ಶುಕ್ರವಾರ, ನವೆಂಬರ್ 7, 2014

ಜಿ. ವಿ. ನಿರ್ಮಲ ಹೇಳುತ್ತಾರೆ... "ವಿಷಯಗಳನ್ನು ನೀರಸವಾಗಿ ಓದುಗರ ಮುಂದಿರಿಸಿದರೆ ಸಾಲದು"

ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಯಲ್ಲಿ ವಿಜ್ಞಾನಿಯಾಗಿ ಸೇವೆಸಲ್ಲಿಸಿ ನಿವೃತ್ತರಾಗಿರುವ ಶ್ರೀಮತಿ ಜಿ. ವಿ. ನಿರ್ಮಲ ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳ ಕುರಿತು ಕನ್ನಡದಲ್ಲಿ ಬರೆಯುತ್ತಿರುವ ಲೇಖಕಿಯರಲ್ಲೊಬ್ಬರು. ಮೈಸೂರು ವಿವಿಯಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿರ್ಮಲರ ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಕಂಪ್ಯೂಟರ್ ಪದವಿವರಣ ಕೋಶ'ದ ತಯಾರಿಕೆಯಲ್ಲಿ ಸಹಸಂಪಾದಕಿಯಾಗಿ, 'ಇತಿಹಾಸದಲ್ಲಿ ವಿಜ್ಞಾನ' ಮಾಲಿಕೆಯ ಅನುವಾದಕರಲ್ಲೊಬ್ಬರಾಗಿ, 'ವಿಜ್ಞಾನ ಸಿರಿ' ಸಂಕಲನದ ಸಂಪಾದಕರಲ್ಲೊಬ್ಬರಾಗಿ ಕೆಲಸಮಾಡಿದ್ದಾರೆ. 'ಮಾಹಿತಿ ಸಂಪತ್ತು ಡಿಜಿಟಲ್ ಜಗತ್ತು' ಕೃತಿಯ ಲೇಖಕರು. 'ಅದ್ಭುತ ಯಂತ್ರ ಗಣಕ', 'ಗಣಕ ಲೋಕದೊಳಗೆ ಒಂದು ಪಯಣ' ಮುಂತಾದ ಕೃತಿಗಳ ಸಹಲೇಖಕರು. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ..  
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಮೈಸೂರು ವಿಶ್ವವಿದ್ಯಾಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ನಂತರ ಕೆಲವು ವರ್ಷ ಅಧ್ಯಾಪಕಿಯಾಗಿಯೂ, ಆನಂತರ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಯಲ್ಲಿ ವಿಜ್ಞಾನಿಯಾಗಿಯೂ ಸೇವೆ ಸಲ್ಲಿಸಿದೆ. ನಮ್ಮ ತಂದೆ ದಿವಂಗತ ಡಾ.ಜಿ.ವರದರಾಜರಾವ್‌ರವರು ದಾಸ ಸಾಹಿತ್ಯದಲ್ಲಿ ವಿದ್ವಾಂಸರು ಹಾಗೂ ಸಾಹಿತಿಗಳು. ಆದ್ದರಿಂದ ಮನೆಯಲ್ಲಿ ಸಾಹಿತ್ಯಿಕ ವಾತಾವರಣವಿತ್ತು. ಕಾಲೇಜು ಪತ್ರಿಕೆಗಳಲ್ಲಿ ಬರೆಯುತ್ತಿದ್ದೆ. ನನ್ನ ವೃತ್ತಿ ಜೀವನದುದ್ದಕ್ಕೂ ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳುವ ಅನೇಕ ಸಂದರ್ಭಗಳು ಮತ್ತು ಅವಕಾಶಗಳಿದ್ದವು. ವಿಶೇಷವಾಗಿ ರಾ.ವೈ.ಪ್ರ ಕನ್ನಡ ಸಂಘದಿಂದ ಪ್ರಕಟವಾಗುವ 'ಕಣಾದ' ವಿಜ್ಞಾನ ಪತ್ರಿಕೆ ವಿಜ್ಞಾನ ಲೇಖನಗಳನ್ನು ಬರೆಯಬೇಕೆಂಬ ಆಸೆಯನ್ನು ನನ್ನಲ್ಲಿ ಜಾಗೃತಗೊಳಿಸಿತು.
ನಿವೃತ್ತಿಯ ನಂತರವೂ ವಿಜ್ಞಾನ ಬರವಣಿಗೆ ನನ್ನ ಸಂಗಾತಿಯಾಗಿದೆ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಬಿ ಜಿ ಎಲ್ ಸ್ವಾಮಿಯವರ 'ಹಸುರು ಹೊನ್ನು' ನನ್ನ ಮೇಲೆ ಪ್ರಭಾವ ಬೀರಿದ ಮೊದಲ ಪುಸ್ತಕ. ಇತ್ತೀಚಿಗೆ ನಿಧನರಾದ ಕೈವಾರ ಗೋಪಿನಾಥ್‌ರವರು ಆಗಾಗ್ಗೆ ನಮ್ಮ ಮನೆಗೆ ಬಂದು ತಮ್ಮ ಕಾಲದಲ್ಲಿ ಅವರು ಒಂದೊಂದು ಪುಸ್ತಕ ಬರೆಯುವಾಗಲೂ ಮಾಹಿತಿ ಪಡೆದುಕೊಳ್ಳುವಾಗ ಪಟ್ಟ ಕಷ್ಟವನ್ನೂ, ಅನುಭವವನ್ನೂ ಹೇಳಿದಾಗ ನನಗೆ ಆಶ್ಚರ್ಯವಾಗುತ್ತಿತ್ತು. ಅವರಿಂದಲೂ ಪ್ರಭಾವಿತಳಾಗಿದ್ದೇನೆ. ಇದಲ್ಲದೆ ಈಗಿನ ವಿಜ್ಞಾನ ಸಂವಹನಕಾರರಾಗಿರುವ ಟಿ. ಆರ್. ಅನಂತರಾಮು, ಎಚ್. ಆರ್. ಕೃಷ್ಣಮೂರ್ತಿ, ನಾಗೇಶ ಹೆಗಡೆ, ಬಿ. ಎಸ್. ಶೈಲಜಾ, ಗಾಯತ್ರಿ ಮೂರ್ತಿ, ನೇಮಿಚಂದ್ರ, ಡಾ. ವಸುಂಧರಾ ಭೂಪತಿ, ಸುಮಂಗಲಾ ಮುಮ್ಮಿಗಟ್ಟಿ (ಪಟ್ಟಿಯಲ್ಲಿ ಮತ್ತಷ್ಟು ಜನರಿದ್ದಾರೆ) ಮುಂತಾದವರ ಶೈಲಿ ನನಗೆ ಬಹಳ ಇಷ್ಟವಾಗುತ್ತದೆ.

ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ?
ಇತ್ತೀಚಿಗೆ ವಿಜ್ಞಾನ-ತಂತ್ರಜ್ಞಾನಗಳ ಫಲ ಜನಸಾಮಾನ್ಯರಿಗೆ ಹೆಚ್ಚು ಹೆಚ್ಚಾಗಿ ತಲುಪುತ್ತಿರುವುದರಿಂದ ಅವರಲ್ಲಿ ಈ ಕುರಿತು ಮತ್ತಷ್ಟು ತಿಳಿದುಕೊಳ್ಳುವ ಆಸಕ್ತಿ ಬೆಳೆಯುತ್ತಿದೆ. ಲೇಖನಗಳನ್ನು ಓದಿದ ನಂತರ ದೂರವಾಣಿ ಕರೆ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ, ಚರ್ಚಿಸುವ ಓದುಗರೂ ಇದ್ದಾರೆ. ಬೆಂಗಳೂರಿನಿಂದಾಚೆ ಕರ್ನಾಟಕದ ಇತರ ನಗರಗಳಲ್ಲಿ ವಿಜ್ಞಾನವನ್ನು ಕನ್ನಡದಲ್ಲಿ ಓದುವ ಆಸಕ್ತಿಯುಳ್ಳ ಓದುಗರನ್ನು ಹೆಚ್ಚಾಗಿ ಕಾಣಬಹುದು. ಒಮ್ಮೆ ಒಬ್ಬ ಗೃಹಿಣಿ "ಮೇಡಂ ನಮಗೆ ವಿಜ್ಞಾನ ಪುಸ್ತಕಗಳನ್ನು ಖರೀದಿಸಲಾಗುವುದಿಲ್ಲ. ಪತ್ರಿಕೆಗಳಲ್ಲಿ ಪ್ರಕಟಿಸುವ ವಿಜ್ಞಾನದ ವಿಷಯಗಳನ್ನು ಓದಲು ಕಾತುರರಾಗಿರುತ್ತೇವೆ" ಎಂದು ಹೇಳಿದ್ದರು.

ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ಈ ಕಾಲಘಟ್ಟದಲ್ಲಿ ವಿಜ್ಞಾನದ ವಿವಿಧ ಶಾಖೆಗಳಲ್ಲಿ ಅನೇಕ ಬೆಳವಣಿಗೆಗಳಾಗುತ್ತಿವೆ. ವಿಜ್ಞಾನ ಸಂವಹನಕಾರರು ಜನ ಸಾಮಾನ್ಯರಿಗೆ ತಿಳಿಸುವಂತಹ ಅನೇಕ ವಿಷಯಗಳಿವೆ. ಆಯಾ ಸಮಯಕ್ಕೆ ತಕ್ಕಂತೆ ಲೇಖನಗಳನ್ನು ಬರೆದು ಓದುಗರಿಗೆ ತಲುಪಿಸುವ ಆಸೆ ನನ್ನದು.

ಇತ್ತೀಚಿಗೆ ಕರ್ನಾಟಕ ಲೇಖಕಿಯರ ಸಂಘ ಪ್ರಕಟಿಸಿರುವ 'ವಿಜ್ಞಾನ ಸಿರಿ' ಎಂಬ ಲೇಖನ ಸಂಕಲನದ ಜವಾಬ್ದಾರಿಯನ್ನು ಸಹಸಂಪಾದಕಿ ಗಾಯತ್ರಿ ಮೂರ್ತಿಯವರೊಂದಿಗೆ ಹಂಚಿಕೊಂಡಿದ್ದೆ. ಇಂತಹ ಅವಕಾಶ ಸಿಕ್ಕರೆ ಮತ್ತಷ್ಟು ಯುವ ಬರಹಗಾರರ ಲೇಖನ ಸಂಗ್ರಹ ಸಂಪಾದಿಸುವ ಇಚ್ಛೆ ಇದೆ. ಯುವ ಬರಹಗಾರರಿಗೆ ಪ್ರೋತ್ಸಾಹ, ಉತ್ಸಾಹಿ ಓದುಗರಿಗೆ ವಿಭಿನ್ನ ವಿಜ್ಞಾನ ವಿಷಯಗಳ ಬಗ್ಗೆ, ವಿವಿಧ ಶೈಲಿಗಳಲ್ಲಿ ಮಾಹಿತಿ ಸಿಕ್ಕುವುದಲ್ಲದೆ ತನ್ಮೂಲಕ ಕನ್ನಡ ಭಾಷೆಯೂ ಶ್ರೀಮಂತವಾಗುತ್ತದೆಂಬ ನಂಬಿಕೆ ಇದೆ.

ವಿಜ್ಞಾನ ಬರಹವೆಂದರೆ ಕೇವಲ ಪ್ರೌಢಶಾಲಾ ಮಕ್ಕಳಿಗಾಗಿ ಎಂಬ ಮಿತಿ ಹಾಕಿಕೊಂಡು ಪಠ್ಯ ಪುಸ್ತಕದಂತೆ ವಿಷಯಗಳನ್ನು ನೀರಸವಾಗಿ ಓದುಗರ ಮುಂದಿರಿಸಿದರೆ ಸಾಲದು. ವಿಜ್ಞಾನದ ಮೂಲಕ ಸಾಹಿತ್ಯವನ್ನು ಸವಿಯುವ, ಸಾಹಿತ್ಯದ ಮೂಲಕ ವಿಜ್ಞಾನವನ್ನು ಅರಿಯುವ - ವಿಜ್ಞಾನ, ಸಾಹಿತ್ಯಗಳ ಹದವಾದ ಮಿಶ್ರಣದಂತಿರುವ - 'ವಿಜ್ಞಾನ ಸಾಹಿತ್ಯ' ಕನ್ನಡದಲ್ಲಿ ಬೆಳೆಯಬೇಕೆಂಬುದು ನನ್ನ ಆಶಯ. ಇಂತಹ ವಿಜ್ಞಾನ ಸಾಹಿತ್ಯ ಹೆಚ್ಚು ಓದುಗರನ್ನು ತನ್ನತ್ತ ಸೆಳೆಯುತ್ತದೆ.

ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ಪ್ರವಾಸವೆಂದರೆ ಬಹಳ ಆಸಕ್ತಿ. ದೇಶ ವಿದೇಶಗಳನ್ನು ಸುತ್ತಿ ಅಲ್ಲಿಯ ವಿಶೇಷತೆಗಳನ್ನು ಕಣ್ಣಾರೆ ನೋಡುವುದೆಂದರೆ ಆನಂದ. ಪ್ರವಾಸಗಳಿಂದ ಅನುಭವ ಹೆಚ್ಚಾಗುತ್ತದೆ ಮತ್ತು ಪ್ರವಾಸದಲ್ಲಿ ವ್ಯಕ್ತಿಯೊಬ್ಬನ ನಿಜವಾದ ವ್ಯಕ್ತಿತ್ವ ಪ್ರಕಟವಾಗುತ್ತದೆ ಎಂಬುದು ನನ್ನ ಅನುಭವ. 'ದೇಶ ಸುತ್ತು ಕೋಶ ಓದು' ಎಂಬ ಗಾದೆಯೇ ಇದೆಯಲ್ಲ. ನನ್ನ ಬದರಿ, ಕೇದಾರ ಪ್ರವಾಸದ ನಂತರ 'ಮಂಜುಬೆಟ್ಟದ ಮಡಿಲಲ್ಲಿ' ಎಂಬ ಪ್ರವಾಸ ಕಥನವನ್ನು ಪ್ರಕಟಿಸಿದ್ದೇನೆ. ಅಮೆರಿಕ ಪ್ರವಾಸದ ನಂತರ ನಾನು ಬರೆದ ಕೆಲವು ಪ್ರವಾಸ ಲೇಖನಗಳು ಪ್ರಕಟವಾಗಿವೆ. ಹಾಸ್ಯ ಲೇಖನಗಳನ್ನು ಬರೆಯುವ ಹವ್ಯಾಸವೂ ಇದೆ.

'ಕಣಜ' ಅಂತರಜಾಲ ಜ್ಞಾನಕೋಶದಲ್ಲಿ ಪ್ರಕಟವಾಗಿರುವ ಜಿ. ವಿ. ನಿರ್ಮಲ ಅವರ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!
ಪೆನ್‌ ಸ್ಟಾಂಡ್ ಸಂದರ್ಶನ ಸರಣಿಯಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳೂ ಸಂದರ್ಶಿತರ ವೈಯಕ್ತಿಕ ಅನಿಸಿಕೆಗಳು.

ಕಾಮೆಂಟ್‌ಗಳಿಲ್ಲ:

badge