ಸೋಮವಾರ, ಮೇ 18, 2015

ಪತ್ರಿಕೆಗಳಿಗೆ ವಿಜ್ಞಾನ ಲೇಖನಗಳು

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಟಿ. ಜಿ. ಶ್ರೀನಿಧಿ

ವಿಜ್ಞಾನ ತಂತ್ರಜ್ಞಾನದ ಪ್ರಪಂಚದಲ್ಲಿ ದಿನವೂ ಹೊಸ ಸಂಗತಿಗಳು ಘಟಿಸುತ್ತಿರುತ್ತವೆ. ಈ ಪೈಕಿ ಕೆಲವು ನಮ್ಮ ಪಾಲಿಗೆ ಮಾಹಿತಿಯಷ್ಟೇ ಆಗಿದ್ದರೆ ಇನ್ನು ಕೆಲವು ನಮ್ಮ ನೇರ ಸಂಪರ್ಕಕ್ಕೂ ಬರುವಂತಿರುತ್ತವೆ. ಇಂತಹ ಪ್ರತಿಯೊಂದು ಸಂಗತಿ ಘಟಿಸಿದಾಗಲೂ ಅದನ್ನು ಸಾಮಾನ್ಯ ಜನತೆಗೆ ತಿಳಿಸುವ ಕೆಲಸ ವಿಜ್ಞಾನ ಸಂವಹನಕಾರರದ್ದು. ಹೀಗೆ ವಿಜ್ಞಾನ-ತಂತ್ರಜ್ಞಾನವನ್ನು ಜನರಿಗೆ ತಲುಪಿಸುವ ಮಾರ್ಗಗಳಲ್ಲಿ ಪತ್ರಿಕೆಗಳಿಗೆ ಲೇಖನ ಬರೆಯುವುದು ಕೂಡ ಒಂದು. ಪತ್ರಿಕೆಗಳಿಗೆ ವಿಜ್ಞಾನ ಲೇಖನಗಳನ್ನು ಬರೆಯುವಾಗ ಗಮನದಲ್ಲಿಟ್ಟುಕೊಳ್ಳಬಹುದಾದ ಕೆಲವು ಅಂಶಗಳು ಇಲ್ಲಿವೆ.

ವಿಷಯದ ಆಯ್ಕೆ ಹೊಸ ಆವಿಷ್ಕಾರ, ಈಗಷ್ಟೆ ಘಟಿಸಿದ ಯಾವುದೋ ಸಂಗತಿ, ಪ್ರಮುಖ ಘಟನೆಯೊಂದರ ವಾರ್ಷಿಕೋತ್ಸವ ಅಥವಾ ಯಾವುದೋ ದಿನಾಚರಣೆಯ ಸಂದರ್ಭ - ಇವೆಲ್ಲವೂ ವಿಜ್ಞಾನ ಲೇಖನಕ್ಕೆ ಸೂಕ್ತ ವಿಷಯ ಒದಗಿಸಬಲ್ಲವು.

ಇಂತಹ ಯಾವುದೇ ವಿಷಯವನ್ನು ಥಟ್ಟನೆ ಗುರುತಿಸಬೇಕಾದರೆ ಸಂವಹನಕಾರರಾದ ನಾವು ನಿರಂತರವಾಗಿ ಅಧ್ಯಯನಶೀಲರಾಗಿರಬೇಕು, ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿರಬೇಕು. ಸಂಗ್ರಹಿಸಿದ ಮಾಹಿತಿ ಬೇಕೆಂದಾಗ ಸಿಗುವಂತೆ ಇಟ್ಟುಕೊಳ್ಳಬೇಕಾದ್ದೂ ಅತ್ಯಗತ್ಯ.
ನಮ್ಮ ಆದ್ಯತೆಯ ಕ್ಷೇತ್ರ ಅಥವಾ ಕ್ಷೇತ್ರಗಳನ್ನು ಆರಿಸಿಕೊಳ್ಳುವುದು ಈ ನಿಟ್ಟಿನಿಂದ ಒಳ್ಳೆಯದು; ಆ ಮೂಲಕ ನಿರ್ದಿಷ್ಟ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಪಡೆದುಕೊಳ್ಳುವುದು, ನಮ್ಮ ಛಾಪನ್ನು ಮೂಡಿಸುವುದು ಸಾಧ್ಯವಾಗುತ್ತದೆ.

ಯಾವುದೇ ವಿಷಯವನ್ನು ಆರಿಸಿಕೊಂಡ ನಂತರ ಅದರ ಬಗ್ಗೆ ಲೇಖನ ಬರೆಯುವ ಮೊದಲು ನಮಗೆ ನಾವೇ ಕೆಲ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಕೂಡ ಒಳ್ಳೆಯ ಅಭ್ಯಾಸ. ಈ ಲೇಖನದ ಹೂರಣ ಒಬ್ಬ ಸಾಮಾನ್ಯ ಓದುಗನಲ್ಲಿ ಆಸಕ್ತಿ ಮೂಡಿಸಬಲ್ಲದೇ? ಪತ್ರಿಕಾಲೇಖನದ ಮಿತಿಯಲ್ಲಿ - ಲಭ್ಯವಿರುವ ರಿಯಲ್ ಎಸ್ಟೇಟ್‌ನಲ್ಲಿ - ಈ ವಿಷಯದ ಬಗ್ಗೆ ಸಾಕಷ್ಟು ವಿವರಗಳನ್ನು ಒದಗಿಸುವುದು ಸಾಧ್ಯವೇ? ಈ ಲೇಖನಕ್ಕೆ ಪೂರಕವಾದ ಚಿತ್ರಗಳು - ಮುದ್ರಿಸಬಹುದಾದ ಗುಣಮಟ್ಟದಲ್ಲಿ - ಲಭ್ಯವಿವೆಯೇ? ವಿಷಯದ ಕುರಿತು ಕಲೆಹಾಕಿರುವ ಮಾಹಿತಿಯ ಸತ್ಯಾಸತ್ಯತೆ ದೃಢಪಡಿಸಿಕೊಳ್ಳುವುದು ಸಾಧ್ಯವೇ?... ನಮ್ಮ ಯೋಚನೆಯ ಹರಿವಿನಲ್ಲಿ ಇಂತಹ ಪ್ರಶ್ನೆಗಳೆಲ್ಲ ಬಂದರೆ ಚೆಂದ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಆನಂತರವಷ್ಟೆ ಲೇಖನ ಬರೆಯಲು ಹೊರಡುವುದು ಒಳ್ಳೆಯದು.

ಇದನ್ನು ಯಾವ ಪತ್ರಿಕೆ ಪ್ರಕಟಿಸಬಹುದು ಎನ್ನುವುದನ್ನೂ ಮುಂಚಿತವಾಗಿಯೇ ಯೋಚಿಸಿಕೊಂಡರೆ ಒಳಿತು. ವಿವಿಧ ಪತ್ರಿಕೆಗಳಲ್ಲಿ ವಿಜ್ಞಾನ ಲೇಖನಗಳಿಗಾಗಿ ಇರುವ ಸ್ಥಳಾವಕಾಶ ಹಾಗೂ ಪದಮಿತಿಯ ಅರಿವು ಕೂಡ ಅತ್ಯಗತ್ಯ. ನಿರ್ದಿಷ್ಟ ಸಂದರ್ಭಗಳಿಗೆಂದು ಲೇಖನಗಳನ್ನು ಕಳುಹಿಸುವಾಗ ಆಯಾ ಪತ್ರಿಕೆಯ ಡೆಡ್‌ಲೈನ್‌ನ ಅಂದಾಜನ್ನೂ ಇಟ್ಟುಕೊಂಡಿರಬೇಕು.

ಭಾಷೆಯ ಬಳಕೆ ವಿಜ್ಞಾನವಿರಲಿ ತಂತ್ರಜ್ಞಾನವಿರಲಿ ಸಂವಹನದ ಸವಾಲು ಎಂದತಕ್ಷಣ ಕೇಳಿಬರುವ ಮೊದಲ ಹೆಸರು ಪಾರಿಭಾಷಿಕ ಪದಗಳದ್ದು. ವಿಜ್ಞಾನದ ಯಾವುದೇ ಹೊಸ ಪರಿಕಲ್ಪನೆ ಅಥವಾ ಪದವನ್ನು ನೋಡಿದರೂ ಕನ್ನಡದಲ್ಲಿ ಬರೆಯುವಾಗ ಅದಕ್ಕೆ ಏನೆಂದು ನಾಮಕರಣ ಮಾಡಬೇಕೆಂಬ ಪ್ರಶ್ನೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಈ ಪ್ರಶ್ನೆಗೆ ಅನೇಕರು ಅನೇಕ ರೀತಿಯಲ್ಲಿ ಉತ್ತರಗಳನ್ನೂ ಕಂಡುಕೊಳ್ಳುತ್ತಾರೆ. ಅರ್ಥಮಾಡಿಕೊಳ್ಳುವುದಿರಲಿ ಓದಲೂ ಕಷ್ಟಪಡಬೇಕಾದಂತಹ ಪದಗಳಿರುವ ಸಾಲುಗಳು, ಕ್ರಿಯಾಪದಗಳಷ್ಟೆ ಕನ್ನಡದಲ್ಲಿರುವ ಇಂಗ್ಲಿಷ್‌ಮಯ ಸಾಲುಗಳು - ಇವೆಲ್ಲ ಕಾಣಿಸಿಕೊಳ್ಳುವುದು ಈ ಅನ್ವೇಷಣೆಯ ಪರಿಣಾಮವಾಗಿಯೇ!

ಹೊಸ ಪದಗಳ ಸೃಷ್ಟಿ ಅಥವಾ ಮೂಲ ಪದಗಳ ಮಿತಿಮೀರಿದ ಬಳಕೆಯ ತಪ್ಪು ಸರಿಗಳನ್ನು ಹುಡುಕುವ ಮೊದಲು ಡಾ. ಬಿ. ಜಿ. ಎಲ್. ಸ್ವಾಮಿಯವರ 'ಮೈಸೂರು ಡೈರಿ'ಯ ಒಂದು ಭಾಗವನ್ನು ಗಮನಿಸಬಹುದು:
ಸಮಕಾಲಿಕತೆಯಲ್ಲಿ ಈ ಜಾರ್ಗನಿನ ಬಳಕೆಗೆ ಹೆಚ್ಚುಹೆಚ್ಚು ಅನಿವಾರ್ಯತೆ ಏರ್ಪಡುತ್ತಿದೆ. ಹೀಗಾಗಿ ಸಹಸ್ರಾಯು ಕನ್ನಡದ ಚೌಕಟ್ಟು ಹಿಗ್ಗಬೇಕಿದೆ. ಈ ಸಂದರ್ಭದಲ್ಲಿ ಹೊಸ ಸಂಸ್ಕೃತ ಪದಗಳನ್ನು ಹೊಸೆಯುವುದನ್ನು ಕಡಿಮೆ ಮಾಡಿ ಪರಭಾಷೆಗಳಿಂದ ಅನಿವಾರ್ಯವಾದ ಪಾರಿಭಾಷಿಕ ಪದಗಳನ್ನು ಆಮದು ಮಾಡಿಕೊಳ್ಳುವುದೇ ಉಚಿತ ಎಂದೆನ್ನಿಸುತ್ತದೆ. ಪಾರಿಭಾಷಿಕ ಪದಗಳಿಗೆ ಈಗಾಗಲೇ ಅಂತರರಾಷ್ಟ್ರೀಯತೆಯ ವ್ಯಾಪ್ತಿ ರೂಢಿತವಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು.
ಹಾಗೆಂದು ಎಲ್ಲಕಡೆಯೂ ಇಂಗ್ಲಿಷ್ ಪದಗಳನ್ನೇ ತುಂಬಿಬಿಟ್ಟರೆ ನಮ್ಮ ಭಾಷೆಯ ಗತಿಯೇನು ಎಂದು ಗಾಬರಿಯಾಗುವವರಿಗೂ ಸ್ವಾಮಿಯವರ ಪುಸ್ತಕದ ಅದೇ ಅಧ್ಯಾಯದಲ್ಲಿ ಉತ್ತರವಿದೆ:
ಪಾರಿಭಾಷಿಕ ಪದಗಳ ಸ್ವೀಕರಣದಿಂದ ತಾಯಿನುಡಿಯ ವ್ಯಷ್ಟಿತ್ವಕ್ಕೆ ಧಕ್ಕೆಬರುವುದೆಂಬ ಭಯ ಆಧಾರವಿಲ್ಲದ್ದು. ಸಾವಿರಾರು ವರ್ಷಗಳಿಂದ ಬರಹದ ಮೂಲಕವೂ ಇನ್ನೂ ಹಿಂದಿನ ಕಾಲದಿಂದ ಮಾತಿನ ಮೂಲಕವೂ ಉಳಿದು ಬಂದಿರುವ ಭಾಷೆಯೊಂದು ಅನ್ಯಭಾಷೆಯಿಂದ ಪದಗಳನ್ನು ಎರವಲು ತಂದುಕೊಂಡಿದ್ದರಿಂದ ಕ್ಷಯಿಸಿದ ನಿದರ್ಶನಗಳಿಲ್ಲ. ಇಂದಿನ ಇಂಗ್ಲಿಷ್ ಭಾಷೆ ಬೆಳೆದು ಬಂದಿರುವ ರೀತಿ ನೀತಿಗಳನ್ನು ಗಮನಿಸಿದರೆ, ಆ ಭಾಷೆ ಇನ್ನೂ ಬೆಳೆಯುತ್ತಿದೆಯೆ ಹೊರತು ನಿಂತಲ್ಲೇ ನಿಂತಿದೆಯೆಂದಾಗಲಿ, ಇಳಿಮುಖವಾಗಿದೆಯೆಂದಾಗಲಿ ಅನ್ನಿಸದು.
ಹಿಂದೆಂದೋ ಕನ್ನಡಕ್ಕೆ ಹೊಸ ಪದಗಳಾಗಿ ಬಂದು ಸೇರಿದ, ತಂತ್ರಜ್ಞಾನದ ಕೊಡುಗೆಗಳೇ ಆದ ಬಸ್ಸು ರೈಲು ಕಾರುಗಳೆಲ್ಲ ನಮ್ಮ ಪದಗಳೇ ಆದಂತೆ ಇಂದಿನ ಆಧುನಿಕ ತಂತ್ರಜ್ಞಾನದ ಪದಗಳೂ ಕನ್ನಡಕ್ಕೆ ಸೇರಿದರೆ ತಪ್ಪೇನು? ಈ ಪ್ರಶ್ನೆಗೆ ಸಮರ್ಪಕವಾದ ಉತ್ತರ ಕಂಡುಕೊಂಡೆವೆಂದರೆ ಪಾರಿಭಾಷಿಕ ಪದಗಳ ಸವಾಲನ್ನು ನಿವಾರಿಸಿಕೊಂಡಂತೆಯೇ!

ಒಟ್ಟಿನಲ್ಲಿ ಓದುಗನಿಗೆ ವಿಷಯದ ಬಗ್ಗೆ ಆದಷ್ಟೂ ಸರಳ ವಿವರಣೆ ನೀಡುವುದನ್ನೇ ಬರವಣಿಗೆಯ ಮುಖ್ಯ ಗುರಿಯಾಗಿಟ್ಟುಕೊಳ್ಳುವುದು ಒಳಿತು ಎನ್ನುವುದು ನನ್ನ ನಿಲುವು. ಹೀಗೆ ಮಾಡಿದಾಗ ಎಲ್ಲಿ ಯಾವ ಪದಗಳ ಪ್ರಯೋಗ ಸೂಕ್ತವೆನಿಸುತ್ತದೆಯೋ ಅದನ್ನು ಬಳಸುವುದು ಸಾಧ್ಯವಾಗುತ್ತದೆ. ಬಲುಕಷ್ಟದ ಕನ್ನಡ-ಸಂಸ್ಕೃತ ಪದಗಳ ಬಳಕೆಯಾಗಲಿ, ಅನಗತ್ಯವಾಗಿ ಎಲ್ಲೆಡೆಯೂ ಇಂಗ್ಲಿಷ್ ತುರುಕುವುದಾಗಲೀ ಖಂಡಿತಾ ತಪ್ಪು.

ಎಲ್ಲೆಲ್ಲಿ ಕನ್ನಡದ ಪದಗಳು ಈಗಾಗಲೇ ಇವೆಯೋ, ಎಲ್ಲಿ ಮೂಲ ಪರಿಕಲ್ಪನೆಯೂ ಹೊಸದಾಗಿದ್ದು ಕನ್ನಡದ ಪದ ರೂಪಿಸಿಕೊಳ್ಳುವ ಅವಕಾಶವಿದೆಯೋ ಅಲ್ಲೆಲ್ಲ ಕನ್ನಡವನ್ನೇ ಬಳಸುವುದು ಸಾಧ್ಯ. ಆದರೆ ಕನ್ನಡದ ಪದವೇ ಬೇಕು ಎನ್ನುವ ಹಟದಿಂದ ಪ್ರತಿಯೊಂದು ಪದವನ್ನೂ ಅನುವಾದಿಸಲು ಹೊರಟರೆ, ಈಗಾಗಲೇ ಪರಿಚಿತವಾಗಿರುವ ಇಂಗ್ಲಿಷ್ ಪದಗಳಿಗೆ ಪರ್ಯಾಯ ರೂಪಿಸುವ ಪ್ರಯತ್ನ ಮಾಡಿದರೆ ಅದು ಅಷ್ಟೇನೂ ಉಪಯುಕ್ತವಾಗಲಾರದು. ಹೊಸ ಪದವನ್ನು ಸೃಷ್ಟಿಸುವುದೇ ಆದರೆ ಅದರ ಮೂಲವನ್ನು ಸೂಚಿಸುವುದು (ಹೊಸ ಪದ ಬಳಕೆಗೆ ಬರುವವರೆಗಾದರೂ) ಅಗತ್ಯ.

ವಿಜ್ಞಾನ-ತಂತ್ರಜ್ಞಾನ ಸಂವಹನದಲ್ಲಿ ತೊಡಗಿಕೊಂಡಿರುವ ಲೇಖಕರು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವ, ಪರಸ್ಪರರ ಲೇಖನಗಳನ್ನು ನಿಯಮಿತವಾಗಿ ಗಮನಿಸುವ ಮೂಲಕ ಪದಬಳಕೆಯಲ್ಲಿ ಏಕರೂಪತೆ ಸಾಧಿಸಲು ಪ್ರಯತ್ನಿಸಬಹುದು. ವಿಜ್ಞಾನ ಲೇಖಕರದೇ ವೇದಿಕೆ ರೂಪುಗೊಂಡಾಗ ಪದಕೋಶಗಳನ್ನು ರೂಪಿಸುವುದೂ ಸಾಧ್ಯವಾಗಬಹುದು.

ಲೇಖನದ ಶೈಲಿ-ಸ್ವರೂಪ ವಿಜ್ಞಾನ ಅಥವಾ ತಂತ್ರಜ್ಞಾನವನ್ನು ಕನ್ನಡದಲ್ಲಿ, ಅದೂ ಜನಪ್ರಿಯ ಶೈಲಿಯಲ್ಲಿ, ಬರೆಯುವಾಗ ಎಷ್ಟು ವಿವರಣೆ ಸೇರಿಸಬೇಕು ಎನ್ನುವುದು ನಮಗೆ ಪದೇಪದೇ ಎದುರಾಗುವ ಪ್ರಶ್ನೆ. ನಾಗೇಶ ಹೆಗಡೆಯವರ 'ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ ಮಾಹಿತಿ' ಲೇಖನದಲ್ಲಿ ಅವರು ಹೀಗೆ ಹೇಳುತ್ತಾರೆ:
ಕನ್ನಡ ಮಾಧ್ಯಮಗಳಲ್ಲಿ ವಿಜ್ಞಾನ ಮಾಹಿತಿಗಳನ್ನು ನೀಡುವವರ ಸಂದಿಗ್ಧ ಇದು. ರಾಜಕೀಯ, ಸಿನಿಮಾ, ಅಪರಾಧ, ಕೆಲವು ಬಗೆಯ ಆಟೋಟಗಳಿಗೆ ಸಂಬಂಧಿಸಿದ ಸುದ್ದಿಗಳಾದರೆ ಎಲ್ಲರಿಗೂ ಅರ್ಥವಾಗುತ್ತವೆ. ವಿಜ್ಞಾನ, ತಂತ್ರಜ್ಞಾನದ ವಿಷಯಗಳಾದರೆ ತೀರಾ ದುರ್ಬಲ ದ್ರಾವಣದ ರೂಪದಲ್ಲಿ ನಿರೂಪಿಸಬೇಕು. ಹಾಗೆ ಮಾಡಿದರೆ ಅದು ಪರಿಣತರಿಗೆ ತೀರಾ ನೀರಸವಾಗಿ ಕಾಣುವ ಸಂಭವ ಇರುತ್ತದೆ.
ಜನಪ್ರಿಯ ಶೈಲಿಯ ಲೇಖನಗಳನ್ನು ಸಾಮಾನ್ಯ ಜನರನ್ನೇ ಗುರಿಯಾಗಿಟ್ಟುಕೊಂಡು ಬರೆಯುವಾಗ ದ್ರಾವಣ ಎಷ್ಟು ದುರ್ಬಲವಾಗಿರಬೇಕು ಎಂದು ತೀರ್ಮಾನಿಸುವುದೂ ಸುಲಭವೇನಲ್ಲ. ಏಕೆಂದರೆ ವಿಜ್ಞಾನ-ತಂತ್ರಜ್ಞಾನದ ಸಂಕೀರ್ಣ ವಿಷಯಗಳು ಬಂದಾಗ ಲೇಖನದ ಮಿತಿಯೊಳಗೆ ಅದನ್ನೆಲ್ಲ ಪೂರ್ತಿಯಾಗಿ ವಿವರಿಸುವುದು ಕಷ್ಟ. ಲೇಖನದಲ್ಲಿ ಪ್ರಸ್ತಾಪವಾಗಿರುವ ಪ್ರತಿಯೊಂದು ವಿಷಯದ ಹಿನ್ನೆಲೆಯನ್ನೂ ವಿವರಿಸಲು ಹೊರಟರೆ ಪತ್ರಿಕೆಯಲ್ಲಿ ರಿಯಲ್ ಎಸ್ಟೇಟ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಅಷ್ಟೇ ಅಲ್ಲ, ವಿವರಣೆ ತೀರಾ ತಾಂತ್ರಿಕವಾದಾಗ ಓದುಗನ ಗಮನವನ್ನು ಹಿಡಿದಿಟ್ಟುಕೊಳ್ಳುವುದೂ ಒಂದು ಸವಾಲೇ. ಹಾಗಾಗಿ ಲೇಖನದ 'ರೀಡೆಬಿಲಿಟಿ' ಉಳಿಸಿಕೊಳ್ಳುವ - ಮತ್ತು - ಇರುವ ಸೀಮಿತ ಸ್ಥಳಾವಕಾಶದಲ್ಲಿ ಆದಷ್ಟೂ ಪರಿಣಾಮಕಾರಿ ಬರಹ ರೂಪಿಸುವ ನಿಟ್ಟಿನಲ್ಲಿ ಸಾಮಾನ್ಯ ಓದುಗನ ಪಾಲಿಗೆ ಹೆಚ್ಚು ಉಪಯುಕ್ತವಾದ ಮಾಹಿತಿಯನ್ನೇ ನೀಡುವುದು ಒಳ್ಳೆಯದು. ಇದನ್ನು ಸಂದರ್ಭಕ್ಕೆ ತಕ್ಕಂತೆ ನಿರ್ಧರಿಸುವ ಅನುಕೂಲ, ಜವಾಬ್ದಾರಿಗಳೆಲ್ಲ ನಮ್ಮದೇ.

ಲೇಖನದ 'ರೀಡೆಬಿಲಿಟಿ' ಉಳಿಸಿಕೊಳ್ಳುವ ಪ್ರಶ್ನೆ ಬಂದಾಗ ಅದರ ಶೈಲಿಯೂ ಮುಖ್ಯವಾಗುತ್ತದೆ. ಲೇಖನ ತೀರಾ ಶುಷ್ಕವಾಗಿಲ್ಲದಂತೆ ಹಾಗೂ ಅದೇ ಸಮಯದಲ್ಲಿ ಅತಿರಂಜಿತವೂ ಆಗಿಲ್ಲದಂತೆ ನೋಡಿಕೊಳ್ಳುವುದು ನಮ್ಮ ಮೇಲಿರುವ ಇನ್ನೊಂದು ಜವಾಬ್ದಾರಿ. ಮೊದಲಿಗೆ ನಾವು ಮೆಚ್ಚುವ ಲೇಖಕರ ಶೈಲಿಯನ್ನು ಅನುಕರಿಸಲು ಪ್ರಯತ್ನಿಸಬಹುದಾದರೂ ಮುಂದೆ ನಮ್ಮದೇ ಒಂದು ಶೈಲಿಯನ್ನು ಬೆಳೆಸಿಕೊಳ್ಳುವುದು ಅಪೇಕ್ಷಣೀಯ.

ನಾವು ಬರೆಯುವ ಲೇಖನಗಳ ಸ್ವರೂಪ ಹೇಗಿರಬೇಕು ಎನ್ನುವುದು ಇನ್ನೊಂದು ಪ್ರಶ್ನೆ. ಇದಕ್ಕೆ ಬೇರೆಬೇರೆ ಲೇಖಕರು ಬೇರೆಬೇರೆ ರೀತಿಯ ಉತ್ತರಗಳನ್ನು ಹುಡುಕಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ಓದುಗರನ್ನು ಸೆಳೆಯುವ ತಂತ್ರ ಉಪಯೋಗಿಸಿ ಆನಂತರ ವಿಷಯದೊಳಕ್ಕೆ ಕರೆದೊಯ್ಯುವುದು, ಆಕರ್ಷಕ ಚಿತ್ರಗಳನ್ನು ಬಳಸುವುದು, ಭಾಷೆಯಲ್ಲಿ ಲವಲವಿಕೆ ಕಾಯ್ದುಕೊಳ್ಳುವುದು ಹಾಗೂ ನಾವು ಏನು ಹೇಳುತ್ತಿದ್ದೇವೆ ಎನ್ನುವುದರಲ್ಲಿ ಸ್ಪಷ್ಟತೆ ನೀಡಲು ಪ್ರಯತ್ನಿಸುವುದು ಈ ನಿಟ್ಟಿನಲ್ಲಿ ನಾವು ಮಾಡಬಹುದಾದ ಕೆಲಸ.

ಓದುಗರ ಸಂಪರ್ಕ / ಪ್ರತಿಕ್ರಿಯೆ ಸಂಗ್ರಹ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳನ್ನು ಓದಿದವರು ಪತ್ರಿಕೆಗೆ ಬರೆಯುವ ಪತ್ರ ಆಧರಿಸಿ ಅವರಿಗೆ ಏನು ಇಷ್ಟವಾಗಿದೆ, ಏನು ಇಷ್ಟವಾಗಿಲ್ಲ ಎಂದು ಅರಿತುಕೊಳ್ಳುವುದು ಓದುಗರ ಪ್ರತಿಕ್ರಿಯೆಯನ್ನು ಅರಿತುಕೊಳ್ಳುವ ಒಂದು ವಿಧಾನ. ಆದರೆ ಎಲ್ಲ ಪತ್ರಿಕೆಗಳಲ್ಲೂ ಈ ಫೀಡ್‌ಬ್ಯಾಕ್ ವ್ಯವಸ್ಥೆ ಅಷ್ಟು ಸರಿಯಾಗಿ ಕೆಲಸಮಾಡುವುದಿಲ್ಲ: ಕೆಲವು ಕಡೆ ಓದುಗರ ಪತ್ರಗಳು ಲೇಖಕರನ್ನು ತಲುಪುವುದಿಲ್ಲ, ಇನ್ನು ಕೆಲವೆಡೆಗಳಿಗೆ ಓದುಗರು ಪತ್ರವನ್ನೇ ಬರೆಯುವುದಿಲ್ಲ.

ತಂತ್ರಜ್ಞಾನದ ಬಳಕೆಯಿಂದ ಈ ಸಮಸ್ಯೆಯನ್ನು ಕೊಂಚಮಟ್ಟಿಗೆ ನಿವಾರಿಸಿಕೊಳ್ಳಬಹುದು. ಪ್ರಕಟಿತ ಲೇಖನಗಳನ್ನು ಬ್ಲಾಗಿನಲ್ಲಿ, ಸೋಶಿಯಲ್ ಮೀಡಿಯಾ ತಾಣಗಳಲ್ಲಿ ಹಂಚಿಕೊಳ್ಳುವುದು ಈ ನಿಟ್ಟಿನಲ್ಲಿ ಒಂದು ಹೆಜ್ಜೆ. ಆದರೆ ಇಲ್ಲಿ ಬರುವ ಪ್ರತಿಕ್ರಿಯೆಗಳಲ್ಲೂ ಬಹುಪಾಲು ಬರೆದ ಲೇಖನವನ್ನು ಮೆಚ್ಚಿ ಬಂದವು - ಲೇಖನ ಚೆನ್ನಾಗಿದೆ, ವಿವರಣೆ ಇಷ್ಟವಾಯಿತು ಎನ್ನುವುದೇ ಬಹುತೇಕ ಪ್ರತಿಕ್ರಿಯೆಗಳ ಸಾರಾಂಶ. ಲೇಖನದಲ್ಲಿರುವ ಮಾಹಿತಿ ಅಸ್ಪಷ್ಟವಾಗಿದ್ದರೆ, ಅಥವಾ ತಪ್ಪಾಗಿದ್ದರೆ ಅದನ್ನು ತೋರಿಸುವ ಪ್ರತಿಕ್ರಿಯೆಗಳು ಅಪರೂಪಕ್ಕೊಮ್ಮೆ ಬಂದರೂ ಬರಬಹುದು ಅಷ್ಟೆ.

ಆದರೆ ಸ್ವಯಂಪ್ರೇರಿತರಾಗಿ ಇಂತಹ ವಿಷಯದ ಬಗೆಗೊಂದು ಲೇಖನ ಯಾಕೆ ಬರೆಯಬಾರದು? ಎಂದೆಲ್ಲ ಕೇಳುವವರ ಸಂಖ್ಯೆ ಮಾತ್ರ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಒಂದೆರಡು ಬಾರಿ ಮುಂದಿನ ಲೇಖನಕ್ಕೆ ವಿಷಯ ಸೂಚಿಸಿ - ಆಯ್ಕೆಯಾದ ವಿಷಯಕ್ಕೆ ಬಹುಮಾನವಿದೆ ಎಂದು ಕೇಳಿದಾಗಲೂ ಬಂದದ್ದು ಬೆರಳೆಣಿಕೆಯಷ್ಟು ಪ್ರತಿಕ್ರಿಯೆಗಳಷ್ಟೆ. ಈ ಪರಿಸ್ಥಿತಿ ಬದಲಿಸಲು ಏನು ಮಾಡಬಹುದು ಎನ್ನುವುದು, ನನ್ನ ಮಟ್ಟಿಗಂತೂ, ಇನ್ನೂ ಅಸ್ಪಷ್ಟವೇ.

ಒಟ್ಟಿನಲ್ಲಿ ಜನಪ್ರಿಯ ವಿಜ್ಞಾನ-ತಂತ್ರಜ್ಞಾನ ಲೇಖನಗಳ ಕುರಿತಾದ ಸಂವಾದ ಪತ್ರಿಕೆಗಳ ವಾಚಕರ ವಾಣಿಯಲ್ಲಿ ನಡೆಯುವ ಚರ್ಚೆಯ ಮಟ್ಟಕ್ಕೆ ಅಥವಾ ಫೇಸ್‌ಬುಕ್‌ನಂತಹ ಸಮಾಜಜಾಲಗಳಲ್ಲಿ ವೈರಲ್ ಆಗಿ ಹರಿದಾಡಿ ಹೆಚ್ಚುಹೆಚ್ಚು ಪ್ರತಿಕ್ರಿಯೆಗಳನ್ನು ಗಿಟ್ಟಿಸುವ ಮಟ್ಟಕ್ಕೆ ಹೋಗಲು ಇನ್ನೂ ಕೊಂಚ ಸಮಯ ಬೇಕು ಎನ್ನಬಹುದು.

ಇದಷ್ಟೆ ಅಲ್ಲದೆ ಬೇರೆಯ ಇನ್ನೂ ಯಾವುದೆಲ್ಲ ವಿಧಾನಗಳ ಮೂಲಕ ನಾವು ನಮ್ಮ ಓದುಗರ ಅಗತ್ಯಗಳನ್ನು ಅರಿತುಕೊಳ್ಳಬಹುದು ಎನ್ನುವುದೂ ಚಿಂತನಾರ್ಹ ವಿಷಯ. ಟೀವಿ ಕಾರ್ಯಕ್ರಮಗಳಿಗೆ ಟಾರ್ಗೆಟ್ ರೇಟಿಂಗ್ ಪಾಯಿಂಟುಗಳಿದ್ದಂತೆ (ಟಿಆರ್‌ಪಿ) ಓದುಗರಲ್ಲಿ ಎಷ್ಟು ಜನ ವಿಜ್ಞಾನ-ತಂತ್ರಜ್ಞಾನ ಬರೆಹಗಳನ್ನು ಓದುತ್ತಾರೆ, ಆ ಲೇಖನಗಳಿಂದ ಅವರು ಏನನ್ನು ಬಯಸುತ್ತಾರೆ ಎನ್ನುವ ಅಧ್ಯಯನವನ್ನು ಯಾರಾದರೂ ಮಾಡಿದ್ದಾರೇನೋ ಗೊತ್ತಿಲ್ಲ; ಆದರೆ  ಓದುಗರೊಡನೆ ವಿಚಾರವಿನಿಮಯ ನಡೆಸುವ ಹಾಗೂ ಅವರ ಅಭಿಪ್ರಾಯಗಳನ್ನು ಸಂಗ್ರಹಿಸುವ ಕೆಲಸಗಳು ಈ ನಿಟ್ಟಿನಲ್ಲಿ ಆಗಬಹುದೆಂದು ತೋರುತ್ತದೆ. ಇಂದಿನ ಕಾರ್ಯಕ್ರಮದಂತಹ ಅವಕಾಶಗಳು ಹೆಚ್ಚುಹೆಚ್ಚಾಗಿ ದೊರೆತು ವಿಜ್ಞಾನ ಲೇಖಕರೆಲ್ಲ ಸೇರುವ ಒಂದು ವೇದಿಕೆ ರೂಪುಗೊಂಡರೆ ಇಂತಹುದೊಂದು ಪ್ರಯತ್ನವನ್ನು ಬಹುಶಃ ನಾವೇ ಮಾಡಲೂಬಹುದು.

ಇದೆಲ್ಲ ಆಗುವವರೆಗೂ, ನನ್ನ ಪುಸ್ತಕ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಮುನ್ನುಡಿಯಲ್ಲಿ ಶ್ರೀ ಶ್ರೀವತ್ಸ ಜೋಶಿಯವರು ಹೇಳಿದಂತೆ ಓದುಗರ ಅರಿವಿನ ಮಟ್ಟವನ್ನು ಅಜಮಾಸು ಊಹಿಸಿಕೊಂಡು ಬರೆಯುತ್ತಿರುವುದೇ ಜನಪ್ರಿಯ ವಿಜ್ಞಾನ-ತಂತ್ರಜ್ಞಾನ ಬರಹಗಾರರಾದ ನಮ್ಮೆಲ್ಲರ ಕೆಲಸವೇನೋ!

1 ಕಾಮೆಂಟ್‌:

Udaya Shankar Puranik ಹೇಳಿದರು...

ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡದಲ್ಲಿ ವಿಜ್ಞಾನ ಬರಹಗಾರರಿಗೆ ಅನುಕೂಲವಾಗುವ ಕನ್ನಡ ಪದವಿವರಣ ಕೋಶವನ್ನು ಪ್ರಕಟಿಸಿತ್ತು.ಅದರ ಪರಿಷ್ಕರಣೆ ಆಗಬೇಕಿದೆ.

badge