ಗುರುವಾರ, ಅಕ್ಟೋಬರ್ 8, 2015

ಪಠ್ಯದಿಂದ ಧ್ವನಿಗೆ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಕನ್ನಡದ ಇಷ್ಟೆಲ್ಲ ಮಾಹಿತಿ ಕಂಪ್ಯೂಟರೀಕರಣವಾಗಿರುವ ಈ ಸಂದರ್ಭದಲ್ಲಿ ಅದು ಎಲ್ಲರಿಗೂ ದೊರಕುವಂತಿರಬೇಕಾದ್ದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪಠ್ಯವನ್ನು ಧ್ವನಿಗೆ ಪರಿವರ್ತಿಸುವ (ಟೆಕ್ಸ್ಟ್ ಟು ಸ್ಪೀಚ್) ತಂತ್ರಾಂಶದ್ದು ಮಹತ್ವದ ಸ್ಥಾನ. ಕಂಪ್ಯೂಟರಿನಲ್ಲಿ ದಾಖಲಾಗಿರುವ ಪಠ್ಯವನ್ನು ಧ್ವನಿರೂಪದಲ್ಲಿ ನಮಗೆ 'ಓದಿಹೇಳುವುದು' ಈ ತಂತ್ರಾಂಶದ ವೈಶಿಷ್ಟ್ಯ. ಕಂಪ್ಯೂಟರಿನ ಪರದೆಯ ಮೇಲೆ ಪುಟಗಟ್ಟಲೆ ಪಠ್ಯವನ್ನು ಓದಲು ಬೇಜಾರು ಎನ್ನುವವರಿಂದ ಹಿಡಿದು ದೃಷ್ಟಿ ಸವಾಲಿನ ದೆಸೆಯಿಂದ ಓದಲು ಸಾಧ್ಯವಿಲ್ಲದವರ ತನಕ ಈ ತಂತ್ರಾಂಶ ಎಲ್ಲರಿಗೂ ನೆರವಾಗಬಲ್ಲದು.
ದೃಷ್ಟಿ ಸವಾಲು ಎದುರಿಸುತ್ತಿರುವ ವ್ಯಕ್ತಿಗಳು ಕಂಪ್ಯೂಟರ್ ಲೋಕದಲ್ಲಿರುವ ಮಾಹಿತಿಯನ್ನು ಆಲಿಸಲು ನೆರವಾಗುವ 'ಈ-ಸ್ಪೀಕ್' ಎನ್ನುವ ಮುಕ್ತ ತಂತ್ರಾಂಶವನ್ನು ಸ್ವತಃ ದೃಷ್ಟಿಸವಾಲು ಎದುರಿಸುತ್ತಿರುವ ಟಿ. ಎಸ್. ಶ್ರೀಧರ್ ಅವರು ಕನ್ನಡಕ್ಕೆ ತಂದಿದ್ದಾರೆ. ಯುನಿಕೋಡ್ ಪಠ್ಯವನ್ನು ಓದಿ ಹೇಳುವ ಈ ತಂತ್ರಾಂಶ 'ಕಣಜ' ಅಂತರಜಾಲ ಜ್ಞಾನಕೋಶದ ಜಾಲತಾಣದಲ್ಲಿ ಎಲ್ಲರಿಗೂ ಲಭ್ಯ.

ಕನ್ನಡ ಪಠ್ಯವನ್ನು ಧ್ವನಿಗೆ ಪರಿವರ್ತಿಸುವ 'ಮುನ್ನುಡಿ' ಎನ್ನುವ ಇನ್ನೊಂದು ತಂತ್ರಾಂಶ ಕೂಡ ಇದೆ. ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆಗಾಗಿ ಸಿದ್ಧವಾಗುತ್ತಿರುವ 'ಧ್ವನಿ' ತಂತ್ರಾಂಶ ಕೂಡ ಕನ್ನಡ ಪಠ್ಯವನ್ನು ಓದಿ ಹೇಳಬಲ್ಲದು (ಇದು ಇನ್ನೂ ವಿಂಡೋಸ್‌ಗಾಗಿ ಲಭ್ಯವಿಲ್ಲ).

ಕಾಮೆಂಟ್‌ಗಳಿಲ್ಲ:

badge