ಸೋಮವಾರ, ಏಪ್ರಿಲ್ 27, 2015

ಸೂಪರ್‌ಕಂಪ್ಯೂಟರ್ ಸಮಾಚಾರ

ಟಿ. ಜಿ. ಶ್ರೀನಿಧಿ

ಕೆಲವು ದಿನಗಳ ಹಿಂದೆ ಭಾರತ ಸರಕಾರ 'ರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಮಿಶನ್' ಎನ್ನುವ ಕಾರ್ಯಕ್ರಮವೊಂದನ್ನು ಘೋಷಿಸಿತು. ಒಟ್ಟು ನಾಲ್ಕೂವರೆ ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭಾರತದಾದ್ಯಂತ ಸೂಪರ್‌ಕಂಪ್ಯೂಟರುಗಳ ಜಾಲವನ್ನೇ ನಿರ್ಮಿಸುವುದು ಈ ಕಾರ್ಯಕ್ರಮದ ಉದ್ದೇಶ.

ಸರಿ, ಆದರೆ ಈ ಸೂಪರ್‌ಕಂಪ್ಯೂಟರ್ ಎಂದರೇನು?

ಪ್ರಪಂಚದಲ್ಲಿ ಅನೇಕ ಬಗೆಯ ಕಂಪ್ಯೂಟರುಗಳಿರುವುದು ನಮಗೆಲ್ಲ ಗೊತ್ತಿರುವ ವಿಷಯವೇ. ಅವುಗಳ ಪೈಕಿ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ  ಇರುವ ಕಂಪ್ಯೂಟರುಗಳಿಗೆ ಸೂಪರ್‌ಕಂಪ್ಯೂಟರ್‌ಗಳೆಂದು ಹೆಸರು.

ಬಹಳ ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ಕ್ಷೇತ್ರಗಳಲ್ಲಿ ಇವು ಬಳಕೆಯಾಗುತ್ತವೆ. ವಿಶ್ವದ ಹುಟ್ಟಿನ ಬಗ್ಗೆ ತಿಳಿದುಕೊಳ್ಳುವುದಿರಲಿ, ಭೂಕಂಪ-ಚಂಡಮಾರುತಗಳಂತಹ ವಿದ್ಯಮಾನಗಳ ವಿಶ್ಲೇಷಣೆಯಿರಲಿ - ಉನ್ನತ ಮಟ್ಟದ ವೈಜ್ಞಾನಿಕ ಸಂಶೋಧನೆಗಳಲ್ಲಿ ಸೂಪರ್‌ಕಂಪ್ಯೂಟರುಗಳ ಬಳಕೆ ಸಾಮಾನ್ಯ. ಅಣ್ವಸ್ತ್ರಗಳ ಪರೀಕ್ಷೆಯಲ್ಲೂ ಸೂಪರ್‌ಕಂಪ್ಯೂಟರುಗಳ ಸಹಾಯ ಪಡೆದುಕೊಳ್ಳುವ ಪ್ರಯತ್ನಗಳು ನಡೆದಿವೆ. ಹವಾಗುಣ ಬದಲಾವಣೆಯಂತಹ ಪ್ರಕ್ರಿಯೆಗಳ ಅಧ್ಯಯನದಲ್ಲಿ ಕೂಡ ಸೂಪರ್‌ಕಂಪ್ಯೂಟರ್ ಪಾತ್ರವನ್ನು ನೋಡುವುದು ಸಾಧ್ಯ.

ವೈದ್ಯಕೀಯ ರಂಗದಲ್ಲೂ ಸೂಪರ್‌ಕಂಪ್ಯೂಟರುಗಳ ಬಳಕೆ ಇದೆ - ಪ್ರೋಟೀನುಗಳ ರಚನೆಯ ಬಗ್ಗೆ ತಿಳಿದುಕೊಂಡು, ಅವುಗಳಲ್ಲಾಗುವ ಬದಲಾವಣೆಗೂ ಮಾನವರಲ್ಲಿ ಕಾಣಿಸಿಕೊಳ್ಳುವ ರೋಗಗಳಿಗೂ ನಡುವಿನ ಸಂಬಂಧವನ್ನು ಅಧ್ಯಯನ ಮಾಡುತ್ತಿರುವ 'ಬ್ಲೂ ಜೀನ್' ಸೂಪರ್‌ಕಂಪ್ಯೂಟರ್ ಕಳೆದ ದಶಕದಲ್ಲಿ ಸಾಕಷ್ಟು ಸುದ್ದಿಮಾಡಿತ್ತು. ಮಾನವ ದೇಹದಲ್ಲಿ ರಕ್ತಸಂಚಾರದ ವಿವರವಾದ ವಿಶ್ಲೇಷಣೆಗೂ ಸೂಪರ್‌ಕಂಪ್ಯೂಟರುಗಳನ್ನು ಬಳಸಲಾಗುತ್ತಿದೆ.

ಹಂದಿಜ್ವರದಂತಹ ರೋಗಗಳು ಕಾಣಿಸಿಕೊಂಡಾಗ ಅವುಗಳ ಸ್ವರೂಪ ಮತ್ತು ಹರಡುತ್ತಿರುವ ವಿಧಾನವನ್ನು ಅಧ್ಯಯನ ಮಾಡಿ ಕ್ಷಿಪ್ರವಾಗಿ ಪರಿಹಾರ ಕಂಡುಕೊಳ್ಳುವಲ್ಲೂ ಸೂಪರ್‌ಕಂಪ್ಯೂಟರುಗಳು ನೆರವಾಗಬಲ್ಲವು.
ಇದೇ ರೀತಿಯಲ್ಲಿ ಭಾರೀ ಪ್ರಮಾಣದ ಇನ್ನಿತರ ಮಾಹಿತಿಯನ್ನು ('ಬಿಗ್ ಡೇಟಾ') ವಿಶ್ಲೇಷಿಸುವಲ್ಲೂ ಸೂಪರ್‌ಕಂಪ್ಯೂಟರುಗಳನ್ನು ಬಳಸುವ ಪ್ರಯತ್ನ ಸಾಗಿದೆ.

ಸೂಪರ್‌ಕಂಪ್ಯೂಟರುಗಳ ಸಂಸ್ಕರಣಾ ಸಾಮರ್ಥ್ಯವನ್ನು ಅಳೆಯಲು 'ಫ್ಲೋಟಿಂಗ್ ಪಾಯಿಂಟ್ ಇನ್ಸ್‌ಟ್ರಕ್ಷನ್ಸ್ ಪರ್ ಸೆಕೆಂಡ್' (ಫ್ಲಾಪ್ಸ್) ಎಂಬ ಏಕಮಾನವನ್ನು ಬಳಸಲಾಗುತ್ತದೆ. ದಶಾಂಶವಿರುವ ದೊಡ್ಡದೊಡ್ಡ ಸಂಖ್ಯೆಗಳ ಮೇಲೆ ಯಾವುದೇ ಕಂಪ್ಯೂಟರ್ ಒಂದು ಸೆಕೆಂಡಿನಲ್ಲಿ ಎಷ್ಟು ಲೆಕ್ಕಾಚಾರಗಳನ್ನು ಮಾಡಬಲ್ಲದು ಎನ್ನುವುದನ್ನು ಈ ಮಾಪನ ಸೂಚಿಸುತ್ತದೆ. ನಮ್ಮ-ನಿಮ್ಮ ಮನೆಗಳಲ್ಲಿರುವ ಇಂದಿನ ಸಾಮಾನ್ಯ ಕಂಪ್ಯೂಟರುಗಳು ಪ್ರತಿ ಸೆಕೆಂಡಿಗೆ ಇಂತಹ ನೂರಾರು ಕೋಟಿ ಲೆಕ್ಕಾಚಾರಗಳನ್ನು ಮಾಡಬಲ್ಲವು.

ಯಾವುದೋ ಕಂಪ್ಯೂಟರ್ ಪ್ರತಿ ಸೆಕೆಂಡಿಗೆ ನೂರು ಕೋಟಿ ಲೆಕ್ಕಾಚಾರಗಳನ್ನು ಮಾಡಬಲ್ಲದು ಎಂದರೆ ಅದರ ಸಾಮರ್ಥ್ಯ ಒಂದು ಗಿಗಾಫ್ಲಾಪ್ಸ್ ಆಗುತ್ತದೆ. ಮೇಲ್ನೋಟಕ್ಕೆ ಇದು ಬಹಳ ದೊಡ್ಡ ಸಾಮರ್ಥ್ಯವೆಂದು ತೋರಿದರೂ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯದ ಮುಂದೆ ಇದು ತೃಣಸಮಾನ. ಏಕೆಂದರೆ ಸದ್ಯದ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯ ಪೆಟಾಫ್ಲಾಪ್ಸ್‌ಗಳಲ್ಲಿದೆ. ಪೆಟಾ ಎಂದರೆ ಒಂದರ ಮುಂದೆ ಹದಿನೈದು ಸೊನ್ನೆ ಜೋಡಿಸಿದಷ್ಟು ದೊಡ್ಡ ಸಂಖ್ಯೆ!

ಪ್ರಪಂಚದಲ್ಲಿರುವ ಸೂಪರ್‌ಕಂಪ್ಯೂಟರುಗಳನ್ನೆಲ್ಲ ಗಮನಿಸಿಕೊಂಡು ಸಂಸ್ಕರಣಾ ಸಾಮರ್ಥ್ಯಕ್ಕೆ ಅನುಗುಣವಾಗಿ ಅವುಗಳನ್ನು ಹೋಲಿಸಬೇಕಲ್ಲ, ಆ ಕೆಲಸವನ್ನು 'ಟಾಪ್೫೦೦' ಎಂಬ ಜಾಲತಾಣ ಮಾಡುತ್ತದೆ.

ಸಂಸ್ಕರಣಾ ಸಾಮರ್ಥ್ಯದ ಪ್ರಕಾರ ವಿಶ್ವದಲ್ಲಿರುವ ಐದುನೂರು ಅಗ್ರಗಣ್ಯ ಸೂಪರ್‌ಕಂಪ್ಯೂಟರುಗಳ ಪಟ್ಟಿ ಈ ತಾಣದಲ್ಲಿ ಆಗಿಂದಾಗ್ಗೆ ಪ್ರಕಟವಾಗುತ್ತದೆ. ನವೆಂಬರ್ ೨೦೧೪ರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ಚೀನಾ ದೇಶದ 'ಟಿಯಾನ್ಹೆ-೨' ಎಂಬ ಸೂಪರ್‌ಕಂಪ್ಯೂಟರ್; ಅದರ ಸಾಮರ್ಥ್ಯ ೩೩.೮೬ ಪೆಟಾಫ್ಲಾಪ್ಸ್. ಅಂದರೆ,  ಪ್ರತಿ ಸೆಕೆಂಡಿಗೆ ಅದು ೩೩೮೬೦ ಟ್ರಿಲಿಯನ್ ಲೆಕ್ಕಾಚಾರಗಳನ್ನು ಮಾಡಬಲ್ಲದು!

ಪೆಟಾಫ್ಲಾಪ್ಸ್ ಸಾಮರ್ಥ್ಯದ ಸೂಪರ್‌ಕಂಪ್ಯೂಟರುಗಳು ನಮ್ಮ ದೇಶದಲ್ಲಿ ಇನ್ನೂ ಇಲ್ಲ. ಆದರೆ ನವೆಂಬರ್ ೨೦೧೪ರ ಟಾಪ್ ೫೦೦ ಪಟ್ಟಿಯಲ್ಲಿ ಭಾರತದ ಒಂಬತ್ತು ಸೂಪರ್‌ಕಂಪ್ಯೂಟರುಗಳಿವೆ. 'ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟ್ರಾಪಿಕಲ್ ಮೀಟಿಯರಾಲಜಿ'ಯಲ್ಲಿರುವ ಸೂಪರ್‌ಕಂಪ್ಯೂಟರಿನದು ಈ ಪೈಕಿ ೭೧ನೇ ಸ್ಥಾನ; ಅದರ ಸಾಮರ್ಥ್ಯ ೭೧೯.೨ ಟೆರಾಫ್ಲಾಪ್ಸ್ (೦.೭೧ ಪೆಟಾಫ್ಲಾಪ್ಸ್).

ಸೂಪರ್‌ಕಂಪ್ಯೂಟರ್ ಸಂಸ್ಕರಣಾ ಸಾಮರ್ಥ್ಯ ಸದ್ಯದಲ್ಲೇ ಟೆರಾಫ್ಲಾಪ್ಸ್ - ಪೆಟಾಫ್ಲಾಪ್ಸ್‌ಗಳನ್ನೆಲ್ಲ ದಾಟಿ ಎಕ್ಸಾಫ್ಲಾಪ್ಸ್‌ಗಳನ್ನು ತಲುಪಲಿದೆ ಎಂಬ ಅಂದಾಜಿದೆ (ಒಂದು ಎಕ್ಸಾಫ್ಲಾಪ್ಸ್ ಎನ್ನುವುದು ೧೦೦೦ ಪೆಟಾಫ್ಲಾಪ್ಸ್‌ಗಳಿಗೆ ಸಮ). ಈಗ ಘೋಷಣೆಯಾಗಿರುವ ರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಮಿಶನ್ ಸಹಾಯದಿಂದ ಭಾರತೀಯ ಸೂಪರ್‌ಕಂಪ್ಯೂಟರುಗಳೂ ವಿಶ್ವದರ್ಜೆಯ ಸಾಮರ್ಥ್ಯ ಪಡೆದುಕೊಳ್ಳುವಂತಾಗಲಿ ಎನ್ನುವುದು ಭಾರತೀಯರೆಲ್ಲರ ಹಾರೈಕೆ; ಆ ಸೂಪರ್‌ಕಂಪ್ಯೂಟರುಗಳ ಪೂರ್ಣ ಸಾಮರ್ಥ್ಯದ ಬಳಕೆಯಾಗಲಿ - ಅದರ ಪ್ರಯೋಜನ ಎಲ್ಲರನ್ನೂ ತಲುಪಲಿ ಎನ್ನುವ ಆಶಯವೂ ನಮ್ಮದು!

ಏಪ್ರಿಲ್ ೨೭, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge