ಬುಧವಾರ, ಫೆಬ್ರವರಿ 17, 2016

ರೂ. ೨೫೧ಕ್ಕೆ ಮೊಬೈಲ್ ಫೋನ್!

ಇಜ್ಞಾನ ವಾರ್ತೆ


ರಿಂಗಿಂಗ್ ಬೆಲ್ಸ್ ಎಂಬ ನೋಯ್ಡಾ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆ 'ಫ್ರೀಡಂ ೨೫೧' ಎಂಬ ಹೊಸ ಮೊಬೈಲ್ ಫೋನನ್ನು ಪರಿಚಯಿಸಿದ್ದು ಅದನ್ನು ರೂ. ೨೫೧ಕ್ಕೆ ಮಾರುತ್ತೇನೆಂದು ಹೇಳುವ ಮೂಲಕ ಸಂಚಲನವನ್ನೇ ಸೃಷ್ಟಿಸಿದೆ. ೧.೩ ಗಿಗಾಹರ್ಟ್ಸ್‌ನ ಪ್ರಾಸೆಸರ್, ನಾಲ್ಕು ಇಂಚಿನ ಸ್ಪರ್ಶಸಂವೇದಿ ಪರದೆ, ೧ ಜಿಬಿ ರ್‍ಯಾಮ್, ೮ ಜಿಬಿ ಶೇಖರಣಾ ಸಾಮರ್ಥ್ಯ, ೩.೨ ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ ೦.೩ ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳಿರುವ ಈ ಫೋನಿನ ಮುಂಗಡ ಬುಕಿಂಗ್ ನಾಳೆ (ಫೆಬ್ರುವರಿ ೧೮, ೨೦೧೬) ಬೆಳಿಗ್ಗೆ ೬ರಿಂದ ಶುರುವಾಗಲಿದೆಯಂತೆ.
೧೪೫೦ ಎಂಎಎಚ್ ಬ್ಯಾಟರಿಯಿರುವ ಈ ಫೋನು ಆಂಡ್ರಾಯ್ಡ್ ೫.೧ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುತ್ತದೆ. ಥ್ರೀಜಿ ಸಿಮ್ ಹಾಗೂ ೩೨ ಜಿಬಿವರೆಗಿನ ಮೆಮೊರಿ ಕಾರ್ಡ್ ಕೂಡ ಬಳಸುವುದು ಸಾಧ್ಯ. ಒಂದು ವರ್ಷ ವಾರಂಟಿ ಹಾಗೂ ೬೫೦ಕ್ಕೂ ಹೆಚ್ಚಿನ ಸರ್ವಿಸ್ ಸೆಂಟರುಗಳ ಆಶ್ವಾಸನೆ ಕೂಡ ಇದೆ.

ಈ ಬೆಲೆಗೆ ಸ್ಮಾರ್ಟ್‌ಫೋನ್ ಸಿಗುವುದಾದರೆ ಅದು ನಿಜಕ್ಕೂ ಒಳ್ಳೆಯ ಸುದ್ದಿಯೇ. ಆದರೆ ಬುಕ್ ಮಾಡಿದ ಮೊಬೈಲುಗಳನ್ನು ಯಾವಾಗ ತಲುಪಿಸಲಾಗುವುದು ಎನ್ನುವ ಬಗ್ಗೆ ಅಷ್ಟು ಸ್ಪಷ್ಟವಾದ ಮಾಹಿತಿ ಇನ್ನೂ ಇದ್ದಂತಿಲ್ಲ. ಹಾಗೆಯೇ ರಿಂಗಿಂಗ್ ಬೆಲ್ಸ್ ಸಂಸ್ಥೆ ಕೆಲದಿನಗಳ ಹಿಂದೆ ಘೋಷಿಸಿದ್ದ ರೂ. ೨೯೯೯ ಮುಖಬೆಲೆಯ 'ಸ್ಮಾರ್ಟ್ ೧೦೧' ೪ಜಿ ಫೋನ್ ಕೂಡ ಇನ್ನಷ್ಟೇ ಬಳಕೆದಾರರನ್ನು ತಲುಪಬೇಕಿದೆ.

ಕೆಲವರ್ಷಗಳ ಹಿಂದೆ ದೊಡ್ಡಪ್ರಮಾಣದಲ್ಲಿ ಸುದ್ದಿಮಾಡಿದ್ದ 'ಆಕಾಶ್' ಟ್ಯಾಬ್ಲೆಟ್ ಈ ಸಂದರ್ಭದಲ್ಲಿ ಬೇಡವೆಂದರೂ ನೆನಪಾಗುತ್ತಿದೆ. ಮುಂಗಡ ಬುಕಿಂಗ್ ಮಾಡಿದ್ದ ಗ್ರಾಹಕರಿಗೆ ಡೇಟಾವಿಂಡ್ ಸಂಸ್ಥೆ ಎಷ್ಟು ದಿನವಾದರೂ ಟ್ಯಾಬ್ಲೆಟ್ ಕೊಡದೆ ಸತಾಯಿಸಿದ್ದನ್ನು ಎಲ್ಲಾದರೂ ಮರೆಯುವುದುಂಟೆ! ರಿಂಗಿಂಗ್ ಬೆಲ್ಸ್ ಸಂಸ್ಥೆ ಹಾಗೆ ಮಾಡದಿರಲಿ, 'ಫ್ರೀಡಂ ೨೫೧' ಆದಷ್ಟು ಬೇಗ ಜನರ ಕೈಸೇರಲಿ ಎನ್ನುವುದು ನಮ್ಮ ಆಶಯ.

'ಫ್ರೀಡಂ ೨೫೧' ಕುರಿತ ಹೆಚ್ಚಿನ ವಿವರಗಳಿಗಾಗಿ freedom251.com ತಾಣಕ್ಕೆ ಭೇಟಿಕೊಡಬಹುದು. ಇನ್ನೂರ ಐವತ್ತೊಂದು ರೂಪಾಯಿ ಕಡಿಮೆಯೇ ಇರಬಹುದು, ಆದರೆ ನೀವು ನಾಳೆ ಈ ಫೋನನ್ನು ಬುಕ್ ಮಾಡುವುದೇ ಆದಲ್ಲಿ ಮೇಲಿನ ಅಂಶಗಳನ್ನೆಲ್ಲ ಪರಿಗಣಿಸಿದ ನಂತರವಷ್ಟೇ ಹಣ ಪಾವತಿಸಿ ಎನ್ನುವುದು ಇಜ್ಞಾನ ಡಾಟ್ ಕಾಮ್‌ನ ಸಲಹೆ.

1 ಕಾಮೆಂಟ್‌:

hala swamy ಹೇಳಿದರು...

ಅಕಾಶ್ ಟ್ಯಾಬ್ಲೇಟ್ ಜಾಹೀರಾತು ನೋಡಿ ಬುಕ್ ಮಾಡಿದ್ದೆ. ಎಷ್ಟು ಕಾಲದ ನಂತರ ಬಂತು... ಅದರಲ್ಲಿ ಬ್ಲೂಟೂತ್ ಇಲ್ಲ. ಯುಎಸ್ ಬಿ ಇಲ್ಲ..ಹಲವಾರು ಇಲ್ಲಗಳ ನಡುವೆ ಅದನ್ನು ಮೂಲೆಲಿಟ್ಟಿದ್ದೆ. ನಾಲ್ಕು ತಿಂಗಳ ನಂತರ `ಅಕಾಶ್' ಫೋನ್ ಬಂತು ಹಳೇ ಕಸ್ಟಮರ್ ಗೆ ಸಿಕ್ಕಾಪಟ್ಟೆ ಕಡಿಮೆ ಬೆಲೆಯಲ್ಲಿ ಅಡ್ವಾನ್ಸ್ಡ್ ಟ್ಯಾಬ್ ಕೊಡ್ತಿವಿ ಅಂದ್ರು ಅದನ್ನೂ ಕೊಂಡೆ.. ನೋಡಿದ್ರೆ ಅದರದ್ದೂ ಅದೇ ಕತೆ. ಗೂಗಲ್ ಪ್ಲೇಸ್ಟೋರೇ ಇಲ್ಲ... ಇಂಥ ಹಲವು ಇಲ್ಲಗಳ ಈ ಎರಡೂ ಟ್ಯಾಬುಗಳು ಈಗ ಮಕ್ಕಳು ಆಟಿಕೆಗಳಾಗಿವೆ... ನನ್ನ ಮೂರ್ಖತನದ ಸಂಕೇತಗಳೂ ಆಗಿವೆ...

badge