ಬುಧವಾರ, ಮಾರ್ಚ್ 4, 2015

ಮೊಬೈಲ್ ರೀಚಾರ್ಜ್ ಹೊಸ ಅವತಾರ

ಟಿ. ಜಿ. ಶ್ರೀನಿಧಿ

ದೂರವಾಣಿ ಕರೆಯಿಂದ ಪ್ರಾರಂಭಿಸಿ ವಾಟ್ಸ್‌ಆಪ್‌ವರೆಗೆ, ಇಮೇಲ್ ಬಳಸುವುದರಿಂದ ಫೋಟೋ ತೆಗೆಯುವವರೆಗೆ, ಆನ್‌ಲೈನ್ ಶಾಪಿಂಗಿನಿಂದ ಶೇರು ವ್ಯವಹಾರದವರೆಗೆ ಇಂದು ಪ್ರತಿಯೊಂದಕ್ಕೂ ನಮಗೆ ಮೊಬೈಲ್ ಬೇಕು. ಒಂದಷ್ಟು ಸಮಯ ಮೊಬೈಲ್ ಫೋನ್ ಬಳಸದೆ ಇರಲು ಸಾಧ್ಯವೇ ಎಂದು ಕೇಳಿದರೆ ಬಹಳಷ್ಟು ಜನ ಖಂಡಿತಾ ಇಲ್ಲ! ಎಂದೇ ಹೇಳುತ್ತಾರೇನೋ.

ಮೊಬೈಲ್ ಮಾಯೆ ನಮ್ಮನ್ನು ಆವರಿಸಿಕೊಂಡಿರುವ ಪರಿಯೇ ಅಂಥದ್ದು. ಊಟ ಬಟ್ಟೆ ಹೊಂದಿಸಿಕೊಳ್ಳುವ ಜೊತೆಗೆ ಮೊಬೈಲ್ ರೀಚಾರ್ಜ್ ಮಾಡಿಸುವುದೂ ಇಂದಿನ ಬದುಕಿನ ಅಗತ್ಯಗಳಲ್ಲೊಂದು.

ಹೌದು ಮತ್ತೆ, ಎಷ್ಟು ಸಾವಿರದ ಹ್ಯಾಂಡ್‌ಸೆಟ್ ಆದರೇನಂತೆ - ಸರಿಯಾದ ಸಮಯಕ್ಕೆ ರೀಚಾರ್ಜ್ ಮಾಡಿಸಲಿಲ್ಲ ಅಥವಾ ಬಿಲ್ ಪಾವತಿಸಲಿಲ್ಲ ಎಂದರೆ ಅದು ಬದುಕಿದ್ದೂ ಸತ್ತಂತೆಯೇ ಲೆಕ್ಕ. ಮೊಬೈಲ್ ಕೆಲಸಮಾಡುತ್ತಿಲ್ಲ ಎಂದರೆ ಫೋನ್ ಮಾಡುವುದು ಹೇಗೆ, ಮೆಸೇಜ್ ಕತೆಯೇನು, ಫೇಸ್‌ಬುಕ್ಕಿನ ವೀಡಿಯೋಗಳನ್ನು ನೋಡುವುದು-ಹಂಚಿಕೊಳ್ಳುವುದಾದರೂ ಹೇಗೆ!?

ಕೆಲ ವರ್ಷಗಳ ಹಿಂದೆ ಮೊಬೈಲ್ ರೀಚಾರ್ಜ್ ಮಾಡಿಸಬೇಕೆಂದರೆ ಅಂಗಡಿಗಳನ್ನು ಹುಡುಕಿಕೊಂಡು ಅಲೆಯಬೇಕಿತ್ತು. ಆ ಕಂಪನಿಯ ಕಾರ್ಡು ಸ್ಟಾಕಿಲ್ಲ ನಾಳೆ ಬನ್ನಿ ಎನ್ನುವಂತಹ ಮಾತನ್ನೂ ಕೇಳುವ ಸಾಧ್ಯತೆಯಿತ್ತು. ಪೋಸ್ಟ್‌ಪೇಡ್ ಬಿಲ್ ಪಾವತಿಸಲು ಸರದಿಯ ಸಾಲಿನಲ್ಲಿ ನಿಲ್ಲುತ್ತಿದ್ದದ್ದೂ ಉಂಟು.

ಈ ಪರಿಸ್ಥಿತಿ ನಿಧಾನಕ್ಕೆ ಬದಲಾದಾದಂತೆ ಮೊಬೈಲ್ ರೀಚಾರ್ಜ್ ಎನ್ನುವುದು ಒಂದು ಕಾಲಕ್ಕೆ ಅಂಗಡಿಯಲ್ಲಿ ಸಿಗುತ್ತಿದ್ದ ಭೌತಿಕ ವಸ್ತುವಾಗಿತ್ತು ಎನ್ನುವುದೇ ಮರೆತುಹೋಗುತ್ತಿದೆ. ಹಳೆಯ ಕಡತಗಳಲ್ಲಿ ಸೇರಿಕೊಂಡಿದ್ದು ಯಾವಾಗಲೋ ಕೈಗೆ ಸಿಗುವ ಬಣ್ಣಬಣ್ಣದ ರೀಚಾರ್ಜ್ ಕಾರ್ಡುಗಳು ಮ್ಯೂಸಿಯಂ ಪೀಸುಗಳಂತೆ ಕಾಣಲು ಶುರುವಾಗಿವೆ.

ಪ್ರೀಪೇಡ್ ಖಾತೆಯಲ್ಲಿನ ಹಣ ಕಡಿಮೆಯಾಗಿದೆ ಎಂದರೆ ಸಾಕು, ಮೊಬೈಲ್ ಸಂಸ್ಥೆಯ ಜಾಲತಾಣದಿಂದ ಪ್ರಾರಂಭಿಸಿ ಬ್ಯಾಂಕಿನ ಎಟಿಎಂವರೆಗೆ ಎಲ್ಲಿ ಯಾವಾಗ ಬೇಕಿದ್ದರೂ ರೀಚಾರ್ಜ್ ಮಾಡಿಸುವುದು ಇದೀಗ ಸಾಧ್ಯ. ಅಂಗಡಿಗಳಲ್ಲೂ ಅಷ್ಟೆ, ಮುದ್ರಿತ ರೀಚಾರ್ಜ್ ಕಾರ್ಡುಗಳ ಜಾಗವನ್ನು ಮಾಲೀಕನ ಕೈಯಲ್ಲಿನ ಮೊಬೈಲು ಆಕ್ರಮಿಸಿಕೊಂಡಾಗಿದೆ; ಮೊಬೈಲ್ ಸಂಖ್ಯೆ ಮತ್ತು ರೀಚಾರ್ಜ್ ಮೊತ್ತ ದಾಖಲಿಸಿದ ಕ್ಷಣದಲ್ಲೇ ನಿಮ್ಮ ಮೊಬೈಲಿಗೆ ಮರುಜೀವ!

ಮೊಬೈಲ್ ಮೇಲೆ ಎಷ್ಟೆಲ್ಲ ಅವಲಂಬಿತರಾಗಿರುವ ನಾವು ಅದಕ್ಕಾಗಿ ಹಣ ಪಾವತಿಸಲೂ ಮೊಬೈಲನ್ನೇ ಬಳಸದಿದ್ದರೆ ಅವಮಾನವೇ ಸರಿ. ಹಾಗಂದಮೇಲೆ ಇನ್ನೇನು, ಕುಳಿತ ಜಾಗದಲ್ಲೇ ರೀಚಾರ್ಜ್ ಹಾಗೂ ಪೋಸ್ಟ್‌ಪೇಡ್ ಬಿಲ್ ಪಾವತಿ ಮಾಡಲು ನೆರವಾಗುವ ಅನೇಕ ಆಪ್‌ಗಳು ನಮ್ಮ ಮುಂದೆ ಬಂದಿವೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್‌ಬ್ಯಾಂಕಿಂಗುಗಳ ಜೊತೆಗೆ ವ್ಯಾಲೆಟ್‌ಗಳನ್ನು ಬಳಸಿಯೂ ರೀಚಾರ್ಜ್ ಮಾಡುವುದು ಸಾಧ್ಯವಾಗಿದೆ.

ಕಂಪ್ಯೂಟರಿನಲ್ಲಿ ಸಾಧ್ಯವಾಗುವ ಎಲ್ಲ ಕೆಲಸಗಳನ್ನು ಮೊಬೈಲಿನಲ್ಲೂ ಮಾಡಬಹುದು. ಹಾಗಾಗಿ ರೀಚಾರ್ಜನ್ನೋ ಬಿಲ್ ಪಾವತಿಯನ್ನೋ ಮೊಬೈಲ್ ಬಳಸಿಯೇ ಮಾಡುವುದು ವಿಶೇಷ ಸಂಗತಿಯೇನಲ್ಲ. ಆದರೆ ಈ ವ್ಯವಹಾರದ ಸುತ್ತ ಹೊಸದೊಂದು ಪರಿಕಲ್ಪನೆ ರೂಪುಗೊಂಡಿದೆಯಲ್ಲ, ಅದು ವಿಶೇಷ!

ಗ್ರಾಹಕ ಕೊಟ್ಟ ಹಣಕ್ಕೆ ಪ್ರತಿಯಾಗಿ ಮೊಬೈಲ್ ರೀಚಾರ್ಜನ್ನಷ್ಟೆ ಮಾಡಿ ಸುಮ್ಮನಾಗುವ ಬದಲು ಹೆಚ್ಚುವರಿ ಸೌಲಭ್ಯಗಳನ್ನೂ ನೀಡುವುದು ಈ ಹೊಸ ಪರಿಕಲ್ಪನೆಯ ಸಾರಾಂಶ. ಅಂದರೆ, ನಿಮ್ಮ ಪ್ರೀಪೇಡ್ ಖಾತೆಗೆ ಸೇರಿಸಲೆಂದು ಇಂತಹ ತಾಣಗಳಿಗೆ ನೂರು ರೂಪಾಯಿ ಕೊಟ್ಟರೆ ಅವು ಅಷ್ಟು ಮೊತ್ತದ ರೀಚಾರ್ಜ್ ಮಾಡುವ ಜೊತೆಗೆ ಉಚಿತ ಕೊಡುಗೆಗಳನ್ನೂ ನೀಡುತ್ತವೆ.

ಜಾಲತಾಣ ಹಾಗೂ ಮೊಬೈಲ್ ಆಪ್ ಮೂಲಕ ಇಂತಹ ಸೇವೆ ಒದಗಿಸುವ ಸಂಸ್ಥೆಗಳಿಗೆ ಉದಾಹರಣೆಯಾಗಿ 'ಫ್ರೀಚಾರ್ಜ್' ಹಾಗೂ 'ಪೇಟಿಎಂ'ಗಳನ್ನು ಹೆಸರಿಸಬಹುದು. ಮೊಬೈಲ್ ರೀಚಾರ್ಜ್, ಪೋಸ್ಟ್‌ಪೇಡ್ ಬಿಲ್ ಪಾವತಿ ಅಥವಾ ಡಿಟಿಎಚ್ ಖಾತೆಗೆ ಹಣ ತುಂಬಿಸಲೆಂದು ಇಲ್ಲಿಗೆ ಬರುವ ಗ್ರಾಹಕರು ವಿವಿಧ ಸಂಸ್ಥೆಗಳ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡುವ ಕೂಪನ್ನುಗಳನ್ನು ಪಡೆಯಬಹುದು. ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ, ಪಿಜ್ಜಾ-ಬರ್ಗರ್ ಅಂಗಡಿಗಳಲ್ಲಿ, ಕಾಫಿ ಶಾಪ್‌ಗಳಲ್ಲಿ ಬಳಸಬಹುದಾದ ಕೂಪನ್ನುಗಳನ್ನು ಇಲ್ಲಿ ಆಯ್ದುಕೊಳ್ಳುವುದು ಸಾಧ್ಯ. ನಾವು ಮಾಡಿಸುವ ರೀಚಾರ್ಜ್‌ಗೆ ಪ್ರತಿಯಾಗಿ ಹಲವು ಕೂಪನ್ನುಗಳು ಉಚಿತವಾಗಿಯೇ ಸಿಕ್ಕರೆ ಇನ್ನು ಕೆಲವು ಕೂಪನ್ನುಗಳಿಗೆ ನಿರ್ದಿಷ್ಟ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

ಈಗಾಗಲೇ ಹೇಳಿದಂತೆ ಕೆಲವು ತಾಣಗಳಲ್ಲಿ 'ವ್ಯಾಲೆಟ್' ಸೌಲಭ್ಯವೂ ಇರುತ್ತದೆ. ಅಂದರೆ, ನಮ್ಮ ಖಾತೆಗೆ ಮುಂಚಿತವಾಗಿಯೇ ಹಣವನ್ನು ಹಾಕಿಟ್ಟು ಬೇಕಾದಾಗ ಬೇಕಾದಷ್ಟು ಮೊತ್ತದ ರೀಚಾರ್ಜನ್ನೋ ಬಿಲ್ ಪಾವತಿಯನ್ನೋ ಮಾಡುವುದು ಸಾಧ್ಯ. ಕೆಲ ಸಂದರ್ಭಗಳಲ್ಲಿ ನಾವು ಪಾವತಿಸುವ ಹಣದ ಒಂದು ಭಾಗವನ್ನು 'ಕ್ಯಾಶ್‌ಬ್ಯಾಕ್' ರೂಪದಲ್ಲಿ ನಮ್ಮ ಬಳಕೆಗೆಂದು ಮರಳಿಸುವ ಅಭ್ಯಾಸವೂ ಇದೆ. ಈ ಮೊತ್ತವನ್ನು ಮುಂದಿನ ರೀಚಾರ್ಜ್‌ಗಾಗಿ ಬಳಸಬಹುದು.

ಮೊಬೈಲ್-ಡಿಟಿಎಚ್ ರೀಚಾರ್ಜ್ ಆಗಲಿ, ಪ್ರೀಪೇಡ್ ಬಿಲ್ ಪಾವತಿಯಾಗಲಿ ಹೇಗಿದ್ದರೂ ನಾವು ಮಾಡುವ ಕೆಲಸಗಳೇ. ಈ ಪ್ರಕ್ರಿಯೆಯಲ್ಲಿ ನಮಗೆ ಹೆಚ್ಚಿನದೇನೋ ಸಿಗುತ್ತಿದೆ ಎಂದರೆ ಗ್ರಾಹಕರಿಗೆ ಖುಷಿ. ಅದೇ ಸಮಯದಲ್ಲಿ ತಮ್ಮ ರಿಯಾಯಿತಿ ಕೂಪನ್ನುಗಳ ಮೂಲಕ ಹೆಚ್ಚು ಗ್ರಾಹಕರನ್ನು ತಲುಪುವ ಹಾಗೂ ವಹಿವಾಟನ್ನು ವಿಸ್ತರಿಸಿಕೊಳ್ಳುವ ಅವಕಾಶ ಜಾಹೀರಾತು ನೀಡುವ ಸಂಸ್ಥೆಗಳಿಗೂ ಸಿಗುತ್ತದೆ. ಇನ್ನು ಈ ಸೌಲಭ್ಯ ಒದಗಿಸಿಕೊಟ್ಟ ಸಂಸ್ಥೆಗೆ ರೀಚಾರ್ಜ್ ಇತ್ಯಾದಿಗಳ ಮೂಲಕ ದೊರಕುವ ಕಮೀಶನ್ ಹಾಗೂ ಜಾಹೀರಾತು ಶುಲ್ಕ ದೊರಕುತ್ತದೆ. ಅಲ್ಲಿಗೆ ಎಲ್ಲರಿಗೂ ಸಂತೋಷ!

ಮೊಬೈಲ್ ರೀಚಾರ್ಜ್ ಮಾಡಿಸಿದ್ದಕ್ಕೆ ಉಚಿತ ಕೊಡುಗೆಗಳನ್ನು ನೀಡುವುದೇನೋ ಸರಿ. ಇದರ ಬದಲು ಮೊಬೈಲ್ ರೀಚಾರ್ಜನ್ನೇ ಉಚಿತವಾಗಿ ಮಾಡಿಕೊಟ್ಟರೆ ಹೇಗೆ?

ಇದನ್ನು ಸಾಧ್ಯವಾಗಿಸಿರುವ ಸಂಸ್ಥೆಗಳೂ ಇವೆ. ಅವುಗಳ ಜಾಲತಾಣ ಇಲ್ಲವೇ ಮೊಬೈಲ್ ಆಪ್ ಬಳಸಿ ಪೂರ್ವನಿರ್ಧಾರಿತ ಚಟುವಟಿಕೆಗಳನ್ನು ಕೈಗೊಂಡರೆ ಆ ಚಟುವಟಿಕೆಗೆ ತಕ್ಕಷ್ಟು ಪ್ರತಿಫಲ ಬಳಕೆದಾರರ ಖಾತೆಗೆ ಜಮೆಯಾಗುತ್ತದೆ. ಆ ತಾಣದಲ್ಲಿರುವ ಕೊಂಡಿಯನ್ನು ಬಳಸಿ ಇತರ ತಾಣಗಳಲ್ಲಿ ಶಾಪಿಂಗ್ ಮಾಡುವುದು, ಬಳಕೆದಾರರಾಗಿ ನೋಂದಾಯಿಸಿಕೊಳ್ಳುವುದು, ಪ್ರವಾಸೋದ್ಯಮ ತಾಣಕ್ಕೆಂದು ಹೋಟಲ್ ವಿಮರ್ಶೆ ಬರೆಯುವುದು, ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವುದು, ವಿಮೆ ಖರೀದಿಸುವುದು ಮುಂತಾದ ಹಲವು ಚಟುವಟಿಕೆಗಳು ನಮಗೆ ಉಚಿತ ರೀಚಾರ್ಜ್ ಸಂಪಾದಿಸಿಕೊಡಬಲ್ಲವು. ತಮ್ಮ ಬಳಕೆದಾರರಿಗೆ ಈ ಬಗೆಯ ಸೌಲಭ್ಯ ಒದಗಿಸುವ ಸೇವೆಗಳಿಗೆ ಫ್ರೀಚಾರ್ಜ್ ಜಾಲತಾಣದಲ್ಲಿರುವ 'ಡಿಲೈಟ್ಸ್' ವಿಭಾಗ ಒಂದು ಉದಾಹರಣೆ.

ಮೊಬೈಲ್ ಬಳಕೆದಾರರು ಹೇಗೂ ತಮ್ಮ ಮೊಬೈಲಿಗೆ ಹೊಸಹೊಸ ಆಪ್‌ಗಳನ್ನು ಬರಮಾಡಿಕೊಳ್ಳುತ್ತಿರುತ್ತಾರಲ್ಲ, ಹಾಗೆ ಆಪ್ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೂ ಪ್ರತಿಫಲ ನೀಡುವ ವ್ಯವಸ್ಥೆಗಳಿವೆ. 'ಫ್ರೀಪೈಸಾ' ಎನ್ನುವುದು ಇದಕ್ಕೊಂದು ಉದಾಹರಣೆ.

ಆಂಡ್ರಾಯ್ಡ್ ಮೊಬೈಲುಗಳಿಗಾಗಿ ಲಭ್ಯವಿರುವ ಫ್ರೀಪೈಸಾ ಆಪ್ ಬಳಕೆದಾರರಿಗೆ ಅದರಲ್ಲಿ ಒಂದಷ್ಟು ಆಪ್‌ಗಳ ಪಟ್ಟಿ ಕಾಣಸಿಗುತ್ತದೆ. ಆ ಪಟ್ಟಿಯಲ್ಲಿ ನಮಗಿಷ್ಟವಾದ ಆಪ್ ಆಯ್ದುಕೊಂಡರೆ ಪ್ಲೇ ಸ್ಟೋರಿನಲ್ಲಿ ಆ ಆಪ್‌ನ ಪುಟ ತೆರೆದುಕೊಳ್ಳುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಉಪಯೋಗಿಸುತ್ತಿದ್ದಂತೆ ನಮ್ಮ ಫ್ರೀಪೈಸಾ ಖಾತೆಗೆ ಕೆಲ ರೂಪಾಯಿಗಳು ಸೇರಿಕೊಳ್ಳುತ್ತವೆ! ಹಾಗೆ ಸೇರುವ ಮೊತ್ತ ಹತ್ತು ರೂಪಾಯಿ ದಾಟುತ್ತಿದ್ದಂತೆ ಅದನ್ನು ಬಳಸಿ ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಈ ವ್ಯವಸ್ಥೆಯ ಮೂಲಕ ತಮ್ಮ ಆಪ್‌ಗಳ ಪ್ರಚಾರ ಬಯಸುವವರು 'ಫ್ರೀಪೈಸಾ'ಗೆ ನಿರ್ದಿಷ್ಟ ಜಾಹೀರಾತು ಶುಲ್ಕ ಪಾವತಿಸಬೇಕು. ಆ ಶುಲ್ಕದ ಒಂದು ಭಾಗವನ್ನೇ ಬಳಕೆದಾರರಿಗೆ ಪ್ರತಿಫಲವಾಗಿ ನೀಡಲಾಗುತ್ತದೆ.

ಹೀಗೆ ಶುರುವಾಗಿರುವ ಈ ಹೊಸ ವ್ಯವಸ್ಥೆಗಳು ಮುಂದಿನ ದಿನಗಳಲ್ಲಿ ಜಾಹೀರಾತು ಜಗತ್ತಿನ ಸ್ವರೂಪವನ್ನೇ ಬದಲಿಸಲಿವೆ ಎನ್ನುವುದು ತಜ್ಞರ ಅಭಿಪ್ರಾಯ. ಇಂತಹ ವ್ಯವಸ್ಥೆಗಳಲ್ಲಿ ಗ್ರಾಹಕನ ಕುರಿತು ಹೆಚ್ಚಿನ ವಿವರಗಳನ್ನು (ಸ್ಥಳ, ವಯಸ್ಸು, ಆದಾಯ, ಆಸಕ್ತಿಗಳು ಇತ್ಯಾದಿ) ಪಡೆದುಕೊಳ್ಳುವ ಅವಕಾಶವೂ ಇರುವುದರಿಂದ ಜಾಹೀರಾತುದಾರರು ತಮ್ಮ ಅಭಿಯಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸುವುದು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ. ತಮ್ಮ ಉತ್ಪನ್ನಗಳ ಬಗ್ಗೆ ಯಾರಿಗೆ ಆಸಕ್ತಿ ಇರಬಹುದು ಎಂದು ಅಂದಾಜಿಸಿ ಜಾಹೀರಾತುಗಳು ಹೆಚ್ಚಾಗಿ ಅಂತಹ ಗ್ರಾಹಕರನ್ನೇ ತಲುಪುವಂತೆ ಮಾಡುವುದು ('ಟಾರ್ಗೆಟೆಡ್ ಅಡ್ವರ್‌ಟೈಸಿಂಗ್') ಇದರಿಂದ ಸಾಧ್ಯವಾಗಲಿದೆಯಂತೆ.

ಅಂತೂ ಮೊಬೈಲ್ ಇದೀಗ ಕೇವಲ ಕರೆಮಾಡಲಿಕ್ಕೋ ಸಂದೇಶ ರವಾನಿಸಲಿಕ್ಕೋ ಬಳಕೆಯಾಗುವ ಸಾಧನವಾಗಷ್ಟೇ ಉಳಿದಿಲ್ಲ. ಹೊರಗಿನ ಜಗತ್ತಿನೊಡನೆ ವ್ಯವಹರಿಸುವ ಹೊಸಹೊಸ ಮಾರ್ಗಗಳನ್ನು ಪರಿಚಯಿಸುತ್ತಿರುವ ಈ ಮಾಯಾಸಾಧನ ಮುಂದೆ ಇನ್ನೇನನ್ನೆಲ್ಲ ನಮ್ಮ ಮುಂದೆ ತಂದಿಡಲಿದೆಯೋ, ಕಾದುನೋಡುವುದೊಂದೇ ದಾರಿ!

ಮಾರ್ಚ್ ೪, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge