ಸೋಮವಾರ, ಡಿಸೆಂಬರ್ 22, 2014

ಇದು 'ಅಲ್ಟ್ರಾ ಎಚ್‌ಡಿ' ಸಮಯ!

ಟಿ. ಜಿ. ಶ್ರೀನಿಧಿ

ಟೀವಿ ಕೊಳ್ಳಲು ಹೊರಟಾಗ ಅದು ಎಚ್‌ಡಿ ಚಿತ್ರಗಳನ್ನು ಪ್ರದರ್ಶಿಸಬಲ್ಲದೋ ಇಲ್ಲವೋ ಎಂಬ ಪ್ರಶ್ನೆ ಏಳುವುದು ಇಂದಿನ ತಂತ್ರಜ್ಞಾನ ಲೋಕದಲ್ಲಿ ಅತ್ಯಂತ ಸಾಮಾನ್ಯವಾಗಿರುವ ಸಂಗತಿ. 'ಎಚ್‌ಡಿ ರೆಡಿ', 'ಫುಲ್ ಎಚ್‌ಡಿ'ಗಳಿಂದ ಪ್ರಾರಂಭವಾದ ಈ ಎಚ್‌ಡಿ ಯಾನ ಇದೀಗ '೪ಕೆ', 'ಅಲ್ಟ್ರಾ ಎಚ್‌ಡಿ'ಗಳವರೆಗೂ ತಲುಪಿಬಿಟ್ಟಿದೆ.

ಇಷ್ಟೆಲ್ಲ ಸದ್ದುಮಾಡುತ್ತಿರುವ 'ಎಚ್‌ಡಿ' ಎನ್ನುವ ಈ ಹೆಸರು 'ಹೈ ಡೆಫನಿಷನ್' ಎನ್ನುವುದರ ಹ್ರಸ್ವರೂಪ. ಉತ್ತಮ ಗುಣಮಟ್ಟದ, ಹೆಚ್ಚು ಸ್ಪಷ್ಟವಾದ ವೀಡಿಯೋಗಳನ್ನು ಎಚ್‌ಡಿ ವೀಡಿಯೋ ಎಂದೇ ಗುರುತಿಸುವ ಅಭ್ಯಾಸ ಈಗ ವ್ಯಾಪಕವಾಗಿದೆ.

ಹಾಗೆಂದಮಾತ್ರಕ್ಕೆ ಸ್ಪಷ್ಟ ವೀಡಿಯೋಗಳೆಲ್ಲ ಎಚ್‌ಡಿ ಏನಲ್ಲ. ತಾಂತ್ರಿಕವಾಗಿ ಯಾವುದೇ ವೀಡಿಯೋ 'ಎಚ್‌ಡಿ' ಎಂದು ಕರೆಸಿಕೊಳ್ಳಬೇಕಾದರೆ ಅದಕ್ಕೆ ಕೆಲವು ನಿರ್ದಿಷ್ಟ ಅರ್ಹತೆಗಳು ಇರಬೇಕಾಗುತ್ತದೆ.

ಅವುಗಳಲ್ಲಿ ಮೊದಲನೆಯದು ರೆಸಲ್ಯೂಶನ್. ಯಾವುದೇ ವೀಡಿಯೋದ ಉದಾಹರಣೆ ತೆಗೆದುಕೊಂಡರೆ ಅದರ ಪ್ರತಿ ಫ್ರೇಮಿನಲ್ಲೂ ಒಂದಷ್ಟು 'ಪಿಕ್ಚರ್ ಎಲಿಮೆಂಟ್'ಗಳಿರುತ್ತವೆ; ಡಿಜಿಟಲ್ ಛಾಯಾಚಿತ್ರಗಳಲ್ಲಿ ಪಿಕ್ಸೆಲ್‌ಗಳಿರುತ್ತವಲ್ಲ, ಹಾಗೆಯೇ ಇಲ್ಲಿಯೂ ಪಿಕ್ಸೆಲ್‌ಗಳು ಅಥವಾ ಸಾಲುಗಳು ('ಲೈನ್') ವೀಡಿಯೋದ ಸ್ಪಷ್ಟತೆಯನ್ನು ತೀರ್ಮಾನಿಸುತ್ತವೆ.
ಸಾಧಾರಣ ವೀಡಿಯೋಗಳಲ್ಲಿ ಪ್ರತಿ ಪರದೆಗೆ ೪೮೦ ಸಾಲುಗಳಿರುತ್ತವೆ ಎಂದಿಟ್ಟುಕೊಂಡರೆ ಎಚ್‌ಡಿ ವೀಡಿಯೋಗಳಲ್ಲಿ ೧೦೮೦ ಸಾಲುಗಳಿರುವುದೂ ಉಂಟು. ಹಾಗಾಗಿಯೇ ಎಚ್‌ಡಿ ವೀಡಿಯೋ ಹೆಚ್ಚು ಸ್ಪಷ್ಟವಾಗಿರುತ್ತದೆ.

ಇನ್ನೊಂದು ಅಂಶ ವೀಡಿಯೋದ ಆಸ್ಪೆಕ್ಟ್ ರೇಶಿಯೋ. ಸಾಮಾನ್ಯ ವೀಡಿಯೋಗಳ ಆಸ್ಪೆಕ್ಟ್ ರೇಶಿಯೋ ೪:೩ ಇದ್ದರೆ ಬಹಳಷ್ಟು ಎಚ್‌ಡಿ ವೀಡಿಯೋಗಳಲ್ಲಿ ೧೬:೯ ಆಸ್ಪೆಕ್ಟ್ ರೇಶಿಯೋ ಇರುತ್ತದೆ - ಅಂದರೆ ಪರದೆಯ ಎತ್ತರ ಅದರ ಅಗಲದ ಹೋಲಿಕೆಯಲ್ಲಿ ಸಾಮಾನ್ಯ ವೀಡಿಯೋಗಳಿಗಿಂತ ಕಡಿಮೆ. ಎಚ್‌ಡಿ ಟೀವಿಗಳು ಸಾಮಾನ್ಯ ಟೀವಿಗಳಿಗಿಂತ ಹೆಚ್ಚು ಅಗಲವಿರುವುದು ಇದೇ ಕಾರಣಕ್ಕಾಗಿ.

ಎಚ್‌ಡಿ ಟೀವಿಗಳ ವಿಷಯಕ್ಕೆ ಬಂದಾಗ ಗಮನಿಸಬೇಕಾದ ಮೂರನೆಯ ಅಂಶ ಸ್ಕ್ಯಾನ್ ಟೈಪ್. ಸಾಮಾನ್ಯ ಟೀವಿಗಳಲ್ಲಿ ಚಿತ್ರಗಳು ಮೂಡುವಾಗ ಪರದೆಯ ಎಲ್ಲ ಸಾಲುಗಳೂ ಒಮ್ಮೆಗೇ ಬೆಳಗುವುದಿಲ್ಲ. ಪಕ್ಕಪಕ್ಕದ ಸಾಲುಗಳು ಬಹಳ ಕ್ಷಿಪ್ರವಾಗಿ ಒಂದಾದಮೇಲೆ ಮತ್ತೊಂದರಂತೆ ಬೆಳಗುವ ಮೂಲಕ ಟೀವಿ ಪರದೆಯಲ್ಲಿ ಚಿತ್ರಗಳು ಮೂಡುತ್ತವೆ. ಇದಕ್ಕೆ 'ಇಂಟರ್‌ಲೇಸ್ಡ್ ಸ್ಕ್ಯಾನ್' ಎಂದು ಹೆಸರು (ಸಾಲುಗಳು ಪರಸ್ಪರ ಹೆಣೆದುಕೊಳ್ಳುವುದರ ಮೂಲಕ ಚಿತ್ರ ಮೂಡುತ್ತದಲ್ಲ, ಇಂಟರ್‌ಲೇಸ್ ಎಂಬ ಹೆಸರು ಅದನ್ನೇ ಸೂಚಿಸುತ್ತದೆ). ಆದರೆ ಎಚ್‌ಡಿ ಟೀವಿಯಲ್ಲಿ ಹಾಗಲ್ಲ, ಎಲ್ಲ ಸಾಲುಗಳೂ ಒಮ್ಮೆಗೇ ಬೆಳಗಿ ಪರದೆಯ ಮೇಲೆ ಹೆಚ್ಚು ಸ್ಪಷ್ಟವಾದ ಚಿತ್ರಗಳನ್ನು ಮೂಡಿಸುತ್ತವೆ. ಇದಕ್ಕೆ 'ಪ್ರೋಗ್ರೆಸಿವ್ ಸ್ಕ್ಯಾನ್' ಎಂದು ಹೆಸರು.

ಈ ಮೂರು ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಯಾವುದನ್ನು ಎಚ್‌ಡಿ ಟೀವಿ ಎಂದು ಕರೆಯಬೇಕು ಎನ್ನುವ ಬಗ್ಗೆ ಕೆಲ ಮಾನದಂಡಗಳಿವೆ. ಅವುಗಳಲ್ಲಿ ಮೊದಲನೆಯದು ೭೨೦ಪಿ. ಇದರ ಪ್ರಕಾರ ಕನಿಷ್ಟ ೭೨೦ ಸಾಲುಗಳ ರೆಸಲ್ಯೂಶನ್ ಹಾಗೂ ಪ್ರೋಗ್ರೆಸಿವ್ ಸ್ಕ್ಯಾನ್ ಸಾಮರ್ಥ್ಯ ಹೊಂದಿರುವ ಪ್ರದರ್ಶಕಗಳಷ್ಟೆ ಎಚ್‌ಡಿ ಎನ್ನುವ ವಿಶೇಷಣ ಬಳಸಬಲ್ಲವು. ಮಾರುಕಟ್ಟೆಯಲ್ಲಿ 'ಎಚ್‌ಡಿ ರೆಡಿ' ಟೀವಿಗಳು ಸಿಗುತ್ತವಲ್ಲ, ಅವೆಲ್ಲ ೭೨೦ಪಿ ಮಾನದಂಡವನ್ನು ಅನುಸರಿಸಿರುತ್ತವೆ.

'ಫುಲ್ ಎಚ್‌ಡಿ' ಎಂದು ಕರೆಸಿಕೊಳ್ಳಬೇಕಾದರೆ ಆ ಪ್ರದರ್ಶಕ ಕನಿಷ್ಠಪಕ್ಷ ೧೦೮೦ಐ ಮಾನದಂಡವನ್ನು (೧೦೮೦ ಸಾಲುಗಳ ರೆಸಲ್ಯೂಶನ್ ಹಾಗೂ ಇಂಟರ್‌ಲೇಸ್ಡ್ ಸ್ಕ್ಯಾನ್ ಸಾಮರ್ಥ್ಯ) ಅನುಸರಿಸಿರಬೇಕು. ಇಂಟರ್‌ಲೇಸ್ಡ್ ಸ್ಕ್ಯಾನ್ ಬದಲಿಗೆ ಪ್ರೋಗ್ರೆಸಿವ್ ಸ್ಕ್ಯಾನ್ ಬಳಸುವ ೧೦೮೦ಪಿ ಎಂಬ ಮಾನದಂಡವೂ ಇದೆ. ಈ ಯಾವುದೇ ಮಾನದಂಡವನ್ನು ಅನುಸರಿಸುವ 'ಫುಲ್ ಎಚ್‌ಡಿ' ಪ್ರದರ್ಶಕಗಳಲ್ಲಿ ಕಾಣಿಸುವ ಚಿತ್ರದ ಗುಣಮಟ್ಟ 'ಎಚ್‌ಡಿ ರೆಡಿ' ಟೀವಿಗಳಲ್ಲಿ ಕಾಣಿಸುವ ಚಿತ್ರಗಳಿಗಿಂತ ಉತ್ತಮವಾಗಿರುತ್ತದೆ.

[ಜಾಹೀರಾತು] ನಿಮ್ಮ ಮೆಚ್ಚಿನ ಎಚ್‌ಡಿ ಟೀವಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿ ಕೊಳ್ಳಿ!

ಇದೀಗ ಸುದ್ದಿಮಾಡುತ್ತಿರುವ 'ಅಲ್ಟ್ರಾ ಎಚ್‌ಡಿ' (ಯುಎಚ್‌ಡಿ ಅಥವಾ ೪ಕೆ) ತಂತ್ರಜ್ಞಾನ ಸ್ಪಷ್ಟತೆಯ ಸ್ಪರ್ಧೆಯಲ್ಲಿ ಎಚ್‌ಡಿ ರೆಡಿ, ಫುಲ್ ಎಚ್‌ಡಿಗಳನ್ನೆಲ್ಲ ಒಂದೇ ಏಟಿಗೆ ಹಿಂದಿಕ್ಕಲು ರೆಡಿಯಾಗಿದೆ. ಏಕೆಂದರೆ ಅಲ್ಟ್ರಾ ಎಚ್‌ಡಿ ಪರದೆಗಳು ಚಿತ್ರಗಳನ್ನು ೧೦೮೦ಪಿ ಫುಲ್ ಎಚ್‌ಡಿಗಿಂತ ನಾಲ್ಕು ಪಟ್ಟು ಹೆಚ್ಚು ಉತ್ತಮವಾಗಿ ಮೂಡಿಸಬಲ್ಲವು.

ಈ ತಂತ್ರಜ್ಞಾನ ಇನ್ನಷ್ಟು ವಿಕಾಸವಾದಂತೆ ಯುಎಚ್‌ಡಿ ವೀಡಿಯೋಗಳು ಹೆಚ್ಚುಹೆಚ್ಚಾಗಿ ಲಭ್ಯವಾಗಲಿವೆ, ಈ ಗುಣಮಟ್ಟದಲ್ಲೇ ಪ್ರಸಾರ ಮಾಡುವ ಚಾನಲ್ಲುಗಳು ಪ್ರಾರಂಭವಾಗಲಿವೆ, ಟೀವಿ ವೀಕ್ಷಣೆಯ ಅನುಭವವೇ ಸಂಪೂರ್ಣವಾಗಿ ಬದಲಾಗಲಿದೆ ಎಂದು ತಜ್ಞರು ಹೇಳುತ್ತಾರೆ. ಸದ್ಯ ಅತಿಯೆನ್ನುವಷ್ಟು ದುಬಾರಿಯಾಗಿರುವ ಅಲ್ಟ್ರಾ ಹೆಚ್‌ಡಿ ಪರದೆಗಳ ಬೆಲೆಯೂ ಮುಂದಿನ ದಿನಗಳಲ್ಲಿ ಕೊಂಚಮಟ್ಟಿಗೆ ಕಡಿಮೆಯಾಗುವ ನಿರೀಕ್ಷೆಯಿದೆ.

ಫುಲ್ ಎಚ್‌ಡಿಗಿಂತ ನಾಲ್ಕು ಪಟ್ಟು ಉತ್ತಮ ಚಿತ್ರಗಳನ್ನು ನೀಡುವ ೪ಕೆ ತಂತ್ರಜ್ಞಾನವೇ ಅದ್ಭುತ ಎನ್ನಿಸುವಷ್ಟರಲ್ಲಿ ೮ಕೆ ಎನ್ನುವ ಇನ್ನೊಂದು ತಂತ್ರಜ್ಞಾನದ ಸುದ್ದಿಯೂ ಕೇಳಿಬರುತ್ತಿದೆ. ಈ ತಂತ್ರಜ್ಞಾನ ಬಳಸುವ ಪರದೆಗಳು ಫುಲ್ ಎಚ್‌ಡಿಗಿಂತ ಹದಿನಾರು ಪಟ್ಟು ಉತ್ತಮವಾಗಿ ಚಿತ್ರಗಳನ್ನು ಮೂಡಿಸಬಲ್ಲವಂತೆ.

ಒಟ್ಟಾರೆಯಾಗಿ ಚಿತ್ರಗಳನ್ನು ಮೂಡಿಸುವ ಹೊಸಹೊಸ ತಂತ್ರಜ್ಞಾನಗಳು ಕಣ್ಣಮುಂದಿನ ದೃಶ್ಯದ ಗುಣಮಟ್ಟದೊಡನೆಯೇ ಸ್ಪರ್ಧೆಹೂಡಿರುವಂತೆ ಕಾಣಿಸುತ್ತಿದೆ. ಈ ಸ್ಪರ್ಧೆಯ ಹಾದಿ ನಮಗೆ ಎಂತೆಂತಹ ಅನುಭವಗಳನ್ನು ನೀಡಲಿದೆಯೋ, ಕಾದುನೋಡುವುದೇ ದಾರಿ!

ಡಿಸೆಂಬರ್ ೨೨, ೨೦೧೪ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge