ಸೋಮವಾರ, ಡಿಸೆಂಬರ್ 28, 2015

ಕನಸುಗಳಿಗೆ ತಂತ್ರಜ್ಞಾನದ ರೆಕ್ಕೆ

ಟಿ. ಜಿ. ಶ್ರೀನಿಧಿ

ಮಿಕ್ಸರ್ ಗ್ರೈಂಡರಿನಿಂದ ಮಸಾಲೆ ದೋಸೆಯವರೆಗೆ, ದ್ವಿಚಕ್ರ ವಾಹನದಿಂದ ದ್ವಿದಳ ಧಾನ್ಯಗಳವರೆಗೆ ಈಗ ಪ್ರತಿಯೊಂದನ್ನೂ ಆನ್‌ಲೈನ್‌ನಲ್ಲೇ ಕೊಳ್ಳುವುದು ಸಾಧ್ಯ. ಮನೆಯಿಂದ ಹೊರಗೆ ಕಾಲಿಡಬೇಕಾದ ಅಗತ್ಯವಿಲ್ಲ, ಟ್ರಾಫಿಕ್ ಜಾಮ್ ಭಯವೂ ಇಲ್ಲ - ಕೈಲಿರುವ ಮೊಬೈಲಿನಲ್ಲೋ ಪಕ್ಕದ ಕಂಪ್ಯೂಟರಿನಲ್ಲೋ ಕ್ಷಣಾರ್ಧದಲ್ಲೇ ನಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡುವುದು, ಅದಕ್ಕಾಗಿ ಹಣಪಾವತಿಸುವುದು ಸಾಧ್ಯ. ಇಷ್ಟೆಲ್ಲ ಅನುಕೂಲದ ಜೊತೆಗೆ ಡಿಸ್ಕೌಂಟು-ಕ್ಯಾಶ್‌ಬ್ಯಾಕುಗಳ ಆಮಿಷ ಬೇರೆ!

ನಾವು ಕ್ಷಣಾರ್ಧದಲ್ಲಿ ಆರ್ಡರ್ ಮಾಡುವುದೇನೋ ಸರಿ, ಆದರೆ ಆರ್ಡರ್ ಮಾಡಿದ ವಸ್ತು ನಮ್ಮನ್ನು ತಲುಪುವುದು ಮಾತ್ರ ನಿಧಾನ. ದೋಸೆಯೂ ಪಿಜ್ಜಾ-ಬರ್ಗರ್‌ಗಳೂ ಅರ್ಧಗಂಟೆಯಷ್ಟು ಸಮಯ ತೆಗೆದುಕೊಂಡರೆ ಇತರ ವಸ್ತುಗಳು ನಮ್ಮನ್ನು ತಲುಪಲು ಅರ್ಧದಿನವೋ ಅರ್ಧವಾರವೋ ಬೇಕಾಗುತ್ತದೆ.

ಇದೇಕೆ ಹೀಗೆ? ಯಾವುದೋ ವಸ್ತು ಬೇಕೆಂದು ನಾವು ಸಲ್ಲಿಸಿದ ಬೇಡಿಕೆ ಸಂಕೇತಗಳ ರೂಪತಳೆದು ಅಂತರಜಾಲದಲ್ಲಿ ಹಾರಿಹೋಗುತ್ತದಲ್ಲ, ಅದೇ ರೀತಿ ಆ ವಸ್ತುವೂ ಹಾರಿಬಂದು ನಮ್ಮ ಕೈಸೇರುವುದು ಸಾಧ್ಯವಿಲ್ಲವೆ?

ಕಾಲ್ಪನಿಕ ಕತೆಯಂತೆ ಕಾಣುವ ಈ ಸನ್ನಿವೇಶವನ್ನು ನಿಜವಾಗಿಸಲು ಅನೇಕ ಪ್ರಯತ್ನಗಳು ಈಗಾಗಲೇ ನಡೆದಿವೆ. ಆ ಕುರಿತ ಸುದ್ದಿಗಳು ಹಳತೂ ಆಗಿಬಿಟ್ಟಿವೆ.


ಈ ಪ್ರಯತ್ನಗಳಲ್ಲಿ ಬಳಕೆಯಾಗುತ್ತಿರುವ ಸಾಧನದ ಹೆಸರೇ ಡ್ರೋನ್.

'ಥ್ರೀ ಇಡಿಯಟ್ಸ್' ಚಿತ್ರದಲ್ಲಿ ಅಮೀರ್ ಖಾನ್ ರಿಮೋಟ್ ಕಂಟ್ರೋಲ್ ಬಳಸಿ ಹಾರಿಸುತ್ತಾನಲ್ಲ, ಅಂತಹವೇ ಹಾರುವ ಯಂತ್ರಗಳು ಇವು. ಪೈಲಟ್ ಇಲ್ಲದ ಪುಟ್ಟ ಹೆಲಿಕಾಪ್ಟರ್ ಅಥವಾ ವಿಮಾನ ಅಂದರೂ ಸರಿಯೇ (ಅಂದಹಾಗೆ ಮಾನವರಹಿತ ಹಾರುವಾಹನ ಅಥವಾ 'ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್' ಎನ್ನುವುದು ಡ್ರೋನ್‌ಗಳಿಗಿರುವ ಇನ್ನೊಂದು ಹೆಸರು).

ಅಡಗಿಕೊಂಡಿರುವ ಶತ್ರುಗಳನ್ನು ಪತ್ತೆಮಾಡಲು, ಅವರ ಮೇಲೆ ಗುಂಡಿನ ದಾಳಿ ನಡೆಸಲು ಸೇನಾಪಡೆಗಳು ಡ್ರೋನ್ ಬಳಸುವುದು ಸಾಮಾನ್ಯ. ಯುದ್ಧರಂಗದಲ್ಲಿ ಹುಟ್ಟಿದ ಇನ್ನಿತರ ಎಷ್ಟೋ ಸಾಧನಗಳಂತೆ ಇವು ಈಚೆಗೆ ಯುದ್ಧರಂಗದ ಹೊರಗೂ ಅಪಾರ ಜನಪ್ರಿಯತೆ ಗಳಿಸಿಕೊಳ್ಳುತ್ತಿವೆ.

ಐದು ಸೆಂಟೀಮೀಟರಿನಿಂದ ಐವತ್ತು ಮೀಟರುಗಳವರೆಗೆ ಅನೇಕ ಗಾತ್ರಗಳಲ್ಲಿರುವ ಡ್ರೋನ್‌ಗಳ ಕಾರ್ಯಾಚರಣೆ ಹೆಲಿಕಾಪ್ಟರಿನಂತೆಯೇ ಆದರೂ ಅವುಗಳ ನಿರ್ವಹಣೆ ಮಾತ್ರ ಹೆಲಿಕಾಪ್ಟರ್ ಹೋಲಿಕೆಯಲ್ಲಿ ಬಹು ಸುಲಭ. ಅವುಗಳ ಜನಪ್ರಿಯತೆ ಹೆಚ್ಚುವುದಕ್ಕೂ ಇದೇ ಮುಖ್ಯ ಕಾರಣ.

ಛಾಯಾಗ್ರಹಣದಲ್ಲಿ ಡ್ರೋನ್ ಬಳಕೆ ಈಗಾಗಲೇ ಹಳತಾಗುತ್ತಿರುವ ಸುದ್ದಿ. ಖಾಸಗಿ ಸಮಾರಂಭಗಳಿಂದ ಪ್ರಾರಂಭಿಸಿ ಸಾರ್ವಜನಿಕ ಉತ್ಸವಗಳವರೆಗೆ ಅನೇಕ ಸಂದರ್ಭಗಳಲ್ಲಿ ಕ್ಯಾಮೆರಾಗಳನ್ನು ಮೇಲಕ್ಕೆ ಹಾರಿಸಿ ವಿಭಿನ್ನ ಕೋನದಿಂದ ಚಿತ್ರಗಳನ್ನು ಸೆರೆಹಿಡಿಯಲು ಡ್ರೋನ್‌ಗಳು ಬಳಕೆಯಾಗುತ್ತವೆ. ಕೃಷಿಭೂಮಿಯ ಸಮೀಕ್ಷೆಯಿಂದ ಪ್ರಾರಂಭಿಸಿ ಸಂರಕ್ಷಿತ ಅರಣ್ಯಪ್ರದೇಶಗಳ ಮೇಲೆ ನಿಗಾವಹಿಸುವವರೆಗೆ ಇನ್ನೂ ಹಲವು ಉಪಯೋಗಗಳಿಗಾಗಿ ಡ್ರೋನ್ ಬಳಕೆ ಸಾಧ್ಯವೆನ್ನುವುದು ಈಗಾಗಲೇ ಸಾಬೀತಾಗಿದೆ.

ಕ್ಯಾಮೆರಾ ಹೊತ್ತು ಹಾರಿದ ಮೇಲೆ ಇತರ ವಸ್ತುಗಳನ್ನು ಹೊರುವುದೇನು ಕಷ್ಟವೇ? ಆನ್‌ಲೈನ್ ಶಾಪಿಂಗ್‌ನಲ್ಲಿ ಕೊಂಡ ವಸ್ತುಗಳನ್ನು, ಬೇರೆ ಇನ್ನೆಲ್ಲಿಂದಲೋ ಬಂದಿರುವ ಪಾರ್ಸಲ್ಲುಗಳನ್ನು ತಲುಪಿಸಲು ಡ್ರೋನ್ ಬಳಸಹೊರಟಿರುವ ಹಿನ್ನೆಲೆಯಲ್ಲಿರುವುದು ಇದೇ ಐಡಿಯಾ. ಅಮೆಜಾನ್, ಗೂಗಲ್, ವಾಲ್‌ಮಾರ್ಟ್ ಸೇರಿದಂತೆ ಅನೇಕ ಸಂಸ್ಥೆಗಳು ತಮ್ಮಲ್ಲಿ ಕೊಂಡ ಉತ್ಪನ್ನಗಳನ್ನು ಗ್ರಾಹಕರ ಮನೆಗೆ ತಲುಪಿಸಲೆಂದು ಡ್ರೋನ್ ಬಳಸಲು ಮುಂದಾಗಿವೆ. ಸಿಂಗಪುರ್ ಪೋಸ್ಟ್, ಡಿಎಚ್‌ಎಲ್ ಮುಂತಾದ ಅಂಚೆ-ಕೊರಿಯರ್ ಸಂಸ್ಥೆಗಳೂ ಡ್ರೋನ್ ಡೆಲಿವರಿ ಪ್ರಯೋಗ ನಡೆಸಿವೆ.

ಡ್ರೋನ್‌ಗಳು ಹೆಚ್ಚುಹೆಚ್ಚು ಸುದ್ದಿಮಾಡಿದಂತೆ ಅವುಗಳ ಲಭ್ಯತೆಯೂ ಹೆಚ್ಚುತ್ತಿದೆ, ಬೆಲೆಯೂ ಕೈಗೆಟುಕುವ ಮಟ್ಟಕ್ಕೆ ಬಂದಿದೆ. ಹಲವು ಸಾವಿರ ರೂಪಾಯಿಗಳಿಗೆ ದೊರಕುವ ಹತ್ತಾರು ಬಗೆಯ ಡ್ರೋನ್‌ಗಳು ಈಗಾಗಲೇ ಅಂಗಡಿಗಳಲ್ಲಿ, ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಕಾಣಿಸಿಕೊಂಡಿವೆ. ಮೊಬೈಲ್ ಹಾಗೂ ಟ್ಯಾಬ್ಲೆಟ್‌ಗಳ ಮೂಲಕವೇ ನಿಯಂತ್ರಿಸಬಹುದಾದ ಡ್ರೋನ್‌ಗಳೂ ಬಂದಿವೆ.

ಜನಸಾಮಾನ್ಯರ ಕೈಗೂ ಡ್ರೋನ್‌ಗಳು ಸಿಗುತ್ತಿದ್ದಂತೆ ಅವುಗಳ ಹೊಸಹೊಸ ಉಪಯೋಗಗಳೂ ರೂಪುಗೊಳ್ಳುತ್ತಿವೆ: ಅರಣ್ಯನಾಶದಿಂದ ಹಾಳಾಗಿರುವ ಪ್ರದೇಶಗಳಲ್ಲಿ ಬೀಜ ನೆಟ್ಟು ಮತ್ತೆ ಹಸಿರು ಮೂಡಿಸಲು ಡ್ರೋನ್ ಬಳಸುವ ಯೋಜನೆ ಇದಕ್ಕೊಂದು ಉದಾಹರಣೆ. ಅಗ್ನಿ ಅನಾಹುತ, ಮುಳುಗಡೆ ಮುಂತಾದ ಸಂದರ್ಭಗಳಲ್ಲಿ ಕ್ಷಿಪ್ರವಾಗಿ ಸ್ಥಳಪರಿಶೀಲನೆ ನಡೆಸುವುದಕ್ಕೂ ಡ್ರೋನ್ ಬಳಕೆ ಸಾಧ್ಯ ಎಂದು ಪ್ರಾಯೋಗಿಕವಾಗಿ ತೋರಿಸಲಾಗಿದೆ.

೨೦೨೫ರ ವೇಳೆಗೆ ಡ್ರೋನ್ ಆಧರಿತ ಉದ್ದಿಮೆಗಳು ಎಂಟರಿಂದ ಹತ್ತು ಬಿಲಿಯನ್ ಡಾಲರುಗಳಷ್ಟು ಭಾರೀ ಪ್ರಮಾಣದ ವಹಿವಾಟು ನಡೆಸಲಿವೆ ಹಾಗೂ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಎಂದು ಯುಎಇ ಸರಕಾರದ 'ಡ್ರೋನ್ಸ್ ಫಾರ್ ಗುಡ್' ಜಾಲತಾಣ ಹೇಳುತ್ತದೆ (ನವೆಂಬರ್ ೨೦೧೫).

ಇಷ್ಟೇ ಆಗಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಡ್ರೋನ್ ಬಳಕೆ ಹೆಚ್ಚಿದಂತೆ ಸಮಸ್ಯೆಗಳೂ ಶುರುವಾಗಿವೆ.

ಡ್ರೋನ್‌ಗಳ ಬೇಜವಾಬ್ದಾರಿಯುತ ಬಳಕೆ ಇಂತಹ ಸಮಸ್ಯೆಗಳಲ್ಲಿ ಮೊದಲನೆಯದು. ಹೊಸ ಹವ್ಯಾಸವೊಂದನ್ನು ಪ್ರಾರಂಭಿಸುವ ಹುಮ್ಮಸ್ಸಿನಲ್ಲಿ ಡ್ರೋನ್ ಕೊಳ್ಳುವ ಮಂದಿ ಅದನ್ನು ಖಾಸಗಿ ಸ್ವತ್ತುಗಳ ಮೇಲೆ, ನಿರ್ಬಂಧಿತ ಪ್ರದೇಶಗಳಲ್ಲಿ ಹಾಗೂ ಸ್ಮಾರಕಗಳ ಆಸುಪಾಸಿನಲ್ಲಿ ಹಾರಬಿಡುವುದು ಅನೇಕ ತೊಂದರೆಗಳಿಗೆ ಕಾರಣವಾಗಿದೆ. ಬೇರೆಲ್ಲೋ ಏಕೆ, ದೆಹಲಿಯ ಸಂಸತ್ ಭವನ ಹಾಗೂ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಆಸುಪಾಸಿನಲ್ಲಿ ಡ್ರೋನ್‌ಗಳು ಕಾಣಿಸಿಕೊಂಡು ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದ್ದೂ ಆಗಿದೆ. ರಿಮೋಟ್ ಬಳಸುತ್ತಿದ್ದವನ ನಿಯಂತ್ರಣ ತಪ್ಪಿ ಹಾರಿದ ಡ್ರೋನ್ ಐತಿಹಾಸಿಕ ಸ್ಮಾರಕವೊಂದಕ್ಕೆ ಡಿಕ್ಕಿಹೊಡೆದ ಘಟನೆ ಸ್ಕಾಟ್‌ಲೆಂಡಿನಲ್ಲಿ ನಡೆದಿದೆ. ಹಾರುತ್ತಿದ್ದ ಡ್ರೋನ್ ಒಂದು ವಿದ್ಯುತ್ ತಂತಿಗಳಲ್ಲಿ ಸಿಲುಕಿಕೊಂಡು ಅಮೆರಿಕಾದಲ್ಲೂ ಕತ್ತಲೆ ಭಾಗ್ಯ ಕರುಣಿಸಿದೆ. ಕಾಡ್ಗಿಚ್ಚಿನ ಸಂದರ್ಭದಲ್ಲಿ ಡ್ರೋನ್ ಮೂಲಕ ವೀಡಿಯೋ ತೆಗೆಯಲು ಹೊರಟ ಬೃಹಸ್ಪತಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಹೆಲಿಕಾಪ್ಟರುಗಳ ಹಾರಾಟಕ್ಕೆ ಅಡ್ಡಿಮಾಡಿದ್ದಾರೆ.

ಸಾಮಾನ್ಯ ಬಳಕೆದಾರರೇ ಇಷ್ಟೆಲ್ಲ ತೊಂದರೆ ಸೃಷ್ಟಿಸಿದ ಮೇಲೆ ಸಮಾಜ ವಿರೋಧಿ ಶಕ್ತಿಗಳು ಸುಮ್ಮನಿದ್ದಾವೆಯೇ? ನಿಷೇಧಿತ ವಸ್ತುಗಳ ಕಳ್ಳಸಾಗಣೆಯಲ್ಲಿ, ಗೂಢಚಾರಿಕೆಯಲ್ಲೆಲ್ಲ ಡ್ರೋನ್ ಬಳಕೆಯಾಗುತ್ತಿರುವ ಬಗ್ಗೆ ಹಲವು ಸುದ್ದಿಗಳು ಈಗಾಗಲೇ ಕೇಳಿಬಂದಿವೆ.

ಈ ಪರಿಸ್ಥಿತಿ ಮುಂದೆ ಇನ್ನಷ್ಟು ಹದಗೆಡುವುದನ್ನು ತಡೆಯಲೆಂದೇ ವಿಶ್ವದ ಹಲವೆಡೆಗಳಲ್ಲಿ ಡ್ರೋನ್ ಬಳಕೆ ನಿಯಂತ್ರಿಸುವ ಪ್ರಯತ್ನಗಳು ನಡೆದಿವೆ. ಹಲವು ನಗರಗಳಲ್ಲಿ ಪೊಲೀಸ್ ಅನುಮತಿಯಿಲ್ಲದೆ ಡ್ರೋನ್ ಹಾರಾಟವನ್ನು ಈಗಾಗಲೇ ನಿಷೇಧಿಸಲಾಗಿದೆ. ಇತರ ವಾಹನಗಳಂತೆ ಡ್ರೋನ್ ನೋಂದಣಿಯನ್ನೂ ಕಡ್ಡಾಯಗೊಳಿಸುವ ಯೋಜನೆ ಅಮೆರಿಕಾದಲ್ಲಿ ರೂಪುಗೊಳ್ಳುತ್ತಿದೆ. ಭಾರತದಲ್ಲಿ ವಿಮಾನ ಯಾನ ಕ್ಷೇತ್ರದ ಮೇಲ್ವಿಚಾರಣೆ ನೋಡಿಕೊಳ್ಳುವ ಡಿಜಿಸಿಎ ಕೂಡ ಡ್ರೋನ್ ಬಳಕೆಯ ಕುರಿತು ನಿಯಮಗಳನ್ನು ರೂಪಿಸುತ್ತಿದೆ.

ಇಷ್ಟೆಲ್ಲ ಸಂಗತಿಗಳ ನಡುವೆಯೂ ಡ್ರೋನ್ ಬಳಕೆಯ ಹೊಸ ಸಾಧ್ಯತೆಗಳು ಒಂದರ ಹಿಂದೊಂದರಂತೆ ನಮ್ಮೆದುರು ಬರುತ್ತಿವೆ; ಮೊಬೈಲಿನಲ್ಲಿ ಆರ್ಡರ್ ಮಾಡಿದ ಬಿಸಿಬಿಸಿ ಪಿಜ್ಜಾ ನಮ್ಮ ಮನೆಯೊಳಕ್ಕೆ ಹಾರಿಬರುವ ದಿನದ ನಿರೀಕ್ಷೆಯೂ ಹೆಚ್ಚುತ್ತಿದೆ!

ಡಿಸೆಂಬರ್ ೨೦೧೫ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge