ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ: 'ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!'

ಪ್ರಿಯ ಮಿತ್ರ ಅನಂತರಾಮು...

ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಹಿರಿಯ ವಿಜ್ಞಾನ ಲೇಖಕ, ವಿಜ್ಞಾನಿ ಟಿ. ಆರ್. ಅನಂತರಾಮು ಅವರಿಗೆ ಇನ್ನೊಬ್ಬ ಹಿರಿಯ ಲೇಖಕರಾದ ನಾಗೇಶ ಹೆಗಡೆಯವರು ಬರೆದ ಬಹಿರಂಗ ಪತ್ರ ಇಲ್ಲಿದೆ. ಇಂತಹುದೊಂದು ಅಪರೂಪದ ಪತ್ರ ಪ್ರಕಟಿಸಲು ನಮಗೆ ಹೆಮ್ಮೆ.
(ಚಿತ್ರ ಕೃಪೆ: ನವಕರ್ನಾಟಕ ಪ್ರಕಾಶನ)
ಪ್ರಿಯ ಮಿತ್ರ ಅನಂತರಾಮು,
ನಿಮಗೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡುವುದಾಗಿ ಘೋಷಿಸಿದ್ದು ತಿಳಿದು ಅತೀವ ಸಂತಸವಾಯಿತು. ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೇ ಈಗ ಗೌರವ ಸಿಕ್ಕಂತಾಗಿದೆ. 30 ವರ್ಷಗಳ ಹಿಂದೆ ನಾನು 'ಸುಧಾ'ದಲ್ಲಿದ್ದಾಗ ನೀವು ದೂರದ ಮಿಝೊರಾಂನ ದಟ್ಟಡವಿಯಲ್ಲಿ ಭೂಸರ್ವೇಕ್ಷಣೆ ಮಾಡುತ್ತಲೇ ಅಲ್ಲಿನ ನಿಸರ್ಗ ಸಿರಿಯ ಬಗ್ಗೆ ಸೊಗಸಾದ ಲೇಖನವನ್ನು ಕಳಿಸಿದ್ದಿರಿ. ಕನ್ನಡ ಸಾಹಿತ್ಯ ಪರಂಪರೆಯ ಸೊಗಡು ನಿಮ್ಮ ಬರವಣಿಗೆಯಲ್ಲಿತ್ತು. ಅಂದಿನಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಭೂವಿಸ್ಮಯಗಳ ಆಳಗಲಗಳನ್ನು ಕನ್ನಡಿಗರಿಗ ಪರಿಚಯಿಸುತ್ತ ಎತ್ತರಕ್ಕೆ ಬೆಳೆಯುತ್ತ ಹೋದಿರಿ. ನಿಮ್ಮ ಈ ಬೆಳವಣಿಗೆಗೆ ಆರಂಭದಲ್ಲಿ ಆಗೀಗ ಅಷ್ಟಿಷ್ಟು ನೀರೆರೆದ ನಾನು ಬೀಗುತ್ತ ಹೋದೆ. ನೀವು ಪ್ರೊ. ನಿಸಾರ್ ಅಹ್ಮದರ ಜೊತೆಯಲ್ಲೇ ಭೂವಿಜ್ಞಾನದ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರೂ ನಿಮ್ಮ ಕಾವ್ಯಮಯ ಶೈಲಿಯನ್ನು ವಿಜ್ಞಾನ ಬರವಣಿಗೆಗೇ ಸೀಮಿತಗೊಳಿಸಿ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಕನ್ನಡ ವಿಜ್ಞಾನ ಸಾಹಿತ್ಯವನ್ನು ಶ್ರೀಮಂತಗೊಳಿಸಿದಿರಿ. ವಿಜ್ಞಾನ ಸಾಹಿತಿಗಳೆನಿಸಿದ ನಾವೆಲ್ಲ ಒಂದರ್ಥದಲ್ಲಿ ಅಳಿವಿನಂಚಿನ ಜೀವಿಗಳೆನಿಸಿದ್ದೇವೆ. ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಸರಳವಾಗಿ ಬರೆಯಬಲ್ಲವರ ಸಂಖ್ಯೆ ದಿನದಿನಕ್ಕೆ ಕ್ಷೀಣವಾಗುತ್ತಿದೆ. ಸಾಹಿತ್ಯದ ಮೇರು ವಿಮಶ೯ಕರು ನಮ್ಮತ್ತ ನೋಡುವುದಿಲ್ಲ. 'ಕಡೆಗಣಿಸಲ್ಪಟ್ಟ ಸಾಹಿತ್ಯ'ಗಳ ಪಟ್ಟಿಯಲ್ಲೂ ನಮ್ಮ ಕೃತಿಗಳಿಗೆ ಸ್ಥಾನವಿಲ್ಲ. ಅಷ್ಟಾದರೂ ನಿಮ್ಮ ಶಿರಾ ತಾಲ್ಲೂಕಿನ ಜನರು ಪ್ರೀತಿಯಿಂದ ನಿಮ್ಮನ್ನು ಕಳೆದ ವಾರ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮೆರೆಸಿ ಗೌರವಿಸಿದ್ದಾರೆ. ಕತೆ, ಕಾದಂಬರಿ, ನಾಟಕ, ಕವನ ಬರೆದರೆ ಸಿಗುವ ಗೌರವ ಇತರ ಸಾಹಿತ್ಯ ಪ್ರಕಾರಗಳಿಗೆ ಸಿಗುವುದಿಲ್ಲ ಎಂಬ ಮಾತನ್ನು ಸುಳ್ಳಾಗಿಸಿ ಇದೀಗ ನಿಮಗೆ ಯಾವ ಲಾಬಿ ಇಲ್ಲದೆಯೂ ಡಾಕ್ಟರೇಟ್ ಸಿಕ್ಕಿದೆ. ಅಭಿನಂದನೆಗಳು- ನಿಮಗೊಂದೇ ಅಲ್ಲ, ತುಮಕೂರು ವಿಶ್ವವಿದ್ಯಾಲಯಕ್ಕೂ!
ನಾಗೇಶ ಹೆಗಡೆ

ವ್ಯಾಲೆಟ್ ವ್ಯವಹಾರ

ಟಿ. ಜಿ. ಶ್ರೀನಿಧಿ

ಇವತ್ತು ನಮ್ಮ ಮೇಲೆ ಇಂಟರ್‌ನೆಟ್ ಪ್ರಭಾವ ಎಷ್ಟರಮಟ್ಟಿಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕೆಂದರೆ ಒಮ್ಮೆ ನಮ್ಮ ದೈನಂದಿನ ಕೆಲಸಗಳನ್ನು ನೆನಪಿಸಿಕೊಂಡರೆ ಸಾಕು. ಹೊಸ ಫ್ಯಾಶನ್ನಿನ ಬಟ್ಟೆಯಿಂದ ಸಾರಿಗೆ ಹಾಕುವ ಹುಣಸೇಹಣ್ಣಿನವರೆಗೆ ನಾವು ಪ್ರತಿಯೊಂದನ್ನೂ ಇದೀಗ ಆನ್‌ಲೈನ್ ಜಗತ್ತಿನಲ್ಲಿ ಕೊಳ್ಳುವುದು ಸಾಧ್ಯವಾಗಿದೆ. ಬಸ್ ಟಿಕೇಟು ಕಾದಿರಿಸುವುದರಿಂದ ಬಸ್ ಸ್ಟಾಂಡಿಗೆ ಹೋಗಲು ಆಟೋ ಕರೆಸುವವರೆಗೆ ಅದೆಷ್ಟೋ ಕೆಲಸಗಳನ್ನು ಮಾಡುವ ಶಕ್ತಿ ನಮ್ಮ ಅಂಗೈಲಿರುವ ಮೊಬೈಲ್ ದೂರವಾಣಿಗೆ ಬಂದುಬಿಟ್ಟಿದೆ.

ಅಂತರಜಾಲ ಬಳಸಿ ಇಷ್ಟೆಲ್ಲ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು ಎನ್ನುವುದೇನೋ ಸರಿ. ಆದರೆ ಅದೆಲ್ಲ ಕೆಲಸಗಳಿಗಾಗಿ ಹಣ ಪಾವತಿಸುವುದು ಹೇಗೆ?

ಮೊದಮೊದಲು ಆನ್‌ಲೈನ್ ವ್ಯವಸ್ಥೆಗಳೆಲ್ಲ ಪರಿಚಯವಾದಾಗ ಅಲ್ಲಿನ ವ್ಯವಹಾರಗಳಿಗಾಗಿ ಹಣ ಪಾವತಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ನೆಟ್‌ಬ್ಯಾಂಕಿಂಗುಗಳೆಲ್ಲ ಅಂದು ಇಂದಿನಷ್ಟು ವ್ಯಾಪಕ ಬಳಕೆಯಲ್ಲಿರಲಿಲ್ಲವಲ್ಲ!

ಇದೀಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆಯಾದರೂ ಆನ್‌ಲೈನ್ ಪಾವತಿಯ ಆಯ್ಕೆ ಎಲ್ಲರಲ್ಲೂ ಇದೆ ಎನ್ನುವಂತಿಲ್ಲ.

ಯುಎಸ್‌ಎಸ್‌ಡಿ: ಗೊತ್ತಿದ್ದೂ ಅಪರಿಚಿತ ಈ ತಂತ್ರಜ್ಞಾನ!

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನ್ ಬಳಸಿ ಸಂವಹನ ನಡೆಸಲು ಆಯ್ಕೆಗಳು ಹಲವು. ಕರೆಮಾಡಿ ಮಾತನಾಡಿ, ಐವಿಆರ್‌ಎಸ್ ವ್ಯವಸ್ಥೆ ಬಳಸಿ, ಪಠ್ಯರೂಪದ ಸಂದೇಶ ಕಳುಹಿಸಿ ಇಲ್ಲವೇ ಸುಮ್ಮನೆ ಒಂದು ಮಿಸ್ಡ್ ಕಾಲ್ ಆದರೂ ಕೊಡಿ - ಬಳಸುವ ಪ್ರತಿಯೊಂದು ವಿಧಾನದಲ್ಲೂ ತಾಂತ್ರಿಕವಾಗಿ ಒಂದಲ್ಲ ಒಂದು ಬಗೆಯ ಸಂವಹನ ನಡೆದಿರುತ್ತದೆ.

ಇಂತಹ ಪ್ರತಿಯೊಂದು ವಿಧದ ಸಂವಹನದಲ್ಲೂ ಹಲವು ಸಾಧ್ಯತೆಗಳಿರುತ್ತವೆ. ಎಸ್ಸೆಮ್ಮೆಸ್ಸಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಗುಡ್ ಮಾರ್ನಿಂಗ್ ಗುಡ್ ಈವನಿಂಗ್ ಸಂದೇಶಗಳನ್ನು ಕಳುಹಿಸುವ ಜೊತೆಗೆ ಸ್ಪರ್ಧೆಗಳಲ್ಲಿ ಭಾಗವಹಿಸುವ, ಬಸ್ಸು-ವಿಮಾನ ಇತ್ಯಾದಿಗಳ ಪ್ರಯಾಣ ವಿವರ ತಿಳಿಯುವ, ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳುವಂತಹ ಕೆಲಸಗಳಿಗೆಲ್ಲ ಎಸ್ಸೆಮ್ಮೆಸ್ಸುಗಳನ್ನು ಬಳಸಬಹುದು.

ಮೊಬೈಲಿನ ಪ್ರೀಪೇಯ್ಡ್ ಖಾತೆಯಲ್ಲಿ ದುಡ್ಡೆಷ್ಟಿದೆ ಎನ್ನುವುದನ್ನೋ ಪೋಸ್ಟ್‌ಪೇಯ್ಡ್ ಖಾತೆಯ ಇಂದಿನ ಬಾಕಿ ಎಷ್ಟು ಎನ್ನುವುದನ್ನೋ ತಿಳಿಯುವುದೂ ಸಾಧ್ಯ ತಾನೆ? ಈ ಉದ್ದೇಶಕ್ಕೆ ಬಳಸುವ ವ್ಯವಸ್ಥೆ ಎಸ್ಸೆಮ್ಮೆಸ್ಸಿಗಿಂತ ಕೊಂಚ ಭಿನ್ನವಾಗಿರುವುದನ್ನು ನಾವು ಗಮನಿಸಬಹುದು.

ಸ್ಪರ್ಧೆಯಲ್ಲಿ ಭಾಗವಹಿಸಲೋ ವಿಮಾನದ ಸಮಯ ತಿಳಿದುಕೊಳ್ಳಲೋ ನಾವು ಸಂಖ್ಯೆಯೊಂದಕ್ಕೆ ಎಸ್ಸೆಮ್ಮೆಸ್ ಕಳುಹಿಸುತ್ತೇವೆ; ಆದರೆ ಮೊಬೈಲ್ ಖಾತೆಯಲ್ಲಿ ದುಡ್ಡೆಷ್ಟಿದೆ ಎಂದು ತಿಳಿಯಲು ನಾವು ಬಳಸುವ ಸಂಖ್ಯೆಯಲ್ಲಿ *, # ಮುಂತಾದ ಚಿಹ್ನೆಗಳೆಲ್ಲ ಇರುತ್ತವೆ ಎನ್ನುವುದು ನಮ್ಮ ಗಮನಕ್ಕೆ ಬರುವ ಮೊದಲ ವ್ಯತ್ಯಾಸ.

ಡಿಜಿಟಲ್ ಲೋಕದ ಅಳು-ನಗು

ಟಿ. ಜಿ. ಶ್ರೀನಿಧಿ


ಸಂವಹನದಲ್ಲಿ ಮಾತಿಗೆಷ್ಟು ಮಹತ್ವವೋ ಅದರೊಡನೆ ವ್ಯಕ್ತವಾಗುವ ಭಾವನೆಗಳಿಗೂ ಅಷ್ಟೇ ಮಹತ್ವವಿದೆ. ಹೇಳುವ ಮಾತನ್ನು ನಗುತ್ತ ಹೇಳಿದರೆ ಒಂದು ಅರ್ಥವಿದ್ದರೆ ಸಿಟ್ಟಿನಲ್ಲಿದ್ದಾಗ ಅದೇ ಮಾತಿಗೆ ಬೇರೆಯದೇ ಅರ್ಥ ಹುಟ್ಟಿಕೊಂಡುಬಿಡುತ್ತದೆ.

ಮುಖಾಮುಖಿ ಸಂವಹನದಲ್ಲೇನೋ ಸರಿ, ಭಾವನೆಗಳನ್ನು ವ್ಯಕ್ತಪಡಿಸುವುದು ಸುಲಭ. ಆದರೆ ಈಚೆಗೆ ನಮ್ಮ ಸಂವಹನ ಎಸ್ಸೆಮ್ಮೆಸ್, ಇಮೇಲ್, ಸೋಶಿಯಲ್ ನೆಟ್‌ವರ್ಕ್‌ಗಳ ಮೂಲಕವೇ ಹೆಚ್ಚುಹೆಚ್ಚಾಗಿ ನಡೆಯುತ್ತಿದೆಯಲ್ಲ, ಅಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದು ಹೇಗೆ?

ಈ ಪ್ರಶ್ನೆ ಇಂದು ನಿನ್ನೆಯದೇನೂ ಅಲ್ಲ.
badge