ಭಾನುವಾರ, ಮೇ 29, 2016

ಜೆನ್‌ಫೋನ್ ಮ್ಯಾಕ್ಸ್ ಇದೀಗ ಇನ್ನಷ್ಟು ಶಕ್ತಿಶಾಲಿ!

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನಿನ ಬ್ಯಾಟರಿ ಕೈಕೊಟ್ಟಾಗ ಬಳಸಲೆಂದು ಪವರ್ ಬ್ಯಾಂಕ್ ಇಟ್ಟುಕೊಂಡಿರುವುದು ನಮಗೆಲ್ಲ ಅಭ್ಯಾಸವಾಗಿದೆ. ಆ ಪವರ್‌ಬ್ಯಾಂಕ್ ನಮ್ಮ ಫೋನಿನಲ್ಲೇ ಇರುವಂತಿದ್ದರೆ? ನಮ್ಮ ಗೆಳೆಯರ ಫೋನಿನ ಬ್ಯಾಟರಿಯನ್ನು ಅದರಿಂದಲೇ ಚಾರ್ಜ್ ಮಾಡುವಂತಿದ್ದರೆ?

ಐದು ಸಾವಿರ ಎಂಎ‌ಎಚ್ ಸಾಮರ್ಥ್ಯದ ಬ್ಯಾಟರಿಯೊಡನೆ ಈ ಕನಸನ್ನು ನನಸಾಗಿಸಿರುವ ಏಸಸ್ ಜೆನ್‌ಫೋನ್ ಮ್ಯಾಕ್ಸ್ ಮೊಬೈಲಿನ ಪರಿಚಯ ಈ ಹಿಂದೆ ಇಜ್ಞಾನ ಡಾಟ್ ಕಾಮ್‌ನಲ್ಲಿ ಪ್ರಕಟವಾಗಿತ್ತು [ಮೊಬೈಲೂ ಹೌದು, ಪವರ್‌ಬ್ಯಾಂಕೂ ಹೌದು!]. ಈ ವಿಶಿಷ್ಟ ಮೊಬೈಲಿನ ಹೊಸ ಆವೃತ್ತಿಯನ್ನು ಇದೀಗ ಪರಿಚಯಿಸಲಾಗಿದೆ ಎನ್ನುವುದು ಇಂದಿನ ಸುದ್ದಿ.

ಏಸಸ್ ಜೆನ್‌ಫೋನ್ ಮ್ಯಾಕ್ಸ್‌ನ ಈ ಹೊಸ ಆವೃತ್ತಿ ಹೆಚ್ಚು ಶಕ್ತಿಶಾಲಿ ಪ್ರಾಸೆಸರ್, ಹೆಚ್ಚು ಶೇಖರಣಾ ಸಾಮರ್ಥ್ಯ, ಹೆಚ್ಚು ಸಾಮರ್ಥ್ಯದ ರ್‍ಯಾಮ್ ಆಯ್ಕೆಗಳು ಹಾಗೂ ಆಂಡ್ರಾಯ್ಡ್‌ನ ಲೇಟೆಸ್ಟ್ ಆವೃತ್ತಿಯೊಡನೆ (೬.೦.೧, ಮಾರ್ಶ್‌ಮೆಲ್ಲೋ) ಮಾರುಕಟ್ಟೆಗೆ ಬಂದಿದೆ.

ಈ ಹಿಂದಿನ ಮಾದರಿಯಲ್ಲಿದ್ದ ಒಂದು ಗಿಗಾಹರ್ಟ್ಸ್ ಸಾಮರ್ಥ್ಯದ ಸ್ನಾಪ್‌ಡ್ರಾಗನ್ ೪೧೦ ಕ್ವಾಡ್-ಕೋರ್ ಪ್ರಾಸೆಸರ್ ಬದಲಿಗೆ ಹೊಸ ಆವೃತ್ತಿಯಲ್ಲಿ ೧.೫ ಗಿಗಾಹರ್ಟ್ಸ್‌ನ ಸ್ನಾಪ್‌ಡ್ರಾಗನ್ ೬೧೫ ಆಕ್ಟಾಕೋರ್ ಪ್ರಾಸೆಸರ್ ಬಳಸಲಾಗಿದೆ. ೧೬ ಜಿಬಿ ಇದ್ದ  ಶೇಖರಣಾ ಸಾಮರ್ಥ್ಯ (ಇಂಟರ್ನಲ್ ಮೆಮೊರಿ) ಇದೀಗ ೩೨ ಜಿಬಿ ಆಗಿದೆ. ಅಷ್ಟೇ ಅಲ್ಲ, ಮೂರು ಜಿಬಿ ರ್‍ಯಾಮ್‌ನ ಹೊಸದೊಂದು ಆಯ್ಕೆಯನ್ನೂ ಬಳಕೆದಾರರಿಗೆ ನೀಡಲಾಗಿದೆ. ಎರಡು ಜಿಬಿ ರ್‍ಯಾಮ್ ಇರುವ ಹೊಸ ಆವೃತ್ತಿಯ ಮ್ಯಾಕ್ಸ್ ಬೆಲೆ ರೂ. ೯,೯೯೯ ಹಾಗೂ ಮೂರು ಜಿಬಿ ರ್‍ಯಾಮ್ ಆವೃತ್ತಿಯ ಬೆಲೆ ರೂ. ೧೨,೯೯೯. ಈ ಹಿಂದೆ ಪರಿಚಯಿಸಲಾಗಿದ್ದ ಆವೃತ್ತಿಯ ಬೆಲೆಯಲ್ಲಿ ಇದೀಗ ಒಂದು ಸಾವಿರ ರೂಪಾಯಿಗಳಷ್ಟು ಇಳಿಕೆ ಕಂಡಿದೆ (ಹೊಸ ಬೆಲೆ ರೂ. ೮,೯೯೯).


ಉಳಿದಂತೆ ೧೨೮೦ * ೭೨೦ ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ ೫.೫ ಇಂಚಿನ ಐಪಿಎಸ್ ಪರದೆ ಈ ಮೊಬೈಲಿನಲ್ಲಿದೆ (ಫುಲ್ ಎಚ್‌ಡಿ ಅಲ್ಲ). ಚಿತ್ರ ಹಾಗೂ ವೀಡಿಯೋ‌ಗಳು ಪರದೆಯ ಮೇಲೆ ಮೂಡುವ ಗುಣಮಟ್ಟ ಚೆನ್ನಾಗಿದೆ. ಪರದೆಯ  ಹೊಳಪು (ಬ್ರೈಟ್‌ನೆಸ್) ಅತಿಯಾಯಿತು ಎನ್ನಿಸಿದರೆ 'ಬ್ಲೂಲೈಟ್ ಫಿಲ್ಟರ್' ಬಳಸಿ ಕಣ್ಣಿಗೆ ಹಿತವಾಗುವಂತೆ ಮಾಡಿಕೊಳ್ಳುವ ಆಯ್ಕೆಯೂ ಇದೆ.

ಈ ಫೋನಿನಲ್ಲಿ ಆಂಡ್ರಾಯ್ಡ್‌ನ ಹೊಸ ಆವೃತ್ತಿಯನ್ನು (೬.೦.೧) ಈಗಾಗಲೇ ಅಳವಡಿಸಲಾಗಿರುವುದರಿಂದ ಮಾರ್ಶ್‌ಮೆಲ್ಲೋ ಅಪ್‌ಡೇಟ್ ಯಾವಾಗ ಬರುತ್ತದೆ ಎಂದು ಕಾಯುವ ಅಗತ್ಯವಿಲ್ಲ. ಕಾರ್ಯಾಚರಣ ವ್ಯವಸ್ಥೆಯ ಮೇಲುಹೊದಿಕೆಯಾಗಿ ಏಸಸ್‌ನದೇ 'ಜೆನ್ ಯುಐ' ಇದೆ.

ಏಸಸ್ ಸಂಸ್ಥೆ ಹೇಳುವ ಪ್ರಕಾರ ಪೂರ್ತಿ ಚಾರ್ಜ್ ಆದ ಬ್ಯಾಟರಿಯಿಂದ ಮೂವತ್ತೇಳೂವರೆ ಗಂಟೆ ಕಾಲ ಫೋನಿನಲ್ಲಿ ಮಾತನಾಡಬಹುದಂತೆ. ಇಷ್ಟೆಲ್ಲ ಸಾಮರ್ಥ್ಯದ ಬ್ಯಾಟರಿ ಇರುವುದರಿಂದ ಫೋನಿನ ತೂಕ ಕೊಂಚವೇ ಜಾಸ್ತಿಯಿದೆ (೨೦೨ ಗ್ರಾಮ್). ಸರಿಸುಮಾರು ಇದೇ ಬೆಲೆಯ ಫೋನುಗಳು ೧೫೦ರಿಂದ ೧೭೦ ಗ್ರಾಮ್ ತೂಗುತ್ತವೆ. ಅವುಗಳಿಗಿಂತ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಇಲ್ಲಿದೆ ಎನ್ನುವ ಅಂಶದ ಹಿನ್ನೆಲೆಯಲ್ಲಿ ಇದು ತೀರಾ ದೊಡ್ಡ ಸಮಸ್ಯೆಯೆಂದೇನೂ ಅನ್ನಿಸುವುದಿಲ್ಲ. ಇಂದಿನ ಅನೇಕ ಫೋನುಗಳಂತೆ ಜೆನ್‌ಫೋನ್ ಮ್ಯಾಕ್ಸ್‌ನಲ್ಲೂ ಬ್ಯಾಟರಿ ಹೊರತೆಗೆಯುವಂತಿಲ್ಲ.

ಹಿಂಬದಿ ರಕ್ಷಾಕವಚ ಪ್ಲಾಸ್ಟಿಕ್‌ನದು; ನೋಡಲು ಲೆದರ್‌ನಂತೆ ಕಾಣುವ ವಿನ್ಯಾಸ ಚೆನ್ನಾಗಿದೆ. ಕಪ್ಪು, ಕಿತ್ತಳೆ ಹಾಗೂ ನೀಲಿ ಬಣ್ಣಗಳಲ್ಲಿ ಇದು ಲಭ್ಯ. ಕವಚದ ಮೇಲ್ಮೈಯನ್ನೂ ಲೆದರ್‌ನಂತೆಯೇ ಒರಟಾಗಿಸಿರುವುದರಿಂದ ಸುಲಭಕ್ಕೆ ಕೈಜಾರುವ ಅಪಾಯವೂ ಇಲ್ಲ. ವಾಲ್ಯೂಮ್ ಬಟನ್ ಹಾಗೂ ಆನ್/ಆಫ್ ಬಟನ್ ಫೋನಿನ ಬಲಭಾಗದಲ್ಲಿದೆ. ಮೈಕ್ರೋ ಯುಎಸ್‌ಬಿ ಪೋರ್ಟ್ ಫೋನಿನ ಕೆಳಭಾಗದಲ್ಲಿದ್ದರೆ ಇಯರ್‌ಫೋನಿನ ಕಿಂಡಿ ಮೇಲುಗಡೆ ಇದೆ. ಫೋನಿನ ಜೊತೆ ಇಯರ್‌ಫೋನ್ ಕೊಡುವುದಿಲ್ಲ, ಹಾಗಾಗಿ ಎಫ್‌ಎಂ - ಎಂಪಿ೩ಗಳನ್ನೆಲ್ಲ ಕೇಳಲು ನಿಮ್ಮದೇ ಇಯರ್‌ಫೋನ್ ಬಳಸಬೇಕು.ಎರಡು ಸಿಮ್‌ಕಾರ್ಡುಗಳ ಜೊತೆ ಈ ಫೋನಿನಲ್ಲಿ ೬೪ ಜಿಬಿವರೆಗಿನ ಮೈಕ್ರೋ ಎಸ್‌ಡಿ ಕಾರ್ಡನ್ನೂ ಬಳಸಬಹುದು. ಎರಡನೇ ಸಿಮ್ ಅಥವಾ ಮೈಕ್ರೋ ಎಸ್‌ಡಿ ಎನ್ನುವ ನಿರ್ಬಂಧ ಇಲ್ಲದಿರುವುದು ಬಳಕೆದಾರರಿಗೆ ನೆರವಾಗುವ ಅಂಶ.

ಮೊಬೈಲಿನ ಜೊತೆಗೆ ಚಾರ್ಜರ್, ಡೇಟಾ ಕೇಬಲ್ (ಚಾರ್ಜರ್ ಜೊತೆಗೂ ಇದನ್ನೇ ಬಳಸಬೇಕು) ಹಾಗೂ ಯುಎಸ್‌ಬಿ ಆನ್-ದ-ಗೋ (ಓಟಿಜಿ) ಕೇಬಲ್ಲುಗಳನ್ನು ನೀಡಲಾಗಿದೆ (ಬೇರೊಂದು ಫೋನನ್ನು ಚಾರ್ಜ್ ಮಾಡಲು ಓಟಿಜಿ ಕೇಬಲನ್ನು ಬಳಸಬಹುದು; ಪೆನ್‌ಡ್ರೈವ್ - ಕೀಬೋರ್ಡ್ ಇತ್ಯಾದಿಗಳನ್ನು ಸಂಪರ್ಕಿಸಲೂ ಇದು ಉಪಯುಕ್ತ). ಭಾರೀ ಸಾಮರ್ಥ್ಯದ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಬಲ್ಲ ಫಾಸ್ಟ್ ಚಾರ್ಜರ್ ನೀಡದಿರುವುದೊಂದು ಕೊರತೆ - ಆದರೆ ಹೆಚ್ಚು ವೇಗವಾಗಿ ಜಾರ್ಜ್ ಮಾಡುವ ಬೇರೆಯ ಚಾರ್ಜರ್ (ಉದಾ: ೨.೧ ಆಂಪಿಯರ್‌ ಕರೆಂಟ್ ನೀಡುವಂತದ್ದು) ಕೊಂಡರೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಈ ಫೋನನ್ನು ಪವರ್‌ಬ್ಯಾಂಕ್‌ನಂತೆ ಬಳಸಿ ಚಾರ್ಜ್ ಮಾಡುವಾಗಲೂ ಅಷ್ಟೆ, ಇನ್ನೊಂದು ಫೋನ್ ಚಾರ್ಜ್ ಆಗುವುದು ಕೊಂಚ ನಿಧಾನ.

ಜೆನ್‌ಫೋನ್ ಮ್ಯಾಕ್ಸ್‌ನ ಪ್ರಾಥಮಿಕ ಕ್ಯಾಮೆರಾ ೧೩ ಮೆಗಾಪಿಕ್ಸೆಲಿನದು, ಸೆಲ್ಫಿ ಕ್ಯಾಮೆರಾ ೫ ಮೆಗಾಪಿಕ್ಸೆಲಿನದು. ಪ್ರಾಥಮಿಕ ಕ್ಯಾಮೆರಾ ಜೊತೆ ಡ್ಯುಯಲ್-ಎಲ್‌ಇಡಿ ಫ್ಲ್ಯಾಶ್ ಹಾಗೂ ಲೇಸರ್ ಫೋಕಸ್ ಸೌಲಭ್ಯ ಇದೆ. ಜೆನ್‌ಫೋನ್ ಸರಣಿಯ ಹೈಲೈಟ್ ಎಂದೇ ಹೇಳಬಹುದಾದ 'ಪಿಕ್ಸೆಲ್‌ಮಾಸ್ಟರ್' ತಂತ್ರಜ್ಞಾನ ಇಲ್ಲೂ ಬಳಕೆಯಾಗಿರುವುದರಿಂದ ಒಳ್ಳೆಯ ಚಿತ್ರಗಳನ್ನು ಕ್ಲಿಕ್ಕಿಸಬಹುದು. ಕ್ಯಾಮೆರಾ ಆಪ್‌ನಲ್ಲಿ ಹಲವು ಉತ್ತಮ ಆಯ್ಕೆಗಳಿವೆ: ಸ್ವಯಂಚಾಲಿತ (ಆಟೋ) ಮೋಡ್ ಅಷ್ಟೇ ಅಲ್ಲದೆ ಎಚ್‌ಡಿಆರ್, ನೈಟ್, ಲೋ ಲೈಟ್, ಪನೋರಮಾ, ಡೆಪ್ತ್ ಆಫ್ ಫೀಲ್ಡ್ ಮುಂತಾದ ಹಲವು ಮೋಡ್‌ಗಳಲ್ಲಿ ನಾವು ಫೋಟೋ ಕ್ಲಿಕ್ಕಿಸುವುದು ಸಾಧ್ಯ. ಪೂರ್ವನಿರ್ಧಾರಿತ ಆಯ್ಕೆಗಳು ಬೇಡವೆಂದರೆ ಡಿಎಸ್‌ಎಲ್‌ಆರ್‌ನಲ್ಲಿ ಬಳಸುವಂತೆ ಮ್ಯಾನ್ಯುಯಲ್ ಮೋಡ್‌ ಕೂಡ ಉಪಯೋಗಿಸಬಹುದು. ಸೆಲ್ಫಿ ಕ್ಯಾಮೆರಾದಲ್ಲೂ ಪನೋರಮಾ ಆಯ್ಕೆ ಬಳಸುವುದು ಸಾಧ್ಯ.

ಮೊದಲ ಆವೃತ್ತಿಯ ಪರಿಚಯದಲ್ಲಿ ಹೇಳಿದಂತೆ ಕೊಡುವ ಹಣಕ್ಕೆ ಇದು ಖಂಡಿತಾ ಒಳ್ಳೆಯ ಆಯ್ಕೆ. ಮೊಬೈಲನ್ನು ಪದೇಪದೇ ಚಾರ್ಜ್ ಮಾಡುವ ಪರದಾಟದಿಂದ ತಪ್ಪಿಸಿಕೊಳ್ಳಲು ಬಯಸುವವರು ಖಂಡಿತಾ ಪರಿಗಣಿಸಬಹುದಾದ ಫೋನ್ ಇದು.

ಜೆನ್‌ಫೋನ್ ಮ್ಯಾಕ್ಸ್ ಮೊಬೈಲನ್ನು ಫ್ಲಿಪ್‌ಕಾರ್ಟ್‌ ಮೂಲಕ ಕೊಳ್ಳಬಹುದು. ಜಾಲತಾಣದ ಕೊಂಡಿ ಇಲ್ಲಿದೆ.

1 ಕಾಮೆಂಟ್‌:

karunakar patgar ಹೇಳಿದರು...

ಹತ್ತು ಸಾವಿರ ರೂಪಾಯಿಗಳ ಬಜೆಟ್ ನಲ್ಲಿ ಯಾವುದಾದರೂ ಉತ್ತಮ ಫೋನ್ ಬಗ್ಗೆ ತಿಳಿಸಿ.
ಲಾವಾ ಏಸಸ್ ೆಚ್

badge