ಮೂಲಕವೇ ಜನಪ್ರಿಯವಾದ ಈ ಐಕನ್ ಈಗ ಹಲವು ಜಾಲತಾಣಗಳ ಡೆಸ್ಕ್‌ಟಾಪ್ ಆವೃತ್ತಿಯಲ್ಲೂ ಕಾಣಿಸಿಕೊಳ್ಳುತ್ತಿದೆ, ಮೆನು ಬೇಕಿದ್ದರೆ ಈ ಚಿತ್ರವನ್ನು ಕ್ಲಿಕ್ ಮಾಡಬೇಕೆನ್ನುವುದು ಬಳಕೆದಾರರಿಗೂ ಪರಿಚಯವಾಗುತ್ತಿದೆ.

ಮೇ ೧೬, ೨೦೧೬ರ 'eಜ್ಞಾನ' ಅಂಕಣದಲ್ಲಿ (ವಿಜಯವಾಣಿ) ಪ್ರಕಟವಾದ ಬರಹ

ಕಾಮೆಂಟ್‌ಗಳಿಲ್ಲ:

badge