ಸೋಮವಾರ, ಜೂನ್ 1, 2015

ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಬೇಳೂರು ಸುದರ್ಶನ
 • ಭೂಕಂಪ, ಚಂಡಮಾರುತ, ಸುನಾಮಿ; ಎಬೋಲಾ, ಏಯ್ಡ್ಸ್‌; ನಕ್ಷತ್ರಪುಂಜ, ಗ್ರಹಣ; ಮಾಲಿನ್ಯ, ಕಸ, ಹವಾಗುಣ, ಬಿಸಿಯಾಗುತ್ತಿರುವ ಭೂಮಿ...
 • ದಕ್ಷಿಣಕನ್ನಡದಲ್ಲಿ ಎಂಡೋಸಲ್ಫಾನ್‌ ದುರಂತ, ಗೋಗಿಯಲ್ಲಿ ಯುರೇನಿಯಂ ಗಣಿಗಾರಿಕೆ ಅಪಾಯ, ಕೂಡಗಿಯಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ, ಬೆಂಗಳೂರಿನಲ್ಲಿ ಮರಗಳ ಸರ್ವನಾಶ, ರೈತರಿಂದ ಬಿಟಿ ಬೆಳೆಗಳ ನಾಶ, ಅಣ್ಣಿಗೇರಿಯ ತಲೆಬುರುಡೆಗಳು...
ಹೀಗೆ ನೀವು ಹುಡುಕಿದಲ್ಲೆಲ್ಲ ವಿಜ್ಞಾನದ ವರದಿಗಾರಿಕೆಗೆ ಸುದ್ದಿಗಳಿವೆ. ಬಚ್ಚಿಡಲಾಗದ ಸತ್ಯಗಳಿವೆ. ಸರ್ಕಾರದ ಪ್ರತಿನಿಧಿಗಳು, ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಪ್ರತಿದಿನವೂ ವಿಜ್ಞಾನ ವರದಿಗಾರಿಕೆಗೆ ಸಾಕಷ್ಟು ಸರಕುಗಳನ್ನು ಒದಗಿಸುತ್ತಲೇ ಇರುತ್ತಾರೆ. ನೋಡುವ ಕಣ್ಣು, ಬರೆಯುವ ಆಸಕ್ತಿ, ಹುಡುಕುವ ಮನಸ್ಸು ಇದ್ದರೆ ವಿಜ್ಞಾನ ವರದಿಗಾರಿಕೆ ಸುಲಭ!

`ವಿಜ್ಞಾನ ವರದಿಗಾರಿಕೆ' (Science Reporting) ಎಂದರೆ ಯಾವುದು ಎಂಬ ನಿರ್ದಿಷ್ಟತೆ ಇಟ್ಟುಕೊಳ್ಳಬೇಕು. ನೇಪಾಳದ ಭೂಕಂಪವು ಒಂದು ದುರಂತವೂ ಹೌದು; ವಿಜ್ಞಾನದ ವರದಿಗಾರಿಕೆಗೆ ಸಿಕ್ಕ ಅವಕಾಶವೂ ಹೌದು. ಇಲ್ಲಿ ಭೂಕಂಪದ ಹಿಂದಿದ್ದ ಕಾರಣಗಳನ್ನು ಗುರುತಿಸುವುದು, ಭೂಕಂಪದಲ್ಲಿ ಖಚಿತವಾಗಿ ಏನಾಯ್ತು ಎಂದು ಬರೆಯುವುದು, ಮುಂದೆ ಏನಾಗಬಹುದು ಎಂದು ವೈಜ್ಞಾನಿಕವಾಗಿ ಊಹಿಸುವುದು - ಇವು ವರದಿಗಾರಿಕೆಗೆ ಇರುವ ಅವಕಾಶಗಳು.
ಒಂದೇ ಪುಟ್ಟ ಉದಾಹರಣೆ: ೨೦೧೫ರ ಏಪ್ರಿಲ್‌ ೨೫ರ ನೇಪಾಳ ಭೂಕಂಪದಲ್ಲಿ ಭಾರತ ಉಪಖಂಡ ಭೂತಟ್ಟೆಯು ನೇಪಾಳದತ್ತ ೧೦ ಅಂಗುಲದಷ್ಟು ಸರಿದಿದೆ ಎಂದು ಕನ್ನಡ ಪತ್ರಿಕೆಗಳಲ್ಲಿ ಹೇಗೆ ಬಂದಿವೆ ಎಂಬುದನ್ನು ಗಮನಿಸಿ. ಆಂಗ್ಲ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಇಲ್ಲಿ ನಡೆದಿರುವುದು Subduction. ಕನ್ನಡದ ಪತ್ರಿಕೆಗಳಲ್ಲಿ ಭೂಮಿ ಸರಿದಿದೆ ಎಂದು ಸಾರ್ವತ್ರಿಕವಾಗಿ ವರದಿ ಮಾಡಲಾಗಿದೆ. ಸರಿಯುವುದು ಎಂದರೆ, Shift ಅಲ್ಲವೆ? ಹಾಗಾದರೆ Subduction ಎಂದರೆ? (ಗೂಗಲ್‌ನಲ್ಲಿ ಹುಡುಕಿ ನಿಷ್ಕರ್ಷೆ ಮಾಡಿ). ಇದನ್ನು `ಕೆಳಸರಿದಿದೆ' ಎನ್ನಬಹುದೆ? ಹೀಗೆ ವಿಜ್ಞಾನದ ವರದಿಗಾರಿಕೆಯು ಪ್ರತಿದಿನವೂ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಲ್ಲಿ ವರದಿ ಮಾಡುವುದರ ಜೊತೆಗೇ ವಿಜ್ಞಾನ ಸಂವಹನಕ್ಕೆ ಧಕ್ಕೆ ಒದಗದಂತೆ ನೋಡಿಕೊಳ್ಳುವುದು, ಹೊಸ ಪದಗಳ ರಚನೆ ಮಾಡುವುದು - ಎಲ್ಲ ಸವಾಲುಗಳೂ ಇವೆ.

ಕನ್ನಡ ಮಾಧ್ಯಮರಂಗದಲ್ಲಿ ವಿಜ್ಞಾನ ವರದಿಗಾರರು ಎಂಬ ಪ್ರತ್ಯೇಕವಾದ ಗುಂಪು ಇಲ್ಲ. ಸಿನೆಮಾ ಪತ್ರಕರ್ತರು, ವಾಣಿಜ್ಯ ವರದಿಗಾರರು, ಕ್ರೈಮ್‌ ಬೀಟ್‌ ಮಾಡುವವರು, ರಾಜಕೀಯ ವರದಿಗಾರರು - ಎಲ್ಲರೂ ಇದ್ದಾರೆ. ವಿಜ್ಞಾನ ವರದಿಗಾರಿಕೆ ಎನ್ನುವುದು ಎಲ್ಲ ಪತ್ರಕರ್ತರೂ ಪತ್ರಿಕಾಹೇಳಿಕೆಗಳನ್ನು ನೋಡಿ ಮಾಡಬಹುದಾದ ವರದಿಗಾರಿಕೆ ಎಂಬ ನಂಬಿಕೆಯಲ್ಲಿ ಮಾಧ್ಯಮವು ಇದ್ದಂತಿದೆ. ಈ ಸನ್ನಿವೇಶ ಬದಲಾಗಬೇಕಿದೆ.

ವರದಿಗಾರಿಕೆಯ ಮಾಧ್ಯಮಗಳು: ರೇಡಿಯೋ, ಆಡಿಯೋ ಸಂದರ್ಶನ (ಪಾಡ್‌ಕಾಸ್ಟಿಂಗ್‌), ಟಿವಿ, ಆನ್‌ಲೈನ್‌ ಸುದ್ದಿ, ಪುಸ್ತಕ, ಬ್ಲಾಗ್‌, ಮುದ್ರಣ ಮಾಧ್ಯಮ, ಫೇಸ್‌ಬುಕ್‌ನಂಥ ಸಮಾಜತಾಣ.

ವಿಜ್ಞಾನ ವರದಿಯ ಮೂಲ ಸೂತ್ರಗಳು
 1. ಸಹಜವಾಗಿ ಬರೆಯುವ ಸುದ್ದಿಯ ಸೂತ್ರಗಳೇ ಇಲ್ಲಿಯೂ ಅನ್ವಯವಾಗುತ್ತವೆ: ವರದಿಗಾರಿಕೆ ಬಗ್ಗೆ ಪತ್ರಿಕಾರಂಗದಲ್ಲಿ ಇರುವ ಎಲ್ಲಾ ಸೂತ್ರಗಳೂ ಇಲ್ಲಿಗೂ ಅನ್ವಯಿಸುತ್ತವೆ ಎಂಬುದನ್ನು ಮರೆಯಬೇಡಿ. ಐದು W (What, When, Where, Why, Who) ಮತ್ತು ಒಂದು H (How), ತಲೆಕೆಳಗಾದ ಪಿರಮಿಡ್‌ ಸುದ್ದಿ ರಚನೆ (ಮುಖ್ಯ ಸುದ್ದಿಯನ್ನು ಮೊದಲ ಪ್ಯಾರಾದಲ್ಲಿ ಬರೆಯುವುದು, ಅನಂತರ ವಿವರಗಳನ್ನು ತುಂಬಿಸುವುದು) - ಇದು ವಿಜ್ಞಾನದ ವರದಿಗಾರಿಕೆಗೂ ಅನ್ವಯವಾಗುತ್ತವೆ.
 2. ಸುದ್ದಿಯ ಸಾರವನ್ನೇ ಇಂಗಿಸಬೇಡಿ: ಯಾವುದೇ ವಿಜ್ಞಾನದ ವರದಿಯನ್ನು ಬರೆಯುವಾಗ ಅತಿಯಾಗಿ ವಿವರಗಳನ್ನು ತುಂಬಿಸಬೇಡಿ. ಲಾರ್ಜ್‌ ಹೈಡ್ರಾನ್‌ ಕೊಲೈಡರ್‌ ಬಗ್ಗೆ ಬರೆಯುವಾಗ ದೇವಕಣ ಎಂದರೇನು, ಹಿಗ್ಸ್‌ ಬೋಸಾನ್ ಎಂದರೇನು ಎಂಬ ವೈಜ್ಞಾನಿಕ ವಿವರಗಳನ್ನು ತುಂಬಿದರೆ ವರದಿ ಸತ್ತುಹೋಗುತ್ತದೆ. ಸಂಶೋಧನೆಗಳಿಂದ ನೀವು ಅಚ್ಚರಿಗೆ ಒಳಪಟ್ಟಿರಬಹುದು. ಆದರೆ ಅದನ್ನು ಓದುಗರಿಗೆ ದಾಟಿಸುವಾಗ ಸರಳ ಭಾಷೆ ಮತ್ತು ಮಾಹಿತಿ ಮುಖ್ಯ.
 3. ವಿಜ್ಞಾನವನ್ನೇ ಕೈಬಿಡಬೇಡಿ: ದಿನವಹಿ ನಡೆಯುವ ಘಟನೆಗಳಲ್ಲಿ ವಿಜ್ಞಾನ ಇದ್ದೇ ಇರುತ್ತದೆ. ಇರಿಡಿಯಂ ತಟ್ಟೆಯಲ್ಲಿ ಅಕ್ಕಿ ಕಾಳುಗಳ ಜೂಜು (ರೈಸ್‌ ಪುಲ್ಲಿಂಗ್‌) ನಡೆದರೆ ಅದರಲ್ಲೂ ವಿಜ್ಞಾನದ ಅಂಶವಿದೆ. ಈ ಸಲದ ಬೇಸಗೆಯಲ್ಲಿ ಬಂದ ಭಾರೀ ಮಳೆಯಲ್ಲಿ ಸಹಜವೆಷ್ಟು, ಹವಾಗುಣ ವೈಪರೀತ್ಯವೆಷ್ಟು ಎಂದು ನಿರ್ಧರಿಸಬೇಕು. ಮಾರ್ಚ್‌ ೧ರಂದೇ ಆರಂಭವಾದ ಈ ಮಳೆಯ ಮೂಲ ಮೆಡಿಟರೇನಿಯನ್‌ ಸಮುದ್ರದಲ್ಲಾದ ಒಂದು ಬದಲಾವಣೆ ಎಂಬ ವರದಿಯನ್ನು ಗಮನಿಸಿ. ವಿಜ್ಞಾನಿಗಳು ಏನು ಹೇಳುತ್ತಾರೆ ಎಂಬುದೂ ಇಲ್ಲಿ ಮುಖ್ಯ. ನೇಪಾಳದ ಭೂಕಂಪನದ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ನೀಡಿದವರ ಸಂದರ್ಶನಗಳನ್ನು ಓದಿದಾಗ ಕೆಲವು ಸುಳಿವುಗಳು ಸಿಗುತ್ತವೆ (ಟಿ ಆರ್‌ ಅನಂತರಾಮು, ದಿ ಹಿಂದೂ ಸಂದರ್ಶನ).
 4. ವಿಜ್ಞಾನವನ್ನು ತಪ್ಪಾಗಿ ಅರ್ಥೈಸಬೇಡಿ: ರಾಸಾಯನಿಕ ಸಮೀಕರಣದಿಂದ ಹಿಡಿದು ಡಿಎನ್‌ಎ ವರೆಗೆ ವಿಜ್ಞಾನವು ಸಂಕೀರ್ಣವಾಗೇ ಇರುತ್ತದೆ. ಆದ್ದರಿಂದ ಬೆಳಗ್ಗೆ ನಡೆದ ಸುದ್ದಿಯ ಬಗ್ಗೆ ಸಂಜೆಯೇ ವರದಿ ಕೊಡುವಾಗ ಅತ್ಯಂತ ಹೆಚ್ಚು ಗಮನ ವಹಿಸಿ. ವರದಿ ಒಂದು ದಿನ ತಡವಾದರೂ ಪರವಾಗಿಲ್ಲ; ನಿಮ್ಮ ಅಧ್ಯಯನದಿಂದ ಹೊಸ ಮಾಹಿತಿ ಮೂಡಲಿ.
 5. ತಜ್ಞರಿಗೂ ಪ್ರಶ್ನೆ ಕೇಳಿ: ವಿಜ್ಞಾನಿಗಳ ಸಂದರ್ಶನ ಮಾಡುವಾಗ ನಿಮಗೆ ಸಂಶಯ ಬಂದರೆ ಮತ್ತೊಮ್ಮೆ ಕೇಳಿ. ನಿಮ್ಮ ಬದ್ಧತೆ ಮತ್ತು ವಿಧೇಯತೆ ಓದುಗರಿಗೇ ಹೊರತು ವಿಜ್ಞಾನಿಗಲ್ಲ. ಆದ್ದರಿಂದ ಗೊಂದಲದ ಮಾಹಿತಿಯನ್ನು ಹಾಗೆಯೇ ಬರೆಯುವುದು ತಪ್ಪು. ನಿಮಗೇ ಅರ್ಥವಾಗದಿದ್ದರೆ ಅದನ್ನು ಇತರರಿಗೆ ವಿವರಿಸುವುದಾದರೂ ಹೇಗೆ?
 6. ಎರಡನೇ ದೃಷ್ಟಿಕೋನವೂ ಇರಲಿ: ಸಾಧ್ಯವಿದ್ದಲ್ಲೆಲ್ಲ ವರದಿಯ ಅಂಶಗಳ ಬಗ್ಗೆ ಎರಡನೇ, ಮೂರನೇ ತಜ್ಞರನ್ನೂ ಸಂಪರ್ಕಿಸಬೇಕು. ಇದರಿಂದ ವಿಷಯದ ಬಗ್ಗೆ ನಮಗೇ ಮನದಟ್ಟಾಗುತ್ತದೆ. ಇನ್ನೊಬ್ಬರು ಹೇಳಿರಬಹುದಾದ ಲೋಪವೂ ತಿಳಿಯುತ್ತದೆ. ವರದಿಯ ವಿಷಯವನ್ನು ಖಂಡಿಸುವ, ಅಥವಾ ಅಲ್ಲಗಳೆಯುವ ತಜ್ಞರೂ ಇರುತ್ತಾರೆ ಎಂಬುದನ್ನು ಗಮನಿಸಿ. ಅವರ ಅಭಿಪ್ರಾಯವೂ ಮುಖ್ಯ. ಉದಾಹರಣೆಗೆ: ಸ್ಟ್ರಿಂಗ್‌ ಸಿದ್ಧಾಂತದ ಮೂಲಕ ಬಹುಬ್ರಹ್ಮಾಂಡಗಳನ್ನು ವಿವರಿಸುವ ತಜ್ಞರನ್ನು The Trouble with Physics ಪುಸ್ತಕದಲ್ಲಿ ಪ್ರಶ್ನಿಸಿದವರೂ ಒಬ್ಬ ವಿಜ್ಞಾನಿಯೇ (ಲೀ ಸ್ಮಾಲಿನ್‌ ಎನ್ನುವುದನ್ನು ಮರೆಯಬಾರದು. ಹಾಗಂತ ನಿಜವಾದ ವಾದ ಮಂಡಿಸುವವರಾರು, ಮೊಂಡುವಾದ ಮಾಡುವವರಾರು ಎಂಬ ಗ್ರಹಿಕೆ ನಮ್ಮಲ್ಲಿ ಇರದಿದ್ದರೆ ಸಮಸ್ಯೆ ಇದೆ!
 7. ಸಂಶೋಧನಾ ವರದಿಗಳನ್ನು ಉತ್ಪ್ರೇಕ್ಷಿಸಿ ಬರೆಯಬೇಡಿ: ದಿನವೂ ನೂರಾರು ಸಂಶೋಧನಾ ವರದಿಗಳು, ಆವಿಷ್ಕಾರಗಳು ವರದಿಯಾಗುತ್ತಿವೆ. ಆದ್ದರಿಂದ ನಮಗೆ ಖಚಿತವಾಗಿರದ, ಸುದ್ದಿಸಂಸ್ಥೆಗಳ ಆಧಾರಿತ ಸಂಶೋಧನೆಗಳನ್ನು ವರದಿ ಮಾಡುವಾಗ ಉತ್ಪ್ರೇಕ್ಷೆ ಬೇಡ. ನಾವು ಮಾಹಿತಿಗಳನ್ನು ಮಾರಬೇಕೇ ಹೊರತು, ಹುಸಿ ಕನಸುಗಳನ್ನಲ್ಲ.
 8. ಕೆಲವು ಸಂಶೋಧನೆಗಳಿಗೆ ಎರಡನೇ ಆಯಾಮವೇ ಇರಲಾರದು: ಚಂದ್ರನ ಮೇಲೆ ಮನುಷ್ಯ ಕಾಲಿಟ್ಟಿಲ್ಲ, ಭೂಮಿ ಚಪ್ಪಟೆಯಾಗಿದೆ ಇತ್ಯಾದಿ ಸಿದ್ಧಾಂತಗಳನ್ನು ನಂಬುವಾಗ ಒಳ್ಳೆಯ ವಿಜ್ಞಾನ ಯಾವುದು, ಕೆಟ್ಟದ್ದು ಯಾವುದು ಎಂಬ ವಿವೇಚನೆ ಇರಬೇಕು.
 9. ವರದಿಗಾರಿಕೆಯಲ್ಲಿ ಸ್ವಂತ ಅನುಭವವನ್ನೂ ತರಬಹುದು: ಸುದ್ದಿಕಥೆಯನ್ನು (News Story) ಬರೆಯುವಾಗ ನಿಮ್ಮದೇ ಒಂದು ಪುಟ್ಟ ನುಭವದಿಂದ ಶುರು ಮಾಡಿದರೆ ತಪ್ಪಿಲ್ಲ. ನಾನು ನನ್ನ ಮಟ್ಟಿಗೆ ಹಲವು ಬಾರಿ ಇಂಥ ನಿರೂಪಣೆಯಿಂದಲೇ ಆರಂಭಿಸಿದ್ದೇನೆ. ಅದನ್ನು ವಿಷಯಕ್ಕೆ ಜೋಡಿಸುವುದು ಮುಖ್ಯ.
 10. ಉದಾಹರಣೆಗಳನ್ನು ಕೊಡಿ: ಹಾಗೆಯೇ ಸಂಶೋಧನೆಗಳನ್ನು ಉದಾಹರಿಸುವಾಗ ನಮ್ಮ ದಿನನಿತ್ಯದ ಉದಾಹರಣೆಗಳನ್ನೇ ತೆಗೆದುಕೊಳ್ಳುವುದು ಒಳಿತು. ಕೆಲವೊಮ್ಮೆ ಸಿನೆಮಾದಲ್ಲಿ ಕಂಡ ಕಲ್ಪನೆಯೇ ನಿಜವಾಗಬಹುದು. ಅದನ್ನೂ ಉದಾಹರಿಸಬಹುದು.
 11. ಇನ್‌ಫೋಗ್ರಾಫಿಕ್‌ಗಳನ್ನು ಬಳಸಿ: ಸುದ್ದಿ, ಸುದ್ದಿಕಥೆಗಳನ್ನು ಬರೆಯುವಾಗ ಇನ್‌ಫೋಗ್ರಾಫಿಕ್‌ಗಳನ್ನು ಬಳಸುವುದು ಅತಿಮುಖ್ಯ. ವಿಜ್ಞಾನವನ್ನು ಚಿತ್ರದ ಮೂಲಕ ವಿವರಿಸಿದರೆ ಸಂವಹನ ಯಶಸ್ಸು ಕಂಡಂತೆಯೇ ಸರಿ.
ಅಭ್ಯದಯ ಮತ್ತು ವಿಜ್ಞಾನ ವರದಿಗಳು
ವಿಜ್ಞಾನದ ವರದಿಯೆಂದರೆ ಶುಷ್ಕ ಸಿದ್ಧಾಂತಗಳ ವಿವರಣೆಯಲ್ಲ; ಕೇವಲ ವಿಜ್ಞಾನ ಪ್ರಯೋಗಾಲಯಗಳ ಫಲಿತಾಂಶವಲ್ಲ; ಕ್ಷೇತ್ರ ಅಧ್ಯಯನದ ಪ್ರಬಂಧಗಳಲ್ಲ ಎಂಬುದನ್ನು ಮರೆಯಬಾರದು. ದಿನವಹಿ ಘಟನೆಗಳಲ್ಲಿ ವಿಜ್ಞಾನ ಇದ್ದೇ ಇರುತ್ತದೆ. ಅದಲ್ಲದೆ ಅಭ್ಯುದಯ ಪತ್ರಿಕೋದ್ಯಮದಲ್ಲಿ ವಿಜ್ಞಾನ ವರದಿಗಾರಿಕೆಯ ಹೊಣೆಗಾರಿಕೆಯೂ ಇದೆ.

ರೋಟಿ, ಕಪಡಾ, ಮಕಾನ್‌ ಮತ್ತು ವಾಹನ್‌
ನಮ್ಮ ಬದುಕಿನಲ್ಲಿ ರೋಟಿ, ಕಪಡಾ, ಮಕಾನ್‌ ಮತ್ತು ವಾಹನ್‌ - ಹೀಗೆ ಸ್ಥೂಲವಾಗಿ ನಾಲ್ಕು ಸಂಗತಿಗಳ ಆಧಾರದಲ್ಲಿ ದಿನನಿತ್ಯದ ವರದಿಗಾರಿಕೆಯನ್ನು ಸರಳವಾಗಿ ವರ್ಗೀಕರಿಸಬಹುದು.
 1. ರೋಟಿ: ಆಹಾರದ ಲಭ್ಯತೆ, ಸಿದ್ಧ ಆಹಾರದ ಅಪಾಯಗಳು, ಸಾವಯವ ಕೃಷಿ, ರಾಸಾಯನಿಕಗಳು ಮತ್ತು ಆರೋಗ್ಯ, ಆಹಾರ ಮತ್ತು ಹವಾಗುಣ ಬದಲಾವಣೆಯ ಸಂಕೀರ್ಣ ಸಂಬಂಧ, ಸ್ಥಳೀಯತೆ ಮತ್ತು ಆಮದು ಆಹಾರದ ಪರಿಣಾಮಗಳು, ನೀರು, ಗಾಳಿ ಇತ್ಯಾದಿ
 2. ಕಪಡಾ: ನಮ್ಮ ದೇಹದ ಮೇಲೆ ಬಳಸುವ ಎಲ್ಲ ವಸ್ತುಗಳು (ಉಡುಗೆ, ಸೌಂದರ್ಯ ಸಾಧನಗಳು, ಡಿಜಿಟಲ್‌ ಸಾಧನಗಳು, ದಿನನಿತ್ಯದ ಪರಿಕರಗಳು)
 3. ಮಕಾನ್‌: ಮನೆ, ಕಚೇರಿ, ನಿಲ್ದಾಣಗಳು, ರಸ್ತೆ, ಬೃಹತ್‌ ಕಟ್ಟಡಗಳು, ಇವಕ್ಕೆಲ್ಲ ಸಂಬಂಧಿತ ಇಂಧನ ವಿಷಯಗಳು, ಮೂಲವಸ್ತುಗಳು, ಕೃತಕ ವಸ್ತುಗಳು, ನೈಸರ್ಗಿಕ ಸಂಪನ್ಮೂಲ...
 4. ವಾಹನ್‌: ರಸ್ತೆ, ರೈಲು, ವಿಮಾನ, ವ್ಯೋಮಯಾನ, ಇವಕ್ಕೆಲ್ಲ ಸಂಬಂಧಿಸಿದ ತಂತ್ರಜ್ಞಾನ, ಇಂಧನ, ಲೋಹಗಳ ಬಳಕೆ ಇತ್ಯಾದಿ
ಹವಾಗುಣ ವೈಪರೀತ್ಯ, ಕಲ್ಲಿದ್ದಲು ಆಧಾರಿತ ಸ್ಥಾವರಗಳ ಸ್ಥಾಪನೆ, ರಶ್ಯಾದ ನೆರವಿನಿಂದ ಕರಾವಳಿಗುಂಟ ಬರಲಿರುವ ಪರಮಾಣು ಸ್ಥಾವರಗಳು, ವಿದ್ಯುತ್‌ ಯೋಜನೆಗಳು, ಉದ್ಯಮೀಕರಣ, ನೆಲ-ಜಲ-ವಾಯು-ಶಬ್ದ-ಘನತ್ಯಾಜ್ಯ ಮಾಲಿನ್ಯ, ಇಂಧನಗಳ ಸದ್ಬಳಕೆ, ಬದಲಿ ಇಂಧನಮೂಲಗಳು, ರಾಸಾಯನಿಕಗಳು, ಪ್ಲಾಸ್ಟಿಕ್‌ ಬಳಕೆ, - ಹೀಗೆ ಎಲ್ಲವನ್ನೂ ಮೇಲಿನ ನಾಲ್ಕು ವಿಭಾಗಗಳಲ್ಲಿ ಹಂಚಿಕೊಂಡರೆ ವರದಿಗಾರಿಕೆ ಸಲೀಸು.

ಇದು ಕೇವಲ ಉದಾಹರಣಾರ್ಥ ನೀಡಿರುವ ಪಟ್ಟಿ. ನೀವೇ ಈ ವರ್ಗೀಕರಣವನ್ನು ಸುಧಾರಿಸಬಹುದು!

ವಿಜ್ಞಾನ ಬರವಣಿಗೆ ಕುರಿತ ಮಹತ್ವದ ಕೃತಿ : ಎ ಫೀಲ್ಡ್‌ ಗೈಡ್‌ ಫಾರ್‌ ಸೈನ್ಸ್‌ ರೈಟರ್ಸ್‌
ಎ ಫೀಲ್ಡ್‌ ಗೈಡ್‌ ಫಾರ್‌ ಸೈನ್ಸ್‌ ರೈಟರ್ಸ್‌ ಎಂಬ ಪುಸ್ತಕವನ್ನು ನಾವು ಆಕರ ಗ್ರಂಥವಾಗಿ ಸ್ವೀಕರಿಸಬಹುದು. ಬಹುಶಃ ವಿಜ್ಞಾನ ಬರವಣಿಗೆಯ ಕುರಿತು ಬಂದ ಮೊದಲ ಮತ್ತು ಈವರೆಗೂ ಬಳಕೆಯಲ್ಲಿರುವ ಉತ್ಕೃಷ್ಟ ಪುಸ್ತಕ ಇದು. ಇದರಲ್ಲಿ ಸೂಚಿಸಿರುವ ಗ್ಯಾಜೆಟ್‌ಗಳು ಕಾಲಬಾಹಿರವಾಗಿದೆ ಎನ್ನುವುದನ್ನು ಬಿಟ್ಟರೆ, ವರದಿಗಾರಿಕೆಯ, ನುಡಿಚಿತ್ರ ಬರವಣಿಗೆಯ ಎಲ್ಲ ಸೂತ್ರಗಳನ್ನೂ ಇಲ್ಲಿ ನುರಿತ ಪತ್ರಕರ್ತರೇ ಬರೆದು ಕೊಟ್ಟಿದ್ದಾರೆ.

ಸುದ್ದಿಯನ್ನು ಹುಡುಕುವುದು, ವಿಜ್ಞಾನದ ಜರ್ನಲ್‌ಗಳಿಂದ ವರದಿ ಮಾಡುವುದು, ಅಂಕಿ ಅಂಶಗಳ ಬಳಕೆ, ಬರವಣಿಗೆಗೆ ಒಂದು ಶೈಲಿಯನ್ನು ಕೊಡುವುದು, ಸಣ್ಣ ಪತ್ರಿಕೆಗಳಿಂದ ಹಿಡಿದು ದೊಡ್ಡ ಪತ್ರಿಕೆಗಳು, ವಿಜ್ಞಾನದ ಮ್ಯಾಗಜಿನ್‌ಗಳು, ವಿಜ್ಞಾನ ಕುರಿತ ರೇಡಿಯೋ ವರದಿ, ಫ್ರೀಲಾನ್ಸ್‌ ಬರವಣಿಗೆ, ಪುಸ್ತಕಗಳನ್ನು ಬರೆಯುವ ಬಗೆ, ತನಿಖಾ ವರದಿಗಳು, ವಿವಿಧ ವಿಜ್ಞಾನ ವಿಷಯಗಳಲ್ಲಿ ಪರಿಣತಿ ಸಾಧಿಸುವ ಬಗೆ, ಪರಿಸರ, ಹವಾಗುಣ, ಭೂವಿಜ್ಞಾನ, ವ್ಯೋಮವಿಜ್ಞಾನ - ಇವುಗಳನ್ನೆಲ್ಲ ತಿಳಿಯುವುದು ಹೇಗೆ - ಇವೆಲ್ಲ ಸಂಗತಿಗಳೂ ಈ ಪುಸ್ತಕದಲ್ಲಿ ದಾಖಲಾಗಿವೆ.

ವಿಜ್ಞಾನ ವರದಿಗಾರಿಕೆಯ ವಿವಿಧ ಬಗೆಗಳು
 1. ದಿನವಹಿ ಬರುವ ವಿಜ್ಞಾನದ ಸಂಶೋಧನೆಯ ಸುದ್ದಿಗಳು (ದೇಸಿ, ಅಂತಾರಾಷ್ಟ್ರೀಯ)
 2. ವಿಜ್ಞಾನಿಗಳ ಸಂದರ್ಶನ (ಖುದ್ದು, ಈಮೈಲ್‌, ಆನ್‌ಲೈನ್‌ ಸಂದರ್ಶನ)
 3. ವಿಜ್ಞಾನ ಮತ್ತು ಬದುಕಿಗೆ ಸಂಬಂಧಿಸಿದ ಸುದ್ದಿಗಳು (ಭೂಕಂಪ, ಅತ್ಯಾಧುನಿಕ ತಂತ್ರಜ್ಞಾನ ಇತ್ಯಾದಿ)
ದಿನವಹಿ ವರದಿಗಾರಿಕೆಯ ಮೂಲ ಸೂತ್ರಗಳು
 1. ಸಂಶೋಧನಾ ವರದಿಗಳನ್ನು ಬರೆಯುವಾಗ ಒಂದು ಸಮಸ್ಯೆಯನ್ನು ನಿವಾರಣೆ ಮಾಡಿದ ರೀತಿಯಲ್ಲಿ ಸರಳವಾಗಿ ವಿವರಿಸಿ. ವಿಜ್ಞಾನದ ಪಾರಿಭಾಷಿಕ ಪದಗಳನ್ನು ಬಳಸುವುದನ್ನು ತಪ್ಪಿಸಿ. ಬರೆದ ಮೇಲೆ ಇನ್ನೊಬ್ಬರಿಗೆ ಓದಲು ತಿಳಿಸಿ.
 2. ವಿಜ್ಞಾನ ವರದಿಗಾರಿಕೆಯಲ್ಲೂ - ಇತರೆ ವರದಿಗಳಲ್ಲಿ ಬೇಕಾಗಿರುವ ಹಾಗೆಯೇ- ಸರಳ ಪದಗಳು ಇರಬೇಕು; ವಾಕ್ಯಗಳು ಚಿಕ್ಕದಾಗಿಷ್ಟೂ ಒಳ್ಳೆಯದು.
 3. ವರದಿಯನ್ನು ಬರೆಯುವ ಉದ್ದೇಶವೇನು? ಮಾಹಿತಿ ಕೊಡುವುದೆ? ವಾದಿಸುವುದೆ? ಭಾವನೆಗಳನ್ನು ಕೆರಳಿಸುವುದೆ? - ಏನೇ ಇದ್ದರೂ, ಮಾನವೀಯ ಆಸಕ್ತಿ ಇರುವ ವರದಿಗಾರಿಕೆ ಮಾಡಿರಿ. ನೀವು ಬರೆಯುತ್ತಿರುವುದು ವಿಜ್ಞಾನದ ವರದಿಯಷ್ಟೇ ಅಲ್ಲ, ಮಾನವೀಯ ಆಸಕ್ತಿಯ ವರದಿ ಎಂದು ಭಾವಿಸಿಕೊಳ್ಳಿ.
 4. ವಿಜ್ಞಾನದ ವರದಿಗಳಲ್ಲಿ ವಿಶ್ಲೇಷಣೆ ಬರೆಯುವಾಗ ಖಚಿತತೆ ಇರಬೇಕು. ಅಂಕಿ - ಅಂಶಗಳಲ್ಲಿ ಯಾವುದೇ ವ್ಯತ್ಯಾಸ ಇರಕೂಡದು. ಮಾನದಂಡಗಳನ್ನು ಏಕರೂಪವಾಗಿ ಬಳಸಿ (ಉದಾಹರಣೆಗೆ ಅಡಿಗಳ ಮತ್ತು ಮೀಟರ್‌ಗಳ ಲೆಕ್ಕವನ್ನು ಒಟ್ಟಿಗೇ ಬರೆಯಬೇಡಿ. ೧೦ ಅಡಿ ಜರುಗಿದೆ ಎಂದರೂ ಒಂದೆ; ೩.೩ ಮೀಟರ್‌ ಎಂದರೂ ಅಷ್ಟೇ.)
 5. ಸುದ್ದಿಯು ಯಾರಿಗೆ ಅನ್ವಯವಾಗುತ್ತದೆ, ಭಾರತದ ಪರಿಸ್ಥಿತಿಗೆ ಹೇಗೆ ಸಕಾಲಿಕವಾಗಿದೆ ಎಂಬುದನ್ನು ನಮೂದಿಸಿ.
 6. ಆರೋಗ್ಯ ಕುರಿತ ವರದಿಯಾಗಿದ್ದರೆ, ಹೆಚ್ಚಿನ ಜಾಗೃತೆ ವಹಿಸಿ; ಬೇಕು ಬೇಡಗಳನ್ನು ತಪ್ಪಿಲ್ಲದೆ ನಮೂದಿಸಿ (ಮಹಿಳೆಯರು, ಗರ್ಭಿಣಿಯರು, ಮಕ್ಕಳು ಬಳಸಬಾರದ ಔಷಧಗಳು ಒಂದು ಉದಾಹರಣೆ).
 7. ವರದಿ ಮಾಡುವಾಗ ಸುದ್ದಿಯಲ್ಲಿ ಇರಬಹುದಾದ ಅನಿಶ್ಚಿತತೆಯನ್ನು ಉಲ್ಲೇಖಿಸಿ.
 8. ಆದಷ್ಟೂ ವರದಿಯಲ್ಲಿ ವಿಜ್ಞಾನಿಗಳ, ತಜ್ಞರ ಮಾತುಗಳನ್ನು ಅವರ ಮಾತಿನಲ್ಲೇ ಬರೆಯಿರಿ. ಅವರನ್ನೇ ಉಲ್ಲೇಖಿಸುವಾಗ ಅವರು ಹೇಳಿಯೇ ಇರದ ಮಾಹಿತಿಗಳನ್ನು ಅವರ ಬಾಯಲ್ಲಿ ತುರುಕಬೇಡಿ.
 9. ಯಾವುದೇ ವಿಜ್ಞಾನದ ಸುದ್ದಿಯು ಹಲವು ಆಯಾಮಗಳನ್ನು ಹೊಂದಿರುತ್ತದೆ: ರಾಖಿಗಢದ ಹೊಸ ಉತ್ಖನನಗಳು ಹೊರಗೆ ತಂದ ದೇಹಗಳ ಕಾರ್ಬನ್‌ ಪರೀಕ್ಷೆ, ಹವಾಗುಣ ಬದಲಾವಣೆಯಿಂದ ರೈತರ ಬೆಳೆ ನಾಶ, ವಾಯು ಮಾಲಿನ್ಯದಿಂದ ಮಕ್ಕಳ ಶ್ವಾಸಕೋಶಕ್ಕೇ ಧಕ್ಕೆ, ಎಲ್‌ ಇ ಡಿ ಬಲ್ಬ್‌ಗಳ ನಿಷೇಧದಿಂದ ಉದ್ಯಮಗಳ ಕುಸಿತ, ಸೌರಶಕ್ತಿ ತಂತ್ರಜ್ಞಾನ ಆಯ್ಕೆಯಲ್ಲಿ ರಾಜಕೀಯ, - ಹೀಗೆ ವಿಜ್ಞಾನದ ವರದಿಯು ಇತಿಹಾಸ, ಕೃಷಿ, ಆರೋಗ್ಯ, ಉದ್ಯಮ, ಸರ್ಕಾರ, ರಾಜಕೀಯ, ಹಣಕಾಸು - ಮುಂತಾದ ಪದರಗಳನ್ನು ಹೊದ್ದಿರುತ್ತದೆ. ವರದಿಗಾರರು ಇವೆಲ್ಲವನ್ನೂ ಗಮನಿಸಬೇಕು.
 10. ನಿಮ್ಮ ವರದಿಯು ತುಂಬಾ ಸಂಕೀರ್ಣವಾಯಿತು ಎಂದು ನಿಮಗೇ ಅನ್ನಿಸಿದರೆ, ಒಬ್ಬ ವಿಜ್ಞಾನಿಗೇ ಅದನ್ನು ಕೊಟ್ಟು ಓದಿಸಿ ಅಭಿಪ್ರಾಯ ಪಡೆಯಿರಿ.
ವರದಿಯ ರಚನೆ ಕಿವಿಮಾತುಗಳು
 1. ಯಾವಾಗಲೂ ವರ್ತಮಾನ ಕಾಲದಲ್ಲೇ ಬರೆಯಿರಿ. ಎಲ್ಲೂ ಕರ್ಮಣಿ ಪ್ರಯೋಗ ಬೇಡ. ಮಾಡಿದರು ಎಂಬ ಪದ ಬಳಸಿ; ಇವರಿಂದ ಮಾಡಲ್ಪಟ್ಟಿತು ಎಂಬ ಒಕ್ಕಣಿಕೆ ಬೇಡ.
 2. ಅತ್ಯಾಧುನಿಕ, ಜಗತ್ತೇ ನಿಬ್ಬೆರಗಾಗುವಂಥ, ಕ್ರಾಂತಿಕಾರಕ, ಮಹಾನ್‌, ಐತಿಹಾಸಿಕ - ಇಂಥ ಪದಗಳನ್ನು ಬಳಸುವಾಗ ಜಿಪುಣತನ ವಹಿಸಿ. ನಿಸ್ಸಂಶಯವಾಗಿ ಮಹತ್ವದ ವಿಷಯ ಎಂದು ಅನ್ನಿಸಿದರೆ ಮಾತ್ರ ಈ ಪದಗಳನ್ನು ಅಪರೂಪಕ್ಕೆ ಒಮ್ಮೆ ಬಳಸಿ.
 3. ಅತಿ ಉದ್ದದ ಪ್ಯಾರಾಗಳನ್ನು ಮಾಡಬೇಡಿ. ಒಂದು ವಾಕ್ಯದಲ್ಲಿ ಹೆಚ್ಚೆಂದರೆ ಎಂಟು ಪದಗಳು ಇದ್ದರೆ ಸಾಕು. ಒಂದು ಪ್ಯಾರಾದಲ್ಲಿ ನಾಲ್ಕು ವಾಕ್ಯಗಳಿದ್ದರೆ ಸಾಕು.
 4. ಎಂಟಕ್ಕಿಂತ ಹೆಚ್ಚು ಪ್ಯಾರಾ ಆದರೆ, ಮೂರು ಪ್ಯಾರಾಗಳಿಗೊಮ್ಮೆ ಪ್ಯಾರಾ ಶೀರ್ಷಿಕೆ ಕೊಡಬಹುದು. ಆದರೆ ಇದು ವ್ಯವಸ್ಥಿತವಾಗಿ ಮೂಡಬೇಕು. ಸುದ್ದಿಯಲ್ಲಿ ಇರುವ ಎರಡು ಮೂರು ಮುಖ್ಯ ತಿರುವುಗಳನ್ನು ಹೀಗೆ ಪ್ಯಾ ಶೀರ್ಷಿಕೆಯ ಮೂಲಕ ಗುರುತಿಸಬಹುದು.
 5. ಸುದ್ದಿಯ ಮೊದಲ ಪ್ಯಾರಾದಲ್ಲಿ ಮುಖ್ಯಾಂಶವನ್ನು ಹೇಳುವ ಹೊತ್ತಿಗೇ ಸುದ್ದಿಯ ಮೂಲವನ್ನೂ ಖಚಿತಪಡಿಸಿ.
ಇಂಟರ್‌ನೆಟ್‌ ಸರ್ಚ್‌ ಆಧಾರಿತ ವಿಜ್ಞಾನ ವರದಿಗಾರಿಕೆ
ಒಂದು ಸುದ್ದಿ ಸಿಕ್ಕಿದೊಡನೆ ಅದನ್ನು ಗೂಗಲಿಸಿ, ಅದರ ಎಲ್ಲ ಮಾಹಿತಿಗಳನ್ನೂ ಕಲೆಹಾಕಿ ಸುದ್ದಿ ಬರೆಯುವ ಪರಿಪಾಠವೂ ಈಗೀಗ ಆರಂಭವಾಗಿದೆ. ಇದನ್ನು ನಾನು ಗೀಚರ್‌ ಎಂದು ಗುರುತಿಸಿದ್ದೇನೆ. ಇವು ಗೂಗಲ್‌ ಆಧಾರಿತ ನುಡಿಚಿತ್ರಗಳು. ಆಗ ಸುದ್ದಿಮೂಲದಿಂದಲೇ ಸುದ್ದಿ ಹೆಕ್ಕಿ ತೆಗೆಯದಿದ್ದರೆ ಅಪಾಯ ಖಾತ್ರಿ.

ಸಂಶೋಧನೆಯೊಂದು ಪ್ರಕಟವಾದರೆ, ಆ ಸಂಶೋಧನೆಯನ್ನು ಮಾಡಿದ ವಿಜ್ಞಾನಿ, ಸಂಸ್ಥೆಯ ವೆಬ್‌ಸೈಟಿಗೇ ಹೋಗಿ ಅಲ್ಲಿಂದಲೇ ಮೂಲ ವರದಿ ಡೌನ್‌ಲೋಡ್‌ ಮಾಡಿಕೊಂಡು ಬರೆಯುವುದು ಅತ್ಯಂತ ಸೂಕ್ತ ಹೆಜ್ಜೆ. ಆಗ ನೀವು ಮೂಲ ಸಂಶೋಧಕರನ್ನೇ ಸಂಪರ್ಕಿಸಬಹುದು. ನನ್ನ ಹಲವು ವಿಜ್ಞಾನ ಸುದ್ದಿಗಳಲ್ಲಿ ನಾನು ಮೂಲ ಸಂಶೋಧಕರನ್ನೇ ಸಂದರ್ಶಿಸಿ, ಅವರಿಂದಲೇ ಛಾಯಾಚಿತ್ರಗಳನ್ನೂ ಪಡೆದು ಬ್ಲಾಗಿಸಿದ್ದೇನೆ.

ಸಂಶೋಧನೆಯನ್ನು ಸುದ್ದಿಯಾಗಿ ಬರೆಯುವಾಗ ಗಮನಿಸಬೇಕಾದ ಅಂಶಗಳು
 1. ಸಂಶೋಧನೆಯು ಎಲ್ಲಿ ಪ್ರಕಟವಾಗಿದೆ? ಈ ಪ್ರಕಟಣಾ ಸಂಶ್ಥೆಯು ವಿಶ್ವಾಸಾರ್ಹತೆಯನ್ನು ಹೊಂದಿದೆಯೆ? ಸಂಶೋಧನೆಯನ್ನು ವಿಜ್ಞಾನಿಗಳ ನಿಷ್ಕರ್ಷೆಗೆ ಒಳಪಡಿಸಲಾಗಿದೆಯೆ?
 2. ಸಂಶೋಧನೆಯನ್ನು ಕೈಗೊಂಡ ಬಗೆ ಹೇಗೆ? ಇಲ್ಲಿ ಸಂಶೋಧನಾ ಮಾದರಿ ನಂಬಲರ್ಹವೆ? ೫ ಸಾವಿರ ಮಕ್ಕಳ ಆರೋಗ್ಯದ ಸಮೀಕ್ಷೆಯು ೫೦ ಮಕ್ಕಳ ಸಮೀಕ್ಷೆಗಿಂತ ಹೆಚ್ಚು ನಿಖರವಾಗಿರುವ ಸಾಧ್ಯತೆ ಇರುತ್ತದೆ. ಈ ಹಿಂದಿನ ಇದೇ ರೀತಿಯ ಸಂಶೋಧನೆಗಳು ಏನು ಹೇಳಿದ್ದವು? ಈಗಿರುವ ನಂಬಿಕೆಯನ್ನು ಸಂಶೋಧನೆಯು ಬುಡಮೇಲು ಮಾಡುತ್ತದೆಯೆ? ಸಂಶೋಧನೆಯಿಂದ ಸಮಾಜದಲ್ಲಿ ಉಂಟಾಗಬಹುದಾದ ಬದಲಾವಣೆಗಳೇನು?
 3. ಸಂಶೋಧನಾ ವರದಿಯಲ್ಲಿ ಮುಖ್ಯಾಂಶಗಳು, ಪೀಠಿಕೆ, ವಿಧಾನ, ಫಲಿತಾಂಶ, ಚರ್ಚೆ, - ಹೀಗೆ ವಿಭಾಗಗಳಿರುತ್ತವೆ. ಇವನ್ನೆಲ್ಲ ಕೂಲಂಕಷವಾಗಿ ಓದಿ ಸರಳ ಭಾಷೆಯಲ್ಲಿ ಬರೆಯುವುದಕ್ಕೆ ಸಾಕಷ್ಟು ಅಭ್ಯಾಸ ಮಾಡಬೇಕಾಗುತ್ತದೆ. ವಿಜ್ಞಾನಕ್ಕೆ ಸಂಬಂಧಿಸಿದ ವರದಿಗಳು, ಅಧ್ಯಯನಗಳು, ಪುಸ್ತಕಗಳನ್ನು ಸದಾ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು..
ವಿಜ್ಞಾನ ಸಂಬಂಧಿತ ಸಂದರ್ಶನ ಮಾಡುವುದು ಹೇಗೆ?
 1. ಮೊದಲು ನಿಮ್ಮ ಪ್ರಶ್ನೆಗಳನ್ನು ಸಿದ್ಧ ಮಾಡಿಕೊಳ್ಳಿ. ಇದಕ್ಕಾಗಿ ಸಂದರ್ಶನ ವಿಷಯವನ್ನು ಆಳವಾಗಿ ಅಲ್ಲದಿದ್ದರೂ, ಪ್ರಾಥಮಿಕವಾಗಿ ಅಧ್ಯಯನ ಮಾಡಿರಲೇಬೇಕು. ಇಲ್ಲವಾದರೆ ವಿಜ್ಞಾನಿ ಹೇಳಿದ್ದು ನಿಮಗೆ ಅರ್ಥವಾಗುವುದೇ ಇಲ್ಲ. ಆದರೆ ನಮಗೆ ಗೊತ್ತಿಲ್ಲದ ಮೂರ್ಖ ಪ್ರಶ್ನೆಗಳನ್ನು ಕೇಳಲು ಯಾವ ಹಿಂಜರಿಕೆಯೂ ಬೇಡ.
 2. ಸಂಶೋಧನೆಯ ಕುರಿತ ಸಂದರ್ಶನ ಆಗಿದ್ದರೆ ಈ ಸಂಶೋಧನೆಯ ವೈಶಿಷ್ಟ್ಯವೇನು ಎಂದು ಕೇಳಿ. ಈ ಸಂಶೋಧನೆಯನ್ನು ಇತರರು ಮಾಡಿಲ್ಲವೆ? ಈ ಸಂಶೋಧನೆ ಎಷ್ಟು ಕಾಲ ಬಾಳಿಕೆ ಬರುತ್ತದೆ? ಇದು ಸುಸ್ಥಿರ ಸಂಶೋಧನೆಯೆ? - ಹೀಗೆ ಸಂಶೋಧನೆಯ ಎಲ್ಲಾ ಮಗ್ಗುಲುಗಳನ್ನೂ ಪರಿಶೀಲಿಸಿ.
 3. ಕೇಳುವುದೇ ಪತ್ರಕರ್ತರ ಮೊದಲ ಹೊಣೆಗಾರಿಕೆ. ಆದ್ದರಿಂದ ಪ್ರಶ್ನೆ ಕೇಳಿದ ಮೇಲೆ ಉತ್ತರವನ್ನು ಸಮಾಧಾನದಿಂದ ಕೇಳಿ. ಅವರು ಹೇಳಿದ್ದು ಮುಗಿದ ಮೇಲೆಯೇ ಮುಂದಿನ ಪ್ರಶ್ನೆ ಕೇಳಿ.
 4. ಸಂದರ್ಶನದಲ್ಲಿ ಬರುವ ಮುಖ್ಯ ಪದಗಳನ್ನು ಗುರುತು ಹಾಕಿಕೊಂಡು ಅವುಗಳನ್ನು ಹುಡುಕಿ ಅರ್ಥ ಮಾಡಿಕೊಳ್ಳಿ.
 5. ಸಂದರ್ಶನವನ್ನು ಬರೆದ ನಂತರ ಎಲ್ಲಾ ವಾಕ್ಯಗಳೂ ಸರಿಯಾದ ಅರ್ಥವನ್ನೇ ಕೊಡುತ್ತಿವೆಯೆ ಎಂದು ಪರಿಶೀಲಿಸಿ.
 6. ಇಡೀ ಸುದ್ದಿಯು ಸಮಾಜಕ್ಕೆ ಎಷ್ಟು ಅಗತ್ಯ ಎನ್ನುವುದನ್ನು ಸಂದರ್ಶನವಾದ ಮೇಲೆ ನಿರ್ಧರಿಸಿ. ಪ್ರಕಟಿಸಲೇಬೇಕು ಎಂಬ ನಿರ್ಧಾರದಿಂದ ಸುದ್ದಿಯನ್ನು ಹಿಂಜಬೇಡಿ.
ವಿಜ್ಞಾನ ವರದಿಯಲ್ಲಿ ಅಂಕಿ ಅಂಶಗಳು
ಅಂಕಿ ಅಂಶಗಳನ್ನು ಬರೆಯುವಾಗ ಅತ್ಯಂತ ಜಾಗರೂಕತೆ ವಹಿಸಬೇಕು. ಅಂಕಿ ಅಂಶಗಳು ಒಂದು ವರದಿಯನ್ನು ಮೇಲಕ್ಕೆತ್ತಬಹುದು; ಪ್ರಪಾತಕ್ಕೆ ಎಸೆಯಬಹುದು. ಮೂರು ಅಡಿಗೂ, ಮೂರು ಮಿಲಿಮೀಟರ್‌ಗೂ ವ್ಯತ್ಯಾಸ ಗೊತ್ತಿರಬೇಕು. ಸಮೀಕ್ಷೆಗಳಲ್ಲಿ ಇರುವ ಅಂಕಿ ಅಂಶಗಳನ್ನು ವರದಿ ಮಾಡುವಾಗ, ಸಮೀಕ್ಷೆಯ ವಿಧಾನ, ಮಾದರಿಯ ಗಾತ್ರ, ವ್ಯಾಪ್ತಿ, ಇತರೆ ಎಲ್ಲ ಸಾಮಾನ್ಯ ಮಾನದಂಡಗಳನ್ನೂ ಅನ್ವಯ ಮಾಡಲಾಗಿದೆಯೆ ಎಂದು ಪರಾಮರ್ಶಿಸಬೇಕು. ಸಮೀಕ್ಷೆಯ ಸಂದರ್ಭದಲ್ಲಿ ಅಂಕಿ ಅಂಶಗಳ ಮೂಲಾಧಾರವೇನು ಎಂದು ಪ್ರಶ್ನಿಸಿ ಖಚಿತಪಡಿಸಿಕೊಳ್ಳಬೇಕು. ಮೀನ್‌, ಮೀಡಿಯನ್‌, ಮೋಡ್‌, ಅನುಪಾತ, - ಇವುಗಳ ಅರ್ಥವನ್ನು ತಿಳಿದುಕೊಳ್ಳಬೇಕು.

ಈಗ ಪತ್ರಿಕೋದ್ಯಮದಲ್ಲಿ ಡಾಟಾ ಜರ್ನಲಿಸಂ ಎಂಬ ಪ್ರತ್ಯೇಕ ಶಾಖೆಯೇ ಮೂಡಿದೆ. ಇದರಲ್ಲಿ ದತ್ತಾಂಶಗಳನ್ನು ವಿಶ್ಲೇಷಣೆ ಮಾಡುವುದು ಹೇಗೆ, ದೊಡ್ಡ ದೊಡ್ಡ ಕಡತ ಸಿಕ್ಕರೆ ಅವುಗಳನ್ನು ಜಾಲಾಡುವುದು ಹೇಗೆ, ಅಶುದ್ಧ ಅಂಕಿಅಂಶಗಳನ್ನು ಶುದ್ಧೀಕರಿಸುವುದು ಹೇಗೆ, ವಿಶ್ಲೇಷಣೆ ಮಾಡುವ ತಂತ್ರಾಂಶಗಳಾವುವು, ಇತ್ಯಾದಿ ಎಲ್ಲ ಸಂಗತಿಗಳನ್ನೂ ವಿವರಿಸುತ್ತಾರೆ. ವಿಜ್ಞಾನ ವರದಿಗಾರಿಕೆಗೆ ಡಾಟಾ ಜರ್ನಲಿಸಂ ಅತ್ಯವಶ್ಯ ಎಂಬುದು ನನ್ನ ಅಭಿಮತ. ಯುರೋಪಿಯನ್‌ ಜರ್ನಲಿಸಂ ಸೆಂಟರ್‌ ಇಂಥ ಡಾಟಾ ಜರ್ನಲಿಸಂ ಕೋರ್ಸನ್ನು ಮುಕ್ತವಾಗಿ ನೀಡುತ್ತಿದೆ. ನಾನು ಈ ಪರೀಕ್ಷೆ ಬರೆದು ಈ ಕೋರ್ಸನ್ನು ಮಾಡಿಕೊಂಡಿದ್ದೇನೆ. ಸಮಯಾವಕಾಶ ಮಾಡಿಕೊಂಡು ಈ ಕೋರ್ಸನ್ನು ನೀವೂ ಮಾಡಲು ಯತ್ನಿಸಿ.

ವರದಿಯಲ್ಲಿ ಚಿತ್ರಗಳು, ಮಾಹಿತಿಚಿತ್ರಗಳು
ಈಗ ವಿಜ್ಞಾನದ ವರದಿ ಮಾಡುವ ಸಂದರ್ಭದಲ್ಲಿ ಇನ್‌ಫೋಗ್ರಾಫಿಕ್‌ಗಳನ್ನು ಬಳಸುವುದು ಸರ್ವೇಸಾಮಾನ್ಯ. ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳು ವರದಿಯ ಜೊತೆಗೇ ಇನ್‌ಫೋಗ್ರಾಫಿಕ್‌ಗಳನ್ನೂ ಕಳಿಸಿಕೊಡುತ್ತವೆ. ಅವುಗಳನ್ನು ವರದಿಗೆ ಹೊಂದುವಂತೆ ಸರಿಯಾಗಿ ಭಾಷಾಂತರಿಸಿ ಪ್ರಕಟಿಸಬೇಕು. ಅದಿಲ್ಲವಾದರೆ ಕನ್ನಡದಲ್ಲೇ ಹೊಸ ಇನ್‌ಫೋಗ್ರಾಫಿಕ್‌ಗಳನ್ನು ಸೃಷ್ಟಿಸಬೇಕು. ಇದಕ್ಕಾಗಿ ಸ್ಥಿರ ಮತ್ತು ಇಂಟರ್‌ಆಕ್ಟಿವ್‌ ಇನ್‌ಫೋಗ್ರಾಫಿಕ್‌ಗಳನ್ನು ರೂಪಿಸುವ ತಂತ್ರಾಂಶಗಳೇ ಇವೆ. ಡಿಟಿಪಿ ತಂತ್ರಾಂಶಗಳನ್ನು, ಬಳಕೆಗೆ ಸಿದ್ಧ ಕ್ಲಿಪ್‌ಆರ್ಟ್‌‌ಗಳನ್ನು ಬಳಸಿಯೇ ಇಂಥ ಮಾಹಿತಿಚಿತ್ರಗಳನ್ನು ಬರೆಸಬಹುದು. ಹಾಗೆ ಮಾಡುವಾಗ ಅಂಕಿ ಅಂಶಗಳಿಗೆ ಪ್ರಮಾಣಬದ್ಧವಾಗಿ ರೂಪಿಸಬೇಕು. ಇದನ್ನು ವಿಜುಯಲೈಸೇಶನ್‌ ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಚಿತ್ರಮಾಹಿತಿಗಳೇ ಸುದ್ದಿಯ ಎಲ್ಲಾ ಅಂಶಗಳನ್ನೂ ಹೇಳಿಬಿಡುತ್ತವೆ. ಡಾಟಾ ವಿಶ್ಲೇಷಣೆಗೆ ಇರುವ ಹಾಗೆಯೇ ವಿಜುಯಲೈಸೇಶನ್‌ಗೂ ಸಾಕಷ್ಟು ತಂತ್ರಾಂಶಗಳಿವೆ.

ವರದಿಗೆ ಸಂಬಂಧಿಸಿದಂತೆ ಚಿತ್ರಗಳನ್ನೂ ಬಳಸಬೇಕು. ಆದರೆ ಈ ಚಿತ್ರಗಳ ಹಕ್ಕುಸ್ವಾಮ್ಯದ ಬಗ್ಗೆ ಎಚ್ಚರಿಕೆ ಇರಲಿ. ನೀವು ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅಲ್ಲಿನ ನೀತಿಯನ್ನು ಅರಿತು ಚಿತ್ರಗಳನ್ನು ಬಳಸಿ. ಆನ್‌ಲೈನ್‌ನಲ್ಲಿ ಮುಕ್ತವಾಗಿ ಸಿಗುವ ಚಿತ್ರಗಳು ಹೆಚ್ಚಾಗಿ ವಾಣಿಜ್ಯಕವಲ್ಲದ ಉದ್ದೇಶಗಳಿಗಾಗಿ ಮಾತ್ರ ಮುಕ್ತವಾಗಿವೆ. ನಾವು ನಮ್ಮ ಖುಷಿಗಾಗಿ ಬ್ಲಾಗಿನಲ್ಲಿ ವರದಿ ಮಾಡುವಾಗಲೂ ಚಿತ್ರಗಳ ಮೂಲಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.

ವಿವಾದಾಸ್ಪದ ವಿಜ್ಞಾನ ವಿಷಯಗಳ ವರದಿಗಾರಿಕೆ
ಕೆಲವೊಮ್ಮೆ ವಿಜ್ಞಾನ ವರದಿಗಾರಿಕೆಯು ವಿವಾದಕ್ಕೆ ಎಡೆ ಮಾಡುತ್ತದೆ. ಉದಾಹರಣೆಗೆ ಬಿಟಿ ಬದನೆ ಬೇಕೋ ಬೇಡವೋ, ಎಂಡೋಸಲ್ಫಾನ್‌ ಅಪಾಯ ನಿಜವೋ ಸುಳ್ಳೋ - ಹೀಗೆ. ಇಂಥ ಸಂದರ್ಭಗಳಲ್ಲಿ ನಮ್ಮ ವರದಿಗಾರಿಕೆ ಹೇಗಿರಬೇಕು?

ಮೊದಲು ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಿ. ವಿಜ್ಞಾನವು ಸಮಾಜಕ್ಕೆ ಉಪಕಾರ ಮಾಡುತ್ತಿದೆಯೆ? ಈ ಉಪಕಾರವು ಶಾಶ್ವತವೆ ಅಥವಾ ಅಲ್ಪಕಾಲಿಕವೆ? ಈ ವಿಜ್ಞಾನ ಮತ್ತು ಸಂಶೋಧನೆಯನ್ನು ಮಾಡುತ್ತಿರುವವರು ಯಾರು? ಸಂಶೋಧನೆಗಳು ಕಾರ್ಪೋರೇಟ್‌ ಜಗತ್ತಿನ ಕಾರ್ಯಸೂಚಿಗಾಗಿ ನಡೆಯುತ್ತಿವೆಯೆ? ವಿಶ್ವವಿದ್ಯಾಲಯಗಳು ಸಂಶೋಧನೆಗಳನ್ನು ನಡೆಸುವಾಗ ಸಮುದಾಯದ ಅಗತ್ಯವನ್ನು ಮನಗಂಡಿದ್ದವೆ? ಅಥವಾ ಕೇವಲ ಅನುದಾನ ಸಿಕ್ಕಿತೆಂದು ಸಂಶೋಧನೆಗೆ ಮುಂದಾದವೆ? ಈ ವಿಜ್ಞಾನ ವರದಿಗಾರಿಕೆಯಲ್ಲಿ ಸಮುದಾಯದ ಒಳಿತಿಗಾಗಿ ಶ್ರಮಿಸಿದ್ದೇವೆಯೆ ಅಥವಾ ಖಾಸಗಿ ವಲಯದ ಸಂಶೋಧನೆಯನ್ನೇ ನೊಣಪ್ರತಿ ಮಾಡುತ್ತಿದ್ದೇವೆಯೆ? ಈ ಕುರಿತು ಭಾರತದ ಕಾನೂನು ಏನು ಹೇಳುತ್ತದೆ? ರಾಜಕೀಯ ಪಕ್ಷಗಳ ನಿಲುವೇನು? ಮುಖ್ಯವಾಗಿ ನಾವು ವರದಿ ಮಾಡುವ ಪತ್ರಿಕೆಯ ಸಾಮಾಜಿಕ ನಿಲುವೇನು? ಒಂದು ನಿಲುವನ್ನು ವಿರೋಧಿಸುವ ಇನ್ನೊಂದು ಗುಂಪಿನ ಅಭಿಪ್ರಾಯವನ್ನು ವರದಿ ಮಾಡುತ್ತಿದ್ದೇವೆಯೆ? ಇಲ್ಲವಾದರೆ ಏಕೆ? ಯಾವ ಬದಿ ಸತ್ಯ ಎಂದು ನಮಗೆ ಕಾಣಿಸುತ್ತದೆ? ಎರಡೂ ವಾದಗಳಿಗೆ ಸಮಾನ ಪ್ರಾಮುಖ್ಯ ಕೊಡಬೇಕೆ ಬೇಡವೆ? ಕೇವಲ ಸೆನ್ಸೇಶನಲಿಂ ನಮ್ಮ ಉದ್ದೇಶವೆ?

ವರದಿಗಾರಿಕೆ ಮತ್ತು ಹೊಣೆಗಾರಿಕೆ
ಟೈಮ್ಸ್‌ ಆಫ್‌ ಇಂಡಿಯಾ ಮತ್ತು ಡೆಕನ್‌ ಹೆರಾಲ್ಡ್‌ ಪತ್ರಿಕೆಗಳಲ್ಲಿ ಬರುವ ವಿಜ್ಞಾನದ ಸುದ್ದಿಪುಟವನ್ನು ನೋಡಿದಾಗ, ಓಹೋ ಏನೆಲ್ಲ ಸಂಶೋಧನೆಗಳಾಗುತ್ತಿವೆ ಎಂದು ಅಚ್ಚರಿಯಾಗುತ್ತದೆ. ಆದರೆ, ಹೀಗೆ ಪ್ರಕಟವಾಗುವ ಸುದ್ದಿಯೆಲ್ಲವೂ ಸಮಾಜಕ್ಕೆ ಅನುಕೂಲಕರವಾಗಿ ಇರುತ್ತದೆ ಎಂಬ ಖಾತ್ರಿ ಇಲ್ಲ. ದಿನಪತ್ರಿಕೆಗಳು ಹೆ ಚ್ಚಾಗಿ ಮಾಹಿತಿ-ಮನರಂಜನೆಯ (ಇನ್‌ಫೋಟೈನ್‌ಮೆಂಟ್‌) ಇರಾದೆಯಿಂದಲೇ ಸುದ್ದಿಗಳನ್ನು ಬರೆಯುತ್ತವೆ. ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಹೋಗುವುದಿಲ್ಲ. ಇಂಗ್ಲಿಶ್‌ ಪತ್ರಿಕೆಗಳಲ್ಲಿ ಸೀದಾ ಪ್ರಕಟಣೆ ಸಾಧ್ಯವಿದೆ. ಆದರೆ ಕನ್ನಡದಲ್ಲಿ ಹಾಗಲ್ಲ. ಅದನ್ನು ಅರ್ಥ ಮಾಡಿಕೊಂಡು, ಅನುವಾದಿಸಿ ತಪ್ಪಿಲ್ಲದೆ ಪ್ರಕಟಿಸಬೇಕು. ಇಂದು ಕನ್ನಡ ಪತ್ರಿಕೆಗಳಲ್ಲಿ ದೋಷಪೂರಿತ ವರದಿಗಳು ಬರಲು ಇದೂ ಒಂದು ಕಾರಣ. ರಾಜಕಾರಣಿಗಳ, ಅಂತಾರಾಷ್ಟ್ರೀಯ ಆಗುಹೋಗುಗಳ ಸುದ್ದಿಗಳನ್ನು ಬರೆಯುವವರೇ ಆಸಕ್ತಿ ವಹಿಸಿ ವಿಜ್ಞಾನ ಬರವಣಿಗೆ ಮಾಡಿದ್ದರಿಂದಲೇ ವಿಜ್ಞಾನದ ವರದಿಗಾರಿಕೆ ಉಸಿರು ಹಿಡಿದುಕೊಂಡಿದೆ ಎಂಬುದು ನನ್ನ ಅನುಭವ.

ಆದ್ದರಿಂದ ಸುದ್ದಿಮನೆಯಲ್ಲಿ ವಿಜ್ಞಾನ ಬರೆಯುವುದಕ್ಕೂ, ಹವ್ಯಾಸಿಯಾಗಿ ವರದಿಗಾರಿಕೆ ಮಾಡುವುದಕ್ಕೂ ಹಲವು ವ್ಯತ್ಯಾಸಗಳಿವೆ. ಸುದ್ದಿಮನೆಯಲ್ಲಿ ಡೆಡ್‌ಲೈನ್‌ ಭೂತ ಕಾಡುತ್ತದೆ. ಹವ್ಯಾಸದ ಬರವಣಿಗೆಗಳಲ್ಲಿ ವರದಿಗಾರಿಕೆಗಿಂತ ಸುದ್ದಿಕಥೆಗಳನ್ನು ಬರೆಯುವುದೇ ಹೆಚ್ಚಾಗಿದೆ ಎಂಬುದನ್ನು ಗಮನಿಸಬೇಕು. ಈ ಕಾರ್ಯಾಗಾರದಲ್ಲಿ ಭಾಗವಹಿಸಿದವರು ತಂತಮ್ಮ ಆಯ್ಕೆ ಏನು ಎಂಬುದನ್ನು ಅರಿತು ಕೌಶಲ್ಯಗಳನ್ನು ಜೋಡಿಸಿಕೊಳ್ಳಬೇಕು..

ವಿಜ್ಞಾನ ವರದಿಗಾರಿಕೆಗಾಗಿ ವಿವಿಧ ಐಟಿ ಸಾಧನ ಸೂತ್ರಗಳು
 1. ಲೆಕ್ಕ ಮಾಡಲು , ಪ್ರಾಥಮಿಕ ಗ್ರಾಫ್‌ಗಳನ್ನು ಪಡೆಯಲು ಸ್ಪ್ರೆಡ್‌ಶೀಟ್‌ ಬಳಸಿ
 2. ಸಂಕೀರ್ಣ ಡಾಟಾ ವಿಶ್ಲೇಷಣೆಗೆ ಗೂಗಲ್‌ ಓಪನ್‌ ರಿಫೈನ್‌ ಬಳಸಿ. ಇದಕ್ಕೆ ತರಬೇತಿ ಬೇಕು.
 3. ಪಿಡಿಎಫ್‌, ವರ್ಡ್‌ ಫಾರ್ಮಾಟಿನ ಮಾಹಿತಿಗಳನ್ನು ಕಂಪ್ಯೂಟರಿನಲ್ಲಿ ವಿವಿಧ ಫೋಲ್ಡರ್‌ಗಳಲ್ಲಿ ಸೇವ್‌ ಮಾಡಿ ಇಟ್ಟುಕೊಂಡಿರಿ. ಇವತ್ತಲ್ಲ ನಾಳೆ ಪ್ರಯೋಜನಕ್ಕೆ ಬರುತ್ತದೆ. ಸೇವ್‌ ಮಾಡುವಾಗ ಯಾವಾಗ ಡೌನ್‌ಲೋಡ್‌ ಮಾಡಿದ್ದು ಎಂಬ ಟೈಮ್‌ಸ್ಟಾಂಪ್‌ ಇದ್ದರೆ ವಿಶ್ಲೇಷಣೆಗೆ ಅನುಕೂಲ.
 4. ವಿಷಯಶಃ ಟಿಪ್ಪಣಿ ಮಾಡಿಕೊಳ್ಳಲು ಗೂಗಲ್‌ ಸ್ಪ್ರೆಡ್‌ಶೀಟ್‌ ಬಳಸಿ
 5. ಮೂಲ ವರದಿಯನ್ನು ಯಾವಾಗಲೂ ಯುನಿಕೋಡ್‌ನಲ್ಲೇ ಬರೆಯಿರಿ. ಆಮೇಲೆ ಅಗತ್ಯಕ್ಕೆ ತಕ್ಕಂತೆ ಫಾಂಟ್‌ ಪರಿವರ್ತನೆ ಮಾಡಿಕೊಳ್ಳಿ.
 6. ತಕ್ಷಣದ ಟಿಪ್ಪಣಿ ಮಾಡಿಕೊಳ್ಳಲು, ಯುಆರ್‌ಎಲ್‌ಗಳನ್ನು ಕಾಪಿ ಮಾಡಿಕೊಳ್ಳಲು ಗೂಗಲ್‌ ಕೀಪ್‌ ಬಳಸಿ. ಇಲ್ಲಿ ಯುಆರ್‌ಎಲ್‌ ಯಾವುದು ಎಂದು ಶೀರ್ಷಿಕೆ ಕೊಟ್ಟುಕೊಳ್ಳಿ. ಇಲ್ಲವಾದರೆ ಮರೆತುಹೋಗುವ ಸಾಧ್ಯತೆ ಇದೆ.
 7. ಪತ್ರಿಕಾಗೋಷ್ಠಿಗಳಲ್ಲಿ ಕೊಟ್ಟ ಮಾಹಿತಿ ಸಾಹಿತ್ಯವನ್ನು ಕಸದ ಬುಟ್ಟಿಗೆ ಎಸೆಯದೆ, ಒಂದೊಂದು ಫೋಲ್ಡರ್‌ ಮಾಡಿ ನಿಮ್ಮ ಕಪಾಟಿನಲ್ಲಿ ಇಟ್ಟುಕೊಂಡಿರಿ. ಅದರಲ್ಲಿ ಪತ್ರಿಕಾ ಹೇಳಿಕೆಗಳು, ಸಿಡಿ/ಡಿವಿಡಿಗಳು, ಪುಸ್ತಿಕೆಗಳು - ಎಲ್ಲವೂ ಇರಬಹುದು.
 8. ವಿವಿಧ ಮಾನದಂಡಗಳನ್ನು ಪರಿವರ್ತಿಸಲು ಯುನಿಟ್‌ ಕನ್ವರ್ಟರ್‌ ಆಪ್ ಬಳಸಿ. ಭಾರತೀಯರಿಗೆ ಅರ್ಥವಾಗುವ ಯುನಿಟ್‌ಗಳಲ್ಲೇ ಸುದ್ದಿಯನ್ನು ಬರೆಯಿರಿ.
ವರದಿಗಾರಿಕೆಯ ಸುದ್ದಿಮೂಲಗಳು
 1. ವಿಜ್ಞಾನಿಗಳ, ತಜ್ಞರ ಈಮೈಲ್‌ ವಿಳಾಸಗಳನ್ನು ಮೊಬೈಲಿನಲ್ಲೇ ಇಟ್ಟುಕೊಂಡಿರಿ. ತುರ್ತಿನಲ್ಲಿ ಪ್ರಯೋಜನಕ್ಕೆ ಬರುತ್ತದೆ.
 2. ಪತ್ರಿಕಾಗೋಷ್ಠಿಗಳಿಗೆ ಮಾತ್ರ ಭೇಟಿ ಕೊಡುವ ಪರಿಪಾಠವನ್ನು ನಿಲ್ಲಿಸಿ. ವಿಜ್ಞಾನಮೇಳಗಳಿಗೆ, ವಿಜ್ಞಾನ ಸಂಸ್ಥೆಗಳಿಗೆ ಆಗಾಗ್ಗ ಭೇಟಿ ಕೊಡಿ. ಸಮಾಜಕ್ಕೆ ಸಂಬಂಧಿಸಿದ ವಿಜ್ಞಾನ ವಿಷಯಗಳನ್ನು ಪ್ರತಿದಿನವೂ ಗಮನಿಸಿ. ಇದಕ್ಕಾಗಿ ಗೂಗಲ್‌ ನ್ಯೂಸ್‌ ಅಲರ್ಟ್‌ ಮಾಡಿಕೊಳ್ಳಿ.
 3. ಸಮಾಜ ತಾಣಗಳಲ್ಲಿ ವಿಜ್ಞಾನ ವರದಿಗಳು ಬರುತ್ತಿರುತ್ತವೆ. ಅವನ್ನೆಲ್ಲ ಓದಿ ಮತ್ತು ಕಾಮೆಂಟ್‌ಗಳನ್ನು ಗಮನಿಸಿ. ಅಲ್ಲಿ ಪ್ರಮುಖ ಸುದ್ದಿಗಳೂ ಇರುವ ಸಾಧ್ಯತೆ ಇದೆ. ಹೋಕ್ಸ್‌ ವರದಿಗಳನ್ನು ಬರೆಯದಿರಿ; ಹರಡದಿರಿ; ಹರಡಲು ಬಿಡಬೇಡಿ.
ಹೆಚ್ಚಿನ ಓದಿಗಾಗಿ ಈ ಕೊಂಡಿಗಳನ್ನು ಗಮನಿಸಿರಿ
ವಿಜ್ಞಾನ ಪತ್ರಿಕೋದ್ಯಮ ಕುರಿತ ವಿಶೇಷ ಮುಕ್ತ ಕೋರ್ಸ್‌ ಇರುವ ಜಾಲತಾಣ (ಇದರೊಳಗೇ ವಿಜ್ಞಾನ ಪತ್ರಿಕೋದ್ಯಮಕ್ಕೆ ಬೇಕಾದ ಪ್ರಮುಖ ಮಾಹಿತಿ ಮೂಲಗಳ, ವಿಜ್ಞಾನ ಸಂಸ್ಥೆಗಳ, ವಿಜ್ಞಾನಿಗಳ ಪಟ್ಟಿ, ಎಲ್ಲವೂ ಇದೆ)
scijourno.com.au/
www.wfsj.org/course/

ಡಾಟಾಜರ್ನಲಿಸಂ ಕೋರ್ಸ್‌ (ಇಲ್ಲಿ ವಿಜ್ಞಾನಕ್ಕೆ ಮತ್ತು ವಿವಿಧ ಸಮಕಾಲೀನ ವಿಷಯಗಳಿಗೆ ಸಂಬಂಧಿಸಿದ ಕೋರ್ಸುಗಳೂ ಇವೆ)
learn.canvas.net

ವಿಜ್ಞಾನ ಪತ್ರಿಕೋದ್ಯಮ ಕುರಿತಂತೆ ಬಿಬಿಸಿ ಕೊಂಡಿ
www.bbc.co.uk/academy/journalism/subject-guides/science

ವಿಜ್ಞಾನದ ಪುಸ್ತಕಗಳ ಪಟ್ಟಿ ಇರುವ ತಾಣಗಳು
scicats.wordpress.com/books-etc
niemanreports.org/articles/books-every-science-writer-should-read

ವಿಜ್ಞಾನ ಪತ್ರಕರ್ತರ, ಪತ್ರಿಕೋದ್ಯಮದ, ವರದಿಗಾರಿಕೆಯ ಕುರಿತು ಇರುವ ವಿಶಿಷ್ಟ ಜಾಲತಾಣ
www.theopennotebook.com

ವಿಜ್ಞಾನ ಪತ್ರಿಕೋದ್ಯಮ ಮತ್ತು ಅಂಕಿ ಅಂಶ ಕುರಿತ ಉದಾಹರಣಾರ್ಥ ನಿರೂಪಣೆ:
www.peteraldhous.com/CAR/Aldhous_data_journalism_UKCSJ2012.pdf

ಕನ್ನಡದಲ್ಲಿ ವಿಜ್ಞಾನ ಪದವಿವರಣ ಕೋಶ ಮತ್ತು ವಿವರಣಾತ್ಮಕ ಪರಿಸರ ಪದಕೋಶ ಇರುವ ತಾಣ:
www.kanaja.in

ಓದಲೇಬೇಕಾದ ಪುಸ್ತಕಗಳು
A Field Guide for Science Writers Deborah Blum, Mary Knudson


Bad Science Ben Goldacre


ದಿ ಗಾರ್ಡಿಯನ್‌ ಪತ್ರಿಕೆಯ ವಿಜ್ಞಾನ ಮತ್ತು ಪರಿಸರ ವಿಭಾಗ

2 ಕಾಮೆಂಟ್‌ಗಳು:

Chinnamma Baradhi ಹೇಳಿದರು...

Dear Sirs/Madams
I am super charged after seeing E-Jnana in my mail box.
It gives lots of latest news in my mother tongue.Really I don't have words to praise you.Idu nanna chikka bayalli dodda mathaiytu.

Dhanyavaadagalu.
Srujanaa.

ಅನಾಮಧೇಯ ಹೇಳಿದರು...

Wonderful awesome.....
Thank u.... (Y)

badge