ಮಂಗಳವಾರ, ಮೇ 10, 2016

ಇಜ್ಞಾನದ ಹತ್ತನೆಯ ವರ್ಷ

ವಿಜ್ಞಾನ-ತಂತ್ರಜ್ಞಾನಗಳ ಬಗ್ಗೆ ಬೇಕಾದಷ್ಟು ಮಾಹಿತಿ ಸಿಗುವ ಕನ್ನಡದ ಜಾಲತಾಣವೊಂದನ್ನು ರೂಪಿಸಬೇಕು ಎನ್ನುವ ಕನಸಿಗೆ ಈಗ ಹತ್ತು ವರ್ಷ. ಕಳೆದ ದಶಕದ ಮಧ್ಯಭಾಗದಲ್ಲಿ ಪರಿಚಿತರಾದ ಹೆಸರಾಂತ ವಿಜ್ಞಾನ ಬರಹಗಾರ ಕೊಳ್ಳೇಗಾಲ ಶರ್ಮರೂ ನಾನೂ ಮಾತನಾಡುವಾಗ ಹೀಗೊಂದು ತಾಣ ಇರಬೇಕು ಎನ್ನುವ ಪ್ರಸ್ತಾಪ ಬಹಳಷ್ಟು ಬಾರಿ ಬಂದುಹೋಗಿತ್ತು.

ಈ ಪ್ರಯೋಗವನ್ನು ಒಮ್ಮೆ ಪ್ರಯತ್ನಿಸಿ ನೋಡಿಯೇಬಿಡೋಣ ಎಂದು ಹೊರಟಾಗ ತಾಣದ ಹೆಸರೇನಿರಬೇಕು ಎನ್ನುವ ಪ್ರಶ್ನೆ ಬಂತು. ಆಗ ನೆರವಾದವನು ಮಿತ್ರ ನಂದಕಿಶೋರ್. ಅವನು ಥಟ್ಟನೆ ಹೇಳಿದ ಹೆಸರೇ 'ಇಜ್ಞಾನ'. ಏನನ್ನೂ ಹೇಳದೆ ಏನೇನೆಲ್ಲ ಹೇಳುವ ಹೆಸರು ಅದು. ಇದೇನು 'ವಿಜ್ಞಾನ'ದ ಗ್ರಾಮ್ಯ ಅಪಭ್ರಂಶವೇ, ಅಥವಾ ವಿದ್ಯುನ್ಮಾನ (ಇ-) ಜ್ಞಾನಕ್ಕೆ ನೀವಿಟ್ಟ ಹೆಸರೇ ಎಂದು ಹಲವರು ಕೇಳಿದ್ದುಂಟು.

ಹೆಸರಿನ ಅರ್ಥ ಏನೇ ಇರಲಿ. 'ಇಜ್ಞಾನ'ವೆಂಬ ಹೆಸರಿಟ್ಟುಕೊಂಡು ಶುರುವಾದ, ವಿಜ್ಞಾನ-ತಂತ್ರಜ್ಞಾನಗಳ ಬಗ್ಗೆ ಕನ್ನಡದಲ್ಲಿ ನಿರಂತರವಾಗಿ ಮಾಹಿತಿ ಹಂಚಿಕೊಳ್ಳುತ್ತ ಬಂದ ತಾಣಕ್ಕೆ ಇದೀಗ ಹತ್ತನೆಯ ವರ್ಷದ ಸಂಭ್ರಮ.


ಇಜ್ಞಾನವೆಂಬ ತಾಣವನ್ನು ಪ್ರಾರಂಭಿಸಿದಾಗ ಇದು ಹೀಗೆಯೇ ಇರಬೇಕು ಎನ್ನುವ ಉದ್ದೇಶವೇನೂ ಇರಲಿಲ್ಲ. ಹಾಗೆ ನೋಡಿದರೆ ಇಜ್ಞಾನ ಇದುವರೆಗೂ ನಡೆದುಕೊಂಡು ಬಂದಿರುವುದು ವಿವಿಧ ಪ್ರಯೋಗಗಳನ್ನು ಆಧರಿಸಿಕೊಂಡೇ. ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಜ್ಞಾನ ಲೇಖನ - ಅಂಕಣಗಳು ಒಂದೇ ಕಡೆ ಸಿಗುವಂತಾಗಬೇಕೆಂಬ ಸರಳ ಉದ್ದೇಶವಿರಲಿ, ವಿಜ್ಞಾನದ ಇ-ಪತ್ರಿಕೆಯೊಂದು ಅಂತರಜಾಲದಲ್ಲಿ ಉಚಿತವಾಗಿ ಲಭ್ಯವಿರಬೇಕೆಂಬ ದೊಡ್ಡ ಆಸೆಯೇ ಇರಲಿ, ಇಜ್ಞಾನ ಹಲವು ಪ್ರಯೋಗಗಳಿಗೆ ಸಾಕ್ಷಿಯಾಗಿದೆ.

ನಡೆಸಿದ ಪ್ರಯೋಗಗಳಲ್ಲಿ ಕೆಲವು ಯಶಸ್ವಿಯಾಗಿರುವುದು ಖುಷಿಯ ವಿಷಯ. ಅಷ್ಟೇನೂ ಯಶಸ್ವಿಯಾಗದ ಪ್ರಯೋಗಗಳು ನೀಡಿದ ಅನುಭವವೂ ಕಡಿಮೆ ಮಹತ್ವದ್ದೇನಲ್ಲ. ಇಂತಹ ಎಲ್ಲ ಪ್ರಯತ್ನಗಳಲ್ಲೂ ಕನ್ನಡದ ಹಿರಿಯ ವಿಜ್ಞಾನ ಬರಹಗಾರರು ಇಜ್ಞಾನದ ಜೊತೆಗೆ ನಿಂತಿರುವುದು, ಪ್ರೋತ್ಸಾಹ ನೀಡಿರುವುದು ಗಮನಾರ್ಹ. ಮುಂದೊಂದು ದಿನ ಇಜ್ಞಾನದಲ್ಲಿ ಎಲ್ಲ ಬರಹಗಾರರ ಲೇಖನಗಳೂ ಸಿಗುವಂತಾಗಬೇಕೆಂಬ ಮಹತ್ವಾಕಾಂಕ್ಷೆಗೆ ಒತ್ತಾಸೆಯಾಗಿರುವುದು ಇದೇ ಸಂಗತಿ. ಎಲ್ಲ ಬರಹಗಾರರೂ ಇಜ್ಞಾನಕ್ಕೆ (ಅಥವಾ ಇಂತಹ ಬೇರೆ ಯಾವುದೇ ಪ್ರಯತ್ನಕ್ಕೆ) ತಮ್ಮ ಲೇಖನಗಳನ್ನು ನೀಡಿದರೆ ಇಜ್ಞಾನದಲ್ಲಿ ವಿಜ್ಞಾನಕ್ಕಿಂತ ತಂತ್ರಜ್ಞಾನಕ್ಕೆ ಮಹತ್ವ ಹೆಚ್ಚು ಎನ್ನುವ ಆಪಾದನೆಯೂ ದೂರವಾಗುತ್ತದೆ!

ವಿಜ್ಞಾನದ ಬರಹಗಳನ್ನು, ಅದೂ ಅಂತರಜಾಲದ ಮೂಲಕ ಯಾರು ತಾನೇ ಓದುತ್ತಾರೆ ಎನ್ನುವಂತಹ ಪ್ರಶ್ನೆಗಳು ಈ ಪಯಣದಲ್ಲಿ ಹಲವಾರು ಬಾರಿ ಎದುರಾಗಿವೆ. ಓದುಗರಿಂದ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ (ಕೆಲವೊಮ್ಮೆ ಯಾವ ಪ್ರತಿಕ್ರಿಯೆಯೂ!) ಬಾರದಿದ್ದಾಗ ಈ ಪ್ರಶ್ನೆ ನನ್ನಲ್ಲೇ ಮೂಡಿದ್ದೂ ಇದೆ. ಆದರೆ ಜಾಲತಾಣವನ್ನು ಬಳಸುವವರ, ಫೇಸ್‌ಬುಕ್ ಅಥವಾ ಮೊಬೈಲ್ ಆಪ್ ಮೂಲಕ ಇಜ್ಞಾನದ ಲೇಖನಗಳನ್ನು ಓದುವವರ ಅಂಕೆಸಂಖ್ಯೆಗಳನ್ನು ನೋಡಿದಾಗ ಈ ಪ್ರಶ್ನೆ ದೂರವಾಗುತ್ತದೆ, ಮನಸ್ಸಿಗೆ ಒಂದು ಬಗೆಯ ನೆಮ್ಮದಿ ಸಿಗುತ್ತದೆ. ತಂತ್ರಜ್ಞಾನದ ಹೊಸ ವಿಷಯಗಳನ್ನು ಮಂಗಳೂರು - ಮಡಿಕೇರಿಯಿಂದ ಕಲಬುರಗಿ - ಬೀದರ್‌ವರೆಗಿನ ಅದೆಷ್ಟೋ ಮಂದಿ ಆಸಕ್ತಿಯಿಂದ ಓದುತ್ತಿದ್ದಾರೆ ಎನ್ನುವ ಒಂದೇ ಅಂಶ ಇನ್ನಷ್ಟು ಬರೆಯಲು, ಹೊಸ ಪ್ರಯೋಗಗಳಿಗೆ ಕೈಹಾಕಲು ಪ್ರೇರಣೆಯಾಗುತ್ತದೆ.

ಇಷ್ಟು ವರ್ಷಗಳಲ್ಲಿ ಇಜ್ಞಾನ ಏನಾಗಬಹುದಿತ್ತೋ ಅದೆಲ್ಲ ಆಗಿದೆಯೇ ಎಂದು ಕೇಳಿದರೆ ಅದಕ್ಕೆ "ಬಹುಶಃ ಇಲ್ಲ" ಎನ್ನುವುದೇ ಉತ್ತರ. ಪೂರ್ಣಾವಧಿ ಸಮಯ ಕೊಡಲು ಆಗದ ಪರಿಸ್ಥಿತಿಯಲ್ಲಿ ಇಜ್ಞಾನ ಇನ್ನೂ ಬೆಳವಣಿಗೆಯ ಹಂತದಲ್ಲೇ ಇದೆ. ಮುಂದಿನ ದಿನಗಳಲ್ಲಿ ಇಜ್ಞಾನ ಒಂದು ಸಂಸ್ಥೆಯಾಗಿ ಬೆಳೆದಾಗ, ವಿಜ್ಞಾನ-ತಂತ್ರಜ್ಞಾನದ ಎಲ್ಲ ಆಯಾಮಗಳನ್ನು ಎಲ್ಲ ಮಾಧ್ಯಮಗಳಲ್ಲೂ ನೀಡುವಂತಾದಾಗಲಷ್ಟೇ ಒಂದು ಹಂತ ತಲುಪಿದಂತೆ. ಓದುಗ ಸಮುದಾಯ ಬೇರೆ ರೀತಿಯಲ್ಲಿ ಸ್ಪಂದಿಸುವುದು ಹಾಗಿರಲಿ, ಓದಿದ್ದು ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದು ಹೇಳುವುದರಲ್ಲೂ ಜಿಪುಣತನ ತೋರಿಸಿದರೆ ಈ ಹಂತ ತಲುಪಲು ಬೇಕಾದ ಸಮಯ ಮಾತ್ರ ಹೆಚ್ಚುತ್ತಲೇ ಹೋಗುತ್ತದೆ. ಈ ಸ್ಪಷ್ಟ ಅರಿವನ್ನು ಇಟ್ಟುಕೊಂಡೇ ಇಜ್ಞಾನದ ಪಯಣ ಮುಂದುವರೆಯುತ್ತದೆ. ಈ ಪ್ರಯಾಣದಲ್ಲಿ ನಿಮ್ಮೆಲ್ಲರ ಒಡನಾಟ ನಮಗೆ ಸಿಗಲಿ.

ಮೇ ೮, ೨೦೧೬ರ ವಿಶ್ವವಾಣಿಯಲ್ಲಿ ಪ್ರಕಟವಾದ ಲೇಖನ

3 ಕಾಮೆಂಟ್‌ಗಳು:

Chinnamma Baradhi ಹೇಳಿದರು...

ಟಿ.ಜಿ.ಶ್ರೀನಿಧಿಯವರ ಬಳಗಕ್ಕೆ ಇಜ್ಞಾನದ ಹತ್ತನೆಯ ವರ್ಷದ ಶುಭಾಶಯಗಳು.
ನಾನು ಮತ್ತು ನನ್ನ ಇತರ ಹತ್ತು ಗೆಳತಿಯರು ನಿಮ್ಮ ಇಜ್ಞಾನ ಬರಹದ ಅಭಿಮಾನಿಗಳು.
ಆದರೆ ಆಗಾಗ ಪ್ರತಿಕ್ರಿಯಿಸುವುದು ನಾನು ಮಾತ್ರ!
ನಿಮ್ಮ ದೋಣಿ ಸಾಗಲಿ ಮು೦ದೆ ಹೋಗಲಿ ದೂರ ತೀರವ ಸೇರಲಿ......
ದೋಣಿ ದೊಡ್ಡ ಹಡಗಾಗಲಿ ಎ೦ಬ ಆಶಯ ನಮ್ಮೆಲ್ಲರದು.

ramesh jakkappanavar ಹೇಳಿದರು...

Congaratulations ! You have done a great job !

HARISH ಹೇಳಿದರು...

ಲೇಖನಗಳು ಉತ್ತಮವಾಗಿ ಮೂಡಿಬರುತ್ತಿವೆ. ನಿಮ್ಮಲ್ಲರ ಬರಹಕ್ಕೆ ದನ್ಯವಾದಗಳು..

badge