ಬುಧವಾರ, ಮೇ 20, 2015

ಮಕ್ಕಳ ವಿಜ್ಞಾನಕ್ಕೊಂದು ಮಾದರಿ

ಡಾ. ಎಮ್. ಜೆ. ಸುಂದರ್ ರಾಮ್ ಅವರ 'ಮಕ್ಕಳ ವಿಜ್ಞಾನ' ಕೃತಿಯ ಪರಿಚಯ
ಕೆ.ಎಸ್. ನವೀನ್

ಹೀಗೆ ಯೋಚಿಸಿ: ಜೀವಂತ ವ್ಯಕ್ತಿಯೊಬ್ಬನ ಜಠರಕ್ಕೊಂದು ರಂಧ್ರ ಕೊರೆದು ರೊಟ್ಟಿಯ ಚೂರಿಗೆ ದಾರ ಕಟ್ಟಿ ಅದರ ಮೂಲಕ ಜಠರದೊಳಗೆ ಇಳಿಬಿಟ್ಟು ಪದೇ ಪದೇ ಹೊರಕ್ಕೆ ತೆಗೆದು ಅದೆಷ್ಟು ಜೀರ್ಣವಾಗಿದೆ ಎಂದು ಪರೀಕ್ಷಿಸಿದರೆ...? ಇದ್ಯಾವ ರಾಕ್ಷಸ ಸಂಶೋಧನೆ ಎನ್ನುವಿರಾ? ಇರಿ ಇರಿ ಇದು ಇಂದಿನದಲ್ಲ ವೈದ್ಯ ಜಗತ್ತು ಆಹಾರ ಹೇಗೆ ಜೀರ್ಣವಾಗುತ್ತದೆ ಎಂಬುದು ತಿಳಿಯದಿದ್ದ ಕಾಲದಲ್ಲಿ ವೈದ್ಯವಿಜ್ಞಾನಿಯೊಬ್ಬರು ಅಕಸ್ಮಾತ್ ಆಗಿ ಗುಂಡು ತಗುಲಿ ಜಠರಕ್ಕೆ ಕಿಟಕಿ ಮೂಡಿತೇನೋ ಎಂಬಂತಾಗಿದ್ದ ವ್ಯಕ್ತಿಯ ಮೇಲೆ ಪ್ರಯೋಗ ನಡೆಸಿ ಜೀರ್ಣಕ್ರಿಯೆಯನ್ನು ಕುರಿತ ಅನೇಕ ಆವರೆಗೂ ತಿಳಿಯದಿದ್ದ ಸಂಗತಿಗಳನ್ನು ಕಂಡುಹಿಡಿಯುತ್ತಾನೆ! ಈ ವಿವರಗಳು ಡಾ. ಸುಂದರ್ ರಾಮ್ ಮಕ್ಕಳಿಗಾಗಿ ಬರೆದಿರುವ "ಮಕ್ಕಳ ವಿಜ್ಞಾನ" ಎಂಬ ಪುಸ್ತಕದಲ್ಲಿದೆ. ಒಂದು ಪತ್ತೆದಾರಿ ಕತೆಗಿಂತಲೂ ರೋಚಕವಾಗಿ ಆದರೆ ವಿಜ್ಞಾನಕ್ಕೆ ಒಂದಿನಿತೂ ಚ್ಯುತಿಬರದಂತೆ ಮಕ್ಕಳಿಗೆ ವಿಜ್ಞಾನ ಹೇಗೆ ಬರೆಯಬೇಕು ಎನ್ನುವುದಕ್ಕೊಂದು ಉತ್ತಮ ಉದಾಹರಣೆಯನ್ನು ಡಾ. ಸುಂದರ್ ರಾಮ್ ನಿರ್ಮಿಸಿಕೊಟ್ಟಿದ್ದಾರೆ.

"ಮಕ್ಕಳ ವಿಜ್ಞಾನ" ಎಂಬ ಈ ಪುಸ್ತಕದಲ್ಲಿ ಒಟ್ಟು ಒಟ್ಟು ೨೦ ಅಧ್ಯಾಯಗಳಿವೆ. ಪಠ್ಯಪುಸ್ತಕ ಸಂಘದ ಸಂಯೋಜಕರಾದ ಜಿ.ಎಸ್. ಮುಡಂಬಡಿತ್ತಾಯ ಅವರ ಮುನ್ನುಡಿಯೊಂದಿಗೆ ಅಧ್ಯಾಯಗಳನ್ನು ಯಥೋಚಿತವಾಗಿ ಜೋಡಿಸಲಾಗಿದೆ.

ಪ್ರತಿಯೊಂದು ಅಧ್ಯಾಯದಲ್ಲಿ ಇದರ ಓದುಗರು ಮಕ್ಕಳು ಎಂಬುದನ್ನು ಗಮನದಲ್ಲಿಟ್ಟುಕೊಂಡು ಬರೆದಿರುವುದು ಗೋಚರವಾಗುತ್ತದೆ.
ಹಾಗೆಯೇ, ಲೇಖಕರಲ್ಲಿನ "ಮಕ್ಕಳಿಗೆ ವಿಜ್ಞಾನವನ್ನು ಹೇಳಬೇಕು" ಎಂಬ ತುಡಿತ ಕೂಡ. "ಮೂಢನಂಬಿಕೆಯನ್ನು ತರಿದು ಸತ್ಯವನ್ನರಸುವುದೇ ವಿಜ್ಞಾನ" ಎಂಬುದೇ ಮೊದಲ ಅಧ್ಯಾಯ. ಇದರಲ್ಲಿ ವಿಜ್ಞಾನ ಎಂದರೇನು, ಮಾನವ ಸೇವೆಯಲ್ಲಿ ವಿಜ್ಞಾನ ಎಂಬ ಉಪಶೀರ್ಷಿಕೆಗಳಿಂದ ತೊಡಗಿ ನಿಧಾನವಾಗಿ ವೈಜ್ಞಾನಿಕ ಕ್ರಮ, ಅದರಿಂದಾಗುವ ಪ್ರಯೋಜನಗಳು, ವಿಜ್ಞಾನದ ಗುರಿ ಏನು ಅಥವಾ ಏನಾಗಿರಬೇಕು ಎಂಬುದನ್ನು ವಿವರಿಸುತ್ತಾ ಹೋಗಿದ್ದಾರೆ ಲೇಖಕರು. ಮುಂದೆ "ವೈಜ್ಞಾನಿಕ ಮನೋಧರ್ಮ" ಎಂಬ ಅಧ್ಯಾಯದಲ್ಲಿ ಅದರ ವಿವರಣೆ ಇದೆ. ನಮ್ಮಲ್ಲಿ ಮೂಢನಂಬಿಕೆ ಮತ್ತು ಬಡತನ ಹೇಗೆ ಒಂದನ್ನೊಂದು ಹೆಣೆದುಕೊಂಡಿದೆ, ಹೇಗೆ ಅಜ್ಞಾನ ಇದರ ಮೂಲಕಾರಣ ಎಂಬುದನ್ನು ಸರಳವಾದ ಪದಗಳಲ್ಲಿ ಲೇಖಕರು ನಿರೂಪಿಸಿದ್ದಾರೆ.

`ಭಾರತೀಯ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯ ಕೊರತೆ ಎದ್ದುಕಾಣುತ್ತದೆ' ಎಂಬುದೇ ಒಂದು ಉಪಶೀರ್ಷಿಕೆ. ಇದರಲ್ಲಿ ಶ್ರೇಷ್ಠವಿಜ್ಞಾನಿಗಳ ಮಾತುಗಳನ್ನು ಉದ್ಧರಿಸುತ್ತಾ ನಮ್ಮಲ್ಲಿ ವೈಜ್ಞಾನಿಕ ಮನೋಧರ್ಮ ಏಕೆ ಕಡಿಮೆ ಎಂಬುದನ್ನು ವಿಶ್ಲೇಷಿಸುತ್ತಾರೆ. ಇವನ್ನು ನಮ್ಮ ವಿಜ್ಞಾನ ಶಿಕ್ಷಕರು ಗಮನಿಸಬೇಕು. ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವುದರಲ್ಲಿ ಶಿಕ್ಷಕರ ಪಾತ್ರ ಏನು, ಅವರು ಅದನ್ನು ಹೇಗೆ ಮಾಡಬಹುದು ಎಂಬುದರ ಬಗ್ಗೆ ಏಳು ಸಿದ್ಧ ಸೂತ್ರಗಳು ಈ ಅಧ್ಯಾಯದಲ್ಲಿವೆ.

"ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ನೋಟ್ಸ್ ಬರೆಸುವ ಕೆಟ್ಟ ಪದ್ಧತಿಯನ್ನು ಪ್ರೋತ್ಸಾಹಿಸಬಾರದು. ಬದಲಿಗೆ, ಅವರಿಂದ ಪ್ರಶ್ನೆಗಳ ಮೂಲಕ ಉತ್ತರಗಳನ್ನು ಪಡೆಯಲು ಪ್ರಯತ್ನಿಸಬೇಕು" ಎಂದು ಲೇಖಕರು ಹೇಳುತ್ತಾರೆ. ಈಗ ಕರ್ನಾಟಕದಲ್ಲಿಯೂ ಅನೇಕ ವಿಶಿಷ್ಟವಾಗಿ ಚಿಂತಿಸುವ ಶಾಲೆಗಳು ಹುಟ್ಟಿಕೊಂಡಿವೆ. ಓಪನ್ ಸ್ಕೂಲ್ ಮಾದರಿಯ ಇವು ಮಕ್ಕಳಿಗೆ ಒಂದಿನಿತೂ ಭಾರವಾಗದೆ, ಹೆಣಭಾರದ ಬ್ಯಾಗು, ನೇಣೆತ್ತಿಸುವ ಟೈಗಳನ್ನು ಬಿಸಾಡಿಸಿ, ಓದನ್ನು ಒಂದು ಕುತೂಹಲಕರ ಚಟುವಟಿಯನ್ನಾಗಿಸುವ ಕಾರ್‍ಯವನ್ನು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿಯೂ ಇಂತಹ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ.

ಪುಸ್ತಕ ಸಾಗುತ್ತಿದ್ದಂತೆ "ವಿಜ್ಞಾನದಲ್ಲಿ ಆಕಸ್ಮಿಕಗಳು - ಸೆರೆಂಡಿಪಿಟಿ" ಎಂಬ ಕುತೂಹಲಕರ ಅಧ್ಯಾಯವಿದೆ. ಇದರಲ್ಲಿ ಸೆರೆಂಡಿಪಿಟಿಯ (ಉದ್ದೇಶಿಸಿರದ ಆದರೆ ಒಳ್ಳೆಯ ಘಟನೆ ಅಥವಾ ಬೆಳವಣಿಗೆ ನಡೆದು ಸಂಶೋಧನೆಗೆ ತಿರುವು ನೀಡುವುದು) ಅರ್ಥವನ್ನು ಮನೋಜ್ಞವಾಗಿ ಕತೆಯ ಮೂಲಕ ತಿಳಿಸಲಾಗಿದೆ.

ಮುಂದಿನ ಅಧ್ಯಾಯ "ಏನೋ ಮಾಡಲು ಹೋಗಿ...!" ಜೀವಿವಿಕಾಸವನ್ನು ಹೇಳುವ ಪರಿಯನ್ನು ಓದಿಯೇ ಆನಂದಿಸಬೇಕು! ಮುಂದೆ "ನಿರ್ಜೀವ ವಸ್ತುಗಳಿಂದ ಜೀವಿಗಳು...!", "ಜೀವಿಗಳು ಹೇಗೆ ಹುಟ್ಟುತ್ತವೆ", "ಸೂಕ್ಷ್ಮ ಜೀವಿಗಳು ಸಾರ್ ಸೂಕ್ಷ್ಮ ಜೀವಿಗಳು", "ಸೂಕ್ಷ್ಮಜೀವಿಗಳ ವೃದ್ಧಿಯ ಮರ್ಮ", "ನಂಜುರೋಗಗಳು", "ಸಿಡುಬಿಗೊಂದು ಲಸಿಗೆ", "ಪೆನಿಸಿಲಿನ್", "ಕಟ್ಟೆಹುಳುವಿನ ಜೀವನಚರಿತ್ರೆ", "ಬೀಗಲ್ ಸಮುದ್ರಯಾನ", "ಅರಿವಳಿಕೆಯ ಕತೆ", "ಮೂತ್ರದಲ್ಲಿ ಸಕ್ಕರೆ", "ನಂಜು ನುಂಗಿದ ನಂಜುಂಡ", "ಪ್ರನಾಳ ಶಿಶು" ಹೀಗೆ ಸಾಗುವ ಅಧ್ಯಾಯಗಳಲ್ಲಿ ಮಕ್ಕಳಿಗೆ ವಿಜ್ಞಾನ ಹೇಳುವ ಪರಿ ಗಮನ ಸೆಳೆಯುತ್ತದೆ.

ನಂಜು ನುಂಗಿದ ನಂಜುಂಡ ಹೆಸರು ಆಕರ್ಷಿಸುತ್ತದೆ. ಆದರೆ, ಅಷ್ಟು ಮಾತ್ರವಾಗಿದ್ದರೆ ಆಕರ್ಷಣೆಗಾಗಿ ಮಾಡಿರುವ ಗಿಮಿಕ್ ಇದು ಎಂದು ಬಿಡಬಹುದಿತ್ತು. ಆದರೆ, ಲೇಖಕರು ಅದನ್ನು ಎಷ್ಟು ಅರ್ಥಪೂರ್ಣವಾಗಿ ಬಳಸಿಕೊಂಡಿದ್ದಾರೆಂಬುದನ್ನು ಓದಿಯೇ ಆಸ್ವಾದಿಸಬೇಕು. ಜಠರ ಹುಣ್ಣಿಗೆ ಹೆಲಿಕೋಬ್ಯಾಕ್ಟರ್ ಪೈಲೋರಿ ಎಂಬ ಬ್ಯಾಕ್ಟೀರಿಯಾ ಎಂಬುದನ್ನು ಕಂಡುಹಿಡಿದ ಕತೆಯಿದು. ವೈದ್ಯವಿಜ್ಞಾನಿ ಡಾ. ರಾಬಿನ್ ವಾರೆನ್ ಅಲ್ಸರ್‌ಗೆ ಕಾರಣ ಮತ್ತೇನಲ್ಲ ಈ ಬ್ಯಾಕ್ಟೀರಿಯಾ ಎಂಬುದನ್ನು ಕಂಡುಹಿಡಿದದ್ದು ಮಾತ್ರವಲ್ಲ ಇಡೀ ಜಗತ್ತು ಅವರ ಸಂಶೋಧನೆಯನ್ನು ಒಪ್ಪದೆ ನಗುತ್ತಿದ್ದಾಗ ತಾಳ್ಮೆಯಿಂದ ಅವನ್ನು ಸಹಿಸಿ, ಮುಂದೆ ತಮ್ಮ ಹೇಳಿಕೆಯನ್ನು ವಿಷದಪಡಿಸಲು ಪೈಲೋರಿ ಬ್ಯಾಕ್ಟಿರಿಯಾವನ್ನು ತಾವೇ ಕುಡಿಯುವುದರ ಮೂಲಕ ಪ್ರಯೋಗಕ್ಕೆ ಒಡ್ಡಿಕೊಂಡು (ಇದೇ ಇಲ್ಲಿ ನಂಜು ನುಂಗಿದ ನಂಜುಂಡ) ಸತ್ಯವನ್ನು ಬೆಳಕಿಗೆ ತಂದು, ಆ ಕಾಯಿಲೆಗೆ ಯಶಸ್ವಿ ಚಿಕಿತ್ಸೆಯನ್ನು ಕಂಡುಹಿಡಿದು ನೊಬೆಲ್ ಪ್ರಶಸ್ತಿಪಡೆದ ಪರಿಯನ್ನು ಮಕ್ಕಳ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ ಲೇಖಕರು.

ಹೀಗೆ ಇದೊಂದು ಮಹತ್ವದ ಪುಸ್ತಕ. ಇದನ್ನು ಲೇಖಕರೇ ಪ್ರಕಾಶಿಸಿದ್ದಾರೆ (ಹಾಗಾಗಿಯೇ, ಪುಸ್ತಕದ ವಿನ್ಯಾಸ, ಸಂಪಾದನೆಯಲ್ಲಿ ಕೆಲವೆಡೆ ವೃತ್ತಿಪರತೆ ಕಾಣದು. ವಿಜ್ಞಾನಪತ್ತೇದಾರಿ ಕತೆಗಳು ಎಂದಿದ್ದಾರೆ. ಇದು ಪತ್ತೆದಾರಿಯಂತಹ ವಿಜ್ಞಾನ ಕತೆಗಳು ಎಂದಾಗಬೇಕು). ಇಂತಹ ಪುಸ್ತಕಗಳು ಜನರ ಗಮನಕ್ಕೆ ಬರುವುದು, ಮಾರಾಟವಾಗುವುದು ಮರೀಚಿಕೆಯೇ. ಒಂದು ಒಳ್ಳೆಯ ಪುಸ್ತಕಕ್ಕೆ ಹೀಗಾಗಬಾರದು. ಯಾರಾದರು ಹೆಸರಾಂತ ಪ್ರಕಾಶಕರು ಇವರಿಂದ ಇಂತಹ ಅನೇಕ ಪುಸ್ತಕಗಳನ್ನು ಬರೆಸಿ ಲೇಖಕರ ಈ ಶಕ್ತಿಯನ್ನು ಪ್ರೋತ್ಸಾಹಿಸ ಬೇಕು. ಇದು ವಿಜ್ಞಾನ ಶಿಕ್ಷಣ, ಮಕ್ಕಳ ಶಿಕ್ಷಣಕ್ಕೂ ಮಹತ್ವದ ಕೊಡುಗೆಯಾಗುತ್ತದೆ.
ಮಕ್ಕಳ ವಿಜ್ಞಾನ
ಲೇಖಕರು - ಪ್ರಕಾಶಕರು: ಡಾ ಎಮ್ ಜೆ ಸುಂದರ್ ರಾಮ್,೧೧೦೩, ೮ನೇ ಅಡ್ಡರಸ್ತೆ, ಗಿರಿನಗರ ೨ನೇ ಹಂತ, ಬೆಂಗಳೂರು - ೫೬೦ ೦೮೫. ದೂ: ೯೯೦೧೮ ೫೩೧೬೦
೧೬೬ ಪುಟಗಳು, ಬೆಲೆ ರೂ. ೭೫
[ಜುಲೈ ೧೩, ೨೦೧೪ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಬರಹ]

1 ಕಾಮೆಂಟ್‌:

Raja Sanjaya Rao ಹೇಳಿದರು...

pl. send mail pl
i have to send some article to this blog
sanjay
9632387860

badge