ಮಂಗಳವಾರ, ಡಿಸೆಂಬರ್ 2, 2014

ಕನ್ನಡನಾಡಿನ ಐಟಿ ಜಗತ್ತು

ಕನ್ನಡನಾಡಿನ ಇತಿಹಾಸದಿಂದ ಪರಿಸರದವರೆಗೆ, ಕನ್ನಡದ ಸಾಹಿತ್ಯ-ಸಂಸ್ಕೃತಿಯಿಂದ ಆಹಾರ ವೈವಿಧ್ಯದವರೆಗೆ ಪ್ರತಿಯೊಂದು ಅಂಶವೂ ವಿಶಿಷ್ಟವೇ. ಹಿಂದಿನ ಕಾಲದಿಂದಲೂ ನಮ್ಮ ನಾಡಿನೊಡನೆ ಬಂದಿರುವ ಈ ಹೆಚ್ಚುಗಾರಿಕೆಗಳ ಸಾಲಿಗೆ ಕಳೆದ ಕೆಲ ದಶಕಗಳಲ್ಲಿ ಸೇರಿದ್ದು ಮಾಹಿತಿ ತಂತ್ರಜ್ಞಾನದ ತವರು ಎನ್ನುವ ಇನ್ನೊಂದು ಹಿರಿಮೆ. ಈ ಸಂಗತಿ ಅದೆಷ್ಟು ಜನಪ್ರಿಯ ಎಂದರೆ ಪ್ರಪಂಚದ ಯಾವುದೋ ಮೂಲೆಯಲ್ಲಿ, ಹೆಸರು ಹೇಳಲೂ ಕಷ್ಟವಾಗುವಂತಹ ಊರಿನಲ್ಲಿರುವವರಿಗೂ ಬೆಂಗಳೂರಿನ ಪರಿಚಯವಿರುತ್ತದೆ. ಕನ್ನಡನಾಡಿನೊಳಗೊಂದು ಐಟಿ ಜಗತ್ತು ರೂಪುಗೊಂಡ, ಬೆಳೆದುನಿಂತ ಈ ಪ್ರಕ್ರಿಯೆಯ ಒಂದು ಸಿಂಹಾವಲೋಕನ ಇಲ್ಲಿದೆ.

ಟಿ. ಜಿ. ಶ್ರೀನಿಧಿ

ಚಿತ್ರಕೃಪೆ: bangaloreitbt.in
ನಮ್ಮ ದೇಶದಲ್ಲಿ ಐಟಿ ಉದ್ದಿಮೆಯ ಪ್ರಾರಂಭವಾದದ್ದು ಸುಮಾರು ಎಪ್ಪತ್ತರ ದಶಕದಲ್ಲಿರಬೇಕು. ಆಗಿನ ಕಾಲದಲ್ಲಿ ಹೆಚ್ಚೂಕಡಿಮೆ ಎಲ್ಲ ಸಂಸ್ಥೆಗಳೂ ಮುಂಬಯಿಯಿಂದಲೇ ಕಾರ್ಯನಿರ್ವಹಿಸುತ್ತಿದ್ದವು ಎಂದು ತೋರುತ್ತದೆ. ತಂತ್ರಜ್ಞಾನದಲ್ಲಿ ಪರಿಣತರಾದವರನ್ನು ಅಂತಹವರ ಅಗತ್ಯವಿದ್ದ ಸಂಸ್ಥೆಗಳಿಗೆ ಕಳುಹಿಸಿಕೊಡುವುದು, ಹಾಗೂ ಆ ಸೇವೆಯನ್ನು ಒದಗಿಸಿಕೊಟ್ಟದ್ದಕ್ಕೆ ತಮ್ಮ ಶುಲ್ಕ ಪಡೆದುಕೊಳ್ಳುವುದು - ಇದು ಇಂತಹ ಬಹಳಷ್ಟು ಸಂಸ್ಥೆಗಳ ಪ್ರಾಥಮಿಕ ಚಟುವಟಿಕೆಯಾಗಿತ್ತು ಎನ್ನಬಹುದು.

ಮೊದಲಿಗೆ ಸೀಮಿತ ಪ್ರಮಾಣದಲ್ಲೇ ನಡೆಯುತ್ತಿದ್ದ ಈ ಸಂಸ್ಥೆಗಳ ವಹಿವಾಟು ಕಂಪ್ಯೂಟರ್ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಜಾಸ್ತಿಯಾಗುತ್ತ ಬಂತು. ಹೆಚ್ಚುಹೆಚ್ಚು ಸಂಸ್ಥೆಗಳು ಐಟಿ ಕ್ಷೇತ್ರ ಪ್ರವೇಶಿಸಿ ಅಲ್ಲಿ ಸ್ಪರ್ಧೆ ಹೆಚ್ಚುತ್ತಿದ್ದಂತೆ ಮುಂಬಯಿಯಷ್ಟೇ ಉತ್ತಮವಾದ ಸೌಕರ್ಯಗಳನ್ನು ಹೊಂದಿರುವ, ಸಾಧ್ಯವಾದರೆ ಅದಕ್ಕಿಂತ ಹೆಚ್ಚೇ ಅನುಕೂಲಕರವಾದ ಊರಿಗಾಗಿ ಹುಡುಕಾಟ ಪ್ರಾರಂಭವಾಯಿತು.

ಆಗ ಆಯ್ಕೆಯಾದದ್ದೇ ನಮ್ಮ ಬೆಂಗಳೂರು.

ಆಹ್ಲಾದಕರ ವಾತಾವರಣ, ಅದಾಗಲೇ ತಲೆಯೆತ್ತಿದ್ದ ಕೈಗಾರಿಕೆಗಳು, ಉತ್ತಮ ಮೂಲಸೌಕರ್ಯ, ಜಾಗತಿಕ ಮಟ್ಟದ ಶೈಕ್ಷಣಿಕ ಹಾಗೂ ಸಂಶೋಧನಾ ಕೇಂದ್ರಗಳು - ಇವೆಲ್ಲ ಕಾರಣಗಳಿಂದಾಗಿ ಬೆಂಗಳೂರು ಐಟಿ ಸಂಸ್ಥೆಗಳ ಆದರ್ಶ ನೆಲೆಯಾಗಿ ರೂಪಗೊಳ್ಳುತ್ತ ಬಂತು. ದೇಶೀಯ ಸಂಸ್ಥೆಗಳಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಸಂಸ್ಥೆಗಳು ಕೂಡ ಬೆಂಗಳೂರಿನ ಕಡೆಗೆ ಗಮನಹರಿಸಲು ಪ್ರಾರಂಭಿಸಿದವು. ತಂತ್ರಜ್ಞಾನ ಕ್ಷೇತ್ರದ ಬಹುರಾಷ್ಟ್ರೀಯ ಸಂಸ್ಥೆಗಳು ಬೆಂಗಳೂರಿನತ್ತ ಮುಖಮಾಡುವುದು ೧೯೮೫ರಷ್ಟು ಹಿಂದೆಯೇ ಪ್ರಾರಂಭವಾಗಿತ್ತು: ಟೆಕ್ಸಸ್ ಇನ್ಸ್‌ಟ್ರುಮೆಂಟ್ಸ್ ಸಂಸ್ಥೆಯ ಕೇಂದ್ರ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದ್ದು ಅದೇ ವರ್ಷದಲ್ಲಿ.

ಇನ್ನು ಮೂಲಸೌಕರ್ಯದ ದೃಷ್ಟಿಯಿಂದ ನೋಡಿದರೆ ರಾಜ್ಯ ಸರಕಾರಿ ಸ್ವಾಮ್ಯದ ಕಿಯೋನಿಕ್ಸ್ ಸಂಸ್ಥೆಯ ಪ್ರಯತ್ನದಿಂದ ಬೆಂಗಳೂರಿನ ಹೊರವಲಯದಲ್ಲಿ ಇಲೆಕ್ಟ್ರಾನಿಕ್ಸ್ ಸಿಟಿಯ ನಿರ್ಮಾಣವಾದದ್ದನ್ನು ಇನ್ನೊಂದು ಮಹತ್ತರ ಘಟನೆಯೆಂದು ಹೇಳಬಹುದು. ಈಗ ಅದೇ ಇಲೆಕ್ಟ್ರಾನಿಕ್ಸ್ ಸಿಟಿ ಬೆಂಗಳೂರಿನ ಐಟಿ ಉದ್ದಿಮೆಯ ಹೃದಯಭಾಗವಾಗಿ ಬೆಳೆದುನಿಂತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ.

ಮುಂದೆ ತೊಂಬತ್ತರ ದಶಕದ ಆರ್ಥಿಕ ಉದಾರೀಕರಣ ಭಾರತೀಯ ಐಟಿ ಉದ್ದಿಮೆ ಜಾಗತಿಕವಾಗಿ ಬೆಳೆಯಲು ಅಗತ್ಯ ನೆರವು ಒದಗಿಸಿತು. ಇದೇ ಸುಮಾರಿಗೆ ದೂರಸಂಪರ್ಕ ಕ್ಷೇತ್ರ ಕೂಡ ತೀವ್ರಗತಿಯಲ್ಲಿ ಬೆಳೆಯಿತು.ಐಟಿ ಮತ್ತು ಬೆಂಗಳೂರು
ಈ ನಡುವೆ ಕಂಪ್ಯೂಟರ್ ವಿಜ್ಞಾನ ಹಾಗೂ ಸಂವಹನ ತಂತ್ರಜ್ಞಾನಗಳಲ್ಲಿ ಸಂಭವಿಸಿದ್ದ ಬೆಳವಣಿಗೆಗಳ ಪರಿಣಾಮವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಎಲ್ಲಿಂದ ಬೇಕಿದ್ದರೂ ಕೆಲಸಮಾಡುವುದು ಸಾಧ್ಯವಾಯಿತು. ಇದರ ಪರಿಣಾಮವಾಗಿ ಗ್ರಾಹಕರ ಕಚೇರಿಯಲ್ಲಿ, ಅವರ ಕಂಪ್ಯೂಟರನ್ನು ಬಳಸಿಯೇ ಕೆಲಸಮಾಡುವ ಅನಿವಾರ್ಯತೆಯೂ ಹೋಯಿತು; ಭಾರತದಿಂದಲೇ ಕೆಲಸಮಾಡಿ ಅದನ್ನು ಗ್ರಾಹಕರಲ್ಲಿಗೆ 'ಕಳುಹಿಸುವ' ಅಭ್ಯಾಸ ವ್ಯಾಪಕವಾಗಿ ಬೆಳೆಯಿತು.

ಮುಂದಿನ ದಿನಗಳಲ್ಲಿ ಸುದ್ದಿಮಾಡಿದ ವೈಟೂಕೆ ಸಮಸ್ಯೆ ಹಾಗೂ 'ಡಾಟ್‌ಕಾಮ್ ಬೂಮ್'ಗಳೂ ಬೆಂಗಳೂರಿನ ಐಟಿ ಸಂಸ್ಥೆಗಳ ಬೆಳವಣಿಗೆಗೆ ಸಾಕಷ್ಟು ನೆರವು ನೀಡಿದವು. ಆನಂತರದಲ್ಲಿ ಕೆಲ ಸಂಕಷ್ಟದ ದಿನಗಳು ಬಂದವಾದರೂ ಐಟಿ ಕ್ಷೇತ್ರ ತನ್ನ ಸಮಸ್ಯೆಗಳಿಂದ ಸಾಕಷ್ಟು ವೇಗವಾಗಿಯೇ ಹೊರಗೆ ಬಂತು. ಬಿಸಿನೆಸ್ ಪ್ರಾಸೆಸ್ ಔಟ್‌ಸೋರ್ಸಿಂಗ್ ಪರಿಕಲ್ಪನೆ ಪರಿಚಯವಾದ ಮೇಲೆ ಬರಿಯ ಸಾಫ್ಟ್‌ವೇರ್ ಅಭಿವೃದ್ಧಿ ಅಷ್ಟೇ ಅಲ್ಲದೆ ಇನ್ನೂ ಹಲವು ಕೆಲಸಗಳಲ್ಲೂ ಈ ಕ್ಷೇತ್ರ ತನ್ನನ್ನು ತೊಡಗಿಸಿಕೊಂಡಿತು.

೨೦೧೩-೧೪ರಲ್ಲಿ ನಮ್ಮ ದೇಶದಲ್ಲಿ ಈ ಉದ್ದಿಮೆಯ ಒಟ್ಟು ವಹಿವಾಟು ಸುಮಾರು ೬೨ ಬಿಲಿಯನ್ ಡಾಲರುಗಳಷ್ಟಿತ್ತು ಎಂದು ಇಂಡಿಯಾ ಬ್ರಾಂಡ್ ಈಕ್ವಿಟಿ ಫೌಂಡೇಶನ್ ಜಾಲತಾಣ ಹೇಳುತ್ತದೆ. ಈ ವಹಿವಾಟಿನ ದೊಡ್ಡದೊಂದು ಪಾಲು, ಸಹಜವಾಗಿಯೇ, ಕರ್ನಾಟಕದಿಂದ ಬರುತ್ತಿದೆ. ವಿಶ್ವದ ಅತ್ಯಂತ ಪ್ರಸಿದ್ಧ ಸಂಸ್ಥೆಗಳು ಇದೀಗ ನಮ್ಮ ರಾಜ್ಯದಿಂದ ವಹಿವಾಟು ನಡೆಸುತ್ತಿವೆ. ಲಕ್ಷಾಂತರ ಜನರು ಐಟಿ ಕ್ಷೇತ್ರದಿಂದಾಗಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಉದ್ಯೋಗ ಪಡೆದಿದ್ದಾರೆ. ಯುವಜನತೆಗೆ ದೊಡ್ಡಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವಲ್ಲಿ, ಹಾಗೂ ಒಟ್ಟಾರೆಯಾಗಿ ಮಧ್ಯಮವರ್ಗದ ಜೀವನಮಟ್ಟವನ್ನು ಗಮನಾರ್ಹವಾಗಿ ಬದಲಿಸುವಲ್ಲಿ ಐಟಿ ಕ್ಷೇತ್ರದ ಕೊಡುಗೆ ಮಹತ್ವದ್ದು.

ಉದ್ದಿಮೆಯ ಸ್ವರೂಪ
ಕರ್ನಾಟಕದ, ಅದರಲ್ಲೂ ಬೆಂಗಳೂರಿನ, ಐಟಿ ಉದ್ದಿಮೆ ಬೆಳೆಯುತ್ತ ಹೋದಂತೆ ಹೊರದೇಶಗಳ ಅದೆಷ್ಟೋ ಸಂಸ್ಥೆಗಳು ತಮ್ಮ ಮಾಹಿತಿ ತಂತ್ರಜ್ಞಾನದ ಅಗತ್ಯಗಳಿಗಾಗಿ ನಮ್ಮ ದೇಶದತ್ತ ಮುಖಮಾಡಲು ಪ್ರಾರಂಭಿಸಿದವು. ಡಾಲರಿನಲ್ಲೋ ಪೌಂಡು-ಯೂರೋಗಳಲ್ಲೋ ಗಳಿಸುವ ಸಂಸ್ಥೆಗಳಿಗೆ ರೂಪಾಯಿಗಳಲ್ಲಿ ಸಂಬಳಕೊಟ್ಟು ಕೆಲಸಮಾಡಿಸಿಕೊಳ್ಳುವುದು ಉಳಿತಾಯದ ಹೊಸ ಹಾದಿಯಾಗಿಯೂ ಕಾಣಿಸಿತು. ಈ ಅಭ್ಯಾಸ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ವಿದೇಶಿ ಸಂಸ್ಥೆಗಳು ತಮ್ಮ ಹೆಚ್ಚುವರಿ ಅಗತ್ಯಗಳಿಗಾಗಿ ಮಾತ್ರ ಬೆಂಗಳೂರಿನತ್ತ ನೋಡುವುದರ ಬದಲಿಗೆ ತಮ್ಮಲ್ಲಿ ನಡೆಯುತ್ತಿದ್ದ ಐಟಿ ಕೆಲಸವಷ್ಟನ್ನೂ ಬೆಂಗಳೂರಿನ ಸಂಸ್ಥೆಗಳಿಗೆ ವಹಿಸಿಕೊಡಲು ಪ್ರಾರಂಭಿಸಿದವು. ಈ ಹೊರಗುತ್ತಿಗೆಯ ಪರಿಣಾಮವಾಗಿ ಅಲ್ಲಿನ ಹಲವಾರು ಉದ್ಯೋಗಿಗಳು ಕೆಲಸ ಕಳೆದುಕೊಂಡದ್ದೂ ಆಯಿತು, ಆ ಪ್ರಕ್ರಿಯೆಗೆ 'ಬ್ಯಾಂಗಲೋರ್‍ಡ್' ಎನ್ನುವ ಹೆಸರೇ ರೂಪುಗೊಂಡುಬಿಟ್ಟಿತು (ಅವರ ಕೆಲಸ ಬೆಂಗಳೂರಿಗೆ ಹೋಯಿತು ಎನ್ನುವ ಅರ್ಥದಲ್ಲಿ).

ಇಂದಿಗೂ ಭಾರತೀಯ ಐಟಿ ಉದ್ದಿಮೆ ನಿರ್ವಹಿಸುವ ಕೆಲಸದ ದೊಡ್ಡ ಪಾಲು ಇಂತಹ ಹೊರಗುತ್ತಿಗೆ ಕೆಲಸಗಳದ್ದೇ. ಈ ಕ್ಷೇತ್ರದ ಬಹಳಷ್ಟು ಸಂಸ್ಥೆಗಳು ತಮ್ಮ ಗ್ರಾಹಕರು ಬಳಸುವ ವಿವಿಧ ಕಂಪ್ಯೂಟರ್ ವ್ಯವಸ್ಥೆಗಳ ನಿರ್ವಹಣೆ ಮತ್ತು ಅದಕ್ಕೆ ಪೂರಕವಾದ ತಂತ್ರಾಂಶಗಳ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ದಶಕಗಳ ಹಿಂದಿನ ಮೇನ್‌ಫ್ರೇಮ್ ಇರಲಿ, ಇಂದಿನ ಕ್ಲೌಡ್ ಕಂಪ್ಯೂಟಿಂಗ್ - ಮೊಬೈಲ್ ಆಪ್ ಇತ್ಯಾದಿಗಳೇ ಇರಲಿ ಪ್ರತಿಯೊಂದು ತಂತ್ರಜ್ಞಾನವನ್ನೂ ತಮ್ಮ ಕೆಲಸದಲ್ಲಿ ಬಳಸುವ ಐಟಿ ಉದ್ಯೋಗಿಗಳು ಬೆಂಗಳೂರಿನಲ್ಲಿದ್ದಾರೆ.ಸವಾಲುಗಳು
ಹೊರಗುತ್ತಿಗೆ, ಅಂದರೆ 'ಔಟ್‌ಸೋರ್ಸಿಂಗ್'ನ ಈ ಅಭ್ಯಾಸ ಬೆಳೆದಂತೆ ವಿವಿಧ ಸೇವಾಸಂಸ್ಥೆಗಳ ನಡುವಿನ ಸ್ಪರ್ಧೆ ಹೆಚ್ಚಿತು. ಮುಂದೆ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಏರುಪೇರುಗಳಾದಾಗ ಕೆಲಸಗಳನ್ನು ಹೊರಗುತ್ತಿಗೆ ನೀಡುವವರು ಕೂಡ ತಮ್ಮ ವೆಚ್ಚವನ್ನು ಆದಷ್ಟೂ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಪ್ರಾರಂಭಿಸಿದರು.

ಇವೆಲ್ಲದರ ಪರಿಣಾಮವಾಗಿ ಭಾರತೀಯ ಐಟಿ ಉದ್ದಿಮೆ ಕಡಿಮೆ ವೆಚ್ಚದ ಸೇವೆಯನ್ನೇ ತನ್ನ ಪ್ರಮುಖ ಗುರಿಯನ್ನಾಗಿಸಿಕೊಂಡುಬಿಟ್ಟಿದೆ; ಇದು ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ ಎನ್ನುವುದು ತಜ್ಞರ ಅನಿಸಿಕೆ. ಬೆಂಗಳೂರಿನಲ್ಲಿ ಈಚೆಗೆ ಮುಕ್ತಾಯವಾದ ಸಿಬಿಟ್ ಇಂಡಿಯಾ ಸಮ್ಮೇಳನದಲ್ಲಿ ಇನ್‌ಫೋಸಿಸ್ ಮುಖ್ಯಸ್ಥ ವಿಶಾಲ್ ಸಿಕ್ಕಾ ವ್ಯಕ್ತಪಡಿಸಿದ ಅನಿಸಿಕೆಗಳನ್ನು ಇಲ್ಲಿ ಗಮನಿಸಬಹುದು. "ಈ ಕ್ಷೇತ್ರದಲ್ಲಿರುವವರೆಲ್ಲ ವೆಚ್ಚವನ್ನು ಕಡಿಮೆಮಾಡುವ ಆತುರದಲ್ಲಿದ್ದಾರೆ; ಈ ಆತುರದಿಂದಾಗಿಯೇ ಸಮರ್ಥ ಉದ್ಯೋಗಿಗಳ ಆಯ್ಕೆಯಲ್ಲೂ ಎಡವುತ್ತಿದ್ದಾರೆ. ಆಯ್ದುಕೊಂಡವರಿಗೆ ಪೂರ್ಣಪ್ರಮಾಣದ ತರಬೇತಿಯನ್ನೂ ಕೊಡುತ್ತಿಲ್ಲ. ಇದು ಐಟಿ ಕ್ಷೇತ್ರದ ಮಟ್ಟಿಗೆ ಸರಿಯಾದ ದಾರಿಯೆಂದು ತೋರುತ್ತಿಲ್ಲ" ಎಂದ ಅವರ ಅಭಿಪ್ರಾಯ ಈ ಕ್ಷೇತ್ರದಲ್ಲಿರುವ ಇನ್ನೂ ಅನೇಕರದ್ದೂ ಆಗಿರಲಿಕ್ಕೆ ಸಾಕು.

ಗ್ರಾಹಕರಿಂದ ನಿರ್ದೇಶನಗಳನ್ನು ಪಡೆದು ಅದಷ್ಟೇ ಕೆಲಸವನ್ನು ಮಾಡಿಕೊಡುವ ಬದಲಿಗೆ ಸ್ವತಃ ತಾವೇ ತಮ್ಮ ಗ್ರಾಹಕರಿಗೆ ತಂತ್ರಜ್ಞಾನದ ವಿಷಯದಲ್ಲಿ ಮಾರ್ಗದರ್ಶಕರಾಗುವ ಮಟ್ಟಕ್ಕೆ ನಮ್ಮ ಸಂಸ್ಥೆಗಳು ಬೆಳೆಯಬೇಕು ಎನ್ನುವ ಆಶಯ ಕೂಡ ಇದೆ. ತಮ್ಮ ಕೆಲಸಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿಳಿದುಕೊಂಡು ಮುಂದುವರೆಯುವ ಬದಲಿಗೆ ತಮ್ಮ ಗ್ರಾಹಕರ ಕಾರ್ಯಕ್ಷೇತ್ರದ (ಡೊಮೈನ್) ಕುರಿತು ಹೆಚ್ಚಿನ ಅರಿವು ಪಡೆದುಕೊಳ್ಳುವ ಮನೋಭಾವ, ಆ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳಿಗೆ ಕಾರಣರಾಗುವ ಹುಮ್ಮಸ್ಸು ಕೂಡ ಬೆಳೆಯಬೇಕಿದೆ.

ಯುವಜನತೆ ಮತ್ತು ಐಟಿ ಕ್ಷೇತ್ರ
ಬುದ್ಧಿಮತ್ತೆ ಹಾಗೂ ಕೌಶಲವನ್ನು ಆಧರಿಸಿದ ಕ್ಷೇತ್ರ ಎಂಬ ಹಣೆಪಟ್ಟಿಯೂ ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ಐಟಿ ಉದ್ದಿಮೆಗೆ ಹೊಂದುವುದಿಲ್ಲ ಎನ್ನುವುದು ಆಗಾಗ್ಗೆ ಕೇಳಿಬರುವ ಇನ್ನೊಂದು ಆಪಾದನೆ. ಇದರಲ್ಲಿ ಸತ್ಯವೂ ಇಲ್ಲದಿಲ್ಲ. ದೊಡ್ಡ ಸಂಬಳದೊಡನೆ ಯುವಜನರನ್ನು ತಮ್ಮತ್ತ ಸೆಳೆಯುವ ಸಂಸ್ಥೆಗಳು ಬಹಳಷ್ಟು ಸಾರಿ ಅವರ ಪೂರ್ಣ ಬೌದ್ಧಿಕ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಸೋಲುತ್ತವೆ ಎಂದು ಭಾರತರತ್ನ ಸಿಎನ್‌ಆರ್ ರಾವ್‌ರಂತಹ ಹಿರಿಯರೇ ಹೇಳಿದ್ದೂ ಇದೆ. ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳೊಡನೆ ನಿರಂತರ ಸಂಪರ್ಕ ಏರ್ಪಡಿಸಿಕೊಳ್ಳುವಲ್ಲೂ ಬಹಳಷ್ಟು ಐಟಿ ಸಂಸ್ಥೆಗಳ ಸಾಧನೆ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ.

ಯುವಜನತೆಯ ಬೌದ್ಧಿಕ ಸಾಮರ್ಥ್ಯಕ್ಕೆ ತಕ್ಕುದಾದ ಸವಾಲುಗಳನ್ನು ಸೃಷ್ಟಿಸಲು ಬಹಳಷ್ಟು ಐಟಿ ಸಂಸ್ಥೆಗಳು ಸೋಲುತ್ತಿವೆ ಎನ್ನುವ ಆರೋಪ ಒಂದು ಕಡೆಯಾದರೆ ಕಾಲೇಜುಗಳಿಂದ ಹೊರಬರುತ್ತಿರುವ ವಿದ್ಯಾರ್ಥಿಗಳಲ್ಲಿ ಬಹುಮಂದಿ ಇಂತಹ ಸಂಸ್ಥೆಗಳ ಅಪೇಕ್ಷಿಸುವ ಮಟ್ಟವನ್ನೂ ಮುಟ್ಟುತ್ತಿಲ್ಲ ಎನ್ನುವುದು ಇನ್ನೊಂದು ಸಮಸ್ಯೆ. ತರ್ಕಬದ್ಧ ಆಲೋಚನೆ, ಸ್ಪಷ್ಟ ಸಂವಹನದಂತಹ ಮೂಲಭೂತ ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸದಿರುವುದು (ಹಾಗೂ ಅದಕ್ಕೆ ಪೂರಕವಾದ ವಾತಾವರಣ ಕಾಲೇಜುಗಳಲ್ಲಿ ನಿರ್ಮಾಣವಾಗದಿರುವುದು) ನಿಜಕ್ಕೂ ಚಿಂತೆಗೀಡುಮಾಡುವ ಸಂಗತಿಯೇ ಎನ್ನಬೇಕು - ಅದು ಬರಿಯ ಐಟಿ ಕ್ಷೇತ್ರಕ್ಕೆ ಮಾತ್ರವೇ ಅಲ್ಲ!

ಸಾಮಾಜಿಕ ಆಯಾಮ
ದೊಡ್ಡಮೊತ್ತದ ಸಂಬಳ, ವಿದೇಶ ಪ್ರವಾಸದಂತಹ ಸೌಲಭ್ಯಗಳನ್ನೆಲ್ಲ ಒದಗಿಸಿ ಐಟಿ ಉದ್ದಿಮೆ ಮಧ್ಯಮವರ್ಗದ ಜೀವನಶೈಲಿಯನ್ನು ಬದಲಿಸಿಬಿಟ್ಟದ್ದು ನಿಜವೇ. ಮಧ್ಯಮವರ್ಗದಿಂದ ಬಂದು ದೊಡ್ಡದೊಡ್ಡ ಸಂಸ್ಥೆಗಳನ್ನು ಸ್ಥಾಪಿಸಿದವರು, ಅಪಾರ ಸಂಖ್ಯೆಯ ಉದ್ಯೋಗಾವಕಾಶಗಳನ್ನು ರೂಪಿಸಿದವರನ್ನು ನಮ್ಮ ಸಮಾಜ ಬಹಳ ಗೌರವದಿಂದಲೇ ಕಾಣುತ್ತದೆ.

ಇದರ ಜೊತೆಗೆ ಸಮಾಜದಲ್ಲಿ ಆರ್ಥಿಕ ಅಸಮಾನತೆ ರೂಪಿಸಿದ ಹಾಗೂ ಆಸ್ತಿ ಬೆಲೆ - ಮನೆ ಬಾಡಿಗೆ - ತಿಂಗಳ ಖರ್ಚು ಮುಂತಾದವನ್ನೆಲ್ಲ ತೀವ್ರವಾಗಿ ಏರಿಸಿದ ಶ್ರೇಯವನ್ನೂ ಅನೇಕರು ಇದೇ ಉದ್ದಿಮೆಗೆ ನೀಡುತ್ತಾರೆ. ಕೆಲಸದ ಒತ್ತಡ ಹಾಗೂ ಅಸಮರ್ಪಕ ಅಭ್ಯಾಸಗಳಿಂದ ಉದ್ಯೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ ಕುಖ್ಯಾತಿ ಕೂಡ ಐಟಿ ಕ್ಷೇತ್ರಕ್ಕಿದೆ. ಈ ಉದ್ದಿಮೆ ಸ್ಥಳೀಯರಿಗಾಗಿ ಎಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎನ್ನುವ ನಿಟ್ಟಿನಲ್ಲೂ ಪ್ರಶ್ನೆಗಳಿವೆ.

ಪ್ರಮುಖವಾಗಿ ಮಾನವ ಸಂಪನ್ಮೂಲವನ್ನೇ ಆಧರಿಸಿರುವ ಐಟಿ ಉದ್ದಿಮೆ ಬೆಳೆದಂತೆ ವಿಶೇಷವಾಗಿ ಬೆಂಗಳೂರಿನ ಮೂಲಸೌಕರ್ಯದ ಮೇಲೆ ಅಪಾರ ಪ್ರಮಾಣದ ಒತ್ತಡ ಬಿದ್ದಿದೆ. ಬಹಳಷ್ಟು ಪ್ರದೇಶಗಳಲ್ಲಿ ಸಾಮಾನ್ಯವಾಗಿಬಿಟ್ಟಿರುವ ಟ್ರಾಫಿಕ್ ಸಮಸ್ಯೆಗಳಿಗೆ ಐಟಿ ಉದ್ಯೋಗಿಗಳ ವಾಹನಗಳೂ ತಮ್ಮ ಕೊಡುಗೆ ನೀಡುತ್ತಿವೆ. ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಇನ್ನಿತರ ನಗರಗಳಲ್ಲಿ ಐಟಿ ಉದ್ದಿಮೆ ಅಷ್ಟಾಗಿ ವ್ಯಾಪಿಸಿಕೊಂಡಿಲ್ಲದಿರುವುದು ಅವಕಾಶಗಳ ದೃಷ್ಟಿಯಿಂದ ಪ್ರಾದೇಶಿಕ ಅಸಮತೋಲನಕ್ಕೂ ಕಾರಣವಾಗಿದೆ. ಬೆಂಗಳೂರಿನ ಹೊರಗಿನ ಸಂಗತಿ ಹಾಗಿರಲಿ, ನಗರದೊಳಗಿನ ಅಭಿವೃದ್ಧಿ ಯೋಜನೆಗಳೂ ಸಾಮಾನ್ಯವಾಗಿ ಐಟಿ ಸಂಸ್ಥೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲೇ ಆಗುತ್ತವೆ ಎನ್ನುವ ದೂರು ಕೇಳಿಸುವುದೂ ಅಪರೂಪವೇನಲ್ಲ.


ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಇಷ್ಟೆಲ್ಲ ಐಟಿ ಸಂಸ್ಥೆಗಳಿದ್ದರೂ ಅವುಗಳಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಕ್ಕೆ ಕೊಡುಗೆಗಳು ದೊರೆತಿರುವುದು ತೀರಾ ಕಡಿಮೆ ಎನ್ನುವ ಅಸಮಾಧಾನ ಕೂಡ ವ್ಯಾಪಕವಾಗಿದೆ. ಈ ದಿಸೆಯಲ್ಲಿ ಆಗಿರುವ ಅಲ್ಪಸ್ವಲ್ಪ ಕೆಲಸವೂ ಸಣ್ಣ ಸಂಸ್ಥೆಗಳಿಂದಲೇ ಆಗಿರುವುದು ಗಮನಾರ್ಹ.

ಮುಂದಿನ ಹಾದಿ
ಪ್ರಾರಂಭಿಕ ದಿನಗಳಿಂದಲೂ ಪಾಶ್ಚಿಮಾತ್ಯ ಗ್ರಾಹಕರನ್ನೇ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡಿದ್ದ ಭಾರತೀಯ ಐಟಿ ಉದ್ದಿಮೆ ಬಹುಸಮಯ ಭಾರತವನ್ನು ತನ್ನ ಮಾರುಕಟ್ಟೆಯೆಂದು ಪರಿಗಣಿಸಿಯೇ ಇರಲಿಲ್ಲ. ಈಚಿನ ವರ್ಷಗಳಲ್ಲಿ ಈ ಪರಿಸ್ಥಿತಿ ಗಮನಾರ್ಹವಾಗಿ ಬದಲಾಗಿರುವುದು ಸಂತೋಷದ ವಿಷಯ. ಹಣಕಾಸು ವ್ಯವಹಾರ, ಆಡಳಿತ, ವ್ಯಾಪಾರ ವಹಿವಾಟು, ಸಾರಿಗೆ, ಸಂಪರ್ಕ ಮಾಧ್ಯಮಗಳೇ ಮೊದಲಾದ ಪ್ರತಿಯೊಂದು ಕ್ಷೇತ್ರದಲ್ಲೂ ಆಗುತ್ತಿರುವ ಬದಲಾವಣೆಗಳು ಐಟಿ ಉದ್ದಿಮೆಯ ಪಾಲಿಗೆ ಭಾರತವನ್ನೂ ಮಹತ್ವದ ಮಾರುಕಟ್ಟೆಯಾಗಿ ರೂಪಿಸಿವೆ. ಇದರ ಜೊತೆಗೆ ಮಾಹಿತಿ ತಂತ್ರಜ್ಞಾನದ ಉಪಯೋಗಗಳು ಸಾಮಾನ್ಯ ಜನತೆಗೂ ದೊರಕಲು ಪ್ರಾರಂಭವಾಗಿವೆ.

ನಮ್ಮ ಐಟಿ ಉದ್ದಿಮೆ ಹೊರಗುತ್ತಿಗೆಯ ಕೆಲಸಗಳಿಗಷ್ಟೇ ಲಾಯಕ್ಕು ಎನ್ನುವ ಅಭಿಪ್ರಾಯವನ್ನು ಬದಲಿಸುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿರುವುದು ಗಮನಾರ್ಹ. ಮಾಹಿತಿ ತಂತ್ರಜ್ಞಾನದ ನೆರವಿನಿಂದ ಹೊಸ ಪರಿಕಲ್ಪನೆಗಳನ್ನು ಪರಿಚಯಿಸುತ್ತಿರುವ ಭಾರತೀಯ ಸಂಸ್ಥೆಗಳು ನಮ್ಮ ಐಟಿ ಜಗತ್ತಿನಲ್ಲಿ ಸೇವೆಗಳ (ಸರ್ವಿಸ್) ಜೊತೆಗೆ ಉತ್ಪನ್ನಗಳಿಗೂ (ಪ್ರಾಡಕ್ಟ್) ಜಾಗ ಒದಗಿಸಿಕೊಡುವ ಪ್ರಯತ್ನದಲ್ಲಿವೆ. ತಂತ್ರಾಂಶದ ಜೊತೆಗೆ ಯಂತ್ರಾಂಶ ಅಭಿವೃದ್ಧಿಯಲ್ಲೂ ಕೆಲಸಗಳು ನಡೆಯುತ್ತಿವೆ.

ಎಷ್ಟು ಕಡಿಮೆ ಖರ್ಚಿನಲ್ಲಿ ಕೆಲಸಮಾಡಬಹುದು ಎಂದು ಯೋಚಿಸುವ ಜೊತೆಗೆ ಹೊಸದಾಗಿ ಏನೇನೆಲ್ಲ ರೂಪಿಸಬಹುದು ಎಂದು ಯೋಚಿಸುವುದನ್ನೂ ನಮ್ಮ ಐಟಿ ಉದ್ಯಮ ಕಲಿಯುತ್ತಿದೆ. ಹೊಸದೊಂದು ಪಯಣ ಈಗಷ್ಟೆ ಶುರುವಾಗಿದೆ!

ನವೆಂಬರ್ ೩೦, ೨೦೧೪ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge