ಸೋಮವಾರ, ಏಪ್ರಿಲ್ 18, 2016

ಪಾರಂಪರಿಕ ದಿನದಂದು ಐಟಿ ಇತಿಹಾಸದ ನೆನಪು

ಇದು ಇಜ್ಞಾನ ಡಾಟ್ ಕಾಮ್‌ನಲ್ಲಿ ಇಂದಿನಿಂದ ಪ್ರಕಟವಾಗುತ್ತಿರುವ ಹೊಸ ಸಾಪ್ತಾಹಿಕ ಅಂಕಣ 'ಇಫ್ರೆಶ್'ನ ಮೊದಲ ಕಂತು. ಅಂಕಣದ ಬಗ್ಗೆ ನಿಮ್ಮ ಅನಿಸಿಕೆ-ಅಭಿಪ್ರಾಯಗಳಿಗೆ ಸ್ವಾಗತ!
ಇವತ್ತು (ಏಪ್ರಿಲ್ ೧೮) ವರ್ಲ್ಡ್ ಹೆರಿಟೇಜ್ ಡೇ, ಅಂದರೆ ವಿಶ್ವ ಪಾರಂಪರಿಕ ದಿನವಂತೆ. ಹಾಗೆಂದು ಮೊದಲು ನೆನಪಿಸಿದ್ದು ಫೇಸ್‌ಬುಕ್. ಒಳ್ಳೆಯದು ಬಿಡಿ, ಫೇಸ್‌ಬುಕ್‌ನಲ್ಲಿ ಅವರಿವರ ಜಗಳದ ಸುದ್ದಿಯ ಜೊತೆಗೆ ಒಂದಷ್ಟು ಉಪಯುಕ್ತ ಮಾಹಿತಿಯೂ ಸಿಗುತ್ತದೆ ಎಂದಾಯಿತು.

ವರ್ಲ್ಡ್ ಹೆರಿಟೇಜ್ ಎಂದತಕ್ಷಣ ನಮಗೆ ನೆನಪಿಗೆ ಬರುವುದು ವಿಶ್ವ ಪಾರಂಪರಿಕ ತಾಣಗಳು. ಈಜಿಪ್ಟಿನ ಪಿರಮಿಡ್‌ಗಳಿಂದ ಮಾಲಿಯ ಟಿಂಬಕ್ಟುವರೆಗೆ, ರಾಜಸ್ಥಾನದ ಕೋಟೆಗಳಿಂದ ನಮ್ಮ ಪಶ್ಚಿಮಘಟ್ಟಗಳವರೆಗೆ ಅದೆಷ್ಟೋ ತಾಣಗಳನ್ನು ಯುನೆಸ್ಕೋ ಈ ಪಟ್ಟಿಗೆ ಸೇರಿಸಿದೆ.
ವಿಶ್ವ ಪರಂಪರೆಯ ಮಹತ್ವದ ಪ್ರತಿನಿಧಿಗಳಾದ ಇವನ್ನು ಹೇಗಾದರೂ ಮಾಡಿ ಕಾಪಾಡಿಕೊಳ್ಳಿ ಎಂದು ಸ್ಥಳೀಯ ಸಮುದಾಯಕ್ಕೆ ತಿಳಿಹೇಳುತ್ತಿದೆ.

ಹೆರಿಟೇಜ್ ಎನ್ನುವುದು ಪುರಾತನ ಸ್ಮಾರಕಗಳಿಗೋ ಬೆಟ್ಟಗುಡ್ಡ ಕಾಡುಗಳಿಗೋ ಮಾತ್ರವೇ ಸಂಬಂಧಿಸಿದ ವಿಷಯವೇನಲ್ಲ.
ಈಗ ನಮ್ಮ ದೇಶದ ಐಟಿ ಉದ್ದಿಮೆಯನ್ನೇ ನೋಡಿ. ಪಶ್ಚಿಮಘಟ್ಟ, ಹಂಪೆ, ಪಟ್ಟದಕಲ್ಲಿಗೆಲ್ಲ ಹೋಲಿಸಿದರೆ ಭಾರತೀಯ ಐಟಿ ಉದ್ದಿಮೆ ನಿನ್ನೆಮೊನ್ನೆಯಷ್ಟೇ ಹುಟ್ಟಿದ್ದು ಎನ್ನಬಹುದು ನಿಜ, ಆದರೆ ಅದಕ್ಕೂ ಈಗ ದಶಕಗಳ ಇತಿಹಾಸವಿದೆ [ಓದಿ: ಮಾಹಿತಿ ತಂತ್ರಜ್ಞಾನ ಮತ್ತು ಬೆಂಗಳೂರು].

ತಮಾಷೆಯ ವಿಷಯವೆಂದರೆ ಈ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಮುಕ್ತವಾಗಿ ಲಭ್ಯವಿರುವ ಮಾಹಿತಿಯೇ ಕಡಿಮೆ, ಸಿಗುವ ಅಲ್ಪಸ್ವಲ್ಪ ಮಾಹಿತಿಯ ನಿಖರತೆಯ ಬಗ್ಗೆ ತಿಳಿದುಕೊಳ್ಳುವುದು ಇನ್ನೂ ಕಷ್ಟ.

ಈ ಪರಿಸ್ಥಿತಿಯನ್ನು ಕೊಂಚಮಟ್ಟಿಗೆ ಬದಲಿಸುವ ಪ್ರಯತ್ನವೊಂದು ಇದೀಗ ನಡೆದಿದೆ. ಇನ್‌ಫೋಸಿಸ್ ಸ್ಥಾಪಕರಲ್ಲೊಬ್ಬರಾದ ಕ್ರಿಸ್ ಗೋಪಾಲಕೃಷ್ಣನ್ ನೇತೃತ್ವದಲ್ಲಿ ರೂಪುಗೊಂಡಿರುವ 'ಇತಿಹಾಸ' ಮೊಬೈಲ್ ಆಪ್, ಇದೇ ಪ್ರಯತ್ನದ ಫಲ. ಭಾರತೀಯ ಐಟಿ ಉದ್ದಿಮೆಯ ಇತಿಹಾಸಕ್ಕೆ ಸಂಬಂಧಪಟ್ಟ ಹಲವಾರು ವೀಡಿಯೋಗಳು, ಸಂದರ್ಶನಗಳು, ಪತ್ರಿಕಾ ಲೇಖನಗಳು, ಹಳೆಯ ಕಡತಗಳನ್ನೆಲ್ಲ ಒಂದೇ ಕಡೆ ದೊರಕುವಂತೆ ಮಾಡುವ ಪ್ರಯತ್ನ ಇದು.

ಸದ್ಯ ಆಂಡ್ರಾಯ್ಡ್ ಮೊಬೈಲುಗಳಿಗೆ ಮಾತ್ರವೇ ಲಭ್ಯವಿರುವ 'ಇತಿಹಾಸ' ಆಪ್ ಅನ್ನು ಗೂಗಲ್ ಪ್ಲೇ ಸ್ಟೋರಿನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬಳಸುವ ಮುನ್ನ ಇಮೇಲ್ ವಿಳಾಸ ನೀಡಿ ನೋಂದಾಯಿಸಿಕೊಳ್ಳಬೇಕಾದ್ದು ಕಡ್ಡಾಯ (ಗೂಗಲ್ ಅಥೆಂಟಿಕೇಶನ್ ಬಳಸಿ ನೋಂದಾಯಿಸಿಕೊಂಡರೂ ಇಮೇಲ್ ವಿಳಾಸವನ್ನು ದೃಢಪಡಿಸುವಂತೆ ಕೇಳಿದ್ದು ತಮಾಷೆಯೆನಿಸಿತು. ಆದರೆ ಸಹಾಯ ಕೇಳಿ ಇಮೇಲ್ ಕಳುಹಿಸಿದ ತಕ್ಷಣ ಉತ್ತರ ಬಂದದ್ದು ಒಳ್ಳೆಯ ವಿಷಯ. ಇದು ಆಪ್ ಅಲ್ಲದೆ ಒಂದು ಜಾಲತಾಣವಾಗಿದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೇನೋ).

ಕಾಮೆಂಟ್‌ಗಳಿಲ್ಲ:

badge