ಭಾನುವಾರ, ಮಾರ್ಚ್ 6, 2016

ಅಗ್ರಮಾನ್ಯ ಅಗ್ರಿಬ್ರಹ್ಮ ಡಾ. ಎಸ್. ಡಬ್ಲ್ಯು. ಮೆಣಸಿನಕಾಯಿ

ವಿಜ್ಞಾನಿಗಳ ಸಾಧನೆ ಕುರಿತು ಓದುವುದು ಕುತೂಹಲ ಹುಟ್ಟಿಸುವ ವಿಷಯ. ವಿಜ್ಞಾನಿಗಳ ಬದುಕಿನ ಬಗ್ಗೆ ತಿಳಿದುಕೊಳ್ಳುವುದು ಇನ್ನೂ ವಿಶಿಷ್ಟವಾದ ಅನುಭವ. ಅದರಲ್ಲೂ ವಿಜ್ಞಾನಿಯ - ಅವರ ಸಾಧನೆಯ ಬಗ್ಗೆ ಮೊದಲು ಕೇಳಿಯೇ ಇಲ್ಲದಿದ್ದರಂತೂ ಈ ಅನುಭವ ಇನ್ನೂ ವಿಶೇಷವಾಗಿರುತ್ತದೆ.

ಇಂತಹ ವಿಶೇಷ ಅನುಭವ ನೀಡುವ ಪುಸ್ತಕ 'ಸಂಗಮಾದರ್ಶ'. ಖ್ಯಾತ ಕೃಷಿವಿಜ್ಞಾನಿ ಡಾ. ಸಂಗಮನಾಥ ವಿರೂಪಾಕ್ಷ ಮೆಣಸಿನಕಾಯಿಯವರ ಜೀವನ ಚಿತ್ರಣ ನೀಡುವ ಈ ಕೃತಿಯನ್ನು ಮತ್ತೊಬ್ಬ ಕೃಷಿವಿಜ್ಞಾನಿ ಡಾ. ಶರಣಬಸವೇಶ್ವರ ಅಂಗಡಿಯವರು ಬರೆದಿದ್ದಾರೆ. ಅಸಾಧಾರಣ ಕೃಷಿವಿಜ್ಞಾನಿ ಹಾಗೂ ಶಿಕ್ಷಣತಜ್ಞರಾಗಿದ್ದ ಸಂಗಮನಾಥ ಮೆಣಸಿನಕಾಯಿಯವರು ಧಾರವಾಡ ಕೃಷಿ ಕಾಲೇಜು - ವಿಶ್ವವಿದ್ಯಾಲಯಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದರು.
ಐದು ವಿಭಾಗಗಳಲ್ಲಿ ಮೂಡಿಬಂದಿರುವ ಈ ಪುಸ್ತಕದಲ್ಲಿ ಡಾ. ಅಂಗಡಿಯವರು ಬರೆದ ಜೀವನ ಚಿತ್ರಣದ ಜೊತೆಗೆ ಸಂಗಮನಾಥ ಮೆಣಸಿನಕಾಯಿಯವರ ಶಿಷ್ಯರು - ಸಹೋದ್ಯೋಗಿಗಳು ಬರೆದ ಚಿತ್ರಣಗಳೂ ಇರುವುದು ವಿಶೇಷ. ಛಾಯಾಚಿತ್ರಗಳು ಹಾಗೂ ಮೆಣಸಿನಕಾಯಿಯವರ ವೈಜ್ಞಾನಿಕ ಪ್ರಬಂಧ-ಭಾಷಣಗಳನ್ನೂ ಸೇರಿಸಿರುವುದು ಪುಸ್ತಕದ ಮೆರುಗನ್ನು ಹೆಚ್ಚಿಸಿದೆ. "ಅಗ್ರಮಾನ್ಯ ಅಗ್ರಿಬ್ರಹ್ಮ"ನ ಬಗ್ಗೆ ನಾಗೇಶ ಹೆಗಡೆಯವರ ಬೆನ್ನುಡಿಯೂ ವಿಶಿಷ್ಟವಾಗಿದೆ.

ಹಿರಿಯ ಸಾಧಕರ ಬಗ್ಗೆ ಹೇಳುತ್ತ ಅವರ ಬಗ್ಗೆ ಸೂಪರ್‌ಹ್ಯೂಮನ್ ಅನ್ನಿಸುವಂತಹ ಚಿತ್ರಣ ನೀಡಿಬಿಡುವುದು ಅನೇಕ ಜೀವನಚಿತ್ರಣಗಳ ಹಣೆಬರಹ. ಆದರೆ ಈ ಕೃತಿಯಲ್ಲಿ ಹಾಗೆ ಆಗಿಲ್ಲ. ಸಂಗಮನಾಥ ಮೆಣಸಿನಕಾಯಿಯವರು ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಜೊತೆಗೆ ಅವರ ಬದುಕಿನ ಬಗೆಗೂ ಅನೇಕ ವಿಶಿಷ್ಟ ಅಂಶಗಳು ಈ ಪುಸ್ತಕದಲ್ಲಿವೆ. ಅವರ ಹೆಸರಿನಲ್ಲಿದ್ದ 'ವಿರೂಪಾಕ್ಷ' 'Wirupax' ಆಗಿದ್ದದ್ದು, ವಿದ್ಯಾರ್ಥಿಗಳ ಬಗೆಗೆ ಅವರಿಗಿದ್ದ ಪ್ರೀತಿ-ವಿಶ್ವಾಸ, ತಮ್ಮ ನಿಲುವಿನ ಬಗ್ಗೆ "ಅಡಮೆಂಟ್ ಇರ್‍ತಿದ್ದ" ಕಾರಣ ಸಿಬ್ಬಂದಿಯ ಜೊತೆಗೆ ವಿರೋಧ ಬೆಳೆಸಿಕೊಂಡಿದ್ದು, "ನಿಂತುಕೊಂಡೇ ಇಹಲೋಕ ತ್ಯಜಿಸಿದ" ಪ್ರಸಂಗ - ಎಲ್ಲವೂ ಇಲ್ಲಿ ದಾಖಲಾಗಿವೆ.

ಡಾ. ಶರಣಬಸವೇಶ್ವರ ಅಂಗಡಿಯವರು ಬರೆದ 'ವ್ಯಕ್ತಿ-ವಿಕಾಸ' ಭಾಗದಲ್ಲಿ ಹೆಸರಾಂತ ಚಿತ್ರಕಲಾವಿದ ಗುಜ್ಜಾರ್ ಬರೆದ ಆಕರ್ಷಕ ಚಿತ್ರಗಳಿವೆ. ಅಂಗಡಿಯವರ ಶೈಲಿಯ ಆಕರ್ಷಣೆಯೂ ಕಡಿಮೆಯೇನಲ್ಲ. ಸಂಗಮನಾಥರು ಈರುಳ್ಳಿ ಹಾಗೂ ಬೆಳ್ಳುಳ್ಳಿಗಳ ಕುರಿತು ಅಧ್ಯಯನ ಮಾಡಿದ್ದನ್ನು ಹೇಳುವಾಗ ಅವರು ಹೇಳುವುದನ್ನೇ ನೋಡಿ: "ಅವುಗಳ ಘಾಟು ಗುಣ ಮೆಣಸಿನಕಾಯಿಯವರನ್ನು ಸೆಳೆದಿರಬಹುದೇ!"
ಸಂಗಮಾದರ್ಶಲೇಖಕರು: ಡಾ. ಶರಣಬಸವೇಶ್ವರ ಅಂಗಡಿಬೆಲೆ: ರೂ. ೨೦೦ಪ್ರಕಾಶಕರು: ಡಾ. ಎಸ್. ಡಬ್ಲ್ಯು. ಮೆಣಸಿನಕಾಯಿ ಸ್ಮಾರಕ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನ, ಧಾರವಾಡಮೊದಲ ಮುದ್ರಣ: ೨೦೧೬, ಪುಟಗಳು: xvi+೨೧೨ 

ಕಾಮೆಂಟ್‌ಗಳಿಲ್ಲ:

badge