ಬುಧವಾರ, ನವೆಂಬರ್ 4, 2015

ಜೆನ್‌ಫೋನ್ ಲೇಸರ್: ಕೈಗೆಟುಕುವ ಬೆಲೆ, ಉತ್ತಮ ಗುಣಮಟ್ಟ


ಈಚಿನ ದಿನಗಳಲ್ಲಿ ಮೊಬೈಲ್ ಫೋನ್ ಮಾರುಕಟ್ಟೆಗೆ ಹೊಸ ಮಾದರಿಗಳು ಒಂದರ ಹಿಂದೊಂದರಂತೆ ಪ್ರವೇಶಿಸುತ್ತಲೇ ಇವೆ. ಆದಷ್ಟೂ ಹೆಚ್ಚಿನ ಸವಲತ್ತುಗಳನ್ನು ಸಾಧ್ಯವಾದಷ್ಟೂ ಕಡಿಮೆ ಬೆಲೆಯಲ್ಲಿ ಒದಗಿಸಲು ಇಲ್ಲಿ ಸ್ಪರ್ಧೆಯೇ ನಡೆದಿದೆ.

ಮೊಬೈಲ್ ದರಸಮರದಲ್ಲಿ ಅತ್ಯಂತ ಹೆಚ್ಚು ಲಾಭವಾಗಿರುವುದು ಹತ್ತು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ ಫೋನುಗಳನ್ನು ಬಳಸುವವರಿಗೆ ಎನ್ನಬಹುದು. ಇಷ್ಟು ಬೆಲೆಯ ಮಿತಿಯೊಳಗೆ ಸಾಕಷ್ಟು ಉತ್ತಮ ಸೌಲಭ್ಯಗಳನ್ನು ನೀಡುವ ಹಲವು ಫೋನುಗಳು ಇದೀಗ ಮಾರುಕಟ್ಟೆಯಲ್ಲಿವೆ.

ಇಂತಹ ಫೋನುಗಳಲ್ಲೊಂದು ಏಸಸ್ ಸಂಸ್ಥೆಯ 'ಜೆನ್‌ಫೋನ್ ೨ ಲೇಸರ್'.
ಐದೂವರೆ ಇಂಚಿನ ಎಚ್‌ಡಿ ಪರದೆ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ೪, ೧೩ ಮೆಗಾಪಿಕ್ಸೆಲಿನ ಪ್ರಾಥಮಿಕ ಕ್ಯಾಮೆರಾ, ೪ಜಿ ಡ್ಯುಯಲ್ ಸಿಮ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಹೊಂದಿರುವ ಈ ಮೊಬೈಲಿನ ಬೆಲೆ ರೂ. ೯೭೯೯ರಿಂದ ಪ್ರಾರಂಭವಾಗುತ್ತದೆ. ಜೆನ್‌ಫೋನ್ ೨ ಲೇಸರ್ ಅನ್ನು ನೀವು ಫ್ಲಿಪ್‌ಕಾರ್ಟ್ ಮೂಲಕ ಕೊಳ್ಳಬಹುದು.ಉತ್ತಮ ಗುಣಮಟ್ಟದ ಕ್ಯಾಮೆರಾ ಈ ಫೋನಿನ ಪ್ರಮುಖ ವೈಶಿಷ್ಟ್ಯಗಳಲ್ಲೊಂದು. ನಾವು ಕ್ಲಿಕ್ಕಿಸಲು ಬಯಸುವ ದೃಶ್ಯವನ್ನು ಕ್ಷಿಪ್ರವಾಗಿ ಫೋಕಸ್ ಮಾಡಲು ಅನುವಾಗುವಂತೆ ಈ ಮೊಬೈಲಿನ ಪ್ರಾಥಮಿಕ ಕ್ಯಾಮೆರಾದಲ್ಲಿ 'ಲೇಸರ್ ಫೋಕಸ್' ಸೌಲಭ್ಯವಿದೆ. ಕ್ಯಾಮೆರಾ ಮುಂದಿನ ವಸ್ತುಗಳನ್ನು ಫೋಕಸ್ ಮಾಡಲು ಇಲ್ಲಿ ಲೇಸರ್ ಕಿರಣಗಳನ್ನು ಬಳಸಲಾಗುವುದರಿಂದ [ಈ ಸೌಲಭ್ಯವಿಲ್ಲದ ಮೊಬೈಲುಗಳ ಹೋಲಿಕೆಯಲ್ಲಿ] ಬಹುಬೇಗನೆ ಫೋಕಸ್ ಮಾಡುವುದು, ಚಿತ್ರ ಸೆರೆಹಿಡಿಯುವುದು ಸಾಧ್ಯವಾಗುತ್ತದೆ. ದುಬಾರಿ ಬೆಲೆಯ ಹ್ಯಾಂಡ್‌ಸೆಟ್ಟುಗಳಲ್ಲಷ್ಟೆ ಇರುತ್ತಿದ್ದ ಈ ಸೌಲಭ್ಯವನ್ನು ಹತ್ತು ಸಾವಿರ ರೂಪಾಯಿಯೊಳಗಿನ ಮೊಬೈಲಿನಲ್ಲೂ ನೀಡಿರುವುದು ಏಸಸ್ ಸಂಸ್ಥೆಯ ಹೆಚ್ಚುಗಾರಿಕೆ.

ಜೆನ್‌ಫೋನ್ ೨ ಸರಣಿಯ ಎಲ್ಲ ಮೊಬೈಲುಗಳ ಕ್ಯಾಮೆರಾದಲ್ಲೂ ಬಳಕೆಯಾಗಿರುವ 'ಪಿಕ್ಸೆಲ್ ಮಾಸ್ಟರ್' ತಂತ್ರಜ್ಞಾನ ಈ ಫೋನಿನಲ್ಲೂ ಬಳಕೆಯಾಗಿದೆ. ಹಾಗಾಗಿ ಇದನ್ನು ಬಳಸಿ ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ಸೆರೆಹಿಡಿಯುವ ಅನುಭವ ಬಹಳ ಚೆನ್ನಾಗಿದೆ. ಐದು ಮೆಗಾಪಿಕ್ಸೆಲಿನ ಫ್ರಂಟ್ ಕ್ಯಾಮೆರಾದಲ್ಲಿ ಸೆಲ್ಫಿಗಳನ್ನೂ ಸರಾಗವಾಗಿ ಕ್ಲಿಕ್ಕಿಸಿಕೊಳ್ಳಬಹುದು.


ಐದೂವರೆ ಇಂಚಿನ ಪರದೆಯಲ್ಲಿ ಚಿತ್ರಗಳು ಚೆನ್ನಾಗಿ ಮೂಡುತ್ತವೆ. ೧.೨ ಗಿಗಾಹರ್ಟ್ಸ್‌ನ ಸ್ನಾಪ್‌ಡ್ರಾಗನ್ ೪೧೦ ಕ್ವಾಡ್‌ಕೋರ್ ಪ್ರಾಸೆಸರ್ ಜೊತೆಗೆ ೨ ಜಿಬಿ ರ್‍ಯಾಮ್ ಇರುವುದರಿಂದ ಕೆಲಸದ ವೇಗವೂ ತೃಪ್ತಿಕರವಾಗಿದೆ. ೩೦೦೦ ಎಂಎ‌ಎಚ್‌ನ ಲಿಥಿಯಂ ಪಾಲಿಮರ್ ಬ್ಯಾಟರಿಯಿಂದಾಗಿ ಫೋನನ್ನು ಸಾಕಷ್ಟು ಸಮಯದವರೆಗೆ ಬಳಸುವುದು ಸಾಧ್ಯ. ಕಡತಗಳನ್ನು ಉಳಿಸಿಡಲು ೮ ಹಾಗೂ ೧೬ ಜಿಬಿ ಸೆಕೆಂಡರಿ ಮೆಮೊರಿಯ ಆಯ್ಕೆ ಲಭ್ಯವಿದೆ. ಹೆಚ್ಚುವರಿಯಾಗಿ ೧೨೮ ಗಿಗಾಬೈಟ್‌ವರೆಗಿನ ಮೈಕ್ರೋ ಎಸ್‌ಡಿ ಕಾರ್ಡ್ ಬಳಸಬಹುದು.

ಪವರ್ ಬಟನ್ ಮೊಬೈಲಿನ ಮೇಲ್ತುದಿಯಲ್ಲಿದೆ. ವಾಲ್ಯೂಮ್ ಬಟನ್ [ಇತರೆಲ್ಲ ಜೆನ್‌ಫೋನ್ ಮಾದರಿಗಳಂತೆ] ಮೊಬೈಲಿನ ಹಿಂಭಾಗದಲ್ಲಿದೆ. ಸೆಲ್ಫಿ ಕ್ಲಿಕ್ಕಿಸಲು ವಾಲ್ಯೂಮ್ ಬಟನ್ನನ್ನೇ ಬಳಸಬಹುದಾದ್ದು ಅನುಕೂಲಕರ; ಆದರೆ - ಫೋನಿನ ಗಾತ್ರ ಕೊಂಚ ದೊಡ್ಡದಿರುವುದರಿಂದ - ಇತರ ಸನ್ನಿವೇಶಗಳಲ್ಲಿ ಇದು ಕೊಂಚ ಕಿರಿಕಿರಿಯೆನ್ನಿಸಬಹುದು. ಹಿಂಭಾಗದ ಹೊದಿಕೆಗೆ ಮ್ಯಾಟ್ ಫಿನಿಶ್ ಇದೆ.

ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ ಬಳಸುವ ಈ ಫೋನಿನಲ್ಲಿ ಏಸಸ್ ಸಂಸ್ಥೆ 'ಜೆನ್ ಯುಐ' ಎನ್ನುವ ಯೂಸರ್ ಇಂಟರ್‌ಫೇಸ್ ಅನ್ನು ಅಳವಡಿಸಿದೆ. ಇದನ್ನು ಬಳಸುವ ಅನುಭವ ಚೆನ್ನಾಗಿದೆ. ಮಕ್ಕಳು ಉಪಯೋಗಿಸುವಾಗ ಅವರು ಏನೇನೆಲ್ಲ ಬಳಸಬಹುದು ಎಂದು ನಾವೇ ತೀರ್ಮಾನಿಸಬಹುದಾದ 'ಚೈಲ್ಡ್ ಮೋಡ್'ನಂತಹ ಆಯ್ಕೆಗಳು ಉಪಯುಕ್ತ. ಆದರೆ ಜೆನ್ ಯುಐ ಅಂಗವಾಗಿ ಬರುವ ಹತ್ತಾರು ಆಪ್‌ಗಳು, ಅವಕ್ಕೆ ಮತ್ತೆಮತ್ತೆ ಬರುವ ಅಪ್‌ಡೇಟ್‌ಗಳು ಕೊಂಚ ಕಿರಿಕಿರಿಮಾಡುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ ಹತ್ತು ಸಾವಿರದ ಆಸುಪಾಸಿನಲ್ಲಿ ಮೊಬೈಲ್ ಕೊಳ್ಳಲು ಹೊರಟವರಿಗೆ ಜೆನ್‌ಫೋನ್ ಲೇಸರ್ ನಿಜಕ್ಕೂ ಒಂದು ಉತ್ತಮ ಆಯ್ಕೆ. ಇನ್ನೂ ಕೊಂಚ ಹೆಚ್ಚಿನ ಸವಲತ್ತುಗಳು (೩ ಜಿಬಿ ರ್‍ಯಾಮ್, ೧.೫ ಗಿಗಾಹರ್ಟ್ಸ್‌ನ ಸ್ನಾಪ್‌ಡ್ರಾಗನ್ ೬೧೫ ಆಕ್ಟಾಕೋರ್ ಪ್ರಾಸೆಸರ್) ಬೇಕೆನ್ನುವವರಿಗೆ ರೂ. ೧೩,೯೯೯ರ ಬೆಲೆಯ ಹೊಸದೊಂದು ಆವೃತ್ತಿ ಕೂಡ ಇದೆ.

ಕಾಮೆಂಟ್‌ಗಳಿಲ್ಲ:

badge