ಬುಧವಾರ, ಮೇ 27, 2015

ಸ್ಮಾರ್ಟ್‌ಫೋನ್ ಹತ್ತು ಮುಖಗಳು

ಟಿ. ಜಿ. ಶ್ರೀನಿಧಿ

ಮೊಬೈಲ್ ದೂರವಾಣಿ ನಮ್ಮ ದೇಶಕ್ಕೆ ಕಾಲಿಟ್ಟದ್ದು ಸುಮಾರು ಎರಡು ದಶಕಗಳ ಹಿಂದೆ. ಅಂದಿನ ಹ್ಯಾಂಡ್‌ಸೆಟ್ಟುಗಳು ಇವತ್ತಿನ ಕಾರ್ಡ್‌ಲೆಸ್ ಫೋನುಗಳಿಗಿಂತ ದೊಡ್ಡದಾಗಿದ್ದವು. ಇನ್ನು ಫೋನಿನಲ್ಲಿ ಮಾತನಾಡಬೇಕು ಎಂದರಂತೂ ಅದು ನಿಮಿಷಕ್ಕೆ ಹತ್ತಾರು ರೂಪಾಯಿಗಳ ವ್ಯವಹಾರವಾಗಿತ್ತು. ಆ ದಿನಗಳಲ್ಲಿ ನಾವು ಮಾಡುವ ಕರೆಗಷ್ಟೇ ಅಲ್ಲ, ನಮಗೆ ಯಾರಾದರೂ ಕರೆಮಾಡಿದರೆ ಅದಕ್ಕೂ ನಾವೇ ದುಡ್ಡುಕೊಡಬೇಕಿತ್ತು. ಹೀಗೊಮ್ಮೆ ನಮ್ಮ ಪರಿಚಿತರೊಬ್ಬರಿಗೆ ಕೊರಿಯರ್ ಮೂಲಕ ಏನನ್ನೋ ಕಳುಹಿಸುವುದಿತ್ತು. ಲಕೋಟೆಯ ಮೇಲೆ ಅವರ ವಿಳಾಸದ ಜೊತೆಗೆ ಮೊಬೈಲ್ ಸಂಖ್ಯೆಯನ್ನೂ ಬರೆದದ್ದಕ್ಕಾಗಿ ಹೀಗೆಲ್ಲ ನನ್ನ ನಂಬರ್ ಬರೆಯುತ್ತೀಯಲ್ಲ, ಅವರು ವಿಳಾಸ ಕೇಳಿ ಫೋನು ಮಾಡಿದರೆ ನನಗೆಷ್ಟು ದುಡ್ಡು ಖರ್ಚಾಗುತ್ತೆ ಗೊತ್ತಾ? ಅಂತ ಬೈಸಿಕೊಂಡ ನೆನಪು ಇನ್ನೂ ಇದೆ!

ಪ್ರಾರಂಭಿಕ ವರ್ಷಗಳಲ್ಲಿ ಮೊಬೈಲಿನ ಉಪಯೋಗಗಳು ಬಹು ಸೀಮಿತವಾಗಿಯೇ ಇದ್ದವು. ದೂರವಾಣಿ ಕರೆ, ಎಸ್ಸೆಮ್ಮೆಸ್ - ಇವೆರಡೇ ಅಂದಿನ ಮುಖ್ಯ ಉಪಯೋಗಗಳಾಗಿದ್ದವು ಎಂದರೂ ಸರಿಯೇ.

ಮುಂದೆ ಮಾರುಕಟ್ಟೆಯಲ್ಲಿ ಸ್ಪರ್ಧೆ ಜಾಸ್ತಿಯಾಯಿತು, ಮೊಬೈಲ್ ಸಂಪರ್ಕ ಪಡೆಯುವುದು ಸುಲಭವಷ್ಟೇ ಅಲ್ಲ, ಬಹಳ ಅಗ್ಗವೂ ಆಯಿತು. ಮೊಬೈಲ್ ಸಂಪರ್ಕಕ್ಕಾಗಿ ಮಾಡಬೇಕಾದ ಖರ್ಚು ಕಡಿಮೆಯಾಗುತ್ತಿದ್ದಂತೆ ಅದರ ಜನಪ್ರಿಯತೆಯೂ ತಾನೇತಾನಾಗಿ ಏರಿತು. ಆಮೇಲೆ ಬಂದ ಸ್ಮಾರ್ಟ್‌ಫೋನುಗಳಂತೂ ಕ್ರಾಂತಿಯನ್ನೇ ತಂದವು; ಅವುಗಳ ಮೂಲಕ ಮೊಬೈಲುಗಳೆಲ್ಲ ಕಂಪ್ಯೂಟರುಗಳಾಗಿ ಜಗತ್ತೇ ನಮ್ಮ ಅಂಗೈಗೆ ಬಂತು.

ಸಾಮಾನ್ಯ ಕಂಪ್ಯೂಟರುಗಳಿಗಿಂತ ಹೆಚ್ಚು ಸಂಸ್ಕರಣಾ ಸಾಮರ್ಥ್ಯವಿರುವ ಸ್ಮಾರ್ಟ್‌ಫೋನುಗಳು ಸಾಮಾನ್ಯವಾಗಿಬಿಟ್ಟಿವೆ. ಬೇರೆಬೇರೆ ಕೆಲಸಗಳಿಗೆ ಬೇರೆಬೇರೆ ಸಾಧನಗಳನ್ನು ಬಳಸಬೇಕಿದ್ದ ಕಾಲ ಹೋಗಿ ಮೊಬೈಲ್ ಫೋನ್ ಸರ್ವಾಂತರ್ಯಾಮಿಯಾಗಿ ಬೆಳೆಯುತ್ತಿದೆ. ಈ ಹಿಂದೆ ಬಳಕೆಯಲ್ಲಿದ್ದ ಹಲವು ಸಾಧನಗಳು ಸ್ಮಾರ್ಟ್‌ಫೋನುಗಳಿಂದಾಗಿ ಔಟ್‌ಡೇಟ್ ಆಗಿಬಿಟ್ಟಿವೆ; ಇನ್ನು ಕೆಲವು ಗೇಟ್‌ಪಾಸ್ ಪಡೆಯುವ ಸರದಿಯಲ್ಲಿ ನಿಂತಿವೆ.

ಬದಲಾವಣೆಯ ಈ ಹಾದಿಯಲ್ಲಿ ಸ್ಮಾರ್ಟ್‌ಫೋನುಗಳು ತಳೆದಿರುವ ಅವತಾರಗಳ ಪೈಕಿ ಹತ್ತನ್ನು ಪ್ರಾತಿನಿಧಿಕವಾಗಿ ಪರಿಚಯಿಸುವ ಹೊಸ ಲೇಖನಸರಣಿ 'ಸ್ಮಾರ್ಟ್‌ಫೋನ್ ಹತ್ತು ಮುಖಗಳು' ಈ ಶುಕ್ರವಾರದಿಂದ ಇಜ್ಞಾನ ಡಾಟ್ ಕಾಮ್‌ನಲ್ಲಿ ಪ್ರಾರಂಭವಾಗಲಿದೆ. ಈ ಸರಣಿಯಲ್ಲಿ ಪ್ರತಿ ಶುಕ್ರವಾರ ಪ್ರಕಟವಾಗುವ ಪುಟ್ಟ ಬರಹಗಳು ಸ್ಮಾರ್ಟ್‌ಫೋನಿನ ವಿವಿಧ ಉಪಯೋಗಗಳತ್ತ ಕಿರುನೋಟ ಬೀರಲಿವೆ.

ನಿಮ್ಮ ಅನಿಸಿಕೆ-ಅಭಿಪ್ರಾಯಗಳಿಗೆ ಸ್ವಾಗತ!

ಕಾಮೆಂಟ್‌ಗಳಿಲ್ಲ:

badge