ಸೋಮವಾರ, ನವೆಂಬರ್ 3, 2014

ಡ್ರೋನ್ ಡೆಲಿವರಿ!

ಟಿ. ಜಿ. ಶ್ರೀನಿಧಿ

ಈಚೆಗೆ ಒಂದೆರಡು ವರ್ಷಗಳಿಂದ 'ಡ್ರೋನ್' ಎಂಬ ಹೆಸರು ಸಾಕಷ್ಟು ಸುದ್ದಿಮಾಡುತ್ತಿದೆ. ಪಾಕಿಸ್ತಾನದಲ್ಲೋ ಅಫಘಾನಿಸ್ಥಾನದಲ್ಲೋ ಭಯೋತ್ಪಾದಕರ ಅಡಗುದಾಣಗಳ ಮೇಲೆ ಡ್ರೋನ್ ದಾಳಿ ಆಯಿತಂತೆ ಎನ್ನುವಂತಹ ಸುದ್ದಿಗಳನ್ನು ನಾವು ಆಗಿಂದಾಗ್ಗೆ ನೋಡುತ್ತಿರುತ್ತೇವೆ.

ಚಾಲಕರ ಅಗತ್ಯವಿಲ್ಲದ, ದೂರದಿಂದಲೇ ನಿಯಂತ್ರಿಸಬಹುದಾದ ಈ ಸಣ್ಣ ವಿಮಾನಗಳು ಮಿಲಿಟರಿ ಕ್ಷೇತ್ರದಲ್ಲಿ ಸಾಕಷ್ಟು ಸಮಯದಿಂದ ಬಳಕೆಯಲ್ಲಿವೆ.  ಆಧುನಿಕ ಯುದ್ಧವಿಮಾನಗಳಲ್ಲಿರುವ ಬಹುತೇಕ ಸೌಲಭ್ಯಗಳು ಈ ಡ್ರೋನ್‌ಗಳಲ್ಲೂ ಇವೆಯಂತೆ.

ಯುದ್ಧರಂಗದಲ್ಲಿ, ಸಂಶೋಧನಾ ಕ್ಷೇತ್ರದಲ್ಲೆಲ್ಲ ಕೆಲಸ ಮಾಡಿರುವ ಡ್ರೋನ್‌ಗಳು ಇದೀಗ ನಮ್ಮ ಮನೆಗಳತ್ತ ಹೊರಡಲು ತಯಾರಾಗುತ್ತಿವೆ ಎನ್ನುವುದು ಇತ್ತೀಚಿನ ಸುದ್ದಿ. ಹಾಗೆಂದ ತಕ್ಷಣ ಗಾಬರಿಯಾಗಬೇಕಾದ ಅಗತ್ಯವೇನೂ ಇಲ್ಲ. ಡ್ರೋನ್‌ಗಳು ಬರುತ್ತಿರುವುದು ನಮ್ಮ ಮೇಲೆ ಬಾಂಬ್ ಹಾಕಲಿಕ್ಕಲ್ಲ, ಆನ್‌ಲೈನ್ ಶಾಪಿಂಗ್ ತಾಣದಲ್ಲಿ ನಾವು ಕೊಂಡ ವಸ್ತುಗಳನ್ನು ತಲುಪಿಸಲಿಕ್ಕೆ!

'ಥ್ರೀ ಇಡಿಯಟ್ಸ್' ಚಿತ್ರದಲ್ಲಿ ಅಮೀರ್ ಖಾನ್ ಹಾರಿಸುತ್ತಾನಲ್ಲ, ಅಂತಹವೇ ಹಾರುವ ಯಂತ್ರಗಳು ಇವು. ಆನ್‌ಲೈನ್ ಅಂಗಡಿಯಲ್ಲಿ ಕೊಂಡ ಮೊಬೈಲ್ ಫೋನ್ ಇರಲಿ, ಪಕ್ಕದ ರಸ್ತೆಯ ಅಂಗಡಿಯಿಂದ ಬರಬೇಕಿರುವ ಪಿಜ್ಜಾ ಇರಲಿ - ಅದನ್ನೆಲ್ಲ ಇವು ನೇರಾನೇರ ನಮ್ಮ ಕೈಗೇ ತಂದೊಪ್ಪಿಸಲಿವೆಯಂತೆ.

ಅಮೆಜಾನ್, ಗೂಗಲ್ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದ ಅನೇಕ ದಿಗ್ಗಜರು ಈ ಬಗೆಯ ಯಂತ್ರಗಳನ್ನು ಉಪಯೋಗಿಸುವ ನಿಟ್ಟಿನಲ್ಲಿ ಈಗಾಗಲೇ ಯೋಚಿಸುತ್ತಿದ್ದಾರೆ. ಕೊರಿಯರ್ ಸಂಸ್ಥೆ ಡಿಎಚ್‌ಎಲ್ ಅಂತೂ ಜರ್ಮನಿಯ ದ್ವೀಪವೊಂದಕ್ಕೆ ಪಾರ್ಸಲ್‌ಗಳನ್ನು ತಲುಪಿಸಲು ಈಗಾಗಲೇ ಡ್ರೋನ್ ಬಳಕೆ ಪ್ರಾರಂಭಿಸಿದೆ.

ಅಂದಹಾಗೆ ಡ್ರೋನ್ ಬಳಕೆಯ ಐಡಿಯಾಗಳು ವಸ್ತುಗಳ ಸಾಗಾಣಿಕೆಗಷ್ಟೇ ಸೀಮಿತವಾಗಿ ಉಳಿದಿಲ್ಲ. ದೂರಸಂಪರ್ಕ ಸೇವೆಗಳ ವ್ಯಾಪ್ತಿಯಿಂದ ಹೊರಗಿರುವ ಪ್ರದೇಶಗಳಲ್ಲಿ ಅಂತರಜಾಲ ಸಂಪರ್ಕ ಕಲ್ಪಿಸಲು ಡ್ರೋನ್‌ಗಳನ್ನು ಬಳಸುವ ಉದ್ದೇಶವಿದೆಯೆಂದು ಫೇಸ್‌ಬುಕ್ ಸಂಸ್ಥೆ ಹೇಳಿಕೊಂಡಿದೆ. ಸೌರಶಕ್ತಿ ಬಳಸಿಕೊಂಡು ಸತತವಾಗಿ ಹಾರಾಡುತ್ತಲೇ ಇರುವ ಈ ಯಂತ್ರಗಳು ತಮ್ಮ ಸಂಚಾರದ ಪ್ರದೇಶದಲ್ಲಿ ಅಂತರಜಾಲ ಸಂಪರ್ಕವನ್ನು ಒದಗಿಸಲಿವೆಯಂತೆ.

ಇನ್ನು ಛಾಯಾಗ್ರಹಣದಲ್ಲಂತೂ ಡ್ರೋನ್ ಬಳಕೆ ಈಗಾಗಲೇ ಹಳತಾಗುತ್ತಿರುವ ಸುದ್ದಿ. ಸದಾ ಹೊಸ ಆಂಗಲ್‌ಗಳನ್ನು ಹುಡುಕುವ ಛಾಯಾಗ್ರಾಹಕರು ಆಕಾಶದಿಂದ ಫೋಟೋ ಹಾಗೂ ವೀಡಿಯೋಗಳನ್ನು ಸೆರೆಹಿಡಿಯಲು ಡ್ರೋನ್ ಬಳಕೆ ಪ್ರಾರಂಭಿಸಿದ್ದಾರೆ. ಕೃಷಿಭೂಮಿಯ ಸಮೀಕ್ಷೆಯಿಂದ ಪ್ರಾರಂಭಿಸಿ ಸಂರಕ್ಷಿತ ಅರಣ್ಯಪ್ರದೇಶಗಳ ಮೇಲೆ ನಿಗಾವಹಿಸುವವರೆಗೆ ಇನ್ನೂ ಹಲವು ಉಪಯೋಗಗಳಿಗಾಗಿ ಡ್ರೋನ್ ಬಳಕೆ ಸಾಧ್ಯವೆನ್ನುವುದು ಈಗಾಗಲೇ ಸಾಬೀತಾಗಿದೆ.

ಡ್ರೋನ್‌ಗಳು ಇಷ್ಟು ಜನಪ್ರಿಯತೆ ಗಳಿಸಿಕೊಂಡಿರುವಾಗ ಅವುಗಳ ಲಭ್ಯತೆ ಇಲ್ಲದಿದ್ದರೆ ಆದೀತೆ? ಹಲವು ಸಾವಿರ ರೂಪಾಯಿಗಳಿಗೆ ದೊರಕುವ ಹತ್ತಾರು ಬಗೆಯ ಡ್ರೋನ್‌ಗಳು ಈಗಾಗಲೇ ಅಂಗಡಿಗಳಲ್ಲಿ, ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಕಾಣಿಸಿಕೊಂಡಿವೆ. ಮೊಬೈಲ್ ಹಾಗೂ ಟ್ಯಾಬ್ಲೆಟ್‌ಗಳ ಮೂಲಕವೇ ನಿಯಂತ್ರಿಸಬಹುದಾದ ಡ್ರೋನ್‌ಗಳೂ ಬಂದಿವೆ.

ಡ್ರೋನ್ ಬಳಸಿ ಇಷ್ಟೆಲ್ಲ ಕೆಲಸ ಸಾಧಿಸಿಕೊಳ್ಳುವ ಸಾಧ್ಯತೆಯಿದ್ದರೂ ಅವುಗಳ ಬಳಕೆಯ ಸುತ್ತಲಿನ ಕಾನೂನು ನಿರ್ಬಂಧಗಳು ಸಾಕಷ್ಟು ಅಡೆತಡೆಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಅಮೆರಿಕಾದಂತಹ ದೇಶಗಳಲ್ಲಿ ಡ್ರೋನ್ ಬಳಕೆ ಕುರಿತ ಕಾನೂನುಗಳು ಈಗಾಗಲೇ ರೂಪಗೊಳ್ಳುತ್ತಿವೆಯಾದರೂ ನಮ್ಮಲ್ಲಿ ಈ ಕುರಿತ ಯಾವುದೇ ಕಾನೂನುಗಳು ಇಲ್ಲದಿರುವುದು ಸಾಕಷ್ಟು ಗೊಂದಲಗಳಿಗೆ ಎಡೆಕೊಡಬಹುದು.

ಅಂತಹ ಪರಿಸ್ಥಿತಿ ತಪ್ಪಿಸಲು, ಹಾಗೂ ಡ್ರೋನ್ ಬಳಕೆ ನಿಯಂತ್ರಿಸಿ ಅನಪೇಕ್ಷಿತ ಘಟನೆಗಳಿಗೆ ಕಡಿವಾಣ ಹಾಕಲು ಸೂಕ್ತ ನಿಯಮಾವಳಿಗಳ ರಚನೆ ಶೀಘ್ರವಾಗಿಯೇ ಆಗಬೇಕಿದೆ ಎಂದು ತಜ್ಞರು, ಆಸಕ್ತರು ಹೇಳುತ್ತಾರೆ.

ಈ ಲೇಖನದ ತಯಾರಿ ಹಾಗೂ ಪ್ರಕಟಣೆಯ ನಡುವೆ ಸಂಭವಿಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ ನಮ್ಮ ದೇಶದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಎಲ್ಲ ಬಗೆಯ ಡ್ರೋನ್‌ಗಳ ಬಳಕೆಯನ್ನು ನಿಯಂತ್ರಿಸಿ ಆದೇಶ ಹೊರಡಿಸಿದೆ. ಈ ಆದೇಶದ ಅನ್ವಯ ಸೂಕ್ತ ನಿಯಮಾವಳಿಗಳ ರಚನೆಯಾಗುವವರೆಗೂ ಸರ್ಕಾರೇತರ ಸಂಸ್ಥೆಗಳಾಗಲಿ ವ್ಯಕ್ತಿಗಳಾಗಲಿ ಯಾವುದೇ ಉದ್ದೇಶಕ್ಕಾಗಿ ಯಾವುದೇ ಬಗೆಯ ಡ್ರೋನ್ ಬಳಸುವುದನ್ನು ನಿಷೇಧಿಸಲಾಗಿದೆ. 


ಡ್ರೋನ್ ಎಂದರೇನು?
ಚಾಲಕರ ಅಗತ್ಯವಿಲ್ಲದ, ದೂರದಿಂದಲೇ ನಿಯಂತ್ರಿಸಬಹುದಾದ ಸಣ್ಣ ವಿಮಾನಗಳನ್ನು ಡ್ರೋನ್ ಎಂದು ಕರೆಯುತ್ತಾರೆ. ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್ (ಯುಎವಿ) ಎಂದು ಕರೆಯುವುದೂ ಇದನ್ನೇ.

ಬಳಕೆ ಎಲ್ಲೆಲ್ಲಿ?
ವೈರಿ ಪ್ರದೇಶದ ಮೇಲೆ ಬಾಂಬ್ ಹಾಕುವುದರಿಂದ ವೈಜ್ಞಾನಿಕ ಸಂಶೋಧನೆಯವರೆಗೆ ಅನೇಕ ಕ್ಷೇತ್ರಗಳಲ್ಲಿ ಡ್ರೋನ್‌ಗಳು ಬಳಕೆಯಾಗುತ್ತಿವೆ. ಇದೀಗ ನಮ್ಮ ದಿನನಿತ್ಯದ ಕೆಲಸಗಳಲ್ಲೂ ಡ್ರೋನ್ ಬಳಕೆ ಸಾಧ್ಯತೆಯ ಕುರಿತು ಆಲೋಚನೆಗಳು ಸಾಗಿವೆ.

ಹೊಸ ಸಾಧ್ಯತೆಗಳು
ಅಂಗಡಿಯವನು ಮನೆಗೆ ಪಿಜ್ಜಾ ತಲುಪಿಸಲು ಬರುವಾಗ ಟ್ರಾಫಿಕ್ಕಿನಲ್ಲಿ ಸಿಲುಕಿ ಪರದಾಡುವ ಬದಲು ಆಕಾಶಮಾರ್ಗವಾಗಿ ಬಿಸಿಬಿಸಿ ಪಿಜ್ಜಾ ತಲುಪಿಸಲು ಡ್ರೋನ್ ಬಳಸಬಹುದು!

ಸವಾಲುಗಳು
ಡ್ರೋನ್ ಬಳಕೆ ಕುರಿತ ಕಾನೂನುಗಳ ಅಸ್ಪಷ್ಟತೆ ಸಾಕಷ್ಟು ಗೊಂದಲ ಮೂಡಿಸಬಹುದು. ಡ್ರೋನ್‌ಗಳ ಅನಿಯಂತ್ರಿತ ಬಳಕೆ ತೊಂದರೆಗಳನ್ನು ಹುಟ್ಟುಹಾಕುವ ಸಾಧ್ಯತೆಯೂ ಇಲ್ಲದಿಲ್ಲ. ಇತ್ತೀಚಿನ ಆದೇಶವೊಂದರ ಅನ್ವಯ ಭಾರತದಲ್ಲಿ ಸೂಕ್ತ ನಿಯಮಾವಳಿಗಳ ರಚನೆಯಾಗುವವರೆಗೂ ಸರ್ಕಾರೇತರ ಸಂಸ್ಥೆಗಳಾಗಲಿ ವ್ಯಕ್ತಿಗಳಾಗಲಿ ಡ್ರೋನ್ ಬಳಸುವುದನ್ನು ನಿಷೇಧಿಸಲಾಗಿದೆ.

ನವೆಂಬರ್ ೩, ೨೦೧೪ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge