ಮಂಗಳವಾರ, ಜನವರಿ 19, 2016

ಜಂತರ್ ಮಂತರ್ ಬಗೆಗೊಂದು ಪುಟಿಯುವ ಪುಟಗಳ ಪುಸ್ತಕ!

ಪ್ರಾಚೀನ ಭಾರತದಲ್ಲಿ ಏನಿತ್ತು ಏನಿರಲಿಲ್ಲ ಎನ್ನುವುದು ಸದಾಕಾಲ ಚರ್ಚೆಗೆ ಗ್ರಾಸವಾಗುವ ವಿಷಯ. ಒಂದು ಬಣ ನಮ್ಮಲ್ಲಿ ಎಲ್ಲವೂ ಇತ್ತು ಎಂದರೆ ಇನ್ನೊಂದು ಬಣ ಮೊದಲ ಬಣವನ್ನು ಹೀಗಳೆಯುವುದರಲ್ಲೇ ತೃಪ್ತಿ ಕಂಡುಕೊಳ್ಳುತ್ತದೆ. ಈ ಗಲಾಟೆಯಲ್ಲಿ ಪ್ರಾಚೀನ ಭಾರತದಲ್ಲಿ ನಿಜಕ್ಕೂ ಏನೆಲ್ಲ ಇತ್ತು ಎನ್ನುವ ಸಂಗತಿ, ಮತ್ತದರ ವಿವರಗಳು ಯಾವ ಬಣಕ್ಕೂ ಸೇರದ ನಮ್ಮಂತಹವರನ್ನು ತಲುಪುವುದೇ ಇಲ್ಲ.

ಈ ಕೊರತೆಯನ್ನು ಕೊಂಚಮಟ್ಟಿಗೆ ತುಂಬಿಕೊಡುವ ಅಪರೂಪದ ಕೆಲಸವೊಂದು ಇದೀಗ - ಅದೂ ಕನ್ನಡದಲ್ಲಿ - ನಡೆದಿದೆ, ಡಾ. ಬಿ. ಎಸ್. ಶೈಲಜಾ ಹಾಗೂ ಶ್ರೀ ವಿ. ಎಸ್. ಎಸ್. ಶಾಸ್ತ್ರಿಯವರ ಪರಿಕಲ್ಪನೆ 'ಜಂತರ್ ಮಂತರ್ - ಜೈಸಿಂಗ್ ವೀಕ್ಷಣಾಲಯಗಳು' ಎನ್ನುವ ಪುಸ್ತಕವಾಗಿ ಹೊರಬಂದಿದೆ. ಜೈಪುರ - ದೆಹಲಿಗಳಲ್ಲೆಲ್ಲ ಇರುವ ಪ್ರಾಚೀನ ಭಾರತದ ವೀಕ್ಷಣಾಲಯ ಜಂತರ್ ಮಂತರ್‌‌ನ ಬಗ್ಗೆ ನಾವೆಲ್ಲ ಕೇಳಿದ್ದೇವಲ್ಲ, ಈ ಪುಸ್ತಕ ಅಲ್ಲಿನ ಯಂತ್ರಗಳು ಹಾಗೂ ಅವುಗಳ ಕಾರ್ಯವೈಖರಿಯನ್ನು ವಿವರವಾಗಿ ಪರಿಚಯಿಸುತ್ತದೆ.

ಇಷ್ಟುಮಾತ್ರ ಹೇಳಿಬಿಟ್ಟರೆ ಈ ಪ್ರಯತ್ನವನ್ನು ಪೂರ್ಣವಾಗಿ ಪರಿಚಯಿಸಿದಂತಾಗುವುದಿಲ್ಲ. ಏಕೆಂದರೆ ಈ ಪುಸ್ತಕದ ಹೂರಣದ ಜೊತೆಗೆ ಅದರ ವಿನ್ಯಾಸವೂ ಬಲು ವಿಶಿಷ್ಟ - ಪುಟ ತೆರೆದಂತೆ ನಮಗೆ ಕಾಣಿಸುವುದು ಯಂತ್ರಗಳ ಚಿತ್ರವಷ್ಟೇ ಅಲ್ಲ, ಮೂರು ಆಯಾಮದ ಮಾದರಿ!


ಹೌದು, ಮಕ್ಕಳ ಕತೆಪುಸ್ತಕಗಳಲ್ಲಿ ಬಳಕೆಯಾಗುವ ಪುಟಿಯುವ ಪುಟಗಳ (ಪಾಪ್-ಅಪ್ ಪೇಜಸ್) ಪರಿಕಲ್ಪನೆಯನ್ನು ಈ ಕೃತಿ ವಿಜ್ಞಾನದ ಪಾಠ ಹೇಳಲು ಬಹಳ ಸಮರ್ಥವಾಗಿ ಬಳಸಿಕೊಂಡಿದೆ. ವೀಕ್ಷಣಾಲಯದ ಯಂತ್ರಗಳ ಕಾರ್ಯವೈಖರಿಯನ್ನು ಪರಿಚಯಿಸಲು ಪದಗಳನ್ನಷ್ಟೆ ಬಳಸುವ ಬದಲು ಅವುಗಳ ಮಾದರಿಯೇ ಓದುಗರ ಎದುರು ನಿಲ್ಲುವಂತೆ ಮಾಡಲು ಇಲ್ಲಿ ಶ್ರಮವಹಿಸಲಾಗಿದೆ. ಅಷ್ಟೇ ಅಲ್ಲ, ಈ ಮಾದರಿಗಳ ಮೂಲಕ ಯಂತ್ರಗಳ ಕಾರ್ಯನಿರ್ವಹಣೆಯ ನೇರ ಪರಿಚಯ ಮಾಡಿಕೊಳ್ಳಲೂ ಅವಕಾಶ ನೀಡಲಾಗಿದೆ.


ಇನ್ನೊವೇಟಿವ್ ಅಕಾಡೆಮಿ ಫಾರ್ ಮ್ಯಾಥಮ್ಯಾಟಿಕ್ಸ್ (ಐಎ‌ಎಂ) ಸಹಯೋಗದಲ್ಲಿ ಬೆಂಗಳೂರು ಅಸೋಸಿಯೇಶನ್ ಫಾರ್ ಸೈನ್ಸ್ ಎಜುಕೇಶನ್ (ಬೇಸ್) ಪ್ರಕಟಿಸಿರುವ ಈ ಪುಸ್ತಕದ ಬೆಲೆ ಐದುನೂರು ರೂಪಾಯಿಗಳು. ಪ್ರತಿಗಳಿಗಾಗಿ ರಾಜಭವನ ಸಮೀಪವಿರುವ ತಾರಾಲಯವನ್ನು (ಪ್ಲಾನೆಟೇರಿಯಂ) ಸಂಪರ್ಕಿಸಬಹುದು. ಹೆಚ್ಚಿನ ವಿವರಗಳಿಗೆ: www.taralaya.org/publications.php

ವಿಜ್ಞಾನದಲ್ಲಿ ಆಸಕ್ತಿಯಿರುವವರು, ವಿದ್ಯಾರ್ಥಿಗಳ ಪೋಷಕರು ಕೊಳ್ಳಲೇಬೇಕಾದ ಪುಸ್ತಕವಿದು; ಕನ್ನಡ ಪುಸ್ತಕಲೋಕದಲ್ಲಿ ಹೊಸ ಪ್ರಯೋಗಗಳನ್ನು ಪ್ರೋತ್ಸಾಹಿಸಬೇಕೆನ್ನುವವರು ಕೂಡ! 

1 ಕಾಮೆಂಟ್‌:

Holalkere Laxmivenkatesh ಹೇಳಿದರು...

bahala chennaagideyappa. odale bekada pustakagalalli idu saha omdu.

badge