ಸೋಮವಾರ, ಮಾರ್ಚ್ 30, 2015

ಟ್ಯಾಬ್ಲೆಟ್‌ಗೊಂದು ಕಾಲ ಫ್ಯಾಬ್ಲೆಟ್‌ಗೊಂದು ಕಾಲ

ಟಿ. ಜಿ. ಶ್ರೀನಿಧಿ

ಹಿಂದಾನೊಂದು ಕಾಲದಲ್ಲಿ ಮೊಬೈಲ್ ಫೋನುಗಳ ಗಾತ್ರ ಬಹಳ ಸಣ್ಣದಾಗಿರುತ್ತಿತ್ತು. ಅದರಲ್ಲೂ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಕೀಪ್ಯಾಡ್ ಆಕ್ರಮಿಸಿಕೊಳ್ಳುತ್ತಿದ್ದುದರಿಂದ ಪರದೆಯ ಗಾತ್ರ ಒಂದೆರಡು ಇಂಚುಗಳಷ್ಟಿದ್ದರೆ ಅದೇ ಹೆಚ್ಚು. ಮೊಬೈಲ್ ಫೋನಿನ ಬಳಕೆ ದೂರವಾಣಿ ಕರೆ, ಎಸ್ಸೆಮ್ಮೆಸ್ ಹಾಗೂ ಸರಳವಾದ ಆಟಗಳನ್ನು ಆಡುವುದಕ್ಕಷ್ಟೇ ಸೀಮಿತವಾಗಿದ್ದ ಕಾಲದಲ್ಲಿ ಇದೊಂದು ಕೊರತೆ ಎಂದೇನೂ ಎನಿಸುತ್ತಿರಲಿಲ್ಲ.

ಈ ಪರಿಸ್ಥಿತಿ ಬದಲಾದದ್ದು ಸ್ಮಾರ್ಟ್ ಫೋನುಗಳು ಮಾರುಕಟ್ಟೆಗೆ ಬಂದಾಗ. ಕಂಪ್ಯೂಟರಿನಲ್ಲಿ ಮಾಡುವ ಹೆಚ್ಚೂಕಡಿಮೆ ಎಲ್ಲ ಕೆಲಸಗಳನ್ನೂ ಮೊಬೈಲಿನಲ್ಲಿ ಮಾಡಬಹುದು ಎಂದಾಗ ನಮಗೆ ಮೊಬೈಲಿನ ಪರದೆಯ ಗಾತ್ರ ದೊಡ್ಡದಿರಬೇಕು ಎನಿಸಲು ಶುರುವಾಗಿರಬೇಕು. ಆವರೆಗೂ ಒಂದೆರಡು ಇಂಚಿನಷ್ಟೇ ಇದ್ದ ಮೊಬೈಲ್ ಪರದೆ ಮೂರು-ನಾಲ್ಕು ಇಂಚಿಗೆ ಬಡ್ತಿ ಪಡೆದದ್ದು ಆಗಲೇ.

ಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದಂತೆ ಅವುಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸುವುದು ಶುರುವಾಯಿತು. ಇಮೇಲ್ ಕಳುಹಿಸಲು, ಮೆಸೇಜ್ ಮಾಡಲು, ವೀಡಿಯೋ ನೋಡಲು, ಜಾಲತಾಣಗಳನ್ನು ಬ್ರೌಸ್ ಮಾಡಲು, ಇ-ಪುಸ್ತಕ ಓದಲಿಕ್ಕೆಲ್ಲ ಮೊಬೈಲ್ ಫೋನ್ ಬಳಸಬಹುದು ಎನ್ನುವಾಗ ನಾಲ್ಕಲ್ಲ, ನಾಲ್ಕೂವರೆ-ಐದು ಇಂಚಿನ ಪರದೆಯೂ ಸಾಲದಾಯಿತು.

ಅಷ್ಟರಲ್ಲಿ ಪ್ರಚಲಿತಕ್ಕೆ ಬಂದಿದ್ದ ಟ್ಯಾಬ್ಲೆಟ್‌ಗಳು ಈ ಸಮಸ್ಯೆಯನ್ನು ತಕ್ಕಮಟ್ಟಿಗೆ ಬಗೆಹರಿಸಿದವು. ದೂರವಾಣಿ ಕರೆ ಮಾಡುವುದರ ಜೊತೆಗೆ ಇಮೇಲ್-ಮೆಸೇಜ್ ಇತ್ಯಾದಿ ಕಳುಹಿಸಲಿಕ್ಕೆ, ಚೂರುಪಾರು ಬ್ರೌಸಿಂಗ್ ಮಾಡಲಿಕ್ಕಷ್ಟೆ ಮೊಬೈಲ್ ಬಳಸಿ; ವೀಡಿಯೋ ನೋಡುವುದಕ್ಕೆ ಪುಸ್ತಕ ಓದುವುದಕ್ಕೆ ಆಟ ಆಡುವುದಕ್ಕೆಲ್ಲ ಟ್ಯಾಬ್ಲೆಟ್ ಬಳಸಿದರಾಯಿತು ಎನ್ನುವ ಅಭಿಪ್ರಾಯವೂ ಮೂಡಿತು. ನಾಲ್ಕಿಂಚಿನ ಫೋನಿನೊಡನೆ ಹೋಲಿಸಿದಾಗ ಟ್ಯಾಬ್ಲೆಟ್ಟಿನ ಏಳು-ಎಂಟು ಇಂಚಿನ ಪರದೆ ಬಹಳ ಅನುಕೂಲಕರ ಎನಿಸಿದ್ದರಲ್ಲಿ ತಪ್ಪೂ ಇಲ್ಲ ಬಿಡಿ.

ಆದರೆ ಇಲ್ಲೊಂದು ಸಮಸ್ಯೆಯಿತ್ತು.
ಇಂತಿಷ್ಟು ಕೆಲಸಕ್ಕೆ ಮೊಬೈಲು - ಇನ್ನಷ್ಟಕ್ಕೆ ಟ್ಯಾಬ್ಲೆಟ್ಟು ಎನ್ನುವ ತರ್ಕ ಕೇಳಲು ಚೆನ್ನಾಗಿದ್ದರೂ ಮೊಬೈಲ್ ಕೊಂಡೊಯ್ದಷ್ಟು ಸುಲಭವಾಗಿ ಟ್ಯಾಬ್ಲೆಟ್ಟನ್ನು ಎಲ್ಲೆಡೆಗೂ ಒಯ್ಯುವುದು ಸಾಧ್ಯವಾಗುವುದಿಲ್ಲ. ಆಪ್‌ಗಳು ಹಾಗೂ ಇನ್ನಿತರ ಅಗತ್ಯ ಮಾಹಿತಿ ಮೊಬೈಲಿನಲ್ಲಿ ಹಾಗೂ ಟ್ಯಾಬ್ಲೆಟ್ಟಿನಲ್ಲಿ ಎರಡೂಕಡೆ ಲಭ್ಯವಿರುವಂತೆ ನೋಡಿಕೊಳ್ಳುವುದೂ ಅಷ್ಟೇನೂ ಸುಲಭದ ಕೆಲಸವಲ್ಲ. ಆಪ್ ವಿಷಯ ಹಾಗಿರಲಿ, ಎರಡೂ ಸಾಧನಗಳು ಚಾರ್ಜ್ ಆಗಿರುವಂತೆ ನೋಡಿಕೊಳ್ಳುವುದೂ ಕಷ್ಟವೇ!

ಮೊಬೈಲ್ ಫೋನಿನ ಪರದೆ ಇನ್ನಷ್ಟು ದೊಡ್ಡದಾಗಿರಬೇಕು ಎನ್ನುವ ಯೋಚನೆಗೆ ಇವೆಲ್ಲ ಅಂಶಗಳೂ ಒಟ್ಟಾರೆಯಾಗಿ ನೀರೆರೆದವು. ಅದರ ಪರಿಣಾಮವಾಗಿ ದೊಡ್ಡ ಪರದೆಯ ಫೋನುಗಳು ಮಾರುಕಟ್ಟೆಗೆ ಬಂದವು.


ಐದಿಂಚು ಪರದೆಯ ಫೋನು ಹಾಗೂ ಏಳು ಇಂಚಿನ ಟ್ಯಾಬ್ಲೆಟ್ ನಡುವಿನ ಗಾತ್ರದ ಈ ಹೊಸ ಸಾಧನಗಳು ಮೂಲತಃ ಮೊಬೈಲ್ ಫೋನುಗಳೇ; ಆದರೆ ಪರದೆಯ ಗಾತ್ರ ಸಾಮಾನ್ಯಕ್ಕಿಂತ ದೊಡ್ಡದು. ಹಾಗಾಗಿ ಇವುಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕಲ್ಲ, ಇದಕ್ಕಾಗಿ ಸೃಷ್ಟಿಯಾದ ಹೆಸರೇ 'ಫ್ಯಾಬ್ಲೆಟ್' - ಫೋನ್ ಹಾಗೂ ಟ್ಯಾಬ್ಲೆಟ್ ಎನ್ನುವ ಹೆಸರುಗಳನ್ನು ಸೇರಿಸಿ ರೂಪಿಸಲಾದ ಹೊಸ ನಾಮಧೇಯ!

ಫೋನು-ಟ್ಯಾಬ್ಲೆಟ್ಟುಗಳನ್ನು ಪ್ರತ್ಯೇಕವಾಗಿ ನಿಭಾಯಿಸಬೇಕಾದ ಅನಿವಾರ್ಯತೆಯನ್ನು ಹೋಗಲಾಡಿಸಿದ್ದು ಫ್ಯಾಬ್ಲೆಟ್‌ಗಳ ಹೆಗ್ಗಳಿಕೆ. ಸಣ್ಣ ಫೋನಿನಲ್ಲಿ ಸರಿಯಾಗಿ ಕಾಣುವುದಿಲ್ಲ, ಟಚ್‌ಸ್ಕ್ರೀನ್ ಬಳಸುವುದು ಇನ್ನೂ ಕಷ್ಟ ಎಂದೆಲ್ಲ ಪರದಾಡುವವರಿಗೂ ಇದೊಂದು ಪರ್ಯಾಯ ಆಯ್ಕೆ. ವೀಡಿಯೋ ನೋಡುವ - ಆಟ ಆಡುವ ಅನುಭವವೂ ಇಲ್ಲಿ ಉತ್ತಮವಾಗಿರುತ್ತದೆ.ಕಳೆದ ಕೆಲ ವರ್ಷಗಳಲ್ಲಿ ಫ್ಯಾಬ್ಲೆಟ್ಟುಗಳು ಜನಪ್ರಿಯವಾಗಿರುವ ಪರಿ ಆಶ್ಚರ್ಯಹುಟ್ಟಿಸುವಂತಹದು. ೨೦೧೩ನ್ನು ರಾಯ್ಟರ್ಸ್ ಸಂಸ್ಥೆ 'ಫ್ಯಾಬ್ಲೆಟ್ಟುಗಳ ವರ್ಷ' ಎಂದೇ ಕರೆದಿತ್ತು. ಕಳೆದ ವರ್ಷ (೨೦೧೪) ಫ್ಯಾಬ್ಲೆಟ್ ಭರಾಟೆ ಇನ್ನೂ ಜೋರಾಗಿತ್ತು: ಆಗ ಲ್ಯಾಪ್‌ಟಾಪ್ ಹಾಗೂ ಡೆಸ್ಕ್‌ಟಾಪ್‌ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ದಾಖಲೆ ಫ್ಯಾಬ್ಲೆಟ್ಟುಗಳದು. ಕೆಲ ಅಂದಾಜುಗಳ ಪ್ರಕಾರ ಮುಂದಿನ ಎರಡು ವರ್ಷಗಳಲ್ಲಿ ಸಾಮಾನ್ಯ ಗಾತ್ರದ ಮೊಬೈಲುಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಫ್ಯಾಬ್ಲೆಟ್ಟುಗಳೇ ಮಾರಾಟವಾಗುವ ನಿರೀಕ್ಷೆಯಿದೆಯಂತೆ.

ಇಷ್ಟೆಲ್ಲ ಜನಪ್ರಿಯತೆ ಗಳಿಸಿದ್ದರೂ ಫ್ಯಾಬ್ಲೆಟ್‌ಗಳ ಬಗ್ಗೆ ದೂರುಗಳೇನು ಕಡಿಮೆಯಿಲ್ಲ. "ಇಷ್ಟು ದೊಡ್ಡ ಫೋನನ್ನು ಗೋಡೆಗೆ ನೇತುಹಾಕಿದರೆ ಬೇರೆ ಟೀವಿಯೇ ಬೇಡ!", "ಇವನ್ನು ಇಟ್ಟುಕೊಳ್ಳಲು ಪ್ಯಾಂಟಿನ ಜೇಬಿನಲ್ಲಿ ಜಾಗವೆಲ್ಲಿದೆ?" ಎನ್ನುವಂತಹ ತಮಾಷೆಗಳಿಗೂ ಫ್ಯಾಬ್ಲೆಟ್ಟುಗಳು ಗುರಿಯಾಗಿರುವುದುಂಟು (ಬಟ್ಟೆ ತಯಾರಿಸುವ ಒಂದು ಸಂಸ್ಥೆ ಫ್ಯಾಬ್ಲೆಟ್ ಬಳಕೆದಾರರಿಗೆಂದು ಪ್ಯಾಂಟ್ ಜೇಬುಗಳ ವಿನ್ಯಾಸವನ್ನು ನಿಜಕ್ಕೂ ಬದಲಿಸಿದ್ದು ಇನ್ನೂ ತಮಾಷೆಯ ವಿಷಯ ಬಿಡಿ!).

ಫ್ಯಾಬ್ಲೆಟ್ ಬೇಡ ಎನ್ನುವವರು ಫೋನು-ಟ್ಯಾಬ್ಲೆಟ್ಟುಗಳನ್ನು ಪ್ರತ್ಯೇಕವಾಗಿಯೇ ಇಟ್ಟುಕೊಂಡು ಸುಲಭವಾಗಿ ನಿಭಾಯಿಸುವುದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿವೆ. ಅಸುಸ್ 'ಪ್ಯಾಡ್‌ಫೋನ್' ಇಂತಹ ಪ್ರಯತ್ನಗಳಿಗೊಂದು ಉದಾಹರಣೆ. ಬೇಕಾದ ಕಡೆಗೆಲ್ಲ ಮೊಬೈಲ್ ಫೋನನ್ನೇ ಕೊಂಡೊಯ್ದು, ದೊಡ್ಡ ಪರದೆಯ ಅಗತ್ಯವಿದ್ದಾಗ ಅದನ್ನೇ ಟ್ಯಾಬ್ಲೆಟ್ ಪರದೆಗೆ ಜೋಡಿಸಿಕೊಂಡು ಬಳಸುವ ಅನುಕೂಲ ಮಾಡಿಕೊಡುವುದು ಈ ಸಾಧನದ ವೈಶಿಷ್ಟ್ಯ.

ಇಲ್ಲಿ ಮೊಬೈಲ್ ಫೋನಿನ ಜೊತೆಗೆ ದೊಡ್ಡ ಪರದೆಯ ಇನ್ನೊಂದು ಸಾಧನವನ್ನು ನೀಡಲಾಗಿರುತ್ತದೆ. ಅದರ ಹಿಂಭಾಗದಲ್ಲಿರುವ ಸ್ಲಾಟ್‌ನಲ್ಲಿ ಮೊಬೈಲ್ ಸೇರಿಸಿದ ತಕ್ಷಣ ಅದು ಟ್ಯಾಬ್ಲೆಟ್ ಆಗಿ ಬದಲಾಗುತ್ತದೆ, ಅಂದರೆ ಮೊಬೈಲನ್ನು ದೊಡ್ಡ ಪರದೆಯ ಜೊತೆಗೆ ಬಳಸುವುದು ಸಾಧ್ಯವಾಗುತ್ತದೆ!ಮಾರ್ಚ್ ೩೦, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge