ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ: 'ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!'

ಅಪ್ಪನ ಬೆಲೆ ಏನು ಗೊತ್ತೇ?

ಕೊಳ್ಳೇಗಾಲ ಶರ್ಮ

Frédéric SALEIN / Wikimedia Commons

ಮನೆ ಜಗಳದ ವಿಷಯ ಅಲ್ಲ ಬಿಡಿ. ಇದು ಜೀವಿವಿಜ್ಞಾನದ ವಿಸ್ಮಯ. ಹೌದು. ಜೀವಿಗಳಲ್ಲಿ ಗಂಡು ಹೆಣ್ಣು ಎನ್ನುವ ಭೇದವನ್ನು ಯಃಕಶ್ಚಿತ್ ಕೀಟಗಳಿಂದ ಮಾನವನವರೆಗೂ ಕಾಣುತ್ತೇವೆ. ಜೀವಿಗಳ ಬೆಳೆವಣಿಗೆ, ಉಳಿವಿಗೆ ಹೆಣ್ಣಿನ ಕೊಡುಗೆ ಏನೆಂಬುದನ್ನು ವಿವರಿಸಬೇಕಿಲ್ಲ. ನೂರಾರು ಸಂತಾನವನ್ನು ಹೆರುವ ಹೊಣೆ ಹೆಣ್ಣಿನದ್ದೇ. ಅದಕ್ಕೇ ಅದಕ್ಕೆ ಅಮ್ಮನ ಪಟ್ಟ. ಹಾಗಿದ್ದರೆ ಗಂಡಿನ ಪಾತ್ರವೇನು? ಕೇವಲ ಸಂತಾನಾಭಿವೃದ್ಧಿ ಮಾಡಲಿ ಎಂದು ಹೆಣ್ಣಿಗೆ ವೀರ್ಯಾಣುವನ್ನು ಕೊಡುವುದಷ್ಟೆ ಗಂಡಿನ ಕೆಲಸವೆ? ಅಥವಾ ಅದಕ್ಕಿಂತಲೂ ಹೆಚ್ಚಿನದೇನಾದರೂ ಇದೆಯೋ? ಇದು ಪ್ರಶ್ನೆ.

ಈ ಪ್ರಶ್ನೆಯೊಳಗೆ ಅಡಗಿದೆ ಅಪ್ಪನ ಕುರಿತ ಇನ್ನೊಂದು ಪ್ರಶ್ನೆ.

ಜೆನ್‌ಫೋನ್ ಮ್ಯಾಕ್ಸ್ ಇದೀಗ ಇನ್ನಷ್ಟು ಶಕ್ತಿಶಾಲಿ!

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನಿನ ಬ್ಯಾಟರಿ ಕೈಕೊಟ್ಟಾಗ ಬಳಸಲೆಂದು ಪವರ್ ಬ್ಯಾಂಕ್ ಇಟ್ಟುಕೊಂಡಿರುವುದು ನಮಗೆಲ್ಲ ಅಭ್ಯಾಸವಾಗಿದೆ. ಆ ಪವರ್‌ಬ್ಯಾಂಕ್ ನಮ್ಮ ಫೋನಿನಲ್ಲೇ ಇರುವಂತಿದ್ದರೆ? ನಮ್ಮ ಗೆಳೆಯರ ಫೋನಿನ ಬ್ಯಾಟರಿಯನ್ನು ಅದರಿಂದಲೇ ಚಾರ್ಜ್ ಮಾಡುವಂತಿದ್ದರೆ?

ಐದು ಸಾವಿರ ಎಂಎ‌ಎಚ್ ಸಾಮರ್ಥ್ಯದ ಬ್ಯಾಟರಿಯೊಡನೆ ಈ ಕನಸನ್ನು ನನಸಾಗಿಸಿರುವ ಏಸಸ್ ಜೆನ್‌ಫೋನ್ ಮ್ಯಾಕ್ಸ್ ಮೊಬೈಲಿನ ಪರಿಚಯ ಈ ಹಿಂದೆ ಇಜ್ಞಾನ ಡಾಟ್ ಕಾಮ್‌ನಲ್ಲಿ ಪ್ರಕಟವಾಗಿತ್ತು [ಮೊಬೈಲೂ ಹೌದು, ಪವರ್‌ಬ್ಯಾಂಕೂ ಹೌದು!]. ಈ ವಿಶಿಷ್ಟ ಮೊಬೈಲಿನ ಹೊಸ ಆವೃತ್ತಿಯನ್ನು ಇದೀಗ ಪರಿಚಯಿಸಲಾಗಿದೆ ಎನ್ನುವುದು ಇಂದಿನ ಸುದ್ದಿ.

ಏಸಸ್ ಜೆನ್‌ಫೋನ್ ಮ್ಯಾಕ್ಸ್‌ನ ಈ ಹೊಸ ಆವೃತ್ತಿ ಹೆಚ್ಚು ಶಕ್ತಿಶಾಲಿ ಪ್ರಾಸೆಸರ್, ಹೆಚ್ಚು ಶೇಖರಣಾ ಸಾಮರ್ಥ್ಯ, ಹೆಚ್ಚು ಸಾಮರ್ಥ್ಯದ ರ್‍ಯಾಮ್ ಆಯ್ಕೆಗಳು ಹಾಗೂ ಆಂಡ್ರಾಯ್ಡ್‌ನ ಲೇಟೆಸ್ಟ್ ಆವೃತ್ತಿಯೊಡನೆ (೬.೦.೧, ಮಾರ್ಶ್‌ಮೆಲ್ಲೋ) ಮಾರುಕಟ್ಟೆಗೆ ಬಂದಿದೆ.

ಇಜ್ಞಾನ ವಿಶೇಷ ಲೇಖನ: ಮಿದುಳು ಎಂಬ ಹೆಡ್ಡಾಫೀಸು

ರೋಹಿತ್ ಚಕ್ರತೀರ್ಥ

ಗಿರೀಶ ಕಾರ್ನಾಡರ "ಹಯವದನ" ನಾಟಕದಲ್ಲಿ ಒಂದು ಪ್ರಸಂಗ ಬರುತ್ತದೆ. ಕಪಿಲ ಮತ್ತು ದೇವದತ್ತ ಎಂಬ ಇಬ್ಬರು ಗೆಳೆಯರು ಕಾಳಿಯ ದೇಗುಲದಲ್ಲಿ ಕತ್ತಿ ಹಿರಿದು ಹೋರಾಡಿ ಪರಸ್ಪರರ ರುಂಡಗಳನ್ನು ಕಡಿದುಹಾಕುತ್ತಾರೆ. ದೇವದತ್ತನ ಪತ್ನಿ ಪದ್ಮಿನಿ ಅಲ್ಲಿಗೆ ಬಂದು, ಕಡಿದು ಚೆಲ್ಲಿದ ದೇಹಗಳನ್ನು ನೋಡಿ ಭಯಭೀತಳಾದಾಗ ಕಾಳಿ ಪ್ರತ್ಯಕ್ಷಳಾಗಿ, ಅವರಿಬ್ಬರ ರುಂಡಗಳನ್ನೂ ಮರಳಿ ದೇಹಗಳಿಗೆ ಜೋಡಿಸಿಟ್ಟರೆ ತಾನವರಿಗೆ ಜೀವ ಕೊಡುತ್ತೇನೆಂದು ಹೇಳುತ್ತಾಳೆ. ಗಡಿಬಿಡಿಯಲ್ಲಿ ಪದ್ಮಿನಿ ಕಪಿಲನ ತಲೆಯನ್ನು ದೇವದತ್ತನಿಗೂ ದೇವದತ್ತನದನ್ನು ಕಪಿಲನಿಗೂ ಜೋಡಿಸಿಡುತ್ತಾಳೆ. ಈ ಆಟವನ್ನು ನೋಡಿಯೂ ವಿಧಿಲಿಖಿತ ಎಂದು ಸುಮ್ಮನಿರುವ ಕಾಳಿ ಅವರಿಗೆ ಜೀವ ಕೊಟ್ಟುಬಿಡುತ್ತಾಳೆ. ಈಗ ಪದ್ಮಿನಿಯ ಗಂಡ ಯಾರು? ಕಪಿಲನೋ ದೇವದತ್ತನೋ? ಅಸಲಿಗೆ ಯಾರು ಕಪಿಲ ಯಾರು ದೇವದತ್ತ, ಎಂಬ ತಾತ್ತ್ವಿಕಸಮಸ್ಯೆ ಹುಟ್ಟುತ್ತದೆ. ಒಬ್ಬ ಋಷಿಯ ಬಳಿ ಹೋದಾಗ ಅವನು ಅಂಗಗಳಲ್ಲಿ ತಲೆಯೇ ಉತ್ತಮಾಂಗ. ಹಾಗಾಗಿ ದೇವದತ್ತನ ತಲೆಯಿರುವವನೇ ದೇವದತ್ತ ಎಂದು ತೀರ್ಪು ಕೊಡುತ್ತಾನೆ.

ಮನುಷ್ಯನಿಗೆ ತಲೆ ಎಷ್ಟು ಮುಖ್ಯ? ಅವನ ಅಸ್ತಿತ್ವಕ್ಕೆ ಅರ್ಥವಂತಿಕೆ ತರುವ ಭಾಗ ಯಾವುದು ಎಂಬ ಚರ್ಚೆ ಶತಶತಮಾನಗಳಿಂದ ನಡೆದುಬಂದಿದೆ.

ಅನ್ಯಗ್ರಹ ಜೀವಿಗಳು ಹೇಗಿರಬಹುದು?

ಕೊಳ್ಳೇಗಾಲ ಶರ್ಮ

ಮಂಗಳನಿಂದಲೋ, ಶುಕ್ರನಿಂದಲೋ ಜೀವಿಗಳು ಭೂಮಿಗೆ ಬಂದು ಇಳಿದರೆ ಏನಪ್ಪಾ ಅನ್ನುವ ಆತಂಕ ಇಂದು ನಿನ್ನೆಯದಲ್ಲ. ಸುಮಾರು 120 ವರ್ಷಗಳ ಹಿಂದೆ ಸುಪ್ರಸಿದ್ಧ ಆಂಗ್ಲ ಲೇಖಕ ಹೆಚ್. ಜಿ. ವೆಲ್ಸ್ 'ದಿ ವಾರ್ ಆಫ್ ದಿ ವರ್ಲ್ಡ್ಸ್' (ಲೋಕಗಳ ಕದನ) ಎನ್ನುವ ಪುಸ್ತಕವನ್ನು ಬರೆದಿದ್ದ. ಫ್ರೆಂಚರು ಮತ್ತು ಆಂಗ್ಲರ ನಡುವಿನ ಯುದ್ಧಗಳ ವಿಡಂಬನೆಯಾಗಿದ್ದ ಈ ಕಥೆಯಲ್ಲಿ ಮಂಗಳಗ್ರಹವಾಸಿಗಳು ಇಂಗ್ಲೆಂಡಿನ ಮೇಲೆ ಆಕ್ರಮಣ ಮಾಡಿದರೆಂದಿತ್ತು. ಇದೇ ಕಥೆಯನ್ನು ಕೆಲವು ದಶಕಗಳ ಅನಂತರ ಅಮೆರಿಕದ ರೇಡಿಯೋ ಒಂದು ನಾಟಕವನ್ನಾಗಿ ಪ್ರಸಾರ ಮಾಡಿದಾಗ, ಆಗಷ್ಟೆ ಎರಡನೇ ಮಹಾಯುದ್ಧದ ಬಿಸಿಯನ್ನು ಕಂಡಿದ್ದ ಅಮೆರಿಕನ್ನರು, ನಾಟಕವನ್ನೇ ನಿಜವೆಂದು ತಿಳಿದು ಬೆಚ್ಚಿ ಬಿದ್ದಿದ್ದು ಚರಿತ್ರೆ. ಒಟ್ಟಾರೆ ಅನ್ಯಗ್ರಹವಾಸಿಗಳು ಎಂದರೆ ಬೆಚ್ಚುವ ಬೆದರುವವರೇ ಜಾಸ್ತಿ. ನಮ್ಮಲ್ಲೂ ಅನ್ಯಗ್ರಹವಾಸಿಗಳ ಬಗ್ಗೆ ಇರುವ ಕಲ್ಪನೆಗಳು ಸುಂದರವೇನಲ್ಲ! ನಾಗಲೋಕ, ನರಕಲೋಕ ಎಂದೆಲ್ಲ ಹೇಳುವ ವಿಚಿತ್ರ ವಿಶ್ವದ ಜೀವಿಗಳು ಅತ್ತ ಮಾನವರೂ ಅಲ್ಲದ, ಇತ್ತ ಪ್ರಾಣಿಗಳೂ ಅಲ್ಲದ ರೂಪಗಳು. 

ಯಾವುದೋ ಜೀವಿಯ ತಳಿಗುಣವನ್ನು ಇನ್ಯಾವುದೋ ಜೀವಿಗೆ ತಳುಕಿಸುವಷ್ಟು ಜೀವವಿಜ್ಞಾನದ ಅರಿವನ್ನು ಪಡೆದಿರುವ ಇಂದಿನ ದಿನಗಳಲ್ಲಿಯೂ, ಅನ್ಯಗ್ರಹಜೀವಿಗಳ ಬಗ್ಗೆ ಇದೇ ಬಗೆಯ ಕಲ್ಪನೆಗಳೇ ಚಾಲ್ತಿಯಲ್ಲಿವೆ ಎನ್ನುವುದು ವಿಚಿತ್ರವಾದರೂ ಸತ್ಯ. ಕೆಲವು ಕಥೆಗಳಲ್ಲಿಯಂತೂ ಹುಳುಗಳಂತೆ ಕಾಣುವ ದೈತ್ಯ ಜೀವಿಗಳು ಭೂಮಿಯನ್ನು ದಂಡೆತ್ತಿ ಬರುವಂತೆ ತೋರಿಸಲಾಗುತ್ತದೆ. ಇನ್ನು ಕೆಲವು ಕಲ್ಪನೆಗಳಲ್ಲಿ ಅನ್ಯಗ್ರಹಜೀವಿಗೆ ಇರುವ ಅದ್ಭುತ ಶಕ್ತಿ, ಸಾಮರ್ಥ್ಯಗಳು ಬೆರಗುಗೊಳಿಸುತ್ತವೆ. ಉದಾಹರಣೆಗೆ, ಹೃತಿಕ್ ರೋಷನ್ ನಟಿಸಿದ 'ಕ್ರಿಷ್' ಚಿತ್ರದಲ್ಲಿ ಅನುವಂಶೀಯವಾಗಿ ಪೆದ್ದನಾಗಿರುವ ಹೃತಿಕ್ ರೋಷನ್ ಅನ್ಯಗ್ರಹಜೀವಿಯೊಂದರ ಜೊತೆಗೆ ಗೆಳೆತನ ಬೆಳೆಸುತ್ತಾನೆ. ಆ ಜೀವಿ ಅವನಿಗೆ ಅತಿಮಾನುಷ ಶಕ್ತಿಯನ್ನು ತುಂಬುತ್ತದೆ. ಇದೇ ಕಥೆಯನ್ನು ಮುಂದುವರೆಸಿದ 'ಕ್ರಿಷ್ 2' ನಲ್ಲಿ ಅತಿ ಮಾನುಷ ಶಕ್ತಿಯ ಕ್ರಿಷ್ ನ ಮಗನಿಗೂ ಆ ಶಕ್ತಿ ಬಂದಿರುತ್ತದೆ. ಇವೆಲ್ಲ ನಿಜವೇ? ಹೀಗಾಗಬಹುದೇ?

ಎಂಬಿಪಿಎಸ್ ಎಂದರೇನು?

ಒಂದಲ್ಲ ಒಂದು ಸಾಧನದ ಮೂಲಕ ನಾವು ಸದಾಕಾಲ ಅಂತರಜಾಲ ಸಂಪರ್ಕವನ್ನು ಬಳಸುತ್ತಲೇ ಇರುತ್ತೇವಲ್ಲ, ಹಾಗೆ ಬಳಸುವಾಗ ಸಂಪರ್ಕದ ವೇಗದ ಬಗೆಗೂ ಕೇಳಿರುತ್ತೇವೆ: ೮ ಎಂಬಿಪಿಎಸ್, ೧೬ ಎಂಬಿಪಿಎಸ್, ೫೦ ಎಂಬಿಪಿಎಸ್... ಹೀಗೆ.

ಎಂಬಿ ಅಂದರೆ ಮೆಗಾಬೈಟ್ ಸರಿ, ಆದರೆ ಇದೇನಿದು ಎಂಬಿಪಿಎಸ್?

ಕಂಪ್ಯೂಟರಿನ ಪುಟಾಣಿ ರೂಪ

ಟಿ. ಜಿ. ಶ್ರೀನಿಧಿ

ಕಂಪ್ಯೂಟರುಗಳು ಮೊದಲಿಗೆ ಕಾಣಿಸಿಕೊಂಡಿದ್ದು ಬೆರಳೆಣಿಕೆಯಷ್ಟು ಸಂಶೋಧನಾಲಯಗಳಲ್ಲಿ, ಪ್ರತಿಷ್ಠಿತ ಕಾಲೇಜು-ವಿವಿಗಳಲ್ಲಿ, ದೊಡ್ಡದೊಡ್ಡ ಸಂಸ್ಥೆಗಳಲ್ಲಿ ಮಾತ್ರವೇ. ಒಂದೊಂದು ಕಂಪ್ಯೂಟರು ಒಂದೊಂದು ಕೋಣೆಯ ತುಂಬ ತುಂಬಿಕೊಂಡಿರುತ್ತಿದ್ದ ಕಾಲ ಅದು. ಪೂರ್ತಿ ಕಂಪ್ಯೂಟರಿನ ಮಾತು ಹಾಗಿರಲಿ, ಅವರ ಕಚೇರಿಯಲ್ಲಿದ್ದ ಹಾರ್ಡ್ ಡಿಸ್ಕು - ಬರಿಯ ಎರಡು ಜಿಬಿ ಸಾಮರ್ಥ್ಯದ್ದು - ಹಳೆಯ ವಾಶಿಂಗ್ ಮಶೀನಿನಷ್ಟು ದೊಡ್ಡದಾಗಿತ್ತು ಎಂದು ಹಿರಿಯ ಬ್ಯಾಂಕ್ ಅಧಿಕಾರಿ ಶ್ರೀಧರ ಈಚೆಗಷ್ಟೆ ನೆನಪಿಸಿಕೊಳ್ಳುತ್ತಿದ್ದರು.

ಆ ದಿನಗಳಿಂದ ಇಂದಿನವರೆಗೆ ಕಂಪ್ಯೂಟರ್ ಜಗತ್ತಿನಲ್ಲಿ ಅಸಂಖ್ಯ ಬದಲಾವಣೆಗಳಾಗಿವೆ. ಕಂಪ್ಯೂಟರಿನ ಸಾಮರ್ಥ್ಯ - ದತ್ತಾಂಶ ಸಂಸ್ಕರಿಸುವುದಾಗಲಿ, ಸಂಸ್ಕರಿಸಿದ ಮಾಹಿತಿಯನ್ನು ಉಳಿಸಿಟ್ಟುಕೊಳ್ಳುವುದಾಗಲಿ - ಅಪಾರವಾಗಿ ಹೆಚ್ಚಿದೆ. ಸಾಮರ್ಥ್ಯ ಹೆಚ್ಚಾಗಿರುವುದರ ಜೊತೆಗೆ ಕಂಪ್ಯೂಟರಿನ ಗಾತ್ರವೂ ಗಮನಾರ್ಹವಾಗಿ ಕುಗ್ಗಿದೆ. ಗಾತ್ರದ ಹೋಲಿಕೆಯಲ್ಲಿ ಅಂದಿನ ಕೋಣೆಗಾತ್ರದ ಕಂಪ್ಯೂಟರುಗಳೆಲ್ಲಿ, ಇಂದಿನ ಲ್ಯಾಪ್‌ಟಾಪುಗಳೆಲ್ಲಿ!?

ಅನ್ಯಗ್ರಹ ಜೀವಿಗಳು ಪ್ರವಾಸ ಬಂದರೇ?

ಕೊಳ್ಳೇಗಾಲ ಶರ್ಮ

ಈಚೆಗೊಂದು ದಿನ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಸೂಳೆಕೆರೆ ಗ್ರಾಮದಲ್ಲಿ ಅನ್ಯಗ್ರಹ ಜೀವಿಗಳು ಕಾಣಿಸಿಕೊಂಡರಂತೆ. ಗ್ರಾಮಸ್ಥರು ಗದ್ದೆಯಿಂದ  ಹಿಂದಿರುಗುವ ವೇಳೆ ರಾತ್ರಿ ಇದ್ದಕ್ಕಿದ್ದಹಾಗೆ ಆಕಾಶದಲ್ಲಿ ಬೆಂಕಿಯ ಚೆಂಡಿನಂತಹ ಪ್ರಕಾಶ ಕಾಣಿಸಿಕೊಂಡಿತು, ಅದರ ಜೊತೆಗೆ ತಟ್ಟೆಯ ರೀತಿಯ ವಸ್ತುವೊಂದು ಕಾಣಿಸಿಕೊಂಡಿತು ಎಂದು ಪತ್ರಿಕೆಯ ವರದಿಗಳು ಹೇಳಿದುವು. ಸುದ್ದಿ ಬಯಲಾದ ಕೂಡಲೇ ಟೀವಿ ಚಾನೆಲೊಂದರಿಂದ “ಸರ್ ಒಂದು ಚರ್ಚೆ ಇಟ್ಟುಕೊಂಡಿದ್ದೇವೆ. ದಯವಿಟ್ಟು ಸ್ಟುಡಿಯೋಗೆ ಬಂದು ಚರ್ಚೆಯಲ್ಲಿ ಭಾಗವಹಿಸಿ,” ಎಂದು ಆಹ್ವಾನವೂ ಬಂತು. ಯಾವ ರೀತಿ ಇತ್ತಂತೆ ಅನ್ಯಗ್ರಹ ಜೀವಿ ಎಂದು ಕೇಳಿದ್ದಕ್ಕೆ ‘ನೋ ಐಡಿಯಾ ಸರ್, ಅದನ್ನು ನೋಡಿದವರೂ ಬರುತ್ತಾರೆ. ಅವರನ್ನೇ ಕೇಳೋಣ’ ಎನ್ನುವ ಉತ್ತರ ಬಂತು. ನೋಡಿದವರು ಪ್ರತ್ಯಕ್ಷವಾಗದಿದ್ದರಿಂದ ಚರ್ಚೆಯೂ ನಡೆಯಲಿಲ್ಲ ಅನ್ನುವುದು ಬೇರೆ ಮಾತು. ಆದರೆ ಹೀಗೊಂದು ವೇಳೆ ಅನ್ಯಗ್ರಹಗಳಲ್ಲಿ ಜೀವಿಗಳಿದ್ದರೆ ಅವರು ಹೇಗಿರಬಹುದು? ನಮ್ಮ ಭೂಮಿಯಂತಹ ಗ್ರಹಕ್ಕೆ ಅವರು ಬರಬಹುದೇ? ಬಂದರೆ ವಲಸೆ ಬರುತ್ತಾರೋ? ಆಕ್ರಮಣ ಮಾಡಲು ಬರಬಹುದೋ? ಇವೆಲ್ಲ ಪ್ರಶ್ನೆಗಳು ನನ್ನ ತಲೆಯನ್ನೂ ಕೊರೆಯತೊಡಗಿದುವು.

ಇವೆಲ್ಲಕ್ಕಿಂತಲೂ ಮುಖ್ಯವಾದ ಪ್ರಶ್ನೆಗಳು.  ಅನ್ಯಜೀವಿಗಳಿರಬಹುದಾದರೆ ಎಲ್ಲಿ? ಎಷ್ಟು ದೂರದಲ್ಲಿರಬಹುದು?

ಆಪ್‌ಬರ್ಗರ್!

ಸ್ಮಾರ್ಟ್‌ಫೋನುಗಳು ಸರ್ವಾಂತರ್ಯಾಮಿಯಾಗಿರುವ ಈ ಕಾಲದಲ್ಲಿ ಆಪ್‌ಗಳ (ಮೊಬೈಲ್ ತಂತ್ರಾಂಶ) ವಿಷಯ ನಮಗೆಲ್ಲ ಗೊತ್ತು. ಬನ್‌ನ ಎರಡು ತುಣುಕುಗಳ ನಡುವೆ ಕರಿದ / ಬೇಯಿಸಿದ ತಿಂಡಿಯನ್ನೂ ತರಕಾರಿ-ಬೆಣ್ಣೆ-ಚೀಸ್ ಇತ್ಯಾದಿಗಳನ್ನೂ ಇಟ್ಟು ತಯಾರಿಸುವ ಬರ್ಗರ್ ಪರಿಚಯವೂ ಇದೆ. ಆದರೆ ಆಪ್‍ಗೂ ಬರ್ಗರ್‌ಗೂ ಎತ್ತಣಿಂದೆತ್ತ ಸಂಬಂಧ?

ಇಜ್ಞಾನ ವಿಶೇಷ ಲೇಖನ: 'ವಸುಧೈವ ಕುಟುಂಬಕಮ್'

ರೋಹಿತ್ ಚಕ್ರತೀರ್ಥ

ಕೆಲವು ವರ್ಷಗಳ ಹಿಂದೆ ರಾಮಕೃಷ್ಣ ಬೆಳ್ಳೂರು ಎಂಬವರು ಒಂದು ಚಿತ್ರಸರಣಿ ಮಾಡಿದ್ದರು. ಮಹಾವಿಜ್ಞಾನಿ ಐನ್‌ಸ್ಟೈನ್‌ರನ್ನೂ ಕನ್ನಡದ ಸಾಹಿತ್ಯಮೇರು ಶಿವರಾಮ ಕಾರಂತರನ್ನೂ ಅಕ್ಕಪಕ್ಕದಲ್ಲಿಟ್ಟು ನೋಡಿದರೆ ಅವರೇ ಇವರಾ ಎಂದು ಗೊಂದಲವಾಗುವಷ್ಟು ಅವರಿಬ್ಬರ ಚಹರೆಗಳೂ ಹೋಲುವುದನ್ನು ತೋರಿಸಿ "ಎಷ್ಟೊಂದು ಸೇಮ್ ಇದ್ದಾರಲ್ವಾ?" ಎಂದು ಕೇಳಿದ್ದರು. ಗಡ್ಡ-ಮೀಸೆ ಬಿಟ್ಟ ಕೆ.ಎಸ್. ಅಶ್ವಥ್‌ರನ್ನು ಗೆಲಿಲಿಯೋ ಪಕ್ಕದಲ್ಲಿ ಕೂರಿಸಿದರೂ ಇದೇ ಗೊಂದಲ. ಕರ್ನಾಟಕದ ರಾಜ್ಯಪಾಲರಾಗಿದ್ದ ಖುರ್ಷಿದ್ ಆಲಂ ಖಾನ್ ಮತ್ತು ಚಿತ್ರನಟ ಬ್ರಹ್ಮಾವರ ಸದಾಶಿವ ರಾವ್ ನೋಡಲು ಒಂದೇ ರೀತಿ ಇದ್ದರು. ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದ ಸುಬ್ಬಾ ರಾವ್‌ರನ್ನು ನಮ್ಮ "ಥಟ್ ಅಂತ ಹೇಳಿ" ಖ್ಯಾತಿಯ ಡಾ. ನಾ. ಸೋಮೇಶ್ವರ ಪಕ್ಕದಲ್ಲಿ ನಿಲ್ಲಿಸಿದರೆ ನಿಜವ್ಯಕ್ತಿಯೊಬ್ಬರು ತನ್ನ ಮೇಣದ ಪ್ರತಿಮೆಯೊಂದಿಗೆ ನಿಂತಿದ್ದಾರೋ ಎಂದು ಭಾಸವಾಗುತ್ತದೆ. ನಿತಿನ್ ಮುಖೇಶ್ ಎಂಬ ಹಾಡುಗಾರನನ್ನು ಟಿ.ಎಂ. ಕೃಷ್ಣ ಎಂಬ ಕರ್ನಾಟಕ ಸಂಗೀತಗಾರರ ಪಕ್ಕದಲ್ಲಿ ಕೂರಿಸಿದರೆ ಇವರೇನು ಅವಳಿ-ಜವಳೀನಾ ಅಂತ ಕೇಳುವಷ್ಟು ಅವರಿಬ್ಬರೂ ಸೇಮ್‌ಸೇಮ್. ನಮ್ಮ ನಡುವಿನ ಹೆಮ್ಮೆಯ ವಿಜ್ಞಾನಿ ರೊದ್ದಂ ನರಸಿಂಹ ತಮ್ಮ ಎಂದಿನ ಕೋಟು ಪ್ಯಾಂಟಿನ ಪೋಷಾಕು ತೆಗೆದು ಪಟ್ಟೆ ಪೀತಾಂಬರ ಉಟ್ಟುಕೊಂಡರೆ ಯಾರಾದರೂ "ವಿದ್ಯಾಭೂಷಣರೇ, ಒಂದು ಹಾಡು ಹಾಡಿ" ಅಂತ ಪೀಡಿಸಿಯಾರು!

ಇಜ್ಞಾನದ ಹತ್ತನೆಯ ವರ್ಷ

ವಿಜ್ಞಾನ-ತಂತ್ರಜ್ಞಾನಗಳ ಬಗ್ಗೆ ಬೇಕಾದಷ್ಟು ಮಾಹಿತಿ ಸಿಗುವ ಕನ್ನಡದ ಜಾಲತಾಣವೊಂದನ್ನು ರೂಪಿಸಬೇಕು ಎನ್ನುವ ಕನಸಿಗೆ ಈಗ ಹತ್ತು ವರ್ಷ. ಕಳೆದ ದಶಕದ ಮಧ್ಯಭಾಗದಲ್ಲಿ ಪರಿಚಿತರಾದ ಹೆಸರಾಂತ ವಿಜ್ಞಾನ ಬರಹಗಾರ ಕೊಳ್ಳೇಗಾಲ ಶರ್ಮರೂ ನಾನೂ ಮಾತನಾಡುವಾಗ ಹೀಗೊಂದು ತಾಣ ಇರಬೇಕು ಎನ್ನುವ ಪ್ರಸ್ತಾಪ ಬಹಳಷ್ಟು ಬಾರಿ ಬಂದುಹೋಗಿತ್ತು.

ಈ ಪ್ರಯೋಗವನ್ನು ಒಮ್ಮೆ ಪ್ರಯತ್ನಿಸಿ ನೋಡಿಯೇಬಿಡೋಣ ಎಂದು ಹೊರಟಾಗ ತಾಣದ ಹೆಸರೇನಿರಬೇಕು ಎನ್ನುವ ಪ್ರಶ್ನೆ ಬಂತು. ಆಗ ನೆರವಾದವನು ಮಿತ್ರ ನಂದಕಿಶೋರ್. ಅವನು ಥಟ್ಟನೆ ಹೇಳಿದ ಹೆಸರೇ 'ಇಜ್ಞಾನ'. ಏನನ್ನೂ ಹೇಳದೆ ಏನೇನೆಲ್ಲ ಹೇಳುವ ಹೆಸರು ಅದು. ಇದೇನು 'ವಿಜ್ಞಾನ'ದ ಗ್ರಾಮ್ಯ ಅಪಭ್ರಂಶವೇ, ಅಥವಾ ವಿದ್ಯುನ್ಮಾನ (ಇ-) ಜ್ಞಾನಕ್ಕೆ ನೀವಿಟ್ಟ ಹೆಸರೇ ಎಂದು ಹಲವರು ಕೇಳಿದ್ದುಂಟು.

ಹೆಸರಿನ ಅರ್ಥ ಏನೇ ಇರಲಿ. 'ಇಜ್ಞಾನ'ವೆಂಬ ಹೆಸರಿಟ್ಟುಕೊಂಡು ಶುರುವಾದ, ವಿಜ್ಞಾನ-ತಂತ್ರಜ್ಞಾನಗಳ ಬಗ್ಗೆ ಕನ್ನಡದಲ್ಲಿ ನಿರಂತರವಾಗಿ ಮಾಹಿತಿ ಹಂಚಿಕೊಳ್ಳುತ್ತ ಬಂದ ತಾಣಕ್ಕೆ ಇದೀಗ ಹತ್ತನೆಯ ವರ್ಷದ ಸಂಭ್ರಮ.

ವಿಶ್ವ ಪಾಸ್‌ವರ್ಡ್ ದಿನ ವಿಶೇಷ: ನಿಮ್ಮ ಪಾಸ್‌ವರ್ಡ್ ಜೋಪಾನ!

ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇಬೇಕು. ವಿಶ್ವ ಪಾಸ್‌ವರ್ಡ್ ದಿನದಂದು (ಮೇ ೫) ಈ ಲೇಖನವನ್ನು ಮರುಪ್ರಕಟಿಸುವ ಮೂಲಕ ನಾವು ಪಾಸ್‌ವರ್ಡ್ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.. 
ಟಿ. ಜಿ. ಶ್ರೀನಿಧಿ


ಆಲಿಬಾಬನ ಕತೆ ಗೊತ್ತಲ್ಲ, ಅದರಲ್ಲಿ ನಲವತ್ತು ಮಂದಿ ಕಳ್ಳರು ತಾವು ಕದ್ದು ತಂದ ಸಂಪತ್ತನ್ನೆಲ್ಲ ಒಂದು ಗುಹೆಯಲ್ಲಿ ಅವಿಸಿಡುತ್ತಿರುತ್ತಾರೆ. ಮತ್ತೆ ಕಳ್ಳತನಕ್ಕೆ ಹೋದಾಗ ಬೇರೆ ಕಳ್ಳರು ಬಂದು ಇವರ ಸಂಪತ್ತನ್ನೇ ಕದ್ದುಬಿಡಬಾರದಲ್ಲ, ಅದಕ್ಕಾಗಿ 'ಬಾಗಿಲು ತೆರೆಯೇ ಸೇಸಮ್ಮ' ಎಂದು ಹೇಳದ ಹೊರತು ಗುಹೆಯೊಳಕ್ಕೆ ಯಾರೂ ಹೋಗಲಾಗದಂತಹ ವ್ಯವಸ್ಥೆಯನ್ನೂ ರೂಪಿಸಿಕೊಂಡಿರುತ್ತಾರೆ.

ಕಳ್ಳರ ಬಂದೋಬಸ್ತು ಜೋರಾಗಿಯೇ ಇತ್ತು ನಿಜ. ಆದರೆ ಆಲಿಬಾಬ ಯಾವಾಗ ಅವರ ಗುಪ್ತಸಂಕೇತವನ್ನು ಕೇಳಿಸಿಕೊಂಡನೋ ಅಲ್ಲಿಂದ ಸೇಸಮ್ಮ ಆಲಿಬಾಬನಿಗೂ ಬಾಗಿಲು ತೆರೆಯಲು ಶುರುಮಾಡಿದಳು!

ಆಲಿಬಾಬನ ಈ ಕತೆ ಕಲ್ಪನೆಯದೇ ಇರಬಹುದು.

ಬಿಟ್‌ಕಾಯಿನ್ ಸೃಷ್ಟಿಕರ್ತ ಮರೆಯಿಂದ ಹೊರಬಂದನೇ?


ಬಿಟ್‌ಕಾಯಿನ್ ಎನ್ನುವುದು ಅಂತರಜಾಲ ಲೋಕದಲ್ಲಿ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ವರ್ಚುಯಲ್ ಹಣ. ಭಾರತದಲ್ಲಿ ರೂಪಾಯಿ, ಅಮೆರಿಕಾದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಇದು. ಅಂತರಜಾಲ ಹೇಗೆ ಮಿಥ್ಯಾಲೋಕವೋ ಅಲ್ಲಿ ಚಲಾವಣೆಯಾಗುವ ಈ 'ಬಿಟ್‌ಕಾಯಿನ್' ಕೂಡ ವರ್ಚುಯಲ್, ಅಂದರೆ ಕಣ್ಣಿಗೆ ಕಾಣದ, ಕರೆನ್ಸಿಯೇ.

ಈಚಿನ ಕೆಲ ವರ್ಷಗಳಲ್ಲಿ ಈ ಬಿಟ್‌ಕಾಯಿನ್ ಸಾಕಷ್ಟು ಸುದ್ದಿಮಾಡಿದೆ. ಈ ಬಗ್ಗೆ ಇಜ್ಞಾನವೂ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಲೇಖನಗಳು, ಸುದ್ದಿಗಳು ಪ್ರಕಟವಾಗಿವೆ. [ಓದಿ: ಕಳೆದ ಹಾರ್ಡ್‌ಡಿಸ್ಕ್ ನೆಪದಲ್ಲಿ ಕಾಣದ ದುಡ್ಡಿನ ಕುರಿತು...]
badge