ಸೋಮವಾರ, ಮೇ 2, 2016

ಬಿಟ್‌ಕಾಯಿನ್ ಸೃಷ್ಟಿಕರ್ತ ಮರೆಯಿಂದ ಹೊರಬಂದನೇ?


ಬಿಟ್‌ಕಾಯಿನ್ ಎನ್ನುವುದು ಅಂತರಜಾಲ ಲೋಕದಲ್ಲಿ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ವರ್ಚುಯಲ್ ಹಣ. ಭಾರತದಲ್ಲಿ ರೂಪಾಯಿ, ಅಮೆರಿಕಾದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಇದು. ಅಂತರಜಾಲ ಹೇಗೆ ಮಿಥ್ಯಾಲೋಕವೋ ಅಲ್ಲಿ ಚಲಾವಣೆಯಾಗುವ ಈ 'ಬಿಟ್‌ಕಾಯಿನ್' ಕೂಡ ವರ್ಚುಯಲ್, ಅಂದರೆ ಕಣ್ಣಿಗೆ ಕಾಣದ, ಕರೆನ್ಸಿಯೇ.

ಈಚಿನ ಕೆಲ ವರ್ಷಗಳಲ್ಲಿ ಈ ಬಿಟ್‌ಕಾಯಿನ್ ಸಾಕಷ್ಟು ಸುದ್ದಿಮಾಡಿದೆ. ಈ ಬಗ್ಗೆ ಇಜ್ಞಾನವೂ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಲೇಖನಗಳು, ಸುದ್ದಿಗಳು ಪ್ರಕಟವಾಗಿವೆ. [ಓದಿ: ಕಳೆದ ಹಾರ್ಡ್‌ಡಿಸ್ಕ್ ನೆಪದಲ್ಲಿ ಕಾಣದ ದುಡ್ಡಿನ ಕುರಿತು...]

ಬಿಟ್‌ಕಾಯಿನ್ ಬಗ್ಗೆ ಎಷ್ಟೆಲ್ಲ ಮಾಹಿತಿ ಲಭ್ಯವಿದ್ದರೂ ಅದನ್ನು ಸೃಷ್ಟಿಸಿದ್ದು ಯಾರು ಎನ್ನುವ ಬಗ್ಗೆ ಮಾತ್ರ ಯಾವ ವಿಷಯವೂ ತಿಳಿದಿರಲಿಲ್ಲ. ಸಟೋಶಿ ನಕಾಮೋಟೋ ಎಂಬ ಹೆಸರಿನ ಅಜ್ಞಾತ ವ್ಯಕ್ತಿಯನ್ನೇ ಈವರೆಗೂ ಬಿಟ್‌ಕಾಯಿನ್ ಸೃಷ್ಟಿಕರ್ತ ಎಂದು ಗುರುತಿಸಲಾಗುತ್ತಿತ್ತು. ಈ ವ್ಯಕ್ತಿ ಯಾರಿರಬಹುದು ಎಂದು ಹುಡುಕಲು ಹೋಗಿ ಯಾರುಯಾರಿಗೋ ಬಿಟ್‌ಕಾಯಿನ್ ಸೃಷ್ಟಿಕರ್ತನೆಂಬ ಪಟ್ಟಕಟ್ಟಿದವರು ಬೇಸ್ತುಬಿದ್ದ ಘಟನೆಗಳೂ ನಡೆದಿದ್ದವು.

ಈಗ, ಬಿಟ್‌ಕಾಯಿನ್ ವ್ಯವಸ್ಥೆ ರೂಪುಗೊಂಡು ವರ್ಷಗಳೇ ಕಳೆದಮೇಲೆ ಈ ಸಟೋಶಿ ನಕಾಮೋಟೋ ಎಂಬಾತ ನಿಜಕ್ಕೂ ಯಾರು ಎನ್ನುವುದು ಪತ್ತೆಯಾಗಿದೆಯಂತೆ. ಆಸ್ಟ್ರೇಲಿಯಾದ ಕ್ರೇಗ್ ವೈಟ್ ಎಂಬ ವ್ಯಕ್ತಿಯೇ ಬಿಟ್‌ಕಾಯಿನ್ ಸೃಷ್ಟಿಕರ್ತ ಎನ್ನುವುದು ಇದೀಗ ಖಚಿತವಾಗಿದೆ ಎಂದು ಬಿಬಿಸಿ ವರದಿಮಾಡಿದೆ [ವರದಿ]. ಹಿಂದಿನ ಎಲ್ಲ ಸನ್ನಿವೇಶಗಳಿಗಿಂತ ಈ ಬಾರಿಯ ಸುದ್ದಿ ನಿಜವಿರುವ ಸಾಧ್ಯತೆ ಹೆಚ್ಚು ಎನ್ನುವ ಮಾತಿದೆಯಾದರೂ ಇದೂ ಸುಳ್ಳಿರಬಹುದು ಎನ್ನುವವರೂ ಇದ್ದಾರೆ.

ಸದ್ಯ (ಮೇ ೧, ೨೦೧೬ರಲ್ಲಿ ಇದ್ದಂತೆ) ಒಂದು ಬಿಟ್‌ಕಾಯಿನ್‌ನ ಮೌಲ್ಯ ಸುಮಾರು ಮೂವತ್ತು ಸಾವಿರ ರೂಪಾಯಿಗಳು. ಬಿಟ್‌ಕಾಯಿನ್ ಸೃಷ್ಟಿಕರ್ತನ ಬಳಿ ಸುಮಾರು ಹತ್ತು ಲಕ್ಷ ಬಿಟ್‌ಕಾಯಿನ್‌ಗಳಿವೆಯಂತೆ!

ಅಪ್‌ಡೇಟ್, ೨೨ ಜೂನ್ ೨೦೧೬: ಬಿಬಿಸಿ ಸೇರಿದಂತೆ ಪ್ರಮುಖ ಮಾಧ್ಯಮಗಳ ಪ್ರಕಾರ ಈ ಮನುಷ್ಯ (ಕ್ರೇಗ್ ವೈಟ್) ಬಿಟ್‌ಕಾಯಿನ್ ಸೃಷ್ಟಿಕರ್ತ ಇರಲಿಕ್ಕಿಲ್ಲ ಎನ್ನುವ ಅಭಿಪ್ರಾಯ ಇದೀಗ ವ್ಯಾಪಕವಾಗಿದೆ.

ಕಾಮೆಂಟ್‌ಗಳಿಲ್ಲ:

badge