ಸೋಮವಾರ, ಮೇ 11, 2015

ಟ್ಯಾಬ್ಲೆಟ್ಟೂ ಹೌದು, ಲ್ಯಾಪ್‌ಟಾಪೂ ಹೌದು: ಇದು ಟೂ-ಇನ್-ಒನ್ ಕಂಪ್ಯೂಟರ್!

ಟಿ. ಜಿ. ಶ್ರೀನಿಧಿ

ಈಚಿನ ವರ್ಷಗಳಲ್ಲಿ ನಾವು ಸ್ಪರ್ಶಸಂವೇದಿ ಪರದೆಗಳಿಗೆ (ಟಚ್‌ಸ್ಕ್ರೀನ್), ಅದನ್ನು ಬಳಸುವ ಟ್ಯಾಬ್ಲೆಟ್ಟಿನಂತಹ ಸಾಧನಗಳಿಗೆ ಚೆನ್ನಾಗಿಯೇ ಒಗ್ಗಿಕೊಂಡಿದ್ದೇವೆ. ವಾಟ್ಸಾಪ್‌ನಲ್ಲಿ ಟೈಪಿಸಲಿಕ್ಕೆ, ಬ್ರೌಸಿಂಗ್ ಮಾಡಲಿಕ್ಕೆಲ್ಲ ಟಚ್‌ಸ್ಕ್ರೀನ್ ಉಪಯೋಗ ನಮಗೆ ಬಹಳ ಸಲೀಸು. ಸೋಫಾಗೆ ಒರಗಿಕೊಂಡೋ ಮಂಚದ ಮೇಲೆ ಮಲಗಿಕೊಂಡೋ ಯೂಟ್ಯೂಬ್ ನೋಡುವುದಕ್ಕೆ-ಕತೆಪುಸ್ತಕ ಓದುವುದಕ್ಕೂ ಟ್ಯಾಬ್ಲೆಟ್ಟುಗಳು ಹೇಳಿ ಮಾಡಿಸಿದ ಜೋಡಿ.

ಆದರೆ ಉದ್ದನೆಯದೊಂದು ಇಮೇಲನ್ನೋ ಬ್ಲಾಗಿನ ಬರಹವನ್ನೋ ಟೈಪಿಸಬೇಕೆಂದು ಹೇಳಿ, ಟ್ಯಾಬ್ಲೆಟ್ಟಿನ ಕಟ್ಟಾ ಅಭಿಮಾನಿಗಳೂ ಡೆಸ್ಕ್‌ಟಾಪೋ ಲ್ಯಾಪ್‌ಟಾಪೋ ಇದ್ದರೆ ಚೆನ್ನಾಗಿತ್ತಲ್ಲ ಎಂದು ಗೊಣಗಿಕೊಳ್ಳುತ್ತಾರೆ. ಈ ಕೆಲಸವನ್ನೆಲ್ಲ ಟಚ್‌ಸ್ಕ್ರೀನಿನಲ್ಲಿ ಮಾಡುವುದು ಸಾಧ್ಯವಿಲ್ಲ ಎಂದಲ್ಲ, ಕೀಲಿಮಣೆಯಲ್ಲಿ ಟೈಪಿಸಿದಷ್ಟು ವೇಗವಾಗಿ ಟಚ್‌ಸ್ಕ್ರೀನನ್ನು ಕುಟ್ಟುವುದು ಕಷ್ಟ ಎನ್ನುವುದು ಅವರ ಗೊಣಗಾಟಕ್ಕೆ ಕಾರಣ.

ನಿಜ, ಟ್ಯಾಬ್ಲೆಟ್ಟುಗಳನ್ನು ಸಣ್ಣಪುಟ್ಟ ಕೆಲಸಗಳಿಗೆ ಅಥವಾ ಮನರಂಜನೆಯ ಅಗತ್ಯಗಳಿಗೆ ಬಳಸಿದಷ್ಟು ಸುಲಭವಾಗಿ ಹೆಚ್ಚಿನ ಟೈಪಿಂಗ್ ನಿರೀಕ್ಷಿಸುವ ಕೆಲಸಗಳಿಗೆ ಬಳಸುವುದು ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಬಹಳಷ್ಟು ಬಳಕೆದಾರರು ಟ್ಯಾಬ್ಲೆಟ್ಟನ್ನು ತಮ್ಮಲ್ಲಿರುವ ಡೆಸ್ಕ್‌ಟಾಪ್-ಲ್ಯಾಪ್‌ಟಾಪುಗಳ ಜೊತೆಗೆ ಬಳಸುತ್ತಾರೆ: ಇಂತಿಷ್ಟು ಕೆಲಸಕ್ಕೆ ಟ್ಯಾಬೆಟ್ಟು, ಮಿಕ್ಕಿದ್ದಕ್ಕೆ ಲ್ಯಾಪ್‌ಟಾಪು ಎನ್ನುವುದು ಅನೇಕರು ಪಾಲಿಸುವ ಸೂತ್ರ.

ಹಿಂದಿನ ಕಾಲದಲ್ಲಿ ಎಲ್ಲ ಮನೆಗಳಲ್ಲೂ ರೇಡಿಯೋ ಇರುತ್ತಿತ್ತು, ದೊಡ್ಡ ಪೆಟ್ಟಿಗೆಯ ಗಾತ್ರದ್ದು. ಆಮೇಲೆ ಯಾವಾಗಲೋ ಟೇಪ್ ರೆಕಾರ್ಡರ್ ಮಾರುಕಟ್ಟೆಗೆ ಬಂತು; ರೇಡಿಯೋದಲ್ಲಿ ಬರುವ ಹಾಡನ್ನಷ್ಟೇ ಕೇಳಬೇಕಾದ ಅನಿವಾರ್ಯತೆ ಹೋಗಿ ನಮಗಿಷ್ಟವಾದ ಹಾಡನ್ನು ಬೇಕಾದಾಗ ಬೇಕಾದಷ್ಟು ಸಲ ಕೇಳುವುದು ಸಾಧ್ಯವಾಯಿತು. ರೇಡಿಯೋ ಜೊತೆಗೆ ಈ ಹೊಸ ಸಾಧನವನ್ನೂ ಮನೆಯಲ್ಲಿಟ್ಟುಕೊಳ್ಳುವುದು ಒಂದಷ್ಟು ದಿನದ ಮಟ್ಟಿಗೆ ಫ್ಯಾಶನಬಲ್ ಅನಿಸಿತೇನೋ ಸರಿ; ಆದರೆ ಕೊಂಚ ಸಮಯದ ನಂತರ ಎರಡೆರಡು ಪೆಟ್ಟಿಗೆಗಳೇಕಿರಬೇಕು ಎನ್ನುವ ಯೋಚನೆ ಶುರುವಾಯಿತು. ಆಗ ಬಂದದ್ದು ರೇಡಿಯೋ ಸೌಲಭ್ಯವೂ ಇರುವ ಟೇಪ್‌ರೆಕಾರ್ಡರ್, ಅರ್ಥಾತ್ 'ಟೂ-ಇನ್-ಒನ್'.

ಕಂಪ್ಯೂಟರ್ ಲೋಕದ ಸದ್ಯದ ಪರಿಸ್ಥಿತಿ ಹೆಚ್ಚೂಕಡಿಮೆ ಹೀಗೆಯೇ ಇದೆ. ಲ್ಯಾಪ್‌ಟಾಪ್ - ಟ್ಯಾಬ್ಲೆಟ್ ಎರಡನ್ನೂ ನಿಭಾಯಿಸುವುದು ಬಲು ಕಿರಿಕಿರಿಯ ಸಂಗತಿ ಎಂಬ ಅಭಿಪ್ರಾಯ ಈಗಾಗಲೇ ಕೇಳಿಬರುತ್ತಿದೆ. ಎರಡೆರಡು ಸಾಧನಗಳಲ್ಲಿ ತಂತ್ರಾಂಶಗಳನ್ನು ನಿಭಾಯಿಸುವುದು, ಸದಾಕಾಲ ಚಾರ್ಜ್ ಇರುವಂತೆ ನೋಡಿಕೊಳ್ಳುವುದು ಮುಂತಾದ ತಲೆಬಿಸಿಯೆಲ್ಲ ಏಕೆ, ಇಲ್ಲೂ ಒಂದು ಟೂ-ಇನ್-ಒನ್ ಬರಬಹುದಲ್ಲ ಎನ್ನುವುದು ಅನೇಕರ ಮನಸ್ಸಿನಲ್ಲಿರುವ ಪ್ರಶ್ನೆ.

ಈ ಪ್ರಶ್ನೆಗೆ ಉತ್ತರ, ಟೂ-ಇನ್-ಒನ್ ಅಥವಾ ಹೈಬ್ರಿಡ್ ಕಂಪ್ಯೂಟರುಗಳ ರೂಪದಲ್ಲಿ ಈಗಾಗಲೇ ಸಿದ್ಧವಾಗಿಬಿಟ್ಟಿದೆ
(ಇಂತಹ ಸಾಧನಗಳನ್ನು 'ಟ್ಯಾಬ್ಲೆಟ್-ಲ್ಯಾಪ್‌ಟಾಪ್ ಹೈಬ್ರಿಡ್'ಗಳೆಂದು ಕರೆಯುವುದೂ ಉಂಟು). ಆ ಮೂಲಕ ಟ್ಯಾಬ್ಲೆಟ್ ಹಾಗೂ ಲ್ಯಾಪ್‌ಟಾಪ್ ಕಂಪ್ಯೂಟರುಗಳ ನಡುವಿನ ವ್ಯತ್ಯಾಸ ನಿಧಾನಕ್ಕೆ ಮಸುಕಾಗುತ್ತಿದೆ.

[ಜಾಹೀರಾತು] ಟ್ಯಾಬ್ಲೆಟ್-ಲ್ಯಾಪ್‌ಟಾಪ್ ಹೈಬ್ರಿಡ್‌ಗಳನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಲ್ಯಾಪ್‌ಟಾಪ್ ಕಂಪ್ಯೂಟರಿನಲ್ಲಿ ಅನುಕೂಲಕರ ಗಾತ್ರದ (ಸುಮಾರು ೧೦ರಿಂದ ೧೫ ಇಂಚು) ಪರದೆಯಿರುತ್ತದೆ, ಕೀಲಿಮಣೆಯೂ ಇರುತ್ತದೆ. ಇವೆರಡನ್ನೂ ಬೇಕೆಂದಾಗ ಬೇರೆಮಾಡುವಂತಿದ್ದರೆ? ಸಿನಿಮಾ ನೋಡುವಾಗ ಪರದೆಯನ್ನಷ್ಟೆ (ಟ್ಯಾಬ್ಲೆಟ್ಟಿನಂತೆ) ಬಳಸಿ ಇಮೇಲ್ ಟೈಪಿಸುವಾಗ ಕೀಲಿಮಣೆಯನ್ನು ಜೋಡಿಸಿಕೊಳ್ಳಬಹುದು. ಇಮೇಲ್ ಮುಗಿಸಿದ ಮೇಲೆ ಕೀಲಿಮಣೆ ಕಿತ್ತಿಟ್ಟರಾಯಿತು, ಆವರೆಗೂ ಲ್ಯಾಪ್‌ಟಾಪ್ ಆಗಿದ್ದದ್ದು ಟ್ಯಾಬ್ಲೆಟ್ ಆಗಿ ಬದಲಾಗಿಬಿಡುತ್ತದೆ! ಅಷ್ಟೇ ಅಲ್ಲ, ಸಾಮಾನ್ಯವಾಗಿ ಲ್ಯಾಪ್‌ಟಾಪ್‌ಗಳಲ್ಲಷ್ಟೆ ಇರುವ ಸಂಸ್ಕರಣಾ ಸಾಮರ್ಥ್ಯ, ಮತ್ತು ಅವುಗಳಲ್ಲಿ ನಾವು ಬಳಸುವ ತಂತ್ರಾಂಶದ ಸವಲತ್ತುಗಳು ಟ್ಯಾಬ್ಲೆಟ್ಟಿನಲ್ಲೂ ದೊರಕುವುದು ಸಾಧ್ಯವಾಗುತ್ತದೆ.

ಟೂ-ಇನ್-ಒನ್ ಕಂಪ್ಯೂಟರುಗಳ ಸೃಷ್ಟಿಯ ಹಿಂದಿರುವುದು ಇದೇ ಆಲೋಚನೆ. ಈ ಪರಿಕಲ್ಪನೆ ಬಹಳಷ್ಟು ಬಳಕೆದಾರರಿಗೆ ಇಷ್ಟವಾಗಲಿದೆ ಎನ್ನುವ ನಿರೀಕ್ಷೆಯಲ್ಲಿ ಯಂತ್ರಾಂಶ ತಯಾರಕರೆಲ್ಲ ಇಂತಹ ಕಂಪ್ಯೂಟರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ವಿಶ್ವವಿಖ್ಯಾತ ಸಂಸ್ಥೆಗಳಿಂದ ಪ್ರಾರಂಭಿಸಿ ಪ್ರಾದೇಶಿಕ ಉತ್ಪಾದಕರವರೆಗೆ ಎಲ್ಲ ಬಗೆಯ ಸಂಸ್ಥೆಗಳ ಉತ್ಪನ್ನಗಳನ್ನೂ ನಾವು ಟೂ-ಇನ್-ಒನ್ ಮಾರುಕಟ್ಟೆಯಲ್ಲಿ ಇದೀಗ ಕಾಣಬಹುದು.

ಇಂತಹ ಕಂಪ್ಯೂಟರುಗಳಲ್ಲಿ ಸಾಮಾನ್ಯ ಟ್ಯಾಬ್ಲೆಟ್ಟುಗಳಿಗಿಂತ (ಏಳು ಇಂಚಿನ ಪರದೆ) ದೊಡ್ಡ ಗಾತ್ರದ ಪರದೆ ಇರುವುದು ಸಾಮಾನ್ಯ. ಕೆಲವು ಮಾದರಿಗಳಲ್ಲಿ ಪ್ರತ್ಯೇಕ ಕೀಲಿಮಣೆ ಇದ್ದರೆ ಇನ್ನು ಕೆಲವು ಮಾದರಿಗಳಲ್ಲಿ ಪರದೆಯನ್ನು ಮುಚ್ಚುವ ಕವಚದಲ್ಲೇ (ಟ್ಯಾಬ್ಲೆಟ್ ಕವರ್) ಕೀಲಿಮಣೆಯೂ ಅಡಕವಾಗಿರುತ್ತದೆ. ಪ್ರತ್ಯೇಕ ಕೀಲಿಮಣೆ ಇರುವ ಮಾದರಿಗಳಲ್ಲಿ ಟ್ಯಾಬ್ಲೆಟ್‌ನಂತೆ ಬಳಸುವ ಭಾಗವನ್ನು ಕೀಲಿಮಣೆಯ ಮೇಲೆ (ಲ್ಯಾಪ್‌ಟಾಪ್ ಪರದೆಯಂತೆ) ಜೋಡಿಸಿಕೊಳ್ಳುವುದು ಸಾಧ್ಯ. ಕವಚದಲ್ಲಿ ಅಡಕವಾಗಿರುವ ತೆಳುವಾದ ಕೀಲಿಮಣೆಗೆ ಈ ಸಾಮರ್ಥ್ಯವಿರುವುದಿಲ್ಲವಲ್ಲ, ಅಂತಹ ಮಾದರಿಗಳಲ್ಲಿ ಟ್ಯಾಬ್ಲೆಟ್‌ಗೊಂದು ಪ್ರತ್ಯೇಕ ಸ್ಟಾಂಡ್ ಇರುತ್ತದೆ.

ಟೂ-ಇನ್-ಒನ್ ಕಂಪ್ಯೂಟರ್ ಎಂದಮಾತ್ರಕ್ಕೆ ಎಲ್ಲ ಮಾದರಿಗಳಲ್ಲೂ ಟ್ಯಾಬ್ಲೆಟ್ಟನ್ನೂ ಕೀಲಿಮಣೆಯನ್ನೂ ಒಟ್ಟಿಗೆ ಕೊಳ್ಳಬೇಕು ಎಂಬ ನಿರ್ಬಂಧವೇನೂ ಇರುವುದಿಲ್ಲ. ಪ್ರತ್ಯೇಕ ಕೀಲಿಮಣೆಯನ್ನು ಅಳವಡಿಸಿಕೊಳ್ಳಬಹುದಾದ ಟ್ಯಾಬ್ಲೆಟ್ಟುಗಳೂ ಮಾರುಕಟ್ಟೆಯಲ್ಲಿವೆ. ಇಂತಹ ಆಯ್ಕೆ ಇದ್ದರೆ ಸದ್ಯಕ್ಕೆ ಟ್ಯಾಬ್ಲೆಟ್ಟನ್ನಷ್ಟೆ ಕೊಂಡು ಮುಂದೆ ಅಗತ್ಯಬಿದ್ದಾಗ ಕೀಲಿಮಣೆಯನ್ನು ಪ್ರತ್ಯೇಕವಾಗಿ ಕೊಳ್ಳುವುದು ಸಾಧ್ಯವಾಗುತ್ತದೆ.

ಈ ಬಗೆಯ ಟ್ಯಾಬ್ಲೆಟ್‌ಗಳಿಗೆ ಅಸುಸ್ 'ಟ್ರಾನ್ಸ್‌ಫಾರ್ಮರ್ ಪ್ಯಾಡ್' ಒಂದು ಉದಾಹರಣೆ. ೧೦.೧ ಇಂಚಿನ ಈ ಸಾಧನದಲ್ಲಿ ಇನ್ನಿತರ ಟ್ಯಾಬ್ಲೆಟ್ಟುಗಳಲ್ಲಿರುವ ಹಾಗೆಯೇ ೧.೬ ಗಿಗಾಹರ್ಟ್ಸ್ ಪ್ರಾಸೆಸರ್, ೧ ಜಿಬಿ ರ್‍ಯಾಮ್, ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ, ಕ್ಯಾಮೆರಾ, ೩ಜಿ ಮೊಬೈಲ್ ಸಂಪರ್ಕ ಇತ್ಯಾದಿಗಳೆಲ್ಲ ಇವೆ. ಸದ್ಯ ಟ್ಯಾಬ್ಲೆಟ್ಟಷ್ಟೇ ಸಾಕು, ಟೂ-ಇನ್-ಒನ್ ಬಗ್ಗೆ ಆಮೇಲೆ ಯೋಚಿಸುತ್ತೇವೆ ಎನ್ನುವವರಿಗೆ ಪ್ರತ್ಯೇಕ ಕೀಬೋರ್ಡನ್ನೂ ಕೊಂಡು ಬಳಸುವ ಆಯ್ಕೆ ನೀಡುವುದು ಇದರ ವೈಶಿಷ್ಟ್ಯ (ಈ ಲೇಖನಕ್ಕಾಗಿ ಪರೀಕ್ಷಿಸಿದ ಸಮಯದಲ್ಲಿ ಟ್ರಾನ್ಸ್‌ಫಾರ್ಮರ್ ಪ್ಯಾಡ್‌ನ ಕೀಲಿಮಣೆ ಭಾರತದಲ್ಲಿ ಇನ್ನೂ ಬಿಡುಗಡೆಯಾಗಿರಲಿಲ್ಲ).ಹೊಸದಾಗಿ ಟ್ಯಾಬ್ಲೆಟ್ ಕೊಳ್ಳುವವರಿಗೆ ಇದೀಗ ಟೂ-ಇನ್-ಒನ್ ಕಂಪ್ಯೂಟರಿನತ್ತ ಹೋಗುವ ಆಯ್ಕೆಯೂ ಲಭ್ಯವಿದೆ ಸರಿ, ಆದರೆ ಈಗಾಗಲೇ ಟ್ಯಾಬ್ಲೆಟ್ ಕೊಂಡವರು ಏನುಮಾಡಬೇಕು? ಚಿಂತಿಸುವ ಅಗತ್ಯವಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಹಲವು ಟ್ಯಾಬ್ಲೆಟ್ಟುಗಳಿಗೆ ಹೊಂದುವಂತಹ ಕೀಲಿಮಣೆಗಳು ಇದೀಗ ದೊರಕುತ್ತಿವೆ. ಇಂತಹ ಕೀಲಿಮಣೆಗಳ ಬೆಲೆ ಕೆಲವು ನೂರು ರೂಪಾಯಿಗಳಿಂದ ಕೆಲವು ಸಾವಿರಗಳವರೆಗೆ ಇರುತ್ತದೆ (ಅವುಗಳ ಗುಣಮಟ್ಟ ಕೂಡ ಕೊಟ್ಟ ಬೆಲೆಗೆ ತಕ್ಕುದಾಗಿಯೇ ಇರುತ್ತದೆ ಎನ್ನಬಹುದು).

ಪ್ರತ್ಯೇಕ ಕೀಲಿಮಣೆ ಕೊಳ್ಳುವುದಿಲ್ಲ ಎನ್ನುವವರು ಯುಎಸ್‌ಬಿ ಆನ್-ದ-ಗೋ (ಓಟಿಜಿ) ಕೇಬಲ್ ಬಳಸಿ ಡೆಸ್ಕ್‌ಟಾಪ್ ಕಂಪ್ಯೂಟರಿನ ಕೀಬೋರ್ಡನ್ನೇ ಟ್ಯಾಬ್ಲೆಟ್ಟಿಗೆ ಹೊಂದಿಸಲು ಪ್ರಯತ್ನಿಸಬಹುದು. ನಿಮ್ಮ ಬಳಿ ವೈರ್‌ಲೆಸ್ ಕೀಬೋರ್ಡ್-ಮೌಸ್ ಜೋಡಿ ಇದ್ದರೆ ಟ್ಯಾಬ್ಲೆಟ್ಟಿನೊಡನೆ ಮೌಸ್ ಕೂಡ ಕೆಲಸಮಾಡೀತು, ಪ್ರಯತ್ನಿಸಿ ನೋಡಿ!

ಮೇ ೧೧, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
badge