ಶುಕ್ರವಾರ, ಡಿಸೆಂಬರ್ 5, 2014

ಯಂತ್ರಮಾನವ ಮಾನವಯಂತ್ರ

ಟಿ. ಜಿ. ಶ್ರೀನಿಧಿ

ಇಪ್ಪತ್ತನೇ ಶತಮಾನದ ಪ್ರಾರಂಭದ ಕಾಲವನ್ನು ಯಂತ್ರಯುಗವೆಂದು ಕರೆಯುವ ಅಭ್ಯಾಸವಿದೆ. ಬೃಹತ್ ಕಾರ್ಖಾನೆಗಳು ವಸ್ತುಗಳ ತಯಾರಿಕೆಯನ್ನು ಸುಲಭವಾಗಿಸಿದ್ದು, ಹೊಸ ಯಂತ್ರಗಳು ಮನುಷ್ಯನ ದೈಹಿಕ ಶ್ರಮವನ್ನು ಕಡಿಮೆಮಾಡಿದ್ದು, ಕಲ್ಪಿಸಿಕೊಳ್ಳಲೂ ಕಷ್ಟವಾಗಿದ್ದ ಸಂಗತಿಗಳು ತಂತ್ರಜ್ಞಾನದ ನೆರವಿನಿಂದ ಸಾಕಾರಗೊಳ್ಳಲು ಪ್ರಾರಂಭವಾದದ್ದು ಇದೇ ಅವಧಿಯಲ್ಲಿ. ಇಂದು ತಂತ್ರಜ್ಞಾನ ನಮ್ಮ ಜೀವನದ ಎಲ್ಲ ಆಯಾಮಗಳನ್ನೂ ಪ್ರಭಾವಿಸಿದೆಯಲ್ಲ, ಆ ಅದ್ಭುತ ಬೆಳವಣಿಗೆಯ ಮೂಲವನ್ನು ನಾವು ಈ ಯಂತ್ರಯುಗದಲ್ಲಿ ಕಾಣಬಹುದು.

ಮನುಷ್ಯ ಹಾಗೂ ಯಂತ್ರಗಳ ನಡುವಿನ ಒಡನಾಟ ಹೆಚ್ಚಲು ಶುರುವಾದದ್ದೂ ಇದೇ ಸಮಯದಲ್ಲಿ. ಯಂತ್ರಗಳ ನೆರವಿನಿಂದ ಮನುಷ್ಯನ ಬದುಕಿನ ಗುಣಮಟ್ಟ ಗಮನಾರ್ಹವಾಗಿ ಹೆಚ್ಚಿತು; ಅದರ ಜೊತೆಗೆ "ಯಂತ್ರಗಳು ಮನುಷ್ಯನ ಕೆಲಸವನ್ನು ತಾವೇ ಮಾಡಿ ಕೆಲಸಗಾರರನ್ನು ಬೀದಿಗೆ ತರುತ್ತವೆ", "ತಂತ್ರಜ್ಞಾನ ಹೀಗೆಯೇ ಬೆಳೆಯುತ್ತ ಹೋದರೆ ಮುಂದೊಂದು ದಿನ ಯಂತ್ರಗಳೇ ನಮ್ಮನ್ನು ಆಳಬಹುದು" ಮುಂತಾದ ಭಾವನೆಗಳೂ ವ್ಯಾಪಕವಾಗಿ ಕಾಣಿಸಿಕೊಂಡವು. ಮನುಷ್ಯ ಹಾಗೂ ಯಂತ್ರಗಳ ನಡುವೆ ಒಂದು ರೀತಿಯ ಸ್ಪರ್ಧೆಯೇ ಉಂಟಾಯಿತು ಎಂದರೂ ಸರಿಯೇ.

ಅಲ್ಲಿಂದ ಮುಂದಕ್ಕೆ ತಂತ್ರಜ್ಞಾನ ಬೆಳೆದುಬಂದಿರುವ ಪರಿ ನಮಗೆಲ್ಲ ಗೊತ್ತೇ ಇದೆ. ನಮ್ಮ ಕೆಲಸಗಳನ್ನು ಸುಲಭಗೊಳಿಸುವುದಿರಲಿ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ ನಡೆದಿರುವ ಬೆಳವಣಿಗೆಗಳು ಯಂತ್ರಗಳಿಗೆ ಸ್ವತಃ ಯೋಚಿಸುವ - ಆ ಯೋಚನೆಗಳಿಗೆ ತಕ್ಕಂತೆ ಕೆಲಸಮಾಡುವ ಶಕ್ತಿಯನ್ನೂ ನೀಡಲು ಪ್ರಯತ್ನಿಸುತ್ತಿವೆ.

ಯಂತ್ರಗಳು ಇಷ್ಟೆಲ್ಲ ಅಭಿವೃದ್ಧಿಯಾಗಿ ಮಾನವರಂತೆಯೇ ಆಗುವುದಾದರೆ ಮನುಷ್ಯರು ಕೊಂಚಮಟ್ಟಿಗಾದರೂ ಯಂತ್ರಗಳಾಗುವುದರಲ್ಲಿ ಏನು ತಪ್ಪು?

ಯಂತ್ರಗಳಂತೆಯೇ ಮನುಷ್ಯರಿಗೂ ಚಿಪ್‌ಗಳನ್ನು ಅಳವಡಿಸುವ 'ಸೈಬರ್ಗ್'ನ ಕಲ್ಪನೆ, ಈ ಪ್ರಶ್ನೆಗೆ ದೊರೆತ ಮೊದಲ ಉತ್ತರಗಳಲ್ಲೊಂದು (ಸೈಬರ್ಗ್ ಎಂಬ ಹೆಸರು ಸೈಬರ್‌ನೆಟಿಕ್ ಆರ್ಗಾನಿಸಂ ಎನ್ನುವುದರ ಹ್ರಸ್ವರೂಪ). ವ್ಯಕ್ತಿಯೊಬ್ಬನ ದೇಹದೊಳಗೆ ಎಲೆಕ್ಟ್ರಾನಿಕ್ ಚಿಪ್‌ಗಳನ್ನು ಅಳವಡಿಸಿಬಿಟ್ಟರೆ ಆತನ ದೇಹದಲ್ಲಿ ನಡೆಯುವ ಚಿಂತನೆ, ಚಲನೆ, ವಿಶ್ಲೇಷಣೆಗಳನ್ನು ಬೇರೊಂದು ಯಂತ್ರದಲ್ಲೂ ಪ್ರತಿಫಲಿಸಬಹುದು, ಈ ಮೂಲಕ ಆ ಯಂತ್ರವನ್ನು ಅತ್ಯಂತ ಸುಲಭವಾಗಿ ನಿಯಂತ್ರಿಸಲೂಬಹುದು ಎಂಬುದು ಈ ಕಲ್ಪನೆಯ ಹಿಂದಿದ್ದ ಉದ್ದೇಶ.

ಸೈಬರ್ಗ್‌ಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಪ್ರಯೋಗಗಳು ನಡೆದಿವೆ. ಈ ಕಲ್ಪನೆಯ ಜನಕರಲ್ಲೊಬ್ಬರಾದ ಪ್ರೊಫೆಸರ್ ಕೆವಿನ್ ವಾರ್ವಿಕ್ ೧೯೯೮ರಲ್ಲಿ ತಮ್ಮ ತೋಳಿಗೊಂದು ಚಿಪ್ ಅಳವಡಿಸಿಕೊಂಡ ಘಟನೆ ಸಾಕಷ್ಟು ಪ್ರಚಾರವನ್ನೂ ಪಡೆದುಕೊಂಡಿತ್ತು. ಅವರ ತೋಳಿನಲ್ಲಿ ಅಳವಡಿಸಲಾಗಿದ್ದ ಈ ಚಿಪ್ ಅವರ ಕಛೇರಿಯ ನಿಯಂತ್ರಣ ವ್ಯವಸ್ಥೆಯೊಡನೆ ಸತತ ಸಂಪರ್ಕದಲ್ಲಿರುತ್ತಿತ್ತು. ಹೀಗಾಗಿ ವಾರ್ವಿಕ್ ತಮ್ಮ ಕಛೇರಿಗೆ ಬಂದ ತಕ್ಷಣ ಬಾಗಿಲು ತಂತಾನೇ ತೆರೆದುಕೊಳ್ಳುತ್ತಿತ್ತು, ಅಗತ್ಯವಿದ್ದಾಗ ವಿದ್ಯುತ್ ದೀಪಗಳೂ ಹತ್ತಿಕೊಳ್ಳುತ್ತಿದ್ದವು!ಈ ಪ್ರಯೋಗದ ಮುಂದಿನ ಹಂತವಾಗಿ ಮನುಷ್ಯನ ನರಮಂಡಲಕ್ಕೇ ಯಂತ್ರಗಳನ್ನು ಸಂಪರ್ಕಿಸುವ ಪ್ರಯತ್ನ ಕೂಡ ನಡೆಯಿತು. ಇಂತಹುದೊಂದು ಪ್ರಯೋಗದಲ್ಲಿ ಕೆವಿನ್ ವಾರ್ವಿಕ್ ತೋಳಿಗೆ ಸಂಪರ್ಕಿಸಿದ್ದ ಯಂತ್ರವೊಂದು ಅವರು ಕೈ ಅಲುಗಿಸಿದಾಗಲೆಲ್ಲ ಅಂತರಜಾಲ ಸಂಪರ್ಕದ ಮೂಲಕ ಬೇರೊಂದು ಕಡೆಯಿದ್ದ ಯಾಂತ್ರಿಕ ಕೈಯೊಂದಕ್ಕೆ (ರೋಬಾಟ್ ಆರ್ಮ್) ಸಂಕೇತ ಕಳುಹಿಸುತ್ತಿತ್ತು; ಕೆವಿನ್ ಯಾವ ರೀತಿಯಲ್ಲಿ ಕೈಯನ್ನು ಅಲುಗಿಸುತ್ತಿದ್ದರೋ ಆ ಯಾಂತ್ರಿಕ ಕೈ ಕೂಡ ಅದೇ ರೀತಿ ಅಲುಗುತ್ತಿತ್ತು!

ಅಷ್ಟೇ ಅಲ್ಲ, ಇಂತಹ ಯಂತ್ರಗಳನ್ನು ಬಳಸಿ ವ್ಯಕ್ತಿಗಳ ನಡುವಿನ ಸಂವಹನ ಸಾಧ್ಯವಾಗಿಸಲೂ ಪ್ರಯತ್ನಗಳು ನಡೆದಿವೆ. ಯಂತ್ರಗಳನ್ನು ಬಳಸಿ ಇಬ್ಬರು ವ್ಯಕ್ತಿಗಳ ನರಮಂಡಲಗಳ ನಡುವೆ ನೇರ ಸಂವಹನ ಸಾಧ್ಯವಾಗಿಸಬಹುದು ಎಂದು ಈ ಪ್ರಯತ್ನಗಳು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿವೆ. ಒಬ್ಬರ ಮನಸ್ಸಿನ ಭಾವನೆಯನ್ನು ಮತ್ತೊಬ್ಬರು ಅರಿತುಕೊಳ್ಳುವ 'ಟೆಲಿಪಥಿ'ಯಂತಹ ಕಲ್ಪನೆಗಳನ್ನು ನನಸಾಗಿಸುವುದು ಇಂತಹ ಪ್ರಯತ್ನಗಳ ಉದ್ದೇಶ.

ಇಂತಹ ಮಹತ್ವಾಕಾಂಕ್ಷಿ ಯೋಜನೆಗಳಷ್ಟೇ ಅಲ್ಲ, ದಿನನಿತ್ಯದ ಬದುಕಿನಲ್ಲಿ ಉಪಯುಕ್ತವಾಗುವಂತಹ ಕೆಲಸಗಳಲ್ಲೂ ಈ ಪರಿಕಲ್ಪನೆಯನ್ನು ಬಳಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.

ಸಾಕುಪ್ರಾಣಿಗಳನ್ನು ಗುರುತಿಸುವುದಕ್ಕಾಗಿ ಅವುಗಳ ದೇಹಕ್ಕೆ ಪುಟಾಣಿ ಚಿಪ್ ಒಂದನ್ನು ಸೇರಿಸುವ ಅಭ್ಯಾಸ ಪಾಶ್ಚಾತ್ಯ ದೇಶಗಳಲ್ಲಿರುವ ಬಗ್ಗೆ ನಾವು ಕೇಳಿದ್ದೇವಲ್ಲ, ಅಂತಹ ಚಿಪ್‌ಗಳನ್ನು ಮನುಷ್ಯರ ದೇಹಕ್ಕೂ ಸೇರಿಸುವುದು ಸಾಧ್ಯವಂತೆ. ಇಂತಹ ಚಿಪ್‌ಗಳ ಮೂಲಕ ವಯಸ್ಸಾದವರ ಆರೋಗ್ಯದ ಮೇಲೆ ನಿಗಾ ಇಡುವುದು, ಮಕ್ಕಳ ಸುರಕ್ಷತೆಯ ಮೇಲೆ ನಿಗಾ ವಹಿಸುವುದೆಲ್ಲ ಸಾಧ್ಯ ಎಂದು ತಜ್ಞರು ಹೇಳುತ್ತಾರೆ.

ಅಪಘಾತದ ಪರಿಣಾಮವಾಗಿಯೋ ಅನಾರೋಗ್ಯದಿಂದಲೋ ಕೈಕಾಲುಗಳನ್ನು ಚಲಿಸಲಾಗದವರು ತಮ್ಮ ಯೋಚನೆಗಳಿಂದಲೇ ಯಂತ್ರಗಳನ್ನು ಚಲಿಸುವಂತೆ, ದೃಷ್ಟಿಶಕ್ತಿಯಿಲ್ಲದವರು ಯಂತ್ರಗಳ ಸಹಾಯದಿಂದ "ನೋಡುವಂತೆ", ಧ್ವನಿತಂತುವಿಗೆ ಘಾಸಿಯಾದರೂ ಮಾತನಾಡಲು ಸಾಧ್ಯವಾಗುವಂತೆ ಮಾಡುವ ನಿಟ್ಟಿನಲ್ಲೂ ಹಲವು ಪ್ರಯತ್ನಗಳು ನಡೆದಿವೆ. ಆ ಪೈಕಿ ಕೆಲವು ತಕ್ಕಮಟ್ಟಿನ ಯಶಸ್ಸನ್ನೂ ಕಂಡಿವೆ. ಇಂತಹ ಪ್ರಯೋಗಗಳ ಮುಂದಿನ ಹಂತದಲ್ಲಿ ಮನುಷ್ಯರ ನೆನಪಿನ ಶಕ್ತಿಯನ್ನು ಯಂತ್ರಗಳ ನೆರವಿನಿಂದ ಉತ್ತಮಪಡಿಸುವಂತಹ ಕ್ರಾಂತಿಕಾರಿ ಸಾಧನೆಗಳೂ ಆಗಬಹುದೆಂದು ನಿರೀಕ್ಷಿಸಲಾಗಿದೆ.

ಮನುಷ್ಯನ ದೇಹದಲ್ಲಿ ಯಂತ್ರಗಳ ಕೈವಾಡ ಹೆಚ್ಚಿದಂತೆ ಆ ಏರ್ಪಾಡಿನ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಸವಾಲೂ ದೊಡ್ಡದಾಗಲಿದೆ. ಕಂಪ್ಯೂಟರ್ ಪ್ರಪಂಚದಲ್ಲಿ ಈಗಾಗಲೇ ವ್ಯಾಪಕವಾಗಿರುವ ದುಷ್ಟಶಕ್ತಿಗಳ ಕಾಟವೇನಾದರೂ ಮಾನವ ದೇಹದಲ್ಲಿರುವ ಯಂತ್ರಗಳಿಗೂ ಶುರುವಾಗಿಬಿಟ್ಟರೆ ಆಗಬಹುದಾದ ಅಪಾಯವನ್ನು ಊಹಿಸುವುದೂ ಕಷ್ಟ ಎಂದು ಈ ಕ್ಷೇತ್ರದ ಪರಿಣತರು ಹೇಳುತ್ತಾರೆ.

ಒಟ್ಟಿನಲ್ಲಿ ಯಂತ್ರಗಳಿಗೆ ಮನುಷ್ಯ ಸ್ವಭಾವ ಕಲಿಸುವ, ಮನುಷ್ಯರಿಗೆ ಯಂತ್ರದ ಶಕ್ತಿ ಕೂಡಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಎಲ್ಲ ಪ್ರಯತ್ನಗಳ ಪರಿಣಾಮವಾಗಿ ಯಂತ್ರಗಳು ಮನುಷ್ಯರಾಗುತ್ತವೋ ಮನುಷ್ಯರು ಯಂತ್ರಗಳಾಗುತ್ತಾರೋ ಇಲ್ಲವೇ ದೊಡ್ಡದೊಂದು ಗೊಂದಲವೇ ಸೃಷ್ಟಿಯಾಗುತ್ತದೋ ಗೊತ್ತಿಲ್ಲ; ಆಗುವುದೆಲ್ಲ ಒಳ್ಳೆಯದೇ ಆಗಲಿ ಎಂದುಕೊಂಡು ಕಾದುನೋಡುವುದೊಂದೇ ನಮ್ಮೆದುರು ಕಾಣುತ್ತಿರುವ ದಾರಿ!

ಡಿಸೆಂಬರ್ ೨೦೧೪ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge