ಬುಧವಾರ, ಜೂನ್ 17, 2015

ಸ್ಮಾರ್ಟ್ ಪೆನ್ನು ಸ್ಮಾರ್ಟ್ ಕಾಗದ!

ಟಿ. ಜಿ. ಶ್ರೀನಿಧಿ

"ಎಲ್ಲಕಡೆಯೂ ಕಂಪ್ಯೂಟರುಗಳು ಬಂದಮೇಲೆ ಕಾಗದ ಬಳಸುವ ಅಗತ್ಯವೇ ಇರುವುದಿಲ್ಲ" - ಎನ್ನುವ 'ಪೇಪರ್‌ಲೆಸ್' ಪ್ರಪಂಚದ ಕಲ್ಪನೆ ಕಂಪ್ಯೂಟರುಗಳು ಪರಿಚಯವಾದ ಕಾಲದಿಂದಲೇ ಚಾಲ್ತಿಯಲ್ಲಿದೆ. ಕಾಗದದ ಮೇಲಿನ ನಮ್ಮ ಅವಲಂಬನೆ ಕೆಲವೇ ವರ್ಷಗಳಲ್ಲಿ ಕಡಿಮೆಯಾಗಲಿದೆ ಎಂದು ಹೇಳಲು ಶುರುಮಾಡಿ ದಶಕಗಳೇ ಕಳೆದಿವೆ.

ಆದರೆ ಕಾಗದದ ಬೆಲೆ ಕಡಿಮೆಯಿರುವುದರಿಂದಲೋ, ಡಿಜಿಟಲ್ ರೂಪಕ್ಕಿಂತ ಕಾಗದವೇ ನಮ್ಮ ಮನಸ್ಸಿಗೆ ಹೆಚ್ಚು ಆಪ್ತವೆನಿಸುವುದರಿಂದಲೋ ಕಾಗದದ ಬಳಕೆ ಇಷ್ಟೆಲ್ಲ ಸಮಯದ ನಂತರವೂ ಮುಂದುವರೆದಿದೆ. ಕೆಲವು ಸಂದರ್ಭಗಳಲ್ಲಿ ಕಾಗದಕ್ಕೆ ಪೆನ್ನು ಜೋಡಿಯಾಗಿದ್ದರೆ ಇನ್ನು ಕೆಲವು ಬಾರಿ ಕಂಪ್ಯೂಟರಿನಲ್ಲಿರುವ ಮಾಹಿತಿಯೇ ಪ್ರಿಂಟರ್ ಮಾರ್ಗವಾಗಿ ಕಾಗದದ ಮೇಲಿಳಿಯುತ್ತದೆ. ಹೇಗೋ, ಪ್ರಪಂಚ ಮಾತ್ರ ಇನ್ನೂ 'ಪೇಪರ್‌ಲೆಸ್' ಆಗಿಯೇ ಇಲ್ಲ.

ಹಾಗೆಂದಮಾತ್ರಕ್ಕೆ ಕಾಗದದ ಬಳಕೆಯ ಮೇಲೆ ತಂತ್ರಜ್ಞಾನ ಪ್ರಭಾವವನ್ನೇ ಬೀರಿಲ್ಲ ಎನ್ನುವಂತಿಲ್ಲ.
ಏಕೆಂದರೆ ಕಳೆದ ಕೆಲ ವರ್ಷಗಳಲ್ಲಿ ಕಾಗದದ ಅನೇಕ ಕಡತ-ದಾಖಲೆಗಳು ಡಿಜಿಟಲ್ ರೂಪಕ್ಕೆ ಬದಲಾಗಿರುವುದನ್ನು ನಾವೇ ನೋಡುತ್ತಿದ್ದೇವಲ್ಲ!

ಮಾಹಿತಿಯನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ಕಾಗದದ ಬಳಕೆಗೆ ಪರ್ಯಾಯಗಳನ್ನು ರೂಪಿಸುವ ಇಂತಹ ಪ್ರಯತ್ನಗಳಲ್ಲಿ ಹಲವು ವಿಧ. ನಿರ್ವಹಣೆಯ ಸರಳತೆಗಾಗಿ ಮಾಹಿತಿಯನ್ನು ಕಂಪ್ಯೂಟರಿನಲ್ಲಿ ಶೇಖರಿಸಿಡುವುದು ಇದಕ್ಕೊಂದು ಉದಾಹರಣೆ. ದೊಡ್ಡದೊಡ್ಡ ಲೆಕ್ಕದ ಪುಸ್ತಕಗಳ, ರಾಶಿರಾಶಿ ಕಡತಗಳ ಬದಲಿಗೆ ಮಾಹಿತಿಯನ್ನು ಕಂಪ್ಯೂಟರಿಗೆ ಊಡಿಸಿಡುವುದು ನಿರ್ವಹಣೆಯ ದೃಷ್ಟಿಯಿಂದ ಸುಲಭ; ಬೇಕಾದಾಗ ಬೇಕಾದುದನ್ನು ಥಟ್ಟನೆ ಹುಡುಕಿಕೊಳ್ಳುವುದೂ ಸಾಧ್ಯ.
ಸುಲಭ ನಿರ್ವಹಣೆಯ ವಿಷಯಕ್ಕೆ ಬಂದಾಗ ನೀಡಬಹುದಾದ ಇನ್ನೊಂದು ಉದಾಹರಣೆ ಇ-ಪುಸ್ತಕ ಹಾಗೂ ಪತ್ರಿಕೆಗಳದು. ಒಂದು ಪುಸ್ತಕದ ಗಾತ್ರಕ್ಕಿಂತ ಚಿಕ್ಕದಾದ ಟ್ಯಾಬ್ಲೆಟ್ ಅಥವಾ ಇ-ಬುಕ್ ರೀಡರಿನಲ್ಲಿ ನಾವು ಅದೆಷ್ಟೋ ಪುಸ್ತಕ-ಪತ್ರಿಕೆಗಳನ್ನು ಶೇಖರಿಸಿಟ್ಟುಕೊಂಡು ಓದುವುದು ಸಾಧ್ಯ. ಅಪರೂಪದ, ನಮ್ಮೂರಿನಲ್ಲಿ ಸಿಗದಂತಹ ಪುಸ್ತಕ-ಪತ್ರಿಕೆಗಳನ್ನೂ ಓದಲು ಸಾಧ್ಯವಾಗಿಸಿರುವುದು ಈ ಸಾಧನಗಳ ಹೆಗ್ಗಳಿಕೆಯೆಂದೇ ಹೇಳಬೇಕು. ಇ-ಬುಕ್ ರೀಡರುಗಳಲ್ಲಿ ಬಳಸಲಾಗುವ 'ಇ-ಇಂಕ್' ಎನ್ನುವ ತಂತ್ರಜ್ಞಾನದಿಂದಾಗಿ ಇ-ಪುಸ್ತಕಗಳ ಓದು ಕಣ್ಣಿಗೆ ಶ್ರಮವೆನಿಸುವುದೂ ಇಲ್ಲ! 
ಕಚೇರಿಗಳಲ್ಲೇನೋ ಸರಿ, ಆದರೆ ಸಾಮಾನ್ಯ ಬಳಕೆದಾರರಲ್ಲಿ ಇಷ್ಟೆಲ್ಲ ಭಾರೀ ಪ್ರಮಾಣದ ಮಾಹಿತಿಯೇನೂ ಇರುವುದಿಲ್ಲ. ಮಹತ್ವದ ಕಡತಗಳನ್ನೇನೋ ನಾವು ಕಂಪ್ಯೂಟರಿನಲ್ಲಿ ಶೇಖರಿಸಿ ಜೋಪಾನ ಮಾಡಬಹುದು; ಆದರೆ ದಿನನಿತ್ಯದ ವ್ಯವಹಾರಗಳಿಗೆ ಪೇಪರ್-ಪೆನ್ನು ನಮಗಿನ್ನೂ ಅಚ್ಚುಮೆಚ್ಚು. ಮೀಟಿಂಗಿನಲ್ಲಿ ಕೇಳಿದ್ದನ್ನು ಬರೆದಿಡಲು, ಮಾಡಬೇಕಾದ ಕೆಲಸಗಳನ್ನು ನೆನಪಿಟ್ಟುಕೊಳ್ಳಲು ನೋಟ್ ಪುಸ್ತಕವೇ ಚೆಂದ ಎನ್ನುವವರು ಅದೆಷ್ಟೋ ಮಂದಿ.

ನೋಟ್ ಪುಸ್ತಕದಲ್ಲಿ ಬರೆಯುವ ಈ ಮಾಹಿತಿಯನ್ನೆಲ್ಲ ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಸಾಧ್ಯವಿಲ್ಲವೆ? ಖಂಡಿತಾ ಇದೆ. ಮೊಬೈಲಿನಲ್ಲೋ ಟ್ಯಾಬ್ಲೆಟ್ಟಿನಲ್ಲೋ ಸಣ್ಣ ಟಿಪ್ಪಣಿಗಳನ್ನು ಟೈಪಿಸಿ ಇಟ್ಟುಕೊಳ್ಳುವುದು ಬಹಳ ಸುಲಭ. ಆದರೆ ಟೈಪಿಸಿ ಇಟ್ಟುಕೊಳ್ಳುವುದರಲ್ಲಿ ಕಾಗದದ ಸ್ಪರ್ಶವಾಗಲಿ, ಬರೆಯುವ ಅನುಭವವಾಗಲಿ ಇರುವುದಿಲ್ಲವಲ್ಲ!ಈ ಸಮಸ್ಯೆಯನ್ನು ಪರಿಹರಿಸಲು ಕೆಲ ವಿಶಿಷ್ಟ ಪ್ರಯೋಗಗಳು ನಡೆದಿವೆ. ಅಂತಹ ಪ್ರಯೋಗಗಳಲ್ಲೊಂದು 'ಸ್ಮಾರ್ಟ್' ನೋಟ್ ಪುಸ್ತಕಗಳ ತಯಾರಿಕೆ. ಈ ಪುಸ್ತಕದ ಪುಟಗಳಲ್ಲಿ ನಾವು ಬರೆದಿಟ್ಟಿದ್ದನ್ನು ಮೊಬೈಲಿನಲ್ಲಿ ಫೋಟೋ ತೆಗೆದರೆ ಸಾಕು, ನೋಟ್ ಬುಕ್ಕಿನೊಡನೆ ಬರುವ ಆಪ್ ಆ ಪಠ್ಯವನ್ನು ಗುರುತಿಸಿ (ಸದ್ಯಕ್ಕೆ ಇಂಗ್ಲಿಷ್ ಮಾತ್ರ) ನಂತರದ ಬಳಕೆಗೆಂದು ಶೇಖರಿಸಿಡುತ್ತದೆ. ಅಷ್ಟೇ ಅಲ್ಲ, ಪುಟದಲ್ಲಿರುವ ಮಾಹಿತಿ ಯಾವ ವಿಷಯವನ್ನು ಕುರಿತಾದದ್ದು ಎಂದು ನಾವು ಗುರುತಿಸಿದ್ದರೆ ಆಪ್‌ನಲ್ಲಿ ಅದೂ ದಾಖಲಾಗುತ್ತದೆ. ಬರೆದ ಚಿತ್ರಗಳನ್ನು ಉತ್ತಮ ಗುಣಮಟ್ಟದಲ್ಲಿ ಗ್ರಹಿಸುವ ಸೌಲಭ್ಯ ಕೂಡ ಲಭ್ಯ. ಎವರ್‌ನೋಟ್, ಅಡೋಬಿ ಕ್ರಿಯೇಟಿವ್ ಕ್ಲೌಡ್ ಮುಂತಾದ ಪ್ರಸಿದ್ಧ ವ್ಯವಸ್ಥೆಗಳೊಡನೆ ಸುಲಭವಾಗಿ ಹೊಂದಿಕೊಳ್ಳುವ ಇಂತಹ ಹಲವು ನೋಟ್ ಪುಸ್ತಕಗಳು ಈಗಾಗಲೇ ತಯಾರಾಗಿವೆ.

ಇಂತಹ ಸ್ಮಾರ್ಟ್‌ತನವೆಲ್ಲ ಬರಿಯ ನೋಟ್ ಪುಸ್ತಕಗಳಿಗಷ್ಟೆ ಸೀಮಿತವಾಗಿರಬೇಕು ಎಂದೇನೂ ಇಲ್ಲವಲ್ಲ, ಹಾಗಾಗಿ ಪೆನ್ನುಗಳೂ ಈಗ ಸ್ಮಾರ್ಟ್ ಆಗಿವೆ!

ಇಂತಹ ಸ್ಮಾರ್ಟ್ ಪೆನ್ನುಗಳಲ್ಲಿ ರೀಫಿಲ್ಲಿನ ಜೊತೆಗೆ ಒಂದು ಕ್ಯಾಮೆರಾ ಕೂಡ ಇರುತ್ತದೆ. ಹಾಗಾಗಿ ಇವನ್ನು ಬಳಸಿ ಕಾಗದದ ಮೇಲೆ ಬರೆದದ್ದೆಲ್ಲ ಡಿಜಿಟಲ್ ರೂಪದಲ್ಲೂ ದಾಖಲಾಗುತ್ತವೆ; ಹಾಗಾಗಿ ನಾವು ಬರೆದದ್ದನ್ನು ಮೊಬೈಲ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರಿಗೆ ಬಹಳ ಸುಲಭವಾಗಿ ವರ್ಗಾಯಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಕೈಬರಹದಲ್ಲಿ ಬರೆದದ್ದನ್ನು ಡಿಜಿಟಲ್ ಪಠ್ಯರೂಪಕ್ಕೆ ಪರಿವರ್ತಿಸಿ ವಿವಿಧ ಆಪ್ ಅಥವಾ ತಂತ್ರಾಂಶಗಳೊಡನೆ ಬಳಸಲೂಬಹುದು, ಅದನ್ನೆಲ್ಲ ಮತ್ತೆ ಟೈಪ್ ಮಾಡುವ ಅಗತ್ಯವಿಲ್ಲದೆಯೇ!


ಇಂತಹ ಕೆಲ ಪೆನ್ನುಗಳು ನಮ್ಮ ಬರಹದ ಜೊತೆಗೆ ಧ್ವನಿಯನ್ನೂ ದಾಖಲಿಸಿಕೊಳ್ಳಬಲ್ಲವು ಎನ್ನುವುದು ವಿಶೇಷ. ಯಾವುದೋ ಪಾಠದ ನೋಟ್ಸನ್ನೋ ಸಮಾರಂಭದ ವರದಿಯನ್ನೋ ಬರೆದುಕೊಳ್ಳುವಾಗ ಈ ಸೌಲಭ್ಯ ಬಳಸಿದರೆ ಮಾತನಾಡಿದವರು ಏನು ಹೇಳುತ್ತಿದ್ದರು, ನಾವು ಏನು ಬರೆದುಕೊಂಡಿದ್ದೇವೆ ಎನ್ನುವುದನ್ನೆಲ್ಲ ಮತ್ತೆ ಪರಿಶೀಲಿಸಿಕೊಳ್ಳುವುದು ಸುಲಭವಾಗುತ್ತದೆ.

ಸ್ಮಾರ್ಟ್ ಪುಸ್ತಕ - ಪೆನ್ನುಗಳ ಈ ಪರಿಕಲ್ಪನೆ ಬಹಳ ಆಕರ್ಷಕವಾಗಿ ಕಾಣುತ್ತದೆ, ನಿಜ. ಆದರೆ ಇವುಗಳನ್ನು ಬಳಸಲು ಕೆಲ ಸಮಸ್ಯೆಗಳಿವೆ. ಉದಾಹರಣೆಗೆ ಕೆಲ ಸ್ಮಾರ್ಟ್ ಪೆನ್ನುಗಳನ್ನು ಬಳಸಿ ನಿರ್ದಿಷ್ಟ ಬಗೆಯ ಕಾಗದದ ಮೇಲೆ ಮಾತ್ರವೇ ಬರೆಯಬಹುದು. ಅಲ್ಲದೆ ಮೊಬೈಲ್ ಚಾರ್ಜ್ ಮಾಡಿದಂತೆ ಈ ಪೆನ್ನುಗಳನ್ನೂ ಚಾರ್ಜ್ ಮಾಡಬೇಕು. ಇಷ್ಟರ ಮೇಲೆ ಸ್ಮಾರ್ಟ್ ಪೆನ್ನು, ಸ್ಮಾರ್ಟ್ ಪುಸ್ತಕಗಳೆಲ್ಲ ದುಬಾರಿ ಕೂಡ!

ಹಾಗಾದರೆ ನಮ್ಮಂತಹ ಸಾಮಾನ್ಯ ಬಳಕೆದಾರರ ಬರವಣಿಗೆಯೆಲ್ಲ ಸಾಮಾನ್ಯ ಪೆನ್ನು-ಪೇಪರಿಗೆ, ಅಥವಾ ಮೊಬೈಲಿನಲ್ಲೋ ಕಂಪ್ಯೂಟರಿನಲ್ಲೋ ಟೈಪು ಮಾಡುವುದಕ್ಕಷ್ಟೆ ಸೀಮಿತವಾಗಬೇಕೇ?

ಹಾಗೇನೂ ಇಲ್ಲ. ನಮ್ಮೆಲ್ಲರ ಅಚ್ಚುಮೆಚ್ಚಿನ ಸಂಗಾತಿಯಾದ ಮೊಬೈಲ್ ಫೋನನ್ನು ನಾವು ಸದ್ಯಕ್ಕೆ ನೆಚ್ಚಿಕೊಳ್ಳುವುದು ಸಾಧ್ಯವಿದೆ. ಅದರಲ್ಲಿ ದೊರಕುವ ಅನೇಕ ನೋಟ್ ಟೇಕಿಂಗ್ ಆಪ್‌ಗಳು (ಟಿoಣe ಣಚಿಞiಟಿg ಚಿಠಿಠಿs ಎಂದು ಗೂಗಲ್ ಮಾಡಿ) ನಮಗೆ ಬೇಕಾದ್ದನ್ನು ಬರೆದಿಟ್ಟುಕೊಳ್ಳಲು ನೆರವಾಗುತ್ತವೆ. ಮೊಬೈಲ್ ಹಾಗೂ ಟ್ಯಾಬ್ಲೆಟ್ಟಿನ ಸ್ಪರ್ಶಸಂವೇದಿ ಪರದೆಯ ಮೇಲೆ ನಾವು ಕೈಬೆರಳಿನಿಂದ ಬರೆದದ್ದನ್ನು ಇಂತಹ ಆಪ್‌ಗಳು ಉಳಿಸಿಟ್ಟುಕೊಂಡು ಅಗತ್ಯವಾದಾಗ ಮತ್ತೆ ಒದಗಿಸುತ್ತವೆ. ಕೈಬೆರಳು ಬಳಸಿ ಬರೆಯುವುದು ಕಷ್ಟ ಎನ್ನುವವರು 'ಸ್ಟೈಲಸ್' ಎನ್ನುವ ಪೆನ್ನಿನಂತಹ ಕಡ್ಡಿಯನ್ನು ಬಳಸಿಯೂ ಬರೆಯಬಹುದು.

ಹೀಗೆ ಬರೆದ ಪಠ್ಯ ಹಲವು ಆಪ್‌ಗಳಲ್ಲಿ ಚಿತ್ರರೂಪದಲ್ಲಷ್ಟೆ ಉಳಿದುಕೊಳ್ಳುತ್ತದೆ. ಇನ್ನು ಕೆಲವೆಡೆ ಮೊಬೈಲ್ ಪರದೆಯ ಮೇಲೆ ಗೀಚಿದ ಅಕ್ಷರಗಳನ್ನು ಗುರುತಿಸಿ ಪಠ್ಯರೂಪಕ್ಕೆ ಬದಲಿಸುವ ಸೌಲಭ್ಯವೂ ಇರುತ್ತದೆ. ಇಂತಹುದೊಂದು ಸೌಲಭ್ಯವನ್ನು ಗೂಗಲ್ ಸಂಸ್ಥೆ ಕನ್ನಡಕ್ಕೂ ತಂದಿದೆ: ಎಸ್ಸೆಮ್ಮೆಸ್ಸನ್ನೋ ವಾಟ್ಸಾಪ್ ಸಂದೇಶವನ್ನೋ ಟೈಪಿಸಲು ಅಕ್ಷರಗಳನ್ನು ಕುಟ್ಟುವ ಬದಲು ನಾವು ನಮ್ಮ ಕೈಬೆರಳಿನಿಂದ (ಅಥವಾ ಸ್ಟೈಲಸ್ ಬಳಸಿ) ಕನ್ನಡ ಪದಗಳನ್ನು ಬರೆಯುವುದು ಸಾಧ್ಯ. ಹಾಗೆ ಬರೆದದ್ದನ್ನು ಗುರುತಿಸುವ 'ಗೂಗಲ್ ಹ್ಯಾಂಡ್‌ರೈಟಿಂಗ್ ಇನ್‌ಪುಟ್' ಆಪ್ ಅದನ್ನು ತಕ್ಷಣವೇ ಪಠ್ಯರೂಪಕ್ಕೆ ಬದಲಿಸಿಕೊಡುತ್ತದೆ. 'ಗೂಗಲ್ ಟ್ರಾನ್ಸ್‌ಲೇಟ್'ನಲ್ಲಿರುವ ಇದೇ ಸೌಲಭ್ಯ ಬಳಸಿ ನಾವು ಕನ್ನಡದಲ್ಲಿ ಬರೆದದ್ದನ್ನು ಇಂಗ್ಲಿಷಿಗೆ ಭಾಷಾಂತರಿಸಿಕೊಳ್ಳುವುದು ಕೂಡ ಸಾಧ್ಯ.

ಒಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳು ಪೆನ್ನು-ಕಾಗದದ ಅಗತ್ಯವೇ ಇಲ್ಲದಂತೆ ಮಾಡುವ ಬದಲಿಗೆ ಅವನ್ನೂ ಸ್ಮಾರ್ಟ್ ಮಾಡಲು ಹೊರಟಿವೆ, ಕೊನೆಯೇ ಇಲ್ಲದಂತೆ ಬೆಳೆಯುತ್ತಿರುವ 'ಸ್ಮಾರ್ಟ್' ಸಾಧನಗಳ ಸಾಲಿಗೆ ಇದೀಗ ಪೆನ್ನು-ಕಾಗದಗಳೂ ಸೇರಿಕೊಂಡಿವೆ!

ಜೂನ್ ೨೦೧೫ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge