ಮಂಗಳವಾರ, ಅಕ್ಟೋಬರ್ 13, 2015

ಪುಟ್ಟ ಮಕ್ಕಳಿಗೆ ಸಿಹಿ ಪೆಪ್ಪರ್‌ಮಿಂಟ್

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎನ್ನುವುದು ನಮಗೆ ಗೊತ್ತೇ ಇದೆ. ಮಕ್ಕಳ ಕುರಿತು ಆ ಶಿಕ್ಷಕರಿಗೆ ಹೆಚ್ಚಿನ ಆಸಕ್ತಿಯಿದ್ದಷ್ಟೂ ಅವರು ನಮ್ಮ ಮುಂದಿನ ಪೀಳಿಗೆಯನ್ನು ಇನ್ನಷ್ಟು ಚೆನ್ನಾಗಿ ರೂಪಿಸಬಲ್ಲರು. ಮಕ್ಕಳಿಗೆ ಹೊಸ ವಿಷಯಗಳನ್ನು ತಿಳಿಸುವ, ಅವರಲ್ಲಿ ಕುತೂಹಲವನ್ನು ಹೆಚ್ಚಿಸುವ ಆಸಕ್ತಿಯಿರುವ ಶಿಕ್ಷಕರಲ್ಲಿ ಶ್ರೀ ನಾರಾಯಣ ಬಾಬಾನಗರ ಒಬ್ಬರು.

ಮೇಷ್ಟರ ಕೆಲಸದ ಜೊತೆಗೆ ವಿಜ್ಞಾನ ಸಂವಹನವನ್ನೂ ಸೊಗಸಾಗಿ ಮಾಡುವ ಬಾಬಾನಗರ ಅವರ ಹೊಸ ಕೃತಿ 'ಪೆಪ್ಪರ್‌ಮಿಂಟ್'. ಪುಟ್ಟಪುಟ್ಟ ಬರಹಗಳಲ್ಲಿ ಹೊಸ ವಿಷಯಗಳನ್ನು (ಕೇರಮ್ ಆಡುವಾಗ ಬೋರಿಕ್ ಪೌಡರ್ ಬಳಸುವುದು ಏಕೆ, ಕೃತಕ ಉಪಗ್ರಹಗಳ ಉಪಯೋಗ ಏನು, ಗೀಜಗನ ಗೂಡಿನ ವೈಶಿಷ್ಟ್ಯ ಏನು ಇತ್ಯಾದಿ) ಮಕ್ಕಳಿಗೆ ತಿಳಿಸಿಕೊಡುವ ವಿಶಿಷ್ಟ ಪ್ರಯತ್ನ ಇದು. ಓದು ಹೊರೆಯೆನಿಸುವುದಿಲ್ಲವಾದ್ದರಿಂದ ಇದು ಮಕ್ಕಳಿಗೂ ಇಷ್ಟವಾಗುತ್ತದೆ.

ಪುಸ್ತಕದ ವಿನ್ಯಾಸ ಮನಸೆಳೆಯುವಂತಿದೆ. ಹಲವು ಲೇಖನಗಳನ್ನು ಪುಟ್ಟಿ ಎಂಬ ಮಗುವಿನೊಡನೆ ನಡೆದ ಸಂಭಾಷಣೆಯ ರೂಪದಲ್ಲಿ ನಿರೂಪಿಸಿರುವುದು ವಿಶೇಷ. ಈ ಲೇಖನಗಳು ವಿಶೇಷವಾಗಿ ಇಷ್ಟವಾಗುತ್ತವೆ. ಅಷ್ಟೇ ಅಲ್ಲ, ಸಂಕಲನದ ಎಲ್ಲ ಲೇಖನಗಳೂ ಇದೇ ಶೈಲಿಯಲ್ಲಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸುವಂತೆ ಮಾಡುತ್ತವೆ. ಆದರೆ ಹಲವು ವಿಷಯಗಳನ್ನು ವಿಶ್ಲೇಷಿಸುವ ವಿಜ್ಞಾನದ ಬರಹಗಳ ನಡುವೆ ಇದ್ದಕ್ಕಿದ್ದಂತೆ ಒಂದೆರಡು ಕತೆ ಬಂದದ್ದು ಅಷ್ಟು ಸರಿತೋರಲಿಲ್ಲ. ಕೆಲವು ಪುಟಗಳಲ್ಲಿ ಮೂರು ನಾಲ್ಕೇ ಸಾಲುಗಳಿರುವುದು ಕೂಡ ಕೊಂಚ ಅಸಹಜವೆನ್ನಿಸಿತು.

ಮಕ್ಕಳಿಗೆ ಓದಿಹೇಳಲು, ಓದಲು ಕೊಡಲು ಈ ಪುಸ್ತಕ ನಿಜಕ್ಕೂ ಒಳ್ಳೆಯ ಆಯ್ಕೆ. ಈ ಬಗೆಯ ಲೇಖನಗಳನ್ನು - ಪುಸ್ತಕಗಳನ್ನು ಕನ್ನಡದ ಓದುಗರಿಗೆ ನೀಡುತ್ತಿರುವ ಶ್ರೀ ನಾರಾಯಣ ಬಾಬಾನಗರ ಅಭಿನಂದನಾರ್ಹರು.

ಪೆಪ್ಪರ್‌ಮಿಂಟ್
ಲೇಖಕರು: ನಾರಾಯಣ ಬಾಬಾನಗರ
ಪುಟಗಳು: ೯೬, ಬೆಲೆ: ರೂ. ೮೦
ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್ (ಮೊದಲ ಮುದ್ರಣ ೨೦೧೫) 

ಕಾಮೆಂಟ್‌ಗಳಿಲ್ಲ:

badge